Tuesday, February 18, 2020

ಬಾಲ್ಯ ಕಾಲದ ನೆನಪುಗಳು – ೬೩


ನಾನು ಬರೆದ ಮೊಟ್ಟ ಮೊದಲ ಪೋಸ್ಟ್ ಕಾರ್ಡ್ ಮತ್ತು ಅಣ್ಣನಿಂದ ತಿರುಗು ಬಾಣ!
ನಾನು ಅಣ್ಣನಿಗೆ ಬರೆದ ನನ್ನ ಮೊಟ್ಟ ಮೊದಲ ಪೋಸ್ಟ್ ಕಾರ್ಡನ್ನು ತುಂಬಾ ಎಚ್ಚರಿಕೆಯಿಂದ ನಿಯಮಿತವಾದ ಫಾರ್ಮ್ಯಾಟ್ ನಲ್ಲಿಯೇ ಬರೆದಿದ್ದೆ. ಕಾರ್ಡಿನ ಮೇಲ್ಭಾಗದ ಎಡಗಡೆಯಲ್ಲಿ "ಕ್ಷೇಮ" ಎಂದು ಬರೆದರೆ ಬಲಗಡೆಯಲ್ಲಿ  ತಾರೀಕು ಮತ್ತು ಶಿವಮೊಗ್ಗೆ ಎಂದು ಬರೆದಿದ್ದೆ. ಪ್ರಾರಂಭದಲ್ಲಿ ತೀರ್ಥರೂಪು ಸಮಾನರಾದ ಅಣ್ಣನವರಿಗೆ ಎಂದು ಬರೆದು ಕೊನೆಯಲ್ಲಿ "ಬಾಕೀ ಸಂಕ್ತಿ ಮೊಕ್ತಾ " ಎಂದು ಬರೆದ ನಂತರ "ಇಂತೀ ಬೇಡುವ ಆಶೀರ್ವಾದಗಳು" ಎಂದು ಬರೆದು ಅಣ್ಣನಿಗೆ ಇಷ್ಟವಾದ ಇಂಗ್ಲೀಷಿನಲ್ಲಿ ಸಹಿ ಹಾಕಿದ್ದೆ. ಕಾರ್ಡಿನಲ್ಲಿ ನಾನು ಚಳುವಳಿಯಲ್ಲಿ ಭಾಗವಹಿಸಿದ್ದರ ಬಗ್ಗೆ ಹೆಮ್ಮೆಯಿಂದ ಬರೆದು ಬಿಟ್ಟಿದ್ದೆ. ಕೇವಲ ಒಂದು ವಾರದಲ್ಲಿ ನನಗೆ ಅಣ್ಣನ ಉತ್ತರ ಬಂತು. ಅದು ಕೆಳಗೆ ಕಂಡಂತಿತ್ತು:

ಪ್ರೀತಿಯ ತಮ್ಮನಿಗೆ ನಿನ್ನ ಅಣ್ಣನ ಆಶೀರ್ವಾದಗಳು. ಅದಾಗಿ ನಾವೆಲ್ಲರೂ ಕ್ಷೇಮ. ಹಾಗೂ ನೀನು ಆರೋಗ್ಯವಾಗಿದ್ದು ಹಾಸ್ಟೆಲಿನ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ತಿಳಿದು ತುಂಬಾ ಸಂತೋಷವಾಯಿತು. ಆದರೆ ಒಂದು ವಿಷಯ ನಿನಗೆ ತಿಳಿದಿರಲಿ. ಪೋಸ್ಟ್ ಕಾರ್ಡಿನಲ್ಲಿ ಯಾವುದೇ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬರೆಯ ಬಾರದು. ನನಗೆ ಆಶ್ಚರ್ಯವಾದ ವಿಷಯವೆಂದರೆ ಕಾರ್ಡಿನಲ್ಲಿ ನಿನ್ನ ಓದಿನ ಬಗ್ಗೆಯಾಗಲೀ ಅಥವಾ ಶಾಲೆಯ ಬಗ್ಗೆಯಾಗಲೀ ಒಂದೇ ಒಂದು ವಾಕ್ಯ ಬರೆಯದಿರುವುದು!

ನಿಮ್ಮ ಶಾಲೆಯಲ್ಲಿ ಟೆಸ್ಟ್ ಗಳನ್ನು ಮಾಡಿದರೇ ? ಅವುಗಳಲ್ಲಿ ನಿನ್ನ ಸ್ಥಾನ  ಯಾವುದಿತ್ತು? ನೆನಪಿರಲಿ. ನೀನು ಇಲ್ಲಿಯವರೆಗೆ ನಿನ್ನ ಎಲ್ಲಾ ತರಗತಿಗಳಲ್ಲೂ ಮೊದಲ ಸ್ಥಾನ ಗಳಿಸುತ್ತಾ ಬಂದಿರುವೆ. ಶಿವಮೊಗ್ಗೆಯಲ್ಲೂ ನಿನಗೆ ತರಗತಿಯಲ್ಲಿ ಅದೇ ಸ್ಥಾನ ಮುಂದುವರೆಯ ಬೇಕು. ಅದೇ ನಿನ್ನ ಗುರಿಯಾಗಿರಲಿ. ಬಗ್ಗೆ ವಿವರಗಳನ್ನು ನಿನ್ನ ಮುಂದಿನ ಪತ್ರದಲ್ಲಿ ನಿರೀಕ್ಷಿಸುತ್ತೇನೆ.  ಇಂತೀ ನಿನ್ನ ಪ್ರೀತಿಯ ಅಣ್ಣ ರಾಮಕೃಷ್ಣ.

ಅಣ್ಣನ ಪತ್ರವನ್ನು ಓದಿ ನನಗೆ ಒಮ್ಮೆಲೇ ಆಕಾಶದಿಂದ ಭೂಮಿಗೆ ಬಿದ್ದಂತಾಯಿತು. ಅಣ್ಣನಿಗೆ ಅನಿಸಿದಂತೆ  ನಾನು ಹಾಸ್ಟೆಲಿನ ಸಂಗತಿಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಾ ಓದಿನ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲವೆಂದು ನನಗೂ ಅನಿಸಿತು. ಅಲ್ಲದೇ ಇದುವರೆಗೆ ನಾನು ಓದಿದ್ದ ಹಳ್ಳಿ ಶಾಲೆಗಳಲ್ಲಿ ಪ್ರಥಮ  ಸ್ಥಾನ ಗಳಿಸಿದ್ದಕ್ಕೂ ಮತ್ತು ಈಗ ಶಿವಮೊಗ್ಗೆಯಂತಹ ಸಿಟಿಯಲ್ಲಿ ಅದರಲ್ಲೂ ಇಂಗ್ಲಿಷ್ ಮೀಡಿಯಂ ತರಗತಿಯಲ್ಲಿ ಪ್ರಥಮ  ಸ್ಥಾನ ಗಳಿಸುವುದಕ್ಕೂ ತುಂಬಾ ವ್ಯತ್ಯಾಸ ಇರುವುದೆಂದು ನನಗೆ ಗೊತ್ತಿತ್ತು. ಅಣ್ಣ ನನ್ನ ಮುಂದೆ ದೊಡ್ಡ ಚಾಲೆಂಜ್ ಒಂದನ್ನು ಇಟ್ಟುಬಿಟ್ಟಿದ್ದ!

ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಟೆಸ್ಟ್ ಗಳನ್ನು ಮಾಡುವ ಕ್ರಮವೇ ಇರಲಿಲ್ಲ. ನಮ್ಮ ಮೊದಲ ಟರ್ಮ್ ಪರೀಕ್ಷೆ ಅಕ್ಟೋಬರ್ ತಿಂಗಳಿನಲ್ಲಿ ದಸರಾ ರಜೆಗೆ ಮುಂಚೆ ನಡೆಯಲಿತ್ತು. ಅದರ ರಿಸಲ್ಟ್ ನಾವು ರಜೆಯಿಂದ ಹಿಂದಿರುಗಿದ ನಂತರ ತಿಳಿಯಬೇಕಿತ್ತು. ಟೆಸ್ಟ್ ಗಳೇ ಇಲ್ಲದಿದ್ದರಿಂದ ನನಗೆ ನಾನು ಯಾವ ವಿದ್ಯಾರ್ಥಿಗಳೊಡನೆ ಮೊದಲ ಸ್ಥಾನಕ್ಕೆ ಪೈಪೋಟಿ ಮಾಡಬೇಕೆಂದು ಅರಿವಿರಲಿಲ್ಲ. ನಾನು ನನ್ನ ಪರಿಸ್ಥಿತಿಯನ್ನು ನನ್ನ ಗೆಳೆಯರಾದ ವೆಂಕಟರಮಣ ಮತ್ತು ನೀಲಕಂಠ ಅವರೊಡನೆ ಹೇಳಿಕೊಳ್ಳುತ್ತಿದ್ದೆ. ಅವರು ಎಷ್ಟೇ ಪೈಪೋಟಿಯಿದ್ದರೂ ನನಗೆ ಮೊದಲ ಸ್ಥಾನ ಸಿಗಲು ಸಾಧ್ಯವೆಂದು ನನ್ನನ್ನು ಹುರಿದುಂಬಿಸುತ್ತಲೇ ಇದ್ದರು. ನಾನು ಕೂಡ ನನ್ನ ಗಮನವನ್ನು ಅಭ್ಯಾಸದ ಕಡೆ ಕೇಂದ್ರೀಕರಿಸಿದೆ.

ನನ್ನ ಸಿನೆಮಾ ಹುಚ್ಚು
ನನಗೆ ದಿನಗಳಲ್ಲಿ ಸಿನಿಮಾ ನೋಡುವ ಹುಚ್ಚು ತುಂಬಾ ಇತ್ತು. ಕೈಯಲ್ಲಿ ಹೆಚ್ಚು ದುಡ್ಡಿಲ್ಲದಿದ್ದರೂ ನಾನು ನನ್ನ ಸ್ನೇಹಿತರೊಡಗೂಡಿ ಭಾನುವಾರದಂದು ಸಿನಿಮಾ ನೋಡತೊಡಗಿದೆ. ದಿನಗಳಲ್ಲಿ ಶಿವಮೊಗ್ಗೆಯಲ್ಲಿ ಕೇವಲ ಐದು ಸಿನಿಮಾ ಥೀಯೇಟರ್ ಇದ್ದುವು. ಅವುಗಳು ಯಾವುದೆಂದರೆ ವಿನಾಯಕ, ಮಾಡರ್ನ್ , ಮಲ್ಲಿಕಾರ್ಜುನ, ಕೃಷ್ಣಾ ಮತ್ತು ವಿಜಯಲಕ್ಷ್ಮಿ ಟಾಕೀಸ್. ಕೊನೆಯ ಎರಡು ಟಾಕೀಸ್ ತುಂಬಾ ಹಳೆಯದಾಗಿದ್ದು ಮೈಂಟೆನನ್ಸ್ ಸರಿ ಇರಲಿಲ್ಲ. ತುಂಬಾ ದೊಡ್ಡದಾಗಿದ್ದ ಕೃಷ್ಣಾ  ಟಾಕೀಸ್ "ದೊಡ್ಡಿ " ಎಂದು ಕರೆಯಲ್ಪಡುತ್ತಿತ್ತು. ದೊಡ್ಡಿಯಲ್ಲಿ ಪರದೆಯ ಮುಂದಿದ್ದ ನೆಲದ ಸೀಟ್ ಮೇಲೆ ನಾಲ್ಕಾಣೆ ಕೊಟ್ಟು ಕುಳಿತು "ಕರುಣೆಯೇ ಕುಟುಂಬದ ಕಣ್ಣು" ಎಂಬ ಕನ್ನಡ ಸಿನಿಮಾ ನೋಡಿದ್ದು ನೆನಪಿಗೆ ಬರುತ್ತಿದೆ.

ವಿಜಯಲಕ್ಷ್ಮಿ ಟಾಕೀಸ್ ಮತ್ತು ಹಿಂದಿ ಸಿನಿಮಾಗಳು
ಇದ್ದಕಿದ್ದಂತೇ ವಿಜಯಲಕ್ಷ್ಮಿ ಟಾಕೀಸಿನ ಆಡಳಿತ ವರ್ಗ ಬದಲಾಗಿ ಟಾಕೀಸಿಗೆ ಒಂದು ಹೊಸ ಗೆಟ್ ಅಪ್ ಕೊಡಲಾಯಿತು. ಮಾತ್ರವಲ್ಲ. ಹೊಸ ಹೊಸ ಹಿಂದಿ ಫಿಲಂ ಗಳನ್ನು ಅವುಗಳ ಆಲ್ ಇಂಡಿಯಾ ರಿಲೀಸ್ ದಿನವೇ ಟಾಕೀಸಿನಲ್ಲಿ ಪ್ರದರ್ಶಿಸುವ ಏರ್ಪಾಟು ಮಾಡಲಾಯಿತು. ಹಾಗೆ ರಿಲೀಸ್ ಆದ ಮೊದಲ ಹಿಂದಿ ಸಿನಿಮಾ ರಾಜಶ್ರೀ ಪ್ರೊಡಕ್ಷನ್ಸ್ ಅವರ ದೋಸ್ತಿ. ಒಬ್ಬ ಕುರುಡ ಮತ್ತೊಬ್ಬ ಕುಂಟ ಹುಡುಗರಿಬ್ಬರ ಕಥೆಯೇ ದೋಸ್ತಿ. ಲಕ್ಷ್ಮಿಕಾಂತ್ ಪ್ಯಾರೇಲಾಲ್ ಜೋಡಿಯ ಸಿನಿಮಾದ ಹಾಡುಗಳು ಎಷ್ಟೊಂದು ಪ್ರಸಿದ್ಧವಾದವೆಂದರೆ ಹಾಡುಗಳೆಲ್ಲ (ಹಾಡಿನ ಪುಸ್ತಕದ ಮೂಲಕ ) ನಮಗೆ ಬಾಯಿ ಪಾಠ ಆಗಿ ಬಿಟ್ಟವು. ಮಾತ್ರವಲ್ಲ. ಇಂದಿಗೂ ಅವು ನೆನಪಿನಲ್ಲಿ ಇವೆ. ಮುಖ್ಯವಾಗಿಚಾಹೂಂಗ ಮೈ ತುಜೆ ಸಾಂಜ್ ಸವೇರೆ” ಎಂಬ ಹಾಡು ಫಿಲಂ ಫೇರ್ ಪ್ರಶಸ್ತಿ ಗಳಿಸಿ ಬಿಟ್ಟಿತು. ನಮ್ಮ ಹಾಸ್ಟೆಲಿನ ಗಣೇಶಮೂರ್ತಿ ಎಂಬ ವಿದ್ಯಾರ್ಥಿ ಹಾಡನ್ನು ತುಂಬಾ ಚೆನ್ನಾಗಿ ಹಾಡುತ್ತಿದ್ದುದು ನೆನಪಿಗೆ ಬರುತ್ತಿದೆ.

ನಾವು ನೋಡಿದ ಇನ್ನೊಂದು ಹೊಚ್ಚ ಹೊಸ ರೋಮ್ಯಾಂಟಿಕ್ ಸಿನಿಮಾ ಮೇರೇ ಮೆಹಬೂಬ್. ರಾಜೇಂದ್ರಕುಮಾರ್ ಮತ್ತು ಸಾಧನಾ ನಟಿಸಿದ ಸಿನಿಮಾದ ನಿರ್ದೇಶಕರು ಹೆಚ್ ಎಸ್ ರಾವೈಲ್. ಇನ್ನೊಂದು ಪ್ರಸಿದ್ಧ ರೋಮ್ಯಾಂಟಿಕ್ ಸಿನಿಮಾ ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲ ನಟಿಸಿ ಬಿಮಲ್ ರಾಯ್ ಅವರು ನಿರ್ದೇಶಿಸಿದ್ದ ಮಧುಮತಿ. ೧೯೫೮ನೇ ಇಸವಿಯಲ್ಲಿ ರಿಲೀಸ್ ಆಗಿದ್ದ ಸಿನಿಮಾ ಶಿವಮೊಗ್ಗೆಯಲ್ಲಿ ಎರಡನೇ ಬಾರಿ ರಿಲೀಸ್ ಆದರೂ ಹೌಸೆಫುಲ್ ಬೋರ್ಡ್ ತಗುಲಿಸುವಷ್ಟು ಪ್ರಸಿದ್ದಿ ಪಡೆದಿತ್ತು. ಸಲೀಲ್ ಚೌಧುರಿ ಸಂಗೀತ ನಿರ್ದೇಶನದ ಹಾಡುಗಳು ಇಂದಿಗೂ ಕಿವಿಯಲ್ಲಿ ಮೊಳಗುತ್ತಿವೆ. ಮಾತ್ರವಲ್ಲ. ಸಾಧನಾ ಮತ್ತು ವೈಜಯಂತಿಮಾಲ ನಮ್ಮ ಕನಸುಗಳಲ್ಲಿ ಪದೇ ಪದೇ ಕಾಣಿಸತೊಡಗಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.
ಗಣೇಶನ ಹಬ್ಬದ ಸಡಗರ
ನಮ್ಮ ಹಾಸ್ಟೆಲಿನಲ್ಲಿ ಗಣೇಶನ ಹಬ್ಬವನ್ನು ವಿಶೇಷ ಸಡಗರದಿಂದ ಆಚರಿಸಲಾಯಿತು. ಮೊದಲ ದಿನ ರಾತ್ರಿ ನಮ್ಮ ಸಂಸ್ಕೃತ ಮೇಷ್ಟ್ರು ನಂಜುಂಡ ಶಾಸ್ತ್ರಿಗಳ ಸಹೋದರ  ಶೃಂಗೇರಿಯ ಶೃಂಗೇಶ್ವರ ಶಾಸ್ತ್ರಿಗಳ ಹರಿಕಥೆ ತುಂಬಾ ಚೆನ್ನಾಗಿ ನಡೆಯಿತು. ಇನ್ನೊಂದು ದಿನ ಸಾಗರ ಕಾಲೇಜಿನ ಪ್ರಿನ್ಸಿಪಾಲ್ ಗೋಪಾಲ ಕೃಷ್ಣ ಅಡಿಗರು ಮತ್ತು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್  ವಿ ಎಂ ಇನಾಂದಾರ್ ಆಗಮಿಸಿದ್ದರು. ಕನ್ನಡದ ಪ್ರಸಿದ್ಧ ಕವಿ ರಾ ಬೇಂದ್ರೆಯವರನ್ನು ಇನ್ನೊಂದು ಸಮಾರಂಭಕ್ಕೆ ಕರೆಸಲಾಗಿತ್ತು. ನಮಗೆ ಇಂತಹ ಪ್ರಸಿದ್ಧ ಕನ್ನಡ ಸಾಹಿತಿಗಳನ್ನು ನೋಡುವ ಮತ್ತು ಅವರ ಸ್ಪೂರ್ತಿದಾಯಕ ಭಾಷಣಗಳನ್ನು ಕೇಳುವ ಅವಕಾಶವನ್ನು ಕಲ್ಪಿಸಿದ ಹಾಸ್ಟೆಲನ್ನು ನಾವೆಂದೂ ಮರೆಯುವಂತಿಲ್ಲ.

ಊರಿನ ನೆನಪು
ನಾವು ಕೆಲವರು ಪ್ರತಿ ದಿನ ಬೆಳಿಗ್ಗೆ ನಮ್ಮ ಹಾಸ್ಟೆಲಿನ ಕಟ್ಟಡದ ಮೇಲ್ಭಾಗದ ಓಪನ್ ಏರಿಯಾದಲ್ಲಿ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುತ್ತಾ ರೌಂಡ್ ಹಾಕುತ್ತಿದ್ದೆವು. ಆಗ ನಮ್ಮ ಕಣ್ಣಿಗೆ ಹಾಸ್ಟೆಲಿನ ಮುಂದೆ ಬಿ ಹೆಚ್ ರಸ್ತೆಯಲ್ಲಿ ಹೋಗುತ್ತಿದ್ದ ಬಸ್ಸುಗಳು ಕಣ್ಣಿಗೆ ಬೀಳುತ್ತಿದ್ದವು. ಅದರಲ್ಲಿ ಹೆಚ್ಚಿನ ಬಸ್ಸುಗಳು ಭದ್ರಾವತಿಯ ಕಡೆ ಹೋಗುತ್ತಿದ್ದರೆ ಕೇವಲ ಒಂದೆರಡು ಬಸ್ಸುಗಳು (ಶಂಕರ್ ಟ್ರಾನ್ಸ್ಪೋರ್ಟ್ ಮತ್ತು ಉದಯ ಮೋಟಾರ್) ನರಸಿಂಹರಾಜಪುರ ಮಾರ್ಗವಾಗಿ ಕೊಪ್ಪಕ್ಕೆ ಹೋಗುತ್ತಿದ್ದವು. ನನಗೆ ಯಾವಾಗ ಪರೀಕ್ಷೆ ಮುಗಿದು ದಸರಾ ರಜೆಗೆ ಯಾವುದಾದರೂ ಬಸ್ಸಿನಲ್ಲಿ ಊರಿಗೆ ಹೋಗಿ ನನ್ನ ಶಿವಮೊಗ್ಗೆಯ ಅನುಭವಗಳನ್ನು ಹಂಚಿಕೊಂಡೇನೆಂದು ಅನ್ನಿಸುತ್ತಿತ್ತು. ನಾನಾಗಲೇ ದಿನಗಳನ್ನು ಎಣಿಸತೊಡಗಿದ್ದೆ.

ಶಿವಮೊಗ್ಗೆಯಿಂದ ಊರಿಗೆ ಮೊದಲ ಪಯಣ
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ನಮ್ಮ ಫಸ್ಟ್ ಟರ್ಮ್ ಪರೀಕ್ಷೆ ನಡೆಸಲಾಯಿತು. ನಾವು ಪ್ರತಿ ನಿತ್ಯ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಇದ್ದರಿಂದ ಪರೀಕ್ಷೆಯ ದಿನಗಳಲ್ಲಿ ಹೆಚ್ಚು ಕಷ್ಟ ಪಡಬೇಕಾಗಲಿಲ್ಲ. ನಾನು ಎಲ್ಲಾ ಪೇಪರ್ ಗಳಿಗೂ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಒಂದು ಶನಿವಾರ ನಮ್ಮ ಕೊನೆಯ ಪರೀಕ್ಷೆ ಮುಗಿಯಿತು. ಭಾನುವಾರ ಬೆಳಿಗ್ಗೆ ನಾನು ಗಂಟೆಗೆ ಕೊಪ್ಪಕ್ಕೆ ಹೊರಡುತ್ತಿದ್ದ ಉದಯ ಟ್ರಾನ್ಸ್ಪೋರ್ಟ್ ಬಸ್ ಹತ್ತಿ ಊರಿಗೆ ಹೊರಟು ಬಿಟ್ಟೆ. ನನಗೆ ಎಷ್ಟು ಬೇಗ ಮನೆ ತಲುಪಿ ಅಮ್ಮ, ಅಣ್ಣ ಮತ್ತಿತರರೊಂದಿಗೆ ನನ್ನ ಶಿವಮೊಗ್ಗೆಯ ಅನುಭವಗಳನ್ನು ಹಂಚಿಕೊಂಡೆನೋ ಎನ್ನಿಸುತ್ತಿತ್ತು.
------- ಮುಂದುವರಿಯುವುದು-----

No comments: