Friday, June 26, 2020

ಬಾಲ್ಯ ಕಾಲದ ನೆನಪುಗಳು – ೯೬

ಆ ದಿನಗಳಲ್ಲಿ ಡಿಗ್ರಿ ತರಗತಿಯ ಮೊದಲನೇ ವರ್ಷದ ವಾರ್ಷಿಕ ಪರೀಕ್ಷೆ ಕೇವಲ ಕ್ಲಾಸ್ ಪರೀಕ್ಷೆಯಾಗಿದ್ದು ಕಾಲೇಜಿನವರೇ ಮಾಡಿ ಮುಗಿಸಬೇಕಿತ್ತು. ಹಾಗಾಗಿ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತುಂಬಾ ಲಘುವಾಗಿ ತೆಗೆದುಕೊಳ್ಳುತ್ತಿದ್ದರು. ಉಪನ್ಯಾಸಕರುಗಳು ತಮ್ಮನ್ನು ಹೇಗಿದ್ದರೂ ಪಾಸ್ ಮಾಡಿಬಿಡುತ್ತಾರೆ ಎಂಬ ನಂಬಿಕೆ ವಿದ್ಯಾರ್ಥಿಗಳಿಗಿತ್ತು. ಆದ್ದರಿಂದ ಪರೀಕ್ಷೆಯ ಬಗ್ಗೆ ಅವರಿಗೆ ಹೆಚ್ಚು ಒತ್ತಡವಿರುತ್ತಿರಲಿಲ್ಲ. ನಾನೂ ಕೂಡ ಪರೀಕ್ಷೆಯನ್ನು ತುಂಬಾ ಲಘುವಾಗೇ ತೆಗೆದುಕೊಂಡಿದ್ದೆ. ನಾನು ಸ್ವತಃ ಅಭ್ಯಾಸಕ್ಕಿಂತಲ್ಲೂ ಹೆಚ್ಚಾಗಿ ಹಾಸ್ಟೆಲಿನ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುವುದರಲ್ಲಿ ಹೆಚ್ಚು ವೇಳೆ ಕಳೆದಿದ್ದೆ. ಆದರೆ ನಮ್ಮ ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲರಿಗೆ ವಿದ್ಯಾರ್ಥಿಗಳು ಹೀಗೆ ಕ್ಲಾಸ್ ಪರೀಕ್ಷೆಯನ್ನು ಲಘುವಾಗಿ ತೆಗೆದುಕೊಂಡದ್ದು ಏನೇನೂ ಇಷ್ಟವಾಗಲಿಲ್ಲ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ ಉತ್ತರಗಳಿಂದ ಉಪನ್ಯಾಸಕರಿಗೆ ಅವರು ಪರೀಕ್ಷೆಯನ್ನು ತುಂಬಾ ಲಘುವಾಗಿ ತೆಗೆದುಕೊಂಡಿದ್ದರೆಂದು ತಿಳಿದು ಮೈಯೆಲ್ಲಾ ಉರಿದು ಹೋಯಿತು. ಅಂತಹ ವಿದ್ಯಾರ್ಥಿಗಳಿಗೆ ಸರಿಯಾಗಿ ಬುದ್ಧಿ ಕಲಿಸಲೇ ಬೇಕೆಂದು ಅವರು ತೀರ್ಮಾನ ಮಾಡಿರಬೇಕು. ಬೇಸಿಗೆ ರಜೆ ಕಳೆದು ಪುನಃ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ನೋಟೀಸ್ ಬೋರ್ಡ್ ನೋಡಿ ದಂಗಾಗಿ ಹೋದರು. ಏಕೆಂದರೆ ಅಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರ ದೊಡ್ಡ ಪಟ್ಟಿಯೇ ಇತ್ತು. ಆ ಪಟ್ಟಿಯಲ್ಲಿ ನನ್ನನ್ನು ಸೇರಿ ಕೇವಲ ಕೆಲವರ ಹೆಸರನ್ನು ಬಿಟ್ಟು ಉಳಿದೆಲ್ಲರ ಹೆಸರುಗಳೂ ಇದ್ದವು. ನನ್ನ ಮನಸ್ಸಿಗೇನೋ ನೆಮ್ಮದಿ ಸಿಕ್ಕಿದರೂ ನನಗೆ ನಾನೂ ಕೂಡ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲವೆಂದು ಅನಿಸಿತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಒಂದು ಪರೀಕ್ಷೆ ನಡೆಸಲಾಯಿತು. ಎಲ್ಲರನ್ನೂ ಎರಡನೇ ವರ್ಷದ ಡಿಗ್ರಿ ತರಗತಿಗೆ ಪ್ರಮೋಟ್ ಮಾಡಲಾಯಿತಾದರೂ ಆಡಳಿತ ವರ್ಗದವರು ಅವರಿಗೆಲ್ಲಾ ಚೆನ್ನಾಗಿ ಬುದ್ಧಿ ಕಲಿಸಿದ್ದರು.

ಈ ಸನ್ನಿವೇಶದಲ್ಲಿ ನನ್ನ ಮನಸ್ಸು  ವಾಸ್ತವಿಕತೆಯ ಕಡೆ ಗಮನ ಕೊಟ್ಟಿತು. ಒಂದಂತೂ ನಿಜವಾಗಿತ್ತು. ನಾನು ಕಳೆದ ವರ್ಷವೆಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಮತ್ತು ಇತರರಿಂದ ನಾನು ಪಿ.ಯು.ಸಿ. ಪರೀಕ್ಷೆಯಲ್ಲಿ Rank ಪಡೆದುದಕ್ಕಾಗಿ ಹೊಗಳಿಸಿಕೊಳ್ಳುವುದರಲ್ಲಿ ಅಥವಾ ಮನ್ನಣೆ ಪಡೆಯುವುದರಲ್ಲಿ ಕಳೆದು ಬಿಟ್ಟಿದ್ದೆ. ನನ್ನ ಹಿತೈಷಿಗಳು ನನಗಾಗಲೇ ಒಂದು ಎಚ್ಚರಿಕೆ ಕೊಟ್ಟಿದ್ದರು. ಹಲವು ಬಾರಿ ಮೈಲಿಕಲ್ಲೊಂದನ್ನು ಸಾಧಿಸುವುದು ಸುಲಭವಾಗಿರುತ್ತದೆ. ಆದರೆ ನಮ್ಮನ್ನು ಅದೇ ಮಟ್ಟದಲ್ಲಿ ನಿಲ್ಲುವಂತೆ ನೋಡಿಕೊಳ್ಳುವುದೇನು ಸುಲಭವಲ್ಲ. ಆ ಮಟ್ಟದಲ್ಲೇ ನಾವು ಸ್ಥಿರವಾಗಿರಬೇಕಾದರೆ ತುಂಬಾ ಸಾಧನೆಯ ಅವಶ್ಯಕತೆ ಇರುತ್ತದೆ. ನನ್ನ ವಿಷಯದಲ್ಲಿ ಅದು ಸಂಪೂರ್ಣ ಸತ್ಯವಾಗಿತ್ತು.

ಒಟ್ಟಿನಲ್ಲಿ ವಿಷಯವಿಷ್ಟೇ. ನಾನು ನನ್ನ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಬಿ.ಎಸ್ಸಿ. ಅಂತಿಮ ಪರೀಕ್ಷೆಯಲ್ಲಿ Rank ಪಡೆಯಲೇ ಬೇಕಿತ್ತು. ಅಂತಿಮ ಪರೀಕ್ಷೆಯಲ್ಲಿ ಮಾತ್ರ ನಾವು ನಮ್ಮ ಮೇಜರ್ ಸಬ್ಜೆಕ್ಟುಗಳಾದ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಸೇರಿ ಒಟ್ಟು ೮೦೦ ಅಂಕಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿತ್ತು. ಡಿಗ್ರಿಯ ಎರಡನೇ ವರ್ಷದಲ್ಲಿ ನಾವು ೨೦೦ ಅಂಕಗಳ ನಮ್ಮ ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನ ಎರಡು ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿತ್ತು. ಅಂತಿಮ ಪರೀಕ್ಷೆಯ ನಂತರ ಒಟ್ಟಿನಲ್ಲಿ ೧೦೦೦ ಅಂಕಗಳಲ್ಲಿ ನಾವು ಎಷ್ಟು ಗಳಿಸಿದ್ದೇವೆಂಬ ಆಧಾರದ ಮೇಲೆ ನಮ್ಮ Ranking ನಿರ್ಧಾರ ಮಾಡಲಾಗುತ್ತಿತ್ತು.

ಆ ದಿನಗಳಲ್ಲಿ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಗರಿಷ್ಟ ಶೇಕಡಾ ೮೦-೮೫ ಅಂಕಗಳನ್ನು ಮತ್ತು ಕೆಮಿಸ್ಟ್ರಿಯಲ್ಲಿ ಗರಿಷ್ಟ ಶೇಕಡಾ ೭೦-೭೫ ಅಂಕಗಳನ್ನು ಮಾತ್ರ ತೆಗೆದುಕೊಳ್ಳಲು ಸಾಧ್ಯವಿತ್ತು. ಆದರೆ ಮ್ಯಾಥಮ್ಯಾಟಿಕ್ಸ್ ಮೇಜರ್ ಸಬ್ಜೆಕ್ಟ್ ಆದರೆ ೪೦೦ಕ್ಕೆ ೪೦೦ ಮತ್ತು ಮೈನರ್ ಆದರೆ ೨೦೦ಕ್ಕೆ ೨೦೦ ಅಂಕಗಳನ್ನು ಪಡೆಯಲು ಸಾಧ್ಯವಿತ್ತು. ನಾನು ಮಾಡಿದ  ಲೆಕ್ಕದ ಪ್ರಕಾರ ನಾನು ಮ್ಯಾಥಮ್ಯಾಟಿಕ್ಸ್ ನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸಿದರೂ ಆ ಸಬ್ಜೆಕ್ಟ್ ಮೇಜರ್ ಆಗಿ ತೆಗೆದುಕೊಂಡ ವಿದ್ಯಾರ್ಥಿ ೪೦೦ಕ್ಕೆ ೪೦೦ ಅಂಕಗಳನ್ನು ತೆಗೆದುಕೊಳ್ಳುವ ಅವಕಾಶವಿದ್ದರಿಂದ ಮತ್ತು ನನಗೆ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯಲ್ಲಿ ಸರಾಸರಿ ೧೦೦ಕ್ಕೆ ೮೦ ಅಂಕಗಳಿಗಿಂತ ಮೇಲೆ ತೆಗೆಯುವುದು ಅಸಾಧ್ಯವಾದ್ದರಿಂದ ನನ್ನ ಹೆಸರು ೧೦ ಮಂದಿಯ Rank ಪಟ್ಟಿಯಲ್ಲಿರುವುದು ತೀರಾ ಅಸಾಧ್ಯವೇ ಆಗಿತ್ತು.

 

ನಾನು ನನ್ನ ಈ ಪರಿಸ್ಥಿತಿಯನ್ನು ನನ್ನ ಹಿತೈಷಿಗಳಿಗೆ ತಿಳಿಸಿ ಅವರು ಅನಾವಶ್ಯವಾಗಿ ನಾನು ಅಂತಿಮ ಬಿ.ಎಸ್ಸಿ. ಪರೀಕ್ಷೆಯಲ್ಲಿ ಕೂಡ Rank ಗಳಿಸಿಯೇ ಬಿಡುತ್ತೇನೆಂದು ನಿರೀಕ್ಷೆ ಮಾಡುವುದು ತಪ್ಪೆಂದು ವಿವರಿಸತೊಡಗಿದೆ. ನನ್ನ ಪ್ರಕಾರ ಆ ಬಗೆಯ ನಿರೀಕ್ಷೆ ನನ್ನ ಮೇಲೆ ಒಂದು ದೊಡ್ಡ ಹೊರೆಯಾಗಲಿತ್ತು. ನಾನು ಈ ವಿಷಯವನ್ನು ಮೊದಲು ನನ್ನ ಉಪನ್ಯಾಸಕರೊಡನೆ ಹೇಳಿಕೊಂಡೆ. ನನಗೆ ಆವರಿಗೆ ನನ್ನ ಲೆಕ್ಕಾಚಾರ ಮನವರಿಕೆ ಮಾಡುವುದು ಸುಲಭವೆಂಬ ಭಾವನೆ ಇತ್ತು. ವಿಚಿತ್ರವೆಂದರೆ ಅವರಲ್ಲಿ ಯಾರೂ ನನ್ನ ಲೆಕ್ಕಾಚಾರ ಸರಿಯಲ್ಲವೆಂದು ಹೇಳಲಿಲ್ಲ. ಆದರೆ ಅವರ ಪ್ರಕಾರ ಲೆಕ್ಕಾಚಾರ ಏನೇ ಇರಲಿ ನನಗೆ Rank ಪಡೆಯುವ ಸಾಮರ್ಥ್ಯ ಇದ್ದೇ ಇತ್ತು!  ಅವರಲ್ಲಿ ಒಬ್ಬರಂತೂ ನನಗೆ "ಕೃಷ್ಣಮೂರ್ತಿ, ನೀನು ನಿನ್ನ ಲೆಕ್ಕಾಚಾರವನ್ನೇನೋ ಚೆನ್ನಾಗಿಯೇ ಮಾಡಿರುವೆ. ಆದರೆ ನಮ್ಮೆಲ್ಲರ ದೃಷ್ಟಿಯಲ್ಲಿ ನಿನಗೆ ಪುನಃ Rank ಪಡೆಯುವ ಅರ್ಹತೆ ಇದೆ. ಆದ್ದರಿಂದ ಈ ಲೆಕ್ಕಾಚಾರಗಳನ್ನೆಲ್ಲಾ  ಬದಿಗಿರಿಸಿ ನಿನ್ನ ಅಭ್ಯಾಸದತ್ತ ಗಮನ ಕೊಡು"  ಎಂದು ಹೇಳಿಬಿಟ್ಟರು. ಅಲ್ಲಿಗೆ ನನ್ನ ಮನಸ್ಸಿನ ಹೊರೆಯನ್ನು ಇಳಿಸಿಕೊಳ್ಳುವ ನನ್ನ ಪ್ರಯತ್ನ ಸಂಪೂರ್ಣ ವ್ಯರ್ಥವಾಯಿತು. ಇನ್ನು ನನ್ನ ಕುಟುಂಬದವರು, ಸ್ನೇಹಿತರು ಮತ್ತಿತರರಿಗೆ ನನ್ನ ಲೆಕ್ಕಾಚಾರ ಅರ್ಥವಾಗುವ ಚಾನ್ಸ್ ಇರಲೇ ಇಲ್ಲ. ಆದ್ದರಿಂದ ನಾನು ಆ ಪ್ರಯತ್ನ ಮಾಡಲು ಹೋಗಲೇ ಇಲ್ಲ.

ಇಂತಹ ಸನ್ನಿವೇಶದಲ್ಲಿ ನಾನು ನನ್ನಿಂದಾದಷ್ಟು ಪ್ರಯತ್ನ ಮಾಡಿ ನಾನು ಹಿಂದೆ ಗಳಿಸಿದ ಸ್ಥಾನವನ್ನು  ಉಳಿಸಿಕೊಳ್ಳ ಬೇಕೆಂದೂ ಮತ್ತು ಮಿಕ್ಕಿದ್ದನ್ನು ದೇವರಿಗೆ ಬಿಡುವುದೆಂದು ತೀರ್ಮಾನ ಮಾಡಿದೆ. ಆ ದೃಷ್ಟಿಯಲ್ಲಿ ನನ್ನ ಮೊದಲ ಗುರಿ ಮ್ಯಾಥಮ್ಯಾಟಿಕ್ಸ್ ನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ತೆಗೆದುಕೊಳ್ಳುವುದಾಗಿತ್ತು. ಆದರೆ ಅದಕ್ಕೆ ದೊಡ್ಡ ಸಮಸ್ಯೆ ನಮ್ಮ ಉಪನ್ಯಾಸಕರಾದ ಶ್ರೀನಾಥ ಶಾಸ್ತ್ರಿಯವರಾಗಿದ್ದರು. ಅವರು ತೆಗೆದುಕೊಳ್ಳುತ್ತಿದ್ದ ತರಗತಿಗಳಲ್ಲಿ ಏನನ್ನು ಅವರು ಬೋಧನೆ ಮಾಡುತ್ತಿದ್ದಾರೆಂದು ಅರಿತುಕೊಳ್ಳುವುದು ಸಾಮಾನ್ಯವಾದ ಸವಾಲೇನಾಗಿರಲಿಲ್ಲ. ಆದರೆ ನಾನು ನನ್ನ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಪ್ರಯತ್ನವನ್ನು ಮುಂದುವರಿಸಿದೆ.

ಆ ವರ್ಷ ನಮ್ಮ ಕಾಲೇಜಿನ ಕೆಮಿಸ್ಟ್ರಿ ಡಿಪಾರ್ಟ್ಮೆಂಟಿಗೆ ವೆಂಕಟೇಶ್ ರಾವ್ ಎಂಬ ತರುಣ ಡೆಮಾನ್ಸ್ಟ್ರೇಟರ್ ನೇಮಕ ಮಾಡಲಾಯಿತು. ಅವರು ಎಂ.ಜಿ.ಮ್. ಕಾಲೇಜಿನಲ್ಲಿ ಆಗ ತಾನೇ ಬಿ.ಎಸ್ಸಿ. ಫಸ್ಟ್ ಕ್ಲಾಸ್ಸಿನಲ್ಲಿ ಪಾಸ್ ಮಾಡಿ ಬಂದಿದ್ದರು. ಆಕರ್ಷಕ ತರುಣ ರಾವ್ ನನಗೆ ಅಭ್ಯಾಸದ ಬಗ್ಗೆ ತುಂಬಾ ಪ್ರೋತ್ಸಾಹ ನೀಡಿದರು. ಅವರಿಗೆ ನಾನು ಅಂತಿಮ ಬಿ.ಎಸ್ಸಿ. ಪರೀಕ್ಷೆಯಲ್ಲಿ Rank ಗಳಿಸಿಯೇ ಬಿಡುತ್ತೇನೆಂದು ತುಂಬಾ  ವಿಶ್ವಾಸವಿತ್ತು. ಅವರು ನನಗೆ ಬಿ.ಎಸ್ಸಿ. ಪರೀಕ್ಷೆ ಮುಗಿದ ನಂತರ ಐ ಐ ಟಿ (ಬಾಂಬೆ) ಸೇರಿಕೊಳ್ಳಬೇಕೆಂದು ಸಲಹೆ ನೀಡಿದರು. ಬಹು ಬೇಗನೆ ನಾವಿಬ್ಬರೂ ಆತ್ಮೀಯ ಸ್ನೇಹಿತರಾಗಿ ಬಿಟ್ಟೆವು. ಅವರು ಆ ಮುಂದಿನ ವರ್ಷ ನಮ್ಮ ಕಾಲೇಜಿಗೆ ರಾಜೀನಾಮೆ ಕೊಟ್ಟು ಐ ಐ ಟಿ (ಬಾಂಬೆ) ಸೇರಿಕೊಂಡರು. ನಾವು ಆಮೇಲೆ ಕೆಲವು ಸಮಯ ಪತ್ರ ವ್ಯವಹಾರ ನಡೆಸಿದ್ದೆವು. ಆದರೆ ಕಾಲ ಕ್ರಮೇಣ ನಮ್ಮ ಸ್ನೇಹ ಬಾಂಧವ್ಯ ಕೊನೆಗೊಂಡಿತು.

ನನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹೆಚ್ಚಾದುದು ನನಗೆ ಕೆಲವು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿತು. ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಮಾಮೂಲಿನಂತೆ ತುಂಬಾ ಕಷ್ಟಕರವಾಗಿಯೇ ಮುಂದುವರಿದಿತ್ತು. ಈ ಪರಿಸ್ಥಿತಿ ನನ್ನನ್ನು ಉಭಯಸಂಕಟಕ್ಕೀಡು ಮಾಡಿಬಿಟ್ಟಿತು. ನಾನು ಹಣವನ್ನು ಕುಟುಂಬದ ವೆಚ್ಚಕ್ಕೆ ಕೊಡಬೇಕೇ ಅಥವಾ ನನ್ನ ಮುಂದಿನ ಓದಿಗೆ ಬಳಸಬೇಕೇ ಎನ್ನುವ ಪ್ರಶ್ನೆ ನನ್ನ ಮುಂದಿತ್ತು. ನನ್ನ ತಂದೆ ತಾಯಿಯವರಿಗೆ ತಾವು ಇನ್ನು ಮುಂದೆ ನನ್ನ ಓದಿಗಾಗಿ ಖರ್ಚು ಮಾಡಬೇಕಿಲ್ಲವೆಂಬ ವಿಷಯ ನೆಮ್ಮದಿ ತಂದಿತ್ತು. ಆದರೆ ಅವರು ನನಗೆ ನನ್ನ ಹಣವನ್ನು ಮನೆಯ ಖರ್ಚಿಗೆ ಕೊಡಬೇಕಿಲ್ಲವೆಂದು ಮತ್ತು ಕೇವಲ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬಳಸಬೇಕೆಂದು ಸ್ಪಷ್ಟ ಮಾಡಿಬಿಟ್ಟರು.

ನನ್ನ ಬ್ಯಾಂಕಿನ ಖಾತೆಯಲ್ಲಿನ ಹಣದ ಮೇಲೆ ಪ್ರಿನ್ಸಿಪಾಲರ ಕಣ್ಣು ಬಿತ್ತು! 

ನಾನು ಈ ಹಿಂದಿನ ಅಧ್ಯಾಯದಲ್ಲಿ ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಲ್ಲಿನ  ಹಣ  ಒಂದು ಸಾವಿರ ರೂಪಾಯಿಯ ಹತ್ತಿರ ತಲುಪಿತ್ತು ಎಂದು ಬರೆದಿದ್ದೇನೆ. ಆ ವರ್ಷ ಸ್ವಲ್ಪ ಬೇಗದಲ್ಲೇ ವಿಶ್ವವಿದ್ಯಾನಿಲಯದಿಂದ ನನ್ನ ಸ್ಕಾಲರ್ಷಿಪ್ ಹಣವಾದ ೪೫೦ ರೂಪಾಯಿ ಕಾಲೇಜು ಮೂಲಕ ಬಂದು ಬಿಟ್ಟಿತ್ತು. ಆಗ ನನ್ನ ಬ್ಯಾಂಕಿನ ಖಾತೆಯಲ್ಲಿನ ಹಣ ಮತ್ಯಾರಿಗೂ ಅಲ್ಲ, ನಮ್ಮ ಪ್ರಿನ್ಸಿಪಾಲ್ ಮತ್ತು ತತ್ವ ಶಾಸ್ತ್ರಜ್ಞ ರಾಮಕೃಷ್ಣರಾಯರ ಕಣ್ಣಿಗೇ ಬಿದ್ದು ಬಿಟ್ಟಿತು! ನನ್ನ ಕೈಗೆ ಚೆಕ್ ಸಿಕ್ಕಿ ಕೇವಲ ಎರಡು ದಿನಗಳ ನಂತರ ನನಗೆ ಪ್ರಿನ್ಸಿಪಾಲರಿಂದ ಕರೆ ಬಂತು. ಅವರು ನನ್ನ ಹತ್ತಿರ ಮಾತು ಪ್ರಾರಂಭಿಸಿದ ರೀತಿಯಲ್ಲೇ ನನಗೆ ಅವರೇನೋ ನನಗಿಷ್ಟವಾಗದ ವಿಷಯ ಹೇಳಲಿದ್ದಾರೆಂದು ಅನುಮಾನ ಬಂದು ಬಿಟ್ಟಿತು. ಅವರ ಪ್ರಕಾರ ನನ್ನ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕಂಡದ್ದಕ್ಕೆ ಮುಖ್ಯ ಕಾರಣ ಮಣಿಪಾಲ್ ಅಕಾಡೆಮಿಯು ನನಗೆ ಮಾಡಿದ ಉಪಕಾರವೇ  ಆಗಿತ್ತು. ಆದ್ದರಿಂದ ನನಗೂ ಕೂಡ ಅಕಾಡೆಮಿಯ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಜವಾಬ್ದಾರಿ ಇತ್ತು! ಅಕಾಡೆಮಿಗೆ ವಿದ್ಯಾರ್ಥಿಯಾದ  ನಾನು ಯಾವ ರೀತಿಯಲ್ಲಿ ಪ್ರತ್ಯುಪಕಾರ ಮಾಡಲು ಸಾಧ್ಯ ಎಂದು ಯೋಚಿಸಿ ನನಗೆ ತುಂಬಾ ವಿಸ್ಮಯವಾಯಿತು. ಆದರೆ ಬೇಗನೆ ಆ ರಹಸ್ಯ ಬಯಲಾಯಿತು. ಪ್ರಿನ್ಸಿಪಾಲರು ನನಗೆ ನಾನು ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ಅಕಾಡೆಮಿಯ ಏಳು ವರ್ಷದ ಬಾಂಡ್ ಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದರು. ಅವರ ಪ್ರಕಾರ ಬ್ಯಾಂಕಿನಿಂದ ನನಗೆ ಸಿಗುತ್ತಿದ್ದ ಬಡ್ಡಿಗಿಂತ ಅಧಿಕ ಬಡ್ಡಿ (ಶೇಕಡಾ ೬. ೫ ) ಅಕಾಡೆಮಿಯವರು ನನಗೆ ಬಾಂಡ್ ಮೂಲಕ ಕೊಡಲು ಸಾಧ್ಯವಿತ್ತು.

ಪ್ರಿನ್ಸಿಪಾಲರ ಸಲಹೆಯನ್ನು ಕೇಳಿ ನನಗಾದ ಆಘಾತ ಅಷ್ಟಿಷ್ಟಲ್ಲ. ನಾನು ಅವರಿಗೆ ಹಣ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾಗುವುದರಿಂದ ಅದನ್ನು ಹೇಗೆ ಏಳು ವರ್ಷದ ಬಾಂಡ್ ಗಳಲ್ಲಿ ಹೂಡಲು ಸಾಧ್ಯವೆಂದು ಮರು ಪ್ರಶ್ನೆ ಮಾಡಿದೆ. ಹಾಗೂ ಅಕಾಡೆಮಿಯು ನನ್ನಂತಹ ವಿದ್ಯಾರ್ಥಿಯೊಬ್ಬನಿಂದ ಯಾವ ರೀತಿಯಲ್ಲಿ ಹಣವನ್ನು ಏಳು ವರ್ಷದ ಬಾಂಡ್ ನಲ್ಲಿ ಹೂಡುವುದನ್ನು ನಿರೀಕ್ಷಿಸುವುದೆಂದೂ ಪ್ರಶ್ನಿಸಿದೆ. ನನ್ನ ಮಾತನ್ನು ಕೇಳಿ ಪ್ರಿನ್ಸಿಪಾಲರ ಕೋಪ ನೆತ್ತಿಗೇರಿತು. ಅವರ ಪ್ರಕಾರ ನಾನು ಅಕಾಡೆಮಿಗೆ ಸ್ವಲ್ಪವೂ ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದೆ! ಅವರು ನನಗೊಂದು ಎಚ್ಚರಿಕೆಯನ್ನೂ ಕೊಟ್ಟು ಬಿಟ್ಟರು. ನಾನು ಬಾಂಡ್ ಗಳಲ್ಲಿ ಹಣ ಹೂಡದೇ ಹೋದರೆ ನನಗೆ ಅಕಾಡೆಮಿಯಿಂದ ಅವರು ನನಗೆ ಕಾಲೇಜ್ ಫೀ ಎಂದು ಕೊಟ್ಟ ಹಣವನ್ನು ವಾಪಾಸ್ ಮಾಡುವಂತೆ ನೋಟೀಸ್ ಕಳಿಸಲಾಗುವುದಂತೆ! ನನಗೆ ನನ್ನ ಕಿವಿಯನ್ನೇ ನಂಬಲಾಗಲಿಲ್ಲ. ಏಕೆಂದರೆ ಇದೇ ಮಹಾನುಭಾವರು ಹಿಂದೆ ನನಗೆ ಪ್ರಾಮಿಸರಿ ನೋಟ್ ಮೇಲೆ ಸಹಿ ಮಾಡುವಾಗ ಅಕಾಡೆಮಿಯು ಎಂದೂ ನನ್ನಿಂದ ಹಣವನ್ನು ವಾಪಾಸ್ ಕೇಳುವ ಪ್ರಶ್ನೆಯೇ ಇಲ್ಲವೆಂದು ಭರವಸೆ ನೀಡಿದ್ದರು! ನನಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು! ನನ್ನ ಬಾಯಿಂದ ಮಾತುಗಳೇ ಹೊರಡಲಿಲ್ಲ.

------- ಮುಂದುವರಿಯುವುದು-----


No comments: