Friday, June 12, 2020

ಬಾಲ್ಯ ಕಾಲದ ನೆನಪುಗಳು – ೯೨

ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ.)

೧೯೬೫ನೇ ಇಸವಿಯಲ್ಲಿ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಯುದ್ಧದ ನಂತರ ಕಾಲೇಜು ವಿದ್ಯಾರ್ಥಿಗಳಾದ ನಮಗೆ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್.ಸಿ.ಸಿ.) ಟ್ರೈನಿಂಗ್  ಎರಡು ವರ್ಷ ಕಡ್ಡಾಯ ಮಾಡಲಾಯಿತು. ನಮ್ಮ ಕನ್ನಡ ಉಪನ್ಯಾಸಕರಾದ ಪ್ರಧಾನ್ ಗುರುದತ್ತ ಅವರು ನಮ್ಮ ಕಾಲೇಜಿನಲ್ಲಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಭಾರತೀಯ ಸೇನೆಯ ಕೊಡಗಿನ ಮಾಚಯ್ಯ ಎನ್ನುವರು ನಮಗೆ ತರಬೇತಿ ನೀಡುತ್ತಿದ್ದರು. ಮಾಚಯ್ಯ ತುಂಬಾ ಕಠಿಣ ಶಿಸ್ತಿನ ಮನುಷ್ಯ. ತರಬೇತಿ ನಡೆಯುತ್ತಿದ್ದಾಗ ಆಸಕ್ತಿ ತೋರದೇ ಬೇರೆಲ್ಲೋ ದೃಷ್ಟಿ ಹಾಯಿಸುತ್ತಿದ್ದ ಕೆಡೆಟ್ಗಳಿಗೆ ಮಾಚಯ್ಯ ಕಠಿಣ ಶಿಕ್ಷೆ ನೀಡುತ್ತಿದ್ದ. ಉದಾಹರಣೆಗೆ ನಮ್ಮ ಕಾಲೇಜಿನ ಮೈದಾನದಲ್ಲಿ ತರಬೇತಿ ನಡೆಯುವಾಗ ನಮಗೆ ಕೆಳಗೆ ದೂರದಲ್ಲಿ ತುಂಗಾ ನದಿಯ ಸೇತುವೆ ಕಣ್ಣಿಗೆ ಬೀಳುತ್ತಿತ್ತು. ಮಾಚಯ್ಯನವರು ಆದೇಶ ನೀಡುತ್ತಿರುವಾಗ ಕೆಲವರು ಬೇರೆಲ್ಲೋ ನೋಡುತ್ತಿರುವುದು ಅವರ ಗಮನಕ್ಕೆ ಬಂದಾಗ ಅಂತವರಿಗೆ ಅವರು ಎಲ್ಲಿಯವರೆಗೆ ದೃಷ್ಟಿ ಹಾಯಿಸಿದ್ದರೋ ಅಲ್ಲಿಯವರೆಗೆ ಓಡಬೇಕೆಂದು ಶಿಕ್ಷೆ ನೀಡುತ್ತಿದ್ದರು. ಅಂದರೆ ತುಂಗಾ ನದಿಯ ಸೇತುವೆಯವರೆಗೆ ಓಡಿ ಪುನಃ ಓಡಿಕೊಂಡೇ ಹಿಂದಿರುಗಬೇಕಿತ್ತು! ಆದರೆ ಪ್ರತಿ ದಿನದ ತರಬೇತಿಯ ನಂತರ ನಮಗೆ ಒಳ್ಳೆಯ ಕಾಫಿ ಮತ್ತು ತಿಂಡಿ ನೀಡಲಾಗುತ್ತಿತ್ತು.

ಹಾಸನದಲ್ಲಿ ಎನ್.ಸಿ.ಸಿ. ಕ್ಯಾಂಪ್

ಆ ವರ್ಷ ನಮ್ಮ ಎನ್.ಸಿ.ಸಿ. ಕ್ಯಾಂಪ್ ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಅದು ಹಾಸನಕ್ಕೆ ನನ್ನ ಮೊದಲ ಭೇಟಿಯಾಗಿತ್ತು. ಹತ್ತು ದಿನ ನಡೆದ ಕ್ಯಾಂಪ್ ಜೀವನ ನಮಗೊಂದು ಹೊಸ ಹಾಗೂ ಅಪೂರ್ವ  ಅನುಭವವೇ ಆಗಿತ್ತು. ಕ್ಯಾಂಪ್ ಮುಗಿಯುವುದಕ್ಕೆ ಒಂದು ದಿನ ಮೊದಲು ನಮಗೆಲ್ಲಾ ಒಂದು ದಿನ ಪೂರ್ತಿ ಹಾಸನ ನಗರದಲ್ಲಿ ಸುತ್ತಾಡಿ ಬರಲು ಅನುಮತಿ ನೀಡಲಾಯಿತು. ನಾವು ತುಂಬಾ ಆನಂದದಿಂದ ನಗರವನ್ನೆಲ್ಲ ಸುತ್ತಾಡಿ ಹೋಟೆಲ್ ಊಟ ಮತ್ತು ತಿಂಡಿ ತಿಂದೆವು. ಅಲ್ಲದೇ ಥಿಯೇಟರ್ ಒಂದರಲ್ಲಿ ಪ್ರದರ್ಶಿತವಾಗುತ್ತಿದ್ದ ದೇವ್ ಆನಂದ್ ಮತ್ತು ವಹೀದಾ ರೆಹ್ಮಾನ್ ನಟಿಸಿದ ಮತ್ತು ಆರ್. ಕೆ. ನಾರಾಯಣ್ ಅವರು ಬರೆದ ಗೈಡ್ ಹಿಂದಿ ಚಲನಚಿತ್ರವನ್ನೂ ನೋಡಿದೆವು. ಎಸ್. ಡಿ. ಬರ್ಮನ್ ಅವರ ಸುಮಧುರ ಸಂಗೀತವಿದ್ದ ರೋಮ್ಯಾಂಟಿಕ್ ಸಿನಿಮಾ ಗೈಡ್ ನಮಗೆ ತುಂಬಾ ಇಷ್ಟವಾಯಿತು. ಕ್ಯಾಂಪಿನಿಂದ ಹಿಂದಿರುಗುವಾಗ ನಾವು ಹಳೆಯಬೀಡು ಮತ್ತು ಬೇಲೂರಿನ ದೇವಸ್ಥಾನಗಳನ್ನೂ ನೋಡಿಕೊಂಡು ಶೃಂಗೇರಿಗೆ ವಾಪಾಸ್ ಬಂದೆವು. ಒಟ್ಟಿನಲ್ಲಿ ಆ ಕ್ಯಾಂಪ್ ನಮಗೆ ಎಂದೂ ಮರೆಯಲಾಗದ ಅನುಭವವನ್ನು ನೀಡಿತೆಂದು ಹೇಳಲೇ ಬೇಕು.

ನನಗೆ ಕಾಲೇಜಿನ ಬಡ ವಿದ್ಯಾರ್ಥಿಗಳ ನಿಧಿಯಿಂದ ೨೫ ರೂಪಾಯಿ

ಚಂದ್ರಮೌಳಿರಾಯರು ನನ್ನ ಹಾಸ್ಟೆಲಿನ ಫೀ ಕೊಡಲು ಒಪ್ಪಿಕೊಂಡು ನಾನು ಹಾಸ್ಟೆಲ್ ಸೇರಿದ ಮೇಲೆ ನನ್ನ ಮತ್ತು ಪ್ರಿನ್ಸಿಪಾಲ್ ರಾಮಕೃಷ್ಣರಾಯರ  ಸಂಬಂಧದಲ್ಲಿ ಸುಧಾರಣೆ ಕಂಡು ಬಂತು. ಅವರಿಗೆ ತಾವು ಅಕಾಡೆಮಿಯಿಂದ ನನ್ನ ಊಟ ಮತ್ತು ತಿಂಡಿಯ ಖರ್ಚು ಕೊಡಿಸುವುದಾಗಿ ಕೊಟ್ಟ ಭರವಸೆ ಮುರಿದು ಹೋದದ್ದಕ್ಕೆ ತುಂಬಾ ಗಿಲ್ಟಿ ಫೀಲಿಂಗ್ ಇತ್ತು. ಆದರೆ ಈಗ ಬೇರೆ ವ್ಯವಸ್ಥೆಯಾಗಿದ್ದರಿಂದ ಅವರ ಮನಸ್ಸಿನ ಭಾರ ಇಳಿದಂತೆ ಕಾಣಿಸುತ್ತಿತ್ತು. ಹಾಗಾಗಿ ನನ್ನೊಡನೆ  ತುಂಬಾ ಪ್ರೀತಿಯಿಂದ ನಡೆದುಕೊಳ್ಳತೊಡಗಿದರು.

ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲೆಲ್ಲಾ ನನ್ನ ಹೆಸರು ಹೇಳಿ ನಾನು ಮೊದಲ ವರ್ಷವೇ Rank ಪಡೆದು ಕಾಲೇಜಿಗೆ ಹೆಸರು ತಂದ  ಬಗ್ಗೆ ಮತ್ತು ನನ್ನ ನಿರಹಂಕಾರ ಮನೋಭಾವದ ಬಗ್ಗೆ ಹೊಗಳತೊಡಗಿದರು. ನನಗೆ ಕಾಲೇಜಿನ ಬಡ ವಿದ್ಯಾರ್ಥಿಗಳ ನಿಧಿಯಿಂದ ೨೫ ರೂಪಾಯಿ ಕೂಡ ಮಂಜೂರು ಮಾಡಿಸಿದರು.

ಸಾರ್ವತ್ರಿಕ ಚುನಾವಣೆ ೧೯೬೭

೧೯೬೭ನೇ ಇಸವಿಯ ಫೆಬ್ರವರಿ ತಿಂಗಳಿನಲ್ಲಿ ಲೋಕಸಭೆ ಮತ್ತು ಮೈಸೂರು ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಿತು. ಶೃಂಗೇರಿ ಕ್ಷೇತ್ರದಿಂದ ಹಿಂದೆ ಎಂ ಎಲ್ ಎ ಆಗಿದ್ದ ಕಡಿದಾಳ್ ಮಂಜಪ್ಪನವರು ರಾಜಕೀಯದಿಂದ ನಿವೃತ್ತಿ ಹೊಂದಿದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ತೀವ್ರ ಸ್ಪರ್ಧೆ ಇತ್ತು. ಮುಖ್ಯವಾಗಿ ಸ್ಪರ್ಧೆ ಕೊಪ್ಪ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಹೆಚ್ ಜಿ ಗೋವಿಂದ ಗೌಡ ಮತ್ತು ಶೃಂಗೇರಿ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಕೆ ಎನ್ ವೀರಪ್ಪ ಗೌಡರ ನಡುವೆ ಇತ್ತು. ಒಂದು ದಿನ ಸಂಜೆ ನಮಗೆ ವೀರಪ್ಪ ಗೌಡರು ಗುಡ್ಡದ ಮೇಲಿನ ತಮ್ಮ ಮನೆಯಿಂದ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಮೀಸೆ ತಿರುವುತ್ತಾ ಕೆಳಗಿನ ಪೇಟೆಯಲ್ಲಿದ್ದ ಕಳಸಪ್ಪ ನಾಯಕರ ಅಂಗಡಿಗೆ ಬಂದು ಕುಳಿತರೆಂದು ತಿಳಿಯಿತು! ನಾವೆಣಿಸಿದಂತೆ ಅವರೇ ಶೃಂಗೇರಿ ಕ್ಷೇತ್ರದಿಂದ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನೇಮಕವಾಗಿದ್ದರು. ವೀರಪ್ಪ ಗೌಡರು ನಮ್ಮ ಕ್ಲಾಸ್ ಮೇಟ್ ರವೀಂದ್ರನಾಥ ಟಾಗೋರ್ ತಂದೆ. (ಗೋವಿಂದ ಗೌಡರು ಮುಂದೆ ಎಂ ಎಲ್ ಎ ಆಗಿ ಶಿಕ್ಷಣ ಮಂತ್ರಿಯೂ ಆಗಿದ್ದು ಎಲ್ಲರಿಗೂ ತಿಳಿದ ವಿಷಯ). ವೀರಪ್ಪ ಗೌಡರ ವಿರುದ್ಧ ತರುಣ ವಕೀಲರಾದ ಜನಸಂಘದ ಶ್ರೀಕಂಠ ಭಟ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಯ್ಯ ಎನ್ನುವರು ಸ್ಪರ್ದಿಸಿದ್ದರು. ಶ್ರೀಕಂಠ ಭಟ್ ಅವರು ಮುಂದೆ ನಮ್ಮ ಕಾಲೇಜಿನಲ್ಲಿ ಕಾನೂನು ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾದರು.

ಆ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ಬೆಂಬಲ ಇದ್ದುದರಿಂದ ವೀರಪ್ಪ ಗೌಡರ ಜಯ ನಿಶ್ಚಿತವಾಗಿತ್ತು. ಆದರೆ ಪಕ್ಷೇತರ ಅಭ್ಯರ್ಥಿ ಗೋಪಯ್ಯನವರು ಚುನಾವಣೆಗೆ ಒಂದು ಬಗೆಯ ಕಳೆ ನೀಡಿ ಬಿಟ್ಟರು. ಗೋಪಯ್ಯನವರ ಬಗ್ಗೆ ಶೃಂಗೇರಿಯಲ್ಲಿ ಕೆಲವು ಕಥೆಗಳು ಹರಡಿದ್ದವು. ಅವರ ವಿರುದ್ಧ ಮಾತನಾಡಲು ಯಾರಿಗೂ ಧ್ಯರ್ಯವಿರಲಿಲ್ಲ. ಗೋಪಯ್ಯನವರು ಗಣೇಶ್ ರಾಜ್ ಎಂಬ ತರುಣನನ್ನು ತಮ್ಮ ಚುನಾವಣಾ ವ್ಯವಸ್ಥಾಪಕನಾಗಿ ನೇಮಕ ಮಾಡಿದ್ದರು. ತುಂಬಾ ಒಳ್ಳೆಯ ಮಾತುಗಾರನಾದ  ಗಣೇಶ್ ರಾಜ್ ಮಾಮೂಲಾಗಿ ತುಂಬಾ ಸಪ್ಪೆಯಾಗಿರುತ್ತಿದ್ದ ಚುನಾವಣೆ ಪ್ರಚಾರವನ್ನು  ಒಂದು ದೊಡ್ಡ ಮನೋರಂಜನ ಕಾರ್ಯಕ್ರಮದಂತೆ ನಡೆಸಲಾರಂಭಿಸಿದ. ಪ್ರತಿ ದಿನ ಸಂಜೆ ಶೃಂಗೇರಿಯ ಕಟ್ಟೆಬಾಗಿಲಿನಲ್ಲಿ ನಡೆಯುತ್ತಿದ್ದ ಗಣೇಶ್ ರಾಜನ ಭಾಷಣಗಳು ಎಷ್ಟು ಮನೋರಂಜಕವಾಗಿರುತ್ತಿದ್ದವೆಂದರೆ ನಾವೆಲ್ಲಾ ಅವನ ಮಾತಿಗೆ ಮರುಳಾಗಿ ಚಪ್ಪಾಳೆ ತಟ್ಟುತ್ತಿದ್ದೆವು. ಅವನು ಕಾಂಗ್ರೆಸ್ ಪಕ್ಷವನ್ನು ವಿವಿಧ ಕಥೆಗಳ ಮೂಲಕ ತುಂಬಾ ತಮಾಷೆಯಾಗಿ ತನ್ನ ಟೀಕೆಗಳಿಗೆ ಗುರಿ ಮಾಡುತ್ತಿದ್ದ. ಅವನ ಮಾತುಗಳು ಎಷ್ಟು ಪ್ರಚೋದನೆ ನೀಡುತ್ತಿದ್ದವೆಂದರೆ ನಾವು ಅವನನ್ನು ಶೇಕ್ಸ್ ಪಿಯರ್ ಬರೆದ ಜೂಲಿಯಸ್ ಸೀಸರ್ ನಾಟಕದಲ್ಲಿ ಬರುವ ಆಂಟೋನಿ ಪಾತ್ರಕ್ಕೆ ಹೋಲಿಸುತ್ತಿದ್ದೆವು! ಆದರೆ ಗಣೇಶ್ ರಾಜ್ ಏನೋ ನಮಗೆ ಹೀರೋ ಎಂದು ಕಾಣಿಸಿದರೂ ಗೋಪಯ್ಯನವರು ಚುನಾವಣೆಯಲ್ಲಿ  ಅತಿ ಕಡಿಮೆ ಮತ ಪಡೆದು ಸೋತು ಹೋದರು. ನಾವೆಣಿಸಿದಂತೆ  ಕಾಂಗ್ರೆಸ್ ಪಕ್ಷದ ವೀರಪ್ಪ ಗೌಡರು ಜಯಗಳಿಸಿ  ಮೀಸೆ ತಿರುವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಓಡಾಡತೊಡಗಿದರು!

ಚುನಾವಣಾಧಿಕಾರಿಗಳಾಗಿ ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು  ಮತ್ತು ಕೃಷ್ಣಪ್ಪಯ್ಯನವರು

ಈ ಚುನಾವಣೆ ನಡೆದಾಗ ನನಗೆ ತುಂಬಾ ಸಂತೋಷ ತಂದ ಸನ್ನಿವೇಶವೊಂದು ನಮ್ಮೂರಿಗೆ ಹತ್ತಿರದ ಮತದಾನ ಕೇಂದ್ರವಾದ ಉತ್ತಮೇಶ್ವರದಲ್ಲಿ ಜರುಗಿತು. ಆ ಕೇಂದ್ರಕ್ಕೆ ಚುನಾವಣಾಧಿಕಾರಿಯಾಗಿ ನೇಮಕವಾದವರು ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು  ಮತ್ತು ಅವರ ಕೆಳಗೆ ನಮ್ಮ ಫಿಸಿಕ್ಸ್ ಉಪನ್ಯಾಸಕ ಕೃಷ್ಣಪ್ಪಯ್ಯನವರು. ಚುನಾವಣಾಧಿಕಾರಿಗಳಾಗಿದ್ದರಿಂದ ಅವರಿಬ್ಬರನ್ನೂ ನಮ್ಮ ಮನೆಗೆ ಬರಲು ಅಹ್ವಾನ ನೀಡಲು ಸಾಧ್ಯವಿರಲಿಲ್ಲ. ಆದರೆ ನಮ್ಮ ಅಮ್ಮ ತಯಾರಿಸಿದ ತಿಂಡಿಗಳನ್ನು ನಾನು ಟಿಫಿನ್ ಡಬ್ಬದಲ್ಲಿ ಹಾಕಿಕೊಂಡು ಹೋಗಿ ಅವರಿಗೆ ಕೊಟ್ಟುಬಿಟ್ಟೆ!  ಅವರಿಬ್ಬರೂ ನಮ್ಮಮ್ಮನ ಕೈ ಅಡಿಗೆ ಮತ್ತು ಮಲೆನಾಡಿನ ಸ್ಪೆಷಲ್ ತಿಂಡಿಯನ್ನು ಸವಿದು ತುಂಬಾ ಹೊಗಳಿಕೆ ನೀಡಿದರು. ಆ ಸನ್ನಿವೇಶ ಇಂದೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.

ನನ್ನ ಹಾಸ್ಟೆಲ್ ಫೀ ಸಂದಾಯದಲ್ಲಿ ತೊಡಕು

ಎನ್.ಬಿ.ಎನ್.ಮೂರ್ತಿಯವರು  ನಮ್ಮ ಹಾಸ್ಟೆಲಿನ ವಾರ್ಡನ್ ಆಗಿದ್ದಾಗ ನನ್ನ ಹಾಸ್ಟೆಲ್ ಫೀ ಅವರು ಯಾವುದೋ ರೀತಿಯಲ್ಲಿ ಚಂದ್ರಮೌಳಿರಾಯರಿಂದ ನೇರವಾಗಿ ಪಡೆಯುತ್ತಿದ್ದರು. ಆದ್ದರಿಂದ ನನಗೆ ಅದರ ಚಿಂತೆಯಿರಲಿಲ್ಲ. ಆದರೆ ಗುಂಡಣ್ಣನವರು ವಾರ್ಡನ್ ಆದ ಮೇಲೆ ಪ್ರತಿ ತಿಂಗಳೂ ನಾನೆ ಸ್ವತಃ ಹೋಗಿ  ಚಂದ್ರಮೌಳಿರಾಯರಿಂದ ಫೀ ಕಲೆಕ್ಟ್ ಮಾಡಬೇಕಾಯಿತು. ಅದಕ್ಕಾಗಿ ನಾನು ತಿಂಗಳ ಮೊದಲ ವಾರ ಅವರ ಮನೆಗೆ ಹೋಗುತ್ತಿದ್ದೆ. ಮೊದಮೊದಲು ನಾನು ಅಲ್ಲಿಗೆ ಹೋದಾಗ ರಾಯರ ಹಿರಿಯ ಮಗ ಶ್ರೀಕಂಠರಾಯರು ನನ್ನನ್ನು ಆದರದಿಂದ ಮಾತನಾಡಿಸಿ ನಾನು ಹೇಳಿದ ಮೊತ್ತಕ್ಕೆ ಕೂಡಲೇ ಚೆಕ್ ಬರೆದು ಕೊಟ್ಟುಬಿಡುತ್ತಿದ್ದರು. ಅದು ಪ್ರಾಯಶಃ ಜನವರಿ ಅಥವಾ ಫೆಬ್ರವರಿ ತಿಂಗಳಿರಬೇಕು. ಆ ತಿಂಗಳು ನಾನು ರಾಯರ ಮನೆಗೆ ಹೋದಾಗ ಶ್ರೀಕಂಠರಾಯರು ಇರಲಿಲ್ಲ. ಚಂದ್ರಮೌಳಿರಾಯರು ನನಗೆ ಮಾರನೇ ದಿನ ಬರುವಂತೆ ಹೇಳಿದರು. ಆದರೆ ಆ ದಿನವೂ ಹಣ ಕೊಡದೇ ಇನ್ನೊಮ್ಮೆ ಬರುವಂತೆ ಹೇಳಿದರು. ಅಷ್ಟರಲ್ಲಿ ಫೀ ಪಾವತಿಗೆ ತುಂಬಾ ತಡವಾಗಿಬಿಟ್ಟಿತು. ಆ ದಿನ ನಾನು ಬೆಳಿಗ್ಗೆ ನಾನು ಹಾಸ್ಟೆಲ್ ಮೇಟ್ ಗಳು ಮತ್ತು ಕಾಲೇಜ್ ಉಪನ್ಯಾಸಕರೊಡನೆ ಊಟ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಗುಂಡಣ್ಣನವರು ನನ್ನನ್ನು ಉದ್ದೇಶಿಸಿ ನನ್ನ ಹಾಸ್ಟೆಲ್ ಫೀ ಪಾವತಿ ಇನ್ನೂ ಆಗಿಲ್ಲವೆಂದು ಗಟ್ಟಿ ದ್ವನಿಯಲ್ಲಿ ಪ್ರಕಟ ಮಾಡಿಬಿಟ್ಟರು. ನನಗೆ ಕೆಟ್ಟ ಅವಮಾನ ಆದಂತಾಗಿ ನಾನು ಊಟವನ್ನು ಅಲ್ಲಿಗೇ ನಿಲ್ಲಿಸಿ ಕೈ ತೊಳೆಯಲು ಹೋಗಿಬಿಟ್ಟೆ.

ಗುಂಡಣ್ಣನವರು ಇನ್ನು ಕೆಲವು ಉಪನ್ಯಾಸಕರೊಡನೆ ಮಠದ ಹತ್ತಿರವೇ ಇದ್ದ ಒಂದು ಮನೆಯ ಮೊದಲನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದರು. ನಾನು ಆ ಸಂಜೆ ಅಲ್ಲಿಗೆ ಹೋಗಿ ಉಳಿದ ಉಪನ್ಯಾಸಕರ ನಡುವೆ ಇದ್ದ ಗುಂಡಣ್ಣನವರ ಮುಂದೆ ನನಗೆ ಊಟದ ಮಧ್ಯೆ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ಮಾಡಿದೆ. ಆ ಸಮಯದಲ್ಲಿ ನನ್ನ ಕಣ್ಣಿನಲ್ಲಿ ಬಂದ ನೀರು ಕೂಡ ಅವರಿಗೆ ಕಾಣಿಸಿತು. ಎಲ್ಲರೂ ತುಂಬಾ ಗಾಭರಿಗೊಂಡು ನನ್ನಿಂದ ಫೀ ಪಾವತಿ ತಡವಾಗಲು ಕಾರಣ ತಿಳಿದುಕೊಂಡು ನನ್ನನ್ನು ಸಮಾಧಾನ ಮಾಡಿದರು. ಗುಂಡಣ್ಣನವರು ತುಂಬಾ ಪಶ್ಚಾತ್ತಾಪ ತೋರಿಸಿ ಇನ್ನು ಮುಂದೆ ನನ್ನ ಕೈಯಲ್ಲಿ ಹಣ ಬಂದ  ನಂತರವೇ  ಫೀ ಪಾವತಿ ಮಾಡಬಹುದೆಂದೂ ಮತ್ತು ತಾವೆಂದೂ ಆ ಬಗ್ಗೆ ನನ್ನನ್ನು ಪ್ರಶ್ನಿಸುವುದಿಲ್ಲವೆಂದೂ ಹೇಳಿಬಿಟ್ಟರು. ನನಗೆ ಆಮೇಲಿನ ಎರಡು ತಿಂಗಳೂ ಕೂಡ ಚಂದ್ರಮೌಳಿರಾಯರಿಂದ ಫೀ ಕಲೆಕ್ಟ್ ಮಾಡುವುದು ಸ್ವಲ್ಪ ತಡವೇ  ಆಯಿತು. ಆದ್ದರಿಂದ ನಾನು ಮುಂದಿನ ವರ್ಷದಿಂದ  ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿಬಿಟ್ಟೆ.

ನಮ್ಮ ಕಾಲೇಜಿನ ವಾರ್ಷಿಕೋತ್ಸವ

ನನಗೆ ಆ ವರ್ಷದ ನಮ್ಮ ಕಾಲೇಜಿನ ವಾರ್ಷಿಕೋತ್ಸವ ತುಂಬಾ ಸಂತೋಷ ತಂದಿತು. ಮುಕ್ತಾಯ ಸಮಾರಂಭದ ದಿನ ಪ್ರಿನ್ಸಿಪಾಲರು ತಮ್ಮ ಭಾಷಣದಲ್ಲಿ ನಾನು ಮೊದಲ ವರ್ಷವೇ ನಾಲ್ಕನೇ Rank ಪಡೆದು ಕಾಲೇಜಿಗೆ ಕೀರ್ತಿ ತಂದ  ಬಗ್ಗೆ ಹಾಗೂ ನನ್ನ ನಿಗರ್ವಿತನದ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಉಳಿದ ನನ್ನ ಉಪನ್ಯಾಸಕರೂ ಕೂಡ ನನ್ನ ಸಾಧನೆಯ ಬಗ್ಗೆ ಹೊಗಳುತ್ತಾ ತಮ್ಮ ಸಬ್ಜೆಕ್ಟಿನಲ್ಲಿ ನಾನು ಗಳಿಸಿದ ಅಧಿಕ ಅಂಕಗಳಿಗಾಗಿ ವೈಯುಕ್ತಿಕ ಬಹುಮಾನಗಳನ್ನು ಕೊಟ್ಟರು. ನನ್ನ ಸಂಸ್ಕೃತ ಉಪನ್ಯಾಸಕರಾದ ವೆಂಕಣ್ಣಯ್ಯನವರು ನನಗೆ ಬಹುಮಾನವಾಗಿ ವಿಲಿಯಂ ಶೇಕ್ಸ್ ಪಿಯರ್ ಅವರ ಸಂಪೂರ್ಣ ಕೃತಿಗಳ ಒಂದು ಪುಸ್ತಕವನ್ನು ನೀಡಿದರು. ಎಷ್ಟೋ ವರ್ಷಗಳವರೆಗೆ ನನ್ನ ಹತ್ತಿರವಿದ್ದ ಆ ಪುಸ್ತಕದ ಸಂಪೂರ್ಣ ಉಪಯೋಗವನ್ನು ನಾನು ಪಡೆದೆ. ನನಗೆ ಅವನು ಬರೆದ ಸಾನೆಟ್ಟುಗಳು ತುಂಬಾ ಇಷ್ಟವಾಗಿದ್ದವು. ಹೀಗೆ ನಮ್ಮ ಕಾಲೇಜಿನಲ್ಲಿ ನನ್ನ ಇನ್ನೊಂದು ವರ್ಷದ ಅಭ್ಯಾಸ ಕೊನೆಗೊಂಡಿತು.

------- ಮುಂದುವರಿಯುವುದು-----


No comments: