Tuesday, March 10, 2020

ಬಾಲ್ಯ ಕಾಲದ ನೆನಪುಗಳು – ೬೯


ನಾನಿದ್ದ ಪರಿಸ್ಥಿತಿಯಿಂದ ಅಣ್ಣನ ಮನಸಿಗೆ ಬೇಜಾರು ಮಾಡದೇ ಹೊರಬರಲು ನಾನೇದರೂ ಉಪಾಯ  ಮಾಡಲೇ ಬೇಕಿತ್ತು. ತುಂಬಾ ಯೋಚಿಸಿದಾಗ ನನಗೊಂದು ಐಡಿಯಾ ಹೊಳೆಯಿತು. ತಂದೆಯವರ ಒಪ್ಪಿಗೆ ಪಡೆದು ನಾನು ಶೃಂಗೇರಿಗೆ ಹೋಗುತ್ತೇನೆಂದು ಅಣ್ಣನಿಗೆ ಹೇಳಿ ಬೆಳ್ಳಿ ಲೋಟಗಳೊಡನೆ ಮನೆಯಿಂದ ಹೊರಟು ಬಿಟ್ಟೆ. ಅರ್ಧ ಗಂಟೆಯ ನಂತರ ಮನೆಗೆ ಹಿಂದಿರುಗಿದೆ. ವಾಪಾಸ್ ಬಂದ ನನ್ನನ್ನು ನೋಡಿ ಅಣ್ಣನಿಗೆ ಪರಮಾಶ್ಚರ್ಯವಾಯಿತು. ಅವನು ಕಾರಣವನ್ನು ಕೇಳಿದಾಗ ನಮ್ಮಿಬ್ಬರ ಸಂಭಾಷಣೆ ಕೆಳಕಂಡಂತಿತ್ತು:
ನಾನು :  ನನಗೆ ದಾರಿಯಲ್ಲಿ ಪುರದಮನೆ ಪುರದಮನೆ ಶ್ರೀನಿವಾಸ ಸುಬ್ರಹ್ಮಣ್ಯಂ ಸಿಕ್ಕಿದರು.
ಅಣ್ಣ: ಆಮೇಲೆ?
ನಾನು: ಅವರು ಹೈಸ್ಕೂಲ್ ಜೂನ್ ೧ನೇ ತಾರೀಕು ಶುರುವಾಗಿದ್ದರೂ ನಾನ್ಯಾಕೆ ಇನ್ನೂ ಶಿವಮೊಗ್ಗೆಗೆ ಹೋಗಿಲ್ಲವೆಂದು ಕೇಳಿದರು.
ಅಣ್ಣ: ನೀನೇನು ಹೇಳಿದೆ?
ನಾನು: ನಿನಗೆ ಇಲ್ಲಿಯವರೆಗೂ ನನಗೆ ಶಿವಮೊಗ್ಗೆಗೆ ಹೋಗಲು ಬೇಕಾದಷ್ಟು ಹಣ ಒದಗಿಸಲಾಗಿಲ್ಲವೆಂದು ಹೇಳಲೇ ಬೇಕಾಯಿತು.
ಅಣ್ಣ (ಸ್ವಲ್ಪ ಗಾಭರಿಯಿಂದ): ನೀನು ಶೃಂಗೇರಿಗೆ ಬೆಳ್ಳಿ ಲೋಟಗಳನ್ನು ಮಾರಲು ಹೋಗುತ್ತಿರುವುದಾಗಿ ಹೇಳಿ ಬಿಟ್ಟೆಯಾ ?
ನಾನು: ಇಲ್ಲ.
ಅಣ್ಣ (ಸ್ವಲ್ಪ ಸಮಾಧಾನದಿಂದ): ಆಮೇಲೆ?
ನಾನು: ಅವರು ನನ್ನನ್ನು ಪುರದಮನೆಗೆ ಕರೆದುಕೊಂಡು ಹೋಗಿ ೫೦ ರೂಪಾಯಿ ಕೈಗೆ ಕೊಟ್ಟು ಬಿಟ್ಟರು.
ನಮ್ಮ ತಂದೆಯವರು ಸ್ವಲ್ಪ ದೂರದಿಂದ ನನ್ನ ಸುಳ್ಳು ಹೇಳುವ ನಾಟಕವನ್ನು ನೋಡುತ್ತಲೇ ಇದ್ದರು. ಅವರಿಗೆ ನನ್ನ  ಅಭಿನಯ ತೃಪ್ತಿ ನೀಡಿತೆಂದು ಅನಿಸಿತು. ನಾನು ನನ್ನ ನಾಟಕದಲ್ಲಿ ಅವರ ಪಾತ್ರವನ್ನು ಬಯಲು ಮಾಡಿರಲಿಲ್ಲ. ಅಲ್ಲದೇ ನಾನು ಬೆಳ್ಳಿ ಲೋಟದ ವಿಷಯವನ್ನು ಶ್ರೀನಿವಾಸ ಸುಬ್ರಹ್ಮಣ್ಯಂ ಅವರಿಗೆ ಹೇಳಿಲ್ಲವೆಂಬ ವಿಷಯ  ಅಣ್ಣನಿಗೆ ಎಷ್ಟೋ ನೆಮ್ಮದಿ ನೀಡಿತ್ತು. ಆದರೆ ನಾನು ಕಟ್ಟಿ ಹೇಳಿದ ಕಥೆ ಅವನಿಗೆ ಸಂಪೂರ್ಣವಾಗಿ ನಂಬುವಂತಿಲ್ಲವೆಂದು ಅನಿಸಿರಬೇಕು. ಇನ್ನು ನಮ್ಮ ಆರ್ಥಿಕ ಪರಿಸ್ಥಿತಿ ಇನ್ನೊಬ್ಬರಿಗೆ ಸಂಪೂರ್ಣ ಗೊತ್ತಾಗುವುದೂ ಅವನಿಗೆ ಇಷ್ಟವಾಗದ ವಿಷಯವಾಗಿತ್ತು. ಒಟ್ಟಿನಲ್ಲಿ ನಾನಂತೂ ಒಂದು ಸಂದಿಗ್ದ ಪರಿಸ್ಥಿತಿಯಿಂದ ಹೊರಗೆ ಬಂದು ಬಿಟ್ಟಿದ್ದೆ.
ಶಿವಮೊಗ್ಗೆಗೆ ನನ್ನ  ಒಂಟಿ  ಪ್ರಯಾಣ
ಕೈಗೆ ಹಣ ಸಿಕ್ಕಿದ್ದರಿಂದ ನಾನು ಆ ಮಧ್ಯಾಹ್ನವೇ ಮನೆಯಿಂದ ಹೊರಟುಬಿಟ್ಟೆ. ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ನಾನು ಯಾವತ್ತೂ ಜೇಬಿನಲ್ಲಿಟ್ಟುಕೊಂಡಿರಲಿಲ್ಲ. ಕೊಪ್ಪದಿಂದ ನಾನು ಸಿ ಕೆ ಎಂ ಎಸ್ ಬಸ್ ಹಿಡಿದು ಶಿವಮೊಗ್ಗೆಗೆ ಹೊರಟೆ. ನಾನು ಹಿಂದಿನ ಬಾರಿ ಇದೇ ಬಸ್ಸಿನಲ್ಲಿ ಹೋಗುವಾಗ ಇದ್ದ ಅದೇ ಭೀಮಕಾಯದ ಡ್ರೈವರ್ “ಗಲಿವರ್” ಸ್ಟೀಯರಿಂಗ್ ವೀಲ್ ಹಿಡಿದಿದ್ದ. ಅವನ ಮುಂದೆ ಪ್ರಯಾಣಿಕರೆಲ್ಲಾ ಲಿಲಿಪುಟ್ಗಳಂತೆ ಕಾಣುತ್ತಿದ್ದರು. ಮುಂದಿನ ಸೀಟೊಂದರಲ್ಲಿ ಕುಳಿತಿದ್ದ ನನಗೆ ಲೇಲ್ಯಾಂಡ್ ಬಸ್ ಪ್ರಯಾಣ ತುಂಬಾ ಮಜಾ ಎನ್ನಿಸಿತು. ಆದರೆ ನನ್ನ ಮಜಾಕ್ಕೆ ಒಮ್ಮೆಗೆ ಬ್ರೇಕ್ ಬಿತ್ತು. ಬಸ್ ಕುಡುಮಲ್ಲಿಗೆ ದಾಟುವ ವೇಳೆಗೆ ಅದರ ಮುಂದಿನ ಚಕ್ರವೊಂದು ಸಿಡಿದು ಹೋಯಿತು. ಗಲಿವರ್ ತುಂಬಾ ಚಾಕಚಕ್ಯತೆಯಿಂದ ಬಸ್ಸನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಬಿಟ್ಟ.

ಆಗಲೇ ಸಂಜೆಯಾಗ ತೊಡಗಿತ್ತು ಮತ್ತು ಬಸ್ಸಿನಲ್ಲಿ ಸ್ಪೇರ್ ಟೈಯರ್ ಇಲ್ಲವೆಂದು ತಿಳಿದು ನಮಗೆಲ್ಲ ತುಂಬಾ ಗಾಭರಿಯಾಯಿತು. ಏಕಂದರೆ ಟೈಯರ್ ಶಿವಮೊಗ್ಗೆ ಡಿಪೋವಿನಿಂದ ತರಬೇಕಿತ್ತು. ಅಲ್ಲಿಗೆ ವರ್ತಮಾನ ಕಳಿಸುವುದು ಹೇಗೆಂದು ತಿಳಿಯಲಿಲ್ಲ. ಅದೃಷ್ಟಕ್ಕೆ ಆ ವೇಳೆಯಲ್ಲಿ ಅಲ್ಲಿಗೆ ಬಂದ ಲಾರಿ ಡ್ರೈವರ್ ಒಬ್ಬನ ಮೂಲಕ ಶಿವಮೊಗ್ಗೆಗೆ ಮೆಸೇಜ್ ಕಳಿಸಲಾಯಿತು. ಶಿವಮೊಗ್ಗೆಯಿಂದ ಟೈಯರ್ ಬರುವವರೆಗೆ ನಾವೆಲ್ಲಾ ಬೀದಿ ಪಾಲಾಗಿಬಿಟ್ಟೆವು. ಬಸ್ ಪ್ರಯಾಣಿಕರಲ್ಲಿ ನನಗೆ ಪರಿಚಯವಿದ್ದ ಕೆರೆಮನೆ ತಿಮ್ಮಪ್ಪಯ್ಯನವರೂ ಒಬ್ಬರಾಗಿದ್ದರು. ತುಂಬಾ ಮಾತುಗಾರರಾದ ತಿಮ್ಮಪ್ಪಯ್ಯ ಒಬ್ಬ ನುರಿತ ಯಕ್ಷಗಾನ ಕಲಾವಿದರೂ ಆಗಿದ್ದರು. ಪುರದಮನೆಯಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ನವರಾತ್ರಿ ಸಮಾರಾಧನೆಯ ರಾತ್ರಿ ಜಾಗರಣೆಯಲ್ಲಿ ಅವರು ದ್ರೌಪದಿ  ಪಾತ್ರದಲ್ಲಿ ಮಿಂಚುತ್ತಿದ್ದರು. ಪ್ರಯಾಣಿಕರ ಕೋರಿಕೆಯ ಮೇರೆಗೆ ಅವರು ಒಂದು ಯಕ್ಷಗಾನ ಪ್ರಸಂಗದ ಏಕಪಾತ್ರ ಅಭಿನಯ ಮಾಡಿಯೇ ಬಿಟ್ಟರು. ಹಾಗಾಗಿ ನಮಗೆ ಶಿವಮೊಗ್ಗೆಯಿಂದ ಟೈಯರ್ ಬಂದದ್ದೂ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ನಾನು ಶಿವಮೊಗ್ಗೆ ಬಸ್ ಸ್ಟ್ಯಾಂಡ್  ತಲುಪುವಾಗ ರಾತ್ರಿ ೧೦ ಗಂಟೆಯಾಗಿ ಬಿಟ್ಟಿತ್ತು.

ಜಟಕಾ ಬಂಡಿ ಸವಾರಿ
ನಾನು ನನ್ನ ಬಟ್ಟೆ ಮತ್ತು ಇತರ ಸಾಮಾನುಗಳನ್ನು ಹಾಕಿದ ಟ್ರಂಕ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಬಸ್ಸಿನಿಂದ ಇಳಿದಿದ್ದೆ. ಅದು ತುಂಬಾ ಭಾರವಿದ್ದರಿಂದ ನಾನು ಅರುಣಾಚಲಂ ಮೇಷ್ಟ್ರ ಮನೆಗೆ ನಡೆದು ಹೋಗುವುದು ಸಾಧ್ಯವಿರಲಿಲ್ಲ. ಆದ್ದರಿಂದ ನಾನೊಂದು ಜಟಕಾ ಬಂಡಿ (ಟಾಂಗಾ) ಹಿಡಿಯಲೇ ಬೇಕಿತ್ತು. ಆ ದಿನಗಳಲ್ಲಿ ಶಿವಮೊಗ್ಗೆಯ ಜಟಕಾ ಡ್ರೈವರ್ ಹುಡುಗರು ಜಗಳ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಜಟಕಾ ಇಳಿದ ನಂತರ ಅವರ ಬಾಡಿಗೆ ತೀರ್ಮಾನ ಜಗಳವಿಲ್ಲದೇ ಮುಗಿಯುವ ಪ್ರಶ್ನೆಯೇ ಇರಲಿಲ್ಲ. ಇನ್ನು ನನ್ನ ಅನುಭವ ಹೇಗಿರುವುದೋ ಎಂದು ನನಗೆ ತುಂಬಾ ಭಯ ಇತ್ತು.
ನಾನು ಬಸ್ಸಿನಿಂದ ಕೆಳಗಿಳಿಯುತ್ತಲೇ ಒಬ್ಬ ಜಟಕಾ ಹುಡುಗ ನನ್ನ ಕೈಯಿಂದ ಟ್ರಂಕ್ ಕಿತ್ತುಕೊಂಡು ಓಡಿಹೋಗಿ ತನ್ನ ಬಂಡಿಯಲ್ಲಿಟ್ಟುಬಿಟ್ಟ. ನಾನು ಬಾಡಿಗೆ ಎಷ್ಟು ಎಂದು ಕೇಳುವಷ್ಟರಲ್ಲೇ ನನ್ನನ್ನು ಗಾಡಿಯೊಳಗೆ ತಳ್ಳಿ ನಾನೆಲ್ಲಿಗೆ ಹೋಗಬೇಕೆಂದೂ ಕೇಳದೆ ಕುದುರೆಯನ್ನು ಓಡಿಸತೊಡಗಿದ. ನಾನವನಿಗೆ ದುರ್ಗಿಗುಡಿಯ ಪಾರ್ಕ್ ರೋಡಿನಲ್ಲಿದ್ದ ಅರುಣಾಚಲಂ ಮೇಷ್ಟ್ರ ಮನೆಗೆ ಹೋಗಲು ಹೇಳಿದೆ. ಹಾಗೂ ನಾನು ನಾಲ್ಕಾಣೆ (೨೫ ಪೈಸೆ) ಬಾಡಿಗೆ ಮಾತ್ರಾ ಕೊಡುವುದಾಗಿ ಹೇಳಿದೆ. ನಾನು ಬೇರೆಯವರಿಂದ ಆಗಲೇ ಅದೇ ನ್ಯಾಯವಾದ ಬಾಡಿಗೆ ಎಂದು ತಿಳಿದುಕೊಂಡಿದ್ದೆ. ಆದರೆ ಅವನು ನನ್ನ ಮಾತನ್ನು ಕೇಳದವನಂತಿದ್ದ. ಸುಮಾರು ೧೦ ನಿಮಿಷದಲ್ಲಿ ಜಟಕಾ ಅರುಣಾಚಲಂ ಮೇಷ್ಟ್ರ ಮನೆ ಮುಂದಿತ್ತು.
ಟ್ರಂಕ್ ಹಿಡಿದು ಗಾಡಿಯಿಂದಿಳಿದ ನಾನು ಹುಡುಗನಿಗೆ ೨೫ ಪೈಸೆ ಕೊಡಲು ಹೋದೆ. ಆದರೆ ಅವನು ೭೫ ಪೈಸಕ್ಕಿಂತ ಒಂದು ಪೈಸೆ ಕಡಿಮೆಗೆ ತಾನು ಒಪ್ಪುವುದಿಲ್ಲವೆಂದು ಹೇಳಿಬಿಟ್ಟ. ನಾನು ಎಷ್ಟು ಹೇಳಿದರೂ ಅವನು ಅದಕ್ಕಿಂತ ಕಡಿಮೆ ಬಾಡಿಗೆಗೆ ಒಪ್ಪಲಿಲ್ಲ. ಮಾತ್ರವಲ್ಲ. ನನ್ನ ಕೈಯಿಂದ ಟ್ರಂಕ್ ಕಿತ್ತುಕೊಳ್ಳಲು ನೋಡಿದ. ನನಗೆ ತಲೆ ಕೆಟ್ಟು ಹೋದಂತಾಗಿ ಏನು ಮಾಡಬೇಕೆಂದೇ ತಿಳಿಯಲಿಲ್ಲ.
ಪುಣ್ಯಕ್ಕೆ ತಮ್ಮ ಮನೆಯ ಮುಂದೆ ನಡೆಯುತ್ತಿದ್ದ ಗಲಾಟೆ ನೋಡಿ ಅರುಣಾಚಲಂ ಮೇಷ್ಟ್ರು ಬಾಗಿಲು ತೆರೆದು ಹೊರಬಂದರು. ನನ್ನನ್ನು ನೋಡಿದ ಅವರು ನನಗೆ ಟ್ರಂಕಿನೊಡನೆ ಮನೆಯೊಳಗೆ ಹೋಗುವಂತೆ ಹೇಳಿದರು. ಸ್ಕೌಟ್ ಲೀಡರ್ ಆಗಿ ಒಬ್ಬ ಮಿಲಿಟರಿ ಕಮ್ಯಾಂಡರ್ ಪರ್ಸನಾಲಿಟಿ ಹೊಂದಿದ್ದ ಮೇಷ್ಟ್ರು ನನ್ನೊಡನೆ ನಾನೆಷ್ಟು ಬಾಡಿಗೆ ಕೊಡುವೆನೆಂದು ಹೇಳಿದ್ದೆನೆಂದು ವಿಚಾರಿಸಿದರು. ನಾನು ೨೫ ಪೈಸೆ ಮಾತ್ರ ಎಂದು ಹೇಳಿಬಿಟ್ಟೆ. ಮೇಷ್ಟ್ರು ಅಷ್ಟು ಹಣವನ್ನು ನನ್ನಿಂದ ಪಡೆದು ಹುಡುಗನ ಕೈಯಲ್ಲಿತ್ತು ಅವನಿಗೆ ಜಾಗ ಖಾಲಿ ಮಾಡುವಂತೆ ಹೇಳಿ ಬಡ್ಡನೆ  ಬಾಗಿಲು ಹಾಕಿಬಿಟ್ಟರು. ಅಲ್ಲಿಗೆ ಮುಗಿಯಿತು ನನ್ನ ಮೊಟ್ಟ ಮೊದಲ ಜಟಕಾ ಬಂಡಿ ಪ್ರಯಾಣದ ಅನುಭವ!

ನಾನು ಹೀಗೆ ರಾತ್ರಿ ವೇಳೆಗೆ ಯಾವ ಮುನ್ಸೂಚನೆ ಇಲ್ಲದೇ ಬರುವೆನೆಂದು ಅರುಣಾಚಲಂ ಮೇಷ್ಟ್ರು  ದಂಪತಿಗಳಿಗೆ ಏನೂ ಅರಿವಿರಲಿಲ್ಲ. ಅಲ್ಲದೇ ನನ್ನ ಆರ್ಥಿಕ ಪರಿಸ್ಥಿತಿ ಏನೂ ಸರಿ ಇಲ್ಲವೆಂದೂ ಅವರಿಗೆ ಗೊತ್ತಿತ್ತು.  ಆದರೆ ದಂಪತಿಗಳು ಕೊಂಚವೂ  ಬೇಸರವಿಲ್ಲದೇ ನನಗೆ ಒತ್ತಾಯದಿಂದ ಊಟ ಬಡಿಸಿದ ನಂತರವೇ ನಿದ್ದೆ ಮಾಡಲು ಅವಕಾಶ ಕೊಟ್ಟರು.

ನಾನು ಮಾರನೇ ದಿನವೇ ತರಗತಿಗೆ ಹಾಜರಾದೆ. ಸಂಜೆ ಹಾಸ್ಟೆಲಿಗೆ ಹೋಗಿ ಅಪ್ಲಿಕೇಶನ್ ಫಾರಂ ಪಡೆದೆ. ನನಗೆ ಸೀಟ್ ಗ್ಯಾರಂಟಿ ಎಂದೂ ಮತ್ತು ಅಧಿಕೃತ ಪಟ್ಟಿ ಕೆಲವು ದಿನಗಳಲ್ಲೇ ಪ್ರಕಟಿಸುವರೆಂದೂ ತಿಳಿಯಿತು. ನಾನು ಎರಡು ತಿಂಗಳ ಅಡ್ವಾನ್ಸ್ ಮತ್ತು ಇತರೆ ಫೀ ಎಂದು ಒಟ್ಟು ೧೫ ರೂಪಾಯಿ ಕಟ್ಟಬೇಕಾಗಿತ್ತು. ನಾನು ಈ ಮೊದಲೇ ಬರೆದಂತೆ ಹಾಸ್ಟೆಲ್ ಪಕ್ಕದಲ್ಲಿದ್ದ ಅಶ್ವಿನಿ ಹೋಟೆಲಿಗೆ ಹೋಗಿ ಅಡಿಗರ ೧೬ ರೂಪಾಯಿ ಬಾಕಿ ತೀರಿಸಿ ಒಂದು ಕಪ್ ಫ್ರೀ ಜಾಮೂನ್ ತಿಂದು ಬಂದು ಬಿಟ್ಟೆ.

ನನ್ನ ಖೋತಾ ಬಜೆಟ್ ಮತ್ತು ಆರ್ಥಿಕ ಮುಗ್ಗಟ್ಟು
ನಾನು ಆ ರಾತ್ರಿ ಮೇಷ್ಟ್ರ ಮನೆಯಲ್ಲಿ ಕುಳಿತು ನನಗೆ ಸಿಕ್ಕಿದ್ದ ೫೦ ರೂಪಾಯಿಗಳಲ್ಲಿ ಏನೇನು ಖರ್ಚುಗಳಿರುವವೆಂದು ಲೆಕ್ಕ ಹಾಕಿದೆ.
Sl. No.
Head of Expenditure
Amount (Rs.)
1
ಅರುಣಾಚಲಂ ಮೇಷ್ಟ್ರ ಒಂದು ತಿಂಗಳ ಚಾರ್ಜ್
30.00
2
ಹಾಸ್ಟೆಲ್ ಅಡ್ವಾನ್ಸ್
15.00
3
ಅಡಿಗರ ಬಾಕಿ
16.00
4
ನಾನು ಆಗಲೇ ಬಸ್ ಚಾರ್ಜ್ ಇತ್ಯಾದಿಗಳಿಗೆ ಮಾಡಿದ ಖರ್ಚು
4.00
5
ಟೆಕ್ಸ್ಟ್ ಬುಕ್ ಇತ್ಯಾದಿ
10.00

ಒಟ್ಟು ಖರ್ಚಿನ ಎಸ್ಟಿಮೇಟ್
75.00

ಒಟ್ಟಿನಲ್ಲಿ ನನ್ನದು ೨೫ ರೂಪಾಯಿ ಖೋತಾ ಬಜೆಟ್ ಆಗಿತ್ತು! ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಏಕೆಂದರೆ ನನ್ನ ಅಣ್ಣನಿಂದ ನಾನು ಪುನಃ ಹಣ ತರಿಸಿಕೊಳ್ಳುವ ಚಾನ್ಸೆ ಇರಲಿಲ್ಲ. ಅಲ್ಲದೇ ನನ್ನ ಜಾಮೂನ್ ಖರ್ಚನ್ನು ಅವನ ಗಮನಕ್ಕೆ ತರುವ ಪ್ರಶ್ನೆಯೇ ಇರಲಿಲ್ಲ. ಒಟ್ಟಿನಲ್ಲಿ ಇನ್ನೂ ಚಿಕ್ಕ ವಯಸ್ಸಿನಲ್ಲೇ ನಾನೊಂದು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಕ್ಕಿಬಿದ್ದಿದ್ದೆ.

ನಮಗೆ ನಡೆಸಿದ ವಾರ್ಷಿಕ ಪರೀಕ್ಷೆಯ ಕರೆಕ್ಷನ್  ಮಾಡಿದ ಉತ್ತರ ಪತ್ರಿಕೆಗಳನ್ನು ನಮ್ಮ ಮೇಷ್ಟ್ರುಗಳು ನಮಗೆ ಕೊಟ್ಟುಬಿಟ್ಟರು. ನಾನು ತರಗತಿಗೆ ಪ್ರಥಮ ಸ್ಥಾನ ಗಳಿಸಿದ್ದೆ. ಅಣ್ಣನಿಗೆ ಈ ಸಂತೋಷ ಸಮಾಚಾರವನ್ನು ಕೂಡಲೇ ಪತ್ರ ಮುಖೇನ ತಿಳಿಸಿಬಿಟ್ಟೆ. ಹಾಸ್ಟೆಲಿನಲ್ಲಿ ನನ್ನ ಫ್ರೀ ಸೀಟ್ ಸೌಲಭ್ಯವೂ ಮುಂದುವರಿಯಿತು. ನಾನು ಜುಲೈ  ಎರಡನೇ ವಾರ ಹಾಸ್ಟೆಲಿಗೆ ಸೇರಬೇಕಿತ್ತು. ಅದಕ್ಕೆ ಮುನ್ನ ಅರುಣಾಚಲಂ ಮೇಷ್ಟ್ರಿಗೆ ೩೦ ರೂಪಾಯಿ ಸಂದಾಯ ಮಾಡಬೇಕಿತ್ತು. ಆದರೆ ನನ್ನ ಕೈಯಲ್ಲಿದ್ದ ಹಣವೆಲ್ಲಾ ಖರ್ಚಾಗಿ ಹೋಗಿತ್ತು. ಹಾಗಾಗಿ ನಾನು ಮೇಷ್ಟ್ರ ಬಾಕಿ ಹಣ ಸಂದಾಯ ಮಾಡದೇ ಹಾಸ್ಟೆಲಿಗೆ ಹೋಗಿ ಸೇರಿ ಬಿಟ್ಟೆ. ಮೇಷ್ಟ್ರು ದಂಪತಿಗಳು ನನ್ನ ಹಣದ ಬಾಕಿ ವಿಷಯವನ್ನೇ ಎತ್ತದೆ ನನ್ನನ್ನು ಬೀಳ್ಕೊಟ್ಟರು. ಆಗ ನಾನು ಮನದಲ್ಲೇ ಹೇಳಲಾರದ ಹಿಂಸೆ ಅನುಭವಿಸಿ ಬಿಟ್ಟೆ.
------- ಮುಂದುವರಿಯುವುದು-----

No comments: