ನಾನು ಆ ಸಂಜೆ ಮನೆ ತಲುಪಿ ತಂದೆ ತಾಯಿಯರೊಡನೆ
ಶಂಕರರಾಯರು ೩೫೦ ರೂಪಾಯಿ ಕೊಟ್ಟು ನನ್ನನ್ನು ಶೃಂಗೇರಿ ಕಾಲೇಜಿಗೆ ಸೇರಿಸಿದ್ದಾರೆಂದು ಹೇಳಿದಾಗ ಅವರಿಗೆ
ನಂಬಲೇ ಸಾಧ್ಯವಾಗಲಿಲ್ಲ. ನಾವು
ಹಿಂದಿನ ವರ್ಷ ನನ್ನ ಓದಿಗಾಗಿ ಕೊಡುಗೆ ಎತ್ತಲು ಊರೆಲ್ಲಾ ಸುತ್ತಿ ಕೇವಲ ೩೮ ರೂಪಾಯಿಗಳನ್ನು ಎತ್ತಿದ್ದನ್ನು
ನೆನಸಿದರೆ ಶಂಕರರಾಯರ ಕೊಡುಗೆ ನಂಬಲಸಾಧ್ಯವೇ ಆಗಿತ್ತು. ಆದರೆ ನಮ್ಮ ನಿಜವಾದ ಸಮಸ್ಯೆ ಬೇರೆಯೇ ಆಗಿತ್ತು.
ಅದು ಶೃಂಗೇರಿಯಲ್ಲಿ ನನ್ನ ವಸತಿ ಮತ್ತು ಊಟ ತಿಂಡಿಯ ವ್ಯವಸ್ಥೆ ಹೇಗೆಂದು. ಶಿವಮೊಗ್ಗೆಯ ಹಾಸ್ಟೆಲಿನಲ್ಲಿ
ನಾನು ಅದಕ್ಕಾಗಿ ಕೇವಲ ಆರು ರೂಪಾಯಿ ತಿಂಗಳಿಗೆ ಫೀ ಕಟ್ಟುತ್ತಿದ್ದೆ. ಆದರೆ ಶೃಂಗೇರಿಯಲ್ಲಿ ಅಷ್ಟು ಹಣದಲ್ಲಿ ಏನೂ ದೊರೆಯುತ್ತಿರಲಿಲ್ಲ.
ನನ್ನ ಕಸಿನ್ ಹಂಚಿನಮನೆ ಸುಬ್ರಹ್ಮಣ್ಯ
ಆ ವೇಳೆಗೆ ಶೃಂಗೇರಿಯ ಭಾರತಿ ರಸ್ತೆಯಲ್ಲಿ ಒಂದು ಮನೆಯನ್ನು ಕೊಂಡುಕೊಂಡಿದ್ದರು. ಆ ಮನೆಯ ಮುಂದೆ ಇದ್ದ
ಒಂದು ಖಾಲಿ ಕೊಠಡಿಯಲ್ಲಿ ನನಗೆ ವಾಸ ಮಾಡಲು ಅವಕಾಶ ಕೊಟ್ಟರು. ಆ ಮನೆಯಿಂದ ಸ್ವಲ್ಪ ದೂರದಲ್ಲೇ ಹೊಳ್ಳ
ಎಂಬವರು ಒಂದು ಮೆಸ್ ನಡೆಸುತ್ತಿದ್ದರು. ಅವರು ಬೆಳಗಿನ ಸ್ನಾನ, ಕಾಫಿ ತಿಂಡಿ ಮತ್ತು ಎರಡು ಹೊತ್ತಿನ
ಊಟಕ್ಕೆ ತಿಂಗಳಿಗೆ ೩೦ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಒಟ್ಟಿನಲ್ಲಿ ನನಗೆ ಬೇರೆ ಖರ್ಚುಗಳೂ ಸೇರಿ ತಿಂಗಳಿಗೆ
ಸುಮಾರು ೪೦ ರೂಪಾಯಿ ವೆಚ್ಚ ಮಾಡಬೇಕಾಗುತ್ತಿತ್ತು. ನಮಗಿರುವ ವಾರ್ಷಿಕ ಆದಾಯದಲ್ಲಿ ಅಷ್ಟು ಹಣ ಒದಗಿಸುವುದು
ಅಸಾಧ್ಯವೆಂದು ನನಗೆ ಅನಿಸಿದರೂ ತಂದೆಯವರು ಹೇಗಾದರೂ ಮಾಡಿ ಆ ವೆಚ್ಚ ಭರಿಸುವುದಾಗಿ ಹೇಳಿದರು. ಶಂಕರರಾಯರು ಅಷ್ಟೊಂದು ದೊಡ್ಡ ಮೊತ್ತವನ್ನು
ಕಾಲೇಜು ಫೀ ಆಗಿ ಕಟ್ಟಿದ ಮೇಲೆ ನನ್ನ ವಿದ್ಯಾಭ್ಯಾಸ ಹೇಗಾದರೂ ಮುಂದುವರಿಯಲೇ ಬೇಕೆಂದು ತಂದೆಯವರ ಆಶಯವಾಗಿತ್ತು.
ಶಂಕರರಾಯರು ಮೊದಲೇ ಹೇಳಿದಂತೆ ನಾನು
ಜೂನ್ ತಿಂಗಳ ಕೊನೆಯಲ್ಲೊಂದು ಸಂಜೆ ಅವರ ಮನೆಗೆ ಹೋದೆ. ಆಗ ಅಲ್ಲಿ ಚಂದ್ರಮೌಳಿರಾಯರ ಮೂರನೇ ಮಗ ಶಿವಶಂಕರ್
ಅವರೂ ಇದ್ದರು. ಒಬ್ಬ ಕುಶಲ ಮೆಕ್ಯಾನಿಕ್ ಆಗಿದ್ದ ಅವರು ತಮ್ಮ ಉತ್ತಮೇಶ್ವರ ಅಕ್ಕಿ ಗಿರಣಿಯಲ್ಲಿ ಏನೋ
ರಿಪೇರಿ ಕೆಲಸಕ್ಕಾಗಿ ಬಂದಿದ್ದರು. ನಾವು ಮೂವರೂ ಮಾರನೇ ದಿನ ಬೆಳಿಗ್ಗೆ ಶೃಂಗೇರಿ ತಲುಪಿದೆವು. ಅದು
೧೯೬೫ನೇ ಇಸವಿಯ ಜೂನ್ ತಿಂಗಳ ೨೭ನೇ ತಾರೀಕು. ಅಂದು ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಮೆಮೋರಿಯಲ್
ಕಾಲೇಜಿನ ಉದ್ಘಾಟನೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಮಗಳೂರ್ ಜಿಲ್ಲಾ ಡೆಪ್ಯೂಟಿ ಕಮಿಷನರ್
ಹೆಚ್ ಎಲ್ ನಾಗೇಗೌಡರು ವಹಿಸಿದ್ದರು. ಉದ್ಘಾಟನಾ
ಜ್ಯೋತಿಯನ್ನು ಮಣಿಪಾಲ್ ಅಕ್ಯಾಡೆಮಿಯ ರಿಜಿಸ್ಟ್ರಾರ್ ಆದ ಡಾಕ್ಟರ್ ಟಿ ಎಂ ಎ ಪೈ ಅವರಿಂದ ಬೆಳಗಿಸಲಾಯಿತು. ಆ ದಿನ ನಿಜವಾಗಿಯೂ ಶೃಂಗೇರಿ ಪಟ್ಟಣದ ನಿವಾಸಿಗಳಿಗೆ ಒಂದು
ಚರಿತ್ರಾರ್ಹ ದಿನವಾಗಿತ್ತು. ಕೊಂಚವೂ
ಬಿಡುವಿಲ್ಲದ ಸಮಾರಂಭದ ಚಟುವಟಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರೂ ಚಂದ್ರಮೌಳಿರಾಯರ ಮಗ ಶ್ರೀಕಂಠರಾಯರು
ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿ ನಾನು ಕಾಲೇಜಿನ ಆರಂಭದ ಮೊದಲ ದಿನವೇ ಹಾಜರಿರುವೆನೆಂದು
ಖಚಿತಪಡಿಸಿಕೊಂಡರು.
ಶೃಂಗೇರಿಗೆ
ನನ್ನ ಕಾಲ್ನಡಿಗೆ ಪ್ರಯಾಣ
ಆ ಭಾನುವಾರ ನಾನು ಶೃಂಗೇರಿಯಲ್ಲಿ ನನ್ನ
ವಸತಿಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ನಮ್ಮ ಮನೆಯಿಂದ ಕಾಲ್ನಡಿಗೆ ಪ್ರಯಾಣ ಆರಂಭಿಸಿದೆ. ಆಗ ನಮ್ಮೂರಿನಿಂದ ಶೃಂಗೇರಿಗೆ ಯಾವುದೇ ವಾಹನ ಸೌಕರ್ಯವಿರಲಿಲ್ಲ.
ಹಾಗೂ ನೇರ ರಸ್ತೆಯೂ ಇರಲಿಲ್ಲ. ಬಸ್ ಹಿಡಿಯ ಬೇಕಾದರೆ ಬಿ ಜಿ ಕಟ್ಟೆಗೆ ನಾಲ್ಕು ಮೈಲಿ ಅಥವಾ ಜಯಪುರಕ್ಕೆ
ಆರು ಮೈಲಿ ನಡೆಯಬೇಕಿತ್ತು. ಆದರೆ ಒಳ ದಾರಿಯಲ್ಲಿ ಶೃಂಗೇರಿ ಕೇವಲ ಎಂಟು ಮೈಲಿ ದೂರದಲ್ಲಿತ್ತು.
ಕಾಲ್ನಡಿಗೆ ಮಾಡುತ್ತಿರುವಂತೆ ನನಗೆ
ನಮ್ಮ ಬಾಲ್ಯದಲ್ಲಿ ನಾವು ಪ್ರತಿ ವರ್ಷವೂ ನವರಾತ್ರಿಯಲ್ಲಿ ಶೃಂಗೇರಿ ಪ್ರಯಾಣ ಮಾಡುತ್ತಿದ್ದುದು ನೆನಪಿಗೆ
ಬರತೊಡಗಿತು. ನಮಗೆ ಮಠದಲ್ಲಿ ನಡೆಯುತ್ತಿದ್ದ ಪೂಜೆ, ಗುರುಗಳ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ ನಾವು
ನೋಡುತ್ತಿದ್ದ ಸಿನಿಮಾ ಮತ್ತು ಆಮೇಲಿನ ಯಕ್ಷಗಾನ ತುಂಬಾ ಖುಷಿ ನೀಡುತ್ತಿದ್ದವು. ಆದರೆ ಅದಕ್ಕಾಗಿ
ನಾವು ಮಾಡಬೇಕಾಗಿದ್ದ ಎಂಟು ಮೈಲಿ ಬರಿಗಾಲ ಪಯಣ ಬಹಳ
ಕಷ್ಟದಾಯಕವೇ ಆಗಿತ್ತು.
ಶೃಂಗೇರಿಗೆ ಹೋಗುವಾಗ ಇದ್ದ ಉತ್ಸಾಹ ನಮಗೆ ಹಿಂತಿರುಗಿ ಬರುವಾಗ ಇರುತ್ತಿರಲಿಲ್ಲ. ಅದರಲ್ಲೂ
ರಾತ್ರಿಯೆಲ್ಲಾ ನಿದ್ದೆಗೆಟ್ಟು ಯಕ್ಷಗಾನ ನೋಡಿರುತ್ತಿದ್ದ ನಮಗೆ ಊರಿಗೆ ಮರು ಪ್ರಯಾಣ ತುಂಬಾ ಬಳಲಿಕೆ
ಹಾಗೂ ಹಿಂಸೆ ನೀಡುತ್ತಿತ್ತು. ಮದ್ಯಾಹ್ನದ ಬಿಸಿಲಿನಲ್ಲಿ ಮನೆ ಸೇರಿದ ನಾವು ಕೂಡಲೇ ಮಲಗಿ ನಿದ್ದೆ
ಹೋಗಿಬಿಡುತ್ತಿದ್ದೆವು. ಇದರ ಮದ್ಯೆ ಒಮ್ಮೊಮ್ಮೆ ನಮ್ಮ ಪುಟ್ಟಣ್ಣ ಅರೆನಿದ್ದೆಯಿಂದ ಮೇಲೆದ್ದು ನಿದ್ದೆಗಣ್ಣಿನಲ್ಲೇ
ತಾನು ರಾತ್ರಿ ನೋಡಿದ ಯಕ್ಷಗಾನದ ಯಾವುದಾದರೂ ಪಾತ್ರಾಭಿನಯ ಮಾಡುತ್ತಾ ನಮ್ಮ ನಿದ್ದೆ ಕೆಡಿಸಿ ಬಿಡುತ್ತಿದ್ದ!
ಎಲ್ಲಳ್ಳಿಯ
ಪಾಳುಬಿದ್ದ ಮನೆ ಮತ್ತು ಹಾಳಾಗಿಹೋದ ಅಡಿಕೆ ತೋಟ
ಬಾಲ್ಯದ ಪ್ರಯಾಣವನ್ನು ಹೋಲಿಸಿದರೆ
ನಾನು ಈಗ ಮಾಡುತ್ತಿದ್ದ ಕಾಲ್ನಡಿಗೆ ಪ್ರಯಾಣ ತುಂಬಾ ಖುಶಿ ನೀಡುವಂತದ್ದಾಗಿತ್ತು. ಅದಕ್ಕೆ ಮುಖ್ಯ
ಕಾರಣ ಪ್ರಕೃತಿ ಸೌಂದರ್ಯದ ಮೇಲೆ ನನಗೆ ಮೂಡಿದ್ದ ಆಸಕ್ತಿ. ನಮ್ಮೂರ ಅಡಿಕೆ ತೋಟದ ಕಣಿವೆಯಿಂದ ಮೇಲೆ
ಬಂದ ನಾನು ಒಂದು ರಸ್ತೆಯಲ್ಲಿ ಎಲ್ಲಳ್ಳಿ ಎಂಬಲ್ಲಿಗೆ ತಲುಪಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ಅಪಾರ
ಜಲರಾಶಿ ಹೊಂದಿದ್ದ ಈ ಪ್ರದೇಶದಲ್ಲಿ ಒಂದು ಪಾಳುಬಿದ್ದ ಮನೆ ಮತ್ತು ಹಾಳಾಗಿಹೋದ ಅಡಿಕೆ ತೋಟ ಕಣ್ಣಿಗೆ
ಬೀಳುತ್ತಿತ್ತು. ಈ ಮನೆಗೂ ನಮಗೂ ಸಂಬಂಧವಿತ್ತು. ನಮ್ಮ
ತಂದೆಯನ್ನು ಅವರ ಬಾಲ್ಯದಲ್ಲಿ ಇದೇ ಮನೆಯಲ್ಲಿ ಅವರ ಸೋದರಮಾವ ಸಾಕಿ ಬೆಳೆಸಿದ್ದರಂತೆ. ಆ ಮನೆ ಮತ್ತು ಜಲ ಸಮೃದ್ಧಿ ಇದ್ದ ಅಡಿಕೆ ತೋಟ ಏಕೆ ಪಾಳು
ಬಿದ್ದು ಹೋದುವೆಂಬುದು ಒಂದು ಬ್ರಹ್ಮ ರಹಸ್ಯವೇ ಆಗಿತ್ತು.
ಊರುಗುಡಿಗೆ
ಸುಬ್ಬ
ಎಲ್ಲಳ್ಳಿಯಿಂದ ಮುಂದೆ ಊರುಗುಡಿಗೆ
ಎಂಬ ಸ್ಥಳವಿತ್ತು. ಇಲ್ಲಿ ನಮ್ಮ ಮನೆಯಲ್ಲಿ ಆಗಾಗ ಮನೆಯಾಳಾಗಿ ಕೆಲಸ ಮಾಡುತ್ತಿದ್ದ ಸುಬ್ಬ ಎಂಬುವನ
ಮನೆಯಿತ್ತು. ಕೆಳ ಜಾತಿಯವನಾಗಿದ್ದ ಸುಬ್ಬನಿಗೆ ಅವನ ಮನೆಯ ಮುಂದಿದ್ದ ಬತ್ತದ ಗದ್ದೆ ಮಾಡುವ ಫಲವತ್ತಾದ
ಜಮೀನು ದರಖಾಸ್ತ್ ಮೂಲಕ ಸರ್ಕಾರದಿಂದ ಮಂಜೂರಾಗಿತ್ತು. ಆದರೆ ಸುಬ್ಬನಿಗೆ ಕೂಲಿ ಕೆಲಸ ಮಾಡುವುದರಲ್ಲಿದ್ದ ಆಸಕ್ತಿ
ಜಮೀನಿನ ವ್ಯವಸಾಯದಲ್ಲಿರಲಿಲ್ಲ. ಸರ್ಕಾರ ತನ್ನ ಮೇಲೆ ಜಮೀನಿನ ಮಾಲೀಕತ್ವದ ಹೊರೆಯನ್ನು ಹೊರಿಸಿದಂತೆ
ಅವನಿಗೆ ಅನಿಸುತ್ತಿತ್ತು. ಆದ್ದರಿಂದ ಆ ಹೊರೆಯನ್ನು ಇಳಿಸಿಕೊಳ್ಳಲು ಜಮೀನು ಮಾರಾಟ ಮಾಡಿಬಿಡಬೇಕೆಂದು
ಅವನ ಉದ್ದೇಶವಾಗಿತ್ತು. ಆದರೆ ಅವನ ದುರಾದೃಷ್ಟಕ್ಕೆ ಕಾನೂನಿನ ಪ್ರಕಾರ ಅವನು ೧೦ ವರ್ಷ ಜಮೀನು ಮಾರುವಂತಿರಲಿಲ್ಲ!
ಸುಬ್ಬನೊಬ್ಬ ಅಸಾಧಾರಣ ಕಥೆಗಾರನಾಗಿದ್ದ.
ಊರಿನಲ್ಲಿ ನಡೆದ ಅಥವಾ ಅವನ ಕಿವಿಗೆ ಬಿದ್ದ ಸಾಮಾನ್ಯ
ಪ್ರಸಂಗಗಳನ್ನು ಒಂದು ಸ್ವಾರಸ್ಯಕರ ಕಥೆಯನ್ನಾಗಿ ಪರಿವರ್ತಿಸಿ
ಹೇಳುವ ಕಲೆ ಅವನಿಗೆ ಸಾಧಿಸಿತ್ತು. ಅವನು ಹೇಳುವ ಕಥೆಗಳನ್ನು ನಾವು ಕಿವಿ ಕೊಟ್ಟು ಕೇಳುತ್ತಿದ್ದೆವು.
ಸುಬ್ಬ ಮತ್ತು
ಅವನ ಹೆಂಡತಿ ಗೌರಿಯ ಒಬ್ಬಳೇ ಮಗಳು ದೇವಿ. ಅವಳೊಬ್ಬ ಸುಂದರಿಯಾಗಿದ್ದಳು. ಹಳೇ ಬಟ್ಟೆಯನ್ನು ಧರಿಸಿದ್ದರೂ
ಅದರೊಳಗೇ ಮಿಂಚುತ್ತಿದ್ದ ದೇವಿ ಉನ್ನತ ಕುಲದ ಸ್ತ್ರೀಯರಿಗೂ ಹೊಟ್ಟೆಕಿಚ್ಚು ಉಂಟು ಮಾಡುತ್ತಿದ್ದರಲ್ಲಿ
ಆಶ್ಚರ್ಯವೇನೂ ಇರಲಿಲ್ಲ.
ದಟ್ಟವಾದ
ಕಾಡಿನಲ್ಲಿ ಪ್ರಯಾಣ
ಊರುಗುಡಿಗೆಯಿಂದ ಮುಂದೆ ಅರದಳ್ಳಿ ಎಂಬ
ಊರಿಗೆ ನಾನೊಂದು ದಟ್ಟವಾದ ಕಾಡಿನಲ್ಲಿ ಪ್ರಯಾಣ ಮಾಡಬೇಕಿತ್ತು. ಈ ಕಾಡೆಷ್ಟು ದುರ್ಗಮವಾಗಿತ್ತೆಂದರೆ ಅದರೊಳಗಿನ ಕಾಲುದಾರಿಯ ಮೂಲಕ ಅರದಳ್ಳಿಯ
ಬತ್ತದ ಗದ್ದೆಗಳಿಗೆ ನಡೆದು ಹೋಗುವಾಗ ಹಗಲಿನಲ್ಲೇ ಭಯವಾಗುತ್ತಿತ್ತು. ಆಮೇಲೆ ಒಂದು ಶನಿವಾರ ನಾನು ಮದ್ಯಾಹ್ನದ
ನಂತರ ಶೃಂಗೇರಿಯಿಂದ ಹೊರಟು ಊರಿಗೆ ಬರುತ್ತಿದ್ದೆ. ಕತ್ತಲಾಗುವ ಮೊದಲೇ ಈ ಕಾಡನ್ನು ದಾಟಿಬಿಡುವ ಗುರಿ
ನನ್ನದಾಗಿತ್ತು. ಆದರೆ
ನಾನು ತಡಮಾಡಿ ಬಿಟ್ಟಿದ್ದೆ. ನನ್ನ ಕೈಯಲ್ಲಿ ಒಂದು ಟಾರ್ಚ್ ಇತ್ತು. ಕಾಡಿನ ನಡುವಿನ ಇಕ್ಕಟ್ಟಾದ ಕಾಲುದಾರಿಯಲ್ಲಿ
ನಾನು ಟಾರ್ಚ್ ಹೊತ್ತಿಸಿಕೊಂಡು ಬರುತ್ತಿದ್ದೆ. ಆ ಕಾಡಿನ ಮರಗಳ ಕೊಂಬೆಗಳು ಕಾಲುದಾರಿಯ ಮೇಲೆ ಒಂದಕ್ಕೊಂದು
ಅಂಟಿಕೊಂಡು ಚಂದ್ರನ ಬೆಳದಿಂಗಳೂ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧಿಸಿ ಬಿಟ್ಟಿದ್ದವು. ಪಕ್ಕದ ಗುಡ್ಡದ ಮೇಲಿಂದ ಕಾಡು ಪ್ರಾಣಿಗಳ ಕೂಗಾಟ ಕಿವಿಗೆ ಬೀಳುತ್ತಲೇ ಇತ್ತು. ಒಂದು ರೀತಿಯ ಭಯದಿಂದ ನನ್ನ ಎದೆ ಬಡಬಡನೆ
ಬಡಿದುಕೊಳ್ಳುತ್ತಿತ್ತು.
ಕೊಳ್ಳಿದೆವ್ವ
ಪ್ರತ್ಯಕ್ಷವಾಯಿತೇ?
ಇದ್ದಕ್ಕಿದ್ದಂತೆ ನನ್ನ ಮುಂದೆ ಸ್ವಲ್ಪ
ದೂರದಲ್ಲಿ ನೆಲದಿಂದ ಸುಮಾರು ಆರಡಿ ಎತ್ತರದಲ್ಲಿ ಒಂದು ಪ್ರಬಲ ಬೆಳಕು ನನ್ನತ್ತಲೇ ಬರುತ್ತಿದ್ದುದು
ನನ್ನ ಕಣ್ಣಿಗೆ ಗೋಚರಿಸಿತು. ಒಮ್ಮೆಲೇ
ನನಗೆ ನನ್ನ ಬಾಲ್ಯದಲ್ಲಿ ತಂದೆಯವರು ನೋಡಿದರೆನ್ನಲಾದ ಕೊಳ್ಳಿದೆವ್ವದ ನೆನಪಾಯಿತು. ತಂದೆಯವರೇನೋ ಕೊಳ್ಳಿದೆವ್ವ
ಹಿಡಿದಿದ್ದ ಕೊಳ್ಳಿಯನ್ನು ಅದರ ಕೈಯಿಂದ ಕಿತ್ತುಕೊಂಡು ಅದನ್ನು ಅದರ ಮುಖಕ್ಕೆ ಹಿಡಿದು ಓಡಿಸಿಬಿಟ್ಟಿದ್ದರಂತೆ.
ಅದರ ಕಾಲಿನ ಎರಡು ಪಾದಗಳೂ ಹಿಂದಕ್ಕೆ ತಿರುಗಿಕೊಂಡಿದ್ದರಿಂದ ತಂದೆಯವರಿಗೆ ಅದೊಂದು ದೆವ್ವವೆಂದು ಗೊತ್ತಾಗಿತ್ತಂತೆ. ಈಗ ಅದೇ ಕೊಳ್ಳಿದೆವ್ವ ನನ್ನ ಮೇಲೆ
ಸೇಡು ತೀರಿಸಿಕೊಳ್ಳಲು ಬಂದಿದೆಯೆಂದು ನನಗೆ ಕಾಣಿಸತೊಡಗಿತು. ನಾನು ನನ್ನ ನಡೆತದ ವೇಗವನ್ನು ಕಡಿಮೆ ಮಾಡಿದೆ. ಆ
ಬೆಳಕು ನನ್ನನ್ನು ಸಮೀಪಿಸುತ್ತಿದ್ದಂತೇ ನನ್ನ ಹೃದಯವೇ ಬಾಯಿಗೆ ಬಂದಂತೆ ಅನಿಸತೊಡಗಿತ್ತು.
ಇದ್ದಕ್ಕಿದಂತೇ ನನ್ನ ಮುಂದೆ ಬೆಳಕಿನ
ಮೂಲವನ್ನು ತನ್ನ ತಲೆಗೆ ಕಟ್ಟಿಕೊಂಡಿದ್ದ ವ್ಯಕ್ತಿಯೊಂದು ಪ್ರತ್ಯಕ್ಷವಾಯಿತು. ಅದರ ಎರಡು ಕಾಲಿನ ಪಾದಗಳು
ಮುಂದಕ್ಕೆ ಚಾಚಿಕೊಂಡಿರುವುದು ನನಗೆ ಸಮಾಧಾನ ತಂದಿತು. ವ್ಯಕ್ತಿ ತೀರಾ ನನ್ನ ಹತ್ತಿರ ಬಂದಾಗ ನನಗೆ
ಅವನು ನನಗೆ ಪರಿಚಯವಿದ್ದ ಚಿಟ್ಟೆಮಕ್ಕಿ ಸೂರ ಎಂದು ಅರಿವಾಯಿತು. ಅವನು ರಾತ್ರಿಯಲ್ಲಿ ಕಾಡಿನೊಳಗೆ
ಬೇಟೆಯಾಡಲು ಬಂದಿದ್ದನಂತೆ. ಬೇಟೆಗಾರರು
ರಾತ್ರಿ ಹೊತ್ತಿನಲ್ಲಿ ತಲೆಗೆ ಹೆಡ್ ಲೈಟ್ ಕಟ್ಟಿಕೊಂಡಿರುವುದು ಮಾಮೂಲಾಗಿತ್ತು. ಒಮ್ಮೆಲೇ ನನ್ನ ಆತಂಕ ಮತ್ತು ಭಯ ನನ್ನಿಂದ
ದೂರವಾಯಿತು.
ಹಳ್ಳದ
ನೀರಿನ ಜಗಳ ಮದುವೆಗಳಲ್ಲಿ ಮುಕ್ತಾಯ!
ಕಾಡಿನ ಕೊನೆಯಲ್ಲಿ ನಾನು ಅರದಳ್ಳಿ
ಊರಿನ ವಿಶಾಲವಾದ ಬತ್ತದ ಗದ್ದೆಯ ಪ್ರವೇಶ ಮಾಡಬೇಕಿತ್ತು ವಿಶಾಲವಾದ ಈ ಗದ್ದೆಯ ನಡುವೆ ಒಂದು ದೊಡ್ಡ ಹಳ್ಳ ಹರಿಯುತ್ತಿತ್ತು.
ಅದು ಗದ್ದೆಯನ್ನು ನಿಖರವಾಗಿ ಎರಡು ಭಾಗ ಮಾಡಿದಂತೆ ಅನಿಸುತ್ತಿತ್ತು. ಒಂದು ಕಾಲದಲ್ಲಿ ಈ ಸಂಪೂರ್ಣ ಜಮೀನು
ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರಿಗೆ ಸೇರಿತ್ತು. ಅವರು ಊರು ಬಿಟ್ಟು ಹೋಗುವ ಮೊದಲು ಅರ್ಧ ಭಾಗವನ್ನು
ಸಂಪಿಗೆ ಕೊಳಲು ಗಣೇಶರಾಯರಿಗೂ ಮತ್ತು ಇನ್ನರ್ಧವನ್ನು ಮೇಲಿನಕೊಡಿಗೆ ರಾಮರಾಯರಿಗೂ ಮಾರಿದ್ದರು. ರಾಮರಾಯರ ಗದ್ದೆಯ ಭಾಗಕ್ಕೆ ಬಾಳೆಹಕ್ಲು
ಎಂದು ಕರೆಯಲಾಗುತ್ತಿತ್ತು. ಆಮೇಲೆ ಸ್ವಲ್ಪ ಕಾಲ ಈ ಎರಡು ಕುಟುಂಬಗಳಿಗೂ ಹಳ್ಳದ ನೀರಿನ ಹಂಚಿಕೆಯ ಬಗ್ಗೆ
ದೊಡ್ಡ ಮನಸ್ತಾಪ ಉಂಟಾಯಿತು. ಕೊನೆಯಲ್ಲಿ ರಾಮರಾಯರ ತಂಗಿ ಗೌರಮ್ಮನನ್ನು ಗಣೇಶರಾಯರ ಅಕ್ಕನ ಮಗ ಅಶ್ವತ್ಥನಿಗೆ
ಮದುವೆ ಮಾಡುವ ಮೂಲಕ ಮನಸ್ತಾಪ ಕೊನೆಗೊಳ್ಳಿಸಲಾಯಿತು. ಆಮೇಲೆ ಸಂಬಂಧಗಳು ಎಷ್ಟು ಸುಧಾರಿಸಿದುವೆಂದರೆ
ಗಣೇಶರಾಯರ ಹಿರಿಯ ಮಗಳು ಪುಷ್ಪಾಳನ್ನು ರಾಮರಾಯರ ತಮ್ಮ ಕೃಷ್ಣನಿಗೆ ಕೊಟ್ಟು ವಿವಾಹ ನೆರವೇರಿಸಲಾಯಿತು.
ಬಾಳೆಹಕ್ಲು ಗದ್ದೆಯನ್ನು ದಾಟಿ ಮುಂದೆ ಮೇಲಿನಕೊಡಿಗೆ ಎಂಬ ಮನೆಯ ಹತ್ತಿರ ನಾನು ಹೋಗ ಬೇಕಾಗಿತ್ತು.
ಅಲ್ಲಿ ಒಂದು ರಸ್ತೆಯನ್ನು ದಾಟಿ ಒಂದು ಗುಡ್ಡದ ಮೇಲೆ ಹತ್ತಬೇಕಾಗಿತ್ತು. ಆ ರಸ್ತೆಯ ಕೆಳಭಾಗದಲ್ಲಿ
ಒಂದು ಮನೆ ಮತ್ತು ಅಡಿಕೆ ತೋಟಗಳಿದ್ದವು. ಆ ಮನೆಯಲ್ಲಿ ಒಂದು ಕಾಲದಲ್ಲಿ ಸೀತಾರಾಮಯ್ಯ ಎಂಬುವರು ವಾಸಿಸುತ್ತಿದ್ದರು.
ಅವರು ಗೇಣಿ ಮಾಡುತ್ತಿದ್ದ ತೋಟ ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರಿಗೆ ಸೇರಿತ್ತು. ರಾಯರು ಅದನ್ನು
ಕೊಡೂರು ಶಾಮಭಟ್ಟರ ಮಗ ನಂಜುಂಡ ಭಟ್ಟರಿಗೆ ಮಾರಿದ್ದರು. ನಂತರ ಸೀತಾರಾಮಯ್ಯನವರು ಊರು ಬಿಟ್ಟು ಹೋಗಬೇಕಾಯಿತು.
ನಾನು ಶೃಂಗೇರಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಂಜುಂಡಭಟ್ಟರು ಆ ಮನೆಗೆ ಬಂದು ವಾಸಿಸತೊಡಗಿದರು.
ನಂಜುಂಡಭಟ್ಟರ
ಮುಗಿಯದ ಸಂಭಾಷಣೆಗಳು!
ನಂಜುಂಡಭಟ್ಟರು ಒಬ್ಬ ಪಾಂಡಿತ್ಯ ಪೂರ್ಣ
ವಿದ್ವಾಂಸರೆನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ತಮ್ಮ ಪಾಂಡಿತ್ಯವನ್ನು ಅವರು ಉಳಿದವರಿಗೂ ಹಂಚಲು
ಯಾವಾಗಲೂ ತುಂಬಾ ಶ್ರಮ ಪಡುತ್ತಿದ್ದರು. ಮಾತಿನ ನಡುವೆ ಹಲವು ಸಂಸೃತ ಶ್ಲೋಕಗಳನ್ನೂ ಪದೇ ಪದೇ ಉಲ್ಲೇಖಿಸುತ್ತಿದ್ದರು. ವಿಚಿತ್ರವೆಂದರೆ ಹೆಚ್ಚು ಜನಗಳಿಗೆ
ಅವರ ಪಾಂಡಿತ್ಯಪೂರ್ಣ ಮಾತುಗಳಲ್ಲಿ ಆಸಕ್ತಿಯೇ ಇರಲಿಲ್ಲ. ಕಾರಣವಿಷ್ಟೇ. ಭಟ್ಟರಿಗೆ ತಮ್ಮ ಮಾತುಗಳನ್ನು
ಮುಗಿಸುವ ಅಭ್ಯಾಸವೇ ಇರಲಿಲ್ಲ!
ಸನ್ನಿವೇಶಗಳು
ಯಾವ ಮಟ್ಟಕ್ಕೆ ಹೋದುವೆಂದರೆ ಭಟ್ಟರು ದೂರದಿಂದ ಕಣ್ಣಿಗೆ ಬಿದ್ದೊಡನೇ ಅವರ ಭಾಷಣದಿಂದ ತಪ್ಪಿಸಿಕೊಳ್ಳಲು
ಜನಗಳು ಪರಾರಿ ಆಗಿಬಿಡುತ್ತಿದ್ದರು! ಈ ವಿಷಯ ಗೊತ್ತಿಲ್ಲದೇ ನಾನು ಹಲವು ಬಾರಿ ಭಟ್ಟರ ಕೈಯಲ್ಲಿ ಸಿಕ್ಕಿಬಿದ್ದು
ಹಿಂಸೆ ಪಟ್ಟಿದ್ದೆ. ನಂತರ ಬುದ್ಧಿ ಕಲಿತ ನಾನು ದೂರದಲ್ಲಿ ಅವರು ಕಾಣಿಸಿದೊಡನೇ ಕಾಲಿಗೆ ಬುದ್ಧಿ ಹೇಳಿಬಿಡುತ್ತಿದ್ದೆ!
ಗುಡ್ಡದಿಂದ ಕೆಳಗಿಳಿದೊಡನೆ ನಾನು ಮೇಗಳಬೈಲು
ಎಂಬಲ್ಲಿ ಪುನಃ ಒಂದು ಗದ್ದೆಯನ್ನು ದಾಟಿ ಶ್ರೀನಿವಾಸ (ಶೀನ) ಎಂಬ ಶ್ರೀಮಂತರ ಮನೆಯ ಮುಂದೆ ಹೋಗಿ ಒಂದು
ರಸ್ತೆ ಸೇರಬೇಕಾಗಿತ್ತು. ಆ ರಸ್ತೆ ಪುನಃ ಒಂದು ಗದ್ದೆಯತ್ತ
ಹೋಗುತ್ತಿತ್ತು. ಅದರ ಅಂಚಿನಲ್ಲಿ ಕೊಂಡಗುಳಿ ಕೃಷ್ಣ ಎಂಬ ಶ್ರೀಮಂತರ ಮನೆಯಿತ್ತು. ಈ ಕೃಷ್ಣ ಇಸ್ಪೀಟು
ಆಟದ ಹುಚ್ಚಿಗೆ ಪ್ರಸಿದ್ಧಿ ಪಡೆದಿದ್ದರು. ನಮ್ಮ ತಂದೆಯವರಿಗೂ ಇಸ್ಪೀಟು ಆಟದ ಹುಚ್ಚು ಅತಿಯಾಗಿ ಎಷ್ಟೋ
ಬಾರಿ ತುಂಬಾ ಹಣವನ್ನು ಕಳೆದುಕೊಂಡಿದ್ದರು. ಆದ್ದರಿಂದ ಇಸ್ಪೀಟು ಆಟ ಆಡುವರನ್ನು ಕಂಡರೆ ನಮ್ಮ ಮನೆಯಲ್ಲಿ
ಯಾರಿಗೂ ಆಗುತ್ತಿರಲಿಲ್ಲ. ಅಂತವರನ್ನು ನಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ಬಿಡುತ್ತಿದ್ದೆವು. ಆ
ಪಟ್ಟಿಯಲ್ಲಿ ಕೊಂಡಗುಳಿ ಕೃಷ್ಣ ಅವರ ಹೆಸರೂ ಸೇರಿತ್ತು.
ಹೊನ್ನೇಮರದ
ಗಣಪತಿ ಕಟ್ಟೆ
ಕೊಂಡಗುಳಿಯಿಂದ ಮುಂದೆ ನಾನು ಒಂದು
ಪಕ್ಕಾ ರಸ್ತೆಯಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಬೇಕಾಗಿತ್ತು. ಆಗ ಒಂದು ದೊಡ್ಡ ಹಳ್ಳ ಎದುರಾಗುತ್ತಿತ್ತು.
ಆಗ ಹಳ್ಳಕ್ಕೆ ಎಲ್ಲಿಯೂ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಅದರಲ್ಲಿ ದೊಡ್ಡ ಪ್ರವಾಹವೇ ಉಂಟಾಗುತ್ತಿತ್ತು.
ಆಗ ಅದನ್ನು ದಾಟಿ ಹೋಗುವುದು ಒಂದು ದೊಡ್ಡ ಸಾಹಸವೇ ಆಗಿತ್ತು. ಹಳ್ಳವನ್ನು ದಾಟಿದ ನಂತರ ಸ್ವಲ್ಪದೂರದಲ್ಲಿ
ನಾನು ಜಯಪುರ-ಶೃಂಗೇರಿ ರಸ್ತೆಯಲ್ಲಿದ್ದ ಹೊನ್ನೇಮರದ ಗಣಪತಿ ಕಟ್ಟೆ ಎಂಬ ದೇವಸ್ಥಾನ ತಲುಪಬೇಕಿತ್ತು.
ಈ ದೇವಸ್ಥಾನದ ಗಣಪತಿ ತುಂಬಾ ಮಹಿಮಾವಂತ ಮತ್ತು ಶಕ್ತಿಯುತ ಗಣಪತಿಯೆಂದು ಪ್ರಸಿದ್ಧಿ ಪಡೆದಿದ್ದ.
ದೇವಸ್ಥಾನದಿಂದ ಜಯಪುರ-ಶೃಂಗೇರಿ ರಸ್ತೆಯಲ್ಲಿ
ಸುಮಾರು ಮೂರು ಕಿಲೋಮೀಟರ್ ಮುಂದೆ ಹೋದಾಗ ಶೃಂಗೇರಿಗೆ ಹೋಗಲು ತುಂಗಾ ನದಿಗೆ ಕಟ್ಟಿದ ಸೇತುವೆ ಕಣ್ಣಿಗೆ
ಬೀಳುತ್ತಿತ್ತು. ಸೇತುವೆಯಿಂದ ಸ್ವಲ್ಪ ಮುಂದೆ ನಮ್ಮ ಕಾಲೇಜಿನ ಕಟ್ಟಡವಿತ್ತು. ಅಲ್ಲಿಂದ ಸುಮಾರು ಅರ್ಧ
ಕಿಲೋಮೀಟರ್ ದೂರದಲ್ಲಿ ಶೃಂಗೇರಿ ಮಠವಿತ್ತು. ನಮ್ಮ ಮನೆಯಿಂದ ಶೃಂಗೇರಿ ತಲುಪಲು ನಾನು ಸುಮಾರು ಎರಡು ಗಂಟೆ
ಪ್ರಯಾಣ ಮಾಡಿದ್ದೆ. ಅಲ್ಲಿ ನಾನು ಮೊದಲು ಹಂಚಿನಮನೆ ಸುಬ್ರಹ್ಮಣ್ಯ ಅವರ ಮನೆಯ ಮುಂದಿನ ಕೊಠಡಿಯಲ್ಲಿ
ನನ್ನ ವಸ್ತುಗಳನ್ನೆಲ್ಲಾ ಇಟ್ಟು ಸೀದಾ ಶೃಂಗೇರಿ ಶಾರದಾಂಬೆಯ ದೇವಸ್ಥಾನ ತಲುಪಿದೆ.
ನಾನು ಶೃಂಗೇರಿ ಮಠದೊಳಗೆ ಮೊಟ್ಟ ಮೊದಲ
ಬಾರಿ ಒಂಟಿಯಾಗಿ ಪ್ರವೇಶ ಮಾಡಿದ್ದೆ. ಸೀದಾ ತುಂಗಾ ನದಿಯ ಬಳಿ ಹೋಗಿ ಕೈ ಕಾಲು ತೊಳೆದು ಮೊದಲು ವಿದ್ಯಾಶಂಕರ
ದೇವಸ್ಥಾನಕ್ಕೆ ಹೋಗಿ ನಂತರ ಶಾರದಾಂಬೆಯ ದೇವಸ್ಥಾನ ಪ್ರವೇಶ ಮಾಡಿದೆ. ಹೂವು ಮತ್ತು ವಸ್ತ್ರಗಳಿಂದ ಅಲಂಕೃತಳಾದ
ಪರಮ ಪೂಜ್ಯ ಶಾರದಾಂಬೆಯನ್ನು ನೋಡಲು ಎರಡು ಕಣ್ಣುಗಳು ಸಾಲವು ಎಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಶಾರದಾಂಬೆಯ ಬಳಿ ಸ್ವಲ್ಪ ಕಾಲ ಕುಳಿತ
ನಂತರ ನಾನು ಪುನಃ ತುಂಗಾ ನದಿಯ ದಂಡೆಯ ಬಳಿ ಹೋದೆ. ಅಲ್ಲಿ ಕುಳಿತ ನಾನು ಸದ್ದಿಲ್ಲದೇ ನನ್ನ ಮುಂದೆ
ಹರಿಯುತ್ತಿದ್ದ ತುಂಗೆಯನ್ನೇ ದಿಟ್ಟಿಸಿ ನೋಡ ತೊಡಗಿದೆ.
ಇದೇ ತುಂಗೆಯ ದಡದಲ್ಲಿದ್ದ ಶಿವಮೊಗ್ಗೆಯಂತಹ ದೊಡ್ಡ
ಸಿಟಿಯನ್ನು ಬಿಟ್ಟು ನಾನೀಗ ಶೃಂಗೇರಿಯಂತಹ ಪವಿತ್ರ ಮತ್ತು ಪ್ರಶಾಂತವಾದ ಸಣ್ಣ ಪಟ್ಟಣವನ್ನು ಸೇರಿ
ಬಿಟ್ಟಿದ್ದೆ. ನನ್ನ ವಿದ್ಯಾರ್ಥಿ ಜೀವನದ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿತ್ತು.
------- ಮುಂದುವರಿಯುವುದು-----
No comments:
Post a Comment