ನಮ್ಮ ಎರಡನೇ
ತರಗತಿಯ ಪಠ್ಯಪುಸ್ತಕದಲ್ಲಿ ರಾಮಾಯಣದ ಕಥೆಯನ್ನು ಬೇರೆ
ಬೇರೆ ಪಾಠಗಳ ಮೂಲಕ ತಿಳಿಸಿದ್ದರೆ, ಮೂರನೇ ತರಗತಿಯ
ಪುಸ್ತಕದಲ್ಲಿ ಅದೇ ರೀತಿ ಮಹಾಭಾರತದ ಕಥೆಯನ್ನು ತಿಳಿಸಲಾಗಿತ್ತು. ನಮಗೆ ತುಂಬಾ ಆಸಕ್ತಿದಾಯಕವಾದ ಪಾಠವೆಂದರೆ
ಪಾಂಡವರು ಅರಗಿನಮನೆಯಿಂದ ತಪ್ಪಿಸಿಕೊಂಡು ಹೋದುದು. ಅತ್ಯಂತ ಬಲಾಢ್ಯ ಭೀಮಸೇನನು ತನ್ನ ತಾಯಿ ಕುಂತಿ ಮತ್ತು ಉಳಿದ ಪಾಂಡವರನ್ನು ಹೆಗಲಮೇಲೆ
ಕೂರಿಸಿಕೊಂಡು ಹೋಗುತ್ತಿರುವ ಚಿತ್ರ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತಿದೆ. ಅದೇ ರೀತಿ ಭೀಮಸೇನನು ಕೀಚಕ ಮತ್ತು ಬಕಾಸುರನನ್ನು ಕೊಂದ ಪಾಠಗಳೂ ನಮಗೆ ಅತ್ಯಾಕರ್ಷಕವಾಗಿದ್ದವು.
ಜಂಬದ ಕೋಳಿ
ಈ ಪಠ್ಯಪುಸ್ತಕದಲ್ಲಿ
ಇದ್ದ ಕಥೆಗಳಲ್ಲಿ ನಮಗೆ ತುಂಬಾ ಇಷ್ಟವಾದ ತಮಾಷೆಯ ಕಥೆಯೊಂದಿತ್ತು. ಅದರ ಹೆಸರು ಜಂಬದ ಕೋಳಿ.
ಅದೊಂದು
ಚಿಕ್ಕ ಹಳ್ಳಿ. ಅಲ್ಲಿ ಹಿರಿಯ ವಯಸ್ಸಿನ ಹೆಂಗಸೊಬ್ಬಳು ಒಂಟಿಯಾಗಿ ಒಂದು ಚಿಕ್ಕ ಮನೆಯಲ್ಲಿ ಕೋಳಿಯೊಂದನ್ನು
ಸಾಕಿಕೊಂಡು ವಾಸಿಸುತ್ತಿರುತ್ತಾಳೆ. ಅವಳ ಮುಖ್ಯ ಆಸ್ತಿ
ಎಂದರೆ ಒಂದು ಅಗ್ಗಿಷ್ಟಿಕೆ. ಇದ್ದಿಲಿನ ಬೆಂಕಿ ಇರುವ ಆ ಅಗ್ಗಿಷ್ಟಿಕೆ ದಿನದ ೨೪ ಗಂಟೆಯೂ ಉರಿಯನ್ನು
ಹೊಂದಿರುತ್ತದೆ. ಬೆಂಕಿಪೊಟ್ಟಣವನ್ನು ಕಾಣದ ಆ ಕಾಲದಲ್ಲಿ, ಊರಿನವರೆಲ್ಲಾ ಬೆಳಿಗ್ಗೆ ಅಜ್ಜಿಯ ಕೋಳಿ ಕೂಗಿದೊಡನೇ ಮೇಲೆದ್ದು ಅವಳ ಮನೆಗೆ
ಬಂದು ಅಗ್ಗಿಷ್ಟಿಕೆಯಿಂದ ಬೆಂಕಿಯನ್ನೊಯ್ಯುವುದು ಮಾಮೂಲಾಗಿಬಿಟ್ಟಿರುತ್ತದೆ. ಸ್ವಲ್ಪ
ಸಮಯದ ನಂತರ ಅಜ್ಜಿಗೊಂದು ಯೋಚನೆ ಬರುತ್ತದೆ. ತನ್ನ ಕೋಳಿ ಪ್ರತಿ ದಿನ ಬೆಳಿಗ್ಗೆ ಕೋ! ಕೋ!ಎಂದು ಕೂಗದಿದ್ದರೆ
ಊರಿನಲ್ಲಿ ಬೆಳಗಾಗುವುದೇ ಇಲ್ಲ! ಮಾತ್ರವಲ್ಲ. ತನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ದೊರೆಯದಿದ್ದರೆ ಊರಿನಲ್ಲಿ
ಯಾರೂ ಅಡಿಗೆ ಮಾಡುವಂತೆಯೇ ಇಲ್ಲ! ಹಾಗೆ
ಯೋಚಿಸಿದಂತೇ ಅಜ್ಜಿಯ ತಲೆಗೆ ಜಂಬವೇರಿಹೋಗುತ್ತದೆ. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವಂತಾಗುತ್ತದೆ.
ಹಾಗೆಯೇ ಒಂದು ಕುಹಕ ಬುದ್ಧಿಯೂ ಹೊಳೆಯುತ್ತದೆ. ತಾನೊಂದು ದಿನ ಊರಿನಲ್ಲಿರದಿದ್ದರೆ, ಊರಿನ
ಚಟುವಟಿಕೆ ಸಂಪೂರ್ಣ ನಿಲುಗಡೆಯಾಗಿಬಿಡುವುದೆಂದು ಅವಳಿಗನಿಸುತ್ತದೆ.
ಆ ದಿನ ಸಂಜೆ
ಅಜ್ಜಿ ತನ್ನ ಕೋಳಿ ಮತ್ತು ಅಗ್ಗಿಷ್ಟಿಕೆಯೊಡನೆ ಹತ್ತಿರದ ಕಾಡೊಂದಕ್ಕೆ ಹೋಗಿ ಇಡೀ ರಾತ್ರಿ ಮತ್ತೊಂದು
ದಿನ ಅಲ್ಲಿಯೇ ಕಳೆಯುತ್ತಾಳೆ . ಮಾರನೇ ದಿನ ಸಂಜೆಯ ವೇಳೆಗೆ ಊರಿಗೆ ಹಿಂದಿರುಗುತ್ತಾಳೆ. ದಾರಿಯಲ್ಲಿ
ಅವಳಿಗೆ ತನ್ನ ಊರಿನವನೇ ಆದ ರಂಗಣ್ಣ ಎನ್ನುವವನು ಕಣ್ಣಿಗೆ ಬೀಳುತ್ತಾನೆ. ಅವರ ನಡುವೆ ಕೆಳಗಿನ ಸಂಭಾಷಣೆ
ನಡೆಯುತ್ತದೆ:
ರಂಗಣ್ಣ:
ನಿನ್ನ ಕೋಳಿ ಮತ್ತು ಅಗ್ಗಿಷ್ಟಿಕೆಯೊಡನೆ ಎಲ್ಲಿಗೆ ಹೋಗಿದ್ದೆ, ಅಜ್ಜಿ?
ಅಜ್ಜಿ:
ಅದಿರಲಿ. ರಂಗಣ್ಣ, ನೆನ್ನೆ ಮತ್ತು ಈ ದಿನ ಬೆಳಿಗ್ಗೆ ಊರಿನಲ್ಲಿ ಏನು ನಡೆಯಿತು ಹೇಳು.
ರಂಗಣ್ಣ: ಎಲ್ಲಾ ಮಾಮೂಲಾಗಿಯೇ ಇತ್ತಲ್ಲ. ನೀನೇಕೆ ಹಾಗೆ ಕೇಳುತ್ತಿರುವೆ?
ಅಜ್ಜಿ:
ನಿಜವೇ ರಂಗಣ್ಣ? ಊರಿನಲ್ಲಿ ಎಂದಿನಂತೆ ಬೆಳಗಾಗಿ ಮಾಮೂಲಿನಂತೆ ಅಡಿಗೆ ಮಾಡಲು ಸಾಧ್ಯವಾಯಿತೇ?
ರಂಗಣ್ಣ: ಹೌದು. ನಿನಗೇಕೆ ಅನುಮಾನ, ಅಜ್ಜಿ?
ಅಜ್ಜಿ:
ಇಲ್ಲ. ನನ್ನ ಕೋಳಿ ಕೂಗದೇ ಊರಿನಲ್ಲಿ ಬೆಳಗಾಗಿ, ಮತ್ತು ನನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ತೆಗೆದುಕೊಳ್ಳದೇ
ಊರಿನಲ್ಲಿನ ಜನರು ಅಡಿಗೆ ಮಾಡಲು ಸಾಧ್ಯವಾಯಿತೆಂದು ನಾನು ಖಂಡಿತವಾಗಿ ನಂಬಲಾರೆ.
ರಂಗಣ್ಣ:
ಒಹೋ! ನನಗೀಗ ಗೊತ್ತಾಯಿತು. ನೀನೊಬ್ಬ ಜಂಬದ ಕೋಳಿ ಎಂದು! ನಿನ್ನ ಪ್ರಕಾರ ನಿನ್ನ ಕೋಳಿ ಕೂಗದೇ ಊರಿನಲ್ಲಿ
ಸೂರ್ಯ ಉದಯಿಸಲಾರ ಮತ್ತು ನಿನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ದೊರೆಯದಿದ್ದರೆ, ಊರಿನ ಅಡಿಗೆಮನೆಗಳಲ್ಲಿ
ಬೆಂಕಿ ಉರಿಯಲಾರದು, ಅಲ್ಲವೇ? ಇಲ್ಲಿ ಕೇಳು. ನಿನ್ನ ಕೋಳಿಯ ಕೂಗಿಗೆ ಕಾಯದೇ ಸೂರ್ಯ
ಮಾಮೂಲಿನಂತೆ ಉದಯಿಸಿದ ಮತ್ತು ಕೆಲವರು ಮಾತ್ರ ಏಳುವುದು ಸ್ವಲ್ಪ ತಡವಾಗಿರಬಹುದು ಅಷ್ಟೇ.
ಅಜ್ಜಿ: ಆದರೆ ಅವರಿಗೆ ಬೆಂಕಿಯಂತೂ ದೊರೆತಿರಲಿಕ್ಕಿಲ್ಲ, ಅಲ್ಲವೇ?
ರಂಗಣ್ಣ:
ಒಹೋ! ನೀನು ಪುನಃ ತಪ್ಪು ತಿಳಿದಿರುವೆ. ಊರಿನವರೆಲ್ಲಾ ಕಮ್ಮಾರನ ಬಳಿ ಹೋಗಿ ಅವನ ಅಗ್ಗಿಷ್ಟಿಕೆಯಿಂದ
ಬೆಂಕಿ ತೆಗೆದುಕೊಂಡರು, ಅಷ್ಟೇ.
ಅಜ್ಜಿ:
ನೀನು ಹೇಳುವುದು ನಿಜವೇ? ನನಗೆ ನಂಬಲಾಗುತ್ತಿಲ್ಲ.
ರಂಗಣ್ಣ:
ನಿನ್ನ ಜಂಬಕ್ಕೆ ಮಿತಿಯಿಲ್ಲ. ನೀನಿಲ್ಲದಿದ್ದರೆ ಇಡೀ ಊರಿನ ಚಟುವಟಿಕೆಗಳು ನಿಂತು ಹೋಗುವವು ಎಂಬುದು
ಕೇವಲ ನಿನ್ನ ಭ್ರಮೆ ಅಷ್ಟೇ.
ಕಥೆ ಇಲ್ಲಿಗೆ
ಮುಕ್ತಾಯವಾಗುತ್ತದೆ. ಆದರೆ ನಮಗೆ ಇಂದಿಗೂ ಅಜ್ಜಿ (ಜಂಬದ ಕೋಳಿ) ತನ್ನ ಕೋಳಿ ಮತ್ತು ಅಗ್ಗಿಷ್ಟಿಕೆ
ಕೈಯಲ್ಲಿ ಹಿಡಿದು ರಂಗಣ್ಣನೊಡನೆ ಮಾತನಾಡುತ್ತಿರುವ ದೃಶ್ಯ ಕಣ್ಣ ಮುಂದೆ ಕಟ್ಟಿದಂತಿದೆ.
ಪಂಚತಂತ್ರ ಕಥೆಗಳು
ಇನ್ನುಳಿದ
ಪಾಠಗಳಲ್ಲಿ ಅತ್ಯಂತ ಆಕರ್ಷಕವಾಗಿದ್ದುದು ಪಂಚತಂತ್ರ ಕಥೆಗಳ ಮೂಲ ಕಥೆ. ಪ್ರಾಯಶಃ ನಮ್ಮ ದೇಶದ ಬೇರಾವ
ಪ್ರಾಣಿಕಥೆಗಳೂ ಪಂಚತಂತ್ರದ ನೀತಿ ಕಥೆಗಳಷ್ಟು ಪ್ರಸಿದ್ಧಿ ಪಡೆದಿಲ್ಲ. ಈ ಕಥೆಯಲ್ಲಿ
ಚಕ್ರವರ್ತಿಯೊಬ್ಬನಿಗೆ ತನ್ನ ಗಂಡುಮಕ್ಕಳು ವಿದ್ಯಾಭ್ಯಾಸ ಮಾಡದೇ ಪೋಲಿಗಳಾಗುತ್ತಿರುವುದು ತುಂಬಾ ಚಿಂತೆ ಉಂಟುಮಾಡುತ್ತದೆ. ಅವರನ್ನು
ದಾರಿಗೆ ತರುವ ಸಕಲ ಪ್ರಯತ್ನಗಳೂ ವ್ಯರ್ಥವಾದಾಗ ರಾಜನು ಅವರನ್ನು ಆಸ್ಥಾನ ವಿದ್ವಾಂಸನಾದ ವಿಷ್ಣುಶರ್ಮನ
ವಶಕ್ಕೆ ಕೊಡುತ್ತಾನೆ.
ಶರ್ಮನು
ಅವರನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಅವರಿಗೆ ತನ್ನದೇ ಆದ ಹೊಸ ಮಾರ್ಗದಲ್ಲಿ ಪ್ರಾಣಿಕಥೆಗಳನ್ನು
ಹೇಳುವುದರ ಮೂಲಕ ವಿದ್ಯೆ ಕಲಿಸತೊಡಗುತ್ತಾನೆ. ಆ ಕಥೆಗಳು
ರಾಜಕುಮಾರರಿಗೆ ಎಷ್ಟೊಂದು ಆಸಕ್ತಿದಾಯಕವಾದುವೆಂದರೆ ಅವರು ಅವುಗಳನ್ನು ಗಮನವಿಟ್ಟು ಕೇಳಿ ಬೇಗನೆ ಬುದ್ಧಿವಂತರಾಗಿ
ಹೊರಹೊಮ್ಮುತ್ತಾರೆ. ಪ್ರಾಣಿಗಳ ಕಥೆಗಳಾದರೂ ಕೂಡ ಪಂಚತಂತ್ರ ಕಥೆಗಳು ರಾಜಕೀಯ ಜಾಣ್ಮೆ ಮತ್ತು ಸಾಮಾಜಿಕ
ಚಟುವಟಿಕೆಗಳ ಬಗೆಗಿನ ಅತ್ಯಮೂಲ್ಯ ನೀತಿಕಥೆಗಳಾಗಿರುತ್ತವೆ.
ಪಂಚತಂತ್ರದಲ್ಲಿ
ಐದು ಮುಖ್ಯಕಥೆಗಳಿರುತ್ತವೆ. ೧. ಮಿತ್ರಭೇಧ . ೨. ಮಿತ್ರಲಾಭ ೩. ಕಾಕೋಲೂಕೀಯ. ೪. ಲಬ್ಧಪ್ರಣಾಶ ಮತ್ತು ೫. ಅಪರೀಕ್ಷಿತಕಾರಕ.
ಈ ಐದು ಮುಖ್ಯಕಥೆಗಳಲ್ಲೂ ತುಂಬಾ ನೀತಿಯುತವಾದ ಅನೇಕ ಉಪಕಥೆಗಳೂ ಸೇರಿರುತ್ತವೆ. ನಮ್ಮ ಪಾಠದಲ್ಲಿ
ಪಂಚತಂತ್ರದ ಮೂಲಕಥೆ ಇದ್ದುದೇನೋ ನಿಜ. ಆದರೆ ನಾವು ಅದರ ಎಲ್ಲಾ ಕಥೆಗಳನ್ನು ಓದಲು ಹಲವು ವರ್ಷ ಕಾಯಬೇಕಾಯಿತು. ಮುಂದೆ ನಾವು
ಚಂದಮಾಮದಲ್ಲಿ ನವಗಿರಿನಂದ ಅವರು ಪದ್ಯರೂಪದಲ್ಲಿ ಬಲು ಸುಂದರವಾಗಿ ಬರೆದ ಎಲ್ಲಾ ಕಥೆಗಳನ್ನು ಓದಿ ಆನಂದಿಸಿದೆವು.
ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ
ನಮಗಿದ್ದ
ಪದ್ಯಗಳಲ್ಲಿ ನಮಗೆ ಅತ್ಯಂತ ಇಷ್ಟವಾದದ್ದೆಂದರೆ ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ. ಈ ಪದ್ಯವನ್ನು
ಬೇರೆ ಬೇರೆ ಪಾಠಗಳಲ್ಲಿ ಕೊಡಲಾಗಿತ್ತು ಮತ್ತು ಕಟ್ಟಕಡೆಗೆ ಅರ್ಬುಧಾ ಎಂಬ ಹುಲಿಯು ಪಶ್ಚತ್ತಾಪಪಟ್ಟು
ಪುಣ್ಯಕೋಟಿಯ ಎದುರಿಗೇ ಬೆಟ್ಟದಿಂದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದರೊಡನೆ ಕಥೆ
ಮುಕ್ತಾಯಗೊಳ್ಳುತ್ತದೆ. ಈ ಕಥೆಯು ಎಲ್ಲಾ ಕನ್ನಡಿಗರಿಗೂ
ತಿಳಿದಿರುವ ಅತಿ ಮೆಚ್ಚಿನ ಕಥೆ. ನಮ್ಮ ಪುಸ್ತಕದಲ್ಲಿ ಅದನ್ನು ಸಂಕ್ಷಿಪ್ತಗೊಳಿಸಲಾಗಿತ್ತು. ಆದರೆ
ನಾವು ನಮ್ಮ ಅಣ್ಣ ತಂದ ಒಂದು ಅಪರೂಪದ ಪುಸ್ತಕದಲ್ಲಿ ಸಂಪೂರ್ಣ ಕೃತಿಯನ್ನು ಓದಿದುದು ನೆನಪಿದೆ. ಅಲ್ಲದೇ ಆ ಕಾಲದಲ್ಲಿ ನಮ್ಮೂರಿನಲ್ಲಿ ಹುಲಿಗಳ ಕಾಟ ಅತಿಯಾಗಿದ್ದು, ಎಷ್ಟೋ ನಮ್ಮ ಪ್ರೀತಿಯ ಹಸುಗಳು ಅವುಗಳಿಗೆ
ಬಲಿಯಾದದ್ದು ನಮಗೆ ತಿಳಿದಿತ್ತು.
------------------ಮುಂದುವರಿಯುವುದು----------------------------
No comments:
Post a Comment