Wednesday, February 12, 2020

ಬಾಲ್ಯ ಕಾಲದ ನೆನಪುಗಳು – ೬೧


ಶನಿವಾರ ಸಂಜೆಯ ಭಜನೆ
ನಾನು ಈ ಮೊದಲೇ ಬರೆದಂತೆ ಹಾಸ್ಟೆಲಿನಲ್ಲಿ ಪ್ರತಿ ಶನಿವಾರ ಸಂಜೆ ಕಾರ್ಯದರ್ಶಿಗಳಾದ ರಾಮನಾರಾಯಣ ಅವಧಾನಿಗಳ ನೇತೃತ್ವದಲ್ಲಿ ಭಜನೆ ನಡೆಯುತ್ತಿತ್ತು.  ಅದಕ್ಕೆ ಹಾಜರಾತಿ ಕಡ್ಡಾಯವಾಗಿತ್ತು. ಭಜನೆಗೆ ಹೋಗುವಾಗ ಶರ್ಟ್ ಮತ್ತು ಬನಿಯನ್ ತೆಗೆದು ಒಂದು ವಸ್ತ್ರವನ್ನು ಹೊದ್ದು ಕೊಳ್ಳ ಬೇಕಿತ್ತು.  ರೇಷ್ಮೆ ಪಂಚೆ ಉಟ್ಟು  ವಸ್ತ್ರ  ಹೊದ್ದು ಹಾಗೂ  ಹಣೆಯಲ್ಲಿ ವಿಭೂತಿ ಧರಿಸಿದ ಅವಧಾನಿಗಳು ತಮ್ಮ ಕಂಚಿನ ಕಂಠದಿಂದ ಶಾಸ್ತ್ರಿಗಳ ಹಾರ್ಮೋನಿಯಂ ಜೊತೆಗೆ ನಮ್ಮಿಂದ ಹೇಳಿಸಿ ಹಾಡುತ್ತಿದ್ದ ಭಜನೆಗಳು ನಾವೆಂದೂ ಮರೆಯುವಂತಿರಲಿಲ್ಲ. ನಾನು ಅಲ್ಲಿಯವರೆಗೆ ನಮ್ಮೂರಿನಲ್ಲಿ ಮತ್ತು ಹೊಕ್ಕಳಿಕೆಯಲ್ಲಿ ಎಷ್ಟೋ ಭಜನೆಗಳಲ್ಲಿ ಭಾಗವಹಿಸಿದ್ದೆ. ಆದರೆ ಅವಧಾನಿಗಳು ಹಾಡುತ್ತಿದ್ದ ದೇವರನಾಮಗಳು ನಾನೆಂದೂ ಕೇಳದವು ಮತ್ತು ಅಷ್ಟೇ ವಿಶಿಷ್ಟವಾದವು ಆಗಿದ್ದವು. ಅದರಲ್ಲೂ ಕಾಲಭೈರವಾಷ್ಟಕಂ ಎಂಬ ಒಂದು ವಿಶಿಷ್ಟ ಭಜನೆ ಇಂದಿಗೂ ನನ್ನ ಕಿವಿಗಳಲ್ಲಿ ಮೊಳಗುತ್ತಿದೆ. ಅದರ ಕೆಲವು ಸಾಲುಗಳು ಹೀಗಿದ್ದವು:
ದೇವರಾಜ ಸೇವ್ಯಮಾನ ಪಾವನಾಂಗ್ರಿ ಪಂಕಜಂ
ವ್ಯಾಲ ಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿ ಯೋಗೀವೃಂದ ವಂದಿತಮ್ ದಿಗಂಬರಮ್
ಕಾಶಿಕಾ ಪುರಾದಿನಾಥ ಕಾಲಭೈರವಂ ಭಜೇ
                                    ಕಾಲಭೈರವಾಷ್ಟಕಂ ಪಟಂತಿಯೇ ಮನೋಹರಂ
ಜ್ಞಾನ ಮುಕ್ತಿ ಸಾಧನಂ ವಿಚಿತ್ರ ಪುಣ್ಯವರ್ಧನಂ
ಶೋಕ ಮೋಹ ಧೈನ್ಯ ಲೋಭ ಕೋಪ ತಾಪ ನಾಶಕಮ್
ಕಾಶಿಕಾ ಪುರಾದಿನಾಥ ಕಾಲಭೈರವಂ ಭಜೇ
ಭಜನೆ ಮತ್ತು ಶಾಸ್ತ್ರಿಗಳ ಭಾಷಣ ಮುಗಿದನಂತರ ಶಂಕರ ಘನಪಾಠಿ ಎಂಬ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಯಿಂದ ದೇವರ ಪೂಜೆ ತುಂಬಾ ವಿದ್ಯುಕ್ತವಾಗಿ ಮಾಡಲ್ಪಡುತ್ತಿತ್ತು. ಶಂಕರ ಘನಪಾಠಿ ಭದ್ರಾವತಿಯ ವಿದ್ವಾಂಸ ಘನಪಾಠಿ ವಂಶದವನಾಗಿದ್ದು ತುಂಬಾ ಶಾಸ್ತ್ರೋಕ್ಷವಾಗಿ ದೇವರ ಪೂಜೆ ಮಾಡುವುದನ್ನು ಬಲ್ಲವನಾಗಿದ್ದನು.

ಅವಧಾನಿಯವರು ಸಂಜೆಯ ಸಂಪೂರ್ಣ ಸಮಯವನ್ನು ಹಾಸ್ಟೆಲಿನ ಆಡಳಿತಕ್ಕೆ ಅರ್ಪಿಸಿಕೊಂಡಿದ್ದರು. ಎಷ್ಟೋ ಬಾರಿ ನಡು  ರಾತ್ರಿಯವರೆಗೂ ಹಾಸ್ಟೆಲಿನಲ್ಲೇ ಇರುತ್ತಿದ್ದರು. ಕಾರ್ಯದರ್ಶಿಯ ಪದವಿ ಒಂದು ಗೌರವಾನ್ವಿತ ಪದವಿಯಾಗಿದ್ದು ಹಾಸ್ಟೆಲಿನ ಎಷ್ಟೋ ಖರ್ಚುಗಳಿಗೆ ಅವಧಾನಿಯವರ ಕೈಯಿಂದಲೇ ಹಣ ಹಾಕಬೇಕಾಗುತ್ತಿತ್ತು. ಆಗರ್ಭ ಶ್ರೀಮಂತರಾಗಿದ್ದ ಅವಧಾನಿಯವರು ತಮ್ಮ ಶ್ರೀಮಂತಿಕೆಯನ್ನು ಎಂದೂ ಪ್ರದರ್ಶಿಸಿದವರಲ್ಲ. ಅಧಿಕಾರ ಸ್ಥಾನದಲ್ಲಿದ್ದರೂ ಎಂದೂ ತಮ್ಮ ಧ್ವನಿ ಏರಿಸಿ ಮಾತನಾಡಿದವರಲ್ಲ. ಅವರ ವ್ಯಕ್ತಿತ್ವ ಮತ್ತು ಆಕಾರ ಅವರು ಎದುರು ಬಂದಾಗ ಕೈ ಜೋಡಿಸಿ ನಮಸ್ಕಾರ ಮಾಡುವಂತೆ ಪ್ರೇರೇಪಿಸುತ್ತಿತ್ತು. ನಾನು ನನ್ನ ಜೀವಮಾನದಲ್ಲಿ ನೋಡಿದ ಕೆಲವೇ ಕೆಲವು ಧೀಮಂತ ಮಹನೀಯರಲ್ಲಿ ಅವಧಾನಿಗಳು ಒಬ್ಬರಾಗಿದ್ದರು.
ರೂಮ್ ನಂಬರ್ ೧೦
ನಾನು ಹಾಸ್ಟೆಲ್ ಸೇರಿದ ಒಂದು ತಿಂಗಳಿನ ನಂತರ ನಮ್ಮನ್ನೆಲ್ಲಾ  ಹೊಸ ರೂಮುಗಳಿಗೆ ವರ್ಗಾಯಿಸಲಾಯಿತು. ಹಾಸ್ಟೆಲಿನ ನಿಯಮದ ಪ್ರಕಾರ ಹೈಸ್ಕೂಲ್ ಮತ್ತು ಕಾಲೇಜಿನ  ವಿದ್ಯಾರ್ಥಿಗಳು  ಬೇರೆ ಬೇರೆ ರೂಮುಗಳಲ್ಲಿ ಇರಬೇಕಿತ್ತು. ನನ್ನನ್ನು ಬೇರೆ ೫ ಮಂದಿ ಹೈಸ್ಕೂಲ್ ವಿದ್ಯಾರ್ಥಿಗಳೊಡನೆ ರೂಮ್ ನಂಬರ್ ೧೦ ಕ್ಕೆ ವರ್ಗಾಯಿಸಲಾಯಿತು. ನನ್ನ ೬ ನೇ ನಂಬರ್ ರೂಮ್ ಮೇಟುಗಳು ನನ್ನನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದು ನನ್ನನ್ನು ಅವರ ರೂಮಿನಲ್ಲಿಯೇ ಇಟ್ಟುಕೊಳ್ಳಲು ತುಂಬಾ ಪ್ರಯತ್ನ ಪಟ್ಟರು. ಆದರೆ ಆ ಪ್ರಯತ್ನ ವಿಫಲವಾಗಿ ನಾನು ೬ ನೇ ನಂಬರ್ ರೂಮಿಗೆ ಶಿಫ್ಟ್ ಮಾಡಿಬಿಟ್ಟೆ.

ನಾನು ಹೊಸ ರೂಮಿಗೆ ಹೋದಾಗ ಆದ  ಒಂದು ಅನುಕೂಲವೆಂದರೆ ನನ್ನ ಕ್ಲಾಸ್ ಮೇಟ್ ವೆಂಕಟರಮಣ ಮತ್ತು ಮೇಷ್ಟರ ಮನೆಯಲ್ಲಿ ನನ್ನೊಡನಿದ್ದ ಬೈರೇದೇವರು ಗಣೇಶ ನನ್ನೊಡನೆ ಇರುವಂತಾದದ್ದು. ಇನ್ನು ದತ್ತಾತ್ರಿ ಎಂಬ ನಮ್ಮ ಶಾಲೆಯ ೯ನೇ ಸ್ಟ್ಯಾಂಡರ್ಡ್ ವಿದ್ಯಾರ್ಥಿ ಮತ್ತು ಡಿ ವಿ ಎಸ್ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ೯ನೇ ಸ್ಟ್ಯಾಂಡರ್ಡ್ ವಿದ್ಯಾರ್ಥಿಗಳಾದ ನಾಡಿಗ ಮತ್ತು ಲಕ್ಷ್ಮೀನಾರಾಯಣ (ಲಚ್ಚು)  ಸೇರಿ ಒಟ್ಟು ೬ ಮಂದಿ ರೂಮ್ ಮೇಟ್ ಗಳಾಗಿ ಬಿಟ್ಟೆವು. ಗಣೇಶ ಮತ್ತು ಲಚ್ಚು ಶ್ರೀಮಂತ ಮನೆತನದಿಂದ ಬಂದವರಾಗಿದ್ದು ಪ್ರತಿ ತಿಂಗಳೂ ಅವರಿಗೆ ಬರುತ್ತಿದ್ದ ಮನಿ ಆರ್ಡರ್ ನೋಡಿ ನಮ್ಮ ತಲೆ ತಿರುಗುತ್ತಿತ್ತು!

ಕಳಸದ ಹಿರಿಯಣ್ಣ ಮತ್ತು ರಾಷ್ಟೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್ )
ಹಾಸ್ಟೆಲಿನಲ್ಲಿದ್ದ ಒಬ್ಬ ಪಿಯುಸಿ ವಿದ್ಯಾರ್ಥಿ ನನಗೆ ಮೊದಲೇ ಪರಿಚಿತನಾಗಿದ್ದ.  ಕಳಸ ಊರಿನ ಹಿರಿಯಣ್ಣ ಎಂಬ ಈ ವಿದ್ಯಾರ್ಥಿಯನ್ನು ನಾನು ಹೊರನಾಡಿಗೆ ಉಪನಯನಕ್ಕಾಗಿ ಹೋದಾಗ ಭೇಟಿಯಾಗಿದ್ದೆ. ಆಗ ಅವನು ಕಳಸದ ಹೈಸ್ಕೂಲಿನಲ್ಲೂ ಇಂಗ್ಲಿಷ್ ಮೀಡಿಯಂ ಇದೆಯೆಂದೂ ನಾನಲ್ಲಿ ಸೇರಿಕೊಳ್ಳಬಹುದೆಂದು ಸಲಹೆ ಮಾಡಿದ್ದ. ಆದರೆ ನಾನು ಕಳಸ ಊರಿನಲ್ಲಿರುವ ಸಾಧ್ಯತೆಯೇ ಇರಲಿಲ್ಲ. ಹಿರಿಯಣ್ಣನಿಗೆ ನನಗೆ ಹಾಸ್ಟೆಲಿನಲ್ಲಿ ಫ್ರೀ ಸೀಟ್ ಸಿಕ್ಕಿದ್ದು ತಿಳಿದು ತುಂಬಾ ಸಂತೋಷವಾಯಿತು.

ಹಿರಿಯಣ್ಣ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ರೂಮಿಗೆ ಬಂದ. ಅವನು ನಮ್ಮೊಡನೆ ರಾಷ್ಟೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್ ) ಎಂಬ ಸಂಸ್ಥೆಯ ಬಗ್ಗೆ ಮಾತನಾಡತೊಡಗಿದ. ನಾನು ಅರುಣಾಚಲಂ ಮೇಷ್ಟರ ಮನೆಯ ಮುಂದೆ  ಆ ಸಂಸ್ಥೆಯ ಕವಾಯತ್ ನಡೆಯುತ್ತಿದ್ದುದನ್ನು ನೋಡಿದ್ದನ್ನು ಹೇಳಿದಾಗ ಅವನಿಗೆ ತುಂಬಾ ಖುಷಿ ಆಯಿತು. ಹಾಗೆಯೇ ನನಗೆ ಇನ್ನೊಂದು ವಿಷಯ ನೆನಪಿಗೆ ಬಂತು. ನಮ್ಮ ಹೆಡ್ ಮಾಸ್ಟರ್ ಅವರು ಒಮ್ಮೆ ಸೂರ್ಯನಾರಾಯಣ ರಾವ್ ಎಂಬ ಮಹನೀಯರಿಂದ ನಮ್ಮ ಶಾಲೆಯಲ್ಲಿ ಭಾಷಣ ಏರ್ಪಡಿಸಿದ್ದರು. ತುಂಬಾ ಶಕ್ತಿಯುಕ್ತ ಹಾಗೂ ಆಸಕ್ತಿದಾಯಕವಾಗಿದ್ದ ಅವರ ಮಾತುಗಳು ನಮ್ಮ ದೇಶ ಭಕ್ತಿಯನ್ನು ಉದ್ರೇಕಿಸುವಂತದಾಗಿದ್ದವು. ನಮ್ಮ ಹೆಡ್ ಮಾಸ್ಟರ್ ಅವರನ್ನು ಒಂದು ಬಗೆಯಲ್ಲಿ ಸ್ವಾಮಿ ವಿವೇಕಾನಂದರಿಗೆ ಹೋಲಿಸಿ ಮಾತನಾಡಿದ್ದರು. ಅವರು ಆರ್ ಎಸ್ ಎಸ್  ಸಂಸ್ಥೆಯ ಪ್ರಚಾರಕರೆಂದೂ ಹೇಳಿದ್ದರು.

ಹಿರಿಯಣ್ಣ ಕೂಡ ತನ್ನನ್ನು ಆರ್ ಎಸ್ ಎಸ್  ಸಿದ್ಧಾಂತ ಮತ್ತು ಅದರ ಪ್ರಚಾರಕ್ಕೆ ಸಂಪೂರ್ಣವಾಗಿ ಅರ್ಪಿಸಿ ಕೊಂಡುಬಿಟ್ಟಿದ್ದ. ಆಮೇಲೆ ಕೇವಲ ಒಂದು ವಾರದ ನಂತರ ಅವನು ನಮ್ಮನ್ನು ನಮ್ಮ ಹಾಸ್ಟೆಲಿನಿಂದ ಸ್ವಲ್ಪವೇ ದೂರದಲ್ಲಿದ್ದ ಒಂದು ಚಿಕ್ಕ ಆಟದ ಮೈದಾನಕ್ಕೆ ಕರೆದುಕೊಂಡು ಹೋದ. ಅಲ್ಲಿ ನಮಗೆ ಅವನು ಜಡೆ  ಚಂದ್ರಶೇಖರ್ ಎಂಬ ಮಹನೀಯರಿಗೆ ಪರಿಚಯ ಮಾಡಿಸಿದ.  ಚಂದ್ರಶೇಖರ್ ಅವರು ನಮಗೆ ತುಂಬಾ ಸರಳ ಸ್ವಭಾವದ ವಿದ್ವಾಂಸರಾಗಿ ಕಾಣಿಸಿದರು. ಅಲ್ಲಿ ಆಗಲೇ ನಮ್ಮ ವಯಸ್ಸಿನವರೇ ಆದ ಅನೇಕ ಹುಡುಗರು ಹಾಜರಾಗಿ ಬಿಟ್ಟಿದ್ದರು. ಚಂದ್ರಶೇಖರ್ ಅವರು  ನಮಗೆ ಆರ್ ಎಸ್ ಎಸ್  ಸಂಸ್ಥೆ ನಾಗಪುರದಲ್ಲಿ  ಸ್ಥಾಪನೆ ಆದ ಬಗ್ಗೆ ಮತ್ತು ಅದರ ಸಿದ್ಧಾಂತಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ಹಾಗೂ ನಾವಿದ್ದ ಮೈದಾನದಲ್ಲಿ ಹೊಸದಾಗಿ ಆರ್ ಎಸ್ ಎಸ್ ಶಾಖೆ ಪ್ರಾರಂಭ ಆಗಿರುವುದೆಂದೂ ಮತ್ತು ನಾವೆಲ್ಲ ಅದರ ಸದಸ್ಯರಾಗಿ ಬಿಟ್ಟಿದ್ದೇವೆಂದೂ ತಿಳಿಸಿದರು.  ಹಿರಿಯಣ್ಣನನ್ನು ಶಾಖಾ ಪ್ರಮುಖನಾಗಿ ನೇಮಿಸಿರುವುದಾಗಿಯೂ ತಿಳಿಸಿದರು.
ಆಮೇಲೆ ಎಷ್ಟೋ ದಿನಗಳು ನಾವು ಪ್ರತಿ ಸಂಜೆಯೂ ಹಿರಿಯಣ್ಣನ ನೇತೃತ್ವದಲ್ಲಿ ಆರ್ ಎಸ್ ಎಸ್  ಶಾಖೆಯಲ್ಲಿ ಭಾಗವಹಿಸುತ್ತಿದ್ದೆವು. ಸುಮಾರು ಒಂದು ವಾರ ಜಡೆ  ಚಂದ್ರಶೇಖರ್ ಅವರು ನಮಗೆ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್ , ಚಂದ್ರಶೇಖರ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಮತ್ತು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ  ಮುಂತಾದವರ ಬಗ್ಗೆ ತುಂಬಾ ಸ್ವಾರಸ್ಯವಾಗಿ ವಿದ್ವತ್ತಿನ ವಿವರಣೆ ನೀಡಿದರು. ವಿವಿಧ ಬಗೆಯ ಕವಾಯತ್ ನಂತರ ಆಡುತ್ತಿದ್ದ ಕಬಡ್ಡಿ ಆಟ ನನಗೆ ತುಂಬಾ ಇಷ್ಟದ್ದಾಗಿತ್ತು. ಹಾಗೆಯೇ ಪ್ರತಿ ಸಂಜೆಯ ಕಾರ್ಯಕ್ರಮ ಮುಗಿದ ನಂತರ ನಾವೆಲ್ಲ ಸಾಮೂಹಿಕವಾಗಿ ಹಾಡುತ್ತಿದ್ದ  ಆರ್ ಎಸ್ ಎಸ್ ಸಂಸ್ಥೆಯ ಪ್ರಮುಖ ಗೀತೆ ನನಗೆ ತುಂಬಾ ಇಷ್ಟದ್ದಾಗಿತ್ತು. ಅದರ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ:
ನಮಸ್ತೆ ಸದಾ ವತ್ಸಲೇ ಮಾತೃ ಭೂಮೇ
ತ್ವಯಾ ಹಿಂದು ಭೂಮೆ ಸುಖಂ ವರ್ದಿತೋ ಹಮ್
ಮಹಾ ಮಂಗಳೇ ಪುಣ್ಯ ಭೂಮೇ ತುದರ್ಥೇ
ಪತತ್ವೇಷ ಕಾಯೋ ನಮಸ್ತೆ ನಮಸ್ತೆ
ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ
ಇಮೇ ಸಾಧನಂ ತ್ವಾಮ್ ನಮಾಮೊ ವಯಂ
ತುದೀಯಾಯ ಕಾರ್ಯಾಯ ಬದ್ಧಾ ಕಟೀಯಂ
ಸುಶೀಲಂ ಪ್ರಪದ್ಯೇ ನನಂ ಭ್ರಮ್ ಭವೇತ್
------- ಮುಂದುವರಿಯುವುದು-----

No comments: