ನಮ್ಮ ಹಾಸ್ಟೆಲಿನಲ್ಲಿ ಒಬ್ಬ ಕಳ್ಳ!
ನಮ್ಮ ಹಾಸ್ಟೆಲಿನಲ್ಲಿ ಇದ್ದಕ್ಕಿದ್ದಂತೇ ವಿದ್ಯಾರ್ಥಿಗಳ ವಿವಿಧ ವಸ್ತುಗಳು ಕಾಣೆಯಾಗ ತೊಡಗಿದವು. ಮೊದಲು ಮೊದಲಿಗೆ ವಿದ್ಯಾರ್ಥಿಗಳ ಹಣ ಮಂಗಮಾಯವಾಗುತ್ತಿದ್ದು ಆಮೇಲೆ ವಾಚುಗಳೂ ಸೇರಿ ಬೇರೆ ಬೇರೆ ವಸ್ತುಗಳೂ ನಾಪತ್ತೆಯಾಗತೊಡಗಿದವು.
ಕೊನೆಗೆ ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ನಾವು ನಿತ್ಯ ಕುಡಿಯಲು ಬಳಸುತ್ತಿದ್ದ ಸ್ಟೀಲ್ ಲೋಟಗಳೂ ಮಾಯವಾಗತೊಡಗಿದವು. ನಾನು ಸ್ಪೋರ್ಟ್ಸ್ ಕಾಂಪಿಟೀಶನ್ ನಲ್ಲಿ ಒಂದು ಸ್ಟೀಲ್ ಲೋಟವನ್ನು ಗೆದ್ದು ಅದನ್ನು ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದೆ. ಅದರ ಬೆಲೆ ಆರು ರೂಪಾಯಿ. ಅದೂ ಕೂಡ ಅಗೋಚರನಾದ ಕಳ್ಳನ ಕೈಸೇರಿ ಬಿಟ್ಟಿತು. ನಮ್ಮ ಹಾಸ್ಟೆಲಿನ ಸೆಕ್ಯೂರಿಟಿ ವ್ಯವಸ್ಥೆ ತುಂಬಾ ಚೆನ್ನಾಗಿ ಇದ್ದುದರಿಂದ ಯಾವುದೇ ಹೊರಗಿನ ವ್ಯಕ್ತಿ ಬಂದು ಕಳ್ಳತನ ಮಾಡುವ ಅವಕಾಶವಿರಲಿಲ್ಲ. ಆದ್ದರಿಂದ
ಹಾಸ್ಟೆಲಿನ ಒಳಗಿನ ವಿದ್ಯಾರ್ಥಿಯೇ ತನ್ನ ಕೈಚಳಕವನ್ನು ತೋರಿಸುತ್ತಿದ್ದನೆಂದು
ಹಾಸ್ಟೆಲಿನ ಆಡಳಿತ ವರ್ಗಕ್ಕೆ ಅರಿವಾಗಿ ಒಂದು ಆಂತರಿಕ ಪತ್ತೇದಾರಿ ಟೀಮ್ ತಯಾರು ಮಾಡಿ ಅದಕ್ಕೆ ಕಳ್ಳನನ್ನು ಪತ್ತೆ ಮಾಡುವ ಜವಾಬ್ದಾರಿಯನ್ನು ಕೊಡಲಾಯಿತು.
ಜೇಮ್ಸ್ ಬಾಂಡ್ ಟೀಮ್ ಕಳ್ಳನನ್ನು ಪತ್ತೆ ಮಾಡಿದ್ದು!
ಈ ಜೇಮ್ಸ್ ಬಾಂಡ್ ಟೀಮು ಕೆಲವು ಅನುಮಾನಾಸ್ಪದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟು ನೋಡತೊಡಗಿತು. ಅದು ಎಷ್ಟು ಚೆನ್ನಾಗಿ ಕೆಲಸ ಮಾಡಿತೆಂದರೆ ಒಂದು ದಿನ ಬೆಳಿಗ್ಗೆ ನಾವು ಏಳುವಾಗ ಆಂತರಿಕ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅವನನ್ನು ಅವನ ಊರಿಗೆ ರವಾನೆ ಮಾಡಲಾಗಿದೆ ಎಂಬ ಅದ್ಭುತ ಸಮಾಚಾರ ನಮಗೆ ಗೊತ್ತಾಯಿತು. ಆ ಕಳ್ಳನ ಹೆಸರು ಶಿವಮೂರ್ತಿ ಎಂದಿದ್ದು ಅವನು ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ತರಗತಿಯಲ್ಲಿ ಓದುತ್ತಿದ್ದ.
ಶಿವಮೂರ್ತಿ ಚಿತ್ರದುರ್ಗದ ಒಂದು ಬಡ ಕುಟುಂಬಕ್ಕೆ ಸೇರಿದವನಾಗಿದ್ದ. ಅವನಿಗೆ ಸಿನಿಮಾ ನೋಡುವ ಹುಚ್ಚು ಅತಿ ಹೆಚ್ಚಾಗಿತ್ತಂತೆ. ಅದೆಷ್ಟೆಂದರೆ ಅವನ ಹಾಜರಿ ಸಹ್ಯಾದ್ರಿ ಕಾಲೇಜಿಗಿಂತ ಶಿವಮೊಗ್ಗೆಯ ಥಿಯೇಟರ್ ಗಳಲ್ಲಿ ಹೆಚ್ಚಿತ್ತಂತೆ! ಅವನಿಗೆ ಪ್ರತಿ ದಿನ ಒಂದು ಮಾರ್ನಿಂಗ್ ಶೋ, ಮ್ಯಾಟಿನಿ ಅಥವಾ ಫಸ್ಟ್ ಶೋ ನೋಡಲೇ ಬೇಕಿತ್ತಂತೆ! ಆ ಹುಚ್ಚನ್ನು ಅವನು ಹೇಗೆ ನಿಭಾಯಿಸುತ್ತಿದ್ದನೆಂದು ಕೇವಲ ಅವನಿಗೆ ಮಾತ್ರ ಗೊತ್ತಿತ್ತಂತೆ. ಆದರೆ ಅವನಲ್ಲಿ ಒಂದು ಶಿಸ್ತು ಇತ್ತಂತೆ. ಅವನು ಒಂದು ನೋಟ್ ಬುಕ್ಕಿನಲ್ಲಿ ತಾನು ನೋಡಿದ ಸಿನಿಮಾದ ಮತ್ತು ಥಿಯೇಟರಿನ ಹೆಸರು ಮತ್ತು ತಾರೀಖನ್ನು ನೀಟಾಗಿ ಬರೆದಿಡುತ್ತಿದ್ದನಂತೆ! ಆ ಶಿಸ್ತೇ ಅವನ ಮುಳುವಿಗೆ ಕಾರಣವಾಯಿತಂತೆ.
ನಡೆದುದಿಷ್ಟೇ. ಜೇಮ್ಸ್ ಬಾಂಡ್
ಟೀಮಿನ ಮುಖ್ಯಸ್ಥನೇ ಶಿವಮೂರ್ತಿಯ ಒಬ್ಬ ರೂಮ್ ಮೇಟ್
ಆಗಿದ್ದ. ಶಿವಮೂರ್ತಿಯ
ನೋಟ್ ಬುಕ್ ಅವನ ಕಣ್ಣಿಗೆ ಬಿತ್ತು.
ಸಹಜವಾಗಿ ಅವನಿಗೆ ಶಿವಮೂರ್ತಿಯ
ಕೈಯಲ್ಲಿ ಅಷ್ಟೊಂದು ಸಿನಿಮಾ ನೋಡುವಷ್ಟು ಹಣ
ಎಲ್ಲಿಂದ ಬರುತ್ತಿರುವುದೆಂಬ ಸಂಶಯ ಬಂತು. ಆದ್ದರಿಂದ ಅವನು ಶಿವಮೂರ್ತಿಯ ಚಟುವಟಿಕೆಗಳ ಮೇಲೆ ಒಂದು ಕಣ್ಣಿಟ್ಟಿದ್ದನಂತೆ. ಹಾಗಿರುವಾಗ ಒಂದು ದಿನ ಶಿವಮೂರ್ತಿ ತನ್ನ ಇನ್ನೊಬ್ಬ ರೂಮ್ ಮೇಟಿನ ಅಂಗಿಯ ಜೇಬಿನಿಂದ ಹಣವನ್ನು ತೆಗೆಯುತ್ತಿರುವುದು ಅವನ ಕಣ್ಣಿಗೆ ಬಿತ್ತಂತೆ. ಅಲ್ಲಿಗೆ ಮುಗಿಯಿತು ಶಿವಮೂರ್ತಿಯ ಕಥೆ. ತಾನು ನೋಡುತ್ತಿದ್ದ ಸಿನಿಮಾಗಳಿಗೆ ಟಿಕೆಟ್ ಚಾರ್ಜ್ ಎಲ್ಲಿಂದ ದೊರೆಯುತ್ತೆಂದು ಹೇಳಲಾಗದ ಶಿವಮೂರ್ತಿ ತಾನು ಮಾಡುತ್ತಿದ್ದ ಕಳ್ಳತನವನ್ನು ಒಪ್ಪಿಕೊಳ್ಳಲೇ ಬೇಕಾಯಿತಂತೆ. ಹಾಸ್ಟೆಲಿನಿಂದ ಹೊರಹಾಕಲ್ಪಟ್ಟ ಅವನನ್ನು ನಾವು ಪುನಃ ಎಂದೂ ನೋಡಲಿಲ್ಲ. ಆದರೆ ಅವನಿಂದಾಗಿ ಹಣ ಮತ್ತು ಇತರ ವಸ್ತುಗಳನ್ನು ಕಳೆದುಕೊಂಡವರಿಗೆ
(ನನ್ನನ್ನೂ ಸೇರಿ) ಯಾವುದೇ ಪರಿಹಾರ ಸಿಗಲಿಲ್ಲ.
ನನ್ನ ಅಣ್ಣ ಶಿವಮೊಗ್ಗೆ ಸೇರಿದ್ದು
ಇದ್ದಕ್ಕಿದಂತೆ ಒಂದು ದಿನ ನನ್ನ ಅಣ್ಣ ಹಾಸ್ಟೆಲಿಗೆ ಬಂದು ನನ್ನನ್ನು ಭೇಟಿ ಮಾಡಿದ. ಅವನು ತನ್ನ ಸಂಸಾರವನ್ನು ತನ್ನ ಮಾವ ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರ ಸಂಸಾರದೊಡನೆ ಶಿವಮೊಗ್ಗೆಗೆ ಶಿಫ್ಟ್ ಮಾಡಿಬಿಟ್ಟಿದ್ದ. ಲಕ್ಷ್ಮೀನಾರಾಯಣರಾಯರು ತಮ್ಮ ಪೂರ್ವಜರಿಂದ ಬಂದ ಸಂಪೂರ್ಣ ಜಮೀನನ್ನು ಮನೆ ಸಮೇತ ಮಾರಿ ಕೈಗೆ ಬಂದ ಒಂದು ದೊಡ್ಡ ಮೊತ್ತದ ಹಣದೊಡನೆ ಶಿವಮೊಗ್ಗೆ ಸೇರಿದ್ದರಂತೆ. ಅವರು ಮುಂದೇನು ಮಾಡುವರೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ನನ್ನ ಅಣ್ಣನಿಗೆ ಕೊಡುವುದಾಗಿ ಹೇಳಿದ ಸ್ವಲ್ಪ ಜಮೀನಿನ ವಿಷಯ ಸುಳ್ಳಾಗಿ ಬಿಟ್ಟಿತ್ತು. ಅವರೊಡನೆ ಶಿವಮೊಗ್ಗೆ ಸೇರಿದ ಅಣ್ಣನ ಭವಿಷ್ಯ ಏನೆಂಬ ಪ್ರಶ್ನೆಗೆ ಸರಿಯಾದ ಉತ್ತರವಿರಲಿಲ್ಲ. ನಮಗೆಲ್ಲಾ ಹುರುಳಿಹಕ್ಕಲು ಮನೆತನದ ಬಗ್ಗೆ ತುಂಬಾ ಅಭಿಮಾನವಿತ್ತು. ಹಾಗೆಯೇ ಲಕ್ಷ್ಮೀನಾರಾಯಣರಾಯರ ಬಗ್ಗೆ ತುಂಬಾ ಗೌರವ ಇತ್ತು. ಆದ್ದರಿಂದ ಅವರು ಹೀಗೆ ನಮ್ಮೂರನ್ನೇ ತೊರೆದು ಶಿವಮೊಗ್ಗೆ ಸೇರಿದ್ದು ನಮಗೆಲ್ಲ ಜೀರ್ಣಿಸಿಕೊಳ್ಳಬಲ್ಲ ಸಮಾಚಾರವಾಗಿರಲಿಲ್ಲ. ಮುಂದೆ ಈ ಸಂಸಾರದ ವಿಷಯ ಏನಾಯಿತೆಂಬ ಬಗ್ಗೆ ನಾನು ಹುರುಳಿಹಕ್ಕಲಿನ ಗತವೈಭವ ಎಂಬ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ.
ನಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಸ್ಟೆಲಿನಲ್ಲಿ ಸ್ಪೆಷಲ್ ಟ್ಯೂಷನ್
ಆ ವರ್ಷ ನಮ್ಮ ಹಾಸ್ಟೆಲಿನ
ಆಡಳಿತ ವರ್ಗ ನಮಗೆ ಪಬ್ಲಿಕ್ ಪರೀಕ್ಷೆಗೆ ತಯಾರು ಮಾಡಲು ಕೆಲವು ಉತ್ತಮ ಮೇಷ್ಟ್ರುಗಳಿಂದ ಟ್ಯೂಷನ್
ಏರ್ಪಾಟು ಮಾಡಿತು. ಮುಖ್ಯವಾಗಿ ನಮಗೆ ಡಿವಿಎಸ್ ಹೈಸ್ಕೂಲ್ ಮೇಷ್ಟ್ರುಗಳಾದ ಸಿವಿ ಕೇಶವಮೂರ್ತಿಯವರಿಂದ
(CVK) ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಸುಬ್ಜೆಕ್ಟ್ಸ್ ಮತ್ತು ವಿ ದೇವೇಂದ್ರ (VDR) ಅವರಿಂದ ಇಂಗ್ಲಿಷ್
ಪಾಠಗಳನ್ನು ಮಾಡಿಸಲಾಯಿತು. ಈ ಇಬ್ಬರೂ ತುಂಬಾ ಪ್ರಸಿದ್ಧರಾದ ಮೇಷ್ಟ್ರುಗಳಾಗಿದ್ದರು ಮತ್ತು ನಮಗೆ
ಅವರ ಟ್ಯೂಷನ್ ತುಂಬಾ ಉಪಯುಕ್ತವಾಯಿತು. ಹಾಗೆಯೇ ಪಿಯುಸಿ ಮತ್ತು ಡಿಗ್ರಿ ತರಗತಿಗಳಿಗೆ ಸಹ್ಯಾದ್ರಿ
ಕಾಲೇಜಿನ ಕೆಲವು ಲೆಕ್ಚರರ್ ಗಳಿಂದ ಮತ್ತು ನಮ್ಮ ಶಾಲೆಯ ಪ್ರಸಿದ್ಧ ಮೇಷ್ಟ್ರು ಎಸ್ ಸೂರ್ಯನಾರಾಯಣರಾಯರಿಂದ
(SSR) ಟ್ಯೂಷನ್ ಹೇಳಿಸಲಾಯಿತು. ಆಮೇಲೆ ಒಂದು ಕಾರ್ಯಕ್ರಮ ಏರ್ಪಡಿಸಿ ಟ್ಯೂಷನ್ ಹೇಳಿದವರಿಗೆಲ್ಲಾ
ಒಂದೊಂದು ಲಕೋಟೆಯ ಮೂಲಕ ಗೌರವ ಧನ ಕೊಡಲಾಯಿತು. ಆದರೆ
ಎಲ್ಲಾ ಮೇಷ್ಟ್ರುಗಳು ಮತ್ತು ಲೆಕ್ಚರರ್ ಗಳು ಆ ಲಕೋಟೆಗಳನ್ನು ತೆರೆದೂ ಕೂಡ ನೋಡದೆ ಅದರಲ್ಲಿದ್ದ ಹಣವನ್ನು ಹಾಸ್ಟೆಲಿಗೆ ಕೊಡುಗೆಯಾಗಿ ನೀಡಿ ಬಿಟ್ಟರು!
ಹಾಸ್ಟೆಲಿನ
ವಾರ್ಷಿಕೋತ್ಸವ
ನಮ್ಮ ಹಾಸ್ಟೆಲಿನ ಆ ವರ್ಷದ ವಾರ್ಷಿಕೋತ್ಸವ
ತುಂಬಾ ವಿಜೃಂಭಣೆಯಿಂದ ನಡೆಯಿತು. ಕನ್ನಡನಾಡಿನ ಸುಪ್ರಸಿದ್ಧ ಕವಿ ದತ್ತಾತ್ರೇಯ ಬೇಂದ್ರೆಯವರು, ಆ
ವರ್ಷವೇ ಸ್ಥಾಪಿಸಲ್ಪಟ್ಟ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲ್ ಗೋಪಾಲಕೃಷ್ಣ
ಅಡಿಗರು, ಪ್ರೊಫೆಸರ್ ಬಿ ಹೆಚ್ ಶ್ರೀಧರ್ ಮತ್ತು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಲೆಕ್ಚರರ್
ಆಗಿದ್ದ ವರದೇಶಿಕಾಚಾರ್ ಅವರ ಭಾಷಣಗಳನ್ನು ಕೇಳುವ ಅವಕಾಶ ನಮ್ಮದಾಯಿತು.
ನನಗೆ
ಪುನಃ ಸಂಸ್ಕೃತ ಸ್ಕಾಲರ್ಷಿಪ್
ನನಗೆ ಹಿಂದಿನ ವರ್ಷ ನೀಡಲಾಗಿದ್ದ ಸಂಸ್ಕೃತ
ಸ್ಕಾಲರ್ಷಿಪ್ ಆ ವರ್ಷವೂ ಮಂಜೂರಾಯಿತು. ನಾನು ಪುನಃ ನನ್ನ " ಚಿಕ್ಕಪ್ಪ”
ರಮೇಶ ರಾಮಚಂದ್ರ ಕಂಚಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಒಂದು ನೂರು ರೂಪಾಯಿ ದೊರೆತುದಕ್ಕೆ ಸಹಿ
ಮಾಡಿಸಿ ಹಣವನ್ನು
ತೆಗೆದುಕೊಂಡೆ.
------- ಮುಂದುವರಿಯುವುದು-----
No comments:
Post a Comment