Tuesday, June 16, 2020

ಬಾಲ್ಯ ಕಾಲದ ನೆನಪುಗಳು – ೯೩

ಪ್ರತಿ ವರ್ಷದ ಮಾಮೂಲಿನಂತೆ ಆ ವರ್ಷದ ಬೇಸಿಗೆ ರಜೆಯಲ್ಲೂ ಪುಟ್ಟಣ್ಣ ಮತ್ತು ನಾನು ಮಳೆಗಾಲಕ್ಕೆ ಮುಂಚೆ ಮಾಡಬೇಕಾದ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿಬಿಟ್ಟೆವು.  ಜುಲೈ ೧ನೇ ತಾರೀಕಿನಿಂದ ನಾವು ಕಾಲೇಜಿಗೆ ಹೋಗಬೇಕಾದ್ದರಿಂದ ಅಷ್ಟರಲ್ಲಿ ಮತ್ತು ಮಳೆಗಾಲ ಶುರುವಾಗುವ ಮೊದಲು ಆ ಎಲ್ಲಾ ಕೆಲಸಗಳು ಮುಗಿಯಲೇ ಬೇಕಿತ್ತು. ಪುಟ್ಟಣ್ಣ ಹೇಗೋ ಹೋರಾಟಮಾಡಿ ಮನೆಯಿಂದ ದೊರೆಯುತ್ತಿದ್ದ ಅಲ್ಪ ಹಣದಿಂದ ಬೆಂಗಳೂರಿನಲ್ಲೇ ತನ್ನ ವಿದ್ಯಾಭ್ಯಾಸ ಮುಂದುವರಿಸಿದ್ದ. ನಮ್ಮ ಮಲೆನಾಡಿನಲ್ಲಿ ಬಿ.ಕಾಂ. ಪರೀಕ್ಷೆ ತೆಗೆದುಕೊಳ್ಳುತ್ತಿದ್ದವರಲ್ಲಿ ಪುಟ್ಟಣ್ಣನೊಬ್ಬ ಮೊದಲಿಗನಾಗಿದ್ದನೆಂದು ಅನಿಸುತ್ತಿದೆ. ಆ ಪದವಿ ತರಗತಿಯಲ್ಲಿ ವ್ಯಾಪಾರ ಮತ್ತು ವ್ಯವಹಾರಗಳ ಬಗ್ಗೆ ತರಬೇತಿ ನೀಡುತ್ತಿದ್ದರೆಂದು ಪುಟ್ಟಣ್ಣನಿಂದ ನನಗೆ ತಿಳಿಯಿತು. ಅವನು ಕೇವಲ ಎರಡು ವರ್ಷದಲ್ಲೇ ಬೆಂಗಳೂರಿನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದ. ನಾವಿಬ್ಬರೂ ನಮ್ಮ ಕಾಲೇಜಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ಇನ್ನೂ ಎರಡು ವರ್ಷ ಹೇಗೆ ನಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಚರ್ಚಿಸುತ್ತಿದ್ದೆವು.

ನನಗೆ ನನ್ನ ಹಾಸ್ಟೆಲ್ ಮೇಟ್ ಗಳಿಂದ ತುಂಬಾ ಪತ್ರಗಳು ಬರುತ್ತಿದ್ದವು. ಹೆಚ್ಚಿನ ಪತ್ರಗಳು  ನಾನು ಅವರಿಗೆ ಮಾರ್ಗದರ್ಶನ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಬರೆದ ಪತ್ರಗಳಾಗಿರುತ್ತಿದ್ದವು. ಹಾಗೆಯೇ ನನ್ನಂತಹ Rank ಪಡೆದ ವಿದ್ಯಾರ್ಥಿಯನ್ನು ಸ್ನೇಹಿತನನ್ನಾಗಿ ಪಡೆದುದು ತಮ್ಮ ಅದೃಷ್ಟವೆಂದು ಅವರು ಬರೆದಿದ್ದರು. ಕೆಲವು ಪತ್ರಗಳಲ್ಲಿ ನನ್ನನ್ನು ತುಂಬಾ ಹೊಗಳಿ ಬರೆದದ್ದು ಸ್ವಲ್ಪ  ತಮಾಷೆಯಾಗಿಯೇ ಕಾಣುತ್ತಿತ್ತು. ನನ್ನ ತಮ್ಮಂದಿರು ಅವನ್ನು ಗಟ್ಟಿಯಾಗಿ ಓದಿ ನನ್ನನ್ನು ತಮಾಷೆ ಮಾಡುತ್ತಾ ನಗುತ್ತಿದ್ದರು. ನನ್ನ ರೂಮ್ ಮೇಟ್ ನಂಜುಂಡಸ್ವಾಮಿ ನಾನು ಅವನ ಊರಾದ ಲಿಂಗದಹಳ್ಳಿಗೆ ಬರಲೇ ಬೇಕೆಂದು ತುಂಬಾ ಒತ್ತಾಯ ಮಾಡಿ ಪತ್ರ ಬರೆದಿದ್ದ. ಹಾಗೆಯೇ ನಾವು ಬೀರೂರು ಮತ್ತು ಕಡೂರಿಗೂ ಹೋಗಿ ನಮ್ಮ ಮಿತ್ರರನ್ನು ಭೇಟಿಮಾಡಬಹುದೆಂದು ಅವನು ಸಲಹೆ ನೀಡಿದ್ದ. ನಮ್ಮ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ಮತ್ತು ಬೀರೂರು ಬಯಲುಸೀಮೆ ಊರುಗಳಾಗಿದ್ದವು. ಅಲ್ಲಿನ ಜನಜೀವನ ಹೇಗಿರಬಹುದೆಂದು ತಿಳಿಯುವ ಕುತೂಹಲ ನನಗೂ ತುಂಬಾ ಇತ್ತು. ಆದ್ದರಿಂದ ನಾನು ಮೊದಲು ಲಿಂಗದಹಳ್ಳಿಗೆ ಹೋಗಲು ತೀರ್ಮಾನಿಸಿದೆ.

ಲಿಂಗದಹಳ್ಳಿಗೆ ಪ್ರಯಾಣ

ದಿನ ನಾನು ಬೆಳಗೊಳ ಗಣಪತಿಕಟ್ಟೆಗೆ ಹೋಗಿ ಚಿಕ್ಕಮಗಳೂರಿಗೆ ಹೋಗುವ ಶಂಕರ್ ಟ್ರಾನ್ಸ್ಪೋರ್ಟ್ ಬಸ್ ಹತ್ತಿದೆ. ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗ ತಂದೆಯವರೊಡನೆ ಬಾಳೆಕಾಯಿ ವ್ಯಾಪಾರ ಮಾಡಲು ಅಲ್ಲಿಗೆ ಹೋಗಿದ್ದನ್ನು ಹಿಂದೆಯೇ ಬರೆದಿದ್ದೇನೆ. ಆಮೇಲೆ ಎಷ್ಟೋ ವರ್ಷಗಳು ಕಳೆದಿದ್ದರೂ ಚಿಕ್ಕಮಗಳೂರು ಪಟ್ಟಣದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಣ್ಣಿಗೆ ಬೀಳಲಿಲ್ಲ. ಅದೊಂದು ಜಿಲ್ಲಾ ಕೇಂದ್ರವಾಗಿದ್ದರೂ ಶಿವಮೊಗ್ಗೆಗೆ ಯಾವ ರೀತಿಯಲ್ಲ್ಲೂ ಹೋಲಿಕೆ ಮಾಡುವಂತಿರಲಿಲ್ಲ. ನಾನು ಅಲ್ಲಿಂದ ಇನ್ನೊಂದು ಬಸ್ ಹಿಡಿದು ಲಿಂಗದಹಳ್ಳಿ ತಲುಪಿದೆ. ಅದೊಂದು ಚಿಕ್ಕ ಬಯಲುಸೀಮೆ ಊರಾಗಿತ್ತು. ನಂಜುಂಡಸ್ವಾಮಿ ಬಸ್ ನಿಲ್ದಾಣದಲ್ಲಿ ನನಗೆ ಕಾಯುತ್ತಿದ್ದ. ಪಕ್ಕಾ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅದೊಂದು ತುಂಬಾ ವಿಚಿತ್ರ ಊರಾಗಿ ಕಾಣಿಸಿತು. ನಂಜುಂಡಸ್ವಾಮಿಯ ತಂದೆ ತಾಯಿಯವರು ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡರು. ತಮ್ಮ ಮಗ ನನ್ನ ಬಗ್ಗೆ ತುಂಬಾ ಹೇಳಿರುವುದಾಗಿ ತಿಳಿಸಿ ನನ್ನಂತಹ ಗೆಳೆಯ ಅವನಿಗೆ ಸಿಕ್ಕಿದ್ದುದು ಅವನ ಅದೃಷ್ಟ ಎಂದು ಹೇಳಿದರು. ನನಗೆ ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಊಟ ಮಾಡಿಸಿದರು. ಸಂಜೆಯ ವೇಳೆ ನಾವಿಬ್ಬರೂ ಒಮ್ಮೆ ಊರನ್ನೆಲ್ಲಾ ಸುತ್ತಿ ಬಂದೆವು. ಇಡೀ ಊರಿನಲ್ಲಿ ಕೇವಲ ಕೆಲವೇ ಸಿಹಿ ನೀರಿನ ಬಾವಿಗಳಿದ್ದವು. ಊರಿನವರೆಲ್ಲಾ ಅವುಗಳಿಂದಲೇ ದಿನ ನಿತ್ಯ ಕುಡಿಯುವ ನೀರನ್ನು ತರಬೇಕಾಗಿತ್ತು. ಅದನ್ನು ನೋಡುವಾಗ ನನಗೆ ನಮ್ಮೂರಿನಲ್ಲಿ ಪ್ರತಿ ಮನೆಗೂ ಹರಿದು ಬರುತ್ತಿದ್ದ ಒರತೆಯ ಸಿಹಿ ನೀರು ನೆನಪಾಗಿ ನಾವೆಷ್ಟು ಭಾಗ್ಯಶಾಲಿಗಳೆಂದು ಅರಿವಾಯಿತು. ಆ ರಾತ್ರಿ ನಾನು ಅವರ ಮನೆಯಲ್ಲೇ ಇದ್ದು ಬೆಳಿಗ್ಗೆ ನಾವಿಬ್ಬರೂ ಕೆಮ್ಮಣ್ಣುಗುಂಡಿಗೆ ಪ್ರಯಾಣ ಮಾಡುವುದೆಂದು ತೀರ್ಮಾನಿಸಿದೆವು.

ಕೆಮ್ಮಣ್ಣುಗುಂಡಿಗೆ ಪ್ರಯಾಣ ಮತ್ತು ಕಲ್ಹತ್ತಿ ಜಲಪಾತ

ಮಾರನೇ ದಿನ ಬೆಳಿಗ್ಗೆ ನಾವು ಬಸ್ ಒಂದನ್ನು ಹಿಡಿದು ಕೆಮ್ಮಣ್ಣುಗುಂಡಿಯ ತಪ್ಪಲನ್ನು ತಲುಪಿದೆವು. ಆದರೆ ಗುಡ್ಡದ ಮೇಲೆ ಹೋಗಲು ಕೇವಲ ಎರಡೇ ಬಸ್ಸುಗಳಿದ್ದು ನಾವು ಮೊದಲನೇ ಬಸ್ ಮಿಸ್ ಮಾಡಿದ್ದೆವು. ಮುಂದಿನ ಬಸ್ ಮದ್ಯಾಹ್ನದ ನಂತರ ಇತ್ತು. ನಿರ್ವಾಹವಿಲ್ಲದೇ ನಾವು ರಸ್ತೆಯಲ್ಲಿಯೇ ಮುನ್ನಡೆಯುತ್ತಾ ಗುಡ್ಡದ ಮೇಲೆ ಹೋಗತೊಡಗಿದೆವು. ಆರಂಭದಲ್ಲಿ ನಾವು ಅತಿ ಉತ್ಸಾಹದಿಂದ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಪಯಣಿಸಿದೆವು. ರಸ್ತೆಯ ಒಂದು ಪಕ್ಕದಲ್ಲಿ ಗುಡ್ಡದ ತುದಿಯಿಂದ ನೀರು ಇಳಿದು ಕಾಲುವೆಯಾಗಿ ಹರಿದು ಹೋಗುತ್ತಿದ್ದುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚಿಸಿತು. ಆದರೆ ನೆತ್ತಿಯ ಮೇಲೆ ಸೂರ್ಯನ ಬಿಸಿಲು ಉರಿಯತೊಡಗಿದಂತೆ ನಮ್ಮ ಉತ್ಸಾಹ ಕಡಿಮೆಯಾಗ ತೊಡಗಿತು. ದಾರಿಯಲ್ಲಿ ನಮಗೆ ಸಿಕ್ಕ ಒಂದೆರಡು ಕಾಫಿ ಪ್ಲಾಂಟರ್ ಗಳ ಜೀಪುಗಳನ್ನು ನಿಲ್ಲಿಸುವ ನಮ್ಮ ಪ್ರಯತ್ನ ವಿಫಲವಾಯಿತು. ಮಾರ್ಗದಲ್ಲಿ ಸಿಕ್ಕಿದ ಒಂದು ಅಡ್ಡ ರಸ್ತೆಯಲ್ಲಿ ಹೋದಾಗ ನಾವು ಅತ್ಯಂತ ರಮಣೀಯವಾದ ಕಲ್ಹತ್ತಿ ಜಲಪಾತವನ್ನು ತಲುಪಿದೆವು. ಜಲಪಾತದ ಮದ್ಯೆ ಹೋಗಿ ನಾವು ತುಂಬಾ ಖುಶಿಯಿಂದ ಸ್ನಾನ ಮಾಡಿ ಮುಗಿಸಿದೆವು. ಅಲ್ಲಿರುವ ವೀರ ಭದ್ರೇಶ್ವರ ಸ್ವಾಮಿ ದೇವಾಲಯ ವಿಜಯನಗರದ ಅರಸರ ಕಾಲದ್ದಂತೆ. ಸುಮಾರು ೧೨೨ ಮೀಟರ್ ಎತ್ತರದಿಂದ ದುಮ್ಮಿಕ್ಕುವ ಜಲಪಾತವಿರುವ ಈ ಪ್ರದೇಶ ಪುರಾಣಗಳ ಪ್ರಕಾರ ಅಗಸ್ತ್ಯ ಮುನಿಗೆ ಸಂಬಂಧಿಸಿದ್ದಂತೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸ್ವಲ್ಪ ಕಾಲ ವೀಕ್ಷಿಸಿದ ನಂತರ ಅಲ್ಲಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿದ್ದ ಕೆಮ್ಮಣ್ಣುಗುಂಡಿಯತ್ತ ನಮ್ಮ ಪ್ರಯಾಣ ಮುಂದುವರಿಯಿತು.

ಆ ವೇಳೆಯಲ್ಲಿ ನಮ್ಮ  ಅದೃಷ್ಟ ಖುಲಾಯಿಸಿತ್ತು. ನಮ್ಮ ಹಿಂದಿನಿಂದ ಬಂದ ಒಂದು ಜೀಪಿನಲ್ಲಿದ್ದ ಮಹಾಶಯರು ಅದನ್ನು ನಮ್ಮ ಪಕ್ಕದಲ್ಲೇ ನಿಲ್ಲಿಸಿ ಲಿಫ್ಟ್ ಬೇಕೇ ಎಂದು ಪ್ರಶ್ನಿಸಿದರು. ಅವರಿಗೆ ತುಂಬಾ ಕೃತಜ್ಞತೆ ಸಲ್ಲಿಸಿ ನಾವು ಜೀಪನ್ನೇರಿ ಬಿಟ್ಟೆವು.  ಬೇಗನೆ ಬೆಟ್ಟದ ತುದಿಯನ್ನು ತಲುಪಿದ ನಮಗೆ ನಿರಾಶೆಯೊಂದು ಅಲ್ಲಿ ಕಾಯುತ್ತಿತ್ತು. ಆಗ ಅಲ್ಲಿ ಯಾವುದೇ ಹೋಟೆಲ್ಲುಗಳು ಇರದೇ ಕೇವಲ ಒಂದು ಕ್ಯಾಂಟೀನ್ ಇತ್ತು. ಅಲ್ಲಿ ತಯಾರಿಸಿದ್ದ ಕಡಿಮೆ ಸಂಖ್ಯೆಯ ಊಟಗಳು ಮುಗಿದು ಹೋಗಿದ್ದು ನಾವೆಷ್ಟೇ ಕೇಳಿಕೊಂಡರೂ ನಮಗಾಗಿ ಸ್ವಲ್ಪ ಅಡಿಗೆ ಮಾಡಲು ಕ್ಯಾಂಟೀನ್ ಮಾಲೀಕರು ತಯಾರಿರಲಿಲ್ಲ. ಹಾಗಾಗಿ ನಾವು ೮ ಗಂಟೆಯ ರಾತ್ರಿ ಊಟಕ್ಕೆ ಕಾಯಬೇಕಾಗಿತ್ತು. ಆದರೆ ಅದರದ್ದೂ ಗ್ಯಾರಂಟಿ ಇರಲಿಲ್ಲ. ಏಕೆಂದರೆ ಆ ರಾತ್ರಿ ಅಲ್ಲಿ ಉಳಿದುಕೊಳ್ಳುವ ಯಾತ್ರಿಕರು ಯಾರೂ ಇರಲಿಲ್ಲ. ನಮ್ಮನ್ನೂ ಸೇರಿ ಐದು ಮಂದಿಯಾದರೂ ಇದ್ದರೆ ಮಾತ್ರ ರಾತ್ರಿ ಊಟ ತಯಾರು ಮಾಡುವುದಾಗಿ ನಮಗೆ ತಿಳಿಸಲಾಯಿತು.

ಆ ವೇಳೆಗೆ ನಮ್ಮ ಹೊಟ್ಟೆ ಜೋರಾಗಿ ತಾಳ ಹಾಕತೊಡಗಿತ್ತು. ನಾವು ಸ್ವಲ್ಪ ಓಡಾಡಿ ಕಣ್ಣಿಗೆ ಬಿದ್ದ ಅಂಗಡಿಯೊಂದರಲ್ಲಿ ಕಂಡ ಬಾಳೆಹಣ್ಣುಗಳನ್ನು ಕೊಂಡು ತಿಂದೆವು. ಹೊಟ್ಟೆ ಸ್ವಲ್ಪ ತಣ್ಣಗಾದರೂ ನಮಗೆ ರಾತ್ರಿ ಊಟವೂ ಸಿಗದಿದ್ದರೆ ಏನು ಗತಿ ಎಂದು ಚಿಂತಿಸತೊಡಗಿದೆವು. ಅಷ್ಟರಲ್ಲಿ ನಮಗೆ ಅಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಯಿಂದ ರಾತ್ರಿ ತಂಗುವುದಕ್ಕಾಗಿ ಒಂದು ಕಾಟೇಜ್ ದೊರೆಯಿತು. ತುಂಬಾ ಸುಂದರವಾದ ಆ ಕಾಟೇಜ್ ನಿಂದ ಹೊರಗೆ ನೋಡಿದಾಗ ಕೆಮ್ಮಣ್ಣುಗುಂಡಿಯ ಅಪಾರ ಪ್ರಕೃತಿ ಸೌಂದರ್ಯ ಕಣ್ಣಿಗೆ ಬೀಳುತ್ತಿತ್ತು. ಅದರ ಪಕ್ಕದಲ್ಲೇ ಇದ್ದ ನಾಲ್ಮಡಿ ಕೃಷ್ಣರಾಜರು ಕಟ್ಟಿಸಿದ ರಾಜಭವನಕ್ಕೆ ನಾವು ಒಂದು ಸುತ್ತು ಹಾಕಿದೆವು. ಆ ವೇಳೆಗೆ ಗುಡ್ಡದ ಮೇಲೆ ಕತ್ತಲೆಯಾಗತೊಡಗಿ ನಮಗೆ ರಾತ್ರಿ ಊಟದ ಚಿಂತೆ ಹೆಚ್ಚಾದಂತೆ ನಾವು ಕರುಣೆ ತೋರುವಂತೆ ದತ್ತಾತ್ರೇಯನ ಸ್ಮರಣೆ ಮಾಡತೊಡಗಿದೆವು.

ದತ್ತಾತ್ರೇಯನ ಕೃಪೆ

ಖಂಡಿತವಾಗಿಯೂ ದತ್ತಾತ್ರೇಯನಿಗೆ ನಮ್ಮ ಮೊರೆ ಕಿವಿಗೆ ಬಿದ್ದಿರಬೇಕು. ಏಕೆಂದರೆ ಇದ್ದಕ್ಕಿದ್ದಂತೆ ಬೆಟ್ಟದ ಮೇಲೆ ಬಂದ ಒಂದು ವ್ಯಾನಿನಿಂದ ಅನೇಕ ಯಾತ್ರಿಗಳು ಒಮ್ಮೆಲೇ ಇಳಿಯತೊಡಗಿದರು. ಅಲ್ಲಿಗೆ ನಮ್ಮ ರಾತ್ರಿ ಊಟ ಗ್ಯಾರಂಟಿ ಆದಂತಾಯಿತು. ಅಷ್ಟು ಮಾತ್ರವಲ್ಲ. ನಮಗೆ ಇನ್ನೂ ಖುಶಿ ಕಾದಿತ್ತು. ಏಕೆಂದರೆ ತಂಡದ ಮುಖ್ಯಸ್ಥ ಸ್ಪೆಷಲ್ ಡಿನ್ನರ್ ತಯಾರಿಸಲು ಆರ್ಡರ್ ಕೊಟ್ಟುಬಿಟ್ಟ. ಅಂದರೆ ನಮಗೂ ಸ್ಪೆಷಲ್ ಡಿನ್ನರ್ ದೊರೆಯಲಿತ್ತು! ಎಂತಹ ಅದೃಷ್ಟ ನಮದಾಗಿತ್ತು!

ಕನ್ನಡದ ಕೋಗಿಲೆ ಮತ್ತು ಭಾವಗೀತೆಗಳ ಹರಿಕಾರ ಪಿ. ಕಾಳಿಂಗರಾಯರು!

ದತ್ತಾತ್ರೇಯ ನಮಗಿತ್ತ ವರ ಅಲ್ಲಿಗೇ ಮುಗಿದಿರಲಿಲ್ಲ. ನಮಗಿನ್ನೂ ಆಶ್ಚರ್ಯ ಕಾದಿತ್ತು! ಏಕೆಂದರೆ ಆ ತಂಡದ ಮುಖ್ಯಸ್ಥ ಬೇರೆ ಯಾರೂ ಅಲ್ಲ. ಅವರೇ ಕನ್ನಡದ ಕೋಗಿಲೆ ಮತ್ತು ಭಾವಗೀತೆಗಳ ಹರಿಕಾರ ಪಿ. ಕಾಳಿಂಗರಾಯರು! ನಾನು ಅವರ ಎಷ್ಟೋ ಹಾಡುಗಳನ್ನು ಗ್ರಾಮೋಫೋನ್ ರೆಕಾರ್ಡುಗಳ ಮೂಲಕ ಕೇಳಿದ್ದೆ ಮತ್ತು ಅವರೇ ಪ್ರತ್ಯಕ್ಷವಾಗಿ ಸಿನಿಮಾ ಒಂದರಲ್ಲಿ "ಅಂತಿಂತ ಹೆಣ್ಣು ನೀನಲ್ಲ” ಎಂಬ ಹಾಡನ್ನು ಹಾಡುವುದನ್ನು ನೋಡಿದ್ದೆ. ಕಾಳಿಂಗರಾಯರೊಡನೆ ಅವರ ಸಹಗಾಯಕರಾದ ಮೋಹನ ಕುಮಾರಿ ಹಾಗೂ ಸೋಹನ ಕುಮಾರಿಯವರೂ ಆಗಮಿಸಿದ್ದರು. ಆ ರಾತ್ರಿ ಕಾಳಿಂಗರಾಯರ ಭಾವಗೀತೆಗಳ ಕಾರ್ಯಕ್ರಮವೊಂದು ಅಲ್ಲಿ ನಡೆಯುವುದೆಂದು ತಿಳಿದು ನಮಗಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾವೆಣಿಸಿದಂತೆ ಆ ರಾತ್ರಿ ಕ್ಯಾಂಟೀನಿನಲ್ಲಿ ನಮಗೆ ಭರ್ಜರಿ ಭೋಜನವೇ ಆಯಿತು. ಆ ದಿನ ಬೆಳಿಗ್ಗೆ ಲಿಂಗದಹಳ್ಳಿಯಲ್ಲಿ ತಿಂಡಿ ತಿಂದ ಮೇಲೆ ನಮಗೆ ರಾತ್ರಿಯವರೆಗೆ ತಿನ್ನಲು ಬಾಳೆಹಣ್ಣನ್ನು ಬಿಟ್ಟು ಬೇರೇನೂ ದೊರೆತಿರಲಿಲ್ಲ. ಆದ್ದರಿಂದ ನಾವು ಸಕತ್ತಾಗಿ ರಾತ್ರಿ ಊಟವನ್ನು ಸವಿದು ಬಿಟ್ಟೆವು.

ಊಟದ ನಂತರ ಕಾಳಿಂಗರಾಯರು ಮತ್ತವರ ಜೋಡಿ ಕುಮಾರಿಯರು ನಡೆಸಿದ ಭಾವಗೀತೆಗಳ ಕಾರ್ಯಕ್ರಮ ನಾವೆಂದೂ ಮರೆಯುವಂತದ್ದಾಗಿರಲಿಲ್ಲ. ಮುಖ್ಯವಾಗಿ  ನನಗಿಂದೂ ನೆನಪಿಗೆ ಬರುವ ಹಾಡುಗಳೆಂದರೆ ಬಾರಯ್ಯ ಬೆಳದಿಂಗಳೇ, ಬ್ರಹ್ಮ ನಿನಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನ, ಅದು ಬೆಟ್ಟ ಇದು ಬೆಟ್ಟವೋ, ಮಾಡು ಸಿಕ್ಕದಲ್ಲಾ, ಯಾಕಳುವೆ  ಎಲೆ ರಂಗ, ಎಂಬ ಹಾಡುಗಳು. ನಮಗೆ ಸಿಕ್ಕಿದ ಆ ಅಪೂರ್ವ ಅವಕಾಶದ ಸವಿಯನ್ನು ನಾವಿಬ್ಬರೂ ಅನುಭವಿಸಿ ಸಂಬ್ರಮಿಸಿದೆವು. ನನ್ನ ಜೀವಮಾನದ ಅತಿ ಮಧುರ ಸನ್ನಿವೇಶಗಳಲ್ಲಿ ಆ ಕಾರ್ಯಕ್ರಮವೂ ಒಂದಾಗಿತ್ತೆಂದು ಇಂದಿಗೂ ಅನಿಸುತ್ತಿದೆ.

ಹೆಬ್ಬೆ ಜಲಪಾತ

ಮಾರನೇ ದಿನ ಬೆಳಿಗ್ಗೆ ನಾವು ಕಬ್ಬಿಣದ ಅದಿರು ಗಣಿಗಳನ್ನು ನೋಡಲು ಹೋದೆವು. ಗುಡ್ಡದಿಂದ ಹೊರತೆಗೆದ ಅದಿರನ್ನು ರೋಪ್ ವೇ ಮೂಲಕ ತಣಿಗೆಬೈಲು ಎಂಬಲ್ಲಿಗೆ ಸಾಗಿಸಲಾಗುತ್ತಿತ್ತು. ಅಲ್ಲಿಂದ ಲಾರಿಗಳಲ್ಲಿ ಭದ್ರಾವತಿ ಕಾರ್ಖಾನೆಗೆ ಒಯ್ಯಲಾಗುತ್ತಿತ್ತು. ಬೆಳಗಿನ ಉಪಾಹಾರ ಮುಗಿದನಂತರ ನಾವು ಅಲ್ಲಿಂದ ೧೦ ಕಿಲೋಮೀಟರ್ ದೂರದಲ್ಲಿದ್ದ ಹೆಬ್ಬೆ ಜಲಪಾತವನ್ನು ನೋಡಲು ಹೋದೆವು. ಇಲ್ಲಿ ಝರಿಯ ನೀರು ಸುಮಾರು ೧೬೮ ಕಿಲೋಮೀಟರ್ ಕೆಳಗೆ ಎರಡು ಹಂತದಲ್ಲಿ ದುಮುಕುತ್ತದೆ. ಇವುಗಳಿಗೆ ದೊಡ್ಡ ಹೆಬ್ಬೆ ಫಾಲ್ಸ್ ಮತ್ತು ಚಿಕ್ಕ ಹೆಬ್ಬೆ ಫಾಲ್ಸ್ ಎಂದು ಕರೆಯುತ್ತಾರೆ. ಈ ಜಲಪಾತಗಳೂ ಕೂಡ ನಯನ ಮನೋಹರವಾಗಿವೆ. ಅಲ್ಲಿಂದ ಮರುಪ್ರಯಾಣ ಮಾಡಿ ನಾವು ಮದ್ಯಾಹ್ನ  ಲಿಂಗದಹಳ್ಳಿ ತಲುಪಿದೆವು. ಹೀಗೆ ನಮ್ಮ ಕೆಮ್ಮಣ್ಣುಗುಂಡಿ ಪಿಕ್ನಿಕ್ ಮುಕ್ತಾಯಗೊಂಡಿತು.

ಬೀರೂರು ಮತ್ತು ಕಡೂರು

ಮಾರನೇ ದಿನ ಬೆಳಿಗ್ಗೆ ನಾವು ಬೀರೂರಿಗೆ ಹೋಗಿ ನನ್ನ ಸ್ನೇಹಿತ ಶಿವಶಂಕರಪ್ಪನ ತಂದೆಯವರಾದ ಮಾರ್ಗದ ಮಲ್ಲಪ್ಪನವರ ಕುಟುಂಬದವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆವು. ಆ ಕಾಲದಲ್ಲಿ ಮಾರ್ಗದ ಕುಟುಂಬ ಬೀರೂರು ಮತ್ತು ಕಡೂರಿನಲ್ಲಿ ತುಂಬಾ ಹೆಸರಾಂತ ಕುಟುಂಬವಾಗಿತ್ತು. ಈ ಕುಟುಂಬ ಅಪಾರ ಕೃಷಿ ಜಮೀನು ಮತ್ತು ವಿವಿಧ ವ್ಯಾಪಾರ ವ್ಯವಹಾರವನ್ನು ಹೊಂದಿತ್ತು. ಹಿರಿಯ ವಕೀಲರಾಗಿದ್ದ ಮಲ್ಲಪ್ಪನವರು ಮೈಸೂರು ವಿಧಾನ ಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದರು. ಮುಂದೆ ಅವರು ದೇವರಾಜ ಅರಸರ ಮಂತ್ರಿಮಂಡಲದಲ್ಲಿ ಅರೋಗ್ಯ ಮಂತ್ರಿಯಾದರು. ಅವರ ಚಿಕ್ಕಮ್ಮನ ಮಗ ಷಡಾಕ್ಷರಿ ಕೂಡ ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಮಲ್ಲಪ್ಪನವರು ನಮ್ಮನ್ನು ತುಂಬಾ ಆದರದಿಂದ ಸ್ವಾಗತಿಸಿ ಮುಂದಿನ ಎರಡು ದಿನ ಅವರ ಬಂಗಲೆಯಲ್ಲೇ ಇರಲು ಏರ್ಪಾಟು ಮಾಡಿದರು. ಆಮೇಲೆ ನಾವು ಕಡೂರಿಗೆ ಹೋಗಿ ನಮ್ಮ ಇನ್ನೊಬ್ಬ ಹಾಸ್ಟೆಲ್ ಮೇಟ್ ಆದ ಕಾಂತರಾಜ್ ಎನ್ನುವ ವಿದ್ಯಾರ್ಥಿಯನ್ನು ಭೇಟಿ ಮಾಡಿದೆವು. ತುಂಬಾ ಒಳ್ಳೆಯ ಮೈಕಟ್ಟು ಹೊಂದಿದ್ದ ಕಾಂತರಾಜ್ ಎನ್ ಸಿ ಸಿ ಯಲ್ಲಿ ಒಳ್ಳೆ ಹೆಸರು ಗಳಿಸಿದ್ದ. ಅವನ ಕುಟುಂಬದವರೂ ಕೂಡ ನಮ್ಮನ್ನು ತುಂಬಾ ಆದರದಿಂದ ಬರಮಾಡಿಕೊಂಡರು.

ಮಾರನೇ ದಿನ ನಾನು ಚಿಕ್ಕಮಗಳೂರು ಬಸ್ ಹತ್ತಿದರೆ ನಂಜುಂಡಸ್ವಾಮಿ ಲಿಂಗದಹಳ್ಳಿ ಬಸ್ ಹತ್ತಿದ. ಹೀಗೆ ನನ್ನ ಸ್ನೇಹಿತರು ಮತ್ತು ಹಾಸ್ಟೆಲ್ ಮೇಟ್ಗಳ ಊರಿಗೆ ನನ್ನ ಪಯಣ ತುಂಬಾ ಆನಂದದಾಯಕವಾಗಿ ಮುಕ್ತಾಯಗೊಂಡಿತು.

------- ಮುಂದುವರಿಯುವುದು-----



No comments: