Sunday, March 5, 2017

ನನ್ನ ಬಾಲ್ಯ


ಅಧ್ಯಾಯ ೧೭
ಅಕ್ಕನ ಮನೆಗೆ ಮೂರು ಮಂದಿ ಹುಡುಗಿಯರ ಆಗಮನದೊಂದಿಗೆ ನಮ್ಮ ಆಟ ಮತ್ತು ಚೇಷ್ಟೆಗಳೂ ಜಾಸ್ತಿಯಾದುವು. ನನಗೆ ಅಲ್ಲಿಯವೆರೆಗೆ ಹುಡುಗಿಯರೊಂದಿಗೆ ಅಡಿ ಅಭ್ಯಾಸವಿರಲಿಲ್ಲ. ಮೂವರು ಹುಡುಗಿಯರಲ್ಲಿ ಒಬ್ಬಳು ತುಂಬಾ ತುಂಟಿಯಾಗಿದ್ದಳು. ನನಗೆ ಹುಡುಗಿಯರ ಮುಂದೆ ನನ್ನ ಶೌರ್ಯವನ್ನು ತೋರಿಸಿಕೊಳ್ಳಬೇಕೆಂಬ ಅಭಿಲಾಷೆ ಮೇರೆ ಮೀರಿತು. ಅದೆಷ್ಟಾಯಿತೆಂದರೆ ನನ್ನ ಜೀವಕ್ಕೇ ಅಪಾಯವಾಗುವಂತ ಸಾಹಸವೊಂದನ್ನು ನಾನು ಮಾಡಿಬಿಟ್ಟೆ!

ಅಕ್ಕನ ಮನೆಯ ಹಿಂಭಾಗದಲ್ಲಿದ್ದ ಬಾವಿಯಲ್ಲಿದ್ದ ನೀರು ಬೇಸಿಗೆಯಲ್ಲಿ ಕಡಿಮೆಯಾಗಿ ಮನೆಯ ಬಳಕೆಗೆ ಸಾಕಾಗುವಷ್ಟು ಇರುತ್ತಿರಲಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಸ್ನಾನಕ್ಕೆ ತೋಟದಲ್ಲಿ ಹಳ್ಳದ ಪಕ್ಕದಲ್ಲಿದ್ದ ಬಾವಿಯೊಂದರ ನೀರು ಬಳಸಲಾಗುತ್ತಿತ್ತು. ಅದಕ್ಕಾಗಿ ಬಾವಿಯ ಪಕ್ಕದಲ್ಲೇ ಒಂದು ಸ್ನಾನದ ಮನೆಯನ್ನು ಕಟ್ಟಲಾಗಿತ್ತು. ಭಾವಿಯಲ್ಲಿ ನೀರು ಯಥೇಚ್ಛವಾಗಿತ್ತು.

ದಿನ ನಾವು ಮಕ್ಕಳು ಒಬೊಬ್ಬರಾಗಿ ತೋಟದ ಬಚ್ಚಲಲ್ಲಿ ಸ್ನಾನ ಮಾಡುತ್ತಿದ್ದೆವು. ವೇಳೆಗೆ ಬಚ್ಚಲಿನ ಹೊರಗೆ ಭಾವಿಯ ಬಳಿ ಸ್ನಾನಕ್ಕೆ ಕಾಯುತ್ತಿದ್ದವರಲ್ಲಿ ಒಂದು ಸ್ಪರ್ಧೆ ಪ್ರಾರಂಭವಾಯಿತು. ಬಾವಿ ಸಂಪೂರ್ಣವಾಗಿ ತುಂಬಿ ಅದರ ಮೇಲ್ಭಾಗದಿಂದ ಎರಡು ಮೆಟ್ಟಿಲುಗಳು ಮಾತ್ರ ಕಣ್ಣಿಗೆ ಬೀಳುತ್ತಿದ್ದವು. ನಮ್ಮಲ್ಲಿ ಯಾರು ಹೆಚ್ಚು ಮೆಟ್ಟಿಲು ಕೆಳಗಿಳಿಯುವರೆಂಬುದೇ ಸ್ಪರ್ಧೆಯಾಗಿತ್ತು. ಮೊದಲಿನ ಸ್ಪರ್ಧಿಗಳು ಒಬೊಬ್ಬರಾಗಿ ಮೂರು ಮೆಟ್ಟಿಲವರೆಗೆ ಕಾಲಿಟ್ಟು ನಿಂತು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ನನ್ನ ಸರದಿ ನಾಲ್ಕನೇ ಮೆಟ್ಟಿಲಿನದ್ದಾಗಿತ್ತು. ನಾನು ನಿರಾಳವಾಗಿ ಮೆಟ್ಟಿಲಮೇಲೆ ಕಾಲಿಟ್ಟು ನಿಂತುಬಿಟ್ಟೆ. ನೀರು ನನ್ನ ಕಾಲಗಂಟಿನ ಮೇಲಿನವರೆಗೂ ಬಂದಿತ್ತು. ನನ್ನ ಸಾಹಸಕ್ಕೆ ಹುಡುಗಿಯರಿಂದಲೂ ಚಪ್ಪಾಳೆ ಸಿಕ್ಕಿತು. ಅದು ನನ್ನ ತಲೆಗೇರಿ ಐದನೇ ಮೆಟ್ಟಿಲಿಗೆ ಕಾಲಿಡಲು ಸಹ ತೀರ್ಮಾನಿಸಿಬಿಟ್ಟೆ! ಅಂತೆಯೇ ನನ್ನ ಕಣ್ಣಿಗೆ ಕಾಣದಂತಿದ್ದ ಐದನೇ ಮೆಟ್ಟಿಲಿನತ್ತ ನನ್ನ ಒಂದು ಕಾಲನ್ನು ಜೋರಾಗಿ ಊರಿಬಿಟ್ಟೆ. ಹುಡುಗಿಯರಿಂದ ಚಪ್ಪಾಳೆಗಳೂ ಕೇಳಿಸಿದವು. ಆದರೆ ಅದು ನನ್ನ ಮೂರ್ಖತನದ ಪರಮಾವಧಿಯಾಗಿತ್ತು. ಏಕೆಂದರೆ ಬಾವಿಯಲ್ಲಿ ಐದನೇ ಮೆಟ್ಟಿಲೇ ಇರಲಿಲ್ಲ!

ನಾನು ಕಾಲಿಟ್ಟ ರಭಸಕ್ಕೆ ನನ್ನ ಶರೀರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಯಿತು. ನಾನು ನೀರಿನಲ್ಲಿ ತೇಲುತ್ತಲೇ ಮೆಟ್ಟಿಲಿನ ಹತ್ತಿರಬಂದು ಬಾವಿಯಿಂದ ಹೊರಬರಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮಾತ್ರವಲ್ಲ ನೀರು ನಾನು ಉಸಿರೆಳೆದಂತೆ ದೇಹದೊಳಗೆ ಸೇರತೊಡಗಿತು. ಬಾವಿಯ ಹೊರಗಿದ್ದ ಮಕ್ಕಳು ಬೊಬ್ಬೆ ಹಾಕತೊಡಗಿದರು. ಆದರೆ ಯಾರೂ ಹತ್ತಿರದಲ್ಲಿದ್ದ ಮನೆಯಲ್ಲಿದ್ದ ಹಿರಿಯರಿಗೆ ತಿಳಿಸುವ ಯೋಚನೆ ಮಾಡಲಿಲ್ಲ. ಅವರಿಗೆ ಅದನ್ನು ಹೇಳುವ ನನ್ನ  ಪ್ರಯತ್ನ ವಿಫಲವಾಯಿತು. ನಾನು ನನ್ನ ಕಥೆ ಮುಗಿಯಿತೆಂದೇ ಭಾವಿಸಿದೆ.

ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು. ಅದೇ ಸಮಯಕ್ಕೆ ಭಾವನ ತಮ್ಮ ಚಂದ್ರಹಾಸಯ್ಯನವರ ಪತ್ನಿ ಸರಸ್ವತಮ್ಮನವರು ದೇವರೇ ಕಳಿಸಿದಂತೆ ಸ್ನಾನಕ್ಕಾಗಿ ಅಲ್ಲಿಗೆ ಬಂದರು. ಅವರಿಗೆ ನಾನು ಬಾವಿಯಲ್ಲಿ ತೇಲಾಡುವ ದೃಶ್ಯ ಗೋಚರಿಸಿ ಕಂಗಾಲಾದರು. ಆದರೆ ಗಟ್ಟಿಮುಟ್ಟಾಗಿದ್ದ ಅವರು ಸ್ವಲ್ಪವೂ ಭಯಪಡದೆ ನನಗೆ ನೀರಿನೊಳಗಿನಿಂದ ಮೇಲಕ್ಕೆ ಕೈ ಚಾಚುವಂತೆ ಕೂಗಿ ಹೇಳತೊಡಗಿದರು. ನಾನು ಕೈ ಮೇಲೆತ್ತುತ್ತಿದ್ದಂತೆ ಅವರು ನನ್ನನು ಒಮ್ಮೆಗೆ ನೀರಿನಿಂದ ಹೊರಗೆಳೆದು ಹಾಕಿಬಿಟ್ಟರು. ಆಮೇಲೆ ನನ್ನನ್ನು ಮನೆಯೊಳಗೇ ಎತ್ತಿಕೊಂಡು ಹೋಗಿ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆಯಲಾಯಿತು. ಅರೆ ಎಚ್ಚರದಲ್ಲಿದ ನನಗೆ ತುಂಬಾ ಸಮಯ ಇನ್ನೂ ನೀರಿನೊಳಗೇ ಮುಳುಗಿದ್ದಂತೆ ಅನ್ನಿಸುತ್ತಿತ್ತು.

ನನ್ನ ಮಾ ರಣಾಂತಿಕ ಸಾಹಸಕ್ಕೆ ಅಕ್ಕ ಮತ್ತು ಭಾವನವರಿಂದ ತೀವ್ರ  ಪ್ರತಿಕ್ರಿಯೆ ಬರಬಹುದೆಂದು ನಾನು ಭಯಪಟ್ಟಿದ್ದೆ. ಆದರೆ ಅವರಿಬ್ಬರೂ ನನಗೆ ಒಂದು ಮಾತೂ ಅನ್ನಲಿಲ್ಲಆದರೆ ಊರಿನ ತುಂಬಾ ನನ್ನ ಸಾಹಸದ ಸಮಾಚಾರ ಹರಡಿತು. ಅಕ್ಕನ ಮನೆಯ ಬಾವಿಯ ಆಳ ಅಳತೆ ಮಾಡಿದವನೆಂಬ ಬಿರುದೂ ನನಗೆ  ಸಿಕ್ಕಿತುಬೇರೆ ಮಕ್ಕಳು ನನ್ನ ಹತ್ತಿರ ಪದೇಪದೇ "ಬಾವಿಯ ಆಳ ಎಷ್ಟಿತ್ತಪ್ಪಾ?" ಎಂದು ಕೇಳತೊಡಗಿದರು!
---------------------------------00------------------------------------00-------------------------00------------------------
ಅಕ್ಕನಿಗೆ ಮದುವೆಯಾದಾಗ ಅವಳಿಗೆ ಕೇವಲ ೧೬ ವರ್ಷ ವಯಸ್ಸು. ಆದರೆ ನಾನು ಹೊಕ್ಕಳಿಕೆಯಲ್ಲಿದ್ದಾಗಲೇ ಅವಳಿಗೊಂದು ಹೆಣ್ಣನ್ನು ಧಾರೆ ಎರೆಸಿಕೊಳ್ಳುವ  ಅವಕಾಶ ಬಂದಿತು. ತೀರ್ಥಹಳ್ಳಿಯ ಸಮೀಪದಲ್ಲಿದ್ದ ಆಲ್ಮನೆ ಎಂಬ ಊರಿನ ತಿಮ್ಮಪ್ಪಯ್ಯ ಎಂಬುವರು ಭಾವನ ದಾಯಾದಿಗಳಂತೆ. ಅವರಿಗೆ ಶೃಂಗೇರಿಯ ಸಮೀಪದಲ್ಲಿದ್ದ ಜಕ್ಕಾರುಕೊಡಿಗೆ ಎಂಬ ಊರಿನ ಹುಡುಗಿಯೊಡನೆ ಮದುವೆ ನಿಶ್ಚಯವಾಗಿತ್ತು. ತಿಮ್ಮಪ್ಪಯ್ಯನವರ ತಂದೆತಾಯಿಗಳು (ಪ್ರಾಯಶಃ) ಇಲ್ಲದಿದ್ದರಿಂದ ಅಕ್ಕ-ಭಾವನವರೇ ಹುಡುಗಿಯನ್ನು ಧಾರೆಎರೆಸಿಕೊಳ್ಳಬೇಕೆಂದು ನಿಶ್ಚಯವಾಗಿತ್ತು. ಮದುವೆ ಜಕ್ಕಾರುಕೊಡಿಗೆ ಹೆಣ್ಣಿನ ಮನೆಯಲ್ಲೇ ನಡೆಯುವುದೆಂದೂ ನಿಶ್ಚಯಿಸಲಾಗಿತ್ತು.

ಅಕ್ಕ ಭಾವ ಇಬ್ಬರು ಮದುವೆಗೆ ನಮಗಿಂತ ಮೊದಲೇ ಹೊರಟು  ಹೋದರು. ನಾನು ಬೇರೆಯವರೊಡನೆ ಮದುವೆಯ ಹಿಂದಿನ ದಿನದ ಸಂಜೆಗೆ ಜಕ್ಕಾರುಕೊಡಿಗೆ ತಲುಪುವುದೆಂದೂ ತೀರ್ಮಾನಿಸಲಾಗಿತ್ತು. ಅದರಂತೆ ನಾವೆಲ್ಲಾ ಹರಿಹರಪುರಕ್ಕೆ ನಡೆದು ಹೋದೆವು. ಅಲ್ಲಿಂದ ಒಂದು ಲಾರಿಯಲ್ಲಿ ನಾವು ಶೃಂಗೇರಿ ಮಾರ್ಗವಾಗಿ ಜಕ್ಕಾರುಕೊಡಿಗೆ ಸೇರಬೇಕಿತ್ತು. ನಮ್ಮ ಅದೃಷ್ಟಕ್ಕೆ ಎಷ್ಟು ಕಾದರೂ ಲಾರಿ ಮಾತ್ರಾ ಬರಲೇ ಇಲ್ಲ. ಕೊನೆಗೆ ಸಂಜೆಯ ನಂತರ ಅದರ ದರ್ಶನವಾಯಿತು. ನಾವೆಲ್ಲ ಡಬಡಬನೆ ಲಾರಿ ಹತ್ತಿದೆವುಆದರೆ ಕೂಡಲೇ ಹೊರಟ ಅದರ ಶಬ್ದವನ್ನು ನೋಡಿದರೆ ಏನೋ  ಸಮಸ್ಯೆ ಇರುವಂತೆ ತೋರುತ್ತಿತ್ತು. ನಾವು ಜಕ್ಕಾರುಕೊಡಿಗೆ ಸೇರುವಾಗ ರಾತ್ರಿಯಾಗುವುದೆಂದು ಭಾವಿಸಿದೆವು.

ಆದರೆ ನಮ್ಮ ನಿರೀಕ್ಷೆಯೂ ಸುಳ್ಳಾಯಿತು. ಹರಿಹರಪುರದಿಂದ ಸ್ವಲ್ಪ ದೂರದಲ್ಲಿದ್ದ ಅಡ್ಡಗದ್ದೆ ಎಂಬ ಊರಿನ ಹತ್ತಿರ ನಮ್ಮ ಲಾರಿ ನೆಲಕಚ್ಚಿ ನಿಶ್ಶಬ್ದವಾಯಿತು. ಡ್ರೈವರ್ ಮತ್ತು ಕಂಡಕ್ಟರ್ ಅದನ್ನು ರಿಪೇರಿ ಮಾಡಲು ಮಾಡಿದ ಪ್ರಯತ್ನವೆಲ್ಲ ವಿಫಲವಾಗಿ ನಾವು ಕತ್ತಲೆಯಲ್ಲಿ  ಬೀದಿ ಪಾಲಾದೆವು.

ಆಗ  ಸುಮಾರು ರಾತ್ರಿ ಘಂಟೆ ವೇಳೆಯಿರಬೇಕು. ಗಾಡಾಂಧಕಾರದ ರಾತ್ರಿಯಲ್ಲಿ ನಾವು ರಸ್ತೆಯ ಪಕ್ಕದ ಕಾಡಿನ ದಂಡೆಯಲ್ಲಿ ಕುಳಿತು ಆಕಾಶದಲ್ಲಿ ಕಾಣುತ್ತಿದ್ದ ನಕ್ಷತ್ರಗಳನ್ನು ಎಣಿಸತೊಡಗಿದೆವು. ನಕ್ಷತ್ರಗಳಲ್ಲಿ ಧ್ರುವ ನಕ್ಷತ್ರ ಯಾವುದೆಂದು ಕಂಡುಹಿಡಿಯುವ ಸ್ಪರ್ಧೆ ನಡೆಯಿತು. ಅಷ್ಟರಲ್ಲೇ ನಮಗೆ ಹರಿಹರಪುರದ ಕಡೆಯಿಂದ ಯಾವುದೋ ವಾಹನವೊಂದು ಬರುತ್ತಿರುವ ಶಬ್ದ ಕೇಳಿ ಬೆಳಕೂ ಕಾಣಿಸಿತು. ನಮ್ಮ ಹತ್ತಿರ ಬಂದು ನಿಂತ ಬಸ್ಸಿನ ಹೆಸರು ಎಂಪಿಎಂ ಬಸ್ ಎಂದೂ ಮತ್ತು ಅದು ಬೆಳಗಿನ ಝಾವ ಶೃಂಗೇರಿಯಿಂದ ಹೊರಟು ಬೀರೂರಿಗೆ ಹೋಗಿ ಈಗ ವಾಪಾಸ್ ಬರುತ್ತಿತ್ತೆಂದೂ ತಿಳಿಯಿತು. ನಾವೆಲ್ಲ ಬೇಗನೆ ಬಸ್ ಏರಿದೆವು. ಅರ್ಧಗಂಟೆಯಲ್ಲಿ ನಾವು ಶೃಂಗೇರಿಯಲ್ಲಿದ್ದೆವು.

ಶೃಂಗೇರಿಯಲ್ಲಿ ದಿನಗಳಲ್ಲಿ ನಮ್ಮೂರಿನವರಿಗೆಲ್ಲಾ ಪರಿಚಿತರಾಗಿದ್ದ ಅಣ್ಣಪ್ಪಯ್ಯ ಎಂಬುವರ ಮನೆಯಲ್ಲಿ ನಾವು ರಾತ್ರಿ ಊಟ ಮಾಡಿ ಅಲ್ಲಿಯೇ ತಂಗಿದೆವು. ಬೆಳಗಾಗುವಾಗ ನಮ್ಮ ಲಾರಿ ರಿಪೇರಿಯಾಗಿ ನಮ್ಮನ್ನು ಜಕ್ಕಾರುಕೊಡಿಗೆಗೆ  ತಲುಪಿಸುವುದೆಂದು ಭಾವಿಸಲಾಗಿತ್ತು. ಆದರೆ ಅದು ಸುಳ್ಳಾಯಿತು. ಆದ್ದರಿಂದ ನಾವು ನಮ್ಮ ಕಾಲ್ನಡಿಗೆ ಪ್ರಯಾಣ ಪ್ರಾರಂಭಿಸಿ ತುಂಗಾ ನದಿಯನ್ನು ದಾಟಿ ವೈಕುಂಠಪುರವೆಂಬ ಊರಿನ ಮೂಲಕ ಗಂಗಾಮೂಲದತ್ತ (ತುಂಗೆಯ ಉಗಮಸ್ಥಳ) ಮುಂದುವರೆದೆವು. ಆಮೇಲೆ ಎಷ್ಟೋ ವರ್ಷದ ನಂತರ ಇದೇ  ವೈಕುಂಠಪುರದಲ್ಲಿ ಗಿರೀಶ್ ಕಾರ್ನಾಡ್ ಅವರು ನಟಿಸಿದ ಅನಂತಮೂರ್ತಿಯವರು ಬರೆದ ಸಂಸ್ಕಾರ ಸಿನಿಮಾ ಶೂಟಿಂಗ್ ನಡೆಯಿತು. ಆಗ ವೈಕುಂಠಪುರ ದೂರ್ವಾಸಪುರವಾಗಿ ಪರಿವರ್ತಿತವಾಗಿತ್ತು.

ಸುಮಾರು ಘಂಟೆಗೆ ನಾವು ಕಾಫಿ ಕಾಡು ಎಂಬ ಮನೆಯಲ್ಲಿ ವಾಸಿಸುತ್ತಿದ್ದ ಸುಬ್ಬರಾಯರೆಂಬುವರ ಮನೆಗೆ ತಲುಪಿದೆವು. ಅಲ್ಲಿ ನಮ್ಮ ಸ್ನಾನ ಮತ್ತು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ನಾವು ಮದುವೆಯ ಮುಹೂರ್ತಕ್ಕೆ ಸರಿಯಾಗಿ ಜಕ್ಕಾರುಕೊಡಿಗೆಗೆ ತಲುಪಿದೆವು. ಅಕ್ಕನಿಗೆ ನಾವು ಕೊನೆಗೂ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿದ್ದು ನೆಮ್ಮದಿ ತಂದಿತು.

ನನಗೆ ಶಾಲೆಗೆ ಹೋಗುವ ತೊಂದರೆ ಇಲ್ಲದ್ದರಿಂದ ಇನ್ನೂ ಕೆಲವು ದಿನ ಅಕ್ಕನ ಮನೆಯಲ್ಲೇ ಕಳೆಯ ಬಹುದಾಗಿತ್ತು. ಆದರೆ ಅಷ್ಟರಲ್ಲೇ ಪುಟ್ಟಣ್ಣನ ಉಪನಯನ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವ ಸಮಾಚಾರ ಬಂತು. ಆದ್ದರಿಂದ ನಾನು ಅಕ್ಕ ಮತ್ತು ಭಾವನವರೊಡನೆ ಪುನಃ ಕಾಲ್ನಡಿಗೆ ಪ್ರಯಾಣಮಾಡಿ ಅಡೇಖಂಡಿ  ತಲುಪಿದೆ.
----ಮುಂದುವರಿಯುವುದು ---



No comments: