ಮಾಮೂಲಿನಂತೆ ಜೂನ್ ತಿಂಗಳ ಮೊದಲ ವಾರ
ನಾನು ಅರುಣಾಚಲಂ ಮೇಷ್ಟ್ರ ಮನೆಯಲ್ಲಿದ್ದೆ. ಈ ಬಾರಿ
ನಾನು ಮೇಷ್ಟ್ರ ಒಂದು ತಿಂಗಳ ಚಾರ್ಜ್ ಆದ ೩೦ ರೂಪಾಯಿಗಳನ್ನು
ಪಾವತಿ ಮಾಡಿಯೇ ಜುಲೈ ತಿಂಗಳ ಮೊದಲ ವಾರ ಎರಡು ತಿಂಗಳ ಫೀ
ಕಟ್ಟಿ ಹಾಸ್ಟೆಲ್ ಸೇರಿ ಬಿಟ್ಟೆ. ಆ ವರ್ಷ ಹಾಸ್ಟೆಲಿನ ವಿದ್ಯಾರ್ಥಿಗಳಿಗಾಗಿ ಬೇರೆ ಕಟ್ಟಡ
ಬಾಡಿಗೆಗೆ ತೆಗೆದುಕೊಳ್ಳುವ ಅವಶ್ಯಕತೆ ಬರಲಿಲ್ಲ. ನನಗೆ ರೂಮ್ ನಂಬರ್ ೧೦ ರಲ್ಲಿ ಇರಲು ಅವಕಾಶ ಕೊಡಲಾಯಿತು.
ಮತ್ತೂರಿನ ಅನಂತ, ಸಾಗರದ ನಾಗರಾಜರಾವ್ ಬಾಪಟ್ ಮತ್ತು ಹೊಸನಗರ ತಾಲೂಕ್ ಕೋಡೂರಿನ ಚಂದ್ರಶೇಖರ ಅವರು
ನನ್ನ ರೂಮ್ ಮೇಟ್ ಆಗಿದ್ದರು. ಇನ್ನೊಬ್ಬನ ಹೆಸರು
ಈಗ ನೆನಪಿಗೆ ಬರುತ್ತಿಲ್ಲ.
ನಾವು ಎಸ್ ಎಸ್ ಎಲ್ ಸಿ ತರಗತಿಗೆ ಬರುತ್ತಿದ್ದಂತೇ
ಶಾಲೆಯ ಹಿರಿಯ ವಿಧ್ಯಾರ್ಥಿಗಳೆಂದು ನಮ್ಮ ಮಟ್ಟ ಮೇಲೆ ಏರಿ ಹೋಯಿತು. ಕಿರಿಯ ವಿದ್ಯಾರ್ಥಿಗಳು ಕೂಡ
ನಮ್ಮನ್ನು ಹೆಚ್ಚು ಗೌರವದಿಂದ ನೋಡತೊಡಗಿದರು. ನಮ್ಮ ಬಾಡಿ ಲ್ಯಾಂಗ್ವೇಜ್ ಕೂಡ ಒಂದು ಉನ್ನತ ಮಟ್ಟದ್ದಾಗಿ
ಹೋಯಿತು. ನಮಗೆ ಒಂದು ರೀತಿಯಲ್ಲಿ ತುಂಬಾ ಹೆಮ್ಮೆ ಎನಿಸ ತೊಡಗಿತು.
ಐ
ರಿಮೆಂಬರ್, ಐ ರಿಮೆಂಬರ್, ದಿ ಹೌಸ್ ವೇರ್ ಐ ವಾಸ್ ಬಾರ್ನ್
ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು
ಮೂರು ಸ್ನಾತಕೋತ್ತರ ಪದವಿಗಳನ್ನು (ಎಂ ಎ, ಎಂ ಕಾಂ ಮತ್ತು ಎಂ ಎಡ್ ) ಹೊಂದಿದ್ದರೆಂದು ನಾನು ಈ ಹಿಂದೆಯೇ
ಬರೆದಿದ್ದೇನೆ. ಅವರು ನಮಗೆ ಇಂಗ್ಲಿಷ್ ಸಬ್ಜೆಕ್ಟಿನಲ್ಲಿ ಕೆಲವು ಪಾಠಗಳನ್ನು ಮಾಡಲಾರಂಭಿಸಿದರು. ಅವರು
ಮಾಡಿದ ಪಾಠಗಳಲ್ಲಿ ನನಗೆ ಇಂದಿಗೂ ನೆನಪು ಬರುವುದು
ಇಂಗ್ಲಿಷ್ ಕವಿ ಥಾಮಸ್ ಹುಡ್ ಬರೆದ "ಐ ರಿಮೆಂಬರ್,
ಐ ರಿಮೆಂಬರ್, ದಿ ಹೌಸ್ ವೇರ್ ಐ ವಾಸ್ ಬಾರ್ನ್ "ಎಂಬ ಕವನ. ನಮ್ಮ ಬಾಲ್ಯ ಕಾಲವನ್ನು ನೆನಪಿಗೆ ತರುವ ಈ ಕವನವನ್ನು
ಶ್ರೀನಿವಾಸಮೂರ್ತಿಯವರು ಅತ್ಯಂತ ಹೃದಯಂಗಮವಾಗಿ ವಿವರಿಸಿದ್ದರು. ನಮ್ಮ ಮಾಮೂಲಿ ಇಂಗ್ಲಿಷ್ ಮೇಷ್ಟ್ರಾಗಿದ್ದ
ಕೆ ಸುಬ್ರಹ್ಮಣ್ಯಂ ಕೂಡ ತುಂಬಾ ಒಳ್ಳೆಯ ಮೇಷ್ಟ್ರೇ ಆಗಿದ್ದರು. ನಮಗೆ
ಎಷ್ಟೋ ಬಾರಿ ಶ್ರೀನಿವಾಸಮೂರ್ತಿಯವರು ಕಾಲೇಜು ಪ್ರೊಫೆಸರ್ ಆಗಬೇಕಾಗಿದ್ದವರು ಕೇವಲ ಹೆಡ್ಮಾಸ್ಟರ್
ಪದವಿಯಲ್ಲಿ ಏಕೆ ತೃಪ್ತಿ ಪಡೆಯುತ್ತಿದ್ದರೆಂದು ಅರ್ಥವಾಗುತ್ತಿರಲಿಲ್ಲ. ಮುಂದೆ ಅವರು ನ್ಯಾಷನಲ್ ಕಾಲೇಜಿನ
ಮೊದಲ ಪ್ರಿನ್ಸಿಪಾಲರಾಗಿ ನಿವೃತ್ತರಾದರು.
ನಾನು
ಬಯಸದ ಒಂದು ಪೈಪೋಟಿ
ನನಗೆ ನಮ್ಮ ರೂಮ್ ಮೇಟ್ ಒಬ್ಬನಿಂದ
ನಾನು ಯಾವ ರೀತಿಯೂ ಬಯಸದ ಒಂದು ಪೈಪೋಟಿ ಪ್ರಾರಂಭವಾಯಿತು. ಸಾಗರದ ನಾಗರಾಜರಾವ್ ಬಾಪಟ್
ಎಂಬ ಈ ವಿದ್ಯಾರ್ಥಿ ನಮ್ಮಶಾಲೆಯಲ್ಲೇ ನಮ್ಮ ತರಗತಿಯಲ್ಲೇ ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದ. ತುಂಬಾ
ಬುದ್ಧಿವಂತನೇ ಆದ ಈ ವಿದ್ಯಾರ್ಥಿಗೆ ತಾನು ಕನ್ನಡ ಮೀಡಿಯಂನಲ್ಲಿ ಓದುತ್ತಿದ್ದು ನಾನು ಇಂಗ್ಲಿಷ್ ಮೀಡಿಯಂನಲ್ಲಿ
ಓದುತ್ತಿರುವುದು ಒಂದು ಬಗೆಯ ಕೀಳರಿಮೆ ತಂದಿತ್ತು ಅನಿಸುತ್ತದೆ. ನನಗೇನೇನೂ
ಇಷ್ಟವಲ್ಲದ ಈ ಪೈಪೋಟಿ ಹಾಸ್ಟೆಲಿನಲ್ಲಿ ನಮ್ಮ ವ್ಯಾಸಂಗಕ್ಕೆ ಸಂಬಂಧಪಟ್ಟಿತ್ತು. ಅದು ಯಾವ ಮಟ್ಟಕ್ಕೆ
ಹೋಯಿತೆಂದರೆ ನಾನು ಬೆಳಿಗ್ಗೆ ಹಾಸಿಗೆಯಿಂದ ಮೇಲೇಳಲು ಮಿಸುಕಾಡುತ್ತಿದ್ದಂತೆಯೇ ಬಾಪಟ್ ಚಂಗನೆ ಹಾಸಿಗೆಯಿಂದ
ಮೇಲೆದ್ದು ಸ್ನಾನ ಮಾಡಲು ಓಡಿಹೋಗುತ್ತಿದ್ದ! ಹಾಗೆಯೇ ರಾತ್ರಿ ನಾನು ಮಲಗಿದ ನಂತರವೇ ಅವನು ಮಲಗುತ್ತಿದ್ದ.
ಅದು ಅವನಿಗೆ ನನಗಿಂತ ಹೆಚ್ಚು ವ್ಯಾಸಂಗ ಮಾಡಿದ ತೃಪ್ತಿ ಕೊಡುತ್ತಿತ್ತೆಂದು ತೋರುತ್ತದೆ.
ನನ್ನ
ಉಳಿದ ರೂಮ್ ಮೇಟುಗಳು ಬಾಪಟ್ ಮಾಡುತ್ತಿದ್ದ ಈ ವಿಚಿತ್ರ ಪೈಪೋಟಿಯ ಬಗ್ಗೆ ಹಾಸ್ಯ ಮಾಡಿ ನಗುತ್ತಿದ್ದರೂ
ಅದು ನಿಲ್ಲಲೇ ಇಲ್ಲ.
ಮಾಸ್ಟರ್
ಹಿರಣ್ಣಯ್ಯನವರ ಲಂಚಾವತಾರ
ಪ್ರಖ್ಯಾತ ನಾಟಕಕಾರ ಮಾಸ್ಟರ್ ಹಿರಣ್ಣಯ್ಯನವರು
ಪ್ರತಿ ವರ್ಷವೂ ತಮ್ಮ ಒಂದು ನಾಟಕದ ಪೂರ್ತಿ ಕಲೆಕ್ಷನ್ ನಮ್ಮ ಹಾಸ್ಟೆಲಿಗೆ ದೇಣಿಗೆಯಾಗಿ ಕೊಡುತ್ತಿದ್ದರು.
ಆ ವರ್ಷ ಅವರು ಶಿವಮೊಗ್ಗೆಯ ಡಿ ವಿ ಎಸ್ ಹೈಸ್ಕೂಲಿನ ಪಕ್ಕದಲ್ಲೇ ಹಾಕಿದ ರಂಗಮಂಟಪದಲ್ಲಿ ನಡೆಸಿದ ಲಂಚಾವತಾರ
ಎಂಬ ನಾಟಕದ ಒಂದು ರಾತ್ರಿಯ ಕಲೆಕ್ಷನ್ ನಮ್ಮ ಹಾಸ್ಟೆಲಿಗೆ ಕೊಟ್ಟರು. ದೊಡ್ಡ
ಮೊತ್ತದ ಹಣ ಬಂದುದಕ್ಕೆ ನಮ್ಮ ಹಾಸ್ಟೆಲಿನಲ್ಲಿ ಒಂದು ಔತಣಕೂಟವನ್ನು ಏರ್ಪಡಿಸಲಾಯಿತು. ಆ ಔತಣದ ಊಟ
ಎಷ್ಟು ಚೆನ್ನಾಗಿತ್ತೆಂದರೆ ಅದು ಲಂಚಾವತಾರ ನಾಟಕಕ್ಕಿಂತಲೂ ಚೆನ್ನಾಗಿತ್ತೆಂದು ಕೆಲವರ ಅಭಿಪ್ರಾಯವಾಗಿತ್ತು!
ನಮ್ಮ
ಹಾಸ್ಟೆಲಿನ ತಾತ್ಕಾಲಿಕ ಸ್ಥಳಾಂತರ
ತುಂಬಾ ಶ್ರೀಮಂತರೊಬ್ಬರು ತಮ್ಮ ಮಗಳ
ಮದುವೆ ಅರ್ಜೆಂಟಾಗಿ ಮಾಡಲು ಹಾಸ್ಟೆಲನ್ನು ನಾಲ್ಕು
ದಿನಗಳ ಮಟ್ಟಿಗೆ ಬಾಡಿಗೆಗೆ ಕೇಳಿದರು. ಅವರು ಕೊಡುವುದಾಗಿ ಹೇಳಿದ ಬಾಡಿಗೆ ಎಷ್ಟು ದೊಡ್ಡ ಮೊತ್ತದ್ದಾಗಿತ್ತೆಂದರೆ
ನಮ್ಮ ಹಾಸ್ಟೆಲಿನ ಆಡಳಿತ ವರ್ಗ ಡಿ ವಿ ಎಸ್ ಹೈಸ್ಕೂಲಿನ ಒಂದು ಅಂತಸ್ತನ್ನು ನಾಲ್ಕು ದಿನ ಬಾಡಿಗೆಗೆ
ತೆಗೆದುಕೊಂಡು ನಮ್ಮನ್ನೆಲ್ಲಾ ಅಡಿಗೆ ಮನೆಯ ವ್ಯವಸ್ಥೆಯೊಡನೆ ಅಲ್ಲಿಗೆ ಸ್ಥಳಾಂತರ ಮಾಡಿ ಬಿಟ್ಟಿತು!
ನಮ್ಮ ಹಾಸ್ಟೆಲಿನಿಂದ ಡಿ ವಿ ಎಸ್ ಹೈಸ್ಕೂಲ್ ಸುಮಾರು ಒಂದು ಕಿಲೋಮೀಟರ್ ದೂರವಿತ್ತು. ನಮಗೆಲ್ಲಾ ಆ
ಹೊಸದೊಂದು ಅನುಭವ ತುಂಬಾ ಖುಷಿ ಕೊಟ್ಟಿತು. ಹಾಗೆಯೇ ಮದುವೆ ದಿನದ ವಿಶೇಷ ಊಟಕ್ಕೆ ನಾವು ಅತಿಥಿಗಳಾಗಿ
ತುಂಬಾ ಆನಂದಿಸಿದೆವು.
ಶ್ರೀಮಂತ
ಸ್ನೇಹಿತ ಮತ್ತು ರೋಮ್ಯಾಂಟಿಕ್ ಹಿಂದಿ ಸಿನಿಮಾಗಳು
ನನ್ನ ರೂಮ್ ಮೇಟ್ ಗಳಲ್ಲಿ ಒಬ್ಬನಾದ
ಹೊಸನಗರ ತಾಲೂಕ್ ಕೋಡೂರಿನ ಚಂದ್ರಶೇಖರ ಬೇಗನೆ ನನ್ನ
ಆತ್ಮೀಯ ಸ್ನೇಹಿತನಾಗಿ ಬಿಟ್ಟ. ಅವನಿಗೆ ನನ್ನ ಮೆರಿಟ್ ಮೇಲೆ ತುಂಬಾ ಗೌರವ ಇತ್ತು. ಅಷ್ಟು
ಮಾತ್ರವಲ್ಲ, ಸ್ವಲ್ಪ ಶ್ರೀಮಂತ ಕುಟುಂಬದವನೇ ಆದ ಚಂದ್ರಶೇಖರನಿಗೆ ನನ್ನನ್ನು ತನ್ನೊಡನೆ ಹೋಟೆಲುಗಳಿಗೆ
ಮತ್ತು ಸಿನಿಮಾ ನೋಡಲು ಕರೆದುಕೊಂಡು ಹೋಗುವ ಧಾರಾಳತೆಯೂ ಇತ್ತು. ಅದೊಂದು
ರೀತಿಯಲ್ಲಿ ನನಗೆ ದೇವರೇ ಕರುಣಿಸಿದ ವರದಂತಾಯಿತು.
ನನಗೆ ಚಂದ್ರಶೇಖರನೊಡನೆ ಆ ಕಾಲಕ್ಕೆ
ತುಂಬಾ ರೋಮ್ಯಾಂಟಿಕ್ ಹಿಂದಿ ಫಿಲಂ ಎಂದು ಪ್ರಸಿದ್ಧವಾದ ರಾಜ್ ಕಪೂರ್ ಅವರ ಸಂಗಮ್ ಸಿನೆಮಾವನ್ನು ನೋಡುವ
ಅವಕಾಶ ಒದಗಿ ಬಂತು. ಈ ಸಿನಿಮಾ ಮಲ್ಲಿಕಾರ್ಜುನ ಥಿಯೇಟರಿನಲ್ಲಿ ಆಲ್ ಇಂಡಿಯಾ
ರಿಲೀಸ್ ದಿನವೇ ಪ್ರದರ್ಶನ ಮಾಡಲ್ಪಟ್ಟಿತು. ತುಂಬಾ ದೊಡ್ಡ ಕ್ಯೂನಲ್ಲಿ ನಿಂತು ನಾವು
ಮೊದಲ ದಿನವೇ ಆ ಸಿನೆಮಾವನ್ನು ನೋಡಿ ಬಿಟ್ಟೆವು. ಶಂಕರ್ ಜೈಕಿಶನ್ ಅವರು ನೀಡಿದ ಮಧುರ
ಸಂಗೀತವಿದ್ದ ಈ ಪ್ರಣಯಭರಿತ ಸಿನಿಮಾ ನಮ್ಮನ್ನು ಬೇರೊಂದು ಲೋಕಕ್ಕೇ ಕರೆದೊಯ್ಯಿತು. ಅಲ್ಲಿಯವರೆಗೆ
ಕೇವಲ ಕಪ್ಪು ಬಿಳುಪು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ರಾಜ್ ಕಪೂರ್ ಅವರ ಮೊಟ್ಟ ಮೊದಲ ಈಸ್ಟ್ ಮನ್ ಕಲರ್ ಸಿನಿಮಾವೆ ಸಂಗಮ್ ಆಗಿತ್ತು.
ಆ
ಸಿನಿಮಾ ನಮಗಾಗಿ ಸೃಷ್ಟಿ ಮಾಡಿದ ಬೇರೊಂದು ಪ್ರಣಯ ಪ್ರಪಂಚದಿಂದ ಹೊರಬರಲು ನಮಗೆ ಹಲವು ದಿನಗಳೇ ಬೇಕಾದವು.
ಈ
ಸಿನಿಮಾದ ಎಲ್ಲಾ ಹಾಡುಗಳೂ ನಮಗೆ ಇಷ್ಟವಾದರೂ ಅದರ "ಎ ಮೇರಾ ಪ್ರೇಮ ಪತ್ರ್ ಪಡ್ಕರ್" ಎಂಬ
ಹಾಡು ನಮ್ಮ ಅತಿ ಮೆಚ್ಚಿನ ಹಾಡಾಗಿ ಬಿಟ್ಟಿತು. ಓಹ್
! ಬಾಲ್ಯಕಾಲದ ಆ ಮದುರ ದಿನಗಳು ಎಂದೂ ಪುನಃ ಬರಲಾರವು!
ಗೀತ್
ಗಾಯಾ ಪತ್ತರೋನೇ
ಚಂದ್ರಶೇಖರನೊಡನೆ ನಾನು ನೋಡಿದ ಇನ್ನೊಂದು
ಸಿನಿಮಾ "ಗೀತ್ ಗಾಯಾ ಪತ್ತರೋನೇ" ಕೂಡ
ವಿ ಶಾಂತಾರಾಮ್ ಅವರು ನಿರ್ಮಾಣಮಾಡಿ ನಿರ್ದೇಶಿಸಿದ ಒಂದು ರೋಮ್ಯಾಂಟಿಕ್ ಹಿಂದಿ ಫಿಲಂ ಆಗಿತ್ತು. ವಿನಾಯಕ
ಟಾಕೀಸ್ ನ್ನಲ್ಲಿ ನಾವು ನೋಡಿದ ಈ ಸಿನಿಮಾದಲ್ಲಿ ಆಗಿನ್ನೂ ಹೊಸ ನಟನಾದ ಜಿತೇಂದ್ರ ಮತ್ತು ಶಾಂತಾರಾಮ್
ಅವರ ಪುತ್ರಿ ರಾಜಶ್ರೀ ನಟಿಸಿದ್ದರು. ನಮಗೆ ತುಂಬಾ ಇಷ್ಟವಾದ ಈ ಸಿನಿಮಾ ಜಿತೇಂದ್ರನಿಗೆ ಒಳ್ಳೆ ಹೆಸರು
ತಂದಿತು. ಹಾಡುಗಳೂ ಕೂಡ (ಮುಖ್ಯವಾಗಿ ಟೈಟಲ್ ಸಾಂಗ್) ನಮಗೆ ತುಂಬಾ ಇಷ್ಟವಾಗಿ ನಾವು ಅವನ್ನು ಮನಸಿನಲ್ಲೇ
ಗುನುಗುತ್ತಿದ್ದುದು ನೆನಪಾಗುತ್ತದೆ.
ಹಾರ್ಡ್ವಿಕ್
ಹೈಸ್ಕೂಲಿನ ಕ್ರಿಕೆಟ್ ಟೀಮ್
ನಮಗೆ ಆ ವರ್ಷ ತುಂಬಾ ಕ್ರೀಡಾ ಚಟುವಟಿಕೆಗಳನ್ನು
ನೋಡುವ ಅವಕಾಶ ಸಿಕ್ಕಿತು. ಮೈಸೂರಿನ ಹಾರ್ಡ್ವಿಕ್ ಹೈಸ್ಕೂಲಿನ ಕ್ರಿಕೆಟ್ ಟೀಮ್ ಒಂದು ಶಿವಮೊಗ್ಗೆಗೆ
ಬಂದು ನಮ್ಮ ಶಾಲಾ ಟೀಮಿನೊಡನೆ ನಮ್ಮ ಶಾಲೆಯ ಹತ್ತಿರವೇ ಇದ್ದ ದುರ್ಗಿಗುಡಿ ಮೈದಾನದಲ್ಲಿ ಒಂದು ಪಂದ್ಯ
ಆಡಿತು. ಪಂದ್ಯವನ್ನು
ನೋಡಲು ನಮಗೆ ಒಂದು ದಿನದ ರಜೆ ಕೊಟ್ಟಿದ್ದರಿಂದ ನಾವು ಪೂರ್ತಿ ಮ್ಯಾಚ್ ನೋಡಿ ಬಿಟ್ಟೆವು. ನಮ್ಮ ಶಾಲೆಯ
ಟೀಮ್ ತುಂಬಾ ಚೆನ್ನಾಗಿ ಆಡಿ ಗೆದ್ದು ಬಿಟ್ಟಾಗ ನಮಗಾದ ಸಂತೋಷ ಅಷ್ಟಿಟ್ಟಲ್ಲ. ಅದು ನಾನು ನೋಡಿದ ಮೊದಲ ಕ್ರಿಕೆಟ್ ಮ್ಯಾಚ್
ಆಗಿತ್ತು. ಆಮೇಲೆ ನಾನು ದುರ್ಗಿಗುಡಿ ಟೀಮ್ ಎಂದು ಮುಂದೆ ತುಂಬಾ ಹೆಸರು ಗಳಿಸಿದ ಶಿವಮೊಗ್ಗೆಯ ಟೀಮ್
ಆಡಿದ ತುಂಬಾ ಪಂದ್ಯಗಳನ್ನು ನೋಡಿದೆ. ಪುಟ್ಟಪ್ಪ ಎಂಬುವರು ಕ್ಯಾಪ್ಟನ್ ಆಗಿದ್ದ ಈ ಟೀಮಿನಲ್ಲಿ ನಾರಾಯಣ
(ನಾಣಿ), ಶ್ರೀನಿವಾಸ ಶೆಣೈ ಮತ್ತು ಯಜ್ಞನಾರಾಯಣ
(ಯಜ್ಞ) ಎಂಬುವ ಒಳ್ಳೆಯ ಆಟಗಾರರಿದ್ದರು. ಅದರಲ್ಲೂ ವಿಕೆಟ್ ಕೀಪರ್ ಆಗಿದ್ದ ಯಜ್ಞ ವಿಕೆಟ್ ಹಿಂದೆ ತುಂಬಾ ಗಿಮ್ಮಿಕ್ ಮಾಡುತ್ತಾ ನಮಗೆಲ್ಲಾ
ತುಂಬಾ ನಗೆ ಬರಿಸುವ ಇಷ್ಟದ ಆಟಗಾರನಾಗಿದ್ದ. ಈ ಯಜ್ಞ ಪ್ರಸಿದ್ಧ ಅಡಿಕೆ ಮಂಡಿಯಾಗಿದ್ದ ಸರಾಫ್ ಮಂಜಪ್ಪ
ಅಂಡ್ ಸನ್ಸ್ ಕುಟುಂಬಕ್ಕೆ ಸೇರಿದವನಾಗಿದ್ದ.
------- ಮುಂದುವರಿಯುವುದು-----
No comments:
Post a Comment