ವಿಶ್ವನಾಥಪುರ ತುಂಗಾ ನದಿಯ ತೀರದಲ್ಲಿರುವ
ಒಂದು ಚಿಕ್ಕ ಅಗ್ರಹಾರ. ನಮ್ಮೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಈ ಅಗ್ರಹಾರದಲ್ಲಿ
ವಾಸಿಸುತ್ತಿದ್ದ ಶ್ರೀಮಂತ ಗೋಪಾಲರಾವ್ ಕುಟುಂಬ ತಲೆ ತಲಾಂತರದಿಂದ ನಮ್ಮ ಗ್ರಾಮದ ಶಾನುಭೋಗ ವೃತ್ತಿಯನ್ನು
ಮಾಡುತ್ತಿತ್ತು. ಗೋಪಾಲರಾಯರಿಗೆ ಇಬ್ಬರು ಗಂಡು ಮಕ್ಕಳು. ತಂದೆಯವರ ಮರಣದ ನಂತರ ಹಿರಿಯ ಮಗ ಶಂಕರರಾವ್
ಶಾನುಭೋಗ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಆಸ್ತಿಯ ವಿಂಗಡಣೆಯ ನಂತರ ಅವರ ತಮ್ಮ
ಬೆಣ್ಣೆಗುಡ್ಡೆಗೆ ಹೋಗುವ ದಾರಿಯಲ್ಲಿದ್ದ ಮಾಗಲು ಎಂಬಲ್ಲಿ
ಮನೆ ಮತ್ತು ಜಮೀನು ಮಾಡಿಕೊಂಡಿದ್ದರು.
ಗೋಪಾಲರಾಯರ ಕುಟುಂಬಕ್ಕೆ ಸಾಕಷ್ಟು
ಜಮೀನು ಹಿಡುವಳಿ ಇತ್ತು. ಆದರೆ ತುಂಬಾ ಹಳೆಯ ಸಂಪ್ರದಾಯದ ಪ್ರಕಾರ ನಮ್ಮ ಗ್ರಾಮದಲ್ಲಿ ಅಡಿಕೆ ತೋಟ
ಇರುವವರೆಲ್ಲಾ ಶಾನುಭೋಗರಿಗೆ ಪ್ರತಿ ವರ್ಷವೂ ಸ್ವಲ್ಪ ಅಡಿಕೆಯನ್ನು ಕೊಡುವ ರೂಢಿ ಇತ್ತು. ಅದನ್ನು
ಶಾನುಭೋಗರ ಪ್ರತಿನಿಧಿಯೊಬ್ಬರು ಎಲ್ಲಾ ಮನೆಗಳಿಗೂ ಹೋಗಿ ಸಂಗ್ರಹ ಮಾಡುತ್ತಿದ್ದರು. ನಮ್ಮ
ಮನೆಯಿಂದಲೂ ಸ್ವಲ್ಪ ಅಡಿಕೆ ಕೊಡಲಾಗುತ್ತಿತ್ತು.
ನಾನು ಅನೇಕ ಬಾರಿ ಶಂಕರರಾಯರನ್ನು ನೋಡಿದ್ದೆ.
ಅವರೊಬ್ಬ ಪ್ರಭಾವಶಾಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು.
ಅವರು
ಗ್ರಾಮಸ್ಥರನ್ನೆಲ್ಲಾ ತುಂಬಾ ಗೌರವ ಪೂರ್ಣವಾಗಿ ಮಾತನಾಡಿಸುತ್ತಾ ತಮ್ಮಿಂದ ಆಗಬೇಕಾದ ಕೆಲಸಗಳೇನಾದರೂ ಇದ್ದರೆ ಕೂಡಲೇ ಮಾಡಿ ಕೊಡುತ್ತಿದ್ದರು.
ಅವರು
ಶಿವಮೊಗ್ಗೆಯಲ್ಲಿದ್ದ ಮಲೆನಾಡು ಅಡಿಕೆ ಬೆಳೆಗಾರರ ಸೊಸೈಟಿಯ (MAMCOS) ಡೈರೆಕ್ಟರ್ ಕೂಡ ಆಗಿ ನಮ್ಮೂರಿನ
ಅಡಿಕೆ ಬೆಳೆಗಾರರಿಗೆ ಬೇಕಾದ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿದ್ದರು.
ಅಂದಿನ ನಮ್ಮ ಮಲೆನಾಡಿನಲ್ಲಿ ಕೇವಲ
ಎರಡು ಫಸ್ಟ್ ಗ್ರೇಡ್ ಕಾಲೇಜುಗಳಿದ್ದವು. ಚಿಕ್ಕಮಗಳೂರಿನಲ್ಲಿ ಒಂದು ಕಾಲೇಜಿದ್ದರೂ ಅದು ಪ್ರಸಿದ್ಧಿ
ಪಡೆದಿರಲಿಲ್ಲ. ಅಲ್ಲದೇ ಅಲ್ಲಿ ವಸತಿ ಸೌಕರ್ಯಗಳೂ ಅಷ್ಟಿರಲಿಲ್ಲ. ಆದರೆ ಶಿವಮೊಗ್ಗೆಯ ಸಹ್ಯಾದ್ರಿ
ಕಾಲೇಜು ತುಂಬಾ ಪ್ರಸಿದ್ಧಿ ಪಡೆದಿತ್ತು. ಆದ್ದರಿಂದ ಮಲೆನಾಡಿನ ವಿದ್ಯಾರ್ಥಿಗಳು ಆ ಕಾಲೇಜಿಗೇ ಮುಗಿ
ಬೀಳುತ್ತಿದ್ದರು. ಅಲ್ಲದೇ ಮಲೆನಾಡಿನ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಮಾರಲು ಶಿವಮೊಗ್ಗೆಗೇ
ಹೋಗಬೇಕಿತ್ತು. ಶಿವಮೊಗ್ಗ ಸಿಟಿಯಲ್ಲಿ ಎಲ್ಲ ಬಗೆಯ ಸೌಲಭ್ಯಗಳೂ ಲಭ್ಯವಿದ್ದವು. ಅದನ್ನು “ಗೇಟ್ ವೇ
ಅಫ್ ಮಲ್ನಾಡ್” ಎಂದು ಕರೆಯಲಾಗುತ್ತಿತ್ತು.
ಮಲೆನಾಡಿನಲ್ಲೊಂದು
ಹೊಸ ಕಾಲೇಜು
೧೯೬೦ನೇ ಇಸವಿಯ ವೇಳೆಗೆ ಮಲೆನಾಡಿನಲ್ಲಿ
ಇನ್ನೊಂದು ಕಾಲೇಜ್ ಸ್ಥಾಪಿಸುವ ಪ್ರಯತ್ನಗಳು ಆರಂಭವಾದವು. ಆದರೆ ಮೊದಮೊದಲು ಈ ಕಾರ್ಯದಲ್ಲಿ ಯಾವುದೇ
ಸಫಲತೆ ಕಾಣಲಿಲ್ಲ. ಅದಕ್ಕೆ ಮುಖ್ಯ ಕಾರಣ ಹೊಸ ಕಾಲೇಜನ್ನು ಎಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ಒಮ್ಮತವಿರಲಿಲ್ಲ.
ಮುಖ್ಯವಾಗಿ
ಶೃಂಗೇರಿ, ಕೊಪ್ಪ ಮತ್ತು ತೀರ್ಥಹಳ್ಳಿ ಪಟ್ಟಣಗಳ ಮಧ್ಯೆ ಈ ಬಗ್ಗೆ ತೀವ್ರ ಪೈಪೋಟಿ ಇತ್ತು.
ಈ
ಪಟ್ಟಣಗಳ ಬಗ್ಗೆ ಯಾವುದೇ ಒಮ್ಮತ ಮೂಡದಿದ್ದರಿಂದ ಮೂರು ಪಟ್ಟಣಗಳ ಮುಖ್ಯಸ್ಥರೂ ಬೇರೆ ಬೇರೆಯಾಗಿ ತಮ್ಮ
ಪಟ್ಟಣದಲ್ಲೇ ಹೊಸ ಕಾಲೇಜು ಸ್ಥಾಪನೆ ಮಾಡುವ ಪ್ರಯತ್ನ ಮುಂದುವರಿಸಿದರು.
ಶೃಂಗೇರಿಯ ಜನಗಳಿಗೆ ತಮ್ಮ ಪಟ್ಟಣದಲ್ಲೇ
ಕಾಲೇಜು ಸ್ಥಾಪಿಸಬೇಕೆಂಬ ಉದ್ದೇಶಕ್ಕೆ ಹಲವು ಮುಖ್ಯ ಕಾರಣಗಳಿದ್ದವು. ಪುರಾತನ ಕಾಲದಿಂದ ಶೃಂಗೇರಿಯು
ಒಂದು ಯಾತ್ರಾಸ್ಥಳ ಎಂದು ಭಾರತದಲ್ಲೇ ಪ್ರಸಿದ್ಧವಾಗಿತ್ತು. ಕೇರಳದ ಕಾಲಡಿಯಲ್ಲಿ ಜನಿಸಿದ್ದ ಪರಮ ಪೂಜ್ಯ
ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯೂ ಒಂದಾಗಿತ್ತು . ಮೈಸೂರಿನ
ಮಹಾರಾಜರು ಶೃಂಗೇರಿಯನ್ನು ಒಂದು ಜಹಗೀರಾಗಿ ಮಠದ ವಶಕ್ಕೆ ನೀಡಿದ್ದರು. ಶೃಂಗೇರಿ ತಾಲೂಕಿನ ಸಕಲ ಕಂದಾಯವೂ
ಶ್ರೀ ಮಠಕ್ಕೆ ಸಂದಾಯವಾಗುತ್ತಿತ್ತು. ಆದರೆ ದೇಶಕ್ಕೆ ಸ್ವಾತಂತ್ರ ಬಂದ ನಂತರ ಈ ಜಹಗೀರನ್ನು ರದ್ದುಪಡಿಸಲಾಯಿತು.
ಹುಲಗಾರು
ಕುಟುಂಬ
ಕಿಗ್ಗದ ಋಷ್ಯಶೃಂಗ ಮುನಿಯ ದೇವಸ್ಥಾನದ
ಹತ್ತಿರ ಇದ್ದ ಹುಲಗಾರು ಕುಟುಂಬ ತುಂಬಾ ಪ್ರಸಿದ್ಧ ಕುಟುಂಬವಾಗಿತ್ತು. ಈ ಕುಟುಂಬದ ಯಜಮಾನರು ವಂಶ
ಪಾರಂಪರ್ಯವಾಗಿ ಕಿಗ್ಗ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಶೃಂಗೇರಿ ಮಠದ ಆಡಳಿತದಲ್ಲಿಯೂ
ಅವರಿಗೆ ವಿಶೇಷ ಪಾತ್ರವಿತ್ತು. ಶೃಂಗೇರಿಯ ಜಗದ್ಗುರುಗಳು ಅವರಿಂದ ಮಠದ ಆಡಳಿತದ ವಿಷಯವಾಗಿ
ಆಗಾಗ ಸಲಹೆ ಪಡೆಯುತ್ತಿದ್ದರಂತೆ. ಆ ಸಮಯದಲ್ಲಿ ಚಂದ್ರಮೌಳಿ ರಾಯರು ಹುಲುಗಾರ್ ಕುಟುಂಬದ ಯಜಮಾನರಾಗಿದ್ದರು.
ಅವರೊಬ್ಬ ದಕ್ಷ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಶೃಂಗೇರಿ ಪಟ್ಟಣದ ಮುನಿಸಿಪಾಲಿಟಿಗೆ ಪ್ರಾರಂಭದಿಂದ
ಸುಮಾರು ೧೨ ವರ್ಷಗಳ ತನಕ ಅವರೇ ಅಧ್ಯಕ್ಷರಾಗಿದ್ದರು.
ಮಣಿಪಾಲ್
ಅಕ್ಯಾಡೆಮಿಯೊಂದಿಗೆ ಒಪ್ಪಂದ
ಶೃಂಗೇರಿಯಲ್ಲಿ ಕಾಲೇಜು ಸ್ಥಾಪನೆ ಮಾಡಲು
ಚಂದ್ರಮೌಳಿ ರಾಯರ ಅಧ್ಯಕ್ಷತೆಯಲ್ಲಿ ಭಾರತಿ ವಿದ್ಯಾ ಸಂಸ್ಥೆ ಎಂಬ ಒಂದು ಸಮಿತಿ ಮಾಡಲಾಗಿತ್ತು. ಆಗ
ಶೃಂಗೇರಿ ತಾಲೂಕ್ ಪ್ರೆಸಿಡೆಂಟ್ ಆಗಿದ್ದ ಕೆ ಎನ್ ವೀರಪ್ಪ ಗೌಡರು ಇನ್ನೊಬ್ಬ ಮುಂದಾಳಾಗಿದ್ದರು. ಇವರಿಬ್ಬರ ನೇತೃತ್ವದ ಸಮಿತಿಯು ಕಾಲೇಜು ಸ್ಥಾಪನೆಯನ್ನು ಒಂದು ಚಾಲೆಂಜ್
ಆಗಿ ಸ್ವೀಕರಿಸಿತ್ತು. ಆಗ ಅವರಿಗೆ ಡಾಕ್ಟರ್ ಟಿ ಎಂ ಎ ಪೈ ನೇತೃತ್ವದ ಮಣಿಪಾಲ್
ಅಕ್ಯಾಡೆಮಿಯಿಂದ ಒಂದು ಪ್ರಸ್ತಾಪ ಬಂತು. ಅದರ ಪ್ರಕಾರ ಭಾರತಿ ವಿದ್ಯಾ ಸಂಸ್ಥೆ
ಎರಡು ಲಕ್ಷ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹಮಾಡಿ ಅಕ್ಯಾಡೆಮಿಗೆ ಕೊಡಬೇಕಿತ್ತು. ಅಕ್ಯಾಡೆಮಿಯು
ಕೂಡ ಒಂದು ಲಕ್ಷ ರೂಪಾಯಿ ಕೊಡುಗೆ ನೀಡಲಿತ್ತು. ಅಲ್ಲದೇ
ಕಾಲೇಜನ್ನು ಸ್ಥಾಪಿಸಿ ಅದನ್ನು ನಡೆಸುವ ಜವಾಬ್ದಾರಿ ಅಕ್ಯಾಡೆಮಿಯದಾಗಿತ್ತು. ಅಕ್ಯಾಡೆಮಿಯು
ಅಲ್ಲಿಯವರೆಗೆ ಮಣಿಪಾಲ, ಉಡುಪಿ, ಕಾರ್ಕಳ, ಮೂಡಬಿದ್ರೆ, ಮುಲ್ಕಿ ಮತ್ತು ಕುಂದಾಪುರದಲ್ಲಿ ಕಾಲೇಜುಗಳನ್ನು
ಸ್ಥಾಪಿಸಿ ಅವನ್ನು ತುಂಬಾ ಯಶಸ್ವಿಯಾಗಿ ನಡೆಸುತ್ತಿತ್ತು.
ಭಾರತಿ ವಿದ್ಯಾ ಸಂಸ್ಥೆ ತುಂಬಾ ಕಷ್ಟಪಟ್ಟು ಎರಡು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ
ಅಕ್ಯಾಡೆಮಿಗೆ ಕೊಟ್ಟುಬಿಟ್ಟಿತು. ೧೯೬೪ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ತುಂಗಾ ನದಿಯ ಸೇತುವೆಯ
ಸಮೀಪದಲ್ಲಿ ಹೊಸ ಕಾಲೇಜಿನ ಅಡಿಪಾಯವನ್ನು ಹಾಕಲಾಯಿತು. ೧೯೬೫ನೇ ಇಸವಿಯ ಜೂನ್ ತಿಂಗಳ ವೇಳೆಗೆ ಒಂದು
ತಾತ್ಕಾಲಿಕ ಕಟ್ಟಡವೂ ತಯಾರಾಯಿತು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ ಯು ಸಿ ತರಗತಿಗಳನ್ನು ಪ್ರಾರಂಭ
ಮಾಡಲು ಮನ್ನಣೆಯೂ ದೊರೆಯಿತು.
ವಿದ್ಯಾರ್ಥಿಗಳಿಗಾಗಿ
ಹುಡುಕಾಟ
ಆಗ ಭಾರತಿ ವಿದ್ಯಾ ಸಂಸ್ಥೆ ಒಂದು ಕಷ್ಟಕರ
ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಆ ವರ್ಷ ಶೃಂಗೇರಿ ಹೈಸ್ಕೂಲಿನಿಂದ ಸುಮಾರು ೪೦ ಮಂದಿ ವಿದ್ಯಾರ್ಥಿಗಳು
ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದರು. ಅದರಲ್ಲಿ ಕೆಲವರು (ನನ್ನ ಅಣ್ಣನೂ ಸೇರಿ) ಬೇರೆ ಬೇರೆ ಊರುಗಳಿಗೆ
ಪಿ ಯು ಸಿ ಓದಲು ಹೋಗಿ ಬಿಟ್ಟಿದ್ದರು. ಸ್ವಲ್ಪ ಮಂದಿಗೆ ಅವರ ಜಮೀನನ್ನು ನೋಡಬೇಕಾಗಿದ್ದರೆ,
ಇನ್ನು ಕೆಲವರಿಗೆ ಮುಂದೆ ಓದುವುದರಲ್ಲಿ ಆಸಕ್ತಿಯೇ ಇರಲಿಲ್ಲ. ಇನ್ನು ಸ್ವಲ್ಪ ಮಂದಿಗೆ ಓದಲು ಆಸಕ್ತಿಯಿದ್ದರೂ
ಅವರ ತಂದೆ ತಾಯಿಯರಿಗೆ ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದು
"ಬೇಕಾದಷ್ಟು" ಆಯಿತೆಂಬ ತೃಪ್ತಿ ಬಂದು ಬಿಟ್ಟಿತ್ತು.
ಅಕ್ಯಾಡೆಮಿಯೊಂದಿಗೆ ಮಾಡಿಕೊಂಡ ಒಪ್ಪಂದದ
ಪ್ರಕಾರ ಕಾಲೇಜಿಗೆ ಸಾಕಷ್ಟು ವಿದ್ಯಾರ್ಥಿಗಳು ಸೇರುವಂತೆ ಮಾಡುವುದು ಭಾರತಿ ವಿದ್ಯಾ ಸಂಸ್ಥೆಯ ಜವಾಬ್ದಾರಿಯಾಗಿತ್ತು.
ಆ
ಜವಾಬ್ದಾರಿ ಅದರ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಸಂಸ್ಥೆಯು ಪ್ರತಿ ಸದಸ್ಯನಿಗೂ ಇಂತಿಷ್ಟು
ವಿದ್ಯಾರ್ಥಿಗಳನ್ನು ಒಟ್ಟು ಮಾಡಲೇ ಬೇಕೆಂಬ ಕೋಟಾ ನಿಗದಿ ಮಾಡಿಬಿಟ್ಟಿತು. ನಮ್ಮ ಹೆಬ್ಬಾರ ಸಮಾಜದಿಂದ
ತಲವಾನೆ ಮಂಜಪ್ಪಯ್ಯನವರು ಆಡಳಿತ ಸಂಸ್ಥೆಯ ಸದಸ್ಯರಾಗಿದ್ದರು. ಅವರ ತಮ್ಮ ಶ್ರೀನಿವಾಸ್ ಅವರು ನನಗೆ
ಶಿವಮೊಗ್ಗೆಯಲ್ಲಿ ಹಾಸ್ಟೆಲಿನಲ್ಲಿ ಫ್ರೀ ಸೀಟ್ ದೊರೆಯಲು ಮಾಡಿದ ಸಹಾಯದ ಬಗ್ಗೆ ನಾನು ಹಿಂದೆಯೇ ಬರೆದಿದ್ದೇನೆ.
ನಮ್ಮೂರ ಶಾನುಭೋಗ ಶಂಕರರಾಯರೂ ಕೂಡ ಸಮಿತಿಯ ಒಬ್ಬ ಸದಸ್ಯರಾಗಿದ್ದರು.
ಅಲ್ಲದೇ ಚಂದ್ರಮೌಳಿ ರಾಯರ ಹತ್ತಿರದ ಸಂಬಂಧಿಯೂ ಆಗಿದ್ದರು. ಹುಲುಗಾರು ಕುಟುಂಬದವರು ನಮ್ಮೂರಿನಿಂದ ಎರಡು ಮೈಲಿ ದೂರದಲ್ಲಿದ್ದ ಉತ್ತಮೇಶ್ವರದಲ್ಲಿ ಒಂದು ರೈಸ್
ಮಿಲ್ ನಡೆಸುತ್ತಿದ್ದರು. ಶಂಕರರಾಯರೇ ಆ ಮಿಲ್ಲಿನ ನಿರ್ವಹಣೆ ಮಾಡುತ್ತಿದ್ದರು.
ನಾವು ಚಿಕ್ಕವರಾಗಿದ್ದಾಗ ಈ ಎರಡು ಕುಟುಂಬಗಳಿಗೆ
ಸಂಬಂಧಿಸಿದ ಒಂದು ದುರ್ಘಟನೆಯನ್ನು ಕೇಳಿದ್ದೆವು. ಚಂದ್ರಮೌಳಿ ರಾಯರ ಹಿರಿಯ ಮಗ ರಾಜ ಒಬ್ಬ ಆಕರ್ಷಕ ವ್ಯಕ್ತಿತ್ವದ ತರುಣನಾಗಿದ್ದ.
ಅವನೊಮ್ಮೆ ತನ್ನ ಸ್ನೇಹಿತರೊಡನೆ ವಿಶ್ವನಾಥಪುರಕ್ಕೆ ಬಂದಿದ್ದ. ಆಗ ಅವನು ಸ್ನೇಹಿತರೊಡನೆ ಪ್ರವಾಹದಲ್ಲಿದ್ದ
ತುಂಗಾ ನದಿಯಲ್ಲಿ ದೋಣಿಯಲ್ಲಿ ವಿಹಾರ ಮಾಡುವುದಕ್ಕೆ ಹೋದ. ದುರದೃಷ್ಟವಶಾತ್ ಪ್ರವಾಹದ ಹೊಡೆತಕ್ಕೆ
ದೋಣಿ ಮುಳುಗತೊಡಗಿ ಎಲ್ಲರೂ ನದಿಯೊಳಗೆ ಹಾರಿಬಿಟ್ಟರು. ರಾಜನೇನೋ ಒಳ್ಳೆಯ ಈಜುಗಾರನೇ ಆಗಿದ್ದ. ಆದರೆ
ಅವನ ಸ್ನೇಹಿತರಲ್ಲಿ ಕೆಲವರಿಗೆ ಈಜು ಬರುತ್ತಿರಲಿಲ್ಲ. ರಾಜ ಕೌಶಲ್ಯದಿಂದ ಇಬ್ಬರು ಸ್ನೇಹಿತರನ್ನು
ದಡ ಸೇರಿಸಿದ. ಆದರೆ ಉಳಿದೊಬ್ಬನನ್ನು ಉಳಿಸಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ. ಚಂದ್ರಮೌಳಿ ರಾಯರ
ಮತ್ತು ಶಂಕರರಾಯರ ಕುಟುಂಬಗಳಿಗೆ ಇದೊಂದು ಎಂದೂ ಮರೆಯಲಾಗದ ದುರ್ಘಟನೆಯಾಗಿ ಹೋಯಿತು.
ಶಂಕರರಾಯರಿಂದ
ಸಂದೇಶ
ಇದ್ದಕ್ಕಿದ್ದಂತೆ ಒಂದು ದಿನ ನಮ್ಮ
ತಂದೆಯವರಿಗೆ ಶಂಕರರಾಯರಿಂದ ನನ್ನನ್ನು ಅವರ ಬಳಿ ಕಳಿಸುವಂತೆ
ಒಂದು ಸಂದೇಶ ಬಂತು. ನನಗೆ ಆಗ ಶೃಂಗೇರಿಯಲ್ಲಿ ಸ್ಥಾಪನೆಯಾಗುತ್ತಿರುವ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ
ಇದೆ ಎಂಬ ವಿಷಯ ತಿಳಿದಿರಲಿಲ್ಲ. ನಾನು ಅಲ್ಲಿಯವರೆಗೆ ವಿಶ್ವನಾಥಪುರಕ್ಕೆ ಎಂದೂ ಹೋಗಿರಲಿಲ್ಲ.
ಹಾಗೂ ಶಂಕರರಾಯರ ಕುಟುಂಬದ ಬಗ್ಗೆ ಏನೂ ಅರಿವಿರಲಿಲ್ಲ. ಆದ್ದರಿಂದ ನನಗೆ ಆ ಬಗ್ಗೆ ತುಂಬಾ ಕುತೂಹಲವಿತ್ತು.
ನಾನು ಈ ಮೊದಲೇ ಶಂಕರರಾಯರ ಧೀಮಂತ ಮತ್ತು
ಪ್ರಭಾವಶಾಲಿ ವ್ಯಕ್ತಿತ್ವದ ಬಗ್ಗೆ ಬರೆದಿದ್ದೇನೆ. ಅದರ ಅರಿವಿದ್ದ ನನಗೆ ಅವರೊಡನೆ ಹೇಗೆ ವರ್ತಿಸಬೇಕೆಂಬ
ಬಗ್ಗೆ ಮನಸ್ಸಿನಲ್ಲಿ ಸ್ವಲ್ಪ ಗೊಂದಲವಿತ್ತು. ಆ ದಿನ ಬೆಳಿಗ್ಗೆ ನಾನು ತುಂಗಾ ನದಿಯ
ಸರಹದ್ದಿನಲ್ಲಿ ನಡೆಯುತ್ತಾ ದಟ್ಟವಾದ ಕಾಡನ್ನು ದಾಟಿ ವಿಶಾಲವಾದ ಬತ್ತದ ಗದ್ದೆಯೊಳಗೆ ಪ್ರವೇಶ ಮಾಡಿದೆ.
ಅದರ ದೂರದ ಅಂಚಿನಲ್ಲಿ ನನಗೆ ವಿಶ್ವನಾಥಪುರ ಅಗ್ರಹಾರ ಕಣ್ಣಿಗೆ ಬಿತ್ತು. ಅಗ್ರಹಾರದ ಒಳಗೆ ಬಲಭಾಗದಲ್ಲಿ ಶಂಕರರಾಯರು ವಾಸ ಮಾಡುತ್ತಿದ್ದರು.
ನಾನು ಹೋದಾಗ ಶಂಕರರಾಯರು ದೇವರ ಕೋಣೆಯಲ್ಲಿ ಪೂಜೆ
ಮಾಡುತ್ತಿದ್ದರು. ಅವರು ಗಟ್ಟಿಯಾಗಿ ಹೇಳುತ್ತಿದ್ದ ಮಂತ್ರ ಪಠಣ ನನ್ನ ಕಿವಿಗೆ ಬೀಳುತ್ತಿತ್ತು. ಅವರ
ಪತ್ನಿ ನನಗೆ ಕುಳಿತುಕೊಳ್ಳಲು ಹೇಳಿ ಒಂದು ಲೋಟ ಕಾಫಿ ಕುಡಿಯಲು ಕೊಟ್ಟರು. ಅಗ್ರಹಾರದ
ಮಧ್ಯೆ ಒಂದು ದೇವಸ್ಥಾನವಿತ್ತು. ನನಗೆ ನಾನು ಬೇರಾವುದೋ ಪ್ರಪಂಚದಲ್ಲಿರುವಂತೆ ಅನಿಸ ತೊಡಗಿತು.
ಸುಮಾರು ಅರ್ಧ ಗಂಟೆಯ ನಂತರ ಶಂಕರರಾಯರು
ದೇವರ ಪೂಜೆ ಮುಗಿಸಿ ಹೊರಬಂದು ತಮ್ಮ ಕಂಚಿನ ಕಂಠದಲ್ಲಿ ನನ್ನೊಡನೆ ಮಾತನಾಡ ತೊಡಗಿದರು. ಅವರ ಮೊದಲ ಪ್ರಶ್ನೆ ಅಷ್ಟೊಂದು ಹೆಚ್ಚಿನ ಮೆರಿಟ್
ವಿದ್ಯಾರ್ಥಿಯಾದ ನಾನು ಕಾಲೇಜಿಗೆ ಹೋಗದೆ ಮನೆಯಲ್ಲಿ ಕುಳಿತಿರಲು ಹೇಗೆ ಸಾಧ್ಯ ಎಂದಾಗಿತ್ತು.
ನಾನು
ಅದಕ್ಕೆ ಏನೂ ಉತ್ತರ ಕೊಡಲಿಲ್ಲ. ಆಗ ಅವರು ಶೃಂಗೇರಿಯಲ್ಲಿ ಸ್ಥಾಪಿತವಾಗುತ್ತಿರುವ ಕಾಲೇಜಿಗೆ ನನ್ನಂತಹ
ಮೆರಿಟ್ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ಹೇಳಿದರು. ಆಗ ನಾನು ನಮ್ಮ ಕುಟುಂಬದ ಆರ್ಥಿಕ ಸಮಸ್ಯೆಗಳ
ಬಗ್ಗೆ ಹೇಳಲೇ ಬೇಕಾಯಿತು. ಆಗ ಅವರು ನನಗೆ ಮುಂದಿನ ಭಾನುವಾರ ಸಂಜೆ ಅವರ ಮನೆಗೆ ನನ್ನ
ಮಾರ್ಕ್ಸ್ ಕಾರ್ಡ್ ಮತ್ತು ಟಿಸಿ ತೆಗೆದುಕೊಂಡು ಬರುವಂತೆ ಹೇಳಿದರು. ನಾನು ಆ ರಾತ್ರಿ ಅವರ ಮನೆಯಲ್ಲೇ
ಇದ್ದು ಮಾರನೇ ದಿನ ಬೆಳಿಗ್ಗೆ ಅವರೊಡನೆ ಶೃಂಗೇರಿಗೆ ಹೋಗಬೇಕಿತ್ತು.
ನಾನು ಅವರು ಹೇಳಿದಂತೆ ಮುಂದಿನ ಭಾನುವಾರ
ಸಂಜೆ ಅವರ ಮನೆಗೆ ಹೋದೆ. ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡು ರಾತ್ರಿ ಊಟಕ್ಕೆ ಕರೆದರು. ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದ ಶಂಕರರಾಯರು ರಾತ್ರಿ ಊಟಕ್ಕೆ ಮೊದಲು ದೇವರ ಪೂಜೆ ಮಾಡಿದರು. ಊಟದ ನಂತರ
ರಾತ್ರಿ ಎಷ್ಟೋ ಹೊತ್ತು ರೇಡಿಯೋದಲ್ಲಿ ಶಾಸ್ತ್ರೀಯ
ಸಂಗೀತ ಕೇಳುತ್ತಾ ಇದ್ದರು.
ಮಾರನೇ ದಿನ ನಾವು ತುಂಗಾ ನದಿ ದಾಟಿ
ಶೃಂಗೇರಿ ತಲುಪಿದೆವು. ಅಲ್ಲಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹುಲುಗಾರ್ ಕುಟುಂಬದ ಬಂಗಲೆಯೊಳಗೆ ಹೋದೆವು.
ಆಗ ಅಲ್ಲಿ ಶೃಂಗೇರಿ ಕಾಲೇಜಿನ ತಾತ್ಕಾಲಿಕ ಆಫೀಸ್ ಕಾರ್ಯಾಚರಣೆ ಮಾಡುತ್ತಿತ್ತು. ಚಂದ್ರಮೌಳಿರಾಯರ
ಮನೆಯವರು ಯಾರೂ ಆಗ ಅಲ್ಲಿರಲಿಲ್ಲ. ಶಂಕರರಾಯರು ನನನ್ನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾಕ್ಟರ್
ಕೆ ಬಿ ರಾಮಕೃಷ್ಣರಾಯರಿಗೆ ಪರಿಚಯ ಮಾಡಿಸಿದರು.
ಸ್ವಲ್ಪ ಸಮಯದ ನಂತರ ನಾವು ಆಫೀಸಿನಿಂದ
ಹೊರಬಂದೆವು. ಶಂಕರರಾಯರು ನನ್ನ ಕೈಯಲ್ಲಿ ರಶೀದಿಗಳ ಒಂದು ಕಂತೆಯನ್ನಿಟ್ಟು ನಾನಿನ್ನು ಊರಿಗೆ ಹೋಗಿ
ತಿಂಗಳ ಕೊನೆಯಲ್ಲಿ ಪುನಃ ಅವರ ಮನೆಗೆ ಬರುವಂತೆ ಹೇಳಿದರು. ಉದ್ದೇಶ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ
ಹಾಜರಿರಲಿಕ್ಕೆ.
ನಾನೊಬ್ಬ
ವಿ ಐ ಪಿ ಸ್ಟೂಡೆಂಟ್ ಆಗಿ ಬಿಟ್ಟೆ!
ನಾನು ಊರಿಗೆ ಹೋಗಲು ಅಲ್ಲಿಂದ ಹೊರಟು
ಬಿಟ್ಟೆ. ನಾನಿನ್ನೂ ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಂದು ಫಿಯಟ್ ಕಾರು ನನ್ನ ಪಕ್ಕದಲ್ಲಿ ಬಂದು ನಿಂತು
ಬಿಟ್ಟಿತು. ಅದರೊಳಗಿಂದ ಹೊರಬಂದ ಆಕರ್ಷಕ ವ್ಯಕ್ತಿತ್ವದ ತರುಣರೊಬ್ಬರು ನನಗೆ ನಿಲ್ಲುವಂತೆ
ಹೇಳಿದರು. ಅವರು ಚಂದ್ರಮೌಳಿರಾಯರ ಹಿರಿಯ ಮಗ ಶ್ರೀಕಂಠರಾಯರಂತೆ. ಒಮ್ಮೆಗೇ ಅವರು ನನ್ನೊಡನೆ ಶೃಂಗೇರಿ
ಕಾಲೇಜಿಗೆ ನನ್ನಂತಹ ಮೆರಿಟ್ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ಹೇಳಿದರು. ಹಾಗೆಯೇ ನಾನು ತಿಂಗಳ
ಕೊನೆಯಲ್ಲಿ ನಡೆಯುವ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲೇ ಬೇಕೆಂದೂ ಹೇಳಿ ಬಿಟ್ಟರು. ಒಹ್! ಇದ್ದಕ್ಕಿದ್ದಂತೆ ನಾನೊಬ್ಬ ವಿ ಐ ಪಿ ಸ್ಟೂಡೆಂಟ್
ಆಗಿ ಬಿಟ್ಟಿದ್ದೆ! ನಾನು ಬೇರೊಂದು ಲೋಕಕ್ಕೆ ಪ್ರವೇಶ ಮಾಡಿದಂತೆ ನನಗೆ ಅನಿಸತೊಡಗಿತು.
ಬೇಡಿಕೆ
ಇಲ್ಲದೇ ಕೊಡುಗೆ! ಇದು ನಿಜವೇ?
ಶ್ರೀಕಂಠರಾಯರು ತೆರಳಿದ ಮೇಲೆ ನಾನು
ನನ್ನ ಜೇಬಿನಲ್ಲಿದ್ದ ರಶೀದಿಗಳನ್ನು ತೆಗೆದು ಅದರಲ್ಲಿ ಬರೆದ ಹಣದ ಮೊತ್ತ ಎಷ್ಟೆಂದು ನೋಡಿದೆ.
ಒಮ್ಮೆಗೇ
ನನ್ನ ತಲೆ ತಿರುಗಿದಂತಾಯಿತು. ಅವುಗಳ ಮೊತ್ತ ೩೫೦ ರೂಪಾಯಿ ಆಗಿತ್ತು! ಅದು ಕಾಲೇಜಿನ ಒಂದು ವರ್ಷದ
ಪೂರ್ತಿ ಫೀ ಆಗಿತ್ತು! ಯಾವುದೇ ವ್ಯಕ್ತಿಯೊಬ್ಬ ತನಗೆ ಏನೇನೂ ಸಂಬಂಧವಿಲ್ಲದ ಹುಡುಗನೊಬ್ಬನ
ವಿದ್ಯಾಭ್ಯಾಸಕ್ಕಾಗಿ ಇಷ್ಟೊಂದು ಹಣವನ್ನು ಒಮ್ಮೆಗೇ
ಕೊಡಲು ಸಾಧ್ಯವೆಂದು ನನಗೆ ನಂಬಲಾಗಲಿಲ್ಲ. ತುಂಬಾ ದೊಡ್ಡ ಶ್ರೀಮಂತರೂ ಕೂಡ ಬೇರೊಬ್ಬರಿಗಾಗಿ
ಕೇವಲ ಐದು ರೂಪಾಯಿಗಳನ್ನು ಖರ್ಚು ಮಾಡಲು ತಯಾರಿರಲಿಲ್ಲವೆಂದು ನನಗೆ ಗೊತ್ತಿತ್ತು. ಆದರೆ ಇಲ್ಲಿ ಒಬ್ಬ
ವ್ಯಕ್ತಿ ಯಾವುದೇ ಪ್ರಚಾರವಿಲ್ಲದೇ ಇಷ್ಟು ದೊಡ್ಡ ಮೊತ್ತವನ್ನು ತನಗೆ ಯಾವ ರೀತಿಯಲ್ಲೂ ಸಂಭಂದವಿಲ್ಲದ ಬೇರೊಬ್ಬ ಹುಡುಗನಿಗಾಗಿ
ಖರ್ಚು ಮಾಡಿಬಿಟ್ಟಿದ್ದ! ವಿಚಿತ್ರವೆಂದರೆ ಆ ಹುಡುಗನಿಂದ ಈ ಸಹಾಯಕ್ಕಾಗಿ ಯಾವುದೇ ಬೇಡಿಕೆ ಬಂದೇ ಇರಲಿಲ್ಲ!
------- ಮುಂದುವರಿಯುವುದು-----
No comments:
Post a Comment