Saturday, April 18, 2020

ಬಾಲ್ಯ ಕಾಲದ ನೆನಪುಗಳು – ೭೮


ನಮ್ಮ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆಯಿತು. ನಾನು ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಪರೀಕ್ಷೆ ಮುಕ್ತಾಯವಾಗುತ್ತಿದ್ದಂತೇ ನನಗೆ ಇನ್ನು ಮುಂದೆ ನಾನು ಈ ಶಾಲೆಗೆ ಹೋಗುವ ಪ್ರಶ್ನೆ ಇಲ್ಲವೆಂದು ಯೋಚಿಸುವಾಗ ಮನಸ್ಸಿಗೆ ಒಂದು ಬಗೆಯ ಹಿಂಸೆ ಆಯಿತು. ಅಲ್ಲದೇ ನನಗೆ ತುಂಬಾ ಆತ್ಮೀಯ ಮಿತ್ರರೂ ಈ ಶಾಲೆಯಲ್ಲಿ ದೊರೆತಿದ್ದರು. ಹೌದು.  ನಾನು  ಭಾವನಾತ್ಮಕವಾಗಿ ನಮ್ಮ ಶಾಲೆಯನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೆ. ನನ್ನ ಅಣ್ಣ ಎಷ್ಟೊಂದು ಹೋರಾಟ ಮಾಡಿ ನನ್ನನ್ನು  ಇಂತಹ ಅತ್ತ್ಯುತ್ತಮ ಮೇಷ್ಟ್ರುಗಳಿದ್ದ ಶಾಲೆಗೆ ಅದರಲ್ಲೂ ಇಂಗ್ಲಿಷ್ ಮೀಡಿಯಂ ಗೆ ಸೇರಿಸಿದ್ದ. ಆ ಮೂಲಕ ನನ್ನ ಸ್ಟೂಡೆಂಟ್ ಕ್ಯಾರಿಯರ್ ಗೆ ಒಂದು ಭದ್ರ ಬುನಾದಿ ಹಾಕಿದ್ದ. ಅದಕ್ಕಾಗಿ ನಾನು ಜೀವನ ಪರ್ಯಂತ ಅವನಿಗೆ ಋಣಿಯಾಗಿದ್ದೆ.

ಹಾಸ್ಟೆಲಿನಿಂದಲೂ ವಿದಾಯ!
ನಮ್ಮ ಶಾಲೆಯಂತೆ ನಮ್ಮ ಹಾಸ್ಟೆಲಿಗೆ ನಾನು ವಿದಾಯ ಹೇಳುವ ಪ್ರಶ್ನೆ ಇರಲಿಲ್ಲ. ಏಕೆಂದರೆ ನಾನು ಪರೀಕ್ಷೆಯಲ್ಲಿ ತುಂಬಾ ಚೆನ್ನಾಗಿಯೇ ಉತ್ತರ ಬರೆದಿದ್ದರಿಂದ ಹಾಸ್ಟೆಲಿನಲ್ಲಿ ನನ್ನ ಫ್ರೀ ಸೀಟ್ ಮುಂದೆ ಕಾಲೇಜಿನಲ್ಲಿ ಓದಲೂ ಹಾಗೆಯೇ ಮುಂದುವರಿಯುವುದು ಗ್ಯಾರಂಟಿ ಆಗಿತ್ತು. ಆದರೆ ನನಗೇನೋ ನಾನು ಪುನಃ ಹಾಸ್ಟೆಲಿನಲ್ಲಿ ಇರುವೆನೆಂದು ಅನಿಸಲೇ ಇಲ್ಲ. ಕಾರಣವಿಷ್ಟೇ. ನಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ಗಮನಿಸಿದರೆ ನಾನು ಪರರ ಸಹಾಯವಿಲ್ಲದೇ ನನ್ನ ಓದನ್ನು ಮುಂದುವರಿಸುವುದು ಅಸಾಧ್ಯವೆಂದು ನನಗೆ ಅನಿಸಿತ್ತು. ಆದರೆ ನಾನು ಹಿಂದಿನ ವರ್ಷದಂತೆ ಪುನಃ ನನ್ನ ಖರ್ಚಿಗಾಗಿ ಚಂದಾ ಎತ್ತುವ ಕೆಲಸ ಮಾಡುವುದಿಲ್ಲವೆಂದು ತೀರ್ಮಾನ ಮಾಡಿ ಬಿಟ್ಟಿದ್ದೆ. ಇನ್ನೊಬ್ಬರ ಋಣದ ಆಸರೆಯಲ್ಲಿ ವಿದ್ಯಾಭ್ಯಾಸ ಮಾಡುವುದು ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.
ಮರೆಯಲಾಗದ ಹಾಸ್ಟೆಲ್ ಅನುಭವ
ನನ್ನ ಜೀವಮಾನದಲ್ಲಿ ನನ್ನ ಮೂರು ವರ್ಷದ ಹಾಸ್ಟೆಲ್ ಅನುಭವ ತುಂಬಾ ಅಮೂಲ್ಯದಾಗಿತ್ತು. ನಾನು ಈ ಹಿಂದೆ ಮೂರು ವರ್ಷ ಹೊಕ್ಕಳಿಕೆಯಲ್ಲಿ ಅಕ್ಕನ ರಕ್ಷಣಾತ್ಮಕ ಕವಚದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ಕಾಲ ಕಳೆದಿದ್ದೆ. ಆದರೆ ಹಾಸ್ಟೆಲಿನ ಸಾಮೂಹಿಕ ಜೀವನ ಸಂಪೂರ್ಣ ಬೇರೆಯೇ ಆಗಿತ್ತು. ಇಲ್ಲಿ ನನ್ನ ರಕ್ಷಣೆಗಾಗಿ ಯಾರೂ ನಿಲ್ಲುವ ಪ್ರಶ್ನೆ ಇರಲಿಲ್ಲ. ಆದರೆ ಬೇರೆ ಬೇರೆ ಊರಿನ ಹಾಗೂ ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೊಡನೆ ಸಹ ಬಾಳ್ವೆ ಮಾಡುವ ಅವಕಾಶ  ಒಂದು ಅಪರೂಪದ ಅವಕಾಶವೇ ಆಗಿತ್ತು. ಅದರಲ್ಲೂ ಕಾಲೇಜಿನಲ್ಲಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಹವಾಸ ನನ್ನಂತಹ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತುಂಬಾ ಲಾಭದಾಯಕವಾಗಿತ್ತು. ಹಾಸ್ಟೆಲಿನ ಕಠಿಣ ಶಿಸ್ತಿನ ಜೀವನ ನನ್ನ ದೈನಂದಿನ ನಡೆ ನುಡಿಯಲ್ಲೂ ಒಂದು ಬಗೆಯ  ಶಿಸ್ತನ್ನು ಪಾಲಿಸಿಕೊಂಡು ಹೋಗುವಂತೆ ಮಾಡಿತ್ತು. ಹಾಗೆಯೇ ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದವೆಂಬುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

ನಮ್ಮ ಮನೆಯ ಬೇಸಿಗೆ ಕಾಲದ ಚಟುವಟಿಕೆಗಳು
ಪುಟ್ಟಣ್ಣ ಮತ್ತು ನಾನು ಹಿಂದಿನ ವರ್ಷದಂತೇ ನಾವು ಬೇಸಿಗೆಯಲ್ಲಿ ಮಾಡಬೇಕಾದ ಮನೆ ಕೆಲಸಗಳ ಒಂದು ವೇಳಾಪಟ್ಟಿಯನ್ನು ತಯಾರು ಮಾಡಿ ಅದರಂತೆ ಕಾರ್ಯಗಳನ್ನು ಮಾಡಲಾರಂಭಿಸಿದೆವು. ನಮ್ಮ ಒಂದು ಎಕರೆ ಅಡಿಕೆ ತೋಟದ ಬೆಳೆಯ ಆದಾಯ ಆ ವರ್ಷ ನಮ್ಮ ತಂದೆಯವರ ಕೈಗೆ ಬಂದಿತ್ತು. ಆದರೂ ಬೇರೆ ಆದಾಯಗಳಿಲ್ಲದೆ ನಮ್ಮ ದೊಡ್ಡ ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿವುದು ಸಾಧ್ಯವಿರಲಿಲ್ಲ. ಆಗ ನಮ್ಮ ತಂದೆಯವರು ಒಂದು ಹೊಸ ಆದಾಯದ ಮೂಲವನ್ನು ಕಂಡು ಹಿಡಿದರು. ಬಿ ಜಿ ಕಟ್ಟೆಯ ಬಳಿ ಸೀತಾ ನದಿಗೆ ಸೇತುವೆ ಕಟ್ಟುವ ಕೆಲಸ ಆಗ ಭರದಿಂದ ಸಾಗಿತ್ತು. ಹೆಚ್ಚಿನ ಕೆಲಸಗಾರರು ತಮಿಳಿನವರಾಗಿದ್ದು ಅವರು ನದಿಯ ಹತ್ತಿರದಲ್ಲೇ ಒಂದು ಕ್ಯಾಂಪ್ ಮಾಡಿದ್ದರು. ಆ ಕೆಲಸಗಾರರಿಗೆ ಬಾಳೆಹಣ್ಣು ಒಂದು ಮುಖ್ಯ ಆಹಾರವೇ ಆಗಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ವಾರಕ್ಕೆರಡು ಬಾರಿ ಬಾಳೆಹಣ್ಣಿನ ಬುಟ್ಟಿಗಳೊಡನೆ ಬಿ ಜಿ ಕಟ್ಟೆಗೆ ಹೋಗಿ ಹಣ್ಣನ್ನು ಒಳ್ಳೆಯ ಬೆಲೆಗೆ ಅವರಿಗೆ ಮಾರುತ್ತಿದ್ದೆವು. ಕೆಲಸಗಾರರು ಒಮ್ಮೆಗೇ ನಮ್ಮ ಬುಟ್ಟಿಗಳ ಮೇಲೆ ಮುಗಿ ಬೀಳುತ್ತಿದ್ದುದನ್ನು ಗಮನಿಸಿದ ತಂದೆಯವರು ಸ್ವಲ್ಪ ಹೆಚ್ಚಿಗೆ ಬೆಲೆ ಹೇಳುತ್ತಿದ್ದರಿಂದ ಅವರ ಕೈಗೆ ಹೆಚ್ಚು ಹಣ ಬರುತ್ತಿತ್ತು.

ಭುವನಕೋಟೆಯಿಂದ ಅಡಿಕೆ ಸೋಗೆಯ ಸಾಗಾಣಿಕೆ
ಆ ವರ್ಷ ನಮಗೆ ಹೊಸದೊಂದು ಕೆಲಸ ಅಂಟಿಕೊಂಡಿತು. ನಮ್ಮ ತೋಟದ ಅಡಿಕೆ ಸೋಗೆ ನಮ್ಮ ಮನೆ, ಕೊಟ್ಟಿಗೆ ಮತ್ತು ದನದ ಕೊಟ್ಟಿಗೆಗಳನ್ನು ಹೊಚ್ಚಲು ಸಾಲದೇ ಹೋಯಿತು. ಆಗ ಬೆಳವಿನಕೊಡಿಗೆ ಗಣೇಶಯ್ಯನವರ ಕಿರಿಯ ಸಹೋದರ ವೆಂಕಪ್ಪಯ್ಯನವರು ಭುವನಕೋಟೆಯಲ್ಲಿ ಅವರ ಮನೆಯ ಮುಂದಿದ್ದ ತೋಟದಲ್ಲಿ ಶೇಖರಿಸಿಟ್ಟ ಅಡಿಕೆ ಸೋಗೆಗಳನ್ನು ಹಾಳೆಗಳಿಂದ ಬೇರ್ಪಡಿಸಿ ನಮ್ಮ ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದರು.

ಈ ಕಾರ್ಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಏಕೆಂದರೆ ವೆಂಕಪ್ಪಯ್ಯನವರ ತೋಟ ಅವರ ಮನೆಯಿಂದ ತುಂಬಾ ಕೆಳಮಟ್ಟದಲ್ಲಿತ್ತು. ಅಲ್ಲಿ ನಾವು ಸೋಗೆ ಕಡಿದು ಹೊರೆ ಮಾಡಿದ  ನಂತರ ಅವನ್ನು ತಲೆಯ ಮೇಲೆ ಹೊತ್ತುಕೊಂಡು ಅವರ ಮನೆಯ ಹತ್ತಿರ ಬಂದು, ಪುನಃ ಒಂದು ಎತ್ತರದ ಗುಡ್ಡವನ್ನು ಹತ್ತಿ ಅದನ್ನು ಒಂದು ಕಾಲುದಾರಿಯ ಮೂಲಕ ಇಳಿದು ನಮ್ಮ ತೋಟ ತಲುಪಿ ಅಲ್ಲಿಂದ ಪುನಃ ತೋಟದ ಮೇಲ್ಭಾಗದಲ್ಲಿದ್ದ ನಮ್ಮ ಮನೆಯನ್ನು ತಲುಪ ಬೇಕಿತ್ತು. ಯಾವ ಆಳುಗಳ ಸಹಾಯವಿಲ್ಲದೆ ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ಈ ಕ್ಲಿಷ್ಟ ಕಾರ್ಯವನ್ನು ಮುಗಿಸಿಯೇ ಬಿಟ್ಟೆವು. ಇಂದು ಎಷ್ಟೋ ವರ್ಷಗಳ ನಂತರ ಹಿಂತಿರುಗಿ ನೋಡುವಾಗ ನಾವು ಆಗ ಮಾಡಿದ ಈ ಸಾಹಸದ ಬಗ್ಗೆ ತುಂಬಾ ಹೆಮ್ಮೆ ಎಂದು ಅನಿಸುತ್ತಿದೆ.

ತಿಮ್ಮೇ ಶೆಟ್ಟಿ ಕಂತ್ರಾಟು!
ನಮ್ಮ ತೋಟಕ್ಕೆ ಪ್ರತಿ ವರ್ಷವೂ ಮಾಡಲೇ ಬೇಕಾದ ಆದರೆ ನಮ್ಮ ಕೈಯಲ್ಲಿ ಮಾಡಲಾಗದ ಕೆಲಸ ಒಂದಿತ್ತು. ಅದೇ ಅದರ ಬೇಸಾಯ. ಜಮೀನನ್ನು ಮೂರು ಭಾಗವಾಗಿ ವಿಂಗಡಿಸಿ ಪ್ರತಿ ವರ್ಷ ಒಂದೊಂದು ಭಾಗಕ್ಕೆ ಅಗತೆ ಮಾಡಿಸಿ, ಗೊಬ್ಬರ ಹಾಕಿಸಿ, ಸೊಪ್ಪು ಮುಚ್ಚಿ ನಂತರ ಹೊಸ ಮಣ್ಣನ್ನು ಮುಚ್ಚ ಬೇಕಾಗಿತ್ತು. ಈ ಕೆಲಸವನ್ನು ಸಾಮಾನ್ಯವಾಗಿ ನಕ್ರ ಪೂಜಾರಿಯಂತಹ ಗುತ್ತಿಗೆದಾರರಿಗೆ ಕೊಡಲಾಗುತ್ತಿತ್ತು. ಅವರ ಕೈ ಕೆಳಗೆ ತುಂಬಾ ಕೂಲಿ ಕೆಲಸಗಾರರು ಇರುತ್ತಿದ್ದರು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ನಕ್ರನಂತಹ ದೊಡ್ಡ ಗುತ್ತಿಗೆದಾರನಿಗೆ ಕೊಡುವ ಮಟ್ಟದ ಕೆಲಸ ಇರುತ್ತಿರಲಿಲ್ಲ.

ಆದರೆ ನಾವು ಸಹ ಗುತ್ತಿಗೆ ನೀಡಬಹುದಾದ ಒಬ್ಬ ಗುತ್ತಿಗೆದಾರ ಆಗ ದಕ್ಷಿಣ ಕನ್ನಡದಿಂದ ನಮ್ಮೂರಿಗೆ ಬರುತ್ತಿದ್ದ. ಅವನೇ ತಿಮ್ಮೇ ಶೆಟ್ಟಿ. ತಿಮ್ಮೇ ಶೆಟ್ಟಿಯ ಬಳಿ ಕೇವಲ ಒಬ್ಬನೇ ಕೆಲಸಗಾರನಿದ್ದ . ಅದು ಬೇರೆ ಯಾರೂ ಅಲ್ಲ. ಅದು ತಿಮ್ಮೇ ಶೆಟ್ಟಿಯೇ! ಅವನದು ಒನ್ ಮ್ಯಾನ್ ಆರ್ಮಿ ಆಗಿತ್ತು. ಅವನೆಂದೂ ದಿನ ಕೂಲಿ ಮಾಡಿದವನಲ್ಲ. ಪ್ರತಿಯೊಂದು ಕೆಲಸವನ್ನೂ ಅವನಿಗೆ ಗುತ್ತಿಗೆಯ ಮೂಲಕವಾಗಿಯೇ ಕೊಡಬೇಕಿತ್ತು. ಆದರೆ ಪ್ರತಿ ಗುತ್ತಿಗೆಯೂ ಒಂದು ಶರತ್ತಿನಿಂದ ಕೂಡಿರುತ್ತಿತ್ತು. ನಿಯಮಿಸಲಾದ ಮೊತ್ತದ ಹಣವಲ್ಲದೇ ಅವನಿಗೆ ಮನೆಯಲ್ಲೇ ಊಟ ಮತ್ತು ತಿಂಡಿ ನೀಡ ಬೇಕಿತ್ತು. ಅಲ್ಲದೇ ಮನೆಯಲ್ಲೇ ತಂಗಲೂ ಅವಕಾಶ ಕೊಡಬೇಕಿತ್ತು. ತಿಮ್ಮೇ ಶೆಟ್ಟಿಯ ಈ ಗುತ್ತಿಗೆ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ ಅದಕ್ಕೆ "ತಿಮ್ಮೇ ಶೆಟ್ಟಿ ಕಂತ್ರಾಟು" ಎಂದೇ ಕರೆಯಲಾಗುತ್ತಿತ್ತು! ನಾವು ಆ ವರ್ಷ ನಮ್ಮ ತೋಟದ ಬೇಸಾಯದ ಪೂರ್ತಿ ಗುತ್ತಿಗೆಯನ್ನು ತಿಮ್ಮೇ ಶೆಟ್ಟಿಗೆ ಕೊಟ್ಟು ಬಿಟ್ಟೆವು.

ತಿಮ್ಮೇ ಶೆಟ್ಟಿಯ ವಿಶೇಷತೆ
ತಿಮ್ಮೇ ಶೆಟ್ಟಿ ಒಬ್ಬ ೨೬-೨೭ ವರ್ಷ ವಯಸ್ಸಿನ ಸ್ಪುರದ್ರೂಪಿ ಯುವಕನಾಗಿದ್ದ. ಆಗಿನ ಕಾಲದ ಬೇರೆ ಕೆಲಸಗಾರರಂತೆ ಅವನೆಂದೂ ಕೊಳೆಯಾದ ಬಟ್ಟೆಗಳನ್ನು ಹಾಕಿ ಕೊಳ್ಳುತ್ತಿರಲಿಲ್ಲ. ಕೆಲಸ ಮಾಡುವಾಗ ಧರಿಸಲೆಂದೇ ಒಂದು ಸ್ಪೆಷಲ್ ಡ್ರೆಸ್ ಹೊಲಿಸಿದ್ದ. ಅದನ್ನು ವಾರದ ಕೊನೆಯಲ್ಲಿ ತೊಳೆದು ಶುಭ್ರ ಮಾಡಿ ಪುನರ್ಬಳಕೆ ಮಾಡುತ್ತಿದ್ದ. ತೋಟದ ಬೇಸಾಯದ ಕೆಲವು ಕೆಲಸಗಳನ್ನು (ಗೊಬ್ಬರದ ಗುಂಡಿಯಿಂದ ಗೊಬ್ಬರ ತೋಡಿ ತೋಟಕ್ಕೆ ಸಾಗಿಸುವುದು,ಇತ್ಯಾದಿ) ಮಾಡಲು ಕಡಿಮೆ ಎಂದರೆ ಇಬ್ಬರು ಕೆಲಸಗಾರರು ಬೇಕಾಗುತ್ತಿತ್ತು. ಆದರೆ ಒಂಟಿ ಸಲಗನಂತಿದ್ದ ತಿಮ್ಮೇ ಶೆಟ್ಟಿ ಅದನ್ನೂ ತಾನು ಒಬ್ಬನೇ ಮಾಡುವಷ್ಟು ಸಮರ್ಥನಾಗಿದ್ದ!

ತಿಮ್ಮೇ ಶೆಟ್ಟಿಗೆ ಬೇರೆ ಕೆಲಸಗಾರರಿಗಿಲ್ಲದ ಇನ್ನೊಂದು ಅಭ್ಯಾಸವಿತ್ತು. ಅವನು ಪ್ರತಿ ಸಂಜೆಯೂ ಸ್ನಾನ ಮುಗಿಸಿದ ನಂತರವೇ ಊಟ ಮಾಡುತ್ತಿದ್ದ! ವಾರದ ಆರು ದಿನಗಳು ಕಠಿಣ ಕೆಲಸಗಳನ್ನು ಮಾಡುತ್ತಿದ್ದ ಶೆಟ್ಟಿ ಭಾನುವಾರ ಮಾತ್ರಾ ಪೂರ್ತಿ ರಜೆ ತೆಗೆದುಕೊಳ್ಳುತ್ತಿದ್ದ. ಆ ದಿನ ಅವನು ಗುರುತೇ ಸಿಗದಂತಹ ಸ್ಪೆಷಲ್ ಡ್ರೆಸ್ ಧರಿಸಿ ಸಿನಿಮಾ ಹೀರೋ ಅಂತೇ ಕೈಯಲ್ಲಿ ಒಂದು ಟಾರ್ಚ್ ಹಿಡಿದುಕೊಂಡು ಮನೆಯಿಂದ ಹೊರಟು ಬಿಡುತ್ತಿದ್ದ. ಆ ದಿನ ಎಲ್ಲಿ ಒಳ್ಳೆಯ ಸಿನಿಮಾ ಇರುವುದೋ ಅಲ್ಲಿಗೆ (ಕೊಪ್ಪ, ಶೃಂಗೇರಿ ಅಥವಾ ಜಯಪುರಕ್ಕೆ) ಅವನ ಪಯಣ. ಅರ್ಧ ರಾತ್ರಿಯ ವೇಳೆಗೆ ಶೆಟ್ಟಿ ಕೈಯಲ್ಲಿ ಟಾರ್ಚ್ ಹಿಡಿದು ಯಾವುದೋ ಒಂದು ಸಿನಿಮಾದ ಹಾಡನ್ನು ಗುನುಗುತ್ತಾ ವಾಪಾಸ್ ಮನೆ ತಲುಪುತ್ತಿದ್ದ.

ಸಾಮಾನ್ಯವಾಗಿ ಮನೆಯ ಹೆಂಗಸರಿಗೆ ತಿಮ್ಮೇ ಶೆಟ್ಟಿ ಕಂತ್ರಾಟು ಅಷ್ಟು ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಅವನಿಗಾಗಿ ನಿತ್ಯವೂ ಹೆಚ್ಚು ಅಡಿಗೆ ಮಾಡಿ ಬಡಿಸ ಬೇಕಾಗುತ್ತಿತ್ತು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ಈ ಬಗೆಯ ಕಂತ್ರಾಟು ಒಂದು ವರವಾಗಿತ್ತು. ಅಲ್ಲದೇ ಬೇರೆ ಆಳುಗಳಿಗೆ ಕೊಟ್ಟಂತೆ ಶೆಟ್ಟಿಗೆ ನಿತ್ಯವೂ ಒಂದು ಸೇರು ಅಕ್ಕಿ ಅಳೆದು ಕೊಡಬೇಕಾಗಿರಲಿಲ್ಲ. ಆದ್ದರಿಂದ ಅದೊಂದು ಅಗ್ಗದ ಕಂತ್ರಾಟು ಎಂದು ಅನಿಸುತ್ತಿತ್ತು. ಅಲ್ಲದೇ ತಿಮ್ಮೇ ಶೆಟ್ಟಿ ಒಬ್ಬ ಮೃದು ನಡತೆಯ  ಸಂಭಾವಿತ ವ್ಯಕ್ತಿಯಾಗಿದ್ದ. ನಮ್ಮೂರಿನ ಬಾಳೆಹಿತ್ಲು ಎಂಬ ಮನೆಯ ಗಣಪತಯ್ಯ ಎಂಬ ಸಣ್ಣ ಹಿಡುವಳಿದಾರರು ತಿಮ್ಮೇ ಶೆಟ್ಟಿಗೆ ಹೆಚ್ಚು ಕಂತ್ರಾಟು ಕೊಡುತ್ತಿದ್ದರು. ಸಾಮಾನ್ಯವಾಗಿ ನಾವು ಅವರ ಮನೆಗೆ ಹೋದಾಗ ತಿಮ್ಮೇ ಶೆಟ್ಟಿ ಕಣ್ಣಿಗೆ ಬೀಳುತ್ತಿದ್ದ.
------- ಮುಂದುವರಿಯುವುದು-----

No comments: