ಮೇ ತಿಂಗಳ ಕೊನೆಯಲ್ಲಿ ನಾನು ಹೊಕ್ಕಳಿಕೆಗೆ
ಹೋಗಿ ಗೌರಕ್ಕ ಮತ್ತು ರುಕ್ಮಿಣಕ್ಕನ ಮನೆಗಳಲ್ಲಿ ಒಂದು ವಾರ ಕಳೆದೆ. ನನಗೆ ಅಕ್ಕಂದಿರ ಮನೆಯಲ್ಲಿದ್ದಾಗ
ಸಮಯ ಹೋದುದೇ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಮದ್ಯಾಹ್ನದ ಊಟವಾದ ನಂತರ ಗೌರಕ್ಕನ ಮನೆಯಿಂದ ಹೊರಟು
ಕೊಪ್ಪಕ್ಕೆ ಬಸ್ ಹಿಡಿಯಲು ಗಡಿಕಲ್ಲಿಗೆ ಬಂದೆ. ಅಲ್ಲಿ ನನಗೆ ಆ ದಿನದ ನ್ಯೂಸ್ ಪೇಪರಿನಲ್ಲಿ ಎಸ್ ಎಸ್
ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆಯೆಂದು
ತಿಳಿಯಿತು. ಅಲ್ಲಿನ ಅಂಗಡಿಯೊಂದರಲ್ಲಿದ್ದ ಪೇಪರ್ ನೋಡಿದಾಗ ನಾನು ಪ್ರಥಮ ದರ್ಜೆಯಲ್ಲಿ ಪಾಸ್ ಆದುದು
ತಿಳಿಯಿತು.
ನಾನು ರಾತ್ರಿಯಾಗುವಾಗ ಮನೆ ತಲುಪಿದೆ.
ನನ್ನ ತಂದೆ ತಾಯಿಯರಿಗೆ ನಾನು ಪಾಸ್ ಆದ ಸಮಾಚಾರ ಪುಟ್ಟಣ್ಣನ ಮೂಲಕ ಗೊತ್ತಾಗಿತ್ತು. ಪುಟ್ಟಣ್ಣನೂ
ಪಾಸಾಗಿದ್ದ. ನಾವಿಬ್ಬರೂ ಜೀವನದಲ್ಲಿ ಆ ಮಟ್ಟ ತಲುಪಲು ನಮ್ಮ ಅಣ್ಣನೇ ಕಾರಣನಾಗಿದ್ದ. ಅಣ್ಣನಿಂದ ನಮಗೆ
ಅಭಿನಂದನೆ ಮಾಡಿ ಬರೆದ ಪತ್ರವೂ ಬಂತು.
ನಾನು ಶಿವಮೊಗ್ಗೆಗೆ ಹೋಗಿ ನನ್ನ ಮಾರ್ಕ್ಸ್
ಕಾರ್ಡ್ ಮತ್ತು ಟ್ರಾನ್ಸ್ಫರ್ ಸರ್ಟಿಫಿಕೇಟುಗಳನ್ನು ತೆಗೆದುಕೊಂಡೆ. ನನಗೆ ಎಲ್ಲಾ ಸಬ್ಜೆಕ್ಟ್ ಗಳಲ್ಲೂ
ಅತ್ತ್ಯುತ್ತಮ ಅಂಕಗಳು ಬಂದಿದ್ದವು. ಅರುಣಾಚಲಂ ಮೇಷ್ಟ್ರು ಮತ್ತು ಬೇರೆ ನನ್ನ ಹಿತೈಷಿಗಳು ನನ್ನ ಮುಂದಿನ
ವಿದ್ಯಾಭ್ಯಾಸದ ಬಗ್ಗೆ ಪ್ರಶ್ನಿಸಿದಾಗ ನಾನು ನನ್ನ ಕುಟುಂಬಕ್ಕೆ ನನ್ನನ್ನು ಮುಂದೆ ಕಾಲೇಜಿನಲ್ಲಿ
ಓದಿಸುವಷ್ಟು ಅನುಕೂಲ ಇಲ್ಲವೆಂದು ಹೇಳಿಬಿಟ್ಟೆ. ಮೇಷ್ಟ್ರು ನನಗೆ "ಹಲ್ಲಿದ್ದವರಿಗೆ ಕಡಲೆ ಇಲ್ಲ
ಮತ್ತು ಕಡಲೆ ಇದ್ದವರಿಗೆ ಹಲ್ಲಿಲ್ಲ" ಎಂಬ ಗಾದೆಯನ್ನು
ಹೇಳಿ ತಮ್ಮ ವ್ಯಥೆಯನ್ನು ವ್ಯಕ್ತ ಪಡಿಸಿದರು.
ನಾನು ಕಾಲೇಜಿನಲ್ಲಿ ಓದುವ ಆಸೆಯನ್ನು
ಕೈಬಿಟ್ಟಿದ್ದೆ. ಆ ದಿನಗಳಲ್ಲಿ ಪೋಸ್ಟ್ ಆಫೀಸಿನ ಕ್ಲರಿಕಲ್ ನೌಕರಿಗೆ ಅಭ್ಯರ್ಥಿಗಳ ಎಸ್ ಎಸ್ ಎಲ್
ಸಿ ಮಾರ್ಕ್ಸ್ ಆಧಾರದ ಮೇಲೆ ಡೈರೆಕ್ಟ್ ಸೆಲೆಕ್ಷನ್
ಮಾಡುತ್ತಿದ್ದರು. ಆಗಿನ್ನೂ ನನಗೆ ೧೮ ವರ್ಷ ವಯಸ್ಸಾಗಿರಲಿಲ್ಲ. ಆದ್ದರಿಂದ
ನಾನು ಮುಂದಿನ ವರ್ಷದವರೆಗೆ ಆ ನೌಕರಿಗಾಗಿ ಕಾಯಬೇಕಾಗಿತ್ತು. ನಾನು ನನ್ನ ತಂದೆ ತಾಯಿಯವರ ಹತ್ತಿರ
ವರ್ಷವಿಡೀ ಮನೆಗೆಲಸದಲ್ಲಿ ಅವರಿಗೆ ನೆರವಾಗುವುದಾಗಿ ಹೇಳಿಬಿಟ್ಟೆ. ಅಲ್ಲಿಯವರೆಗೆ ನಾನು ಹೊಂದಿದ್ದ
ಮಹತ್ವಾಕಾಂಕ್ಷೆಗಳೆಲ್ಲಾ ಮಾಯವಾಗಿ ಹೋಗಿದ್ದವು. ವಿದ್ಯಾಭ್ಯಾಸ ಮುಂದುವರಿಸಿ ಸಮಾಜದಲ್ಲಿ ಒಂದು ಒಳ್ಳೆಯ
ಸ್ಥಾನ ಗಳಿಸಬೇಕೆಂಬ ಆಸೆಗಳೆಲ್ಲ ನುಚ್ಚು ನೂರಾಗಿ ಹೋಗಿದ್ದವು.
ಪುಟ್ಟಣ್ಣನ
ಬೆಂಗಳೂರು ಪಯಣ
ಆದರೆ ನನ್ನಣ್ಣ ಪುಟ್ಟಣ್ಣನ ಗುರಿಯೇ ಬೇರೆಯಾಗಿತ್ತು. ಅವನು ಹೇಗಾದರೂ
ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲೇ ಬೇಕೆಂಬ ಧೃಡ ನಿರ್ಧಾರ ಮಾಡಿಬಿಟ್ಟಿದ್ದ. ಅವನು ಆ ಗುರಿಯತ್ತ ಪ್ರಯತ್ನ ಮಾಡುತ್ತಲೇ ಇದ್ದ. ಅವನ ಅದೃಷ್ಟಕ್ಕೆ
ಅವನು ಅಲ್ಲಿಯವರೆಗೆ ತಂಗಿದ್ದ ಹಂಚಿನಮನೆ ಸುಬ್ರಹ್ಮಣ್ಯ
(ನಮ್ಮ ಕಸಿನ್) ಅವರು ಅವನಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ
ಮಾಡಲು ಹಣದ ಸಹಾಯ ಮಾಡುವುದಾಗಿ ಹೇಳಿದರು. ಅದನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ
ಪುಟ್ಟಣ್ಣ ಒಂದು ದಿನ ಬೆಂಗಳೂರಿಗೆ ಹೊರಟು ಹೋಗಿಯೇ ಬಿಟ್ಟ!
ನನ್ನ
ವಿದ್ಯಾರ್ಥಿ ಜೀವನ ಕೊನೆಗೊಂಡಿತೇ?
ನಾನೇನೋ ಮುಂದೆ ವಿದ್ಯಾಭ್ಯಾಸ ಮಾಡುವುದಿಲ್ಲವೆಂದು ನಿರ್ಧಾರ ಮಾಡಿಬಿಟ್ಟಿದ್ದೆ. ಆದರೆ ಪುಟ್ಟಣ್ಣ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು
ಹೋದನೆಂದು ಗೊತ್ತಾದ ಮೇಲೆ ನಮ್ಮ ಊರಿನವರಿಗೆ ನಾನು ಮಾತ್ರ ತಂದೆಯವರೊಡನೆ ಕೊಪ್ಪ ಸಂತೆಗೆ ಬಾಳೆಹಣ್ಣು
ಮತ್ತು ವೀಳ್ಯದೆಲೆಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು. ಅವರು ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಹಾಸ್ಟೆಲಿನಲ್ಲಿ
ಫ್ರೀ ಸೀಟ್ ಇದ್ದರೂ ಏಕೆ ಓದಲು ಹೋಗುತ್ತಿಲ್ಲವೆಂದು ಪ್ರಶ್ನಿಸ ತೊಡಗಿದರು. ಆಗ ನನ್ನ
ತಂದೆ ತಾಯಿಯವರ ಮನಸ್ಸಿಗೆ ತುಂಬಾ ಹಿಂಸೆಯಾಗತೊಡಗಿತು.
ಒಂದು ಸಂಜೆ ನಾನು ಕೆರೆಯೊಂದರಿಂದ ನಮ್ಮ
ತೋಟಕ್ಕೆ ನೀರು ಹಾಯಿಸುತ್ತಿದ್ದೆ. ಕೆರೆಯ ನೀರೆಲ್ಲಾ ಖಾಲಿಯಾದ ಮೇಲೆ ನಾನು ಕೆರೆಯೊಳಗಿಳಿದು ಅದರಲ್ಲಿ
ಪುನಃ ರಾತ್ರಿಯಲ್ಲಿ ನೀರು ತುಂಬಲು ತೂಬಿಗೆ ಸೀಲ್ ಮಾಡಿ ನಂತರ ಕೆರೆಯಲ್ಲೇ ನಿಂತಿದ್ದೆ. ನನ್ನ ಮನಸ್ಸು
ನನ್ನ ಫ್ಯೂಚರ್ ಬಗ್ಗೆ ಚಿಂತೆಯಲ್ಲಿ ತೊಡಗಿತು. ಆಗ
ತಾನೆ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗತೊಡಗಿದ್ದ. ನನಗೆ ಇದ್ದಕ್ಕಿದ್ದಂತೆ ನನ್ನ
ವಿದ್ಯಾರ್ಥಿ ಜೀವನವೂ ಸಂಜೆಯ ಸೂರ್ಯನಂತೆ ಮುಳುಗಿ ಹೋಗುತ್ತಿದ್ದಂತೆ ಭಾಸವಾಯಿತು. ನನ್ನ ಪ್ರೀತಿಯ
ಅಣ್ಣ ನನ್ನ ವಿದ್ಯಾಭ್ಯಾಸಕ್ಕಾಗಿ ಎಷ್ಟೊಂದು ಹೋರಾಟ ಮಾಡಿದ್ದ. ಆದರೆ
ನಾನು ಹೀಗೆ ನನ್ನ ಮುಂದಿನ ಜೀವನದ ಬಗ್ಗೆ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿರುವಾಗ ಅವನು ನನ್ನ ಜೊತೆಯಲ್ಲಿರಲಿಲ್ಲ.
ಇದ್ದಕ್ಕಿದ್ದಂತೆ
ನಾನೊಂದು ದುಃಖ್ಖ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುವಂತೆ ಅನಿಸತೊಡಗಿತು. ಅದರಿಂದ ಈಜಿ ಹೊರಗೆ ಬರಬೇಕೆಂದೂ
ನನಗೆ ಅನಿಸಲಿಲ್ಲ.
ಆಗ ಇದ್ದಕ್ಕಿದ್ದಂತೆ ನನಗೆ ನನ್ನ ತಂದೆಯವರು
ಗಟ್ಟಿಯಾಗಿ ನನ್ನ ಹೆಸರನ್ನು ಹೇಳಿ ಕೂಗುತ್ತಿರುವುದು ಕೇಳಿಸಿತು. ಹೌದು ಅದು ನಿಜವಾಗಿತ್ತು. ನಾನು
(ಸಮುದ್ರದಲ್ಲಲ್ಲ) ಕೆರೆಯಲ್ಲೇ ಮುಳುಗಿ ಹೋಗುವುದರಲ್ಲಿದ್ದೆ.
ಕೆರೆಯ ನೀರು ವೇಗವಾಗಿ ತುಂಬುತ್ತಾ ಆಗಲೇ ನನ್ನ ಸೊಂಟದ ಮೇಲೆ ಬಂದು ಬಿಟ್ಟಿತ್ತು! ನನಗದರ ಅರಿವೇ ಇರಲಿಲ್ಲ!
------- ಮುಂದುವರಿಯುವುದು-----
No comments:
Post a Comment