Wednesday, June 24, 2020

ಬಾಲ್ಯ ಕಾಲದ ನೆನಪುಗಳು – ೯೫

ಹಿಂದೊಮ್ಮೆ ನನ್ನ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಪರಿಸ್ಥಿತಿ ತುಂಬಾ ಶೋಚನೀಯವಾದಾಗ ನಾನೊಬ್ಬ ಜ್ಯೋತಿಷಿಗೆ ನನ್ನ ಹಸ್ತವನ್ನು ತೋರಿಸಿದ್ದೆ. ಉದ್ದೇಶ ಇಷ್ಟೇ. ನನ್ನ ವಿದ್ಯಾರ್ಥಿ ಜೀವನದಲ್ಲಿ ಎಂದಾದರೂ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಅದೃಷ್ಟವಿರುವುದೇ ಎಂದು  ತಿಳಿಯ ಬೇಕಿತ್ತು. ಅಲ್ಲದೇ ವಿದ್ಯಾಭ್ಯಾಸ ಮುಂದುವರಿಸದಿದ್ದರೆ ನನ್ನ ಭವಿಷ್ಯ ಮುಗಿದಂತೆಯೇ ಎಂದೂ ನನಗೆ ಅರಿವಿತ್ತು. ಆ ಜ್ಯೋತಿಷಿಯ ಪ್ರಕಾರ ನನ್ನ ವಿದ್ಯಾರ್ಥಿ ಜೀವನದ ಯಾವುದೋ ಒಂದು ಸನ್ನಿವೇಶದಲ್ಲಿ ಒಬ್ಬ ಪರೋಪಕಾರಿ ವ್ಯಕ್ತಿಯ ಪ್ರವೇಶವಾಗಲಿತ್ತು. ಹಾಗೆ ಆದೊಡನೆ ನನ್ನ ಹಣಕಾಸಿನ ಸಮಸ್ಯೆಗಳು ನನ್ನಿಂದ ದೂರವಾಗಲಿದ್ದವು.  ಆ ವ್ಯಕ್ತಿಯ ಸಹಾಯ ನನಗೆ ದೊರೆಯುವುದು ಮಾತ್ರವಲ್ಲ, ನನ್ನ ಕೈಗೆ ತುಂಬಾ ಹಣವೂ ಬರುವ ಚಾನ್ಸ್ ಕೂಡ ಇತ್ತು!

ಓಹ್! ಆ ಜ್ಯೋತಿಷಿ ಹೇಳಿದ ಭವಿಷ್ಯ ಎಷ್ಟೊಂದು ನಿಜವಾಗಿತ್ತು! ಶ್ರೀಕಂಠಯ್ಯನವರ ಮನೆಗೆ ಪ್ರವೇಶಿಸಿದೊಡನೆ ನನ್ನ ಅದೃಷ್ಟವೇ ಬದಲಾಗಿ ಬಿಟ್ಟಿತು. ನನ್ನ ಓದುಗರು ಇಲ್ಲಿಯವರೆಗೆ ಕೇವಲ ನನ್ನ ಹಣಕಾಸಿನ ಬವಣೆಯನ್ನು ಓದಿರುವಿರಿ. ಈಗ ನಿಮಗೆ ನನ್ನ ವಿದ್ಯಾರ್ಥಿ ಜೀವನದ ಆತ್ಮಕಥೆಯ ಸ್ವಲ್ಪ ಸುಖ ಸಮಾಚಾರಗಳನ್ನು ಓದುವ ಅವಕಾಶ ನೀಡುವ ಸಮಯ ನನಗೆ ಬಂದಿದೆ. ನನ್ನ ಅದೃಷ್ಟ ಖುಲಾಯಿಸಿ ದೇವರು ನನ್ನ ಕೈಯಲ್ಲಿ ಹಣ ಸೇರುವಂತೆ ಮಾಡಿದ ಶುಭದಾಯಕ ವೃತ್ತಾಂತವನ್ನು ನಾನೀಗ ಹೇಳಲಿದ್ದೇನೆ.

ಶಿವಮೊಗ್ಗದ ಅಡಿಕೆ ಮಾರಾಟದ  ಸಹಕಾರ ಸಂಘದಿಂದ ಬಹುಮಾನ

ನಾನು ಈ ಹಿಂದೆಯೇ ಹೇಳಿದಂತೆ ನನ್ನ ಎರಡನೇ ವರ್ಷದ ಬಿ. ಎಸ್ ಸಿ . ತರಗತಿಯ ಪೂರ್ತಿ ಫೀ ಮಣಿಪಾಲ್ ಅಕಾಡೆಮಿಯವರು ನನ್ನಿಂದ ಒಂದು ಪ್ರಾಮಿಸರಿ ನೋಟ್ ಮೇಲೆ ಸಹಿ ತೆಗೆದುಕೊಂಡು ಕಟ್ಟಿಬಿಟ್ಟರು. ಇನ್ನು ಶ್ರೀಕಂಠಯ್ಯನವರ ಮನೆಯಲ್ಲಿ ನಾನು ಇದ್ದುದರಿಂದ ಊಟ ತಿಂಡಿಯ ಖರ್ಚಿನ ಪ್ರಶ್ನೆ ಇರಲಿಲ್ಲ. ಅಲ್ಲದೆ ಒಂದು ದಿನ ಇದ್ದಕ್ಕಿದ್ದಂತೆ ನನಗೆ ವಿಶ್ವನಾಥಪುರ ಶಂಕರರಾಯರಿಂದ ಒಂದು ಶುಭ ಸಮಾಚಾರ ಬಂತು. ಶಿವಮೊಗ್ಗದ ಅಡಿಕೆ ಮಾರಾಟದ  ಸಹಕಾರ ಸಂಘದ (MAMCOS) ಡೈರೆಕ್ಟರಾಗಿದ್ದ ಅವರು ನನಗೆ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ೧೫೦ ರೂಪಾಯಿ ಬಹುಮಾನ ಮಂಜೂರು ಮಾಡಿಸಿದ್ದರು. ಆ ಕಾಲದಲ್ಲಿ ಅದೊಂದು ದೊಡ್ಡ ಮೊತ್ತದ ಹಣವೇ ಆಗಿತ್ತು. ಆಗ ಶೃಂಗೇರಿಯ ಮಲ್ಲಿಕಾ ಮಂದಿರದಲ್ಲಿ ರುಚಿ ರುಚಿಯಾದ ಮಸಾಲೆ ದೋಸೆಗೆ ಕೇವಲ ೨೦ ಪೈಸೆ ಚಾರ್ಜ್ ಮಾಡುತ್ತಿದ್ದರು!  ನನ್ನ ಉಳಿದ ಖರ್ಚುಗಳು ಅಷ್ಟೇನೂ ಹೆಚ್ಚಿನವಾಗಿರಲಿಲ್ಲ. ನಿಜ ಹೇಳಬೇಕೆಂದರೆ ಅಷ್ಟೊಂದು ಹಣ ಒಮ್ಮೆಲೇ ಕೈಗೆ ಬಂದಾಗ ಏನು ಮಾಡಬೇಕೆಂದು ನನಗೆ ಹೊಳೆಯಲಿಲ್ಲ.

ಮೈಸೂರು ವಿಶ್ವವಿದ್ಯಾನಿಲಯದಿಂದಲೂ ಕೂಡ ಅಂತಹದೇ ಒಂದು ಬಹುಮಾನ ಬರಬೇಕಾಗಿತ್ತಲ್ಲವೇ?

ಶಿವಮೊಗ್ಗದ ಅಡಿಕೆ ಸೊಸೈಟಿಯಿಂದ (MAMCOS) ಹಣ ಕೈಗೆ ಬಂದ ಮೇಲೆ ನನ್ನ ತಲೆಯಲ್ಲೊಂದು ಹೊಸ ವಿಚಾರ ಬಂತು. Rank ಪಡೆದುದಕ್ಕಾಗಿ ನನಗೆ ಸರ್ಕಾರದಿಂದ ಅಥವಾ ಮೈಸೂರು ವಿಶ್ವವಿದ್ಯಾನಿಲಯದಿಂದಲೂ ಕೂಡ ಅಂತಹದೇ ಒಂದು ಬಹುಮಾನ ಬರಬೇಕಾಗಿತ್ತಲ್ಲವೇ ಎಂದು. ನಾನು ಕೂಡಲೇ ಪ್ರಿನ್ಸಿಪಾಲರನ್ನು ಭೇಟಿ ಮಾಡಿ ಆ ವಿಚಾರ ಚರ್ಚಿಸಿದೆ. ಅವರ ಪ್ರಕಾರ ಸರ್ಕಾರದಿಂದಾಗಲೀ ಅಥವಾ ಮೈಸೂರು ವಿಶ್ವವಿದ್ಯಾನಿಲಯದಿಂದಾಗಲೀ ಆ ಬಗೆಯ ಯಾವುದೇ ಬಹುಮಾನಗಳಿರಲಿಲ್ಲ. ಅಷ್ಟು ಮಾತ್ರವಲ್ಲ. ಆ ಬಗ್ಗೆ ವಿಶ್ವವಿದ್ಯಾನಿಲಯಕ್ಕೆ ಒಂದು ಪತ್ರ ಬರೆದು ಕಳಿಸುವುದಕ್ಕೂ ಅವರು ತಯಾರಿರಲಿಲ್ಲ. ಏಕೆಂದರೆ ಅಂತಹ ಬಹುಮಾನ ಇರಲೇ ಇಲ್ಲವೆಂದು ಅವರಿಗೆ ಖಾತ್ರಿಯಾಗಿ ಗೊತ್ತಿತ್ತು.

ದಕ್ಷ  ಐ. ಏ. ಎಸ್.  ಅಧಿಕಾರಿ ರಾಮಚಂದ್ರನ್: ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್

ಆದರೆ ವಿಶ್ವವಿದ್ಯಾನಿಲಯದಿಂದ Rank ಪಡೆದ ವಿದ್ಯಾರ್ಥಿಗೆ ಯಾವುದೇ ಬಹುಮಾನವಿಲ್ಲವೆಂದು ನಾನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವನಾಗಿರಲಿಲ್ಲ. ನಾನು ಹಠ ಬಿಡದ ಬೇತಾಳ ಕಥೆಯ ತ್ರಿವಿಕ್ರಮನಾಗಿ ಬಿಟ್ಟೆ! ಆಗ ತಾನೇ ನ್ಯೂಸ್ ಪೇಪರಿನಲ್ಲಿ ನಾನು ರಾಮಚಂದ್ರನ್ ಎಂಬ ದಕ್ಷ  ಐ. ಏ. ಎಸ್.  ಅಧಿಕಾರಿ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ಚಾರ್ಜ್ ತೆಗೆದುಕೊಂಡರೆಂದು ಓದಿದ್ದೆ. ನಾನು ಕೂಡಲೇ ಅವರಿಗೆ ಒಂದು ವೈಯುಕ್ತಿಕ ಪತ್ರ ಬರೆದು ಕಳಿಸಿದೆ. ಅದರಲ್ಲಿ ನಾನು ನನ್ನ ಹಣಕಾಸಿನ ಬವಣೆಯನ್ನೂ ಮತ್ತೂ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ನನಗೆ ವಿಶ್ವವಿದ್ಯಾನಿಲಯದಿಂದ ಯಾವುದೇ ಬಹುಮಾನ ದೊರೆಯದಿರುವುದನ್ನೂ ವಿವರಿಸಿದ್ದೆ. ಹಾಗೆಯೇ ತಮ್ಮಂತಹ ದಕ್ಷ ಐ. ಏ. ಎಸ್.  ಅಧಿಕಾರಿಯಿಂದ ನ್ಯಾಯ ಸಿಗುವುದೆಂಬ ಭರವಸೆ ಇರುವುದಾಗಿಯೂ ಬರೆದು ಬಿಟ್ಟಿದ್ದೆ.

ಕೇವಲ ಒಂದು ವಾರದಲ್ಲಿ ನನ್ನ ಕಾಲೇಜ್ ವಿಳಾಸಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಒಂದು ಲಕೋಟೆ ಬಂತು. ನಾನು ತುಂಬಾ ಕುತೂಹಲ ಮತ್ತು ಉದ್ವೇಗದಿಂದ ಲಕೋಟೆಯನ್ನು ಹರಿದು ಅದರೊಳಗಿನ ಪತ್ರವನ್ನು ನೋಡಿದೆ. ಆಗ ನನಗುಂಟಾದ ನಿರಾಶೆ ಅಷ್ಟಿಷ್ಟಲ್ಲ. ಏಕೆಂದರೆ ಅದರೊಳಗಿದ್ದುದು ನಾನು ರಾಮಚಂದ್ರನ್ ಅವರಿಗೆ ಬರೆದ ಪತ್ರವೇ ಆಗಿತ್ತು! ಒಹ್! ವಿಶ್ವವಿದ್ಯಾನಿಲಯದವರು ನನ್ನ ಪತ್ರವನ್ನು ಓದಲೂ ಇಷ್ಟವಿಲ್ಲದೇ ಹಾಗೆಯೇ ಹಿಂತಿರುಗಿಸಿ ಬಿಟ್ಟಿದ್ದರು. ಎಂತಹ ಕೆಟ್ಟ ಅವಮಾನ ಮತ್ತು ನಿರಾಶೆ ನನ್ನದಾಗಿತ್ತು. ಇನ್ನೇನು ನಾನು ನನ್ನ ಪತ್ರವನ್ನು ಹರಿದು ಬಿಸಾಡುವುದರಲ್ಲಿದ್ದೆ. ಆದರೆ ಅಷ್ಟರಲ್ಲಿ ನನ್ನ ಪತ್ರದ ಕೊನೆಯಲ್ಲಿ ಏನೋ ಬರವಣಿಗೆ ನನ್ನ ಕಣ್ಣಿಗೆ ಬಿತ್ತು. ರಿಜಿಸ್ಟ್ರಾರ್ ಅವರು ತಮ್ಮ ಸ್ವಂತ ಕೈಬರಹದಲ್ಲಿ ಇಲಾಖೆಯ ಅಧಿಕಾರಿಗಳಿಗೆ ನನಗೆ ಸೂಕ್ತವಾದ ಬಹುಮಾನ ನೀಡುವಂತೆ ಆರ್ಡರ್ ಮಾಡಿದ್ದರು. ಇಲಾಖೆಯವರು ನನಗೆ ಮೆರಿಟ್ ಸ್ಕಾಲರ್ಷಿಪ್ ಅರ್ಹತೆ ಇದೆಯೆಂದೂ ಮತ್ತು ಅದನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿಯೂ ಬರೆದಿದ್ದರು! ಒಹ್! ಒಮ್ಮೆಲೇ ನನ್ನ ಸಂತೋಷ ಮತ್ತು ಉತ್ಸಾಹ ಆಕಾಶಕ್ಕೇರಿ ಬಿಟ್ಟಿತು!

ನಾನು ಮೈಸೂರು ವಿಶ್ವವಿದ್ಯಾನಿಲಯದೊಡನೆ ನಡೆದ ನನ್ನ ಪತ್ರ ವ್ಯವಹಾರವನ್ನು ಯಾರಿಗೂ (ಪ್ರಿನ್ಸಿಪಾಲರಿಗೂ ಕೂಡ)  ತಿಳಿಸಲಿಲ್ಲ. ತಾಳ್ಮೆಯಿಂದ ವಿಶ್ವವಿದ್ಯಾನಿಲಯದಿಂದ ಸ್ಕಾಲರ್ಷಿಪ್ ಹಣ ಬರುವುದನ್ನೇ ಕಾಯುತ್ತಿದ್ದೆ. ನನಗೆ ಅದರ ಮೊತ್ತ ಎಷ್ಟಿರಬಹುದೆಂಬ ಬಗ್ಗೆ ತೀವ್ರ ಕುತೂಹಲವಿತ್ತು. ಹಿಂದೆ ಶಿವಮೊಗ್ಗೆಯ ಹೈಸ್ಕೂಲಿನಲ್ಲಿ ನನಗೆ ೧೦೦ ರೂಪಾಯಿ ಸ್ಕಾಲರ್ಷಿಪ್ ದೊರೆತಿತ್ತು. ಆದ್ದರಿಂದ ಸ್ವಾಭಾವಿಕವಾಗಿ ಈಗಿನ ಹಣ ಅದಕ್ಕಿಂತ ಹೆಚ್ಚಿರಲೇ ಬೇಕೆಂದು ನನ್ನ ನಿರೀಕ್ಷೆಯಾಗಿತ್ತು.

ನಾನು ತುಂಬಾ ದಿನ ಕಾಯಬೇಕಾದ ಪ್ರಸಂಗ ಬರಲಿಲ್ಲ. ಕೇವಲ ಒಂದು ವಾರದ ನಂತರ ನನಗೆ ತರಗತಿ ನಡೆಯುತ್ತಿರುವಾಗಲೇ ಅರ್ಜೆಂಟಾಗಿ ಪ್ರಿನ್ಸಿಪಾಲರನ್ನು ಕಾಣಬೇಕೆಂದು ಕರೆ ಬಂತು. ಏತಕ್ಕಾಗಿ ಕರೆ ಬಂದಿರಬಹುದೆಂದು ನಾನು ಊಹೆ ಮಾಡುವ ಅಗತ್ಯವೇ ಇರಲಿಲ್ಲ. ಪ್ರಿನ್ಸಿಪಾಲರು ತುಂಬಾ ಉತ್ಸಾಹದಲ್ಲಿದ್ದರು. ಅವರು ನನಗೆ ತಾವು ತುಂಬಾ ಪ್ರಯತ್ನ ಮಾಡಿ ನನಗೆ ವಿಶ್ವವಿದ್ಯಾನಿಲಯದಿಂದ  ಬಹುಮಾನವೊಂದನ್ನು ಕೊಡಿಸಿರುವುದಾಗಿ ಹೇಳಿದರು! ನಾನು ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದ ನಂತರವೇ ಅದು ಬಂತೆಂಬ ಬಗ್ಗೆ ನಾನು ಪ್ರಿನ್ಸಿಪಾಲರಿಗೆ ಹೇಳಿ ಅವರ ಉತ್ಸಾಹಕ್ಕೆ ಮಣ್ಣೆರಚಲು ಇಷ್ಟ ಪಡಲಿಲ್ಲ. ಬದಲಿಗೆ ಅವರಿಗೆ ತುಂಬಾ ಕೃತಜ್ಞನಾಗಿರುವುದಾಗಿ ಹೇಳಿ ಬಿಟ್ಟೆ!

ನಾನು ಕಾಲೇಜಿನ ಆಫೀಸಿಗೆ ಹೋಗಿ ೧೦ ಪೈಸೆ ರೆವಿನ್ಯೂ ಸ್ಟ್ಯಾಂಪ್ ಚಾರ್ಜ್ ಕೊಟ್ಟು ಅದರ ಮೇಲೆ ಸಹಿ ಮಾಡಿದೆ. ಸಿಂಡಿಕೇಟ್ ಬ್ಯಾಂಕಿನ ಚೆಕ್ ಒಂದನ್ನು ನನಗೆ ಕೊಡಲಾಯಿತು. ನಾನು ಅದರಲ್ಲಿ ಬರೆದ ಹಣದ ಮೊತ್ತದ ಮೇಲೆ ಕಣ್ಣು ಹಾಯಿಸಿ ಚಕಿತನಾಗಿ ಬಿಟ್ಟೆ. ಅದರಲ್ಲಿ ೪೫೦ ರೂಪಾಯಿ ಎಂದು ಬರೆಯಲಾಗಿತ್ತು! ಕೊನೆಗೂ ವಿಶ್ವವಿದ್ಯಾನಿಲಯದಿಂದ ನಾನು Rank ಪಡೆದುದಕ್ಕೆ ಸೂಕ್ತ ಬಹುಮಾನ ದೊರೆತಿತ್ತು. ಅದನ್ನು ಪಡೆಯಲೇ ಬೇಕೆಂದು ನಾನು ಮಾಡಿದ ಹೋರಾಟಕ್ಕೆ ವಿಜಯ ದೊರೆತಿತ್ತು. ಅದಕ್ಕೆ ಮುಖ್ಯ ಕಾರಣ ರಿಜಿಸ್ಟ್ರಾರ್ ರಾಮಚಂದ್ರನ್ ಅವರೇ ಆಗಿದ್ದರು.

ಸಿಂಡಿಕೇಟ್ ಬ್ಯಾಂಕಿನಲ್ಲಿ ನನ್ನ  ಮೊಟ್ಟ ಮೊದಲ ಸೇವಿಂಗ್ಸ್ ಬ್ಯಾಂಕ್ ಖಾತೆ

ಆ ದಿನ ೪೫೦ ರೂಪಾಯಿನ ಚೆಕ್ ಕೈಯಲ್ಲಿ ಹಿಡಿದು ನಾನು ಸಿಂಡಿಕೇಟ್ ಬ್ಯಾಂಕಿನ ಶಾಖೆಯೊಳಗೆ ಕಾಲಿಟ್ಟಿದ್ದು ಇಂದೂ ನನ್ನ ನೆನಪಿನಲ್ಲಿದೆ. ಅಲ್ಲಿ ಕೆಲಸ ಮಾಡುತ್ತಿರುವರಲ್ಲಿ ಕೆಲವರು ನನಗೆ ಮೊದಲೇ ಪರಿಚಯಸ್ಥರಾಗಿದ್ದರು. ಅವರಲ್ಲಿ ನಾಯಕ್ ಎಂಬುವ ಎತ್ತರದ ಸ್ಪುರದ್ರೂಪಿ ವ್ಯಕ್ತಿಯೊಬ್ಬರು ಚೆನ್ನಾಗಿ ಗೊತ್ತಿದ್ದರು. ಶುದ್ಧ ಬಿಳೇ  ಬಣ್ಣದ ಫುಲ್ ಶರ್ಟ್ ಮತ್ತು ಧೋತಿ ಧರಿಸಿ ಸೈಕಲ್ ಮೇಲೆ ಓಡಾಡುತ್ತಿದ್ದ ನಾಯಕ್ ಶೃಂಗೇರಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಬ್ರಾಂಡ್ ಅಂಬಾಸೆಡರ್ ಆಗಿದ್ದರು ಎಂದು ಹೇಳಬಹುದು. ಬ್ಯಾಂಕಿನ ಯಾವುದೇ ವಿಷಯಕ್ಕೆ ಎಲ್ಲರೂ ಅವರ ಹತ್ತಿರವೇ ಹೋಗುತ್ತಿದ್ದರು. ಅವರನ್ನು ನಾನು ಹಲವು ಬಾರಿ ಮಲ್ಲಿಕಾ ಮಂದಿರದಲ್ಲಿ ನೋಡಿದ್ದೆ. ನಮ್ಮ ಮುಂದೆ ಒಂದಾದ ಮೇಲೆ ಒಂದು ತಿಂಡಿ ಆರ್ಡರ್ ಮಾಡಿ ಸವಿಯುತ್ತಿದ್ದ ನಾಯಕ್ ಅವರನ್ನು ನೋಡಿ ನಮಗೆ ಸ್ವಲ್ಪ ಹೊಟ್ಟೆ ಕಿಚ್ಚು ಉಂಟಾಗುತ್ತಿತ್ತು. ನಾವು ಕೇಳಿದ ಪ್ರಕಾರ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ನಮ್ಮ ಕಾಲೇಜು ಉಪನ್ಯಾಸಕರಿಗಿಂತಲೂ ಹೆಚ್ಚು ಸಂಬಳ ದೊರೆಯುತ್ತಿತ್ತಂತೆ! ಉಪನ್ಯಾಸಕರು ಸ್ನಾತಕೋತ್ತರ ಪದವಿ ಪಡೆದಿದ್ದರೆ ನಾಯಕ್ ಅವರು ಕೇವಲ ಎಸ್.ಎಸ್.ಎಲ್. ಸಿ. ಪಾಸ್ ಮಾಡಿದ್ದರಂತೆ!

ನಾನು ಚೆಕ್ಕನ್ನು ನಾಯಕ್ ಅವರ ಕೈಯಲ್ಲಿ ಕೊಟ್ಟೆ. ಅಷ್ಟು ದೊಡ್ಡ ಮೊತ್ತದ ಚೆಕ್ ನನ್ನ ಹೆಸರಿಗೆ ಬರೆದಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಅದು ಯಾವ ಹಣವೆಂದು ನನ್ನನ್ನು ಅವರು ಪ್ರಶ್ನಿಸಿದರು. ನಾನು ಅದು ನನ್ನ ಸ್ಕಾಲರ್ಷಿಪ್ ಹಣವೆಂದು ತಿಳಿಸಿದೆ. ಅವರು ಚೆಕ್ಕನ್ನು ಕ್ರಾಸ್ ಮಾಡಿರುವುದರಿಂದ ನನಗೆ ಅದರ ಮೊತ್ತವನ್ನು ನಗದಾಗಿ ಕೊಡಲಾಗುವುದಿಲ್ಲವೆಂದು ಹೇಳಿ ಬಿಟ್ಟರು. ನನಗೆ ಕೋಪ ಬಂದು ಅದನ್ನು ಯಾರು ಕ್ರಾಸ್ ಮಾಡಿದ್ದೆಂದು ಕೇಳಿದೆ. ಅವರು ಕಾಲೇಜಿನವರೇ ಅದನ್ನು ಕ್ರಾಸ್ ಮಾಡಿರುವುದಾಗಿ ತಿಳಿಸಿದರು.

ನನಗೆ ಆಗ ಕಾಲೇಜಿನವರು ನನ್ನ ಕೈಗೆ ಹಣ ಸಿಕ್ಕದಂತೆ ಏನೋ ಪಿತೂರಿ ಮಾಡಿದ್ದಾರೆಂದೇ ಅನಿಸಿಬಿಟ್ಟಿತು! ಆದರೆ ನಾಯಕ್ ಅವರು ನನಗೆ ಸಮಾಧಾನ ಮಾಡಿ ಕಾಲೇಜಿನವರು ರೂಲ್ಸ್ ಪ್ರಕಾರ ಕ್ರಾಸ್ ಮಾಡಿದ್ದರೆಂದೂ ಮತ್ತು ನಾನು ಒಂದು ಸೇವಿಂಗ್ಸ್ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಚೆಕ್ಕಿನ ಹಣ ಹಾಕಿ ಆಮೇಲೆ ನನಗೆ ಬೇಕಾದಾಗ ಬೇಕಾದಷ್ಟು ಹಣವನ್ನು ತೆಗೆದುಕೊಳ್ಳಬಹುದೆಂದು ವಿವರಿಸಿದರು.

ಆಮೇಲೆ ನಾನು  ಶ್ರೀಕಂಠಯ್ಯನವರಿಂದ ಇಂಟ್ರಡಕ್ಷನ್ ಹಾಕಿಸಿ ಬ್ಯಾಂಕಿನಲ್ಲಿ ನನ್ನ  ಮೊಟ್ಟ ಮೊದಲ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ತೆರೆದೆ. ಬ್ಯಾಂಕ್ ಪಾಸ್ ಪುಸ್ತಕದಲ್ಲಿ ನನ್ನ ಹೆಸರಿಗೆ ೪೫೦ ರೂಪಾಯಿ ಬರೆದುದನ್ನು ನೋಡಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಇದಲ್ಲದೇ ನನಗೆ ಶಿವಮೊಗ್ಗದ ಅಡಿಕೆ ಸೊಸೈಟಿಯಿಂದ (MAMCOS) ದೊರೆತ  ಹಣ ಸ್ವಲ್ಪ ಮಾತ್ರ ಖರ್ಚಾಗಿತ್ತು. ನನ್ನ ಟ್ರಂಕಿನ ಮೂಲೆಯಲ್ಲಿದ್ದ ಆ ಹಣವನ್ನು ಕೂಡ ನಾನು ಬ್ಯಾಂಕ್ ಖಾತೆಗೆ ಜಮಾ ಮಾಡಿಬಿಟ್ಟೆ. ಒಹ್! ಇದ್ದಕ್ಕಿದ್ದಂತೇ ನಾನೊಬ್ಬ ಹಣವಂತ ವಿದ್ಯಾರ್ಥಿ ಆಗಿಬಿಟ್ಟಿದ್ದೆ! ಅಷ್ಟೂ ಹಣ ನಾನು Rank ಪಡೆದುದಕ್ಕೆ ಬಂದ ಬಹುಮಾನವಾಗಿತ್ತು.

ಒಂದು ದಿನ ನನ್ನ ಮನಸ್ಸಿನಲ್ಲಿ ಇದ್ದಕ್ಕಿದಂತೇ ಒಂದು ಚಿಂತೆ ಬಂತು. ನಾನು ಶ್ರೀಕಂಠಯ್ಯನವರ ಮನೆಯಲ್ಲಿ ಯಾವುದೇ ಖರ್ಚಿಲ್ಲದೆ ಊಟ ಮತ್ತು ಕಾಫಿ ತಿಂಡಿ ತೆಗೆದುಕೊಳ್ಳುತ್ತಾ ಕೊಠಡಿಯಲ್ಲಿ ಹಾಯಾಗಿದ್ದೆ. ಹಾಗಿರುವಾಗ ನಾನು ನನ್ನ ಕೈಗೆ ಬಂದ ಬಹುಮಾನದ ಹಣವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆಯುವುದು  ನ್ಯಾಯವೇ ಎಂದು ನನಗನಿಸತೊಡಗಿತು. ನಾನು ಸೂಕ್ಷ್ಮವಾಗಿ ಶ್ರೀಕಂಠಯ್ಯನವರ  ಮುಂದೆ ಆ ವಿಷಯವನ್ನೆತ್ತಿದೆ. ಅವರಿಗೆ ನನ್ನ ಮನಸ್ಥಿತಿ ಅರಿವಾಯಿತು. ಅವರು ಕೂಡಲೇ ನಾನು ಆ ಹಣವನ್ನು ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬೇಕೆಂದು ಹೇಳಿಬಿಟ್ಟರು.

ಸ್ಕಾಲರ್ಷಿಪ್ ಹೌದೇ? ಅಥವಾ ಬಹುಮಾನವೇ?

ಆಮೇಲೊಂದು ದಿನ ನನಗೆ ಇನ್ನೊಂದು ಯೋಚನೆ ಬಂತು. ಸಾಮಾನ್ಯವಾಗಿ ಯಾವುದೇ ಸ್ಕಾಲರ್ಷಿಪ್ ಒಂದು ವರ್ಷ ಮಂಜೂರಾದರೆ ಮುಂದಿನ ವರ್ಷಗಳಲ್ಲೂ ಕೂಡ ಅದು ಕೊಡಲ್ಪಡುತ್ತದೆ. ನನಗೆ ಹೈಸ್ಕೂಲಿನಲ್ಲಿ ಹಾಗೆಯೇ ಅದು ದೊರೆತಿತ್ತು. ಈ ಬಾರಿಯೂ ವಿಶ್ವವಿದ್ಯಾನಿಲಯದವರು ಬಹುಮಾನ ಎಂದು ಹೇಳದೇ ಸ್ಕಾಲರ್ಷಿಪ್ ಎಂದೇ ಹೇಳಿದ್ದರು. ಆದ್ದರಿಂದ ಅದು ಮೂರು ವರ್ಷಗಳೂ ನನಗೆ ಸಿಗುವ  ಚಾನ್ಸ್ ತುಂಬಾ ಇತ್ತು. ಆ ಆಲೋಚನೆಯೇ ನನಗೆ ತುಂಬಾ ಖುಷಿ ಕೊಟ್ಟಿತು. ನಾನು ಪುನಃ ಪ್ರಿನ್ಸಿಪಾಲರ ಬಳಿಗೆ ಹೋಗಿ ಆ ವಿಷಯ ಎತ್ತಿದೆ. ಆದರೆ ಅವರು ನಾನು ನಿರೀಕ್ಷಿಸಿದಂತೆ ಆ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿಬಿಟ್ಟರು. ಅವರ ಪ್ರಕಾರ ಅದು ನನಗೆ ಕೇವಲ ಪಿ. ಯು. ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದಕ್ಕಾಗಿ ಕೊಟ್ಟ ಬಹುಮಾನವಾಗಿತ್ತು. ಆದ್ದರಿಂದ ಅದನ್ನು ಮುಂದಿನ ವರ್ಷಗಳಲ್ಲೂ ಕೊಡುವ ಪ್ರಶ್ನೆಯೇ ಇರಲಿಲ್ಲ.

ನಾನು ಸ್ವಲ್ಪ ದಿನ ಆ ವಿಷಯವನ್ನು ಅಲ್ಲಿಗೇ ಕೈಬಿಟ್ಟಿದ್ದೆ. ಆದರೆ ಒಂದು ದಿನ ನಾನು ನ್ಯೂಸ್ ಪೇಪರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ  ಉಪಕುಲಪತಿಯವರು ನಿವೃತ್ತರಾದ್ದರಿಂದ ರಿಜಿಸ್ಟ್ರಾರ್ ರಾಮಚಂದ್ರನ್ ಅವರು ತಾತ್ಕಾಲಿಕ ಉಪಕುಲಪತಿಯಾಗಿ ನೇಮಕವಾಗಿದ್ದರೆಂದು ಓದಿದೆ. ಆಗ ಇದ್ದಕ್ಕಿದ್ದಂತೇ ನನಗೊಂದು ಐಡಿಯಾ ಹೊಳೆಯಿತು. ನನಗಿದ್ದ ಅನುಮಾನವನ್ನು ಏಕೆ ಉಪಕುಲಪತಿಯವರಿಂದಲೇ ಬಗೆಹರಿಸಿಕೊಳ್ಳಬಾರದೆಂದು. ಅವರೇ ಅಲ್ಲವೇ ನನಗೆ ಸ್ಕಾಲರ್ಷಿಪ್ ಮಂಜೂರಾಗಲು ಮೂಲ ಕಾರಣ? ನಾನು ಸ್ವಲ್ಪವೂ ತಡಮಾಡದೇ ಅವರಿಗೊಂದು ಪತ್ರ ಬರೆದೆ. ಅದರಲ್ಲಿ ಉಪಕುಲಪತಿಯಾಗಿರುವುದಕ್ಕೆ ಅವರನ್ನು ಅಭಿನಂದಿಸುತ್ತಾ ನನ್ನ ಸ್ಕಾಲರ್ಷಿಪ್ ಮುಂದುವರಿಯುವುದೇ ಎಂದು ಪ್ರಶ್ನಿಸಿದ್ದೆ.

ಕೇವಲ ಒಂದು ವಾರದಲ್ಲಿ ವಿಶ್ವವಿದ್ಯಾನಿಲಯದಿಂದ ನನ್ನ ಹೆಸರಿಗೆ ಒಂದು ಲಕೋಟೆ ಬಂತು. ಅದನ್ನು ಒಡೆದು ನೋಡಿದಾಗ ಪುನಃ ನಾನು ಬರೆದ ಪತ್ರವೇ ಅದರಲ್ಲಿತ್ತು. ಆದರೆ ಈ ಬಾರಿ ನಾನು ಸೀದಾ ಪತ್ರದ ಕೊನೆಯಲ್ಲಿ ಏನಾದರೂ ಬರೆದಿರುವರೇ ಎಂದು ನೋಡಿದೆ. ನನ್ನ ಊಹೆ ನಿಜವಾಗಿತ್ತು. ಈ ಸಂಗತಿ ನಡೆದು ಇಂದಿಗೆ ಐವತ್ತು ವರ್ಷಕ್ಕೂ ಮಿಕ್ಕಿ ಹೋಗಿದೆ. ಆದರೆ ಪತ್ರದ ಕೆಳಗೆ ಬರೆದಿದ್ದ ಒಂದೊಂದು ಅಕ್ಷರವೂ ನನ್ನ ನೆನಪಿನಲ್ಲಿದೆ:

“The scholarship sanctioned for the first year degree will continue throughout the career of the student in the University. It is subject to the satisfactory performance each year.”

                                                             Registrar

                                                       Mysore University

(ಮೊದಲ ವರ್ಷದ ಡಿಗ್ರೀ ತರಗತಿಯಲ್ಲಿ ಮಂಜೂರಾದ ಸ್ಕಾಲರ್ಷಿಪ್ ವಿದ್ಯಾರ್ಥಿಯು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವವರೆಗೆ ಮುಂದುವರಿಯುವುದು. ಆದರೆ ಅದು ವಿದ್ಯಾರ್ಥಿಯ ಮೆರಿಟ್ ಮೇಲೆ ಅವಲಂಬಿತವಾಗಿರುತ್ತದೆ)

ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಲ್ಲಿನ  ಹಣ  ಒಂದು ಸಾವಿರ ರೂಪಾಯಿಯ ಹತ್ತಿರ ತಲುಪಿತ್ತು!

------- ಮುಂದುವರಿಯುವುದು-----


No comments: