Sunday, March 1, 2020

ಬಾಲ್ಯ ಕಾಲದ ನೆನಪುಗಳು – ೬೭


ಲಚ್ಚುವಿನ ರಾತ್ರಿ  ಟೀ ಪಾರ್ಟಿ!
ನಮ್ಮ ಹಾಸ್ಟೆಲಿನಲ್ಲಿ ಪ್ರತಿ ವಾರ್ಷಿಕ ಪರೀಕ್ಷೆ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ರಾತ್ರಿ ಟೀ ಕುಡಿಯಲು ಕೊಡುವ ವಿಶೇಷ ವ್ಯವಸ್ಥೆ ಇತ್ತು. ಉದ್ದೇಶವೇನೆಂದರೆ ರಾತ್ರಿ ಟೀ ಕುಡಿದ ಮೇಲೆ ಬೇಗನೆ ನಿದ್ದೆ ಬರುವುದಿಲ್ಲವೆಂಬ ಭಾವನೆ. ರಾತ್ರಿ ಸಮಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇದು ಸಹಾಯವಾಗುವುದೆಂದು ಆಡಳಿತ ವರ್ಗದ ಅಭಿಪ್ರಾಯವಾಗಿತ್ತು. ಪದ್ದತಿಯ ಅರಿವಿದ್ದ ನಾವು ಮಾರ್ಚ್ ೧ನೇ ತಾರೀಕು ಬರುವುದನ್ನೇ ಕಾಯುತ್ತಿದ್ದೆವು. ಆದರೆ ಪದ್ದತಿಯಲ್ಲಿ ಆಡಳಿತ ವರ್ಗ ಒಂದು ತಂತ್ರ ಮಾಡಿತ್ತು. ನಾನು ಮೊದಲೇ ಬರೆದಂತೆ ನಾವು ರಾತ್ರಿ ನಿದ್ದೆಹೋಗಲು . ೧೫ ಕ್ಕೆ ಹೊಡೆಯಲಾಗುತ್ತಿದ್ದ ಗಂಟೆಗಾಗಿ ಕಾಯಬೇಕಾಗಿತ್ತು. ಆದರೆ ನಾವು ಟೀ ಕುಡಿದ ನಂತರ ನಿದ್ದೆ ಹೋಗಬಾರದೆಂದು ಟೀ ಕುಡಿಯಲು . ೩೦ ಕ್ಕೆ ವಿಶೇಷ ಗಂಟೆ ಬಾರಿಸಲಾಗುತ್ತಿತ್ತು. ನಮಗೆ, ಅದರಲ್ಲೂ ಮುಖ್ಯವಾಗಿ ಹಳ್ಳಿಯಿಂದ ಬಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ, . ೩೦ ವರೆಗೆ ನಿದ್ದೆ ಮಾಡದಿರುವುದು ಒಂದು ಕಷ್ಟದ ವಿಚಾರವಾಗಿತ್ತು.

ಆರಂಭದ ದಿನಗಳಲ್ಲಿ ನಾವು ಕಷ್ಟಪಟ್ಟು . ೩೦   ವರೆಗೆ ಎಚ್ಚರವಾಗಿದ್ದು ಡೈನಿಂಗ್ ಹಾಲಿನಲ್ಲಿ ದೇವರಾಜನು ನಮ್ಮ ಲೋಟಗಳಿಗೆ ಸುರಿಯುತ್ತಿದ್ದ ಟೀ ಕುಡಿಯುತ್ತಿದ್ದೆವು. ಒಹ್! ಅದೆಷ್ಟು ರುಚಿ ರುಚಿಯಾಗಿತ್ತು ನಮಗೆ ಕೊಡುತ್ತಿದ್ದ ಸ್ಪೆಷಲ್ ಟೀ? ಆದರೆ ಆಡಳಿತವರ್ಗ ಅದರಲ್ಲೂ ಒಂದು ಚೌಕಾಸಿ ಮಾಡುತ್ತಿತ್ತು. ದೇವರಾಜನಿಗೆ ನಮ್ಮ ಲೋಟಗಳಿಗೆ ಕೇವಲ ಅರ್ಧ ಮಟ್ಟಕ್ಕೆ ಟೀ ಸುರಿಯುವಂತೆ ಆಜ್ಞೆ ಮಾಡಲಾಗಿತ್ತು! ಹಾಗಾಗಿ ನಾವು ಬಾಯಿ ಚಪ್ಪರಿಸಿ ಕುಡಿಯುವಷ್ಟರಲ್ಲಿ ಲೋಟ ಕಾಲಿಯಾಗಿರುತ್ತಿತ್ತು! ವಿಚಿತ್ರವೆಂದರೆ ಟೀ ಕುಡಿದು ಬಂದ ಮೇಲೆ ನಮ್ಮ ನಿದ್ದೆ ಹಾಳಾಗಿ ನಾವು ಓದಲು ಅನುಕೂಲವಾಗುವ ಬದಲು ನಮಗೆ ಇನ್ನೂ ಜೋರಾಗಿ  ತೂಕಡಿಕೆ ಬಂದು ನಿದ್ದೆ ಬಂದು ಬಿಡುತ್ತಿತ್ತು! ಒಟ್ಟಿನಲ್ಲಿ ನಾವು ಟೀ ಸವಿದಿದ್ದರಿಂದ ನಮ್ಮ ಓದು ಹೆಚ್ಚಾಗಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ನಮಗೆ . ೩೦ ವರೆಗೆ ಟೀ ಕುಡಿಯಲು ಕಾಯುವುದು ಅಸಾಧ್ಯವೆನಿಸಿ . ೧೫ ಗಂಟೆಯಾದ ಕೂಡಲೇ ನಿದ್ದೆ ಹೋಗತೊಡಗಿದೆವು. ನಮಗೆ ಮೋಸವಾಯಿತೆನಿಸಿದರೂ ಬೇರೆ ವಿಧಿ ಇರಲಿಲ್ಲ.

ಆದರೆ ನಮಗಾದ ಮೋಸ ಬೇರೆ ಯಾರಿಗೋ ಅನುಕೂಲ ಆಗುವುದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ. ಒಂದು ದಿನ ದೇವರಾಜ ನನ್ನೊಡನೆ ನಾವು ತುಂಬಾ ಅದೃಷ್ಟವಂತರೆಂದು ಹೇಳಿ ಬಿಟ್ಟ. ನಾನು ಆಶ್ಚರ್ಯದಿಂದ ಯಾಕೆಂದು ಕೇಳಿದಾಗ ಅವನು ಕೇವಲ ನಮ್ಮ ರೂಮಿಗೆ ಮಾತ್ರ ಟೀ ರೂಮಿಗೆ ಡೈರೆಕ್ಟ್ ಸರ್ವ್ ಮಾಡಲಾಗುತ್ತಿದೆಯೆಂದು ಹೇಳಿದ. ನನಗೆ ಅವನ ಮಾತಿನ ತಲೆ ಬುಡ ಗೊತ್ತಾಗಲಿಲ್ಲ. ಅವನು ವಿವರಿಸಿದ ಪ್ರಕಾರ ಪ್ರತಿ ರಾತ್ರಿ ನಮ್ಮ ರೂಮ್ ಮೇಟ್ ಲಚ್ಚು ಅವನ ಊಟದ ತಟ್ಟೆಯಲ್ಲಿ ನಮ್ಮೆಲ್ಲರ (ಒಟ್ಟು ಕಪ್)  ಕಪ್ಪುಗಳನ್ನು ತೆಗೆದುಕೊಂಡು ಹೋಗಿ ನಮಗಾಗಿ ಟೀ ಹಾಕಿಸಿಕೊಂಡು ಬರುತ್ತಿದ್ದನಂತೆ. ನಾವೆಲ್ಲರೂ ವೇಳೆಯಲ್ಲಿ ಗಾಢ ನಿದ್ರೆಯಲ್ಲಿರುತ್ತಿದ್ದೆವು. ಆದ್ದರಿಂದ ಲಚ್ಚು ಆರು  ಅರ್ಧ ಕಪ್ ಅಂದರೆ ಒಟ್ಟು ಮೂರು ಫುಲ್ ಕಪ್ ಟೀ ತಾನೊಬ್ಬನೇ ಕುಡಿದು ಬೆಚ್ಚಗೆ ಮಲಗಿ ಬಿಡುತ್ತಿದ್ದನಂತೆ!  ನಾವು ಬಗ್ಗೆ ಲಚ್ಚುವಿನೊಡನೆ ಜಗಳ ತೆಗೆದಾಗ ಅವನು ಹೇಳಿದ್ದಿಷ್ಟೇ. ಅವನು ನಮ್ಮ ಪಾಲಿನ ಟೀ ಕುಡಿದಿದ್ದರಿಂದ ನಮಗೆ ಯಾವುದೇ ನಷ್ಟವಾಗಿರಲಿಲ್ಲ! ನಿರ್ವಾಹವಿಲ್ಲದೇ ನಾವು ಲಚ್ಚುವಿನ ಮಾತನ್ನು ಒಪ್ಪಿ ಅವನ ಟೀ ಪಾರ್ಟಿಯನ್ನು ಮುಂದುವರಿಸಲು ಸಮ್ಮತಿಸಲೇ  ಬೇಕಾಯಿತು.

ನನ್ನ ಹೋಟೆಲ್ ತಿಂಡಿಯ ಹುಚ್ಚು
ದಿನಗಳಲ್ಲಿ ಬಿ ಹೆಚ್ ರೋಡಿನಲ್ಲೇ ನಮ್ಮ ಹಾಸ್ಟೆಲಿನಿಂದ ಸ್ವಲ್ಪ ದೂರದಲ್ಲಿ ಒಳ್ಳೊಳ್ಳೆಯ ಹೋಟೆಲ್ಗಳು ಇದ್ದವು. ಕಾನ್ವೆಂಟ್ ಶಾಲೆಯ ಹತ್ತಿರವಿದ್ದ ಕೃಷ್ಣ ಭವನ ಮಸಾಲೆ ದೋಸೆಗೆ, ಗೀತಾ ಕೆಫೆ ಪ್ಲೈನ್ ದೋಸೆಗೆ ಮತ್ತು ಲಕ್ಷ್ಮಿ ಭವನ ಸಾದಾ ದೋಸೆಗೆ  (ಕಾಲಿ ದೋಸೆ) ಪ್ರಸಿದ್ಧಿ ಪಡೆದಿದ್ದವು. ನನ್ನಲ್ಲಿ ಹಣದ ಕೊರತೆ ಇದ್ದರೂ ನಾನು ಅವಕಾಶ ಸಿಕ್ಕಾಗ ಈ ಹೊಟೇಲುಗಳಲ್ಲಿ ತಿಂಡಿ ತಿನ್ನುತ್ತಿದ್ದೆ. ಒಟ್ಟಿನಲ್ಲಿ ಹೋಟೆಲಿನಲ್ಲ ದೋಸೆ ತಿನ್ನುವುದೇ ನಮಗೊಂದು ಗೀಳಾಗಿ ಬಿಟ್ಟಿತ್ತು.

ಅಶ್ವಿನಿ ಹೋಟೆಲ್ ಗುಲಾಬ್ ಜಾಮೂನ್ ಮತ್ತು ನಮ್ಮ ಲೆಕ್ಕದ ಪುಸ್ತಕ!
ನಮ್ಮ ಹಾಸ್ಟೆಲಿನ ಪಕ್ಕದಲ್ಲೇ ಅಶ್ವಿನಿ ಹೋಟೆಲ್ ಎಂಬ ಸಣ್ಣ ಹೋಟೆಲೊಂದು ಇತ್ತು. ಅದರ ಮಾಲೀಕರ ಹೆಸರು ಅಡಿಗ ಎಂದಿತ್ತು. ಅಡಿಗರದು ದೊಡ್ಡಪೇಟೆಯ ಬಳಿ ಕೂಡ ಇನ್ನೊಂದು ಹೋಟೆಲ್ ಇತ್ತಂತೆ. ನಾವು ಒಮ್ಮೊಮ್ಮೆ ಅಶ್ವಿನಿ ಹೋಟೆಲಿಗೆ ಕೂಡ ಹೋಗುತ್ತಿದ್ದೆವು. ಬೇಗನೆ ನಮಗೆ ಅಡಿಗರ ಮುಖ ಪರಿಚಯ ಆಗಿ ಹೋಯಿತು. ಹೋಟೆಲಿನಲ್ಲಿ ಒಂದು ಕಪ್ ಗುಲಾಬ್ ಜಾಮೂನ್ ಬೆಲೆ ೨೦ ಪೈಸೆ  ಇತ್ತು. ನಾವು ಹೋಟೆಲಿಗೆ ಹೋದಾಗಲೆಲ್ಲ ಗ್ಲಾಸ್ ಬೀರುವಿನಲ್ಲಿಟ್ಟ ಜಾಮೂನು ನಮ್ಮ ಗಮನ ಸೆಳೆಯುತ್ತಿತ್ತು.  ಒಂದು ದಿನ ನಾನು ನನ್ನ ರೂಮ್ ಮೇಟ್ ವೆಂಕಟರಮಣನ ಹತ್ತಿರ ನನ್ನ ಬಳಿ ನಗದು ಹಣ ಇದ್ದರೆ ಪ್ರತಿ ದಿನವೂ ಅಶ್ವಿನಿ ಹೋಟೆಲಿನಲ್ಲಿ ಒಂದು ಕಪ್ ಜಾಮೂನು ತಿಂದು ಬಿಡುತ್ತಿದ್ದೆ ಎಂದು ಹೇಳಿದೆ. ವೆಂಕಟರಮಣ ಕೂಡಲೇ ನಗದು ಹಣವಿಲ್ಲದೇ ಕೂಡ ಹಾಗೆ ತಿನ್ನಲು ಸಾಧ್ಯ ಎಂದು ಹೇಳಿದ. ನಾನು ತುಂಬಾ ಕುತೂಹಲದಿಂದ ಅದು ಹೇಗೆ ಸಾಧ್ಯ ಎಂದು ಕೇಳಿದೆ. ಅವನ ಪ್ರಕಾರ ಅಡಿಗರು ಒಂದು ಲೆಕ್ಕದ ಪುಸ್ತಕ ಇಟ್ಟಿದ್ದಾರಂತೆ. ನಾವು ನಗದು ಹಣ ಕೊಡದೇ ತಿಂಡಿ ತಿಂದು ಆ ಪುಸ್ತಕದಲ್ಲಿ ಬರೆದು ಬಿಡಬಹುದಂತೆ. ತಿಂಗಳ ಕೊನೆಯಲ್ಲಿ ಒಟ್ಟು ಮೊತ್ತವನ್ನು ಒಮ್ಮೆಗೇ ಕೊಟ್ಟು ಬಿಡಬಹುದಂತೆ! ಒಹ್! ಎಂತಹಾ ಅದ್ಬುತ ಸ್ಕೀಮ್ ಅಡಿಗರದು!

ಮಾರನೇ ದಿನದಿಂದ ನನ್ನ ಮತ್ತು ವೆಂಕಟರಮಣನ ಡೈಲಿ ಜಾಮೂನ್ ಪಾರ್ಟಿ ಪ್ರಾರಂಭವಾಯಿತು. ನಮ್ಮ ಕೋರಿಕೆಯ ಮೇಲೆ ಅಡಿಗರು ನಮ್ಮಿಬ್ಬರ ಹೆಸರಿನಲ್ಲೂ ಅವರ ಲೆಕ್ಕದ ಪುಸ್ತಕದಲ್ಲಿ ಒಂದೊಂದು ಪೇಜ್ ಅಲಾಟ್ ಮಾಡಿಬಿಟ್ಟರು. ನಾವು ಪ್ರತಿ ದಿನ ಮಧ್ಯಾಹ್ನ ಲಂಚ್ ಬ್ರೇಕ್ ನಲ್ಲಿ ಹಾಸ್ಟೆಲಿಗೆ ಬರುತ್ತಿದ್ದೆವು. ಆಗ ಅಶ್ವಿನಿ ಹೋಟೆಲಿನ ಒಂದು ಕಪ್ ಜಾಮೂನ್ ಲೆಕ್ಕದಲ್ಲಿ ಬರೆದು ಸವಿಯ ತೊಡಗಿದೆವು. ನಾನು ಅಣ್ಣನಿಗೆ ಈ ಲೆಕ್ಕವನ್ನು ಹೇಗೆ ಕೊಡಬಹುದೆನ್ನುವ ಬಗ್ಗೆ ಯಾವುದೇ ಯೋಚನೆ ಮಾಡಲಿಲ್ಲ. ನನಗೆ ಜಾಮೂನಿನ ಕ್ರೇಜ್ ಅಷ್ಟಿತ್ತು. ತಿಂಗಳ ಕೊನೆಯಲ್ಲಿ ಅಡಿಗರ ಪುಸ್ತಕದಲ್ಲಿ ನನ್ನ ಜಾಮೂನ್ ಲೆಕ್ಕ ೬ ರೂಪಾಯಿ ತಲುಪಿ ಬಿಟ್ಟಿತು! ಆಗ ನನ್ನ ಹಾಸ್ಟೆಲಿನ ತಿಂಗಳ ಫ್ರೀಶಿಪ್ ಫೀ ಕೂಡ ೬ ರೂಪಾಯಿ ಆಗಿತ್ತೆಂದು ಇಲ್ಲಿ ನೆನೆಸಿಕೊಳ್ಳಬಹುದು! ನನಗೆ ಕೇವಲ ೨ ರೂಪಾಯಿ ಅಡಿಗರಿಗೆ ಕೊಡಲು ಸಾಧ್ಯವಾಯಿತು. ಆದರೂ ಕೂಡ ಅಡಿಗರು ನನ್ನ  ಸೌಲಭ್ಯವನ್ನು ತೆಗೆದುಹಾಕಲಿಲ್ಲ.  ನನ್ನ  ಜಾಮೂನ್ ಪಾರ್ಟಿ ಮುಂದುವರಿಯಿತು. ಮಾರ್ಚ್ ತಿಂಗಳ ಕೊನೆಯಲ್ಲಿ ನಮ್ಮ ಪರೀಕ್ಷೆ ಮುಗಿವಾಗ ನನ್ನ ಜಾಮೂನು ಲೆಕ್ಕ ೧೬ ರೂಪಾಯಿ ಮುಟ್ಟಿ ಬಿಟ್ಟಿತ್ತು. ಹೆಚ್ಚು ಕಡಿಮೆ ವೆಂಕಟರಮಣನ ಲೆಕ್ಕವೂ ಅಷ್ಟಕ್ಕೇ ಏರಿತ್ತು. ಆದರೆ ನಾನು ಮಾರನೇ ದಿನ ಬೇಸಿಗೆ ರಜೆಗೆ ಊರಿಗೆ ಹೋಗಬೇಕೆನ್ನುವ ವೇಳೆಗೆ ನನ್ನ ಕೈಯಲ್ಲಿ ಕೇವಲ ಬಸ್ ಟಿಕೆಟ್ಟಿಗೆ ಆಗುವಷ್ಟು ಮಾತ್ರಾ ಹಣವಿತ್ತು. ಅಡಿಗರ ಸಾಲವನ್ನು ತೀರಿಸಿ ಹೋಗುವ ಪ್ರಶ್ನೆಯೇ ಇರಲಿಲ್ಲ.

ಊರಿಗೆ ಹೊರಡುವ ಹಿಂದಿನ ದಿನ ರಾತ್ರಿ ನನಗೆ ಸುಸೂತ್ರ ನಿದ್ದೆ ಮಾಡಲೇ ಆಗಲಿಲ್ಲ. ವಿಷಯವೇನೆಂದರೆ ನಾನು ಊರಿಗೆ ಹೋಗುವ ಬಸ್ ಹಿಡಿಯಲು ಬ್ಯಾಗ್ ಹಿಡಿದುಕೊಂಡು ಅಶ್ವಿನಿ ಹೋಟೆಲ್ ಎದುರೇ ಹಾದು ಹೋಗ ಬೇಕಾಗಿತ್ತು. ಹೋಟೆಲಿನ ಪ್ರೊಪ್ರೈಟರ್ ಅಡಿಗರು ಕ್ಯಾಶಿಯರ್ ಕುರ್ಚಿಯಲ್ಲಿ ರಸ್ತೆ ಪೂರ್ತಿ ಕಣ್ಣಿಗೆ ಬೀಳುವ ಹಾಗೆ ಕುಳಿತಿರುತ್ತಿದ್ದರು. ಅವರು ನನ್ನನ್ನು ರಸ್ತೆಯಲ್ಲೇ ನಿಲ್ಲಿಸಿ ಪೂರ್ತಿ ಬಾಕಿ ತೀರಿಸಿ ಹೋಗಬೇಕೆಂದು ಹೇಳುವ ಪರಿಸ್ಥಿತಿ ನೂರಕ್ಕೆ ನೂರರಷ್ಟಿತ್ತು.

ಮಾರನೇ ದಿನ ಬೆಳಿಗ್ಗೆ ನಾನು ಬ್ಯಾಗನ್ನು ಕೈಯಲ್ಲಿ ಹಿಡಿದು ಹಾಸ್ಟೆಲಿನ ಹೊರಗೆ ಬಂದೆ. ಅಶ್ವಿನಿ ಹೋಟೆಲ್ ಎದುರಿಗೆ ಬರುವಾಗ ನನ್ನ ಜೀವ ಪುಟಪುಟನೆಂದು ಹಾರುತ್ತಿತ್ತು. ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ಅಡಿಗರು ನನ್ನನ್ನು ನೋಡದಿರಲೆಂದು ನಾನು ದೇವರನ್ನು ಪ್ರಾರ್ಥಿಸ ತೊಡಗಿದೆ.  ಆದರೆ ನನಗೆ ಆಘಾತವೊಂದು ಕಾದಿತ್ತು. ಹೋಟೆಲಿನ ಮುಂದಿದ್ದ ಅಡಿಗರು ಕೈ ಬೀಸುತ್ತಾ ನನಗೆ ಹೋಟೆಲ್ ಒಳಗೆ ಬರುವಂತೆ ಕೂಗುತ್ತಿರುವುದು ಕಾಣಿಸಿತು. ನನಗೆ ಆ ಕಡೆ ತಿರುಗಿಯೂ ನೋಡದೇ ಓಡಿ  ಹೋಗಬೇಕೆನಿಸಿತು. ಆದರೆ ನನ್ನ ಕಾಲುಗಳು ನನ್ನ ಮಾತನ್ನು ಕೇಳಲೇ ಇಲ್ಲ. ನಾನಲ್ಲೇ ಒಂದು ವಿಗ್ರಹದಂತೆ ನಿಂತು ಬಿಟ್ಟೆ.
------- ಮುಂದುವರಿಯುವುದು-----

No comments: