ನಮ್ಮ ನೆಚ್ಚಿನ ಪ್ರಧಾನಿ ನೆಹರು ಅವರು ತೀರಿಕೊಂಡ ಸಮಾಚಾರ ನನ್ನ ಮನಸ್ಸಿಗೆ ತುಂಬಾ ಆಘಾತವನ್ನೇ ತಂದು ಬಿಟ್ಟಿತು. ನಮ್ಮ ಬಾಲ್ಯದಿಂದಲೂ ನಾವು ಅವರ ಬಗ್ಗೆ ಎಷ್ಟೋ ಕಥೆಗಳನ್ನು ಓದಿದುದಲ್ಲದೇ ಅವರ ಬಗ್ಗೆ ಅಪಾರ ಮೆಚ್ಚುಗೆ ಮತ್ತು ಗೌರವ ಹೊಂದಿದ್ದೆವು. ಆ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ನೆಹರು ಅವರ ಒಂದು ಫೋಟೋ ಇದ್ದೇ ಇರುತ್ತಿತ್ತು. ಚೀನಾ ದೇಶದಿಂದಾದ ಅನಿರೀಕ್ಷಿತ ಆಕ್ರಮಣದಿಂದ ತುಂಬಾ ಝರ್ಜರಿತರಾಗಿದ್ದ ನೆಹರು ಅವರ ಅರೋಗ್ಯ ತುಂಬಾ ಕೆಟ್ಟು ಹೋಗಿತ್ತೆಂದು ನಮಗೆಲ್ಲಾ ಗೊತ್ತಿತ್ತು. ಆದರೆ ಹೀಗೆ ಅವರ ಸಾವು ಅನಿರೀಕ್ಷಿತವಾಗಿ ಆಗಿ ಬಿಡುವುದೆಂದು ನಾವು ಯಾರೂ ಯೋಚಿಸಿರಲಿಲ್ಲ.
ನಾವು ಹೋಗಬೇಕಾದ ಗುಡ್ಡೇತೋಟ ಜಯಪುರದ ಮುಂದೆ ಕಳಸ ಮತ್ತು ಹೊರನಾಡಿಗೆ ಹೋಗುವ ದಾರಿಯಲ್ಲಿದ್ದ ಒಂದು ಹಳ್ಳಿಯಾಗಿತ್ತು. ಈ ಮಾರ್ಗದ ರಸ್ತೆ ತುಂಬಾ ಅಂಕು ಡೊಂಕಾಗಿ ಹೆಚ್ಚು ಅಗಲ ಇರದಿದ್ದರಿಂದ ಕೇವಲ ಶಂಕರ್ ಮೋಟಾರ್ ಅವರ ಒಂದು ಮಿನಿ ಬಸ್ ಮಾತ್ರಾ ಕೊಪ್ಪದಿಂದ ಕಳಸಕ್ಕೆ ಓಡಾಡುತ್ತಿತ್ತು. ಆ ಬಸ್ಸಿನ ಡ್ರೈವರ್ ತಿಮ್ಮಪ್ಪ ಈ ಮಾರ್ಗದಲ್ಲಿ ಪ್ರಯಾಣ ಮಾಡುವ ಜನಗಳಿಗೆ ತುಂಬಾ ಆತ್ಮೀಯನಾಗಿ ಬಿಟ್ಟಿದ್ದ.
ಗುಡ್ಡೇತೋಟ ಪ್ರಕೃತಿ ಸೌಂದರ್ಯ ತುಂಬಿದ ಮಲೆನಾಡಿನ
ಒಂದು
ಹಳ್ಳಿಯಾಗಿತ್ತು. ನಾವು ಮೊಟ್ಟ ಮೊದಲು ಸುಬ್ಬರಾವ್ ಎಂಬ ಪ್ರಮುಖ ವ್ಯಕ್ತಿಯೊಬ್ಬರ ಮನೆಗೆ ಹೋದೆವು. ಸುಬ್ಬರಾಯರು ಕಾಂಗ್ರೆಸ್ ಪಾರ್ಟಿಯ ಮುಖಂಡರಾಗಿದ್ದು ಕೊಪ್ಪ ತಾಲುಕ್ ಬೋರ್ಡಿನ ವೈಸ್ ಪ್ರೆಸಿಡೆಂಟ್ ಕೂಡ ಆಗಿದ್ದರು. ಅವರು ನಮ್ಮ ಸಮಾಜದ ಪ್ರಪ್ರಥಮ ರಾಜಕೀಯ ನೇತಾರರಾಗಿದ್ದರು. ಸದಾ ಅಚ್ಚ ಬಿಳಿಯ ಖಾದಿ ವಸ್ತ್ರಧಾರಿಯಾಗಿರುತ್ತಿದ್ದ ಸುಬ್ಬರಾಯರು ಅತ್ಯಂತ ಧೀಮಂತ ವ್ಯಕ್ತಿತ್ವ ಹೊಂದಿದ್ದು ಅವರ ಕಂಠ ಧ್ವನಿಯೂ ಅಷ್ಟೇ ಪ್ರಭಾವಶಾಲಿಯಾಗಿತ್ತು. ನಾವು ಆ ರಾತ್ರಿಯ ಊಟವನ್ನು ಅವರ ಮನೆಯಲ್ಲೇ ಮುಗಿಸಿ ಅಲ್ಲಿಯೇ ತಂಗಿದೆವು. ತುಂಬಾ ರಾತ್ರಿಯವರೆಗೆ ರೇಡಿಯೋದಲ್ಲಿ ನೆಹರು ಅವರ ಬಗ್ಗೆ ನಮ್ಮ ರಾಜ್ಯದ ಅನೇಕ ರಾಜಕೀಯ ನೇತಾರರ ಸಂತಾಪ ಸೂಚಕ ಭಾಷಣಗಳು ಬರುತ್ತಲೇ ಇದ್ದವು. ನಾವು ಅವನ್ನು ಕೇಳುತ್ತಲೇ ನಿದ್ದೆ ಮಾಡಿದೆವು.
ಸುಬ್ಬರಾಯರಿಗೆ ನಾವು ಅವರ ಮನೆಗೆ ಹೋದ ಕಾರಣ ಯಾವ ಪೀಠಿಕೆಯಿಲ್ಲದೆಯೇ ಅರಿವಾಗಿತ್ತು. ಬೆಳಗಿನ ತಿಂಡಿಯ ನಂತರ ನಮ್ಮ ತಂದೆಯವರು ಅವರಿಗೆ ನನ್ನ ವಿದ್ಯಾಭ್ಯಾಸಕ್ಕೆ ಬೇಕಾದ ಹಣದ ಅವಶ್ಯಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಸುಬ್ಬರಾಯರ ಮುಖದಲ್ಲಿ ಅದಕ್ಕೆ ಯಾವ ಪ್ರತಿಕ್ರಿಯೆಯೂ ಕಾಣಲಿಲ್ಲ. ಸುಮ್ಮನೇ ಮನೆಯೊಳಗೆ ಹೋಗಿ ಬಂದ ಅವರು ನನ್ನ ಕೈಮೇಲೆ ಒಂದು ರೂಪಾಯಿನ ಆರು ನೋಟುಗಳನ್ನು ಇಟ್ಟು ಬಿಟ್ಟರು. ಅದು ನನ್ನ ವಿದ್ಯಾಭ್ಯಾಸಕ್ಕೆ ನಮ್ಮ ಸಮಾಜದ ಮೊಟ್ಟ ಮೊದಲ ಕೊಡುಗೆಯಾಗಿತ್ತು.
ಸುಬ್ಬರಾಯರಿಂದ ನಾವೇನು ಹೆಚ್ಚು ಹಣದ ಕೊಡುಗೆಯನ್ನು ನಿರೀಕ್ಷಿಸಿರಲಿಲ್ಲ. ನಮ್ಮ ದೃಷ್ಟಿಯಲ್ಲಿ ಅವರು ಕೃಷ್ಣರಾಯರಷ್ಟು ಶ್ರೀಮಂತರಾಗಿರಲಿಲ್ಲ. ಆದರೆ ಕೃಷ್ಣರಾಯರು ದೊಡ್ಡ ಮಟ್ಟದ ಶ್ರೀಮಂತರು ಮಾತ್ರವಲ್ಲ ಅವರೇ ನನ್ನ ಹತ್ತಿರ ನನ್ನ ವಿದ್ಯಾಭ್ಯಾಸಕ್ಕಾಗಿ ಕೊಡುಗೆ ನೀಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಅವರಿಂದ ದೊಡ್ಡ ಮಟ್ಟದ ಕೊಡುಗೆಯನ್ನು ನಿರೀಕ್ಷಿಸುತ್ತಾ ನಾವು ಆ ದಿನ ಬೆಳಿಗ್ಗೆ ಅವರ ದೊಡ್ಡ ಬಂಗಲೆಯೊಳಗೆ ಪ್ರವೇಶ ಮಾಡಿದೆವು.
ನಮ್ಮ ದುರಾದೃಷ್ಟವೋ ಏನೋ ಕೃಷ್ಣರಾಯರ ಹಿರಿಯ ಮಗ ಚಂದ್ರಶೇಖರಯ್ಯನವರಿಂದ ನಮಗೆ ಅವರು ಊರಿನಲ್ಲಿಲ್ಲವೆಂದು ತಿಳಿದು ಬಂತು. ನಮ್ಮ ತಂದೆಯವರು ಚಂದ್ರಶೇಖರಯ್ಯನವರಿಗೆ ನಾವು ಅವರ ಮನೆಗೆ ಬಂದ ಕಾರಣವನ್ನೂ ಮತ್ತು ಅವರ ತಂದೆಯವರು ನನಗೆ ಹಿಂದೆ ಸಹಾಯವನ್ನು ಮಾಡುವ ಭರವಸೆ ನೀಡಿದ್ದನ್ನೂ ತಿಳಿಸಿದರು. ಚಂದ್ರಶೇಖರಯ್ಯನವರು ಆಗ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಆದ್ದರಿಂದ ತಂದೆಯವರು ಮನೆಯಲ್ಲಿ ಇಲ್ಲದಿದ್ದರೂ ಅವರಿಂದ ನಾವು ಸ್ವಲ್ಪ ಹೆಚ್ಚು ಕೊಡುಗೆಯನ್ನು ನಿರೀಕ್ಷಿಸಿದ್ದೆವು. ಆದರೆ ಅವರು ಹಣದ ಕೊಡುಗೆಯ ವಿಚಾರ ಕೇವಲ ಅವರ ತಂದೆಗೆ ಸಂಬಂಧಿಸಿದ್ದೆಂದೂ ತಾವೇನೂ ಮಾಡಲಾಗುವುದಿಲ್ಲವೆಂದೂ ಹೇಳಿಬಿಟ್ಟರು. ಹಾಗೆಯೇ ತಂದೆಯವರು ಇನ್ನೊಮ್ಮೆ ಶಿವಮೊಗ್ಗೆಗೆ ಬಂದಾಗ ಅವರೊಡನೆ ನಾನು ಆ ವಿಷಯ ಮಾತನಾಡಬಹುದೆಂದೂ ಹೇಳಿದರು. ನಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಹೊರಡಬೇಕಾಯಿತು.
ನಾವು ಗುಡ್ಡೇತೋಟದಲ್ಲಿ ಇನ್ನೂ ಎರಡು ಮನೆಗಳಿಗೆ ಹೋದೆವು. ಒಂದು ಮನೆಯಲ್ಲಿದ್ದ ಶಿವಶಂಕರಯ್ಯನವರು ನಮಗೆ ಎರಡು ರೂಪಾಯಿ ಕೊಡುಗೆ ನೀಡಿದರು. ನನಗೆ ಅವರ ಪರಿಚಯವಿತ್ತು. ಏಕೆಂದರೆ ಅವರ ಮನೆಯ ನಾಗರತ್ನ ಎಂಬಾಕೆಯನ್ನು ಹೊಕ್ಕಳಿಕೆಯ ಫಣಿಯಪ್ಪಯ್ಯನವರ ಮಗ ಶೇಷಾದ್ರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದ್ದರಿಂದ ಅವರು ಆಗಾಗ ಹೊಕ್ಕಳಿಕೆಗೆ ಬರುತ್ತಿದ್ದರು.
ಇನ್ನೊಂದು ಮನೆಯಲ್ಲಿದ್ದ ತರುಣನೊಬ್ಬ ನಮ್ಮನ್ನು ತುಂಬಾ ಆದರಿಸಿ ಮಾತನಾಡಿಸಿದ. ಅವನ ಪ್ರಕಾರ ನನ್ನಂತಹ ಬಡ ಮೆರಿಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ಜಮೀನ್ದಾರರ ಪರಮ ಕರ್ತವ್ಯವಾಗಿತ್ತು! ಆದರೆ ಅವರಿಂದ ಹಣವನ್ನು ಪಡೆಯುವುದೇನು ಸುಲಭದ ವಿಷಯವಾಗಿರಲಿಲ್ಲ! ಆ ಬಗ್ಗೆ ಅವನು ಕೆಲವು ಸಲಹೆಗಳನ್ನೂ ನೀಡಿದ! ಆದರೆ ಅವನ ಕೈಯಲ್ಲಿ ಆಗ ಹಣವಿರದ್ದರಿಂದ ಸ್ವತಃ ಏನೂ ಕೊಡುಗೆ ನೀಡಲು ಅವನಿಗೆ ಸಾಧ್ಯವಿರಲಿಲ್ಲ!
ಆದರೆ ನಾವು ನಿರಾಶರಾಗ ಬೇಕಾಗಿರಲಿಲ್ಲ! ಏಕೆಂದರೆ ಅವನು ನಮ್ಮ ವಿಳಾಸವನ್ನು ಒಂದು ಪುಸ್ತಕದಲ್ಲಿ ಬರೆದುಕೊಂಡು ಬಿಟ್ಟ. ಅವನ ಕೊಡುಗೆ ಸ್ವಲ್ಪ ದಿನದಲ್ಲೇ ಮನಿ ಆರ್ಡರ್ ಮೂಲಕ ನಮ್ಮ ಕೈ ಸೇರಲಿತ್ತು! ಅವನು ಹೇಳಿದ ಮನಿ ಆರ್ಡರ್ ಎಂದೂ ನಮಗೆ ತಲುಪಲಿಲ್ಲವೆಂದು ನಾನು ಹೇಳಬೇಕಾಗಿಲ್ಲ! ಏಕೆಂದರೆ ನಮಗೆ ಬೇರೆಯವರಿಂದ ಅವನೊಬ್ಬ ಲಾಟ್ ಪುಟ್ ಅಥವಾ ಬ್ಲಫ್ ಮಾಸ್ಟರ್ ಎಂದು ತಿಳಿದು ಬಂತು. ಸ್ವಲ್ಪ ವರ್ಷದ ನಂತರ ಅವನಿಗೆ ನಮ್ಮೂರಿನ ಹುಡುಗಿಯೊಬ್ಬಳೊಡನೆ ವಿವಾಹವಾಯಿತು.
ಒಟ್ಟಿನಲ್ಲಿ ನಮಗೆ ಗುಡ್ಡೇತೋಟ ಊರಿನಿಂದ ೮ ರೂಪಾಯಿ ಕೊಡುಗೆ ಸಿಕ್ಕಿತ್ತು. ನಾವು ಬಸ್ ಚಾರ್ಜ್ ಎಷ್ಟು ಕೊಟ್ಟಿದ್ದೆವೆಂದು ನನಗೀಗ ನೆನಪಿಗೆ ಬರುತ್ತಿಲ್ಲ. ಆದರೆ ನಾವು ವಾಪಾಸ್ ಬರುವಾಗ ಬಸ್ ಚಾರ್ಜ್ ಕೊಡಬೇಕಾಗಲಿಲ್ಲ. ಏಕೆಂದರೆ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡಿದ ಚಂದ್ರಶೇಖರಯ್ಯನವರು ನಮ್ಮ ಟಿಕೆಟ್ ಮಾಡಿಸಿ ಬಿಟ್ಟರು. ನಾವು ಅಲ್ಲಿಂದ ಅಗಳಗಂಡಿ ಊರಿನ ಮೇಲಿನ ತೋಟ ಎಂಬಲ್ಲಿ ನಡೆಯಲಿರುವ ಜೋಡಿ ಮದುವೆಗೆ ಹೋದೆವು.
ಅಕ್ಕ ತಂಗಿಯರಿಬ್ಬರಿಗೆ ಒಂದೇ ಬಾರಿ ಮದುವೆ ನೆರವೇರಿಸಲಾಯಿತು. ಮದುವೆಯ ಒಬ್ಬ ವರ ಒಂದು ಕಾಲದಲ್ಲಿ ನಮ್ಮೂರಿನ ಮೇಲಿನಕೊಡಿಗೆಯಲ್ಲಿದ್ದ ಸೀತಾರಾಮಯ್ಯನವರ ಮಗ ತಿಮ್ಮಪ್ಪ.
ಮದುವೆಯ ದಿನ ರಾತ್ರಿ ನಾವು ಬೆಳವಿನಕೊಡಿಗೆ ಶ್ರೀನಿವಾಸಯ್ಯನವರೊಡನೆ ಅವರ (ದಿವಂಗತ) ಮಾವನ ಮನೆಯಾದ ಶ್ರೀಮಂತ ಜಮೀನ್ದಾರ ಅಗಳಗಂಡಿ ಹೆಬ್ಬಾರ್ ಮನೆಗೆ ಹೋಗಿ ಅಲ್ಲಿಯೇ ತಂಗಿದೆವು. ಶ್ರೀನಿವಾಸಯ್ಯನವರ ಮೂಲಕ ನಾವು ಹೆಬ್ಬಾರರ ಶ್ರೀಮತಿಯವರಿಂದ ಸ್ವಲ್ಪ ಕೊಡುಗೆಯನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಗಿ ನಮಗೆ ಬೆಳಗಿನ ಉಪಹಾರ ಮಾತ್ರ ಕೊಡುಗೆಯಾಗಿ ಸಿಕ್ಕಿತು. ಅಷ್ಟೇ. ನಾವಲ್ಲಿಂದ ಊರಿಗೆ ಹಿಂದಿರುಗಿದೆವು.
ನನಗೆ ಅಲ್ಲಿಂದ ಮುಂದೆ ಯಾರ ಮನೆಗೂ ಹೋಗಿ ಕೊಡುಗೆ ಕೇಳುವ ಇಚ್ಚೆಯಿರಲಿಲ್ಲ. ಆದರೆ ನಮ್ಮ ತಂದೆಯವರ ಕೈಯಲ್ಲಿದ್ದ ಹಣ ಪಡೆದು ನಾನು ಶಿವಮೊಗ್ಗೆಗೆ ಹೊರಡುವ ಸಾಧ್ಯತೆಗಳೇ ಇರಲಿಲ್ಲ. ಆದ್ದರಿಂದ ನಿರ್ವಾಹವಿಲ್ಲದೇ ನಾವು ಸೆಕೆಂಡ್ ರೌಂಡ್ ಕಲೆಕ್ಷನ್ ಮಾಡಲು ಹೊರಡಲೇ ಬೇಕಾಯಿತು. ಈ ಬಾರಿ ನಾವು ಮೊಟ್ಟ ಮೊದಲ ಮನೆಯಲ್ಲೇ ನಿರಾಶರಾಗಬಾರದೆಂದು ಸೀದಾ ಕರಿಗೆರಸಿ ಗಣೇಶ ಭಾವನ ಮನೆಗೆ ಹೋದೆವು. ಅವರು ನನ್ನ ಕೈಯಲ್ಲಿ ೧೦ ರೂಪಾಯಿ ಇಟ್ಟು ನಮಗೆ ಅಲ್ಲಿಂದ ಅವರ ಭಾವನಾದ ಗುಡ್ಡೇಕೊಪ್ಪ ಮಂಜುನಾಥಯ್ಯನವರ ಮನೆಗೆ ಹೋಗುವಂತೆ ಹೇಳಿದರು.
ಗುಡ್ಡೇಕೊಪ್ಪ ಶಿವಮೊಗ್ಗ ಮತ್ತು ಚಿಕ್ಕಮಗಳೂರ್ ಜಿಲ್ಲೆಗಳ ಗಡಿಯಲ್ಲಿದ್ದ ಒಂದು ಸುಂದರ ಮಲೆನಾಡ ಹಳ್ಳಿಯಾಗಿತ್ತು. ಮಂಜುನಾಥಯ್ಯನವರಿಗೆ ತಲವಾನೆ ತಿಮ್ಮಪ್ಪಯ್ಯನವರ ಮಗಳನ್ನು ಕೊಟ್ಟು ವಿವಾಹವಾಗಿತ್ತು. ಅವರ ಮೂಲ ಮನೆ ಸ್ವಲ್ಪ ಕಾಲದ ಹಿಂದೆ ಬೆಂಕಿ ಅನಾಹುತಕ್ಕೆ ಸಿಕ್ಕಿ ಸುಟ್ಟು ಹೋಗಿ ತತ್ಕಾಲಕ್ಕೆ ಅವರೊಂದು ಶೆಡ್ ಎನ್ನಬಹುದಾದ ಕಟ್ಟಡದಲ್ಲಿ ವಾಸ ಮಾಡುತ್ತಿದ್ದರು.
ಆಗಿನ್ನೂ ತರುಣರಾಗಿದ್ದ ಮಂಜುನಾಥಯ್ಯನವರು ಆಗ ತಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲದಿದ್ದರೂ ತುಂಬಾ ದೂರದೃಷ್ಟಿಯಿಂದ ಒಂದು ಫ್ಯೂಚರ್ ಪ್ಲಾನ್ ತಯಾರು ಮಾಡಿದ್ದರು. ನನಗೆ ಅವರು ತಮ್ಮ ವಿಶಾಲವಾದ ಬತ್ತದ ಗದ್ದೆಗಳಲ್ಲಿ ನೆಡಿಸಿದ್ದ ಅಡಿಕೆ ಸಸಿಗಳು ಬೆಳೆದು ಮೇಲೆ ಬರುತ್ತಿರುವುದನ್ನು ತೋರಿಸಿ ಅವುಗಳಲ್ಲಿ ಬೆಳೆ ಬರಲು ಪ್ರಾರಂಭವಾಗುವಾಗ ತಾವೂ ಒಬ್ಬ ಶ್ರೀಮಂತರಾಗುವ ಕನಸು ನನಸಾಗುವುದೆಂದು ನಿರೀಕ್ಷಿಸುವುದಾಗಿ ಹೇಳಿದರು.
ಮುಂದೆ ಅವರ ಕನಸು ಹೇಗೆ ನನಸಾಯಿತೆಂದು ನಾನಿಲ್ಲಿ ಬರೆಯ ಬೇಕಾಗಿಲ್ಲ.
ಮುಂದೆ ಅವರು ಕೋಟ್ಯಾಧಿಪತಿಯಾಗಿದ್ದು ಹೆಚ್ಚು ಜನರಿಗೆ ಗೊತ್ತಿರುವ ವಿಷಯ.
ಮಂಜುನಾಥಯ್ಯನವರು ನನಗೆ ೧೦ ರೂಪಾಯಿ ಕೊಟ್ಟುದುದಲ್ಲದೇ ನನ್ನನ್ನು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮನೆಗೆ ಕರೆದುಕೊಂಡು ಹೋಗಿ ಅವರಿಂದಲೂ ೧೦ ರೂಪಾಯಿ ಕೊಡಿಸಿದರು.
ಒಟ್ಟಿನಲ್ಲಿ ನಮ್ಮ ಸೆಕೆಂಡ್ ರೌಂಡಿನಲ್ಲಿ ೩೦ ರೂಪಾಯಿ ಕಲೆಕ್ಷನ್ ಮಾಡಿ ನಾವು ಊರಿಗೆ ಹಿಂತಿರುಗಿದೆವು.
ಅಷ್ಟರಲ್ಲಿ ನಮಗೆ ನಮ್ಮೂರಿಗೇ ದೊಡ್ಡ ಸಾಹುಕಾರರಾಗಿದ್ದ ಬೆಳವಿನಕೊಡಿಗೆ ತಿಮ್ಮಪ್ಪಯ್ಯನವರು ನಾವು ಬೇರೆ ಊರುಗಳಿಗೆ ಕಲೆಕ್ಷನ್ ಮಾಡಲು ಹೋಗಿದ್ದರೂ ಊರಿನವರೇ ಆದ ಅವರ ಹತ್ತಿರ ಕೊಡುಗೆಗೆ ಬಂದಿಲ್ಲವೆಂದು ಹೇಳುತ್ತಿದ್ದರೆಂದು ತಿಳಿಯಿತು. ಅದನ್ನು ಪರೀಕ್ಷಿಸಿಯೇ ಬಿಡಬೇಕೆಂದು ನಮ್ಮ ತಂದೆಯವರು ನನ್ನನ್ನು ಕರೆದುಕೊಂಡು ಬೆಳವಿನಕೊಡಿಗೆ ಮನೆಗೆ ಹೋಗಿ ತಾವು ಬಂದ ಉದ್ದೇಶವನ್ನು ತಿಳಿಸಿದರು.
ಆದರೆ
ತತ್ ಕ್ಷಣ ಅವರ ಬಾಯಿಯಿಂದ ಯಾವುದೇ ಮಾತು ಹೊರಬರಲಿಲ್ಲ. ಆದರೆ ಅವರ ಮುಖದಲ್ಲಿ ನಮಗೆ ಸ್ವಲ್ಪ ಹಣವನ್ನೂ ಕೊಡದೇ ನಮ್ಮನ್ನು ಹೇಗೆ ಸಾಗಹಾಕಬೇಕೆಂಬ ಚಿಂತೆ ನಡೆಯುತ್ತಿರುವುದು ವ್ಯಕ್ತವಾಯಿತು. ಕಟ್ಟ ಕಡೆಗೆ ಅವರ ಬಾಯಿಯಿಂದ ಒಂದು ಮಾತು ಹೊರ ಬಂತು. ಅದೇನೆಂದರೆ
"ನಾನು ಆ ಬಗ್ಗೆ ಯೋಚಿಸಿ ಮುಂದೆ ತೀರ್ಮಾನಿಸುವೆ
" ಎಂದು. ಆಮೇಲೆ ನಾವು ಬರಿಗೈನಲ್ಲಿ ಹಿಂತಿರುಗಿ ಮನೆ ಸೇರಿದೆವು.
ಗುಡ್ಡೇತೋಟದ ಕೃಷ್ಣರಾಯರ ಕಥೆಯೂ ಹೀಗೆಯೇ ಮುಕ್ತಾಯವಾಯಿತು. ಮುಂದೆ ನಾನು ಶಿವಮೊಗ್ಗೆಯಲ್ಲಿ ಅವರನ್ನು ಭೇಟಿಯಾದಾಗ ಅವರೇ ನನ್ನ ಹತ್ತಿರ ಒಟ್ಟು ಎಷ್ಟು ಕಲೆಕ್ಷನ್ ಆಯಿತೆಂದು ಕೇಳಿದರು. ನಾನು ಅವರ ಊರಿನಲ್ಲಿ ಕೇವಲ ೮ ರೂಪಾಯಿ ಕೊಡುಗೆ ದೊರೆಯಿತೆಂದು ಹೇಳಿದಾಗ ಆಶ್ಚರ್ಯ ವ್ಯಕ್ತ ಪಡಿಸಿದರು. ಆದರೆ ನಾನು ಅವರ ಮಗ ಚಂದ್ರಶೇಖರಯ್ಯನವರು ತಮ್ಮ ತಂದೆಯವರೇ ಶಿವಮೊಗ್ಗೆಗೆ ಬಂದಾಗ ಕೊಡುಗೆ ನೀಡುವುದಾಗಿ ಹೇಳಿದ್ದರೆಂದು ತಿಳಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಟ್ಟಿನಲ್ಲಿ ಅವರ ಕೊಡುಗೆಯ ವಿಷಯ ಅಲ್ಲಿಗೆ ಮುಕ್ತಾಯ ಕಂಡಿತು.
ನಾನು ತುಂಬಾ ವಿವರವಾಗಿ ಈ ಅಧ್ಯಾಯವನ್ನು ಬರೆಯಲು ಕಾರಣ ಆಗಿನ ಕಾಲದ ಶ್ರೀಮಂತ ಜಮೀನ್ದಾರರುಗಳು ಹಣದ ಕೊಡುಗೆಯ ವಿಷಯದಲ್ಲಿ ಎಷ್ಟು ಬಿಗಿ ಮುಷ್ಟಿಯವರಾಗಿದ್ದರೆಂದು ತಿಳಿಸಲು ಮಾತ್ರಾ. ಇದೇ ಶ್ರೀಮಂತರ ಮುಂದಿನ ಪೀಳಿಗೆಯ ವ್ಯಕ್ತಿಗಳು ಈ ಬಗೆಯ ನಡೆವಳಿಕೆಗಳಿಗೆ ಅಪವಾದವಾಗಿ ಬಿಟ್ಟರೆಂಬುವುದೂ ಅಷ್ಟೇ ಸತ್ಯ. ಆದರೆ ಈಗ ಕಾಲ ಬದಲಾಗಿದೆ. ಅಂದು ನಾವು ಕಲೆಕ್ಷನ್ ಡ್ರೈವ್ ಮಾಡಿದಂತೆ ವಿದ್ಯಾಭ್ಯಾಸಕ್ಕಾಗಿ ಹಣದ ಕೊಡುಗೆ ಕೇಳುವ ಪರಿಸ್ಥಿತಿ ಇಂದಿನ ಮಲೆನಾಡಿನಲ್ಲಿ ಇಲ್ಲ. ಆದರೆ ಆಗಿನ ಕಾಲದಲ್ಲೂ ಕೆಲವರು ಕೊಡುಗೈ ದಾನಿಗಳು ಇದ್ದರು. ಅದಕ್ಕೆ ಉದಾಹರಣೆ ನಮ್ಮ ಪುರದಮನೆ ಶ್ರೀನಿವಾಸಯ್ಯನವರೇ ಆಗಿದ್ದರು. ನಮ್ಮ ಒಟ್ಟು ಕಲೆಕ್ಷನ್ ೩೮ ರೂಪಾಯಿ ಆಗಿತ್ತು. ಆದರೆ ಹಿಂದಿನ ವರ್ಷ ಶ್ರೀನಿವಾಸಯ್ಯನವರು ನಮ್ಮ ಕೋರಿಕೆ ಇಲ್ಲದೇ ನನ್ನ ಕೈಮೇಲೆ ೫೦ ರೂಪಾಯಿ ಇಟ್ಟು ಬಿಟ್ಟಿದ್ದರು!
ಆದರೆ ಈ ವರ್ಷ ಪುನಃ ಅವರ ಹತ್ತಿರ ಹೋಗುವುದು ನಮಗೆ ಇಷ್ಟವಿರಲಿಲ್ಲ.
ನನ್ನ ಅದೃಷ್ಟದಿಂದ ನನಗೆ ಅಲ್ಲಿಂದ ಮುಂದೆ ನನ್ನ ವಿದ್ಯಾಭ್ಯಾಸಕ್ಕಾಗಿ ಯಾರಿಂದಲೇ ಆಗಲಿ ಹಣ ಕೇಳುವ ಪರಿಸ್ಥಿತಿ ಬರಲಿಲ್ಲ. ಅದಕ್ಕೆ ಬದಲಾಗಿ ಕೆಲವು ಮಹನೀಯರು ನನ್ನಿಂದ ಯಾವುದೇ ಕೋರಿಕೆ ಇಲ್ಲದೇ ನನ್ನ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಮೊತ್ತದ ಸಹಾಯ ನೀಡಿದರು. ಆ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ಬರೆಯುತ್ತೇನೆ.
------- ಮುಂದುವರಿಯುವುದು-----
No comments:
Post a Comment