Thursday, February 15, 2024

ನಮ್ಮ ಕಾಲದ ಪಠ್ಯಪುಸ್ತಕಗಳು ಅಧ್ಯಾಯ ೪




ನಮ್ಮ ಮೂರನೇ ತರಗತಿಯ ಪುಸ್ತಕದಲ್ಲಿದ್ದ ಒಂದು ಪದ್ಯ ನಮಗೆ ತುಂಬಾ ಆಸಕ್ತಿದಾಯಕವಾಗಿತ್ತು. ನಮ್ಮ ಮೇಲೆ ಅದೆಷ್ಟು ಪರಿಣಾಮ ಬೀರಿತ್ತೆಂದರೆ, ಈಗಲೂ ಕೂಡ ಅದರ ಪ್ರತಿಯೊಂದು ಸಾಲುಗಳು ನೆನಪಿಗೆ ಬರುತ್ತಿವೆ. ಮಾರ್ನವಮಿಯ ಪದಗಳು ಎಂಬ ಈ ಪದ್ಯವನ್ನು ಅಶ್ವಯುಜ ಮಾಸದಲ್ಲಿ ಬರುವ ನವರಾತ್ರಿಯ ಮಹಾನವಮಿಯಂದು ಒಂದು ಹುಡುಗರ ತಂಡ ಮನೆಮನೆಗೂ ಹೋಗಿ ಹಾಡುತ್ತದೆ. ಮನೆಯ ಯಜಮಾನನನ್ನು ತುಂಬಾ ಪ್ರೀತಿಯಿಂದ ವಿವಿಧ ರೀತಿಯಲ್ಲಿ ಹರಸುತ್ತಾ ಈ ತಂಡವು ಅವನಿಂದ ತಿಂಡಿ ಮತ್ತು ಬಟ್ಟೆ, ಇತ್ಯಾದಿಗಳನ್ನು ಬೇಡುತ್ತದೆ. ವಿಶೇಷವೆಂದರೆ, ಈ ಪದ್ಯ ತುಂಬಾ ಕುತೂಹಲಕಾರಿಯಾಗಿ ಮುಕ್ತಾಯಗೊಳ್ಳುತ್ತದೆ. ಕೊನೆಯ ಸಾಲುಗಳು, ಎಷ್ಟೊಂದು ಕೇಳಿಕೊಂಡರೂ ಉಡುಗೊರೆ ಕೊಡಲಿಚ್ಛಿಸದ ಲೋಭಿಗೆ ಅನ್ವಯವಾಗಿ ನಮಗೆ ನಗೆ ತರಿಸುತ್ತವೆ.

ಮಾರ್ನವಮಿಯ ಪದಗಳು

ಆಶ್ವಯುಜ ಶುದ್ಧ ಮಾರ್ನವಮಿ ಬರಲೆಂದು

ಶಾಶ್ವತದಿ ಹರಸಿದೆವು ಬಾಲಕರು ಬಂದು

ಈಶ ನಿಮಗತ್ಯದಿಕ ಸುಖವ ಕೊಡಲೆಂದು

ಲೇಸಾಗಿ ಹರಸಿದೆವು ಬಾಲಕರು ಬಂದು 


ಆಯುರಾರೋಗ್ಯಗಳು ನಿಮಗಾಗಲೆಂದು

ಶ್ರೇಯಸ್ಸು ಸಂಪತ್ತು ಹೆಚ್ಚುತಿರಲೆಂದು

ಆಯತದಿ ಜಗದೊಡೆಯನೊಲವಾಗಲೆಂದು

ಪ್ರೀಯದಿಂ ಹರಸಿದೆವು ಬಾಲಕರು ಬಂದು


ಧನ ಕನಕ ವಸ್ತು ವಾಹನವಾಗಲೆಂದು

ಕನಕ ದಂಡಿಗೆ ಚೌರಿ ನಿಮಗಾಗಲೆಂದು

ದಿನ ದಿನಕೆ ರಾಜ ಮನ್ನಣೆ ಹೆಚ್ಚಲೆಂದು

ಅನುದಿನವು ಹರಸಿದೆವು ಬಾಲಕರು ಬಂದು


ಛತ್ರಿ ಚಾಮರ ತೇಜಿ ನಿಮಗಾಗಲೆಂದು

ಅರ್ತಿಯಿಂ ಮಾಲಕುಮಿ ನಿಮಗೊಲಿಯಲೆಂದು

ಪುತ್ರಪೌತ್ರರು ನಿಮಗೆ ಹೆಚ್ಚುತಿರಲೆಂದು

ಅರ್ಥಿಯಿಂ ಹರಸಿದೆವು ಬಾಲಕರು ಬಂದು


ಹರಕೆಯನ್ನು ಕೇಳಿ ಹರುಷವ ಮಾಡಿ ನಮಗೆ

ತರಿಸಿಕೊಡಿ ಹಚ್ಚಡವ ನಮ್ಮಯ್ಯಗಳಿಗೆ

ಬೆರೆಸಿಕೊಡಿ ಕಡಲೆಯನು ಬೆಲ್ಲವನು ನಮಗೆ

ಸರಸತಿಯ ಕರುಣವುಂಟಾಗಿರಲಿ ನಿಮಗೆ


ಅಳಿಯನುಡುಗರೆಯೆಲ್ಲ ಮುನಿದು ಕೇಳುವರೇ?

ಹಳೆಯ ಸಂಬಳವೆಲ್ಲ ನಿಂತು ಕೇಳುವರೇ?

ಹಳೆಸಾಲವೆಲ್ಲಾ ಹಗಲಿರುಳು ಕಾಡುವರೇ?

ಮಲಿನಮನ ಮಾಡಿದರೆ ಕೀರ್ತಿ ಗಳಿಸುವರೇ?


ಇಂದು ನಾಳೆಗಳೆಂಬ ಸಂದೇಹ ಬೇಡಿ

ಬಂದ ಬವಣೆಗೆ ಕೊಡುವದುಚಿತಗಳ ನೀಡಿ

ಹಿಂದುಳಿದ ಕಡಬಡ್ಡಿಯಲ್ಲ ನಮಗೀಗ

ಮುಂದಾಗಿ ಹಚ್ಚಡವ ತರಿಸಿಕೊಡಿ ಬೇಗ


ಕೊಟ್ಟಿರಿಸಿ ಕೇಳಬಂದವರಲ್ಲ ನಾವು

ಬಿಟ್ಟಿ ಬಿಡಾರವಾ ತೆಗೆಯೆನ್ನದಿರಿ ನೀವು

ದಟ್ಟ ಲೋಭಿಯ ಬಳಿಗೆ ಬರಲಿಲ್ಲ ನಾವು

ಕೊಟ್ಟು ನಮಗುಡುಗೊರೆಯ ಕಳಿಸಿಕೊಡಿ ನೀವು


ಕೊಡದ ಲೋಭಿಯನು ಕೊಂಡಾಡಿ ಫಲವೇನು?

ದೃಢವಿಲ್ಲದವರುಗಳ ಬೇಡಿ ಫಲವೇನು?

ಜಡದೇಹಿಗಳಿಗೆ ಜಯವೆಂದು ಫಲವೇನು?

ಕೊಡದ ಲೋಭಿಯ ಗಂಡ ಕಲಿಕರ್ಣ ನೀನು!

ಸುಭಾಷಿತಗಳು

ನಮ್ಮ ಪುಸ್ತಕದ ಕೊನೆಯ ಪದ್ಯ ಕೂಡ ತುಂಬಾ ಆಸಕ್ತಿದಾಯಕವಾಗಿತ್ತು. ಅದರಲ್ಲಿ ಕನ್ನಡದ ಸುಭಾಷಿತಗಳು ಎಂಬ ಸಂಕಲನದಿಂದ ಆಯ್ದ ಕೆಲವು ನುಡಿಮುತ್ತುಗಳಿದ್ದುವು. ಮುಖ್ಯವಾಗಿ ತಂದೆಯೊಬ್ಬನು ಮಕ್ಕಳಿಗೆ ಚಿಕ್ಕಂದಿನಲ್ಲಿ ಸೂಕ್ತ ವಿದ್ಯೆಗಳನ್ನು ತಿಳಿಸಿಕೊಡುವ ಜವಾಬ್ದಾರಿಯ ಬಗ್ಗೆ ಅವುಗಳಲ್ಲಿ ವಿವರಣೆ ನೀಡಲಾಗಿತ್ತು. ನನಗೆ ಕೆಲವು ಸಾಲುಗಳು ಮಾತ್ರ ನೆನಪಿಗೆ ಬರುತ್ತಿವೆ.

ಮಕ್ಕಳಿಗೆ ತಂದೆ ಬಾಲ್ಯದೊಳ್

ಅಕ್ಕರ ವಿದ್ಯೆಗಳ ನರಿಪದಿರ್ದೊಡೆ ಕೊಂದಂ

ಲಕ್ಕ ಧನಮಿರಲು ಕೆಡಗುಂ

ಚಿಕ್ಕಂದಿನ ವಿದ್ಯೆ ಪೊರಗು ಚೂಡಾರತ್ನ


ಕಿರಿದಾದ ವಿದ್ಯೆಯಾಗಲಿ ಮೆರೆವುದು ತನ್ನಲ್ಲಿ

ಗುಣಗಳಿದ್ದೊಡೆ ಮತ್ತಾ

ಒರತೆಯ ನೀರಾದೊಡೆ ತಾಮ್

ಬರನಂ  ಪಿಂಗಿಸದೆ ಸುಗುಣ ರತ್ನಾ ಕರಾಂಡ

------------------------ಮುಂದುವರಿಯುವುದು -------------------

 

No comments: