ಆ ದಿನಗಳಲ್ಲಿ ಕೊಪ್ಪದ ಪೇಟೆಯಲ್ಲಿ ಎರಡು ಪ್ರಸಿದ್ಧ ಮುಸಲ್ಮಾನ ಸಗಟು ವ್ಯಾಪಾರಿಗಳು ಇದ್ದರು. ಒಬ್ಬರು ಮಾವಿನಕಟ್ಟೆ ಸಾಹೇಬರಾದರೆ ಇನ್ನೊಬ್ಬರು ಸಿದ್ದಿ ಸಾಹೇಬರು. ಹೆಚ್ಚಿನ ಶ್ರೀಮಂತ ಜಮೀನ್ದಾರರು ತಮ್ಮ ವಾರ್ಷಿಕ ದಿನಸಿ ಸಾಮಾನುಗಳಿಗೆ ಈ ಎರಡು ಅಂಗಡಿಗಳಿಗೆ ಆರ್ಡರ್ ಕೊಡುತ್ತಿದ್ದರು. ನಮ್ಮ ತಂದೆಯ ಶ್ರೀಮಂತ ಸೋದರಳಿಯಂದಿರಾದ ಮರ್ಡಿ ಕೃಷ್ಣರಾಯರು ಮತ್ತು ಕರಿಗೆರಸಿ ಗಣೇಶಯ್ಯನವರು ಸಿದ್ದಿ ಸಾಹೇಬರ ಮುಖ್ಯ ಗಿರಾಕಿಗಳಾಗಿದ್ದರು. ಹಾಗಾಗಿ ನಮ್ಮ ತಂದೆಯವರಿಗೂ ಅವರ ಪರಿಚಯ ಚೆನ್ನಾಗಿ ಇತ್ತು.
ಬಸ್ ನಿಲ್ದಾಣದ ಎದುರಿಗೇ ಇದ್ದ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ಸಿದ್ದಿ ಸಾಹೇಬರಿಗೆ ನಮ್ಮ ತಂದೆಯವರು ಮೂಟೆಯೊಂದನ್ನು ಹೊತ್ತುಕೊಂಡು ನನ್ನೊಡನೆ ಬೇರೆ ಬೇರೆ ಅಂಗಡಿಗಳಿಗೆ ಅಲೆಯುತ್ತಿರುವುದು ಕಣ್ಣಿಗೆ ಬಿತ್ತಂತೆ. ಅವರು ತಂದೆಯವರನ್ನು ಅಂಗಡಿಯೊಳಗೆ ಕರೆದು ನಮ್ಮ ಅಲೆದಾಟಕ್ಕೆ ಕಾರಣವನ್ನು ವಿಚಾರಿಸಿದರು. ತಂದೆಯವರು ತಮ್ಮ ಬವಣೆಯನ್ನು ಅವರಿಗೆ ಹೇಳಬೇಕಾಯಿತು. ಅವರಿಗೆ ನಮ್ಮ ತಂದೆಯವರ ಬಡತನದ ಅರಿವಿತ್ತು. ಅವರು ಕೂಡಲೇ ಅಂಗಡಿಯ ಕೆಲಸಗಾರನೊಬ್ಬನಿಗೆ ಮೂಟೆಯಲ್ಲಿದ್ದ ಅಡಿಕೆಯನ್ನು ತೂಕ ಮಾಡುವಂತೆ ಹೇಳಿದರು. ಅದರ ತೂಕ ೧೦ ಕಿಲೋಗ್ರಾಮ್ ಇತ್ತು. ಸಾಹೇಬರು ತಂದೆಯವರೊಡನೆ ಅವರಿಗೆ ಎಷ್ಟು ಹಣದ ಅವಶ್ಯಕತೆ ಇತ್ತೆಂದು ವಿಚಾರಿಸಿದರು. ತಂದೆಯವರು ೨೫ ರೂಪಾಯಿ ಎಂದು ಹೇಳುತ್ತಿದ್ದಂತೇ ಪಟಪಟನೆ ೫ ರೂಪಾಯಿನ ೫ ನೋಟುಗಳನ್ನು ಎಣಿಸಿ ಕೊಟ್ಟುಬಿಟ್ಟರು.
ನಮಗೆ ಆ ಕ್ಷಣಕ್ಕೆ ದೇವರೇ ಸಿದ್ದಿ ಸಾಹೇಬರ ರೂಪದಲ್ಲಿ ನಮಗೆ ಹಣ ದೊರೆಯುವಂತೆ ಮಾಡಿದನೆಂದು ಕಾಣಿಸಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಸಾಹೇಬರಿಗೆ ಸಲಾಂ ಮಾಡಿದ ತಂದೆಯವರು ಕೂಡಲೇ ನನ್ನನ್ನು ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ೨೦ ರೂಪಾಯಿ ನನ್ನ ಕೈಮೇಲೆ ಇಟ್ಟರು.
ಅದು ನನಗೆ ಸಾಕಷ್ಟು ಹಣವೇ ಆಗಿತ್ತು. ಆದರೆ ಹಣವನ್ನು ಗಳಿಸಲು ಎಷ್ಟು ಹೋರಾಟ ಮಾಡಬೇಕಾಗುತ್ತದೆ ಎಂಬ ಅನುಭವ ನನಗೆ ಚೆನ್ನಾಗಿ ಆಯಿತು. ಮಾತ್ರವಲ್ಲ. ತಂದೆಯವರು ಆ ವರ್ಷ ಪೂರ್ತಿ ಸಂಸಾರದ ಖರ್ಚನ್ನು ಹೇಗೆ ನಿಭಾಯಿಸುವರೆಂಬ ಚಿಂತೆಯೂ ನನ್ನ ತಲೆಯಲ್ಲಿ ಸೇರಿಕೊಂಡಿತು. ನಮ್ಮ ಸಂಸಾರದ ಬವಣೆಯ ಬಗ್ಗೆ ಚಿಂತೆ ಮಾಡುತ್ತಲೇ ನಾನು ರಾತ್ರಿಯಾಗುವಾಗ ಶಿವಮೊಗ್ಗೆ ತಲುಪಿದೆ.
ಸಿಂಗಲ್ ಶರ್ಟ್ ಸಮಸ್ಯೆ
ನನ್ನ ಹಾಸ್ಟೆಲ್ ಜೀವನವೇನೋ ಮಾಮೂಲಿನಂತೆ ಮುಂದುವರಿಯತೊಡಗಿತು. ಆದರೆ ನನಗೊಂದು ಸಮಸ್ಯೆ ಶುರುವಾಯಿತು. ಅಣ್ಣ ನನಗೆ ಶಿವಮೊಗ್ಗೆಯಲ್ಲಿ ಸ್ಕೂಲ್ ಸೇರಿದಾಗ ಒಂದು ಜೊತೆ ಶರ್ಟ್ ಮತ್ತು ಪೈಜಾಮಗಳನ್ನು ಹೊಲಿಸಿ
ಕೊಟ್ಟಿದ್ದ. ಅದರಲ್ಲಿ ಒಂದು ಶರ್ಟ್ ಹರಿದು ಹೋಗಿ ಧರಿಸಲಾಗದಂತಾಯಿತು. ಇನ್ನೊಂದು ಶರ್ಟ್ ಕೊಳೆಯಾಗಿ ಅದನ್ನು ನಾನು ಒಗೆದ ದಿನ ಬೆಳಿಗ್ಗೆ ಬಿಸಿಲಲ್ಲಿ ಒಣಗಿಸಿದ ನಂತರ ಹಾಕಿಕೊಂಡು ಶಾಲೆಗೆ ಹೋಗಬೇಕಾಗುತ್ತಿತ್ತು. ಎಷ್ಟೋ ದಿನ ಅರ್ಧ ಒಣಗಿದ ಶರ್ಟ್ ಧರಿಸಿ ಶಾಲೆಗೆ ಹೋಗುತ್ತಿದ್ದೆ.
ನನ್ನ ಅಣ್ಣನ ಸ್ನೇಹಿತರಾದ ಗೋಳಿಕಟ್ಟೆ ಕೃಷ್ಣರಾಯರು ಒಮ್ಮೊಮ್ಮೆ ಶಿವಮೊಗ್ಗೆಗೆ ಬಂದಾಗ ನನ್ನ ಕೈಮೇಲೆ ಎರಡು ರೂಪಾಯಿ ಇಟ್ಟು ಹೋಗುತ್ತಿದ್ದರು. ಒಮ್ಮೆ ಹಾಗೆ ಬಂದಾಗ ನನ್ನ ಬೆಳಿಗ್ಗೆ ಶರ್ಟ್ ಒಣಗಿಸುವ ಬವಣೆ ಅವರ ಕಣ್ಣಿಗೆ ಬಿತ್ತು. ಅವರು ನನ್ನನ್ನು ನೆಹರು ರೋಡಿನಲ್ಲಿದ್ದ ಜೆ ಸುಬ್ಬರಾಯರ ಅಂಗಡಿಗೆ ಕರೆದುಕೊಂಡು ಹೋಗಿ ಒಂದು ಶರ್ಟ್ ಹೊಲಿಸಿಕೊಟ್ಟರು.
ಅಲ್ಲಿಗೆ ನನ್ನ ದೈನಂದಿನ ಸಮಸ್ಯೆ ಸ್ವಲ್ಪ ಪರಿಹಾರವಾಯಿತು.
ಕ್ಲಾಸಿಗೆ ಫಸ್ಟ್ ಆದರೂ ಸ್ಕಾಲರ್ಷಿಪ್ ಏಕಿಲ್ಲ?
ನನ್ನ ಹಣಕಾಸಿನ ಸಮಸ್ಯೆಯ ಬಗ್ಗೆ ಚಿಂತಿಸುವಾಗ ಒಂದು ವಿಷಯ ನನಗರ್ಥವಾಗಿರಲಿಲ್ಲ. ಬಸವಾನಿಯಲ್ಲಿ ಮಿಡ್ಲ್ ಸ್ಕೂಲ್ ಓದುತ್ತಿರುವಾಗಲೇ ನನಗೆ ಸರ್ಕಾರದಿಂದ ೩೦ ರೂಪಾಯಿ ವಾರ್ಷಿಕ ಮೆರಿಟ್ ಸ್ಕಾಲರ್ಷಿಪ್ ಮಂಜೂರು ಮಾಡಲಾಗಿತ್ತು. ಹಾಗಿರುವಾಗ ನಾನು ಹೈಸ್ಕೂಲಿನಲ್ಲಿ ತರಗತಿಗೆ ಫಸ್ಟ್ ಬರುತ್ತಿದ್ದರೂ ಆ ಸ್ಕಾಲರ್ಷಿಪ್ ಏಕೆ ಮುಂದುವರಿಸಲಾಗಲಿಲ್ಲ ಎಂದು ತಿಳಿಯಲೇ ಇಲ್ಲ.
ನಾನಿದ್ದ ಪರಿಸ್ಥಿತಿಯಲ್ಲಿ ಎಷ್ಟೇ ಹಣ ನನ್ನ ಕೈಗೆ ಬಂದರೂ ಅದೊಂದು ದೊಡ್ಡ ವರವಾಗಲಿತ್ತು. ನಾನು ನನ್ನಷ್ಟಕ್ಕೇ ಒಂದಲ್ಲ ಒಂದು ದಿನ ಯಾರಾದರೂ ನನಗೆ ಸ್ಕಾಲರ್ಷಿಪ್ ಮಂಜೂರಾಗಿದೆಯೆಂಬ ಶುಭ ಸಮಾಚಾರವನ್ನು ಹೇಳಿಯಾರೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ.
ಬಂತು! ಬಂತು! ಸ್ಕಾಲರ್ಷಿಪ್ ಬಂತು!
ಒಂದು ದಿನ ಸಂಜೆ ನಾನು ಕ್ರಾಫ್ಟ್ ಸಬ್ಜೆಕ್ಟ್ ತೆಗೆದುಕೊಳ್ಳದಿದ್ದರಿಂದ ಒಂದು ಗಂಟೆ ಮೊದಲೇ ಶಾಲೆಯಿಂದ ಹೊರಟು ಹಾಸ್ಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದೆ. ನಮ್ಮ ಶಾಲೆಯ ಹುಡುಗನೊಬ್ಬ ಮಾಮೂಲಿ ಟೈಮ್ ಕ್ಲಾಸ್ ಮುಗಿಸಿ ಬಂದವನು ನನ್ನನ್ನು ನೋಡಿ ನನ್ನ ಹೆಸರನ್ನು ನೋಟೀಸ್ ಬೋರ್ಡಿನಲ್ಲಿ ನೋಡಿದುದಾಗಿ ತಿಳಿಸಿದ. ನನಗೆ ಹಾಸ್ಟೆಲಿನಲ್ಲಿ ಫೀ ಕಟ್ಟದ್ದಕ್ಕಾಗಿ ನನ್ನ ಹೆಸರನ್ನು ನೋಟೀಸ್ ಬೋರ್ಡಿನಲ್ಲಿ ನೋಡಿ ಅಭ್ಯಾಸವಾಗಿತ್ತು. ಅದೇ ರೀತಿ ಶಾಲೆಯ ಯಾವುದೋ ಫೀ ಕಟ್ಟದ್ದಕ್ಕೆ ನನ್ನ ಹೆಸರು ನೋಟೀಸ್ ಬೋರ್ಡಿನಲ್ಲಿ ಹಾಕಿರಬೇಕೆಂದು ಅನಿಸಿತು. ಆದರೆ ಆ ಹುಡುಗ ನನಗೆ ಸಂಸ್ಕೃತ ಸಬ್ಜೆಕ್ಟಿನಲ್ಲಿ ಹೆಚ್ಚು ಅಂಕಗಳನ್ನು ಪಡೆದುದಕ್ಕೆ ಮೆರಿಟ್ ಸ್ಕಾಲರ್ಷಿಪ್ ಮಂಜೂರಾಗಿದೆ ಎಂದು ತಿಳಿಸಿದ.
ಆ ಶುಭ ಸಮಾಚಾರವನ್ನು ಕೇಳಿ ನನಗಾದ ಸಂತಸವನ್ನು ವರ್ಣಿಸಲು ನನಗೀಗ ಸಾಧ್ಯವಾಗುತ್ತಿಲ್ಲ. ನನಗೆ ಅದನ್ನು ತಿಳಿಸಿದ ಹುಡುಗನಿಗೆ ಧನ್ಯವಾದಗಳನ್ನು ಎಷ್ಟು ಹೇಳಿದರೂ ಸಾಲದೆನಿಸಿ ಬಿಟ್ಟಿತು. ನನಗೆಷ್ಟು ಬೇಗ ಹೋಗಿ ಶಾಲೆಯಲ್ಲಿ ನೋಟೀಸ್ ಬೋರ್ಡಿನಲ್ಲಿ ನನ್ನ ಹೆಸರನ್ನು ನೋಡುವೆನೋ ಎನಿಸಿಬಿಟ್ಟಿತು. ನಾನು ತಿಂಡಿಯನ್ನು ಗಬಗಬನೆ ತಿಂದು ಶಾಲೆಗೆ ಓಡಿ ಬಿಟ್ಟೆ. ಹೌದು. ಅದು ನಿಜವಾಗಿತ್ತು. ನನಗೆ ಸಂಸ್ಕೃತ ಸಬ್ಜೆಕ್ಟಿನಲ್ಲಿ ಹೆಚ್ಚು ಅಂಕಗಳನ್ನು ಪಡೆದುದಕ್ಕೆ ಮೆರಿಟ್ ಸ್ಕಾಲರ್ಷಿಪ್ ಮಂಜೂರಾಗಿದೆ ಎಂದು ಅಲ್ಲಿ ಬರೆಯಲಾಗಿತ್ತು.
ನಾನೇನು ಕನಸು ಕಾಣುತ್ತಿಲ್ಲವೆಂದು ತಿಳಿಯಲು ನನ್ನ ಮೈಯನ್ನು ನಾನು ಪದೇ ಪದೇ ಚಿವುಟಿ ನೋಡಿಕೊಂಡೆ. ಮತ್ತು ಪುನಃ ಪುನಃ ನನ್ನ ಹೆಸರನ್ನು ಓದಿದೆ.
ಹಾಗೆಯೇ ನಾನು ಶಾಲೆಯ ಆಫೀಸಿನೊಳಗೆ ಸೀನಿಯರ್ ಕ್ಲರ್ಕ್ ಚಂದ್ರಶೇಖರಯ್ಯನವರು ಕುಳಿತುದನ್ನು ನೋಡಿದೆ. ನಾನು ಅವರ ಹತ್ತಿರ ಸ್ಕಾಲರ್ಷಿಪ್ ಹಣ ಎಷ್ಟಿರಬಹುದೆಂದು ಮತ್ತು ಅದು ಯಾವಾಗ ನನ್ನ ಕೈ ಸೇರುವುದೆಂದೂ ವಿಚಾರಿಸಿದೆ.
ನನ್ನ ಕುತೂಹಲಕ್ಕೆ ಮಿತಿ ಇರಲಿಲ್ಲ. ಅವರು ಇದೊಂದು ಹೊಸದಾಗಿ ಸರ್ಕಾರದಿಂದ ಮಂಜೂರಾದ ಸ್ಕಾಲರ್ಷಿಪ್ ಆದ್ದರಿಂದ ಅದರ ಮೊತ್ತ ಗೊತ್ತಿಲ್ಲವೆಂದೂ ಮತ್ತು ಹಣ ಯಾವಾಗ ಬರುವುದೆಂದು ಹೇಳಲು ಸಾಧ್ಯವಿಲ್ಲವೆಂದೂ ಹೇಳಿದರು. ಅವರ ಪ್ರಕಾರ ಸಾಮಾನ್ಯವಾಗಿ ಸ್ಕಾಲರ್ಷಿಪ್ ಹಣ ೩೦ ರಿಂದ ೪೦ ರೂಪಾಯಿ ಆಗಿರುವುದೆಂದೂ ತಿಳಿಯಿತು.
ಶಾಲೆಯ ಡಿಸೆಂಬರ್ ಕ್ರಿಸ್ಮಸ್ ರಜೆ ಹತ್ತಿರ ಬರುತ್ತಿತ್ತು. ನನಗೆ ನಾನು ರಜೆಗೆ ಊರಿಗೆ ಹೋಗುವ ಮುನ್ನ ಸ್ಕಾಲರ್ಷಿಪ್ ಹಣವನ್ನು ಪಡೆಯ ಬೇಕೆಂಬ ಆತುರವಿತ್ತು. ಹಣ ನನ್ನ ಕೈಗೆ ಬಂದ ಮೇಲೆಯೇ ನನ್ನ ತಂದೆ ತಾಯಿಯವರಿಗೆ ತಿಳಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು. ನನ್ನ ಅದೃಷ್ಟಕ್ಕೆ ರಜೆಗೆ ಇನ್ನೂ ಮೂರು ದಿನಗಳು ಇರುವಾಗಲೇ ಚಂದ್ರಶೇಖರಯ್ಯನವರು ನನ್ನನ್ನು ಕರೆದು ಸ್ಕಾಲರ್ಷಿಪ್ ಹಣ ಬಂದಿರುವುದೆಂದೂ ಮತ್ತು ನಾನು ನನ್ನ ತಂದೆಯವರು ಅಥವಾ ಪೋಷಕರನ್ನು ಕರೆದುಕೊಂಡು ಬಂದರೆ ಹಣವನ್ನು ಕೊಡುವುದಾಗಿ ತಿಳಿಸಿದರು.
ಕಂಚಿ ನನ್ನ ಚಿಕ್ಕಪ್ಪನಾದದ್ದು!
ನನ್ನ ತಂದೆಯವರು ಶಿವಮೊಗ್ಗೆಗೆ ಬರುವ ಸಾಧ್ಯತೆ ಇಲ್ಲದ್ದರಿಂದ ನಾನು ನನಗೆ ತುಂಬಾ ಆತ್ಮೀಯನಾಗಿದ್ದ ಮತ್ತು ಸೆಕೆಂಡ್ ಬಿ ಏ ಓದುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ರಮೇಶ ರಾಮಚಂದ್ರ ಕಂಚಿ (R
R Kanchi) ಎಂಬ ವಿಧ್ಯಾರ್ಥಿಯೊಡನೆ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ತುಂಬಾ ಧೃಡಕಾಯ ವ್ಯಕ್ತಿತ್ವದ ಕಂಚಿ
ನಡೆ ನುಡಿಯಲ್ಲಿಯೂ ಅಷ್ಟೇ ದರ್ಪವನ್ನು ಪ್ರದರ್ಶಿಸುವ ವ್ಯಕ್ತಿಯಾಗಿದ್ದ. ಆದರೆ ನನಗೆ ಅವನಲ್ಲಿ ತುಂಬಾ
ಸಲಿಗೆ ಇತ್ತು. ಅವನು ಕೂಡಲೇ ನನ್ನ ಪೋಷಕನಾಗಿ ಶಾಲೆಗೆ ಬಂದು ಸಹಿ ಮಾಡಲು ಒಪ್ಪಿಕೊಂಡ. ಮಾರನೇ ದಿನ
ಬೆಳಿಗ್ಗೆ ಕಂಚಿ ಸೈಕಲ್ ಮೇಲೆ ನನ್ನನ್ನು ಕೂರಿಸಿಕೊಂಡು ಶಾಲೆಗೆ ಬಂದ. ಚಂದ್ರಶೇಖರಯ್ಯನವರು ಅವನು
ಯಾರೆಂದು ಕೇಳಿದಾಗ ಥಟ್ಟನೆ ನನ್ನ ಚಿಕ್ಕಪ್ಪ ಎಂದು
ಹೇಳಿಬಿಟ್ಟ. ಅವನು ಅದೆಷ್ಟು ಅಧಿಕಾರಯುಕ್ತವಾಗಿ ಹೇಳಿದನೆಂದರೆ ಚಂದ್ರಶೇಖರಯ್ಯನವರಿಗೆ ನಮ್ಮಿಬ್ಬರ
ಸಂಬಂಧದಲ್ಲಿ ಯಾವುದೇ ಅನುಮಾನ ಬರುವ ಪ್ರಶ್ನೆಯೇ ಇರಲಿಲ್ಲ!
ಆದರೆ ಅಲ್ಲಿ ಮತ್ತೊಂದು ಸಮಸ್ಯೆ ಇತ್ತು.
ಚಂದ್ರಶೇಖರಯ್ಯನವರು ಬ್ಯಾಂಕಿನಿಂದ ಕ್ಯಾಶ್ ಡ್ರಾ ಮಾಡಲು ಮರೆತಿದ್ದರು. ಆದ್ದರಿಂದ ನಮಗೆ ಮಾರನೇ ದಿನ
ಬಂದು ಕ್ಯಾಶ್ ಪಡೆಯುವಂತೆ ಹೇಳಿದರು. ಆಗ (ನನ್ನ ಚಿಕ್ಕಪ್ಪ!) ಕಂಚಿಗೆ ಬಂದ ಕೋಪ ಅಷ್ಟಿಷ್ಟಲ್ಲ. ಅವನು
ಚಂದ್ರಶೇಖರಯ್ಯನವರಿಗೆ ಮಾರನೇ ದಿನ ಕ್ಯಾಶ್ ನನ್ನ ಕೈಗೆ ಕೊಡದಿದ್ದರೆ “ಹುಷಾರ್” ಎಂದು ಹೇಳಿಬಿಟ್ಟ.
ನನ್ನ ಕಾತುರತೆ ಬೆಳೆಯುತ್ತಲೇ ಇತ್ತು.
ನನಗೆ ಮುಖ್ಯವಾಗಿ ಎಷ್ಟು ಹಣ ನನ್ನ ಕೈಗೆ ಬರುವುದೋ ಎಂಬ ಕುತೂಹಲವಿತ್ತು. ಮಾರನೇ ದಿನ ಪುನಃ ಕಂಚಿ
ನನ್ನೊಡನೆ ಶಾಲೆಗೆ ಬಂದ. ಮತ್ತು ಚಂದ್ರಶೇಖರಯ್ಯನವರು ಹೇಳಿದಂತೆ ೧೦ ಪೈಸೆ ಸ್ಟಾಂಪ್ ಮೇಲೆ ಸಹಿ ಹಾಕಿದ.
ಅವರು ನನ್ನ ಹತ್ತಿರ ಸ್ಟಾಂಪ್ ಚಾರ್ಜ್ ೧೦ ಪೈಸೆ ಕೊಡುವಂತೆ ಹೇಳಿದರು. ಆಗ ನನ್ನ ಜೇಬಿನಲ್ಲಿ ಒಂದು
ಪೈಸೆ ಕೂಡಾ ಇರಲಿಲ್ಲ. ಅದು ಕಂಚಿಗೂ ಗೊತ್ತಿತ್ತು. ಅವನು
ಕೋಪದಿಂದ ತನ್ನ ಪರ್ಸಿನಿಂದ ೧೦ ಪೈಸೆ ತೆಗೆದು ಅವರ ಟೇಬಲ್ ಮೇಲೆ ಎಸೆದು ಇನ್ನು ಯಾವ ಪಜೀತಿ
ಇಲ್ಲದೆ ಹಣ ನನ್ನ ಕೈಗೆ ಕೊಟ್ಟುಬಿಡುವಂತೆ ಹೇಳಿದ.
ಚಂದ್ರಶೇಖರಯ್ಯನವರು ನನ್ನ ಕೈಗೆ ಒಂದು
ರೂಪಾಯಿ ನೋಟುಗಳ ಒಂದು ಪ್ಯಾಕೆಟ್ ಕೊಟ್ಟು ಅದನ್ನು ಎಣಿಸಿಕೊಳ್ಳುವಂತೆ ಹೇಳಿದರು. ನನ್ನ ಜೀವಮಾನದಲ್ಲೇ
ನಾನು ಅಷ್ಟೊಂದು ಕರೆನ್ಸಿ ನೋಟುಗಳನ್ನು ಒಟ್ಟಿಗೆ ನೋಡಿರಲಿಲ್ಲ! ಆಗ ಕಂಚಿ ಸ್ಕಾಲರ್ಷಿಪ್ ಹಣ ಎಷ್ಟೆಂದು
ಕೇಳಿದಾಗ ಅವರು ಅದು ಪೂರ್ತಿ ಒಂದು ನೂರು ರೂಪಾಯಿ ಎಂದು ಹೇಳಿದರು. ಅದನ್ನು ಕೇಳಿದ ನನ್ನ ತಲೆ ತಿರುಗಿದಂತಾಗಿ
ಕೈ ನಡುಗತೊಡಗಿ ನಾನು ಹಣವನ್ನು ಎಣಿಸಲಾರದೇ ಹೋದೆ. ನನ್ನಿಂದ ಪ್ಯಾಕೆಟ್ ತೆಗೆದುಕೊಂಡ ಕಂಚಿ ಕೂಡಲೇ
ಅದನ್ನು ಎಣಿಸಿ ಸರಿಯಾಗಿ ಒಂದು ನೂರು ರೂಪಾಯಿ ಇರುವುದಾಗಿ ಹೇಳಿದ. ಕೂಡಲೇ ಪ್ಯಾಕೆಟ್ ನನ್ನ ಕೈಗಿತ್ತು
ನನ್ನನ್ನು ಸೈಕಲ್ ಮೇಲೆ ಹಾಸ್ಟೆಲ್ ತಲುಪಿಸಿ ಬಿಟ್ಟ. ಹೀಗೆ ನನಗೆ ಕಂಚಿಯ ಮೂಲಕ ಅತಿ ದೊಡ್ಡ ಕಾಂಚಾಣವೇ
ಕೈಗೆ ಬಂದು ಬಿಟ್ಟಿತು.
------- ಮುಂದುವರಿಯುವುದು-----
No comments:
Post a Comment