Friday, June 19, 2020

ಬಾಲ್ಯ ಕಾಲದ ನೆನಪುಗಳು – ೯೪

ಜುಲೈ ತಿಂಗಳು ಬರುವ ವೇಳೆಗೆ ನಮ್ಮೂರಿನಲ್ಲಿ ಮಳೆಗಾಲ ಜೋರಾಗಿ ಆರಂಭವಾಗಿತ್ತು. ಪುಟ್ಟಣ್ಣ  ಆಗಲೇ ಬೆಂಗಳೂರಿಗೆ ಹೊರಟುಹೋಗಿದ್ದ. ನಾನು ಅಷ್ಟರಲ್ಲೇ ಒಂದು ತೀರ್ಮಾನ ಮಾಡಿಬಿಟ್ಟಿದ್ದೆ. ಅದೇನೆಂದರೆ ಇನ್ನು ಮುಂದೆ ಪ್ರತಿ ತಿಂಗಳೂ ಹಾಸ್ಟೆಲ್ ಫೀ  ವಸೂಲಿಗೆ ಚಂದ್ರಮೌಳಿರಾಯರ ಮನೆಗೆ ಹೋಗುವುದಿಲ್ಲವೆಂದು. ಆದರೆ ಅದಕ್ಕಾಗಿ ನಾನು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ನಾನು ಈ ಮೊದಲೇ ಬರೆದಂತೆ ಪುಟ್ಟಣ್ಣನ ಸ್ನೇಹಿತ ಜಯಪ್ರಕಾಶನ ತಂದೆ ಹಳೇಮನೆ ಶ್ರೀಕಂಠಯ್ಯನವರು ನಾನು ಅವರ ಮನೆಯಲ್ಲೇ ಇರಬಹುದೆಂದು ಸೂಚಿಸಿದ್ದರು. ಆದರೆ ನಾನು ಅವರ ಸಲಹೆಯನ್ನು ಅಲ್ಲಿಯವರೆಗೆ ತೀವ್ರವಾಗಿ ಪರಿಗಣಿಸಿರಲಿಲ್ಲ.

ನಾನು ಈ ಹಿಂದೆ ಎಷ್ಟೋ ಬಾರಿ ಪುಟ್ಟಣ್ಣನೊಡನೆ ಶ್ರೀಕಂಠಯ್ಯನವರ ಮನೆಗೆ ಹೋಗಿದ್ದೆ. ಜಯಪ್ರಕಾಶನೂ ಒಮ್ಮೆ ಬೇರೆ ಸ್ನೇಹಿತರೊಡನೆ  ನಮ್ಮ ಮನೆಗೆ ಬಂದಿದ್ದ. ಶ್ರೀಕಂಠಯ್ಯನವರ ಕುಟುಂಬದವರೆಲ್ಲಾ ತುಂಬಾ ಆತ್ಮೀಯತೆ ಮತ್ತು ಸೌಜನ್ಯ ತೋರುವ ವ್ಯಕ್ತಿಗಳಾಗಿದ್ದರು. ಓದುವುದರಲ್ಲಿ ತುಂಬಾ ಬುದ್ಧಿವಂತಳಾದ ಅವರ ಹಿರಿಯ ಮಗಳು ವಿಜಯಲಕ್ಷ್ಮಿ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್. ಓದುತ್ತಿದ್ದಳು. ಹಿರಿಯ ಮಗ ಜಯಪ್ರಕಾಶ ಕೂಡ ಪಿ. ಯು ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಗಳಿಸಿದ್ದ. ಶ್ರೀಕಂಠಯ್ಯನವರ ಕುಟುಂಬದ ಔದಾರ್ಯ ಎಷ್ಟಿತ್ತೆಂಬುವುದಕ್ಕೆ ಉದಾಹರಣೆಯಾಗಿ ಅವರ ಹಿರಿಯ ಮಗ ಜಯಪ್ರಕಾಶ ಅವನ ಸ್ನೇಹಿತನಾದ ಪುಟ್ಟಣ್ಣನಿಗೆ ಮಾಡುತ್ತಿದ್ದ ಸಹಾಯವನ್ನು ಇಲ್ಲಿ ಬರೆಯಲೇ ಬೇಕು. ಪುಟ್ಟಣ್ಣನ ಹಣಕಾಸಿನ ಪರಿಸ್ಥಿತಿ ಗೊತ್ತಿದ್ದ ಜಯಪ್ರಕಾಶ ಪ್ರತಿ ತಿಂಗಳೂ ಅವನ ತಂದೆ ಖರ್ಚಿಗಾಗಿ ಕಳಿಸಿದ ಹಣದಲ್ಲಿ ಸ್ವಲ್ಪ ಉಳಿಸಿ ಪುಟ್ಟಣ್ಣನಿಗೆ ಕಳಿಸಿಬಿಡುತ್ತಿದ್ದ. ಆದರೆ  ಅದಕ್ಕಾಗಿ ತನ್ನ ತಂದೆಯವರಿಂದ ಹೆಚ್ಚು ಹಣ ಕೇಳುತ್ತಿರಲಿಲ್ಲ. ಈ ವಿಷಯ ಶ್ರೀಕಂಠಯ್ಯನವರಿಗೂ ಗೊತ್ತಿದ್ದು ಅವರು ತಮ್ಮ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಪುಟ್ಟಣ್ಣನ ಬಿ. ಕಾಂ. ಫೈನಲ್ ಪರೀಕ್ಷೆ ಮುಗಿಯುವವರೆಗೂ ಹಣ ಅವನಿಗೆ ಬರುತ್ತಲೇ ಇತ್ತು.

ಇದನ್ನೆಲ್ಲಾ ಯೋಚಿಸಿದಾಗ ನನಗೆ ಶ್ರೀಕಂಠಯ್ಯನವರು  ಸುಮ್ಮನೆ ಮಾತಿಗಾಗಿ ಅಲ್ಲ ನಿಜವಾಗಿಯೂ ನಾನು ಅವರ ಮನೆಯಲ್ಲೇ ಇರಬಹುದೆಂದು ಹೇಳಿರಬೇಕು ಎಂದು ಅನಿಸಿತು. ಮತ್ತು ನಾನೆಂದೂ ಅವರ ಮನೆಯಲ್ಲಿದ್ದುದಕ್ಕೆ ಪಶ್ಚಾತ್ತಾಪ ಪಡಬೇಕಾಗುವುದಿಲ್ಲ ಎಂದೂ ಅನಿಸಿತು. ಆದ್ದರಿಂದ ಒಂದು ದಿನ ಬೆಳಿಗ್ಗೆ ನಾನು ಸೀದಾ ಹಳೆಮನೆಯೊಳಗೆ ಹೋಗಿ ಶ್ರೀಕಂಠಯ್ಯನವರನ್ನು ಭೇಟಿಯಾದೆ. ತುಂಬಾ ಆದರದಿಂದ ನನ್ನೊಡನೆ ಮಾತನಾಡಿದ ಅವರು ನನ್ನ ವಿದ್ಯಾಭ್ಯಾಸ ಹೇಗೆ ಸಾಗಿದೆಯೆಂದು ಕೇಳಿದರು. ಹಾಗೆಯೇ ತಾವು ಈ ಹಿಂದೆ ಹೇಳಿದಂತೆ ನಾನು ಅವರ ಮನೆಯಲ್ಲೇ ಇದ್ದು ಕಾಲೇಜಿಗೆ ಹೋಗಬಹುದೆಂದು ಪುನಃ ಹೇಳಿಬಿಟ್ಟರು. ಅವರಿಗೆ ನಾನು ಅದೇ ಉದ್ದೇಶದಿಂದ ಅವರನ್ನು ಭೇಟಿ ಮಾಡಿದ್ದೇನೆಂದು ಖಂಡಿತವಾಗಿಯೂ ಅರಿವಿರಲಿಲ್ಲ. ನಾನು  ಅವರೊಡನೆ ನೀವು ಸೀರಿಯಸ್ ಆಗಿ ಹಾಗೆ ಹೇಳುತ್ತಿದ್ದೀರಾ ಏಕೆಂದರೆ ನಾನು ಬಂದಿರುವುದೇ ಅದೇ ಉದ್ದೇಶದಿನ ಎಂದು ಹೇಳಿಬಿಟ್ಟೆ. ಶ್ರೀಕಂಠಯ್ಯನವರು ದ್ವನಿ ಏರಿಸಿ "ಕೃಷ್ಣಮೂರ್ತಿ, ನಾನೇನು ನಿನ್ನೊಡನೆ ತಮಾಷೆ ಮಾಡುತ್ತಿದ್ದೇನೆಂದು ತಿಳಿದೆಯಾ?" ಎಂದು ಹೇಳಿ ಕೂಡಲೇ ತಮ್ಮ ಪತ್ನಿಯನ್ನು ಕರೆದು ನಾನು ಇನ್ನು ಮುಂದೆ ಅವರ ಮನೆಯಲ್ಲೇ ತಂಗುವುದಾಗಿ ಹೇಳಿಬಿಟ್ಟರು! ಹಾಗೆಯೇ ಮಹಡಿಯ ಮೇಲಿನ ಕೊಠಡಿಯನ್ನು ನಾನು ಉಳಿದುಕೊಳ್ಳಲು ಅನುಕೂಲವಾಗುವಂತೆ ಸ್ವಚ್ಛಗೊಳಿಸುವಂತೆ ಹೇಳಿದರು.

ನಾನು ಮನೆಗೆ ಹಿಂದಿರುಗಿ ತಂದೆ ತಾಯಿಯರೊಡನೆ ನಾನು ಇನ್ನು ಮುಂದೆ ಶ್ರೀಕಂಠಯ್ಯನವರ ಮನೆಯಲ್ಲಿ ಇರುವುದಾಗಿ ಹೇಳಿದಾಗ ಅವರಿಗೆ ನಂಬಲೇ ಆಗಲಿಲ್ಲ. ಸಾಮಾನ್ಯವಾಗಿ ಹೀಗೆ ಇನ್ನೊಬ್ಬರ ಮನೆಯಲ್ಲಿ ಇರಬೇಕಾದರೆ ಅವರು ನಮ್ಮ ರಕ್ತ ಸಂಬಂಧಿಯಾಗಿದ್ದರೆ ಮಾತ್ರ ಸಾಧ್ಯವಿತ್ತು. ಅಲ್ಲದೇ ಎಷ್ಟೋ ರಕ್ತ ಸಂಬಂಧಿಗಳೂ ಕೂಡ ಹೀಗೆ ಒಬ್ಬ ಹುಡುಗ ಅಥವಾ ಹುಡುಗಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೆ ಶ್ರೀಕಂಠಯ್ಯನವರು ಅದಕ್ಕೊಂದು ಅಪವಾದವಾಗಿದ್ದರು. ನಾನು ಕೇವಲ ಅವರ ಮಗನ ಸ್ನೇಹಿತನ ತಮ್ಮನಾಗಿದ್ದೆ. ಅವರ ಮನಸ್ಸು ಅಷ್ಟೊಂದು ವಿಶಾಲವಾಗಿತ್ತು. ಆದ್ದರಿಂದ ಒಂದು ದಿನ ಬೆಳಿಗ್ಗೆ ನಾನು ನನ್ನ ವಸ್ತುಗಳೊಡನೆ ಅವರ ಮನೆಯೊಳಗೇ ಕಾಲಿರಿಸಿ ಬಿಟ್ಟೆ!

ಉಪ್ಪರಿಗೆಯ ಮೇಲೆ ನನ್ನ ಆಫೀಸ್!

ಉಪ್ಪರಿಗೆಯ ಮೇಲಿನ ಕೊಠಡಿ ನನ್ನ ವಾಸಕ್ಕೆ ರೆಡಿ ಆಗಿಬಿಟ್ಟಿತ್ತು. ಅಲ್ಲದೇ ಶ್ರೀಕಂಠಯ್ಯನವರ ಚಿಕ್ಕ ಮಕ್ಕಳು ನಾನು ಬರುವುದನ್ನೇ ಕಾಯುತ್ತಿದ್ದರು. ಎಲ್ಲರಿಗಿಂತ ಮುಂದಿದ್ದವನು ಅವರ ಕಿರಿಯ ಮಗ ನಾಲ್ಕು ವರ್ಷ ವಯಸ್ಸಿನ ಜಗ್ಗು (ಜಗದೀಶ)!  ಈ ಮಗು ನನ್ನ ಕೈ ಹಿಡಿದುಕೊಂಡು ಉಪ್ಪರಿಗೆಯ ಮೇಲಿದ್ದ ಕೊಠಡಿಗೆ ನನ್ನನ್ನು ಕರೆದುಕೊಂಡು ಹೋಯಿತು! ಅಲ್ಲಿ ಒಂದು ಕುರ್ಚಿ ಮತ್ತು ಟೇಬಲ್ ನನಗಾಗಿ ಕಾಯುತ್ತಿದ್ದವು. ನಾನು ನನ್ನ ಜೀವಮಾನದಲ್ಲಿ ಮೊಟ್ಟ  ಮೊದಲಿಗೆ ಒಂದು ಕುರ್ಚಿಯ ಮೇಲೆ ಕುಳಿತು ಟೇಬಲ್ ಮೇಲೆ ಪುಸ್ತಕವಿಟ್ಟು ಬರೆದು ಓದುವ ಅವಕಾಶ ಪಡೆದಿದ್ದೆ. ಜಗ್ಗುವಿನ ಪ್ರಕಾರ ಅದು ನನ್ನ ಆಫೀಸ್ ಅಂತೆ! ಆಮೇಲೆ ನಾನು ಎರಡು ವರ್ಷ ಅಲ್ಲಿದ್ದಾಗಲೂ ಜಗ್ಗು ಅದನ್ನು ನನ್ನ ಆಫೀಸ್ ಎಂದೇ ಹೇಳುತ್ತಿದ್ದ. ಅಲ್ಲದೇ ದಿನವೂ ಹೆಚ್ಚು ಕಾಲವನ್ನು ನನ್ನೊಡನೆ ಕಳೆಯುತ್ತಿದ್ದ ಜಗ್ಗು ಬೇಗನೆ ನನ್ನ ಸ್ನೇಹಿತರನ್ನೆಲ್ಲಾ ಪರಿಚಯ ಮಾಡಿಕೊಂಡು ಬಿಟ್ಟ.

ಶ್ರೀಕಂಠಯ್ಯನವರ ಪತ್ನಿ ಶ್ರೀಲಕ್ಷ್ಮಿ

ಶ್ರೀಕಂಠಯ್ಯನವರು ಎಷ್ಟೇ ಉದಾರಿಗಳಾಗಿದ್ದರೂ ನನ್ನಂತಹ ಒಬ್ಬ ಖಾಯಂ ಅತಿಥಿಯನ್ನು ಮನೆಯಲ್ಲಿಟ್ಟುಕೊಳ್ಳುವ ಭಾರ ಕೇವಲ ಅವರ ಪತ್ನಿಯ ಮೇಲೆ ಬೀಳುತ್ತಿತ್ತು. ಆ ವಿಷಯದಲ್ಲಿ ನಾನೆಷ್ಟು ಭಾಗ್ಯಶಾಲಿಯಾಗಿದ್ದೇನೆಂದು ಸ್ವಲ್ಪ ಕಾಲದಲ್ಲೇ ನನಗೆ ಗೊತ್ತಾಗಿ ಹೋಯಿತು. ತಾಳ್ಮೆ ಮತ್ತು ಪ್ರೀತಿಯ ಸಾಕ್ಷಾತ್ಕಾರವೇ ಶ್ರೀಕಂಠಯ್ಯನವರ ಪತ್ನಿ ಶ್ರೀಲಕ್ಷ್ಮಿಯವರೆಂದರೆ ಅದು ಅತಿಶಯೋಕ್ತಿ ಆಗಲಾರದು. ನಾನು ಬಹು ಬೇಗನೆ ನನ್ನ ಮನಸ್ಸಿನಲ್ಲಿ ಅವರಿಗೆ ನನ್ನ ಪ್ರೀತಿಯ ಅಮ್ಮ ಮತ್ತು ಅಕ್ಕಂದಿರಿಬ್ಬರ ನಂತರದ ಸ್ಥಾನವನ್ನು ನೀಡಿಬಿಟ್ಟೆ. 

ನಾನು ಈ ಅಧ್ಯಾಯದ ಮೊದಲಿನಲ್ಲಿ ನನಗೆ ಇನ್ನು ಮುಂದೆ ಪ್ರತಿ ತಿಂಗಳೂ ಹಾಸ್ಟೆಲ್ ಫೀ  ವಸೂಲಿಗೆ ಚಂದ್ರಮೌಳಿರಾಯರ ಮನೆಗೆ ಹೋಗುವುದು ಇಷ್ಟವಿಲ್ಲವೆಂದು ತೀರ್ಮಾನಿಸಿದ ಬಗ್ಗೆ ಬರೆದಿದ್ದೇನೆ. ವಿಚಿತ್ರವೆಂದರೆ ನಾನು ಇನ್ನು ಮುಂದೆ ರಾಯರ ಬದಲಿಗೆ ಅವರ ತಂಗಿಗೆ ಋಣಿಯಾಗಲಿದ್ದೆ. ಏಕೆಂದರೆ ರಾಯರು ಅವರ ತಂದೆಗೆ ಮೊದಲ ಹೆಂಡತಿಯ ಮಗನಾದರೆ ಶ್ರೀಲಕ್ಷ್ಮಿಯವರು ಎರಡನೇ ಹೆಂಡತಿಯ ಮಗಳಾಗಿದ್ದರು. ಹಾಗೂ ಅವರಿಗೆ ಇನ್ನಿಬ್ಬರು ಸಹೋದರರೂ ಇದ್ದರು, ಅವರಿಗೆ ತವರುಮನೆ ಹುಲುಗಾರಿಗೆ ಹೋಗಬೇಕಾದಾಗ ಅಲ್ಲಿಂದ ಕಳಿಸಿದ ಕಾರಿನಲ್ಲೇ ಹೋಗುತ್ತಿದ್ದರು. ಸಾಮಾನ್ಯವಾಗಿ ರಾಯರ ಹಿರಿಯ ಮಗ ಶ್ರೀಕಂಠರಾಯರೇ ಕಾರ್ ತೆಗೆದುಕೊಂಡು ಬಂದು ಅವರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

ಮುನ್ಸೂಚನೆ ಇಲ್ಲದೇ ಊಟಕ್ಕೆ ಬರುವ ಅತಿಥಿಗಳು

ಶ್ರೀಲಕ್ಷ್ಮಿಯವರು ಒಬ್ಬ ತುಂಬಾ ಸರಳ ಮತ್ತು ಆದರ್ಶ ಗೃಹಿಣಿಯಾಗಿದ್ದರು. ಅವರು ತಮ್ಮ  ಗಂಡನಿಗೆ ಆದರ್ಶ ಪತ್ನಿಯಾಗಿದ್ದಂತೆ ಮಕ್ಕಳಿಗೆ ಪ್ರೀತಿಯ ಅಮ್ಮನಾಗಿದ್ದರು. ಶ್ರೀಕಂಠಯ್ಯನವರಿಗೆ ಒಂದು ವಿಚಿತ್ರ ಸ್ವಭಾವವಿತ್ತು. ಅವರು  ಪೇಟೆಯಿಂದ ಮನೆಗೆ ಮದ್ಯಾಹ್ನದ ಊಟಕ್ಕೆ ಬರುವಾಗ ಹಲವು ಬಾರಿ ಹಳ್ಳಿಯಿಂದ ಬಂದ ಸ್ನೇಹಿತರನ್ನೂ ಕೂಡ ಯಾವ ಮುನ್ಸೂಚನೆ ಇಲ್ಲದೇ ತಮ್ಮೊಡನೆ ಕರೆದುಕೊಂಡು ಬಂದು ಬಿಡುತ್ತಿದ್ದರು. ಅವರ ಈ ಸ್ವಭಾವವನ್ನು ಕೆಲವರು ದುರುಪಯೋಗವನ್ನು ಮಾಡಿಕೊಳ್ಳುವುದನ್ನೂ ನಾನು ನೋಡಿದ್ದೆ. ಯಾವುದೇ ಗೃಹಿಣಿಗಾದರೂ ಈ ಬಗೆಯ ಅತಿಥಿಗಳು ಇದ್ದಕ್ಕಿದಂತೇ ಮನೆಗೆ ಊಟಕ್ಕೆ ಬಂದಾಗ ನಿಭಾಯಿಸುವುದು ಕಷ್ಟಕರವೇ ಆಗಿರುತ್ತದೆ. ಆದರೆ ಶ್ರೀಲಕ್ಷ್ಮಿಯವರು ಸ್ವಲ್ಪವೂ ಗೊಣಗದೇ ತುಂಬಾ ತಾಳ್ಮೆಯಿಂದ ಬಂದ ಅತಿಥಿಗಳಿಗೆ ಊಟದ ಏರ್ಪಾಟು ಮಾಡಿ ಬಡಿಸಿ ಬಿಡುತ್ತಿದ್ದರು. ಅವರೆಂದೂ ಅತಿಥಿಗಳು ಹೊರಟು  ಹೋದ ನಂತರವೂ ಆ ವಿಚಾರವಾಗಿ ಗಂಡನಿಗೆ ಪ್ರಶ್ನೆ ಮಾಡುತ್ತಿರಲಿಲ್ಲ. ಆ ಪತಿ ಪತ್ನಿ ಜೋಡಿ ಬೇರೆ ದಂಪತಿಗಳಿಗೆ ಒಂದು ಬಗೆಯಲ್ಲಿ ಮಾದರಿಯಾಗಿಯೇ ಇದ್ದರು. ಪ್ರಾಯಶಃ ಇಂದಿನ ದಿನಗಳಲ್ಲಿ ಇಂತಹಾ ಜೋಡಿ ಎಲ್ಲಿಯೂ ಕಣ್ಣಿಗೆ ಬೀಳಲಿಕ್ಕಿಲ್ಲ!

ಭಾರತೀಯ ಜೀವವಿಮಾ  ನಿಗಮದ ಏಜೆಂಟ್

ಶ್ರೀಕಂಠಯ್ಯನವರೂ ಒಂದು ಕಾಲದಲ್ಲಿ ಹಣಕಾಸಿನ ಸಮಸ್ಯೆ ಎದುರಿಸಿದವರೇ ಆಗಿದ್ದರು. ಅವರಿಗೆ ಪಿತ್ರಾರ್ಜಿತ ಆಸ್ತಿ ಪಾಲಾಗಿ  ಒಂದು ಎಕರೆ ಅಡಿಕೆ ತೋಟ ಬಂದಿತ್ತು. ಪೇಟೆಗೆ ಹತ್ತಿರದಲ್ಲೇ ಇದ್ದ ಆ ತೋಟವನ್ನು ಅವರೇ ಸ್ವಂತವಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಅದರಿಂದ ಬಂದ ಉತ್ಪತ್ತಿ ಅವರ ಸ್ವಲ್ಪ ದೊಡ್ಡದೇ ಆದ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಆಮೇಲೆ ಅವರು ಭಾರತೀಯ ಜೀವವಿಮಾ  ನಿಗಮದ ಏಜೆಂಟ್ ಆದರು. ಅಲ್ಲಿಂದ ಅವರ ಹಣಕಾಸಿನ ಸ್ಥಿತಿ ತುಂಬಾ ಸುಧಾರಿಸಿತು. ಅವರ ನಗೆಮೊಗ, ಸ್ಪಷ್ಟಮಾತುಗಳು ಮತ್ತು ವ್ಯವಹಾರ ಜ್ಞಾನ ಇತ್ಯಾದಿ ಮುಖ್ಯ ಗುಣಗಳು ಅವರನ್ನು ಒಬ್ಬ ಜೀವ ವಿಮ ಏಜೆಂಟ್ ಆಗಿ ಯಶಸ್ವಿಯಾಗಲು ಕಾರಣವಾದವು. ತುಂಬಾ ಆತ್ಮ ಗೌರವ ಹೊಂದಿದ್ದ ಶ್ರೀಕಂಠಯ್ಯನವರು ಯಾರ ಹಂಗಿಗೂ ಬೀಳುವವರಾಗಿರಲಿಲ್ಲ. ಹುಲುಗಾರು ಅವರ ಮಾವನ ಮನೆಯಾಗಿದ್ದರೂ ಅಲ್ಲಿಗೂ ಅವರು ಅಪರೂಪದ ಅತಿಥಿಯಾಗಿದ್ದರು.

ಹಳೇಮನೆ ಕುಟುಂಬ

ಶ್ರೀಕಂಠಯ್ಯನವರು ವಾಸಿಸುತ್ತಿದ್ದ ಮನೆಗೆ ಹಳೇಮನೆ ಎಂದು ಹೆಸರು ಬರಲು ಕಾರಣ ತಿಳಿದಿಲ್ಲ. ಪ್ರಾಯಶಃ ಅದು ಶ್ರೀ ಮಠದ ಎದುರಿನ ಭಾರತಿ ಬೀದಿಯ ಮೊದಲಮನೆಯಾಗಿದ್ದರಿಂದ ಅದಕ್ಕೆ ಆ ಹೆಸರು ಬಂದಿರಬೇಕು.  ಆ ಕಟ್ಟಡದಲ್ಲಿ ಎರಡು ಮನೆಗಳಿದ್ದು ಮೊದಲಿನ ಮನೆಯಲ್ಲಿ ಶ್ರೀಕಂಠಯ್ಯನವರ ಹಿರಿಯ ಅಣ್ಣ ಮಹಾಬಲಯ್ಯನವರು ವಾಸಿಸುತ್ತಿದ್ದರು. ನಾಲ್ಕು ಮಂದಿ ಸಹೋದರರಲ್ಲಿ ಶ್ರೀಕಂಠಯ್ಯನವರು ಕಿರಿಯರಾಗಿದ್ದು ಅವರು ವಾಸಿಸುತ್ತಿದ್ದ ಮನೆ ಅವರ ಅಣ್ಣನಾದ ಶಿವಸ್ವಾಮಿಯವರಿಗೆ ಸೇರಿತ್ತು. ಅವರು ಮಣಿಪಾಲ್  ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಇನ್ನೊಬ್ಬ ಅಣ್ಣನಾದ ಕೃಷ್ಣಸ್ವಾಮಿಯವರು ಪೇಟೆಯ ಹತ್ತಿರದಲ್ಲೇ ಇದ್ದ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅವರ ಮಗಳನ್ನು ಆಗಿನ ಶೃಂಗೇರಿ ಮಠದಲ್ಲಿ ಪೇಷ್ಕಾರ್ ಆಗಿದ್ದವರಿಗೆ ಮದುವೆ ಮಾಡಲಾಗಿದ್ದು ಅವರ ಮನೆ ಹಳೇಮನೆಯ ಎದುರಿಗೇ ಇತ್ತು. ನಾಲ್ಕು ಮಂದಿ ಸಹೋದರರಿಗೆ ಕೇವಲ ಒಬ್ಬಳೇ ಸಹೋದರಿ ಇದ್ದಳು. ವಿಧವೆಯಾಗಿ ಅತ್ತೆಮ್ಮನೆಂದು ಕರೆಯಲ್ಪಡುತ್ತಿದ್ದ ಆ ಸಹೋದರಿ ಶ್ರೀಕಂಠಯ್ಯನವರ ಮನೆಯಲ್ಲೇ ಇರುತ್ತಿದ್ದರು.

ತೆರೆಮರೆಯ ರಾಜಕೀಯ ಚಾಣಕ್ಯ ಶ್ರೀಕಂಠಯ್ಯ

ಶ್ರೀಕಂಠಯ್ಯನವರು ಶೃಂಗೇರಿಯ ಸ್ಥಳೀಯ ರಾಜಕೀಯದಲ್ಲಿ ಚಾಣಕ್ಯನಂತಿದ್ದರು. ಒಮ್ಮೆ ಮುನಿಸಿಪಾಲಿಟಿ ಸದಸ್ಯರೂ ಆಗಿದ್ದ ಶ್ರೀಕಂಠಯ್ಯನವರು ಆಮೇಲೆ ತೆರೆಮರೆಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಿಂಗ್ ಮೇಕರ್ ಆಗಿದ್ದರು. ಮುನಿಸಿಪಾಲಿಟಿ ಚುನಾವಣೆಗೆ ನಿಲ್ಲುವರಿಗೆ ಅವರ ಸಲಹೆಗಳು ತುಂಬಾ ಅಮೂಲ್ಯವಾಗಿದ್ದವು. ಅವರು ಶಾರದಾ ಕೋ-ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿಯೂ ಆಗಿದ್ದರು. ಆಗ ಆ ಸೊಸೈಟಿ ರೇಷನ್ ಸಾಮಾನುಗಳ ವಿತರಣೆಯನ್ನೂ ಮಾಡುತ್ತಿತ್ತು. ಆ ಕಾಲದಲ್ಲಿ ಸಕ್ಕರೆ ತುಂಬಾ ಅಭಾವದ ವಸ್ತುವಾಗಿತ್ತು. ಕಾರ್ಯದರ್ಶಿಯಾದ ಶ್ರೀಕಂಠಯ್ಯನವರಿಗೆ ರೇಷನ್ ಹಂಚಿದ ಮೇಲೆ ಉಳಿದ ಸಕ್ಕರೆಯನ್ನು ಅವರಿಗೆ ಇಷ್ಟವಾದವರಿಗೆ ಹಂಚುವ ಸೌಲಭ್ಯವಿತ್ತು.

ಧ್ಯಾನ ಮಗ್ನ ಚಂದ್ರಮೌಳಿರಾಯರು

ಶ್ರೀಕಂಠಯ್ಯನವರ ಮನೆ ಮಠದ ಎದುರಿಗೆ ಇದ್ದದ್ದು ನನಗೊಂದು ವರವಾಗಿ ಪರಿಣಮಿಸಿತು. ನಾನು ಪ್ರತಿ ದಿನ ಸಂಜೆ ನನ್ನ ಸ್ನೇಹಿತರಾದ ಹೆಬ್ಬಿಗೆ ವಿಶ್ವನಾಥ, ಮಂಜುನಾಥ ಮತ್ತು ಕೊಡಿಗೆತೋಟದ ಪದ್ಮನಾಭನೊಡನೆ ಮಠಕ್ಕೆ ಹೋಗಿ ಶಾರದಾಂಬೆಯ ದರ್ಶನ ಮಾಡುತ್ತಿದ್ದೆ. ನಾವು ಮೊದಲು ತುಂಗಾ ನದಿಗೆ ಹೋಗಿ ಕೈ ಕಾಲು ತೊಳೆದು ಶಾರದಾಂಬೆಯ ದರ್ಶನ ಮಾಡಿ ಸ್ವಲ್ಪ ಕಾಲ ದೇವಸ್ತಾನದಲ್ಲೇ ಕುಳಿತಿರುತ್ತಿದ್ದೆವು. ಆಮೇಲೆ ಪುನಃ ನದಿಯ ದಂಡೆಗೆ ಹೋಗಿ ಅಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮುಂದೆ ಹರಿಯುತ್ತಿದ್ದ ತುಂಗೆಯ ಮತ್ತು ಆಚೆ ದಂಡೆಯಲ್ಲಿ ಕಾಣುತ್ತಿದ್ದ ನರಸಿಂಹವನದ  ಪ್ರಶಾಂತ ಸನ್ನಿವೇಶ ನಮ್ಮನ್ನು ಬೇರಾವುದೋ ಲೋಕಕ್ಕೆ ಒಯ್ಯುತ್ತಿತ್ತು. ಪುನಃ ನಾವು ಮೆಟ್ಟಿಲೇರಿ ವಿದ್ಯಾಶಂಕರ ದೇವಾಲಯದ ಹತ್ತಿರ ಬರುವಾಗ ಅದರ ಒಂದು ಬದಿಯಲ್ಲಿದ್ದ ಹಸಿರು ಹುಲ್ಲಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದ ಚಂದ್ರಮೌಳಿರಾಯರು ನಮ್ಮ ಕಣ್ಣಿಗೆ ಬೀಳುತ್ತಿದ್ದರು.  ಪ್ರತಿ ಸಂಜೆಯೂ ಶಂಕರ ದೇವಾಲಯದ ಮುಂದೆ ಕುಳಿತು ಧ್ಯಾನ ಮಾಡುವುದು ರಾಯರ ದಿನಚರಿಯಲ್ಲೊಂದಾಗಿತ್ತು.

------- ಮುಂದುವರಿಯುವುದು-----


No comments: