Tuesday, March 17, 2020

ಬಾಲ್ಯ ಕಾಲದ ನೆನಪುಗಳು – ೭೧


ನಾನು ಯೋಚಿಸಿದಂತೆ ನಮ್ಮ ಅಡೇಖಂಡಿ ಸಂಸಾರಕ್ಕೆ ಅದೊಂದು ಸಂಧಿ ಕಾಲವಾಗಿತ್ತು. ಸಂಸಾರ ಒಡೆದು ಹೋದುದು ಮಾತ್ರವಲ್ಲ. ಆರ್ಥಿಕವಾಗಿ ಅದು ಮುನ್ನಡೆಸಲಾಗದ ಸಂಸಾರವಾಗಿತ್ತು. ನಮ್ಮ ತಂದೆಯವರೇನೋ ತಮ್ಮ ಬಾಲ್ಯದಿಂದ ಇಂತಹ ಸನ್ನಿವೇಶ ನೋಡುತ್ತಲೇ ಬಂದಿದ್ದರಂತೆ. ಆದರೆ ನಮ್ಮಮ್ಮನಿಗೆ ಮಾತ್ರ ಅದೊಂದು ಎಣಿಸಲಾಗದ  ಭಾವನಾತ್ಮಕ  ಸನ್ನಿವೇಶವಾಗಿತ್ತು. ಏಕೆಂದರೆ ಅವಳೇ ಮನೆಯ ಯಜಮಾನಿಕೆಯನ್ನು ಅಣ್ಣನಿಗೆ ವಹಿಸಿದ್ದಳು. ಅದಕ್ಕೆ ಮುನ್ನ ನಮ್ಮ ತಂದೆ ಆಡಳಿತದಲ್ಲಿ ವಿಫಲರಾದುದೇ ಅದಕ್ಕೆ ಕಾರಣ. ಅಣ್ಣನ ನೇತೃತ್ವದಲ್ಲಿ ಸ್ವಲ್ಪ ವರ್ಷ ನಮ್ಮ ಸಂಸಾರ ಆರ್ಥಿಕವಾಗಿ ಸಫಲತೆ ಸಾಧಿಸಿತ್ತು. ಆದರೆ ಒಂದರೆ ಹಿಂದೆ ಒಂದು ನಡೆದ  ಎರಡು ಮದುವೆಯ ಖರ್ಚುಗಳು ದೊಡ್ಡ ಮೊತ್ತದ ಸಾಲ ಆಗುವಂತೆ ಮಾಡಿದ್ದವು. ಈಗ ಯಜಮಾನಿಕೆ ಪುನಃ ತಂದೆಯವರ ಕೈಗೆ ಬಂದಿತ್ತು.

ಉದಯ ಮೋಟಾರ್ ಕಂಪನಿ ಫ್ರೀ ಟಿಕೆಟ್
ಅಷ್ಟರಲ್ಲೇ ಬರುತ್ತಿದ್ದ ದಸರಾ ರಜೆಗೆ ನಾನು ಊರಿಗೆ ಹೋಗಿ ಅಣ್ಣ ಮನೆ ಬಿಟ್ಟು ಹೋಗಲು ಕಾರಣಗಳನ್ನು ತಿಳಿಯಬೇಕೆಂದಿದ್ದೆ. ಆದರೆ ನನಗೊಂದು ಸಮಸ್ಯೆ ಎದುರಾಯಿತು. ಊರಿಗೆ ಹೋಗಲು ಬೇಕಾದ ಬಸ್ ಟಿಕೆಟ್ ಗೆ ಬೇಕಾದ ಹಣವೂ ನನ್ನಲ್ಲಿರಲಿಲ್ಲ. ಅಷ್ಟರಲ್ಲೇ  ಯಾರೋ ನನಗೆ ಉದಯ ಮೋಟಾರ್ ಕಂಪನಿಯವರು ದಸರೆ ರಜೆಗೆ ಊರಿಗೆ ಹೋಗುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಕೊಡುತ್ತಾರೆಂದು ಹೇಳಿದರು.  ನಾನು ಮೊದಲೇ ನಮ್ಮ ಹಾಸ್ಟೆಲಿನ ಕಾರ್ಯದರ್ಶಿ ಅವಧಾನಿಯವರು ಕಂಪನಿಯಲ್ಲಿ ಪ್ರಮುಖ ಪಾರ್ಟ್ನರ್ ಆಗಿದ್ದರೆಂದು ಬರೆದಿದ್ದೇನೆ.

ನಾನು ಕೂಡಲೇ ಹೋಗಿ ಕಂಪನಿಯ ಅಧಿಕಾರಿಗಳನ್ನು ಕಂಡೆ. ಅವರು ನನಗೆ ೫೦ ಪರ್ಸೆಂಟ್ ರಿಯಾಯಿತಿಯ ಟಿಕೆಟ್ ಕೊಡಲು ತಯಾರಿದ್ದರು. ನಾನು ೧೦೦ ಪರ್ಸೆಂಟ್ ರಿಯಾಯಿತಿ ಪಡೆಯಲು ಮ್ಯಾನೇಜಿಂಗ್ ಪಾರ್ಟ್ನರ್ ಗುಂಡು ರಾವ್ ಅವರನ್ನು ಭೇಟಿ ಮಾಡಬೇಕಿತ್ತು. ಅವರನ್ನು ನಾನು ಹಿಂದೆ ಹಾಸ್ಟೆಲಿನಲ್ಲಿ ಎಷ್ಟೋ ಬಾರಿ ನೋಡಿದ್ದೆ.  ನಾನವರ ಬಳಿಗೆ ಹೋದಾಗ  ಅವರು ಕೂಡಲೇ ನನಗೆ ಫ್ರೀ ಟಿಕೆಟ್ ಕೊಡುವಂತೆ ಆರ್ಡರ್ ಮಾಡಿ ಬಿಟ್ಟರು. ಉದಯ ಬಸ್ಸಿನಲ್ಲಿ ನಾನು ಕೊಪ್ಪದವರೆಗೆ ಮಾತ್ರ ಹೋಗಬಹುದಿತ್ತು. ಅಲ್ಲಿಂದ ಶಂಕರ್ ಟ್ರಾನ್ಸ್ಪೋರ್ಟ್ ಬಸ್ಸಿನಲ್ಲಿ ಬಿ ಜಿ ಕಟ್ಟೆ  ತಲುಪಲು ೫೦ ಪೈಸೆ ಬೇಕಿತ್ತು. ನಾನು ಸ್ನೇಹಿತನೊಬ್ಬನಿಂದ ಒಂದು ರೂಪಾಯಿ ಸಾಲ ತೆಗೆದೆ. ಅದರಲ್ಲಿ ೨೫ ಪೈಸೆ ನನ್ನ ಹೇರ್ ಕಟಿಂಗ್ ಮಾಡಿಸಲು ಖರ್ಚಾಯಿತು.

ರಜೆಯ ಮೊದಲ ದಿನ ಉದಯ ಬಸ್ಸಿನಲ್ಲಿ ಕೊಪ್ಪ ತಲುಪಿದ ನಾನು ೨೫ ಪೈಸೆಗೆ ತಂಗಿ ಮತ್ತು ತಮ್ಮಂದಿರಿಗೆ ಬಿಸ್ಕತ್ ಕೊಂಡುಕೊಂಡೆ. ಆಮೇಲೆ ೫೦ ಪೈಸೆ ಟಿಕೆಟ್ ಪಡೆದು ಶಂಕರ್ ಬಸ್  ಹತ್ತಿ ಬಿ ಜಿ ಕಟ್ಟೆ ತಲುಪಿದೆ. ಅಲ್ಲಿಗೆ ನನ್ನ ಜೇಬು ಕಾಲಿಯಾಗಿತ್ತು. ಬಿ ಜಿ ಕಟ್ಟೆಯಲ್ಲಿ ಆಗ ಸೀತಾ ನದಿಗೆ ಸೇತುವೆ ಕಟ್ಟುವ ಕೆಲಸ ಆರಂಭವಾಗಿತ್ತು. ಅಲ್ಲಿಂದ ನಡೆದು ಊರು ತಲುಪಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ನಮ್ಮ ಅಡಿಕೆ ತೋಟವನ್ನು ಹಾದು ಹೋಗುವಾಗ ಯಾರೋ ಅಲ್ಲಿ ಕೊನೆ ತೆಗೆಯುತ್ತಿರುವುದು ಕಾಣಿಸಿತು. ಆದರೆ ನಮ್ಮ ತಂದೆಯವರಾಗಲೀ ನಮ್ಮ ಮನೆಯ ಬೇರೆ ಯಾರಾಗಲೀ ಕಣ್ಣಿಗೆ ಬೀಳಲಿಲ್ಲ. ದೃಶ್ಯ ನನ್ನ ಮನಸ್ಸಿಗೆ ತಂದ ನೋವನ್ನು ವರ್ಣಿಸಲಾರೆ.

ತುಂಬಾ ಆತಂಕದಿಂದ ನಾನು ಮನೆ ಸೇರಿದಾಗ ನನ್ನ ತಂದೆ ಮತ್ತು ತಾಯಿ ನನ್ನ ನಿರೀಕ್ಷೆಯಲ್ಲೇ ಇರುವುದು ಕಾಣಿಸಿತು. ವೇಳೆಗೆ ಪುಟ್ಟಣ್ಣನೂ ರಜೆಗೆ ಊರಿಗೆ ಬಂದು ಬಿಟ್ಟಿದ್ದ. ನಾನು ಆತುರದಿಂದ ಒಂದೇ ಉಸಿರಿನಲ್ಲಿ ನಮ್ಮ ತೋಟದಲ್ಲಿ ಅಡಿಕೆ ಕೊನೆ ತೆಗೆಯುತ್ತಿರುವರು ಯಾರೆಂದು ಪ್ರಶ್ನಿಸಿದೆ. ತಂದೆಯವರು ನನಗೆ ಮೊದಲು ನಾನು ಊಟ ಮಾಡಬೇಕೆಂದೂ ನಂತರ ಎಲ್ಲಾ  ವಿಷಯವನ್ನೂ ಕೂಲಂಕಶವಾಗಿ ವಿವರಿಸುವುದಾಗಿಯೂ ಹೇಳಿದರು. ಊಟದ ನಂತರ ತಂದೆಯವರು ಅಣ್ಣ ಮನೆ ಬಿಟ್ಟು ಹೋದ ಮತ್ತು ಆಮೇಲೆ ನಡೆದ ಪ್ರಸಂಗಗಳನ್ನು ವಿವರವಾಗಿ ಹೇಳಿದರು.

ನಮ್ಮ ಸಂಸಾರ ಆರ್ಥಿಕವಾಗಿ ಡೋಲಾಯಮಾನವಾಗಿದ್ದಾಗ ಅಣ್ಣನ ಮಾವ ಹುರುಳಿಹಕ್ಕಲು ಲಕ್ಷ್ಮೀನಾರಾಯಣರಾಯರು ತಮ್ಮಮನೆಯ ಹತ್ತಿರವಿದ್ದ ಸ್ವಲ್ಪ ಜಮೀನನ್ನು ಅವನಿಗೆ ಕೊಡುವುದಾಗಿಯೂ ಮತ್ತು ತಮ್ಮ ಮನೆಗೆ ಸಧ್ಯಕ್ಕೆ ಬಂದು ಬಿಡಬೇಕೆಂದು ಆಹ್ವಾನಿಸಿದರಂತೆ. ಅಣ್ಣನಿದ್ದ ಪರಿಸ್ಥಿತಿಯಲ್ಲಿ ಅದು ಒಂದು ಉತ್ತಮ ಅವಕಾಶವೇ ಆಗಿತ್ತು. ಏಕೆಂದರೆ ಲಕ್ಷ್ಮೀನಾರಾಯಣ ರಾಯರಿಗೆ ತುಂಬಾ ದೊಡ್ಡ ಜಮೀನೇ ಇತ್ತು.  ಆದರೆ ನಮ್ಮ ತಂದೆ ತಾಯಿಗೆ ಅದು ಇಷ್ಟವಾಗಿರಲಿಲ್ಲ. ಕಾರಣವಿಷ್ಟೇ. ಲಕ್ಷ್ಮೀನಾರಾಯಣ ರಾಯರು ತುಂಬಾ ಸಾಲ ಮಾಡಿರುವರೆಂದು ಇಡೀ ಊರಿಗೆ ಗೊತ್ತಿತ್ತು.

ಭಾವಂದಿರಿಂದ ಪಂಚಾಯಿತಿ
ಅಣ್ಣನು ಎರಡು ಮದುವೆಗಳಿಗಾಗಿ ಮಾಡಿದ ಹೆಚ್ಚಿನ ಸಾಲ ಸಂಪಿಗೆ ಕೊಳಲು ಮಾವಯ್ಯನ ಹತ್ತಿರವೇ ಆಗಿತ್ತು. ಅಣ್ಣ ಮನೆ ಬಿಡುವನೆಂದು ತಿಳಿದೊಡನೆ ಅವರು ತಮ್ಮ ಸಾಲವನ್ನು ಒಂದೇ ಕಂತಿನಲ್ಲಿ ತೀರಿಸಬೇಕೆಂದು ಷರತ್ತು ಹಾಕಿ ಬಿಟ್ಟರಂತೆ. ಆದರೆ ನಮ್ಮ ಜಮೀನೆಲ್ಲ ಮಾರಿದರೂ ಅವರ ಸಾಲದ ಮೊತ್ತ ತೀರ್ಮಾನವಾಗುತ್ತಿರಲಿಲ್ಲ. ಸನ್ನಿವೇಶದಲ್ಲಿ ತಂದೆಯವರು ಅವರ ಸೋದರಳಿಯ ಮರ್ಡಿ ಕೃಷ್ಣರಾಯರನ್ನೂ ಮತ್ತು ಹಿರಿಯ ಅಳಿಯ ಹೊಕ್ಕಳಿಕೆ ಭಾವನವರನ್ನೂ ಪಂಚಾಯಿತಿ ನಡೆಸಲು ಕರೆದರಂತೆ. ಹಣಕಾಸಿನ ವ್ಯವಹಾರದಲ್ಲಿ ನುರಿತ ನಮ್ಮ ಭಾವಂದಿರಿಬ್ಬರೂ ಕೂಡಿ ಸಂಪಿಗೆ ಕೊಳಲು ಮಾವಯ್ಯನ ಹತ್ತಿರ ಸಾಲವನ್ನು ಮೂರು ವಾರ್ಷಿಕ ಕಂತುಗಳಲ್ಲಿ ತೀರಿಸುವುದಕ್ಕೆ ಅವಕಾಶ ಕೇಳಿದರಂತೆ. ಅದಕ್ಕೆ ಅವರು ಒಪ್ಪಲಿಲ್ಲವಂತೆ. ಆದರೆ ಅಂತಿಮವಾಗಿ  ಅವರಿಂದ ಒಂದು ಆಫರ್ ಬಂದಿತಂತೆ. ಅದೇನೆಂದರೆ ನಮ್ಮ ಒಂದು ಎಕರೆ ತೋಟದ ವರ್ಷದ ಬೆಳೆಯನ್ನು ಸಂಪೂರ್ಣವಾಗಿ ಅವರಿಗೆ ಕೊಟ್ಟರೆ ಅವರು ನಮ್ಮ ಪೂರ್ಣ ಸಾಲ ತೀರಿತೆಂದು ಅವರು  ರಶೀದಿ ಕೊಟ್ಟುಬಿಡಲು ತಯಾರಿದ್ದರು.

ವಾಸ್ತವವಾಗಿ ಮಾವನವರ ಸಾಲದ ಮೊತ್ತ ನಮ್ಮ ತೋಟದ ಒಂದು ವರ್ಷದ ಬೆಳೆಯ ಬೆಲೆಗಿಂತ ತುಂಬಾ ಅಧಿಕವಾಗಿತ್ತು.  ಅಲ್ಲದೇ ನಮ್ಮ ಸಾಲದ ಹೊರೆ ಒಮ್ಮೆಲೇ ಇಳಿದುಹೋಗುವಂತಿತ್ತು. ಮತ್ತು ನಮ್ಮ ಜಮೀನು ನಮ್ಮ ಹತ್ತಿರವೇ ಉಳಿಯುವಂತಿತ್ತು. ಅದನ್ನು ಗಮನಿಸಿದ ನಮ್ಮ ಭಾವಂದಿರು ಅದಕ್ಕೆ ಒಪ್ಪಿ ನಮ್ಮ ತಂದೆಯವರಿಂದ ಮತ್ತು ಮಾವನವರಿಂದ ಒಪ್ಪಂದಕ್ಕೆ ಸಹಿ ಹಾಕಿಸಿದರಂತೆ. ಮರ್ಡಿ ಕೃಷ್ಣರಾಯ ಭಾವನವರು ಊರಿಗೆ ಹೋದವರೇ ಒಂದು ಕ್ವಿಂಟಲ್ ಅಕ್ಕಿಯನ್ನು ನಮ್ಮ ಮನೆಗೆ ಕಳಿಸಿದರಂತೆ.

ಗೇಣಿ ಮಾಫಿಗೆ ತಿರಸ್ಕಾರ
ನಮಗೆ ಆಗ ಮಾಡಬೇಕಾದ ಮುಖ್ಯ ಕಾರ್ಯವೆಂದರೆ ನಾವು ಗೇಣಿಗೆ ಮಾಡುತ್ತಿದ್ದ ಸುಮಾರು ಅರ್ಧ ಎಕರೆ ಅಡಿಕೆ ತೋಟದ ಮೊದಲನೇ ಕೊಯಿಲು ಮಾಡುವುದು.  ಅದರಲ್ಲಿ ಅರ್ಧ ಎಕರೆಗೂ ಸ್ವಲ್ಪ ಜಮೀನು ಬೆಳವಿನಕೊಡಿಗೆಯವರಿಗೆ ಸೇರಿದ್ದು ನಾವು ಆರು ಮಣ ವಾರ್ಷಿಕ ಗೇಣಿ ಕೊಡಬೇಕಿತ್ತು. ಇನ್ನು ನಮ್ಮ ಮನೆಯ ಹತ್ತಿರವೇ ಇದ್ದ ಸಣ್ಣ ತೋಟವೊಂದಕ್ಕೆ ನಮ್ಮ ಸಂಬಂಧಿಗಳೇ ಆದ ಗೋಳಿಕಟ್ಟೆ ಕೃಷ್ಣರಾಯರಿಗೆ ಒಂದೂವರೆ ಮಣ ವಾರ್ಷಿಕ ಗೇಣಿ ಕೊಡಬೇಕಿತ್ತು. ನಾವು ಎರಡು ಜಮೀನ್ದಾರರಿಂದಲೂ ವರ್ಷದ ಗೇಣಿ ಮಾಫಿ ಮಾಡಲು ಕೇಳಿಕೊಂಡೆವು. ಆದರೆ ಎರಡು ಜಮೀನ್ದಾರರೂ ಯಾವುದೇ ದಾಕ್ಷಿಣ್ಯವಿಲ್ಲದೇ ನಮ್ಮ ಬೇಡಿಕೆಯನ್ನು ತಿರಸ್ಕರಿಸಿ ಮಾಮೂಲಿ ಗೇಣಿ ವಸೂಲಿ ಮಾಡಿಯೇ ಬಿಟ್ಟರು. ವಾಸ್ತವವಾಗಿ ಇಬ್ಬರು ಜಮೀನ್ದಾರರಿಗೂ ಅವರ ಒಟ್ಟು ಅಡಿಕೆ ಉತ್ಪನ್ನವನ್ನು ಹೋಲಿಸಿದರೆ ನಾವು ಕೊಡುತ್ತಿದ್ದ ಗೇಣಿ ತೃಣ ಸಮಾನವಾಗಿತ್ತು! ನಮ್ಮ ತಂದೆಯವರಿಗೆ ಅಡಿಕೆ ಮರ ಹತ್ತಿ ಕೊನೆ ತೆಗೆಯುವ ಕೆಲಸವೂ ಗೊತ್ತಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರಿಗೆ ಸಹಾಯ ಮಾಡಿ ಗೇಣಿ ಜಮೀನಿನ ಮೊದಲನೇ ಕೊಯಿಲು ಮುಗಿಸಿಬಿಟ್ಟೆವು. ಅಲ್ಲದೇ ನಾವು ತಂದೆಯವರಿಗೆ ಕೊಪ್ಪ ಸಂತೆಗೆ

ಅಣ್ಣ ಬಂದ! ಅಣ್ಣ ಬಂದ!
ನನ್ನ ರಜೆ ಕಳೆಯುತ್ತಾ ಬಂದರೂ ನನಗೆ ಅಣ್ಣನನ್ನು ಒಮ್ಮೆಯೂ ನೋಡಲಾಗಲಿಲ್ಲ. ಅಲ್ಲದೇ ಇನ್ನು ಮುಂದೆ ಅವನು ನನ್ನ ಓದಿನ ಬಗ್ಗೆ ಆಸಕ್ತಿ ತೋರಿಸಲಾರನೆಂಬ ಚಿಂತೆಯೂ ನನಗಿತ್ತು. ಆದರೆ ನಮಗೆ  ಆಶ್ಚರ್ಯವಾಗುವಂತೆ ಒಂದು ದಿನ ಅಣ್ಣ ನಮ್ಮನ್ನು ನೋಡಲು ಮನೆಗೆ ಬಂದುಬಿಟ್ಟ. ನಾನು ಫಸ್ಟ್ ಟರ್ಮ್ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿರುವೆನೇ ಎಂದು ಪ್ರಶ್ನಿಸಿ ತಿಳಿದುಕೊಂಡ. ಅಷ್ಟು ಮಾತ್ರವಲ್ಲ. ತನಗೆ ಇನ್ನು ಮುಂದೆ ಹಣ ಸಹಾಯ ಮಾಡಲಾಗದಿದ್ದರೂ ನನ್ನ ವಿದ್ಯಾಭ್ಯಾಸದ ಬಗ್ಗೆ ಗಮನಿಸುತ್ತಲೇ ಇರುವುದಾಗಿ ಸ್ಪಷ್ಟಪಡಿಸಿಬಿಟ್ಟ. ಅದು ನನ್ನ ಮನಸ್ಸಿಗೆ ಎಷ್ಟೋ ನೆಮ್ಮದಿ ನೀಡಿತು.

ಕೊಪ್ಪದಲ್ಲಿ ೨೦ ರೂಪಾಯಿಗಾಗಿ ಅಡಿಕೆ ಮಾರಲು ನಮ್ಮ ಪರದಾಟ
ನನ್ನ ದಸರಾ ರಜೆ ಮುಗಿಯುತ್ತಾ ಬಂದು ನಾನು ಶಿವಮೊಗ್ಗೆಗೆ ಹೊರಡಬೇಕಾದ ದಿನವೂ ಬಂದು ಬಿಟ್ಟಿತು. ತಂದೆಯವರಿಗೆ ನಾನು ಎರಡು ತಿಂಗಳ ಹಾಸ್ಟೆಲ್ ಫೀ ಕಟ್ಟಬೇಕೆಂದು ಗೊತ್ತಿತ್ತು. ಒಟ್ಟಿನಲ್ಲಿ ನನಗೆ ಸುಮಾರು ೨೦ ರೂಪಾಯಿಗಳ ಅವಶ್ಯಕತೆ ಇತ್ತು. ತಂದೆಯವರು ಸುಮಾರು ೧೦ ಕಿಲೋಗ್ರಾಂ ಬೆಟ್ಟೆ ಅಡಿಕೆಯನ್ನು ಹೊತ್ತುಕೊಂಡು ಆ ಮದ್ಯಾಹ್ನ ಊಟದ ನಂತರ ನನ್ನೊಡನೆ ಕೊಪ್ಪಕ್ಕೆ ಬಂದರು. ಕೊಪ್ಪದಲ್ಲಿ ಅದನ್ನು ಮಾರಿ ನನ್ನ ಖರ್ಚಿಗೆ ೨೦ ರೂಪಾಯಿ ಕೊಡಲು ಸಾಧ್ಯವೆಂದು ಅವರು ಭಾವಿಸಿದ್ದರು. ನಮ್ಮ ದುರಾದೃಷ್ಟದಿಂದ ಸಮಯದಲ್ಲಿ ಅಡಿಕೆಯ ಬೆಲೆ ಶಿವಮೊಗ್ಗೆಯಲ್ಲೇ ತುಂಬಾ ಬಿದ್ದು ಹೋಗಿತ್ತು. ಅದರಲ್ಲೂ ಬೆಟ್ಟೆ ವೆರೈಟಿ ಬೆಲೆ ನೆಲ ಕಚ್ಚಿತ್ತು. ಅಲ್ಲದೇ ಕೊಪ್ಪದಲ್ಲಿ ಅಡಿಕೆಯನ್ನು ಕೊಳ್ಳುವ ಯಾವುದೇ ಹೇಳಿಕೊಳ್ಳುವಂತಹ ವ್ಯಾಪಾರಿಗಳಿರಲಿಲ್ಲ. ಕೆಲವು ಪುಟ್ಟ ಅಂಗಡಿಗಳು ಕೆಲಸಗಾರರಿಗೆ ಅಡಿಕೆ ಮಾರುತ್ತಿದ್ದವು. ಆದರೆ ಅವಕ್ಕೂ ಹೆಚ್ಚಿನ ಪ್ರಮಾಣದ ಅಡಿಕೆ ಬೇಕಾಗಿರಲಿಲ್ಲ. ತಂದೆಯವರು ನನ್ನೊಡನೆ ಅಡಿಕೆ ಹೊತ್ತುಕೊಂಡು ಹಲವು ಅಂಗಡಿಗಳಿಗೆ ಹೋಗಿ ಮಾರಲು ಪ್ರಯತ್ನಿಸಿದರು. ಆದರೆ ಯಾರಿಗೂ ಕೊಳ್ಳಲು ಆಸಕ್ತಿ ಇರಲಿಲ್ಲ.

ಅಷ್ಟರಲ್ಲೇ ನಾಲ್ಕು ಗಂಟೆಯ  ಸಿಕೆಎಂಎಸ್ ಬಸ್ ಬಸ್ ನಿಲ್ದಾಣದಿಂದ ಹೊರಡುತ್ತಿದ್ದುದು ನನ್ನ ಕಣ್ಣಿಗೆ ಬಿತ್ತು. ಆದರೆ ನಾನು ಅದನ್ನು ಹತ್ತಿ ಹೋಗುವುದು ಅಸಾಧ್ಯವಾಗಿತ್ತು. ನನಗೂ ಮತ್ತು ತಂದೆಯವರಿಗೂ ಆತಂಕ ಏರಿ ಹೋಯಿತು. ಕೇವಲ ಇನ್ನೊಂದು ಶಂಕರ್ ಟ್ರಾನ್ಸ್ಪೋರ್ಟ್ ಬಸ್ ಗಂಟೆಗೆ ಶಿವಮೊಗ್ಗೆಗೆ ಹೊರಡಲಿತ್ತು.  ಅದು ತಪ್ಪಿದರೆ ನಾವು ಮನೆಗೆ ವಾಪಾಸ್ ಆಗಬೇಕಿತ್ತು.  ಆದರೆ ಮಾರನೇ ದಿನವಾದರೂ ತಂದೆಯವರಿಗೆ ಹಣವನ್ನು ಒದಗಿಸಲು ಹೇಗೆ ಸಾಧ್ಯವಿತ್ತು? ಒಟ್ಟಿನಲ್ಲಿ ನಾವೊಂದು ವರ್ಣಿಸಲಾರದ ದುಸ್ಥಿತಿಯಲ್ಲಿ ಕೊಪ್ಪ ಪೇಟೆಯಲ್ಲಿ ಸಿಲುಕಿಕೊಂಡಿದ್ದೆವು.
------- ಮುಂದುವರಿಯುವುದು-----

No comments: