Wednesday, March 4, 2020

ಬಾಲ್ಯ ಕಾಲದ ನೆನಪುಗಳು – ೬೮


ವಿಗ್ರಹದಂತೆ ಹೋಟೆಲಿನ ಮುಂದೆ ರಸ್ತೆಯಲ್ಲಿ  ನಿಂತಿದ್ದ ನನ್ನನ್ನು ಯಾರೋ ಮೈ ಕುಲುಕಿ --ಕೃಷ್ಣಮೂರ್ತಿ, ಕೃಷ್ಣಮೂರ್ತಿ ---ಎಂದು ಕರೆಯುತ್ತಿರುವಂತೆ ನನಗೆ ಅರಿವಾಯಿತು. ನಾನು ಹೊರಳಿ ನೋಡುವಾಗ ಲಚ್ಚು ನನ್ನ ಮೈ ಮುಟ್ಟಿ ನಿದ್ದೆಯಿಂದ ಎಬ್ಬಿಸುತ್ತಿರುವುದು ಗೊತ್ತಾಯಿತು. ಅದು ಅಡಿಗರಲ್ಲವೆಂದು ತಿಳಿದ ನನಗಾದ ಖುಷಿ  ಅಷ್ಟಿಷ್ಟಲ್ಲ. ಆಗಲೇ ಬೆಳಿಗ್ಗೆ ಗಂಟೆಯಾಗಿ ಹೋಗಿದ್ದು ಊರಿನ ಬಸ್ ಹಿಡಿಯಲು ನನಗೆ ಲೇಟ್ ಆಗಬಾರದೆಂದು ಲಚ್ಚು ನನ್ನನ್ನು ನಿದ್ದೆಯಿಂದ ಎಬ್ಬಿಸಿದ್ದ. ಅಡಿಗರು ನನ್ನನ್ನು ಕೂಗಿ ಕರೆದದ್ದು ಕೇವಲ ಕನಸಾಗಿತ್ತು. ನಾನು ಕಂಡಿದ್ದು ಕೇವಲ ಒಂದು ದುಃಸ್ವಪ್ನ ಆಗಿತ್ತು ಅಷ್ಟೇ. ಆದರೆ ಅದು ನಿಜವಾಗುವ ಚಾನ್ಸ್ ಇದ್ದೇ  ಇತ್ತು.
ಪುಣ್ಯಕ್ಕೆ ನಾನು ಆಮೇಲೆ ಹೋಟೆಲಿನ ಮುಂದೆ ಹೋಗುವಾಗ ಅಡಿಗರು ಅಡಿಗೆ ಮನೆಯಲ್ಲಿ ಬ್ಯುಸಿ ಆಗಿದ್ದರಿಂದ ನನ್ನತ್ತ ನೋಡಲೇ ಇಲ್ಲ. ಬೇಸಿಗೆ ರಜೆಯ ನಂತರ ನಾನು ಮತ್ತು ವೆಂಕಟರಮಣ ಅವರ ಬಾಕಿ ಸಾಲವನ್ನು  ತೀರಿಸಲು ಹೋದಾಗ ಕೂಡ ಅವರು ನಮ್ಮಿಂದ ಹಣ ಬಾಕಿಯಾಗಿದ್ದು ಗೊತ್ತೇ ಇರಲಿಲ್ಲವೆಂದು ಹೇಳಿಬಿಟ್ಟರು. ಪ್ರಾಯಶಃ ಅವರಿಗೆ ಜುಜುಬಿ ಎಂದು ಕಾಣಿಸಿದ ನಮ್ಮ ಹಣ ನಮಗೊಂದು ಪರ್ವತದಂತೇ ಅನ್ನಿಸಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಅವರ ಹಣ  ಬಾಕಿ ಉಳಿಸಿ ಊರಿಗೆ ಹೋದ ನಮಗೆ ಮಾತ್ರಾ ಅದೆಷ್ಟು ತಪ್ಪಿತಸ್ಥ ಭಾವನೆ ಇತ್ತೆಂದು ಹೇಳಲು ಅಸಾಧ್ಯ. ಅಡಿಗರಿಗೆಷ್ಟು ಖುಷಿ ಆಯಿತೆಂದರೆ ಅವರು ನಮಗೆ ಒಂದೊಂದು ಕಪ್ ಫ್ರೀ ಜಾಮೂನ್ ಆರ್ಡರ್ ಮಾಡಿಬಿಟ್ಟರು!
ಪುಟ್ಟಣ್ಣನ ಸಾಹಿತ್ಯ ಲೋಕ
ದಿನಗಳಲ್ಲಿ ನಮ್ಮ ಮನೆಯ ಪರಿಸ್ಥಿತಿ ಏನೇನೂ ಸರಿಯಿರಲಿಲ್ಲ. ಒಂದೇ ಒಂದು ಸಂತೋಷದ ವಿಷಯವೆಂದರೆ ನನ್ನ ಎರಡನೇ ಅಣ್ಣ ಲಕ್ಷ್ಮೀನಾರಾಯಣನ (ಪುಟ್ಟಣ್ಣನ) ಬರವಣಿಗೆಗಳಿಗೆ ಸಿಕ್ಕ ಪ್ರೋತ್ಸಾಹ. ನಾನು ಮೊದಲೇ ಬರೆದಂತೆ ಪುಟ್ಟಣ್ಣ ಹಿಂದೆಯೇ "ಚಂದ್ರಾವಳಿ" ಎಂಬ ಕೈಬರಹದ ಕೃತಿಗಳನ್ನು ರಚಿಸಿದ್ದ. ಆದರೆ ಅವನ ಸಾಹಿತ್ಯ ಪ್ರಯತ್ನಗಳಿಗೆ ತಕ್ಕ ಪ್ರೋತ್ಸಾಹ ಮನೆಯಿಂದ ದೊರೆತಿರಲಿಲ್ಲ. ಶೃಂಗೇರಿ ಮಿಡ್ಲ್ ಸ್ಕೂಲಿನಲ್ಲಿ ಅವನು ಓದುವಾಗ ಅದರ ಹೆಡ್ ಮಾಸ್ಟರ್ ಬಸವರಾಜ್ ಅವರಿಂದ ಅವನ ಬರವಣಿಗೆಗೆ ಒಳ್ಳೆ ಪ್ರೋತ್ಸಾಹ ಸಿಕ್ಕಿತು. ಸ್ವತಃ ಸಾಹಿತಿಯಾಗಿ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದ್ದವರು ಬಸವರಾಜ್. ಇದಲ್ಲದೇ ನಮ್ಮ ಕಸಿನ್ ಹಂಚಿನಮನೆ ಸುಬ್ರಹ್ಮಣ್ಯನ  ಸಹಾಯವೂ ಪುಟ್ಟಣ್ಣನಿಗೆ ದೊರೆಯಿತು. ಪುಟ್ಟಣ್ಣ ತನ್ನ ಮೊದಲ ಕೃತಿ "ಗಾನ ವಿಹಾರ" ಎಂಬ ಕವನ ಸಂಕಲನವನ್ನು ಪ್ರಕಟಿಸಿಯೇ ಬಿಟ್ಟ!  ಪುಟ್ಟಣ್ಣನ ಕೃತಿಗೆ ನಮ್ಮ ಊರಿನಲ್ಲಿ ಮತ್ತು ಬೇರೆ ಕಡೆ ಒಳ್ಳೆ ಪ್ರಚಾರ ಮತ್ತು ಮೆಚ್ಚುಗೆ ಕೂಡ ದೊರೆಯಿತು.
ಮಲೆನಾಡ ಮಲ್ಲಿಗೆ
ನಾನು ಮೊದಲೇ ಬರೆದಂತೆ ಪುಟ್ಟಣ್ಣ ನಮ್ಮ ಶ್ರೀಮಂತ ಜಮೀನ್ದಾರ್ ಅಂಕಲ್ ಹಂಚಿನಮನೆ ಶಿಂಗಪ್ಪಯ್ಯನವರ ಮನೆಯಲ್ಲಿದ್ದು ಶೃಂಗೇರಿ ಪ್ರೌಢಶಾಲೆಗೆ ಓದಲು ಹೋಗುತ್ತಿದ್ದ.  ಅವರ ಒಬ್ಬನೇ ಮಗ ಸುಬ್ರಹ್ಮಣ್ಯ ಎಸ್ ಎಸ್ ಎಲ್ ಸಿ ಪಾಸ್ ಮಾಡಿ ಮನೆಯಲ್ಲೇ ಇದ್ದ.  ಇದ್ದಕ್ಕಿದ್ದಂತೆ ಶಿಂಗಪ್ಪಯ್ಯನವರು ನಿಧನ ಹೊಂದಿದುದರಿಂದ ಮನೆಯ ಆಡಳಿತ ಸುಬ್ರಹ್ಮಣ್ಯನ ಕೈಗೆ ಬಂತು. ಸುಂದರ ತರುಣ ಸುಬ್ರಹ್ಮಣ್ಯನಿಗೆ  ತುಂಬಾ ಎಳೆಯ ವಯಸ್ಸಿನಲ್ಲೇ ದೊಡ್ಡ ಜಮೀನ್ದಾರನಾಗುವ ಸೌಭಾಗ್ಯ ಒದಗಿ ಬಂತು. ನಮ್ಮ ದಾಯಾದಿಗಳಲ್ಲಿ ಅವನಷ್ಟು ಶ್ರೀಮಂತರು ಯಾರೂ ಇರಲಿಲ್ಲ. ಹಾಗಾಗಿ ನಾವು ಅವನಿಂದ ತುಂಬಾ ಸಹಾಯದ ನಿರೀಕ್ಷೆ ಇಟ್ಟುಕೊಂಡಿದ್ದರಲ್ಲಿ ತಪ್ಪೇನಿರಲಿಲ್ಲ.

ಒಮ್ಮೆಗೇ ಕೈ ತುಂಬಾ ಹಣವಿರುವ ವ್ಯಕ್ತಿಯಾದ ಸುಬ್ರಹ್ಮಣ್ಯನಿಗೆ ಉದ್ಯಮಶೀಲನಾಗುವ ಆಸೆ ಹುಟ್ಟಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಅದರ ಪರಿಣಾಮವೇಮಲೆನಾಡ ಮಲ್ಲಿಗೆ” ಎಂಬ ಕನ್ನಡ ಮ್ಯಾಗಜಿನ್ ಬಿಡುಗಡೆ. ಮೊದಲು ಮಾಸಿಕ ಎಂದು ತೀರ್ಮಾನಿಸಿದ ಪತ್ರಿಕೆ ಆಮೇಲೆ ತ್ರೈಮಾಸಿಕವಾಗಿ ಪರಿವರ್ತಿತವಾಯಿತು. ಸಾಹಿತ್ಯ ಮತ್ತು ಬರವಣಿಗೆಯ ಬಗ್ಗೆ ಯಾವುದೇ ಅನುಭವವಿಲ್ಲದ ಸುಬ್ರಹ್ಮಣ್ಯನ ಸಾಹಸಕ್ಕೆ ಸಂಪೂರ್ಣ ಸಹಕಾರ ಕೊಟ್ಟು  ಜವಾಬ್ದಾರಿ ಹೊತ್ತಿದ್ದು ಪುಟ್ಟಣ್ಣನೇ ಎಂದು ಹೇಳಲೇ ಬೇಕಿಲ್ಲ. ಅಧಿಕೃತ ಸಂಪಾದಕ ಸುಬ್ರಮಣ್ಯನೇ  ಆದರೂ ತೆರೆಮರೆಯ ಸಂಪಾದಕ ಪುಟ್ಟಣ್ಣನೇ ಆಗಿದ್ದ. ಇನ್ನೂ ಎಳೆಯ ವಯಸ್ಸಿನ ಪುಟ್ಟಣ್ಣನ ಪಾಲಿಗೆ ಅದೊಂದು ಸುಯೋಗವೆಂದು ಹೇಳಲೇ ಬೇಕು. ಅವನು ತನ್ನ ಬರವಣಿಗೆಯನ್ನು ಉತ್ತಮಗೊಳಿಸಿಕೊಂಡದ್ದು ಮಾತ್ರವಲ್ಲ , ಕನ್ನಡದ ಅಂದಿನ ಸಾಹಿತಿಗಳೊಡನೆ ಸಂಪರ್ಕಹೊಂದುವ (ಡಾಕ್ಟರ್ ಶಿವರಾಮ ಕಾರಂತರೂ ಸೇರಿ) ಅವಕಾಶವೂ ಅವನಿಗೆ ದೊರೆಯಿತು. ಆದರೆ ಆರ್ಥಿಕವಾಗಿ ಸುಬ್ರಹ್ಮಣ್ಯನಿಗೆ ಅದೊಂದು ನಷ್ಟದ ಉದ್ದಿಮೆಯೇ ಆಗಿತ್ತು. ಹಾಗಾಗಿ ಒಂದು ಉತ್ತಮ ಮಟ್ಟದ ಮ್ಯಾಗಝಿನ್ ಆಗಿ ಮೂಡಿ ಬಂದ ಮಲೆನಾಡ ಮಲ್ಲಿಗೆ ಬೇಗನೆ ನಿಂತು ಹೋಯಿತು.
ಮಲ್ಲಿಕಾ ಮಂದಿರ ಮತ್ತು ಮಸಾಲೆ ದೋಸೆ
ಆ ರಜೆಯಲ್ಲಿ ನಾನೊಮ್ಮೆ ಹಂಚಿನಮನೆಗೆ ಹೋಗಿದ್ದೆ. ನಾನು ಮತ್ತು ಪುಟ್ಟಣ್ಣ ಒಟ್ಟಾಗಿ ಸುಬ್ರಹ್ಮಣ್ಯನೊಡನೆ ಶೃಂಗೇರಿಯಲ್ಲಿ ಮಲ್ಲಿಕಾ ಮಂದಿರ ಎಂಬ ಹೋಟೆಲಿಗೆ ಹೋದೆವು. ಹೋಟೆಲಿನಲ್ಲಿ ರಶ್ ಎಷ್ಟಿತ್ತೆಂದರೆ ಒಂದೇ ಒಂದು ಸೀಟು ಕಾಲಿ ಇರಲಿಲ್ಲ. ಆದರೆ ಸುಬ್ರಮಣ್ಯ ನಮ್ಮನ್ನು ಸೀದಾ ಅಡಿಗೆಮನೆಯ ಹತ್ತಿರ ಕರೆದುಕೊಂಡು ಹೋದ. ಅಲ್ಲಿ ನಮಗೆ ಕುಳಿತುಕೊಳ್ಳಲು ಮಣೆ  ಹಾಕಲಾಯಿತು. ನಮಗೆ ಸಪ್ಲೈ ಮಾಡಿದ ಮಸಾಲೆ ದೋಸೆಯ ರುಚಿ ಶಿವಮೊಗ್ಗೆಯ ಗೋಪಿ ಹೋಟೆಲಿನ ದೋಸೆಯ ರುಚಿಗೇನೂ ಕಮ್ಮಿ ಇರಲಿಲ್ಲ. ಆಮೇಲೆ ಎಷ್ಟೋ ವರ್ಷ ಮಲ್ಲಿಕಾ ಮಂದಿರ ಶೃಂಗೇರಿಯ ಒಂದು ಲ್ಯಾಂಡ್ಮಾರ್ಕ್ ಆಗಿ ಬಿಟ್ಟಿತ್ತು.
ಸುಬ್ರಹ್ಮಣ್ಯ ಹೋಟೆಲ್ ಬಿಲ್ ಪೇಮೆಂಟ್ ಮಾಡುವಾಗ ಅವನ ಪರ್ಸ್ ಒಳಗೆ ಕಾಣುತ್ತಿದ್ದ ನೋಟುಗಳ ಕಂತೆ ನೋಡಿ ನನ್ನ ತಲೆ ತಿರುಗಿ ಹೋಯಿತು. ಪುಟ್ಟಣ್ಣ ಯಾವಾಗ ಬೇಕಾದರೂ ಸುಬ್ರಹ್ಮಣ್ಯನೊಡನೆ ಮಲ್ಲಿಕಾ ಮಂದಿರಕ್ಕೆ ಹೋಗಿ ತಿಂಡಿ ತಿನ್ನುತ್ತಿರ ಬಹುದೆಂದು ನನಗನಿಸಿ ಅವನ ಅದೃಷ್ಟವನ್ನು ನೋಡಿ ಸ್ವಲ್ಪ ಹೊಟ್ಟೆಕಿಚ್ಚು ಕೂಡ ಆಯಿತು. ಆದರೆ ನಾನೆಣಿಸಿದಷ್ಟು ಅದೃಷ್ಟ ಅದಾಗಿರಲಿಲ್ಲವೆಂದು ಮುಂದೆ ಗೊತ್ತಾಯಿತು.
ನಮ್ಮ ಸಂಸಾರದ ಆರ್ಥಿಕ ಜಂಜಾಟ
ಈ ಮೊದಲೇ ಹೇಳಿದಂತೆ ಆ ದಿನಗಳಲ್ಲಿ ನಮ್ಮ ಸಂಸಾರದ ಆರ್ಥಿಕ ಪರಿಸ್ಥಿತಿ ಏನೇನೂ ಸರಿ ಇರಲಿಲ್ಲ. ಅಣ್ಣ ರುಕ್ಮಿಣಕ್ಕನ ಮತ್ತು ತನ್ನ ಮದುವೆಗಾಗಿ ಸಂಪಿಗೇ ಕೊಳಲು ಮಾವಯ್ಯನ ಹತ್ತಿರ ಸಾಲ ತೆಗೆದಿದ್ದ. ನಮಗಿದ್ದ ಸ್ವಲ್ಪ ಅಡಿಕೆ ತೋಟದಿಂದ ಬರುವ ಆದಾಯ ನಮ್ಮ ಸಂಸಾರದ ಕೇವಲ ೮ ತಿಂಗಳ ಖರ್ಚಿಗೆ ಸಾಕಾಗುತ್ತಿತ್ತು. ಇನ್ನು ವೀಳ್ಯದೆಲೆ ಮತ್ತು ಬಾಳೆ ಕಾಯಿ ವ್ಯಾಪಾರದಿಂದ ಸ್ವಲ್ಪ ಹಣ  ಬಂದರೂ ಅದು ನಮ್ಮ ಇತರೆ ಖರ್ಚುಗಳಿಗೆ ಬೇಕಾಗುತ್ತಿತ್ತು. ಅಣ್ಣನೇನೋ ನಮ್ಮನ್ನು ಓದಿಸಲೇ ಬೇಕೆಂದು ಪುಟ್ಟಣ್ಣನನ್ನು ಶೃಂಗೇರಿಗೂ ಮತ್ತು ನನ್ನನ್ನು ಶಿವಮೊಗ್ಗೆಗೂ ಕಳಿಸಿಬಿಟ್ಟಿದ್ದ. ಆದರೆ ನಮ್ಮ ಖರ್ಚಿಗಾಗುವಷ್ಟು ಹಣ ಒದಗಿಸುವ ಶಕ್ತಿ ಆವನಿಗಿರಲಿಲ್ಲ.

ನಮ್ಮ ಬೇಸಿಗೆ ರಜೆ ಮೇ ತಿಂಗಳ ೩೧ಕ್ಕೆ ಮುಗಿಯಿತು. ಜೂನ್ ೧ನೇ ತಾರೀಕು ನಾನು ಸ್ಕೂಲಿಗೆ ಹಾಜರಾಗಬೇಕಿತ್ತು. ಆದರೆ ನಮ್ಮ ಹಾಸ್ಟೆಲ್ ಕೇವಲ ಜೂಲೈ ೧ನೇ ತಾರೀಕು ತೆರೆಯಲಾಗುತ್ತಿತ್ತು. ಆದ್ದರಿಂದ ನಾನು ಒಂದು ತಿಂಗಳು ಅರುಣಾಚಲಂ ಮೇಷ್ಟ್ರ ಮನೆಯಲ್ಲಿ ಇರಬೇಕಿತ್ತು. ಅದಕ್ಕಾಗಿ ೩೦ ರೂಪಾಯಿ ಮೇಷ್ಟ್ರಿಗೆ ಕೊಡಬೇಕಿತ್ತು. ಇದಲ್ಲದೇ ನನಗೆ ಟೆಕ್ಸ್ಟ್ ಬುಕ್ಸ್, ಸ್ಟೇಷನರಿ, ಬಸ್ ಚಾರ್ಜ್ ಮತ್ತಿತರ ಖರ್ಚುಗಳು ಇದ್ದವು. ಒಟ್ಟಿನಲ್ಲಿ ನನಗೆ ಸುಮಾರು ೫೦ ರೂಪಾಯಿ ಶಿವಮೊಗ್ಗೆಗೆ ಹೊರಡುವ ಮುನ್ನ ಬೇಕಾಗಿತ್ತು.
ಪುಟ್ಟಣ್ಣನ ಖರ್ಚಿಗೆ ಬೆಳ್ಳಿ ಲೋಟ
ಆ ದಿನ ಬೆಳಿಗ್ಗೆ ಅಣ್ಣ ಪುಟ್ಟಣ್ಣನನ್ನು ಕರೆದು ಅವನ ಕೈಯಲ್ಲಿ ಎರಡು ಪುಟ್ಟ ಬೆಳ್ಳಿ ಲೋಟಗಳನ್ನಿಟ್ಟ. ಅವು ಅಣ್ಣ ಮತ್ತು ಅತ್ತಿಗೆಗೆ ಮದುವೆಯಲ್ಲಿ ಬಂದ ಉಡುಗರೆಗಳಾಗಿದ್ದವು. ಪುಟ್ಟಣ್ಣ ಅವುಗಳೊಡನೆ ಶೃಂಗೇರಿಗೆ ಹೋಗಿ ಅಲ್ಲಿ ಪದ್ಮರಾಜ ಶೆಟ್ಟರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಅವನ್ನು ಮಾರಿ ಬಂದ ಹಣವನ್ನು ಅವನ ಟೆಕ್ಸ್ಟ್ ಬುಕ್, ಇತ್ಯಾದಿ ಕೊಳ್ಳಲು ಬಳಸಬೇಕಿತ್ತು. ಅಂತೂ ಇಂತೂ ಪುಟ್ಟಣ್ಣನೇನೋ ಹೊರಟು ಹೋದ. ಆದರೆ ನನ್ನ ಪರಿಸ್ಥಿತಿ ಹಾಗೆಯೇ ಮುಂದುವರೆಯಿತು. ನನಗೆ ಬೇಕಾದ ಹಣವನ್ನು ಅಣ್ಣನಿಂದ ಒದಗಿಸಲಾಗಲೇ ಇಲ್ಲ.
ಕೊಡುಗೈ ದಾನಿ ಪುರದಮನೆ ಶ್ರೀನಿವಾಸ ಸುಬ್ರಹ್ಮಣ್ಯಂ
ಆಗ ನನ್ನ ಅಣ್ಣ ಮತ್ತು ತಂದೆಯವರಿಗೆ ಮನಸ್ತಾಪವಾಗಿ ಪರಸ್ಪರ ಮಾತುಕತೆಗಳಿರಲಿಲ್ಲ. ತಂದೆಯವರು ಅಣ್ಣ ನನ್ನನ್ನು ಶಿವಮೊಗ್ಗೆಗೆ ಹೇಗೆ ಕಳುಹಿಸುತ್ತಾನೆಂದು ಗಮನಿಸುತ್ತಲೇ ಇದ್ದರು. ಜೂನ್ ೧೦ನೇ ತಾರೀಕಿನವರೆಗೆ ನೋಡಿ ಅವರು ೧೧ನೇ ತಾರೀಕು ಪುರದಮನೆ ಶ್ರೀನಿವಾಸ ಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗಿ ಅಣ್ಣ ನನ್ನನ್ನು ಶಿವಮೊಗ್ಗೆಗೆ ಕಳಿಸುವ ಏರ್ಪಾಟು ಮಾಡದ್ದರಿಂದ ನನಗೆ ಅಟೆಂಡೆನ್ಸ್ ಮತ್ತು ಪಾಠಗಳು ನಷ್ಟವಾಗುತ್ತಿದೆಯೆಂದು ತಿಳಿಸಿದರು . ಅವರು ಮಾರನೇ ದಿನ ಬೆಳಿಗ್ಗೆ ನನ್ನನ್ನು ಪುರದಮನೆಗೆ ಮನೆಗೆ ಕಳಿಸುವಂತೆ ಹೇಳಿದರು.

ಮಾರನೇ ದಿನ ಬೆಳಿಗ್ಗೆ ನಾನು ಪುರದಮನೆಗೆ ಹೋಗಿ ಶ್ರೀನಿವಾಸ ಸುಬ್ರಹ್ಮಣ್ಯಂ ಅವರನ್ನು ಭೇಟಿಯಾದೆ. ಅವರು ನನ್ನ ಓದಿನ ಬಗ್ಗೆ ಮತ್ತು ಶಿವಮೊಗ್ಗೆಗೆ ಹೋಗಲು ಬೇಕಾದ ಹಣದ ಬಗ್ಗೆ ವಿಚಾರಿಸಿದರು. ಆಮೇಲೆ ಮನೆಯೊಳಗೆ ಹೋಗಿ ತಮ್ಮ ಖಜಾನೆಯಿಂದ ೫೦ ರೂಪಾಯಿಗಳನ್ನು ತಂದು ನನ್ನ ಕೈಗಿತ್ತರು. ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ನಮಗೆ ಗೊತ್ತಿದ್ದಂತೆ ಮಲೆನಾಡಿನ ಶ್ರೀಮಂತರು ಕಾಸು ಬಿಚ್ಚದಿರುವುದಕ್ಕೆ ಪ್ರಸಿದ್ಧಿಯಾಗಿದ್ದರು. ಆದರೆ ಶ್ರೀನಿವಾಸ ಸುಬ್ರಹ್ಮಣ್ಯಂ ಅವರು ಅದಕ್ಕೆ ಅಪವಾದವಾಗಿದ್ದರು. ಆ ದಿನಗಳಲ್ಲಿ ಬೇರೊಬ್ಬ ಹುಡುಗನ ಓದಿಗಾಗಿ ೫೦ ರೂಪಾಯಿಗಳನ್ನು ಕೊಡುವುದು ಸಾಮಾನ್ಯ ವಿಷಯವೇನಾಗಿರಲಿಲ್ಲ. ನಾನು ಅವರಿಗೆ ನನ್ನ ಕೃತಜ್ಞತೆ ಹೇಳಿಬಿಟ್ಟೆ. ಅವರು ನನಗೆ ಚೆನ್ನಾಗಿ ಓದುವಂತೆ ಹೇಳಿ ಆಶೀರ್ವಾದ ಮಾಡಿದರು.

ನಾನು ೫೦ ರೂಪಾಯಿ ಹಿಡಿದು ಮನೆಗೆ ಬಂದಾಗ ತಂದೆಯವರಿಗೇನೋ ತುಂಬಾ ಸಂತೋಷವಾಯಿತು. ಆದರೆ ನಾನೊಂದು ಸಂದಿಗ್ದದಲ್ಲಿ ಸಿಲುಕಿದ್ದೆ. ಏಕೆಂದರೆ ತಂದೆಯವರು ನನಗೆ ತಾವು ಶ್ರೀನಿವಾಸ ಸುಬ್ರಹ್ಮಣ್ಯಂ ಹತ್ತಿರ ಹೋಗಿ ಅಣ್ಣ ನನ್ನನ್ನು ಶಿವಮೊಗ್ಗೆಗೆ ಕಳಿಸುವ ಏರ್ಪಾಟು ಮಾಡಿಲ್ಲವೆಂದು ಹೇಳಿದ್ದನ್ನು ನಾನು ಅಣ್ಣನಿಗೆ ಹೇಳಲೇ ಬಾರದೆಂದು ತಾಕೀತು ಮಾಡಿಬಿಟ್ಟರು. ಆ ವಿಷಯ ಅಣ್ಣನಿಗೆ ಗೊತ್ತಾದರೆ ಅವನಿಗೆ ವಿಪರೀತ ಕೋಪ ಬಂದು ಕೂಗಾಡುವನೆಂದು ಅವರಿಗೆ ಭಯವಿತ್ತು. ನಾನಂತೂ ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿದ್ದೆ. ಒಟ್ಟಿನಲ್ಲಿ ನನಗೇನು ಮಾಡಬೇಕೆಂಬ ಅರಿವಿಲ್ಲದೇ ಆ ದಿನ ಕಳೆದು ಹೋಯಿತು.
ನನ್ನ  ಕೈಯಲ್ಲೂ ಎರಡು ಬೆಳ್ಳಿ ಲೋಟಗಳು
ಮಾರನೇ ದಿನ ಬೆಳಿಗ್ಗೆ ಅಣ್ಣ ನನ್ನನ್ನು ಕರೆದು ನನ್ನ ಕೈಗೆ ಎರಡು ದೊಡ್ಡ ದೊಡ್ಡ ಬೆಳ್ಳಿ ಲೋಟಗಳನ್ನು ಕೊಟ್ಟ. ನಾನು ಶೃಂಗೇರಿಗೆ ಹೋಗಿ ಪುಟ್ಟಣ್ಣನ ಸಹಾಯ ಪಡೆದು ಅವನ್ನು ಪದ್ಮರಾಜ ಶೆಟ್ಟರ ಅಂಗಡಿಯಲ್ಲಿ ಮಾರಿ ಹಣ ತೆಗೆದುಕೊಂಡು ಬರಬೇಕಿತ್ತು. ಆ ಹಣದೊಂದಿಗೆ ನಾನು ಆಮೇಲೆ ಶಿವಮೊಗ್ಗೆಗೆ ಪ್ರಯಾಣ ಮಾಡಬೇಕಿತ್ತು. ನಾನೀಗ ನಿಜವಾದ ಸಂಕಷ್ಟದಲ್ಲಿ ಸಿಕ್ಕಿ ಬಿದ್ದಿದ್ದೆ. ನಾನು ತಂದೆಯವರಿಗೆ ವಿಷಯ ತಿಳಿಸಿದಾಗ ಅವರು ನಾನು ಶೃಂಗೇರಿಗೆ ಹೋಗದೇ ಆ ಬೆಳ್ಳಿ ಲೋಟಗಳನ್ನು ಅಣ್ಣನಿಗೆ ಹಿಂತಿರುಗಿಸಿ ಶ್ರೀನಿವಾಸ ಸುಬ್ರಹ್ಮಣ್ಯಂ  ಅವರು ಆಗಲೇ ನನಗೆ ೫೦ ರೂಪಾಯಿ ಕೊಟ್ಟಿರುವುದನ್ನು ತಿಳಿಸಬೇಕೆಂದು ಹೇಳಿದರು.
ನನ್ನ ಓದಿಗಾಗಿ ಹೋರಾಟಮಾಡಿದ್ದ ಅಣ್ಣನಿಗೆ ಸುಳ್ಳು ಹೇಳಬಹುದೇ?
ಆದರೆ ಅದು ಅಷ್ಟು ಸುಲಭವಿರಲಿಲ್ಲ. ಏಕೆಂದರೆ ಅಣ್ಣ  ನಾನು ಯಾವ ರೀತಿ ಶ್ರೀನಿವಾಸ ಸುಬ್ರಹ್ಮಣ್ಯಂ  ಅವರಿಂದ ಹಣ ಪಡೆಯಲು ಸಾಧ್ಯವಾಯಿತೆಂದು ಖಂಡಿತವಾಗಿ ಕೇಳಿಯೇ ಬಿಡುವನೆಂಬುದರಲ್ಲಿ ಸಂಶಯವಿರಲಿಲ್ಲ. ಆದರೆ ತಂದೆಯವರು ತಮ್ಮ ಹೆಸರನ್ನು ಹೇಳಲೇ ಬಾರದೆಂದು ನನಗೆ ಹೇಳಿಬಿಟ್ಟಿದ್ದರು. ನಾನು ಅಲ್ಲಿಯವರೆಗೆ ಅಣ್ಣನೊಡನೆ ಯಾವುದೇ ಸಂದರ್ಭದಲ್ಲೂ ಸುಳ್ಳು ಹೇಳುವ ಪ್ರಸಂಗ ಬಂದಿರಲಿಲ್ಲ. ಅಷ್ಟು ಮಾತ್ರವಲ್ಲ. ಸುಳ್ಳು ಹೇಳುವ ಕಲೆ ನನಗೆ ಸಾಧಿಸಿರಲಿಲ್ಲ. ಹಾಗೆ ಪ್ರಯತ್ನ ಮಾಡಲು ಹೋದರೆ ಅಣ್ಣನಿಗೆ ಅದು ಸುಳ್ಳೆಂದು ಗೊತ್ತಾಗುವ ಬಗ್ಗೆ ಯಾವುದೇ ಸಂಶಯವಿರಲಿಲ್ಲ. ನನ್ನ ಓದಿಗಾಗಿ ಅಷ್ಟೊಂದು ಹೋರಾಟಮಾಡಿದ್ದ ಅಣ್ಣನ ಮನಸ್ಸಿಗೆ ಯಾವುದೇ ರೀತಿಯಲ್ಲಿ ನೋವುಂಟು ಮಾಡಲು ನಾನು ಖಂಡಿತವಾಗಿಯೂ ತಯಾರಿರಲಿಲ್ಲ. ನನ್ನ ಓದಿಗಾಗಿ  ತನಗೆ ಮದುವೆಯಲ್ಲಿ ಉಡುಗೊರೆಯಾಗಿ ಬಂದ ಬೆಳ್ಳಿ ಲೋಟಗಳನ್ನು ಮಾರಲು  ಸಿದ್ಧನಾದ ಅಣ್ಣನಿಗೆ ನಾನು ಸುಳ್ಳು ಹೇಳಬಹುದೇ? ಒಟ್ಟಿನಲ್ಲಿ ನನ್ನ ಪರಿಸ್ಥಿತಿ ಯಾವುದೇ ಪರಿಹಾರವಿಲ್ಲದ ಸಮಸ್ಯೆಯಂತಾಗಿ  ಬಿಟ್ಟಿತ್ತು .
------- ಮುಂದುವರಿಯುವುದು-----

No comments: