Thursday, June 4, 2020

ಬಾಲ್ಯ ಕಾಲದ ನೆನಪುಗಳು – ೯೧

ಕಾಲೇಜಿನಲ್ಲಿ ಒಂದು ಪುಸ್ತಕ ಭಂಡಾರ

ಆ ವರ್ಷ ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆಯ ಪುಸ್ತಕ ಭಂಡಾರವನ್ನು ಸ್ಥಾಪಿಸಲಾಯಿತು. ಹಾಗೆಯೇ ವಿಶ್ವನಾಥ್ ಎಂಬ ತುಂಬಾ ವೃತ್ತಿಪರ ವ್ಯಕ್ತಿಯನ್ನು ಗ್ರಂಥಪಾಲಕರನ್ನಾಗಿ ನೇಮಕ ಮಾಡಲಾಯಿತು. ನಾನು ಅಲ್ಲಿಯವರೆಗೆ ಕೇವಲ ಕನ್ನಡ ಕಾದಂಬರಿಗಳನ್ನು ಓದಿದ್ದೆ. ಈಗ ಇಂಗ್ಲೀಷಿನಲ್ಲಿ ಬರೆದ ಕೃತಿಗಳನ್ನು ಓದಲು ನನಗೆ ಸಾಧ್ಯವಾಯಿತು. ನಾನು ಓದಿದ ಮೊಟ್ಟ ಮೊದಲ ಇಂಗ್ಲಿಷ್ ಪುಸ್ತಕವೆಂದರೆ ಮಹಾತ್ಮಾ ಗಾಂಧಿಯವರ ಆತ್ಮಕಥೆಯಾದ "ದಿ ಸ್ಟೋರಿ ಅಫ್ ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರುಥ್ " ಎಂಬ ಪುಸ್ತಕ. ಅದು ನನ್ನ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ನಾನು ಊಟ ಮಾಡುವಾಗ ಉಪ್ಪನ್ನು ಬಡಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟೆ. ಅದಕ್ಕೆ ಮೊದಲು ನಾನು ತುಂಬಾ ಉಪ್ಪನ್ನು ಹಾಕಿಕೊಳ್ಳುತ್ತಿದ್ದೆ.

ವಿಶ್ವವಿಖ್ಯಾತ ಇಂಗ್ಲಿಷ್ ಬರಹಗಾರರರಾಗಿದ್ದ ಆರ್ ಕೆ ನಾರಾಯಣ್ ಅವರ ಎಲ್ಲಾ  ಕೃತಿಗಳೂ ನಮ್ಮ ಪುಸ್ತಕ ಭಂಡಾರದಲ್ಲಿದ್ದವು. ನಮ್ಮ ಇಂಗ್ಲಿಷ್ ಟೆಕ್ಸ್ಟ್ ಪುಸ್ತಕದಲ್ಲಿ ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ನಿಂದ ಆರಿಸಲಾದ ಅಟ್ಟಿಲಾ  ಎಂಬ ನಾಯಿಯ ಕಥೆ ಇತ್ತು. ಆ ಕಥೆ ತುಂಬಾ ಸ್ವಾರಸ್ಯವಾಗಿತ್ತು. ಅಲ್ಲದೇ ನನಗೆ ಅವರ ಬರವಣಿಗೆಯ ಶೈಲಿ ತುಂಬಾ ಇಷ್ಟವಾದ್ದರಿಂದ ನಾನು ಅವರ ಎಲ್ಲ ಕೃತಿಗಳನ್ನೂ ಓದಿ ಮುಗಿಸಿಬಿಟ್ಟೆ. ಅವರು  ಬರೆದ ಕಾದಂಬರಿಗಳಲ್ಲಿ ನನಗೆ ಗೈಡ್ ತುಂಬಾ ಇಷ್ಟವಾಗಿತ್ತು. ಮುಂದೆ ದೇವ್ ಆನಂದ್ ಅದನ್ನು ಹಿಂದಿ ಸಿನಿಮಾ ಮಾಡಿದ ನಂತರ ನನಗೆ ಅದನ್ನು ನೋಡುವ ಅವಕಾಶವೂ ಸಿಕ್ಕಿತು.

ನನ್ನ ಸ್ನೇಹಿತ ಮತ್ತು ಕ್ಲಾಸ್ ಮೇಟ್ ಆಗಿದ್ದ ಹೆಬ್ಬಿಗೆ ವಿಶ್ವನಾಥನ ಭಾವ ಕೆರೆಮನೆ ಲಕ್ಷ್ಮೀನಾರಾಯಣ (KT) ಅವರು ಆ ಕಾಲದಲ್ಲೇ ಇಂಗ್ಲಿಷ್ ಮ್ಯಾಗಜಿನ್ ಆದ  ರೀಡರ್ಸ್ ಡೈಜೆಸ್ಟ್ ಚಂದಾದಾರರಾಗಿದ್ದರು. ಅದರಲ್ಲಿ ತುಂಬಾ ಒಳ್ಳೆಯ ಇಂಗ್ಲಿಷ್ ಕಾದಂಬರಿಗಳನ್ನು ಸಂಕ್ಷೇಪ ರೂಪದಲ್ಲಿ ಪ್ರಕಟ ಮಾಡುತ್ತಿದ್ದರು. ಅಲ್ಲದೇ ಆ ಸಂಕ್ಷೇಪ ರೂಪದ ಕಥೆಗಳನ್ನು ಸಂಗ್ರಹಿಸಿ ಆಗಾಗ್ಗೆ ಪುಸ್ತಕ ರೂಪದಲ್ಲೂ  ಪ್ರಕಟಿಸುತ್ತಿದ್ದರು. ವಿಶ್ವನಾಥ ಅವುಗಳನ್ನು ನನಗೆ ಓದಲು ತಂದು ಕೊಡುತ್ತಿದ್ದ. ತುಂಬಾ ಸ್ವಾರಸ್ಯದ ಆ ಕೆಲವು ಕಥೆಗಳನ್ನು ನಾನು ಊರಿಗೆ ಹೋದಾಗ ನನ್ನ ತಂಗಿ ಮತ್ತು ತಮ್ಮಂದಿರಿಗೆ ಹೇಳುತ್ತಿದ್ದೆ.

ಪ್ರಸಿದ್ಧ ಕನ್ನಡ ಸಾಹಿತಿಯಾಗಿದ್ದ ಪ್ರೊಫೆಸರ್ ಎಸ್. ವಿ. ಪರಮೇಶ್ವರ ಭಟ್ಟರು ನಮ್ಮ ಕಾಲೇಜಿಗೆ ಒಮ್ಮೆ ಭೇಟಿ ನೀಡಿದರು. ಆಗ ಅವರು ಕೈಯಲ್ಲಿ ಒಂದು ಇಂಗ್ಲಿಷ್ ಪುಸ್ತಕವನ್ನು ಹಿಡಿದೇ ಬಂದಿದ್ದರು. ಅವರಿಗೆ ನಾನು ಕಾಲೇಜಿನ ಮೊದಲ ವರ್ಷವೇ ನಾಲ್ಕನೇ Rank ಪಡೆದಿದ್ದು ತುಂಬಾ ಸಂತೋಷದ ವಿಷಯವಾಗಿತ್ತಂತೆ. ಆ ನೆನಪಿಗಾಗಿ ಅವರು ತಮ್ಮ ಸ್ವಹಸ್ತಾಕ್ಷರದಲ್ಲಿ ನನ್ನ ಹೆಸರು ಬರೆದು ಆ ಪುಸ್ತಕವನ್ನು ನನಗೆ ಉಡುಗೊರೆಯನ್ನಾಗಿ ನೀಡಿದರು. ಅದು ಜವಾಹರ್ಲಾಲ್ ನೆಹರು ಅವರ ಆತ್ಮಕಥೆಯಾಗಿತ್ತು. ನನಗೆ ಅದನ್ನು ಓದುವ ಅವಕಾಶ ಹೀಗೆ ಪ್ರಾಪ್ತಿಯಾಯಿತು.

ಕೃಷ್ಣನ್ ಮತ್ತು ಟೈಟ್ ಪ್ಯಾಂಟ್!

ಆ ವರ್ಷ ನಮ್ಮ ಕಾಲೇಜಿಗೆ ಮತ್ತು ಹಾಸ್ಟೆಲಿಗೆ ಸೇರಿದ ಹುಡುಗರಲ್ಲಿ ಕೃಷ್ಣನ್ ಕೂಡ ಒಬ್ಬನಾಗಿದ್ದ. ಚಿಕ್ಕಮಗಳೂರಿನಲ್ಲಿ ಪಿ.ಯು.ಸಿ. ಪಾಸ್ ಮಾಡಿದ್ದ ಹಾಗೂ ಸುಂದರ ತರುಣನಾಗಿದ್ದ ಕೃಷ್ಣನ್ ಸ್ವಲ್ಪ ತಡವಾಗಿ ನಮ್ಮ ಕಾಲೇಜ್ ಸೇರಿದ್ದ. ತುಂಬಾ ಸಾಂಪ್ರದಾಯಿಕ ಅಯ್ಯಂಗಾರ್ ಕುಟುಂಬದ ಕೃಷ್ಣನ್ ಅವರ ತಂದೆ  ಚಿಕ್ಕಮಗಳೂರಿನ ಕಾಫಿ ಕ್ಯೂರಿಂಗ್ ವರ್ಕ್ಸ್ ಮ್ಯಾನೇಜರ್ ಆಗಿದ್ದರು. ಸುಂದರ ತರುಣ ಕೃಷ್ಣನ್ ತುಂಬಾ ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಬರಲಾರಂಭಿಸಿದ. ಆ ಕಾಲದ ಶೃಂಗೇರಿಯ ಹುಡುಗರು ಮುಂಡುಪಂಚೆ ಮತ್ತು ಪೈಜಾಮ ಬಿಟ್ಟು ಪ್ಯಾಂಟ್ ಧರಿಸಲೇ ಇನ್ನೂ ಒದ್ದಾಡುತ್ತಿರುವಾಗ ಕೃಷ್ಣನ್ ಧರಿಸಿ ಬರುತ್ತಿದ್ದ ಬಗೆ ಬಗೆಯ ಬಣ್ಣ ಮತ್ತು ಸ್ಟೈಲಿನ ಟೈಟ್ ಪ್ಯಾಂಟುಗಳು ನಮ್ಮ ಕಾಲೇಜಿನಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿ ಬಿಟ್ಟವು! ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಕೃಷ್ಣನ್ ಮುಂದೆ ಡಾಕ್ಟರ್ ಆಗಬೇಕೆಂದಿದ್ದ. ನಮ್ಮ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಭಾಗದಲ್ಲಿ ಯಾವ ವಿಧ್ಯಾರ್ಥಿನಿಯರಿರಲಿಲ್ಲ. ಆದರೆ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರದ  ವಿಭಾಗದಲ್ಲಿ ಕೇವಲ ಒಬ್ಬ ವಿಧ್ಯಾರ್ಥಿನಿ ಇದ್ದಳು. ಆ ವಿಭಾಗದ ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠಕ್ಕಿಂತಲೂ ಹೆಚ್ಚಾಗಿ ಈ ಸುಂದರ ತರುಣಿ ವಿದ್ಯಾರ್ಥಿನಿಯ ಕಡೆ ಗಮನ ಕೊಡುತ್ತಿದ್ದರು. ಉಪನ್ಯಾಸಕರು ಅವರಿಗೆ ಅಲಂಕಾರ ವಿಧ್ಯಾರ್ಥಿಗಳೆಂದು ಕರೆಯುತ್ತಿದ್ದರು. ಟೈಟ್ ಪ್ಯಾಂಟ್ ಧಾರಿ ಕೃಷ್ಣನ್ ಆ ವಿದ್ಯಾರ್ಥಿಗಳಿಗೆ ತೀವ್ರ ಪೈಪೋಟಿ ಕೊಡಲಾರಂಭಿಸಿ ಬಿಟ್ಟ! ಅವನ ಸ್ಟೈಲ್ ಮುಂದೆ ಉಳಿದ ಪೈಪೋಟಿದಾರರು ಮಂಕು ದೀಪಗಳಂತಾಗಿ ಬಿಟ್ಟರು!

ಕೃಷ್ಣನ್ ಬೇಗನೆ ನನ್ನ ಸ್ನೇಹಿತನಾಗಿ ಬಿಟ್ಟ. ಹಾಗೆಯೇ ನನಗೆ ಪ್ಯಾಂಟ್ ಧರಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡ ಬಯಸಿದ. ಆದರೆ ಅದರಲ್ಲಿ ಒಂದು ಸಮಸ್ಯೆ ಇತ್ತು. ಎನ್.ಸಿ.ಸಿ.ಸಮವಸ್ತ್ರವಾದ ಎರಡು ಖಾಕಿ ಪ್ಯಾಂಟ್ಗಳನ್ನು ಬಿಟ್ಟರೆ ನನ್ನ ಹತ್ತಿರ ಬೇರೆ ಒಂದೇ ಒಂದು ಪ್ಯಾಂಟ್ ಕೂಡ ಇರಲಿಲ್ಲ. ಮತ್ತು ಅದನ್ನು ಹೊಲಿಸಲು  ಹಣವೂ ಇರಲಿಲ್ಲ. ಪಾಪ! ಕೃಷ್ಣನ್ ತನ್ನ ಪ್ರಯತ್ನವನ್ನು ಸುಮ್ಮನೆ ಅಲ್ಲಿಯೇ ಕೈಬಿಡಬೇಕಾಯಿತು!

ಗುಂಡಪ್ಪ ಮತ್ತು ಗುಂಡಣ್ಣ

ಆ ವರ್ಷ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿದ್ದ ರೈ ಅವರು ನಮ್ಮ ಕಾಲೇಜಿಗೆ ರಾಜೀನಾಮೆ ಕೊಟ್ಟು ತಮ್ಮ ಊರಾದ ಪುತ್ತೂರಿನ ಕಾಲೇಜೊಂದಕ್ಕೆ ಉಪನ್ಯಾಸಕರಾಗಿ ಹೊರಟುಹೋದರು. ಅವರ ಸ್ಥಳಕ್ಕೆ ಮೈಸೂರಿನ  ಗುಂಡಪ್ಪ ಎಂಬ ಹೊಸ ಉಪನ್ಯಾಸಕರು ಸೇರಿಕೊಂಡರು. ಇನ್ನು ಕನ್ನಡ ವಿಭಾಗಕ್ಕೆ ಪ್ರಧಾನ್ ಗುರುದತ್ತರ ಕೆಳಗೆ ಮೈಸೂರಿನ ಗುಂಡಣ್ಣ ಎಂಬ ಹೊಸ ಉಪನ್ಯಾಸಕರೊಬ್ಬರು ಸೇರಿಕೊಂಡರು. ಸ್ವಲ್ಪ ಕಾಲದ ನಂತರ ಗುಂಡಣ್ಣ ಅವರನ್ನು  ಎನ್.ಬಿ.ಎನ್.ಮೂರ್ತಿಯವರ ಬದಲಿಗೆ ನಮ್ಮ ಹಾಸ್ಟೆಲಿನ ವಾರ್ಡನ್ ಆಗಿ ನೇಮಕ ಮಾಡಲಾಯಿತು. ತುಂಬಾ ಪ್ರತಿಭಾನ್ವಿತ ಉಪನ್ಯಾಸಕರಾಗಿದ್ದ ಗುಂಡಣ್ಣನವರು ಒಂದು ವರ್ಷದ ನಂತರ ನಮ್ಮ ಕಾಲೇಜಿಗೆ ರಾಜೀನಾಮೆ ಕೊಟ್ಟು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದರು.  ಮುಂದೆ ಅವರು ಮಂಡ್ಯದ ಸರ್ಕಾರೀ ಪ್ರಥಮ ದರ್ಜೆಯ ಕಾಲೇಜ್ ಪ್ರಿನ್ಸಿಪಾಲರಾಗಿ ತುಂಬಾ ಹೆಸರು ಗಳಿಸಿದರು.

ಹಾಸ್ಟೆಲಿನ ಪಿ.ಯು.ಸಿ.  ಹುಡುಗರಿಗೆ ಟೆಸ್ಟ್

ಆಗ ನಮ್ಮ ಡಿಗ್ರಿ ತರಗತಿಯ ಮೊದಲ ವರ್ಷ ಪಬ್ಲಿಕ್ ಪರೀಕ್ಷೆ ಇರುತ್ತಿರಲಿಲ್ಲ. ಕೇವಲ ಕ್ಲಾಸ್ ಪರೀಕ್ಷೆ ಮಾಡಿ ವಿದ್ಯಾರ್ಥಿಗಳನ್ನು ಎರಡನೇ ವರ್ಷದ ತರಗತಿಗೆ ಪ್ರಮೋಷನ್ ನೀಡಲಾಗುತ್ತಿತ್ತು. ಆದ್ದರಿಂದ ವಿದ್ಯಾರ್ಥಿಗಳು ಈ ಕ್ಲಾಸ್ ಪರೀಕ್ಷೆಯ ಕಡೆ ಹೆಚ್ಚು ಗಮನ ಕೊಡದೇ ಆರಾಮದಿಂದಿದ್ದು ಬಿಡುತ್ತಿದ್ದರು. ನಮ್ಮ ಕಾಲೇಜಿನಲ್ಲೂ ಅದೇ ಮನೋಭಾವನೆ ಇತ್ತು ಮತ್ತು ನಾನೂ ಅದೇ ಮನೋಭಾವ ಹೊಂದಿದ್ದೆ. ಅಲ್ಲದೇ ನಮ್ಮ ಹಾಸ್ಟೆಲಿನ ಪಿ.ಯು.ಸಿ.  ವಿದ್ಯಾರ್ಥಿಗಳು ನನ್ನಿಂದ ಮಾರ್ಗದರ್ಶನ ನಿರೀಕ್ಷಿಸುತ್ತಿದ್ದರು. ಇನ್ನು ನನಗೆ ನನ್ನ ರೂಮ್ ಮೇಟ್ ನಂಜುಂಡಸ್ವಾಮಿಯನ್ನು ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ತಯಾರಿ ಮಾಡುವ ಜವಾಬ್ದಾರಿಯೂ ಇತ್ತು. ಆ ದೃಷ್ಟಿಯಲ್ಲಿ ಅವನ ಪ್ರಗತಿ ಚೆನ್ನಾಗಿಯೇ ಇತ್ತು. ನಾನು ಇನ್ನೂ ಕೆಲವು ಡಿಗ್ರಿ ತರಗತಿಯ ವಿದ್ಯಾರ್ಥಿಗಳೊಡನೆ ಸೇರಿಕೊಂಡು ಪಿ.ಯು.ಸಿ.  ಹುಡುಗರಿಗೆ ಆಗಾಗ ಟೆಸ್ಟ್ ಗಳನ್ನು ನಡೆಸತೊಡಗಿದೆ. ಈ ನನ್ನ ಪ್ರಯತ್ನಕ್ಕೆ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಬರತೊಡಗಿತು. ಈ ನಡುವೆ ಬೀರೂರಿನ ಚಂದ್ರಶೇಖರ ಎಂಬ ವಿದ್ಯಾರ್ಥಿ ನನ್ನ ತುಂಬಾ ಆತ್ಮೀಯ ಸ್ನೇಹಿತನಾಗಿಬಿಟ್ಟ. ಅವನ ತಂದೆ ಕಡೂರ್ ತಾಲೂಕ್ ಆಫೀಸಿನಲ್ಲಿ ಶಿರೆಸ್ತೆದಾರ್ ಆಗಿದ್ದರಂತೆ. ಇನ್ನು ನರಸಿಂಹರಾಜಪುರದ ಗೋಪಾಲ್ ಮತ್ತು ಗಣೇಶ ಎಂಬ ವಿದ್ಯಾರ್ಥಿಗಳೂ ನನಗೆ ತುಂಬಾ ಇಷ್ಟವಾದವರಾಗಿದ್ದರು. ಗಣೇಶನ ತಂದೆ ನರಸಿಂಹರಾಜಪುರದಲ್ಲಿ ಹೋಟೆಲ್ ನಡೆಸುತ್ತಿದ್ದರಂತೆ. ತುಂಬಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಗೋಪಾಲ ಮುಂದೆ ಮೆಡಿಕಲ್ ಕಾಲೇಜ್ ಸೇರಿದನೆಂದು ಕೇಳಿದೆ.

ಶೃಂಗೇರಿಯಲ್ಲಿ ಎನ್.ಬಿ.ಎನ್.ಮೂರ್ತಿಯವರ ಕುಟುಂಬದ ಒಂದು ದುರಂತ 

ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರ ಕೊಠಡಿ ನಮ್ಮ ಹಾಸ್ಟೆಲಿನ ಹತ್ತಿರವೇ ಇತ್ತು. ನಾನು ಅವಕಾಶ ಸಿಕ್ಕಾಗಲೆಲ್ಲಾ ಅಲ್ಲಿ ಅವರನ್ನು ಭೇಟಿಯಾಗಿ ಸಮಯ ಕಳೆಯುತ್ತಿದ್ದೆ. ತುಂಬಾ  ಬುದ್ಧಿವಂತರೂ ಹಾಗೂ ಬೇರೆ ಬೇರೆ ಊರುಗಳನ್ನು ನೋಡಿದ ಅನುಭವಸ್ತರೂ ಆದ ಮೂರ್ತಿಯವರ ಒಡನಾಟ ನನ್ನ ತಿಳುವಳಿಕೆಯ ಮಟ್ಟವನ್ನು ಸುಧಾರಿಸಿಕೊಳ್ಳಲು ತುಂಬಾ ಸಹಾಯ ಮಾಡಿತೆಂದು ಹೇಳಲೇ ಬೇಕು. ದುರದೃಷ್ಟವಶಾತ್ ಮೂರ್ತಿಯವರು ಆ ವರ್ಷ ಶೃಂಗೇರಿಯಲ್ಲೇ ಒಂದು ದುರಂತವನ್ನು ಎದುರಿಸಬೇಕಾಯಿತು.  ಅವರ ಅಣ್ಣ ಮೈಸೂರು ಸರ್ಕಾರದಲ್ಲಿ ಹಿರಿಯ ಇಂಜಿನಿಯರ್ ಆಗಿದ್ದರು. ಅವರ ಇಬ್ಬರು ಗಂಡು ಮಕ್ಕಳು ರಜೆಯಲ್ಲಿ ಶೃಂಗೇರಿಗೆ ಬಂದು ತಮ್ಮ ಚಿಕ್ಕಪ್ಪನವರೊಡನೆ ಇದ್ದರು. ಈ ಜೋಡಿ ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ನೀರಿನ ಸುಳಿಗೆ ಸಿಕ್ಕಿ ಜೀವ ಕಳೆದುಕೊಂಡುಬಿಟ್ಟರು. ಈ ದುರಂತ ಮೂರ್ತಿಯವರ ಮನಸ್ಸಿಗೆ ಎಂದೂ ಮರೆಯಲಾಗದ  ನೋವನ್ನುಂಟು ಮಾಡಿತು.

------- ಮುಂದುವರಿಯುವುದು-----


No comments: