Saturday, March 14, 2020

ಬಾಲ್ಯ ಕಾಲದ ನೆನಪುಗಳು – ೭೦


ನಮ್ಮ ಹಾಸ್ಟೆಲಿಗೊಂದು ಎಕ್ಸಟೆನ್ಶನ್ !
ವರ್ಷ ಹಾಸ್ಟೆಲಿನಲ್ಲಿ  ತುಂಬಾ ವಿದ್ಯಾರ್ಥಿಗಳಿಗೆ ಸೀಟ್ ಕೊಟ್ಟಿದ್ದರಿಂದ ರೂಮುಗಳು ಸಾಲದೇ ಹೋದವು. ಹಾಗಾಗಿ ಹತ್ತಿರದಲ್ಲೇ ಇದ್ದ ಇನ್ನೊಂದು ಹಳೆಯ ಕಟ್ಟಡದೊಳಗೆ ೫ ರೂಮುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಯಿತು. ಕಟ್ಟಡದ ಒಡತಿ ಓರ್ವ ಅಜ್ಜಿ. ಕಟ್ಟಡ ನಮ್ಮ ವಾರ್ಡನ್ ಮನೆಯ ಪಕ್ಕದಲ್ಲೇ ಇದ್ದುದರಿಂದ ಅವರಿಗೆ ನಮ್ಮ ಚಟುವಟಿಕೆಗಳ ಮೇಲೆ ನಿಯಂತ್ರಣ ಇಡಲು ಅನುಕೂಲವಾಗಿತ್ತು. ರೂಮುಗಳು ಚೆನ್ನಾಗಿಲ್ಲದೇ ನಮ್ಮ ಹಾಸ್ಟೆಲಿನ ಹೊರಗಡೆ ಬೇರೆ ಇದ್ದರಿಂದ ಕಾಲೇಜು ವಿದ್ಯಾರ್ಥಿಗಳು ಯಾರಿಗೂ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಹೈಸ್ಕೂಲ್ ವಿದ್ಯಾರ್ಥಿಗಳಾದ ನಾವು ಹೋಗಲೇ ಬೇಕಾಯಿತು. ವಿಷ್ಣುಮೂರ್ತಿಗೆ ವರ್ಷ ಸೀಟ್ ಸಿಕ್ಕಿ ನನಗೂ ಅವನಿಗೂ ಒಂದೇ ರೂಮ್ ಕೊಡಲಾಯಿತು. ನಮ್ಮ ಒಬ್ಬ ರೂಮ್ ಮೇಟ್ ಸಿರಸಿಯ ರಾಮಚಂದ್ರ ಹೆಗ್ಡೆ. ಆದರೆ ನಾಲ್ಕನೇ ರೂಮ್ ಮೇಟ್ ಪುನಃ ದತ್ತಾತ್ರಿಯೇ ಆಗಿದ್ದ. ಕೃಷ್ಣಶರ್ಮನ ಗ್ಯಾಂಗ್ ವರುಷ ಹಾಸ್ಟೆಲಿಗೆ ಸೇರದಿದ್ದರಿಂದ ದತ್ತಾತ್ರಿ ಮಾಮೂಲಿ ಹುಡುಗನಾಗಿಬಿಟ್ಟ.
ಅಜ್ಜಿಯ ಚೆಂದೊಳ್ಳಿ ಚೆಲುವೆ ಮೊಮ್ಮಗಳು
ನಮ್ಮ ಕಟ್ಟಡದ ಒಡತಿ ಅಜ್ಜಿ ಆಗಾಗ  ಬಂದು ನಾವು ರೂಮುಗಳನ್ನು ಚೆನ್ನಾಗಿ ಇಟ್ಟುಕೊಂಡಿಲ್ಲವೆಂದು ಗಲಾಟೆ ಮಾಡುತ್ತಿದ್ದಳು. ನಮಗೆ ಅದೊಂದು ದೊಡ್ಡ ರಗಳೆಯೇ  ಆಗಿತ್ತು. ಆದರೆ ಅಜ್ಜಿಯ ರಗಳೆಯ ನಡುವೆಯೂ ಅವಳ ಕಡೆಯಿಂದ ನಮಗೊಂದು ಆಕರ್ಷಣೆ ನೀಡುವ ಅಂಶ ಇತ್ತು. ಅದೇ ಅವಳ ಮನೆಯಲ್ಲೇ ಇದ್ದ ಅವಳ ಚೆಂದುಳ್ಳಿ ಚೆಲುವೆ ಮೊಮ್ಮಗಳು! ನಾವು ಪ್ರತಿನಿತ್ಯ ಹುಡುಗಿ ನಮ್ಮ ರೂಮುಗಳ ಹತ್ತಿರವಿದ್ದ ಅಜ್ಜಿಯ ಮನೆಯ ಎದುರಿಗೆ ಬಟ್ಟೆಗಳನ್ನು ಒಗೆಯುವುದನ್ನು ನೋಡಬಹುದಾಗಿತ್ತು. ನಮ್ಮ ಹಾಸ್ಟೆಲ್ ಮತ್ತು ಹೈಸ್ಕೂಲಿನಲ್ಲಿ ನಿತ್ಯ ಕೇವಲ ಹುಡುಗರ ಮುಖ ನೋಡುತ್ತಿದ್ದ ನಮಗೆ ಅಜ್ಜಿಯ ಚೆಲುವಿನ ಮೊಮ್ಮಗಳ ನಿತ್ಯ ದರ್ಶನ ಒಂದು ಅಪರೂಪದ ಅವಕಾಶವಾಗಿತ್ತೆಂದರೆ ಅದರಲ್ಲಿ ಅತಿಶಯೋಕ್ತಿ ಏನಿರಲಿಲ್ಲ.

ನಾನು ಹಾಸ್ಟೆಲಿನ ಹೊಸ ವಾತಾವರಣಕ್ಕೆ ಒಗ್ಗಿಕೊಂಡು ಬಿಟ್ಟೆ. ಒಟ್ಟಿನಲ್ಲಿ ನನಗೆ  ನನ್ನ ಪರಿಸ್ಥಿತಿ ಸ್ವಲ್ಪ ಸರಿಹೋಯಿತೆನಿಸಿತು. ಆದರೆ ಆಗಸ್ಟ್ ತಿಂಗಳು ಬರುತ್ತಲೇ ನನ್ನ ಕಳವಳ ಪುನಃ ಪ್ರಾರಂಭವಾಯಿತು. ೧೦ನೇ ತಾರೀಕಿನೊಳಗೆ ನಾನು ಹಾಸ್ಟೆಲ್ ಫೀ  ಕಟ್ಟಬೇಕಾಗಿತ್ತು. ಆದರೆ ಅಷ್ಟು ಹಣ ಕೂಡ ನನಗೆ ಕಳಿಸುವುದು ಅಣ್ಣನಿಗೆ ಕಷ್ಟವಾಗುವ ಪರಿಸ್ಥಿತಿ ನಮ್ಮ ಸಂಸಾರದ್ದಾಗಿತ್ತು.

ಅಣ್ಣನಿಂದ ಹಣ ಬರುವುದನ್ನು ಕಾಯುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಐಡಿಯಾ ಹೊಳೆಯಿತು. ಅದೆಂದರೆ ನನ್ನ ಹಳೆಯ ಅಂದರೆ ೮ನೇ ಸ್ಟ್ಯಾಂಡರ್ಡ್ ಪಠ್ಯ ಪುಸ್ತಕಗಳನ್ನು ಮಾರುವುದು. ನನ್ನ ಪುಸ್ತಕಗಳೆಲ್ಲಾ ತುಂಬಾ ಒಳ್ಳೆಯ ಸ್ಥಿತಿಯಲ್ಲಿದ್ದವು. ನಾನು ಅವುಗಳ ಮೇಲೆ ನನ್ನ ಹೆಸರನ್ನೂ ಬರೆದಿರಲಿಲ್ಲ. ಆದರೆ ವೇಳೆಗೆ ಎಷ್ಟೋ ವಿದ್ಯಾರ್ಥಿಗಳು ಹೊಸ ಪುಸ್ತಕಗಳನ್ನು ಕೊಂಡೊಕೊಂಡು ಬಿಟ್ಟಿದ್ದರು. ನನಗೆ ಯಾರೋ ದೊಡ್ಡಪೇಟೆಯಲ್ಲಿ ರಘುನಾಥ ಬುಕ್ ಡಿಪೊ ಎಂಬ ಅಂಗಡಿಯಲ್ಲಿ ಹಳೆಯ ಪುಸ್ತಕಗಳನ್ನು ಕೊಳ್ಳುವರೆಂದು ಹೇಳಿದರು.

ರಘುನಾಥ ಬುಕ್ ಡಿಪೊ
ನಾನು ದಿನ  ಸಂಜೆಯೇ ನನ್ನ ಪುಸ್ತಕಗಳನ್ನೆಲ್ಲಾ ಒಂದು ಕೈಚೀಲದಲ್ಲಿ ಹಾಕಿ ದೊಡ್ಡಪೇಟೆಯ ತುದಿಯಲ್ಲಿದ್ದ ಅಂಗಡಿಗೆ ಹೋದೆ. ಅಂಗಡಿಯಲ್ಲಿ ನನಗೆ ಹಳೇ ಪುಸ್ತಕದ ರಾಶಿಯೇ ಕಾಣಿಸಿತು. ಆದರೆ ಮಾಲೀಕರ ಪತ್ತೆಯೇ ಇರಲಿಲ್ಲ. ನಾನು ಅಂಗಡಿಯೆಲ್ಲಾ ಹುಡುಕುವಾಗ ಒಂದು ಮೂಲೆಯಲ್ಲಿದ್ದ ಪುಸ್ತಕದ ರಾಶಿಯ ಮಧ್ಯೆ ರಘುನಾಥ ಬುಕ್ ಡಿಪೊ ಮಾಲೀಕರು ನನ್ನ ಕಣ್ಣಿಗೆ ಬಿದ್ದರು. ನಾನು ಅವರನ್ನು ಡಿಸ್ಟರ್ಬ್ ಮಾಡಿದ್ದು ಅವರಿಗೇನೂ ಇಷ್ಟವಾಗಲಿಲ್ಲವೆಂದು ಅವರ ಮುಖದಲ್ಲಿ ಕಾಣುತ್ತಿದ್ದ ಪ್ರಶ್ನೆ ಚಿಹ್ನೆ ತೋರಿಸಿತು.
ನಾನು ಅವರಿಗೆ  ನನ್ನ ೮ನೇ ಸ್ಟ್ಯಾಂಡರ್ಡ್ ಪುಸ್ತಕಗಳನ್ನು ಮಾರಲು ಬಂದಿದ್ದೇನೆಂದು ತಿಳಿಸಿದೆ. ಅವರು ನನ್ನ ಕೈಚೀಲದಿಂದ ಎಲ್ಲಾ ಪುಸ್ತಕಗಳನ್ನು ಹೊರತೆಗೆದು ಒಂದು ಚೀಟಿಯಲ್ಲಿ ಪೆನ್ಸಿಲಿನಿಂದ ಗೀಚತೊಡಗಿದರು. ದಿನಗಳಲ್ಲಿ ಒಂದು ವರ್ಷ ಹಳೆಯ ಪುಸ್ತಕಗಳಿಗೆ ಅವುಗಳ ಅರ್ಧ ಬೆಲೆಯನ್ನು ಮಾಮೂಲಾಗಿ ಕೊಡಲಾಗುತ್ತಿತ್ತು. ನನ್ನ ಪುಸ್ತಕಗಳು ಹೊಸ ಪುಸ್ತಕಗಳಂತೆಯೇ ಕಾಣುತ್ತಿದ್ದವು ಮತ್ತು ಅವುಗಳಲ್ಲಿ ನಾನು ನನ್ನ ಹೆಸರನ್ನೂ ಬರೆದಿರಲಿಲ್ಲ. ಆದರೆ ಚೀಟಿಯಲ್ಲಿ ಬರೆದ ಮೊತ್ತ ಕೇವಲ . ೨೫ ರೂಪಾಯಿ ಆಗಿತ್ತು. ಅದಕ್ಕಿಂತ ಒಂದು ಪೈಸೆ ಕೂಡ ಹೆಚ್ಚು ಕೊಡಲಾಗುವುದಿಲ್ಲವೆಂದು ಅವರು ನಿರ್ದಾಕ್ಷಿಣ್ಯವಾಗಿ ಹೇಳಿ ಬಿಟ್ಟರು. ನಾನು ಸುಮ್ಮನೆ ವಾಪಾಸ್ ಬಂದು ಬಿಟ್ಟೆ.

ಸದಾಶಿವನಿಗೆ ಎಂದೂ ಬರದ  ನಾಳೆ
ಮಾರನೇ ದಿನ ನಾನು ೮ನೇ ಸ್ಟ್ಯಾಂಡರ್ಡ್ ಇಂಗ್ಲಿಷ್ ಮೀಡಿಯಂ ಕ್ಲಾಸ್ ರೂಮಿನ ಹತ್ತಿರ ಹೋದೆ. ಕ್ಲಾಸಿನ ಹಲವು ಹುಡುಗರು ಅರ್ಧ ಬೆಲೆಗೆ ನನ್ನ ಪುಸ್ತಕ ಕೊಳ್ಳುವುದರಲ್ಲಿ ಆಸಕ್ತಿ ತೋರಿಸಿದರು.  ಅವರಿಗೆ ಮಾರನೇ ದಿನ ಪುಸ್ತಕಗಳನ್ನು ಮಾರಿದ ಮೇಲೆ ನನ್ನ ಹತ್ತಿರ ಕೇವಲ ಒಂದು ಪುಸ್ತಕ ಉಳಿಯಿತು. ಆಗ ನನ್ನ ಕ್ಲಾಸ್ ಮೇಟ್ ಗುಡ್ಡೇತೋಟ ನೀಲಕಂಠನ ತಮ್ಮ್ಮ ಸದಾಶಿವ ಪುಸ್ತಕ ತನಗೆ ಬೇಕೆಂದೂ ಆದರೆ ಹಣವನ್ನು ಮಾರನೇ ದಿನ  (ನಾಳೆ) ಕೊಡುವೆನೆಂದೂ ಹೇಳಿದ. ನಾನು ಒಪ್ಪಿ ಪುಸ್ತಕವನ್ನು ಅವನಿಗೆ ಕೊಟ್ಟುಬಿಟ್ಟೆ. ಆದರೆ ನನ್ನ ದುರಾದೃಷ್ಟಕ್ಕೆ ಸದಾಶಿವನ ನಾಳೆ ಬರಲೇ ಇಲ್ಲ. ನಾನು ಪ್ರತಿ ದಿನವೂ ಅವನನ್ನು ಕೇಳುತ್ತಲೇ ಇದ್ದೆ. ಅವನು ಪ್ರತಿ ಬಾರಿಯೂ ನಾಳೆ ಖಂಡಿತವಾಗಿ ಕೊಡುವುದಾಗಿ ಹೇಳುತ್ತಲೇ ಇದ್ದ. ಕೊನೆಗೆ ನಾನೇ ಕೇಳುವುದನ್ನು ನಿಲ್ಲಿಸಬೇಕಾಯಿತು. ಪ್ರಾಯಶಃ ಅವನು ತನ್ನ ಅಣ್ಣ ಶ್ರೀಕಂಠನಿಂದ ಹಣವನ್ನು ಪಡೆದು ಖರ್ಚು ಮಾಡಿರಬೇಕು. ಆದರೆ ನನಗೆ ಅದೊಂದು ದೊಡ್ಡ ಮೊತ್ತವೇ ಆಗಿತ್ತ್ತು ಮತ್ತು ಅದರ ಅವಶ್ಯಕತೆ ತುಂಬಾ ಇತ್ತು. ಪ್ರಸಂಗವನ್ನು ನನ್ನ ಆಗಿನ ಪರಿಸ್ಥಿತಿಯನ್ನು ವಿವರಿಸುವುದಕ್ಕಾಗಿ ಮಾತ್ರ ಉಲ್ಲೇಖಿಸಿದ್ದೇನೆ.

ನನ್ನಣ್ಣನಿಂದ ನಾನು ತರಗತಿಗೆ ಪ್ರಥಮನಾಗಿದ್ದಕ್ಕೆ ಒಂದು ಅಭಿನಂದನಾ ಪತ್ರ ಬಂತು. ಅದರೊಟ್ಟಿಗೆ ನನಗೆ ೧೦ ರೂಪಾಯಿ ಕೊಡುವಂತೆ ಮೊದಲಮನೆ ಸುಬ್ಬರಾಯರಿಗೆ ಬರೆದ ಪತ್ರವೂ  ಒಂದಿತ್ತು. ಸುಬ್ಬರಾಯರು ನಮ್ಮ ಚಿಕ್ಕಮ್ಮ ಕಾವೇರಮ್ಮನ ಗಂಡ. ದಂಪತಿಗಳು ಮೆಡಿಕಲ್ ಟ್ರೀಟ್ ಮೆಂಟಿಗಾಗಿ ಶಿವಮೊಗ್ಗೆಯಲ್ಲಿದ್ದರು.  ನಾನವರನ್ನು ಭೇಟಿಯಾದಾಗ ಅವರು ನನ್ನನ್ನು ತುಂಬಾ ಚೆನ್ನಾಗಿ ಮಾತನಾಡಿಸಿ ೧೦ ರೂಪಾಯಿ ನನಗೆ ಕೊಟ್ಟುಬಿಟ್ಟರು.

ನಾನು ಹಾಸ್ಟೆಲಿನ ಫೀ ರೂಪಾಯಿ ಕಟ್ಟಿದೆ ಮತ್ತು ಉಳಿದ ರೂಪಾಯಿ ಬೇರೆ ಖರ್ಚುಗಳಿಗೆ ಬಳಸಿಕೊಂಡೆ. ಆದರೆ ನನ್ನಿಂದ ಅರುಣಾಚಲಂ ಮೇಷ್ಟ್ರ  ೩೦ ರೂಪಾಯಿ ಬಾಕಿ ತೀರಿಸಲಾಗಲೇ ಇಲ್ಲ. ನಾನು ಹೈಸ್ಕೂಲಿಗೆ ಹೋಗುವ ದಾರಿಯಲ್ಲೇ ಸ್ಕೌಟ್ ಭವನವಿತ್ತು. ಅರುಣಾಚಲಂ  ಮೇಷ್ಟ್ರು ಪ್ರತಿ ಬುಧವಾರ ಸಂಜೆ ಅಲ್ಲಿ ನಡೆಯುವ ಮೀಟಿಂಗ್ ಗೆ ಹಾಜರಾಗುತ್ತಿದ್ದರು. ನಾನು ಆವೇಳೆ ಅಲ್ಲಿ ಸುಳಿಯದಂತೆ ಎಚ್ಚರಿಕೆ ವಹಿಸಿದ್ದೆ.

ಸೆಪ್ಟೆಂಬರ್ ತಿಂಗಳಿನಲ್ಲೂ ನಾನು ಅದೇ ರೀತಿ ಅಣ್ಣನಿಂದ ಹಣವನ್ನು ನಿರೀಕ್ಷಿಸಿದ್ದೆ. ಆದರೆ ೧೫ನೇ  ತಾರೀಕು ಆದರೂ ಅಣ್ಣನಿಂದ ಪತ್ರ ಅಥವಾ ಹಣ ಬರಲಿಲ್ಲ. ನನ್ನ ಹೆಸರು ಬಾಕಿದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ವಾರ್ಡನ್ ಅವರೂ ಕೂಡ ನನ್ನೊಡನೆ ಬಗ್ಗೆ ಮಾತನಾಡಿದರು. ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ಸೆಪ್ಟೆಂಬರ್ ಮೂರನೇ ವಾರ ನನ್ನನ್ನು ನೋಡಲು ನಮ್ಮೂರಿನಿಂದ ಒಬ್ಬರು ಬಂದರು. ಅವರೇ ನಮ್ಮ ಸಂಪಿಗೆ ಕೊಳಲು ಮಾವಯ್ಯ. ಅವರು ಹೇಳಿದ ಪ್ರಕಾರ ನಮ್ಮ ಅಣ್ಣ ನಮ್ಮ ಮನೆಯನ್ನು ಬಿಟ್ಟು ಅತ್ತಿಗೆಯೊಡನೆ ಹುರುಳಿಹಕ್ಕಲಿನ ಅವನ ಮಾವನ ಮನೆಗೆ ಶಿಫ್ಟ್ ಮಾಡಿಬಿಟ್ಟನಂತೆ. ನಮ್ಮ ಮನೆಯ ಆಡಳಿತ ಪುನಃ ನಮ್ಮ ತಂದೆಯ ಕೈಗೆ ಬಂದಿರುವುದಂತೆ. ಅಷ್ಟು ಹೇಳಿದ ಮಾವಯ್ಯನವರು ನಮ್ಮ ತಂದೆ ಕಳಿಸಿದ ರೂಪಾಯಿಯನ್ನು ನನ್ನ ಕೈಮೇಲೆ ಇಟ್ಟುಬಿಟ್ಟರು.

ನಾನು ಕೂಡಲೇ ಹಾಸ್ಟೆಲ್ ಫೀ ಕಟ್ಟಿಬಿಟ್ಟೆ. ಆದರೆ ಅಣ್ಣ ನಮ್ಮ ಮನೆಯನ್ನು ಬಿಟ್ಟು ಹೋದನೆಂಬ ಸಮಾಚಾರ ನನ್ನ ಮೇಲೆ ಯಾವ ರೀತಿ ಆಘಾತವನ್ನು ಮಾಡಿತೆಂಬುದನ್ನು ಬರೆಯಲು ಸಾಧ್ಯವಾಗುತ್ತಿಲ್ಲ. ಅಣ್ಣನಿಲ್ಲದ ಅಡೇಖಂಡಿ ಮನೆಯನ್ನು ನಾನು ಕನಸಿನಲ್ಲೂ ಕಲ್ಪಿಸಲಾಗುತ್ತಿರಲಿಲ್ಲ. ಅವನು ಕೇವಲ ನನ್ನ ಅಣ್ಣನಾಗಿರಲಿಲ್ಲ. ಅಲ್ಲಿಯವರೆಗೆ ನನ್ನ ಜೀವನದ ಮಾರ್ಗದರ್ಶಕನೂ (Mentor) ಕೂಡ ಆಗಿದ್ದ. ಅದನ್ನು ಅವನು ಸಂಪೂರ್ಣ ಪರಿಪೂರ್ಣತೆಯಿಂದ ನಿರ್ವಹಿಸಿದ್ದ. ಪಾತ್ರವನ್ನು ಬೇರೆ ಯಾರೂ ನಿರ್ವಹಿಸುವ ಪ್ರಶ್ನೆಯೇ ಇರಲಿಲ್ಲ. ವಿಲಿಯಂ ಶೇಕ್ಸಪೀಯರನ ನುಡಿಗಳಂತೆ ಹೇಳುವುದಾದರೆ “Not that I loved my fathetr less; But that I loved my brother more’”. ಒಟ್ಟಿನಲ್ಲಿ ಆ ಸಮಯ ನನಗೆ ಅತ್ಯಂತ ದುಖ್ಖದ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಪ್ರಪಂಚವೆಲ್ಲ ಗಾಡಾಂಧಕಾರದಲ್ಲಿ ಮುಳುಗಿ ಹೋಗುತ್ತಿರುವಂತೆ ನನಗೆ ಭಾಸವಾಯಿತು.
------- ಮುಂದುವರಿಯುವುದು-----

No comments: