ನನ್ನ ಕೈಯಲ್ಲೇನೋ
ಸ್ಕಾಲರ್ಷಿಪ್ ಹಣದ ಒಂದು ಪುಟ್ಟ ಗಂಟೇ ಬಂದು ಬಿಟ್ಟಿತ್ತು. ಆದರೆ ನನಗೆ ಎಷ್ಟೋ ಬಾಕಿ ತೀರಿಸ ಬೇಕಿತ್ತು. ಮೊಟ್ಟ ಮೊದಲು ನಾನು ಹಾಸ್ಟೆಲ್ ಫೀ ಬಾಕಿ ತೀರಿಸಿ ಬಿಟ್ಟೆ. ಅಷ್ಟಲ್ಲದೇ ಒಂದು ತಿಂಗಳ ಫೀ ಅಡ್ವಾನ್ಸ್ ಪೇಮೆಂಟ್ ಕೂಡ ಮಾಡಿಬಿಟ್ಟೆ. ಆದರೆ ನನ್ನದೊಂದು ಅತಿ ಮುಖ್ಯ ಹಳೇ ಬಾಕಿ ತೀರ್ಮಾನ ಮಾಡುವುದಿತ್ತು. ಅದೇ ಅರುಣಾಚಲಂ ಮೇಷ್ಟ್ರ ಒಂದು ತಿಂಗಳ ಮೆಸ್ ಚಾರ್ಜ್ ೩೦ ರೂಪಾಯಿ. ಆಗ ನನಗೆ ಆ ದಿನವೇ ಬುಧವಾರ ಎಂದು ಗಮನಕ್ಕೆ ಬಂತು. ಅಂದು ಸಂಜೆ ಸ್ಕೌಟ್ ಭವನದಲ್ಲಿ ಮೇಷ್ಟ್ರು ಹಾಜರಿರುವರೆಂದು ನನಗೆ ಗ್ಯಾರಂಟಿಯಾಗಿ ಗೊತ್ತಿತ್ತು. ನಾನು ತಡ ಮಾಡದೇ ಅಲ್ಲಿಗೆ ಹೋಗಿ ಅವರನ್ನು ಅವರನ್ನು ಭೇಟಿಯಾದೆ.
ಅವರ ಹಳೇ ಬಾಕಿಯನ್ನು ತೀರಿಸಿಬಿಡಬೇಕೆಂಬ ನನ್ನ ಉತ್ಸಾಹ ಮತ್ತು ಉದ್ವೇಗವನ್ನು ನೋಡಿ ಅವರಿಗೆ ಸ್ವಲ್ಪ ಆತಂಕವೇ ಆಯಿತು. ನನ್ನ ಅರೋಗ್ಯ ಸರಿ ಇರುವುದೇ ಎಂದು ವಿಚಾರಿಸಿದರು. ಆಗ ನಾನು ನನಗೆ ೧೦೦ ರೂಪಾಯಿ ಸಂಸ್ಕೃತ ಸಬ್ಜೆಕ್ಟ್ ಮೆರಿಟ್ ಸ್ಕಾಲರ್ಷಿಪ್ ಬಂದಿರುವುದೆಂದೂ ಮತ್ತು ಅವರ ೩೦ ರೂಪಾಯಿ ಬಾಕಿಯನ್ನು ತೀರಿಸಲು ಬಂದಿರುವುದಾಗಿ ಹೇಳಿದೆ. ನೀವು ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಮೇಷ್ಟ್ರು ನನ್ನಿಂದ ಪೇಮೆಂಟ್ ಬಾಕಿ ಇರುವುದು ಅವರಿಗೆ ಗೊತ್ತೇ ಇರಲಿಲ್ಲವೆಂದು ಹೇಳಿದರು! ಆದರೆ ನಾನೇ ಅದನ್ನು ಹೇಳುತ್ತಿರುವುದರಿಂದ ಹಣವನ್ನು ಸ್ವೀಕರಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದರು. ಹಾಗೂ ನನಗೆ ಸ್ಕಾಲರ್ಷಿಪ್ ಪಡೆದುದಕ್ಕೆ ಅಭಿನಂದನೆ ಮಾಡಿದರು. ಆಗ ನನ್ನ ಕಣ್ಣಲ್ಲಿ ನೀರು ಬಂದು ಬಿಟ್ಟಿತು.
ಓಂ! ಶ್ರೀ ಗುರುಭ್ಯೂ ನಮಃ
ದೊಡ್ಡ ಮೊತ್ತದ ಹಣ ಕೈ ಸೇರಿದ ಖುಶಿಯಲ್ಲಿದ್ದ ನನಗೆ ಇದ್ದಕ್ಕಿದ್ದಂತೇ ನನಗೆ ಸ್ಕಾಲರ್ಷಿಪ್ ದೊರೆಯಲು ಮೂಲ ಕಾರಣ ಯಾರು ಎಂಬುದು ಅರಿವಿಗೆ ಬಂತು. ಅವರು ಬೇರಾರೂ ಅಲ್ಲ. ನನ್ನ ಸಂಸ್ಕೃತ ಮೇಷ್ಟ್ರು ನಂಜುಂಡ ಶಾಸ್ತ್ರಿಯವರು. ಅವರು ನನಗೆ ಯಾವಾಗಲೂ ೧೦೦ಕ್ಕೆ ೯೦ ರಿಂದ ಮೇಲ್ಪಟ್ಟು ಅಂಕಗಳನ್ನು ಕೊಡುತ್ತಿದ್ದರು. ನಾನು ನನ್ನ ಆನ್ಸರ್ ಪೇಪರಿನಲ್ಲಿ ಒಮ್ಮೆ ಅವರು ನನಗೆ ೧೦೦ಕ್ಕೆ ೧೧೭ ಅಂಕಗಳನ್ನು ಕೊಟ್ಟು ಆಮೇಲೆ ಅದನ್ನು ಕಟ್ ಮಾಡಿ ೯೮ಕ್ಕೆ ತಂದಿಟ್ಟದ್ದನ್ನು ಕೂಡ ನೋಡಿದ್ದೆ!
ಕಾರಣವಿಷ್ಟೇ. ಶಾಸ್ತ್ರಿಗಳು ಯಾವುದೇ ಪ್ರಶ್ನೆಗಳಿಗೆ ಇಂತಿಷ್ಟು ಅಂಕಗಳೆಂದು ಪ್ರಶ್ನೆ ಪತ್ರಿಕೆಯಲ್ಲಿ ನಿಗದಿ ಮಾಡಿರುತ್ತಿರಲಿಲ್ಲ. ನಾವು ಬರೆದ ಉತ್ತರಗಳಿಗೆ ಅವರ ತೀರ್ಮಾನದ ಪ್ರಕಾರ ಅಂಕಗಳನ್ನು ಹಾಕುತ್ತಾ ಹೋಗಿ ಕೊನೆಗೆ ಒಟ್ಟು ಅಂಕಗಳು ಎಷ್ಟು ಬಂದವೆಂದು ಲೆಕ್ಕ ಮಾಡುತ್ತಿದ್ದರು. ಹಾಗಾಗಿ ನನಗೆ ೧೦೦ಕ್ಕೂ ಹೆಚ್ಚು ಅಂಕಗಳು ಒಮ್ಮೆ ಬಂದುದರಲ್ಲಿ ಆಶ್ಚರ್ಯವೇನಿರಲಿಲ್ಲ. ಹಾಗಾದುದನ್ನು ಕಂಡ ಮೇಲೆ ಕೆಲವು ಪ್ರಶ್ನೆಗಳಿಗೆ ಅಂಕಗಳನ್ನು ಕಡಿಮೆ ಮಾಡಿ ೧೦೦ರ ಒಳಗೆ ತಂದಿದ್ದರು ಅಷ್ಟೇ!
ಪ್ರಾಯಶಃ ಸರ್ಕಾರದ ವಿದ್ಯಾ ಇಲಾಖೆಯವರಿಗೆ ನಾನು ಸಂಸ್ಕೃತ ಸಬ್ಜೆಕ್ಟಿನಲ್ಲಿ ತೆಗೆದುಕೊಳ್ಳುತ್ತಿದ್ದ ಅಂಕಗಳನ್ನು ನೋಡಿ ನಾನೊಬ್ಬ ಬೃಹಸ್ಪತಿ ಇರಬೇಕು ಎಂದು ತೀರ್ಮಾನಿಸಿ ೧೦೦ ರೂಪಾಯಿ ಸ್ಕಾಲರ್ಷಿಪ್ ಮಂಜೂರು ಮಾಡಿದ್ದರೆ ಅದರಲ್ಲಿ ಆಶ್ಚರ್ಯವೇನಿರಲಿಲ್ಲ!
ನಾನು ಆ ಸಂಜೆಯೇ ಶಾಸ್ತ್ರಿಗಳ ದುರ್ಗಿಗುಡಿಯ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದೆ. ನನಗೆ ಸ್ಕಾಲರ್ಷಿಪ್ ಬಂದ ವಿಷಯ ತಿಳಿದು ಅವರಿಗೆ ತುಂಬಾ ಸಂತೋಷವಾಯಿತು. ನಾನು ಅವರ ಕೈಮೇಲೆ ೧೦ ರೂಪಾಯಿ ಇಟ್ಟು ದೀರ್ಘ ದಂಡ ನಮಸ್ಕಾರ ಮಾಡಿಬಿಟ್ಟೆ. ಕೇವಲ ೩೦ ರೂಪಾಯಿ ತಿಂಗಳ ಸಂಬಳದಲ್ಲಿ ಸಂಸಾರ ನಡೆಸುತ್ತಿದ್ದ
ಶಾಸ್ತ್ರಿಯವರ ಸಂಸಾರದ ಬವಣೆಯ ಬಗ್ಗೆ ನಾನು ಈ ಹಿಂದೆಯೇ ಬರೆದಿದ್ದೇನೆ.
ನಕ್ರ ಪೂಜಾರಿಯ ಸತ್ಯನಾರಾಯಣ ಪೂಜೆ
ಈ ಬಾರಿ ಕ್ರಿಸ್ಮಸ್ ರಜೆಗೆ ಊರಿಗೆ ಹೋಗುವಾಗ ನಾನು ತುಂಬಾ ಉತ್ಸಾಹದಿಂದಿದ್ದೆ. ಆದರೆ ನಾನು ಮನೆ ತಲುಪಿದಾಗ ಅಲ್ಲಿ ತಂಗಿ ಮತ್ತು ತಮ್ಮಂದಿರು ಮಾತ್ರ ಇದ್ದರು. ಪುಟ್ಟಣ್ಣನಿನ್ನೂ ರಜೆಗೆ ಊರಿಗೆ ಬಂದಿರಲಿಲ್ಲ. ತಂದೆ ತಾಯಿಯರು ಕನಮಡ್ಲು ಎಂಬಲ್ಲಿ ನಕ್ರ ಪೂಜಾರಿ ಎಂಬ ಮೇಸ್ತ್ರಿ ಮತ್ತು ಜಮೀನ್ದಾರ ನಡೆಸಿದ್ದ ಸತ್ಯನಾರಾಯಣ ಪೂಜೆಗೆ ಅಡಿಗೆ ಮಾಡಲು ಹೋಗಿದ್ದರು. ವಿವಿಧ ವಿದ್ಯೆಗಳಲ್ಲಿ ಪಳಗಿದ್ದ ನಮ್ಮ ತಂದೆಯವರು ಪಾಕಶಾಸ್ತ್ರ ಪ್ರವೀಣರೂ ಆಗಿದ್ದರು.
ನಕ್ರ ಪೂಜಾರಿ ನಮ್ಮೂರಿಗೆ ದಕ್ಷಿಣ ಕನ್ನಡದಿಂದ ಆಳುಗಳನ್ನು ಕರೆತಂದು ಅಡಿಕೆ ತೋಟಗಳಲ್ಲಿ ಕೆಲಸ ಮಾಡಿಸುವ ಮೇಸ್ತ್ರಿಯಾಗಿದ್ದ. ಪುರದಮನೆ ಶ್ರೀನಿವಾಸಯ್ಯನವರು ಅವನಿಗೆ ತಮಗೆ ಕನಮಡಿಲಿನಲ್ಲಿ ಇದ್ದ ಬತ್ತದ ಗದ್ದೆಯನ್ನು ಗೇಣಿಗೆ ಕೊಟ್ಟು ಅಲ್ಲಿದ್ದ ಮನೆಯಲ್ಲಿಯೇ ವಾಸ ಮಾಡುವ ಏರ್ಪಾಟು ಮಾಡಿದ್ದರು. ಮುಂದೆ ಭೂಸುಧಾರಣೆ ಕಾನೂನು ಬಂದಾಗ ಶ್ರೀನಿವಾಸಯ್ಯನವರ ಗದ್ದೆ ಸಂಪೂರ್ಣವಾಗಿ ನಕ್ರ ಪೂಜಾರಿಯ ಒಡೆತನಕ್ಕೆ ಬಂದು ಅವನೊಬ್ಬ ಶ್ರೀಮಂತ ಜಮೀನ್ದಾರನಾಗಿ ಬಿಟ್ಟ. ನಮ್ಮ ತಂದೆಯವರ ಬಗ್ಗೆ ತುಂಬಾ ಗೌರವ ತೋರಿಸುತ್ತಿದ್ದ ನಕ್ರ ಪೂಜಾರಿ ಅವರು ಮಾಡಿದ ಕೆಲಸಕ್ಕೆ ಒಳ್ಳೆಯ ಪೇಮೆಂಟ್ ಮಾಡುವುದರಲ್ಲಿ ಸಂಶಯವೇ ಇರಲಿಲ್ಲ. ಸ್ಕಾಲರ್ಷಿಪ್ ಬಂದ ಶುಭ ಸಮಾಚಾರವನ್ನು ತಂದೆ ತಾಯಿಯರಿಗೆ ತಿಳಿಸುವ ಆತುರದಲ್ಲಿದ್ದ ನನಗೆ ಅವರು ಸಂಸಾರಕ್ಕಾಗಿ ಮಾಡುತ್ತಿದ್ದ ಹೋರಾಟವನ್ನು ಗಮನಿಸಿ ತುಂಬಾ ಕಸಿವಿಸಿಯಾಯಿತು.
ಅಂದು ಸಂಜೆಯ ವೇಳೆಗೆ ತಾಯಿ ತಂದೆಯರು ಕನಮಡಿಲಿನಿಂದ ವಾಪಾಸ್ ಬಂದರು. ನಕ್ರ ಪೂಜಾರಿ ಅವರ ಕೆಲಸಕ್ಕೆ ಒಳ್ಳೆಯ ಸಂಭಾವನೆ ಕೊಟ್ಟಿದ್ದರಿಂದ ಅವರು ಖುಷಿಯಲ್ಲಿದ್ದುದು ಕಾಣಿಸಿತು. ನಾನು ಅವರಿಗೆ ನನಗೆ ಸ್ಕಾಲರ್ಷಿಪ್ ಬಂದ ವಿಷಯ ತಿಳಿಸಿದಾಗ ಅವರ ಖುಷಿ ಇನ್ನೂ ಹೆಚ್ಚಾಯಿತು. ಒಟ್ಟಿನಲ್ಲಿ ಇನ್ನು ಮುಂದೆ ಅವರು ನನಗೆ ಆ ವರ್ಷದ ವಿದ್ಯಾಭ್ಯಾಸಕ್ಕೆ ಹಣ ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಮಾರನೇ ದಿನ ಪುಟ್ಟಣ್ಣನೂ ರಜೆಗೆ ಊರಿಗೆ ಬಂದ. ಬೆಳವಿನಕೊಡಿಗೆ ಮತ್ತು ಗೋಳಿಕಟ್ಟೆ ಜಮೀನ್ದಾರರು ನಮಗೆ ಗೇಣಿ ಮಾಫಿ ಮಾಡದಿದ್ದರಿಂದ ನಮ್ಮ ತಂದೆಯವರು ಕೇವಲ ವೀಳ್ಯದೆಲೆ ಮತ್ತು ಬಾಳೆ ಹಣ್ಣಿನ ಮಾರಾಟದಿಂದ ಆ ವರ್ಷ ನಮ್ಮ ಸಂಸಾರ ನಿರ್ವಹಿಸಬೇಕಾಗಿತ್ತು.
ಪುಟ್ಟಣ್ಣ ಮತ್ತು ನಾನು ಮುಂದೆ ಬರುವ ಬೇಸಿಗೆ ರಜೆಯಲ್ಲಿ ತಂದೆಯವರಿಗೆ ಸಂಪೂರ್ಣ ಸಹಾಯ ಮಾಡಬೇಕೆಂದು ತೀರ್ಮಾನಿಸಿದೆವು.
ಶಿವಮೊಗ್ಗ ಸುಬ್ಬಣ್ಣ
ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು ನಮ್ಮ ಶಾಲೆಗೆ ಒಳ್ಳೊಳ್ಳೆ ವಿದ್ವಾಂಸರನ್ನು ಕರೆಸಿ ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದರು. ಹಾಗೆ ಕರೆಸಿದವರಲ್ಲಿ ನನಗೆ ತುಂಬಾ ನೆನಪು ಬರುವುದು ಉದಯೋನ್ಮುಖ ಸುಗಮ ಸಂಗೀತ ಕಲಾವಿದರಾಗಿದ್ದ ಶಿವಮೊಗ್ಗ ಸುಬ್ಬಣ್ಣ (ಸುಬ್ರಹ್ಮಣ್ಯ) ಅವರದ್ದು. ಆಗಿನ್ನೂ ೨೫ ವರ್ಷ ವಯಸ್ಸಿನ ತರುಣ ಸುಬ್ಬಣ್ಣ ಬಿಕಾಂ ಪದವೀಧರರಾಗಿ ಇನ್ಕಮ್ ಟ್ಯಾಕ್ಸ್ ಪ್ರಾಕ್ಟೀಸ್ ಆರಂಭಿಸಿದ್ದರು. ಆದರೆ ಆಗಲೇ ಅವರು ತಮ್ಮ ಮಧುರ ಕಂಠದಲ್ಲಿ ಹಾಡುತ್ತಿದ್ದ ಭಾವಗೀತೆಗಳು ಪ್ರಸಿದ್ಧಿ ಪಡೆದಿದ್ದವು.
ಶ್ರೀನಿವಾಸಮೂರ್ತಿಯವರು ಸುಬ್ಬಣ್ಣನವರ ಪರಿಚಯವನ್ನು ತುಂಬಾ ಚೆನ್ನಾಗಿ ಮಾಡಿಕೊಟ್ಟರು.
ಕಾರ್ಯಕ್ರಮ ಕೂಡ ತುಂಬಾ ಚೆನ್ನಾಗಿ ನಡೆಯಿತು.
ಜಾನ್ ಎಫ್ ಕೆನೆಡಿ
ಅಮೆರಿಕಾದ ೩೫ನೇ ಅಧ್ಯಕ್ಷ
ನನ್ನ ನೆನಪಿಗೆ ಬರುವ ಇನ್ನೊಂದು ಮುಖ್ಯ
ಕಾರ್ಯಕ್ರಮ ಅಮೆರಿಕಾದ ಆಗಿನ ಅತ್ಯಂತ ಪ್ರಸಿದ್ಧ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನೆಡಿ ಅವರ ಕೊಲೆಯಾದಾಗ ನಡೆದ ಶೋಕ ಸಭೆ. ಆಗಿನ್ನೂ ೪೬ನೇ ವಯಸ್ಸಿನ
ಕೆನೆಡಿಯವರು ನಮ್ಮಂತ ಚಿಕ್ಕವರಿಗೂ ಅತ್ಯಂತ ಆಕರ್ಷಣೀಯ ವ್ಯಕ್ತಿಯಾಗಿದ್ದರು. ೨೨ನೇ ನವೆಂಬರ್ ೧೯೬೩ರಂದು
ಅಮೆರಿಕಾದ ಡಲ್ಲಾಸ್ ನಲ್ಲಿ ಓಪನ್ ಕಾರಿನಲ್ಲಿ ತನ್ನ ಪತ್ನಿ ಜಾಕೆಲಿನ್ ಒಡನೆ ಜನಗಳ ಮಧ್ಯ ಸಾಗುತ್ತಿದ್ದ
ಕೆನೆಡಿಯವರನ್ನು ಹಾರ್ವೆ ಓಸ್ವಾಲ್ಡ್ ಎನ್ನುವ ಹಂತಕ ಗುಂಡಿಕ್ಕಿ ಕೊಂದು ಬಿಟ್ಟಿದ್ದ. ವಿಚಿತ್ರವೆಂದರೆ
ಈ ಕೊಲೆಗಾರನನ್ನು ಜಾಕ್ ರೂಬಿ ಎನ್ನುವ ಇನ್ನೊಬ್ಬ ಹಂತಕ ಕೇವಲ ಎರಡು ದಿನಗಳ ನಂತರ ಗುಂಡಿಕ್ಕಿ ಕೊಂದು
ಬಿಟ್ಟ! ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು
ನಮಗೆ ಕೆನೆಡಿಯ ಬಗ್ಗೆ ಸಂಪೂರ್ಣ ವಿವರಗಳನ್ನು ಹೇಳುತ್ತಾ
ಅವರ ಕೊಲೆಯಾದ ಸಂಗತಿಯನ್ನು ತಿಳಿಸುವಾಗ ಅತ್ತೇ ಬಿಟ್ಟರು. ಅವರ ಮಾತುಗಳು ನಮ್ಮ ಮೇಲೆ ಎಷ್ಟು ಪ್ರಭಾವ
ಬೀರಿದವೆಂದರೆ ನಮ್ಮ ಕಣ್ಣುಗಳಲ್ಲೂ ನೀರು ಹರಿಯ ತೊಡಗಿತು.
ನನ್ನ
ಕ್ರಿಕೆಟ್ ಕಾಮೆಂಟರಿ ಹುಚ್ಚು
ಹಾಸ್ಟೆಲಿನಲ್ಲಿ ಪ್ರತಿ ನಿತ್ಯ ಇಂಗ್ಲಿಷ್
ನ್ಯೂಸ್ ಪೇಪರ್ ಓದುವಾಗ ನಾನು ಕ್ರಿಕೆಟ್ ಪಂದ್ಯಗಳ ಬಗ್ಗೆ ಕೂಡ ಓದುತ್ತಿದ್ದೆ. ನನಗೆ ೬ನೇ ತರಗತಿಯಲ್ಲಿ ಓದುವಾಗ
ಜಾಮ್ ಸಾಹಿಬ್ ಆಫ್ ನವಾನಗರ್ ಎಂಬ ಇಂಗ್ಲಿಷ್ ಪಾಠ
ಕ್ರಿಕೆಟ್ ಬಗ್ಗೆ ಇತ್ತು. ಅದರಲ್ಲಿ ಹಜಾರೆ ಎಂಬ ಆಟಗಾರ ಪ್ರಪಂಚದ ೧೧ ಜನ ಉತ್ತಮ ಕ್ರಿಕೆಟ್ ಆಟಗಾರರಲ್ಲಿ
ಒಬ್ಬನೆಂದಿತ್ತು. ಆದರೆ ನನಗಾಗ ಕ್ರಿಕೆಟ್ ಆಟದ ಗಂಧ ಗಾಳಿ ಇರಲಿಲ್ಲ. ನಮ್ಮ
ಹಾಸ್ಟೆಲಿನಲ್ಲಿ ನನ್ನ ರೂಮ್ ಮೇಟ್ ಅನಂತ ಮತ್ತು ಇನ್ನು ಕೆಲವು ಹುಡುಗರು ಶಿವಮೊಗ್ಗೆಯ ಹತ್ತಿರವಿದ್ದ
ಮತ್ತೂರಿನವರಾಗಿದ್ದರು. ಅವರಿಗೆಲ್ಲ ಕ್ರಿಕೆಟ್ ಎಂದರೆ ಜೀವ ಮತ್ತು ಅವರದೇ ಒಂದು ಕ್ರಿಕೆಟ್ ಟೀಮ್
ಕೂಡ ಇತ್ತು. ನಾನು ಅವರೊಡನೆ ಸೇರಿಕೊಂಡು ಕ್ರಿಕೆಟ್ ಆಟದ ಬಗ್ಗೆ ವಿವರವಾಗಿ ತಿಳಿದುಕೊಂಡೆ.
ಅವರು
ನನಗೆ ಸದ್ಯದಲ್ಲೇ ಇಂಗ್ಲಿಷ್ ಕ್ರಿಕೆಟ್ ಟೀಮ್ ಇಂಡಿಯಾಕ್ಕೆ ಐದು ಟೆಸ್ಟ್ ಮ್ಯಾಚ್ ಸೀರೀಸ್ ಆಡಲು ಬರುವುದೆಂದು
ತಿಳಿಸಿದರು. ಹಾಗೆಯೇ ನಾನು ರಜೆಯ ದಿನಗಳಲ್ಲಿ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳಬಹುದೆಂದೂ
ಹೇಳಿದರು. ಅಷ್ಟು ಮಾತ್ರವಲ್ಲ. ಅವರು ನನಗೆ ಕಾಮೆಂಟರಿ ಕೇಳಲೂ ಕೂಡ ಏರ್ಪಾಟು ಮಾಡಲು ಒಪ್ಪಿದರು.
ಆ ವರ್ಷ ಜನವರಿ ತಿಂಗಳಲ್ಲಿ ಮೈಕ್ ಸ್ಮಿಥ್
ಕ್ಯಾಪ್ಟನ್ ಆಗಿದ್ದ ಇಂಗ್ಲಿಷ್ ಟೀಮ್ ಭಾರತಕ್ಕೆ ಬಂತು. ನನ್ನ ಮತ್ತೂರು ಸ್ನೇಹಿತರು ನಮ್ಮ ಹಾಸ್ಟೆಲ್
ವಾರ್ಡನ್ ಮಂಗಳಮೂರ್ತಿಯವರೊಡನೆ ಒಳ್ಳೆ ವ್ಯವಸ್ಥೆ ಮಾಡಿ ನನ್ನನ್ನು ಅವರೊಡನೆ ವಾರ್ಡನ್ ಅವರ ಮನೆಯಲ್ಲೇ
ಕಾಮೆಂಟರಿ ಕೇಳುವ ಹಾಗೆ ಮಾಡಿ ಬಿಟ್ಟರು. ಆ ಟೀಮಿನೊಡನೆ ಆಡಿದ ಐದು ಟೆಸ್ಟ್ ಮ್ಯಾಚ್ ಕೂಡ ಡ್ರಾದಲ್ಲಿ
ಮುಕ್ತಾಯವಾದುವು. ಆದರೆ ನನಗೆ ಬುಧಿ ಕುಂದರನ್ ಅವರು ಮದ್ರಾಸ್ ಟೆಸ್ಟಿನಲ್ಲಿ ೧೯೨ ರನ್ ಹೊಡೆದುದನ್ನು
ಮತ್ತು ಹನುಮಂತ್ ಸಿಂಗ್ ತನ್ನ ಮೊದಲ ಟೆಸ್ಟಿನಲ್ಲಿಯೇ ಸೆಂಚುರಿ ಬಾರಿಸಿದುದನ್ನೂ ಕಾಮೆಂಟರಿ ಮೂಲಕ
ಕೇಳುವ ಸೌಭಾಗ್ಯ ಒದಗಿ ಬಂತು. ಅಲ್ಲಿಂದ ನನ್ನ ಕ್ರಿಕೆಟ್ ಕಾಮೆಂಟರಿ ಹುಚ್ಚು ಆರಂಭವಾಯಿತು.
ನನ್ನ ಕೈಯಲ್ಲಿದ್ದ ಸ್ಕಾಲರ್ಷಿಪ್ ಹಣ
ನಮ್ಮ ಮಾರ್ಚ್ ತಿಂಗಳ ವಾರ್ಷಿಕ ಪರೀಕ್ಷೆ ಮುಗಿಯುವ ವೇಳೆಗೆ ಸಂಪೂರ್ಣವಾಗಿ ಖರ್ಚಾಯಿತು. ಆದರೆ ಹಿಂದಿನ
ವರ್ಷದ ಹಾಗೆ ಯಾವುದೇ ಬಾಕಿ ಇಲ್ಲದಂತೆ ಹಾಸ್ಟೆಲಿನ ಹಾಗೂ ಶಾಲೆಯ ಫೀ ಸಂಪೂರ್ಣವಾಗಿ ಕಟ್ಟಿ ನಾನು ಊರಿಗೆ
ಹೊರಟು ಬಿಟ್ಟೆ.
------- ಮುಂದುವರಿಯುವುದು-----
No comments:
Post a Comment