Tuesday, March 31, 2020

ಬಾಲ್ಯ ಕಾಲದ ನೆನಪುಗಳು – ೭೪


ನಮ್ಮ ಮಳೆಗಾಲಕ್ಕೆ ಮುನ್ನಿನ ಕೆಲಸಗಳು

ಆ ಕಾಲದ ನಮ್ಮ ಮಲೆನಾಡು ಭಾಗದಲ್ಲಿ ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳುಗಳು ತುಂಬಾ ನಿರ್ಣಾಯಕ ತಿಂಗಳುಗಳಾಗಿದ್ದವು. ತುಂಗೆಯ ಉಪನದಿಯಾದ ಸೀತಾನದಿ ಬಿ ಜಿ ಕಟ್ಟೆಯ ಹತ್ತಿರ ಹರಿಯುತ್ತಿದ್ದು ನಮ್ಮ ಹಳ್ಳಿಗಳ ಜನರನ್ನು  ಸುಮಾರು ಆರು ತಿಂಗಳು ಕೊಪ್ಪಮತ್ತು ಜಯಪುರಕ್ಕೆ ಹೋಗದಂತೆ ತನ್ನ ಪ್ರವಾಹದಿಂದ ತಡೆದು ಬಿಡುತ್ತಿತ್ತು. ನದಿಗೆ ಅಡ್ಡಲಾಗಿ ಸೇತುವೆ ಕಟ್ಟುವ ಕೆಲಸ ಆಗ ಕೇವಲ ಪ್ರಾರಂಭವಾಗಿತ್ತು ಅಷ್ಟೇ. ಮುತ್ತೂರ ಗಂಡಿ ಎಂಬಲ್ಲಿ ದೋಣಿಯಲ್ಲಿ ನದಿ ದಾಟಬಹುದಾಗಿದ್ದರೂ ಸಾಮಾನುಗಳನ್ನು ಸಾಗಿಸಲಾಗುತ್ತಿರಲಿಲ್ಲ. ಹಾಗಾಗಿ ಸುಮಾರು ಆರು ತಿಂಗಳಿಗೆ ಬೇಕಾಗುವ ಸಾಮಾನುಗಳನ್ನು ಬೇಸಿಗೆಯಲ್ಲೇ ಜೋಡಿಸಿಟ್ಟುಕೊಳ್ಳಬೇಕಿತ್ತು. ಇದಲ್ಲದೇ ಇನ್ನೂ ಕೆಲವು ಕೆಲಸಗಳನ್ನು ಬೇಸಿಗೆಯಲ್ಲೇ ಮಾಡಬೇಕಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ಸೇರಿ ಮಾಡಿ ಮುಗಿಸಲೇ ಬೇಕಾದ ಕೆಲಸಗಳ ಒಂದು ವೇಳಾ  ಪಟ್ಟಿಯನ್ನೇ ತಯಾರಿಸಿ ಅದರಂತೆ ಕೆಲಸ ಮಾಡಲು ಪ್ರಾರಂಭಿಸಿದೆವು.

ನಮ್ಮ ಮೊಟ್ಟ ಮೊದಲಿನ ಕಾರ್ಯ ಒಂದು ವರ್ಷಕ್ಕೆ ಅಡಿಗೆಮನೆ ಒಲೆಗೆ, ಬಚ್ಚಲೊಲೆಗೆ, ಜಾನುವಾರುಗಳ ಮುರುವಿನ ಒಲೆಗೆ ಮತ್ತು ಅಡಿಕೆ ಬೇಯಿಸುವ ಒಲೆಗೆ ಸಾಕಾಗುವಷ್ಟು ಕಟ್ಟಿಗೆ (ಸೌದೆ ಮತ್ತು ಕುಂಟೆ) ಕಾಡಿನಿಂದ ಕಡಿದು ಒಣಗಿಸಿ ಮನೆಗೆ ಸಾಗಿಸಿ ಉಡಿ ಕಟ್ಟಿ ಜೋಡಿಸಿಡುವುದು. ನಮ್ಮ ಊರಿನಲ್ಲಿ ಆಗ ಎಲ್ಲ ಅಡಿಕೆ ತೋಟಗಳ ಮೇಲ್ಭಾಗದಲ್ಲಿದ್ದ ಕಾಡಿನ ಒಂದು ಭಾಗವನ್ನು ಅವರವರ ಜಮೀನಿಗೆ ತಕ್ಕನಾಗಿ ಹೊಲ ಎಂಬ ಹೆಸರಿನಲ್ಲಿ ಕ್ರಮವಾಗಿ ಹಂಚಲಾಗಿತ್ತು. ಈ ಹೊಲದಲ್ಲಿ ಮರಗಳನ್ನು ಕಡಿಯುವಂತಿರಲಿಲ್ಲ. ಆದರೆ ಮರಗಳ ಸೊಪ್ಪು ಮತ್ತು ಬೇರೆ ಪೊದೆಗಳನ್ನು ಕಡಿದು ತೋಟದ ಬೇಸಾಯಕ್ಕೆ ಬಳಸಬಹುದಾಗಿತ್ತು. ಇದಲ್ಲದೇ ಇನ್ನು ಸ್ವಲ್ಪ ಕಾಡನ್ನು ದರಗಿನ ಹಾಡ್ಯ ಎಂದು ಹಂಚಲಾಗಿತ್ತು. ಅಲ್ಲಿ ಮರಗಳನ್ನಾಗಲೀ ಅವುಗಳ ಸೊಪ್ಪನ್ನಾಗಲೀ ಕಡಿಯುವಂತಿರಲಿಲ್ಲ. ಆದರೆ ಬೇಸಿಗೆಯಲ್ಲಿ ಮರಗಳಿಂದ ಉದುರಿದ ತರಗೆಲೆಗಳನ್ನು ಜಾನುವಾರುಗಳ ಕೊಟ್ಟಿಗೆಗೆ ಬಳಸಬೇಕಿತ್ತು. ತರಗೆಲೆಗಳನ್ನು ಗುಡಿಸಿ ಅವನ್ನು ಬಿದಿರಿನ ಜಲ್ಲೆಗಳಲ್ಲಿ ತುಂಬಿ ಮನೆಗೆ ತಂದು ಕೊಟ್ಟಿಗೆಯಲ್ಲಿ ಸುರಿದು ಹರಡಲಾಗುತ್ತಿತ್ತು. ಪುಟ್ಟಣ್ಣ ಮತ್ತು ನಾನು ಈ ಕೆಲಸವನ್ನು ಮಾಡುವುದು ಮತ್ತು ಕೊಟ್ಟಿಗೆ ಗೊಬ್ಬರ ತೆಗೆದು ಗೊಬ್ಬರದ ಗುಂಡಿಗೆ ತಲುಪಿಸುವ ಕೆಲಸವನ್ನೂ ಮಾಡತೊಡಗಿದೆವು.

ನಮ್ಮ ದರಗಿನ ಹಾಡ್ಯವನ್ನು ದಾಟಿ ಬೆಟ್ಟದ ಮೇಲೆ ಮುಂದೆ ಹೋದರೆ ಅಲ್ಲಿ ಓರಣಕಲ್ ಎಂಬ ಗುಹೆಯಿಂದ ಆಚೆಗೆ ದಟ್ಟವಾದ ಕಾಡು ಇತ್ತು. ಒಂದು ಕಾಲದಲ್ಲಿ ಈ ಓರಣಕಲ್ ಗುಹೆಯಲ್ಲಿ ಹುಲಿಗಳು ವರ್ಷಕ್ಕೊಮ್ಮೆ ಬಂದು ಕ್ಯಾಂಪ್ ಮಾಡಿ ನಮ್ಮ ಜಾನುವಾರುಗಳ ಮೇಲೆ ಆಕ್ರಮಣ  ಮಾಡುತ್ತಿದ್ದವು.  ಅಲ್ಲಿನ ಕಾಡಿನಲ್ಲಿ ನಾವು ಮರಗಳನ್ನು ಕಡಿಸಿ ವರ್ಷಕ್ಕೆ ಬೇಕಾಗುವಷ್ಟು ಕಟ್ಟಿಗೆ ಮಾಡಿಸಿ ಅವು ಒಣಗಿದ ನಂತರ ಮನೆಗೆ ತರಬೇಕಾಗಿತ್ತು. ನಾವು ಸುಬ್ಬ ಎಂಬ ಆಳಿಗೆ ಹಣ ಕೊಟ್ಟು ಮರ ಕಡಿಸಿ ಸೌದೆ ಮಾಡಿಸಿದೆವು. ಅವನ್ನು ನಮ್ಮ ಮನೆಗೆ ಸ್ವಲ್ಪ ದೂರದವರೆಗೆ ಎತ್ತಿನ ಗಾಡಿಯಲ್ಲಿ ತರಬಹುದಾಗಿತ್ತು. ಆದರೆ ಆ ವರ್ಷ ನಮಗೆ ಗಾಡಿ ಬಾಡಿಗೆ ಕೊಡಲು ಹಣವಿರದಿದ್ದರಿಂದ ಪುಟ್ಟಣ್ಣ ಮತ್ತು ನಾನು ತಂದೆ ಮತ್ತು ತಾಯಿಯವರೊಡನೆ ಸೇರಿ ತಲೆಯ ಮೇಲೆಯೇ ಹೊತ್ತು ಮನೆಗೆ ತಲುಪಿಸಿದೆವು.

ಇನ್ನೊಂದು ಬೇಸಿಗೆಯ ಮುಖ್ಯ ಕಾರ್ಯವೆಂದರೆ ನಮ್ಮ  ತೋಟದಲ್ಲಿ ಕೂಡಿಟ್ಟ ಅಡಿಕೆ ಸೋಗೆಯನ್ನು ಕಡಿದು ಸೋಗೆ ಮತ್ತು ಹಾಳೆಯನ್ನು ಬೇರ್ಪಡಿಸಿ ಕಟ್ಟು ಕಟ್ಟಿ ಮನೆಗೆ ತರುವುದು. ನಮಗೆ ಆ ಕೆಲಸ ಮಾಡಲು ಒಂದು ವಾರಕ್ಕೂ ಹೆಚ್ಚು ಕಾಲ ಬೇಕಾಯಿತು. ಸೋಗೆಯನ್ನು ನಮ್ಮ ಮನೆ, ಅದಕ್ಕೆ ಸೇರಿದ ಕೊಟ್ಟಿಗೆ ಮತ್ತು ಜಾನುವಾರುಗಳ ಕೊಟ್ಟಿಗೆಗೆ ಹೊಚ್ಚಬೇಕಾಗಿತ್ತು. ಆ ವಾರ್ಷಿಕ ಕೆಲಸವನ್ನು ನಮ್ಮೂರಿನಲ್ಲಿ ಸಾಮೂಹಿಕವಾಗಿ ಮಾಡುವ ಕ್ರಮವಿತ್ತು. ನಾವು ನಿರ್ಧರಿಸಿದ ದಿನ ಪ್ರತಿಯೊಂದು ಮನೆಯಿಂದಲೂ ಒಬ್ಬರು ಬಂದು ಬೆಳಗಿನಿಂದ ಸಂಜೆಯವರೆಗೆ ದುಡಿದು ಈ ಕೆಲಸ ಮುಗಿಸುತ್ತಿದ್ದರು. ನಾವು ಮುಂದೆ ಅದೇ ರೀತಿ ಅವರ ಮನೆಗೆ ಸೋಗೆ ಹೊಚ್ಚಲು ಹೋಗಬೇಕಾಗಿತ್ತು. ಆದರೆ ಮನೆಗೆ ಸೋಗೆ ಹೊಚ್ಚುವ ಕೆಲಸ ಕೇವಲ ಪರಿಣಿತರಿಂದ ಮಾತ್ರಾ ಸಾಧ್ಯವಿತ್ತು.  ಹೊಸಳ್ಳಿ ವೆಂಕಪ್ಪಯ್ಯ,ಬೆಳವಿನಕೊಡಿಗೆ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ, ಬಾಳೆಹಿತ್ತಲು ಗಣಪತಯ್ಯ, ಮುಂತಾದವರು ಈ ಕಾರ್ಯದಲ್ಲಿ ನುರಿತಿದ್ದರು. ನಾವು ಏಪ್ರಿಲ್ ತಿಂಗಳ ಕೊನೆಯಲ್ಲಿ ಈ ದೊಡ್ಡ ಕಾರ್ಯ ಮುಗಿಸಲು ಸಾಧ್ಯವಾಯಿತು.

ಬೇಸಿಗೆಯ ವೇಳೆಗೆ ನಮಗೆ ಕೆಲವು ದೈನಂದಿನ ಕೆಲಸಗಳಿದ್ದವು. ಅವುಗಳಲ್ಲಿ ಮುಖ್ಯವಾದದ್ದು ನಮ್ಮೂರ ಕೆರೆಗಳಿಂದ ನಮ್ಮ ತೋಟಕ್ಕೆ ಸರದಿಯ ಮೇಲೆ ಹಂಚಲಾಗುತ್ತಿದ್ದ ನೀರನ್ನು ಬೆಳಿಗ್ಗೆ ಮತ್ತೆ ಸಂಜೆ ಕಾಲುವೆಗಳ ಮೂಲಕ ತೋಟಕ್ಕೆ ಹಾಯಿಸುವುದು. ನಮ್ಮ ತೋಟಕ್ಕೆ ಮೂರು ಕೆರೆಗಳಿಂದ ಸರದಿಯ ಮೇಲೆ ನೀರು ಹಾಯಿಸುತ್ತಿದ್ದೆವು. ಮಳೆಗಾಲ ಶುರುವಾಗುವ ಮೊದಲು ಕೆರೆಗಳ ಕಟ್ಟೆ ಒಡೆದು ನೀರನ್ನು ಹಳ್ಳಕ್ಕೆ ಹರಿಸಲಾಗುತ್ತಿತ್ತು. ಪ್ರತಿ ವಾರದ ಕೊನೆಯ ವೇಳೆಗೆ ನಾವು ನಮ್ಮ ತಂದೆಯವರಿಗೆ ಕೊಪ್ಪದ ಸಂತೆಗೆ ಹೋಗಲು ಬಾಳೆ ಕಾಯಿ ಮತ್ತು ಹಣ್ಣು ಮತ್ತು ವೀಳ್ಯದೆಲೆ ಕೊಯ್ದು ಎಣಿಸಿ ಕೌಳಿಗೆ ಮಾಡಿ ಕೊಡುವುದು ಹಾಗೂ ಅವನ್ನು ಬಿ ಜಿ ಕಟ್ಟೆಯವರೆಗೆ ತಲೆಯ ಮೇಲೆ ಹೊತ್ತುಕೊಂಡು ಹೋಗಿ ತಲುಪಿಸುವ ಕೆಲಸ ಮಾಡುತ್ತಿದ್ದೆವು.

ಗಣೇಶ ಭಾವನ ಗಾಡಿಯಲ್ಲಿ ಬಂತು ಆರು ತಿಂಗಳಿಗೆ ಬೇಕಾದ ಸಾಮಾನು
ನಾವು ಎಷ್ಟೇ ಕೆಲಸ ಮಾಡಿದರೂ ನಮಗೆ ನಮ್ಮ ಸಂಸಾರದ ಆ ವರ್ಷದ ಮಳೆಗಾಲಕ್ಕೆ ಬೇಕಾಗುವ ಮುಖ್ಯ ಸಾಮಾನುಗಳನ್ನು ಖರೀದಿಸುವ ವ್ಯವಸ್ಥೆ ಮಾಡುವುದು ಸಾಧ್ಯವಿರಲಿಲ್ಲ. ಆಗ ನಮ್ಮ ಸಹಾಯಕ್ಕೆ ಬಂದವರು ನಮ್ಮ ತಂದೆಯ ಸೋದರಳಿಯ ಗಣೇಶ ಭಾವ. ನಮ್ಮ ತಂದೆಯವರು ಒಂದು ದಿನ ಸುಮ್ಮನೆ ಕರಿಗೆರಸಿಗೆ ಹೋಗಿ ಗಣೇಶ ಭಾವನವರನ್ನು ಭೇಟಿಯಾದರು. ಅವರು ಗಣೇಶ ಭಾವನಿಗೆ ತಮ್ಮ ಕಷ್ಟ ಸುಖಗಳ ಬಗ್ಗೆ ಹೇಳಬೇಕಾದ ಅವಶ್ಯಕತೆಯೇ ಬರಲಿಲ್ಲ. ಭಾವನವರು ನಮ್ಮ ತಂದೆಯವರು ಹೊರಡುವಾಗ ಅವರನ್ನು ತಮ್ಮ ಎತ್ತಿನ ಗಾಡಿಯಲ್ಲಿ ಕೂರಿಸಿ ಕೈಗೆ ಒಂದು ಪತ್ರ ಕೊಟ್ಟು ಅದನ್ನು ಕೊಪ್ಪದಲ್ಲಿ ಸಿದ್ದಿ ಸಾಹೇಬರಿಗೆ ಕೊಡುವಂತೆ ಹೇಳಿದರು. ಪತ್ರವನ್ನು ನೋಡಿದ ಸಿದ್ದಿ ಸಾಹೇಬರು ನಮಗೆ ಆರು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು (ಬೆಲ್ಲ, ಎಣ್ಣೆ, ಬೇಳೆ ಇತ್ಯಾದಿ)  ಗಾಡಿಗೆ ತುಂಬಿಸಿದ್ದಲ್ಲದೇ ಅದರಲ್ಲಿ ಬರೆದಂತೆ ೧೦೦ ರೂಪಾಯಿಯನ್ನು ಸಂಸಾರದ ಬೇರೆ ಖರ್ಚುಗಳಿಗಾಗಿ ನಮ್ಮ ತಂದೆಯವರ ಕೈಯಲ್ಲಿ ಇಟ್ಟು ಬಿಟ್ಟರು. ಸಂಜೆಯಾಗುವಾಗ ತಂದೆಯವರು ಸಾಮಾನು ತುಂಬಿದ ಗಾಡಿಯೊಡನೆ ನಮ್ಮ ಮನೆ ತಲುಪಿದ್ದರು. ಅಲ್ಲಿಗೆ ನಮ್ಮ ಮಳೆಗಾಲದ ಸಾಮಾನುಗಳ ಅವಶ್ಯಕತೆಯ ಏರ್ಪಾಟು ಮುಗಿದು ಹೋಗಿತ್ತು!

ನಮ್ಮ ಗುಡ್ಡೇತೋಟದ ಪಯಣ ಮತ್ತು ನೆಹರು ಅವರ ನಿಧನ
ಮೇ ತಿಂಗಳ ಕೊನೆಯ ಭಾಗ ಸಮೀಪಿಸುತ್ತಿದ್ದಂತೆ ನಮಗೆ ಬೇಸಿಗೆ ರಜೆ ಕಳೆದು ನಾವು ವಾಪಾಸ್ ಶಾಲೆಗೆ ಹಾಜರಾಗ ಬೇಕೆಂಬ ವಿಷಯ ಗೋಚರವಾಗ ತೊಡಗಿತು. ಆದರೆ ನನಗೆ ಯಥಾ ಪ್ರಕಾರ ಶಿವಮೊಗ್ಗೆಗೆ ಪ್ರಯಾಣ ಮಾಡುವ ಮುನ್ನ ಜೋಡಿಸಿಕೊಳ್ಳಬೇಕಾದ ಹಣದ ಸಮಸ್ಯೆ ಎದುರಾಯಿತು. ಆಗ ನಮಗೆ ನಮ್ಮ ಸಮಾಜದ ಕೆಲವು ಶ್ರೀಮಂತರು ನನಗೆ ಹಾಸ್ಟೆಲಿನಲ್ಲಿ ಸೀಟಿಗೆ ತೊಂದರೆ ಆದಾಗ ಹಣದ ಸಹಾಯ ಮಾಡುವುದಾಗಿ ಹೇಳಿದ್ದು ನೆನಪಾಯಿತು. ಮುಖ್ಯವಾಗಿ ಗುಡ್ಡೇತೋಟದ ಕೃಷ್ಣರಾಯರು ಒಮ್ಮೆ ನಮ್ಮ  ಹಾಸ್ಟೆಲಿಗೆ ಬಂದಾಗ ನನ್ನ ಹತ್ತಿರ ನಮ್ಮ  ಸಮಾಜದ ಶ್ರೀಮಂತರಿಂದ ಸ್ವಲ್ಪ ಹಣ ಕೊಡುಗೆ ಪಡೆದುಕೊಂಡು ಕೂಡಿಟ್ಟುಕೊಂಡರೆ ಮುಂದೆ ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದೆಂದು ಹೇಳಿದ್ದುದು ನೆನಪಿನಲ್ಲಿತ್ತು.

ನಮ್ಮ ತಂದೆಯವರು ನನ್ನನ್ನು ಕರೆದುಕೊಂಡು ಕೆಲವು ಮುಖ್ಯ ವ್ಯಕ್ತಿಗಳ ಮನೆಗೆ ಹೋಗಿ ನನ್ನ ವಿದ್ಯಾಭ್ಯಾಸಕ್ಕಾಗಿ ಕೊಡುಗೆ ಕೇಳಿಕೊಳ್ಳುವುದಾಗಿ ತೀರ್ಮಾನಿಸಿದರು. ಗುಡ್ಡೇತೋಟದ ಕೃಷ್ಣರಾಯರು ನನಗೆ ಸಹಾಯ ಮಾಡುವ ಬಗ್ಗೆ ಹಿಂದೆಯೇ ಹೇಳಿದ್ದರಿಂದ ಮೊದಲು ಅವರ ಮನೆಗೆ ಹೋಗುವುದೆಂದು ತೀರ್ಮಾನಿಸಿದರು. ಅಂತೆಯೇ ನಾವು ನಮ್ಮ  ಮನೆಯಿಂದ ಹೊರಟು ಜಯಪುರ ಮಾರ್ಗವಾಗಿ ಗುಡ್ಡೇತೋಟದ ಪ್ರಯಾಣ ಪ್ರಾರಂಭಿಸಿದೆವು. ಆದರೆ ನಾವು ಕಾಲ್ನಡಿಗೆಯಲ್ಲಿ ಜಯಪುರ ತಲುಪಿದಾಗ ಅಲ್ಲಿನ ಹೋಟೆಲ್ ಮತ್ತು ಅಂಗಡಿಗಳೆಲ್ಲಾ ಮುಚ್ಚಿದ್ದು ಕಂಡು ನಮಗೆ ಆಶ್ಚರ್ಯವಾಯಿತು. ಅಂದು ೧೯೬೪ನೇ ಇಸವಿಯ ಮೇ ೨೭ನೇ ತಾರೀಕು ಆಗಿತ್ತು. ನಮಗೆ ಆ ದಿನ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರು ಅವರು ತೀರಿಕೊಂಡಿರುವರೆಂಬ ಸಮಾಚಾರ ಗೊತ್ತಾಯಿತು.
------- ಮುಂದುವರಿಯುವುದು-----

No comments: