Saturday, February 8, 2020

ಬಾಲ್ಯ ಕಾಲದ ನೆನಪುಗಳು – ೫೮


ನೀಲಕಂಠ ಮತ್ತು ಅವನ ತಮ್ಮ ಸದಾಶಿವನಿಗೆ ಹಣ ಖರ್ಚು ಮಾಡುವ ಪ್ರಸಂಗವೇ ಇರಲಿಲ್ಲ. ಏಕೆಂದರೆ ಅದರ ಸಂಪೂರ್ಣ ಜವಾಬ್ದಾರಿ ಅವರ ಅಣ್ಣ ಶ್ರೀಕಂಠನ ಕೈಯಲ್ಲಿತ್ತು. ಶ್ರೀಕಂಠ ತುಂಬಾ ಸಿಂಪಲ್ ಹುಡುಗನಾಗಿದ್ದರೂ ಹಣದ ವ್ಯವಹಾರವನ್ನು ತುಂಬಾ ಶಿಸ್ತಿನಿಂದ ಮಾಡುತ್ತಿದ್ದ. ಆದರೆ ವೆಂಕಟರಮಣನ ಹಣದ ಖರ್ಚಿನ ವ್ಯವಸ್ಥೆ ಅವನ ಕೈಯಲ್ಲೇ ಇತ್ತು. ಹುಟ್ಟಿನಿಂದ ನಮ್ಮ ಮನೆಯ ಇತರರಂತೆ ಸ್ವಲ್ಪ ತಿಂಡಿ ಪೋತನಾಗಿದ್ದ ನನಗೆ ಮೇಸ್ಟರ ಮನೆಯಲ್ಲಿ ಬೆಳಗಿನ ಉಪಹಾರವಿಲ್ಲದ್ದು ಒಂದು ಕೊರತೆಯಾಗಿತ್ತು. ದೃಷ್ಟಿಯಲ್ಲಿ ದುರ್ಗಿಗುಡಿಯ ಹತ್ತಿರದ ಹೋಟೆಲುಗಳ ತಿಂಡಿಯನ್ನು ತಿನ್ನ ಬೇಕೆಂಬ ನನ್ನ  ಆಸೆಗೆ ವೆಂಕಟರಮಣನ ನೆರವು ಪಡೆದುಕೊಂಡೆ.
ಗೋಪಿ ಹೋಟೆಲಿನ ಪ್ಲೈನ್ ದೋಸೆ ಮತ್ತು ಫ್ರೂಟ್ ಸಲಾಡ್ !
ನಮ್ಮ ಶಾಲೆಯ ಮೇಷ್ಟರುಗಳಲ್ಲಿ ಹೆಚ್ಚಿನವರು ಮಧ್ಯಾಹ್ನದ ಬಿಡುವಿನ ವೇಳೆ ಒಟ್ಟಾಗಿ ಶಾಲೆಯಿಂದ ಸ್ವಲ್ಪವೇ ದೂರದಲ್ಲಿ ಬಾಲರಾಜ್ ಅರಸ್ ರಸ್ತೆಯ ತುಟ್ಟ ತುದಿಯಲ್ಲಿದ್ದ ಗೋಪಿ ಹೋಟೆಲಿಗೆ ಹೋಗುತ್ತಿದ್ದದ್ದನ್ನು ನಾನು ನೋಡಿದ್ದೆ. ಗೋಪಿ ಹೋಟೆಲ್ ಕಾಲದಲ್ಲಿ ಶಿವಮೊಗ್ಗೆಯ ಅತ್ಯಂತ ಪ್ರಸಿದ್ಧ ಹೊಟೇಲುಗಳಲ್ಲಿ ಒಂದಾಗಿತ್ತು. ಹೋಟೆಲಿನ ಎದುರಿನ ವೃತ್ತಕ್ಕೆ ಶೀನಪ್ಪ ಶೆಟ್ಟಿ ಸರ್ಕಲ್ ಎಂಬ ಹೆಸರಿದ್ದ ಬೋರ್ಡನ್ನು ತಗುಲಿಸಿದ್ದರೂ ಯಾರೂ ಅದನ್ನು ಹೆಸರಿನಿಂದ ಕರೆಯುತ್ತಿರಲಿಲ್ಲ!  ಕಾರಣವಿಷ್ಟೇ. ಗೋಪಿ ಹೋಟೆಲಿನ ಹೆಸರು ಎಷ್ಟು ಪ್ರಸಿದ್ಧವಾಗಿತ್ತೆಂದರೆ ಅದರ ಮುಂದಿದ್ದ ಸರ್ಕಲ್ ಕೂಡಾ ಗೋಪಿ ಹೋಟೆಲ್ ಸರ್ಕಲ್ ಎಂದೇ ಎಲ್ಲರ  ಬಾಯಲ್ಲೂ ಕರೆಯಲ್ಪಡುತ್ತಿತ್ತು. ನಾನು ಕೇಳಿದ ಪ್ರಕಾರ ಎಲ್ಲಾ ಮೇಷ್ಟರು ಒಂದೊಂದು ತುಂಬಾ ರುಚಿಕರವಾದ ಪ್ಲೈನ್ ದೋಸೆಯನ್ನು ಪ್ರತಿದಿನ ಆರ್ಡರ್ ಮಾಡುತ್ತಿದ್ದರಂತೆ. ನನ್ನ ಕೋರಿಕೆಯ ಮೇರೆಗೆ ವೆಂಕಟರಮಣ ಒಂದು ಬೆಳಿಗ್ಗೆ ನನ್ನನ್ನು ಗೋಪಿ ಹೋಟೆಲಿಗೆ ಕರೆದುಕೊಂಡು ಹೋದ. ನಾವು ಪ್ಲೈನ್ ದೋಸೆಯನ್ನು ಆರ್ಡರ್ ಮಾಡಿ ತಿನ್ನುತ್ತಿರುವಾಗ ಒಂದು ದೃಶ್ಯ ನನ್ನ  ಕಣ್ಣಿಗೆ ಬಿತ್ತು.

ನಮ್ಮ ಮುಂದೆ ಕುಳಿತ ಕೆಲವರು ಒಂದು ಸುಂದರವಾದ ಗ್ಲಾಸ್ ಕಪ್ಪಿನಲ್ಲಿ ಹಣ್ಣುಗಳ ತುಂಡುಗಳ ಮೇಲೆ ಒಂದು ಬಣ್ಣದ  ಕ್ರೀಮಿನ ಮುದ್ದೆಯೊಂದನ್ನು ಇಟ್ಟುಕೊಂಡು ಸವಿಯುತ್ತಿದ್ದರು! ನನ್ನ ಕುತೂಹಲವನ್ನು ನೋಡಿದ ವೆಂಕಟರಮಣ ಐಟಮ್ಮಿನ ಹೆಸರು ಫ್ರೂಟ್ ಸಲಾಡ್ ವಿತ್ ಐಸ್ ಕ್ರೀಮ್ ಎಂದು ತಿಳಿಸಿದ. ಮತ್ತು ಅವನು ನನಗೆ ಕ್ಯಾಶಿಯರ್ ಪಕ್ಕದಲ್ಲಿದ್ದ ಒಂದು ಮೆಷಿನ್ ತೋರಿಸಿದ ಅದರ ಹೆಸರು ಫ್ರಿಡ್ಜ್ ಅಂತೆ. ಐಸ್ ಕ್ರೀಮ್  ಅದರ ಒಳಗೆ ಇಟ್ಟರೆ ಅದು ತುಂಬಾ ತಣ್ಣಗೆ ಇರುವುದಂತೆ. ಆದರೆ ಐಟಮ್ಮಿನ ಬೆಲೆ ೨೦ ಪೈಸೆಯಂತೆ! ಅಂದರೆ ಪ್ಲೈನ್ ದೋಸೆಯ ಡಬ್ಬಲ್ ರೇಟ್! ನನಗೆ ಬಾಯಿ ಚಪಲ ತಡೆಯಲಾರದೆ ಅದಕ್ಕೆ ಆರ್ಡರ್ ಮಾಡಿಯೇ ಬಿಟ್ಟೆ. ಒಹ್! ಎಂತಹಾ ರುಚಿ ಐಟಮ್ಮಿನದು? ಅದು ಗೋಪಿ ಹೋಟೆಲಿನ ಸ್ಪೆಷಲ್ ಐಟಂ ಅಂತೆ. ಬೆಲೆ ಏನೋ ಸ್ವಲ್ಪ ದುಬಾರಿ ಎನಿಸಿದರೂ ಅದರ ರುಚಿ ವರ್ಣಿಸಲಸಾಧ್ಯವಾಗಿತ್ತು!

ಇಂಡಿಯನ್ ಕಾಫಿ ಬಾರ್ : ಸ್ಟ್ರಾಂಗ್ ಕಾಫಿ, ಬಿಸಿ ಬಿಸಿ ಹಾಲು, ಬೆಣ್ಣೆ ಬ್ರೆಡ್ ಮತ್ತು ಕೇಕ್ !
ಅಂದಿನ ಶಿವಮೊಗ್ಗೆಯಲ್ಲಿ ನೆಹರು ರಸ್ತೆಯಲ್ಲಿದ್ದ ಇಂಡಿಯನ್ ಕಾಫಿ ಬಾರ್ ತುಂಬಾ ಹೆಸರು ಗಳಿಸಿತ್ತು. ಅಣ್ಣ ತಮ್ಮಂದಿರಿಬ್ಬರ ಜೋಡಿ ನಡೆಸುತ್ತಿದ್ದ ಕಾಫಿ ಬಾರ್ ಕೇವಲ ಸ್ಟ್ರಾಂಗ್ ಕಾಫಿ, ಬಿಸಿ ಬಿಸಿ ಹಾಲು, ಬೆಣ್ಣೆ ಬ್ರೆಡ್ ಮತ್ತು ಕೇಕ್ ಸರ್ವ್ ಮಾಡಿ ದೊಡ್ಡ ಬಿಸಿನೆಸ್ ನಡೆಸುತ್ತಿತ್ತು. ನಾನು ಮೊದಲ ಬಾರಿ ಅದಕ್ಕೆ ಹೋದಾಗ ೨೦ ಪೈಸೆ ಕೊಟ್ಟು ಬಿಸಿ ಬಿಸಿ ಹಾಲು ಮತ್ತು  ಬೆಣ್ಣೆ ಹಚ್ಚಿದ ಬ್ರೆಡ್ ತಿಂದು ಖುಷಿ ಪಟ್ಟಿದ್ದೆ.  ಆದರೆ ನಂತರ ನನಗೆ ಅಲ್ಲಿ ಕೇಕ್ ಎಂಬ ತುಂಬಾ ರುಚಿಯಾದ ತಿಂಡಿ ದೊರೆಯುವುದೆಂದು ತಿಳಿಯಿತು. ಮುಂದಿನ ಬಾರಿ ಹೋದಾಗ ಒಂದು ಕಪ್ ಹಾಲಿನೊಡನೆ ಕೇಕ್ ತೆಗೆದುಕೊಂಡೆ. ಒಹ್! ನಾನೆಂದೂ ಕಂಡು ಕೇಳಿರದ ಹಾಲಿನಲ್ಲಿ ಮುಳುಗಿಸಿ ಸವಿದ ಕೇಕಿನ ರುಚಿ ವರ್ಣಿಸಲಸದಳ!
ನಂಜುಂಡೇಶ್ವರ ಸ್ವೀಟ್ ಹೋಂ!
ಒಂದು ಸಂಜೆ ವೆಂಕಟರಮಣ ನನ್ನನ್ನು ಮೇಷ್ಟರ ಮನೆಯಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ರಸ್ತೆಯಲ್ಲಿದ್ದ ನಂಜುಂಡೇಶ್ವರ ಸ್ವೀಟ್ ಹೋಂ ಎಂಬ ಸಿಹಿ ತಿಂಡಿ ಅಂಗಡಿಗೆ ಕರೆದುಕೊಂಡು ಹೋದ. ಅಬ್ಬಾ! ಅಲ್ಲಿ ಜೋಡಿಸಿಟ್ಟ ಸಿಹಿ ತಿಂಡಿಗಳನ್ನು ನೋಡಿ ನನ್ನ ತಲೆ ತಿರುಗಿ ಹೋಯಿತು! ನಾನು ಅಲ್ಲಿಯವರೆಗೆ ನಮ್ಮ ಮತ್ತು ಅಕ್ಕನ ಊರಿನಲ್ಲಿ ಕೇವಲ ಕೆಲವು ಸಿಹಿ ತಿಂಡಿಗಳನ್ನು ತಿಂದಿದ್ದೆ.  ಆದರೆ ಒಂದೇ ಅಂಗಡಿಯಲ್ಲಿ ಪೇರಿಸಿಟ್ಟ ಬಗೆಬಗೆಯ ತಿಂಡಿಗಳಲ್ಲಿ ಹೆಚ್ಚಿನವು ನಾನೆಂದೂ ಕಾಣದ ತಿಂಡಿಗಳಾಗಿದ್ದವು. ವೆಂಕಟರಮಣನ ಸಲಹೆಯ ಮೇರೆಗೆ ನಾವು ಜಾಮೂನು ಎಂಬ ಸಿಹಿ ತಿಂಡಿಯನ್ನು ಆರ್ಡರ್ ಮಾಡಿದೆವು. ನಮ್ಮಿಬ್ಬರ ಮುಂದೆ ಒಂದೊಂದು ಕಪ್ಪಿನಲ್ಲಿ ಸಿಹಿ ಜ್ಯೂಸಿನೊಳಗೆ ಮುಳುಗಿಸಿದ ಎರಡೆರಡು ಕಂದು ಬಣ್ಣದ ಗೋಳಾಕಾರದ  ತಿಂಡಿಗಳನ್ನು ಚಮಚ ಸಮೇತ ಇಡಲಾಯಿತು. ನಾವು ಅವನ್ನು ಚಮಚದಿಂದ ತುಂಡುಗಳಾಗಿ ಮಾಡಿ ತಿನ್ನ ಬೇಕಾಯಿತು. ಎಂತದು ಮಾರಾಯ್ರೆ? ನನ್ನ ಜೀವಮಾನದಲ್ಲಿ ಅಂತಹ ಸವಿ ರುಚಿಯುಳ್ಳ ತಿಂಡಿಯನ್ನು ನಾನೆಂದೂ ತಿಂದಿರಲಿಲ್ಲ. ಇಂತಹ ತಿಂಡಿಗಳನ್ನು ತಿನ್ನುವ ಭಾಗ್ಯ ಕೇವಲ ಪೇಟೆಯ ಜನರಿಗೆ ಇರುವುದಲ್ಲಾ ಎಂದು ನನಗೆ ಹೊಟ್ಟೆ ಕಿಚ್ಚು ಉಂಟಾಯಿತು!
ಕಡಿಮೆ ದುಡ್ಡಿರುವರಿಗೆ ಇಂಡಿಯನ್ ಮಿಲ್ಕ್ ಬಾರ್!
ಮೇಷ್ಟರ ಮನೆಯ ಹತ್ತಿರವೇ ಮಲ್ಲಿಕಾರ್ಜುನ ಟಾಕೀಸಿನ ಪಕ್ಕದಲ್ಲಿ ಇಂಡಿಯನ್ ಮಿಲ್ಕ್ ಬಾರ್ ಎಂಬ ಸಣ್ಣ ಕ್ಯಾಂಟೀನ್ ಇತ್ತು. ಅದರಲ್ಲಿ ಬಿಸಿಬಿಸಿ ಹಾಲು ಮತ್ತು ಬ್ರೆಡ್ ಅಲ್ಲದೇ ಬನ್ ಎಂಬ ನಾನೆಂದೂ ನೋಡದ ಸಿಹಿ ವಸ್ತು ದೊರೆಯುತ್ತಿತ್ತು.  ಕೇವಲ ೧೦ ಪೈಸೆಗೆ ಒಂದು ಕಪ್ ಬಿಸಿ ಬಿಸಿ ಹಾಲು ಮತ್ತು ಬನ್ ಬಾಯಿ ಚಪ್ಪರಿಸುತ್ತಾ ತಿನ್ನಬಹುದಿತ್ತು. ಆದರೆ ಅದಕ್ಕೆ ಒಂದು ಸಣ್ಣ ವಿಘ್ನ ಇತ್ತು. ಅಲ್ಲಿಗೆ ಹೋಗುವಾಗ ನಮ್ಮ ಶಾಲೆಯ ಮೇಷ್ಟರಾದ ಆರ್ ವಿ ಶ್ರೀನರಸಿಂಹಯ್ಯನವರ ಮನೆಯ ಮುಂದೆ ಹೋಗಬೇಕಾಗಿತ್ತು. ಮೇಷ್ಟರು ಬೆಳಗಿನ ವೇಳೆ ಅವರ ಹೂ ತೋಟದಲ್ಲಿ ನೀರು ಬಿಡುವುದರಲ್ಲಿ ಮಗ್ನರಾಗಿರುತ್ತಿದ್ದರು. ನಾವೆಲ್ಲಾದರೂ  ಅವರ ಕಣ್ಣಿಗೆ ಬಿದ್ದರೆ ಅವರು ಮೇಷ್ಟರಿಗೆ ಹೇಳಬಹುದೆಂಬ ಭಯ ನಮಗಿತ್ತು.
ಹೋಟೆಲ್ ತಿಂಡಿಗೆ ವಿಘ್ನಗಳು
ಅರುಣಾಚಲಂ ಮೇಷ್ಟರು ಅವರ ಮನೆಯಲ್ಲಿದ್ದ ವಿದ್ಯಾರ್ಥಿಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬೆಳಿಗ್ಗೆ ಸ್ನಾನ ಮಾಡುವಾಗ ಮೈ ಮೇಲೆ ವಿಪರೀತ ನೀರು ಸುರಿದುಕೊಂಡರೆ ನಿಲ್ಲಿಸುವಂತೆ ಹೇಳುತ್ತಿದ್ದರು. ಹಾಗೆಯೇ ಯಾವುದೇ ವಿದ್ಯಾರ್ಥಿ ಬೆಳಗಿನ ಊಟ ಸ್ವಲ್ಪ ಕಡಿಮೆ ಮಾಡಿದರೂ ಅವರ ಗಮನಕ್ಕೆ ಬಂದು ಬಿಡುತ್ತಿತ್ತು.  ಅವರು ಮತ್ತು ಅವರ ಪತ್ನಿ ರಾಜಮ್ಮ ತುಂಬಾ ಪ್ರೀತಿ ಮತ್ತು ಒತ್ತಾಯದಿಂದ ಊಟ ಮತ್ತು ತಿಂಡಿ ಬಡಿಸುತ್ತಿದ್ದರು. ಕಡಿಮೆ ಊಟ ಮಾಡಿದ್ದು  ಕಂಡೊಡನೆ ಯಾವ ಹೋಟೆಲಿನಲ್ಲಿ ತಿಂಡಿ ತಿಂದು ಬಂದೆ ಎಂದು ಪ್ರಶ್ನಿಸುತ್ತಿದ್ದರು.
ನಾನು ಹೋಟೆಲ್ ತಿಂಡಿಗೆ ಖರ್ಚು ಮಾಡುವಾಗ ಒಂದು ವಿಷಯ ಮರೆತೇ ಬಿಟ್ಟಿದ್ದೆ.  ಅಣ್ಣ ನನ್ನ ಖರ್ಚಿಗಾಗಿ ಹಣ ಕೊಟ್ಟು ಊರಿಗೆ ಹೋಗುವಾಗ ನನ್ನ ಖರ್ಚಿನ ವಿವರಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಬರೆದಿಡುವಂತೆ ಹೇಳಿ ಹೋಗಿದ್ದ. ನಾನು ಅನಾವಶ್ಯವಾಗಿ ಹೋಟೆಲ್ ತಿಂಡಿಗೆ ಹಣ ಖರ್ಚು ಮಾಡಿದೆನೆಂದು ಅವನಿಗೆ ಲೆಕ್ಕ ತೋರಿಸುವುದು ಸಾಧ್ಯವೇ ಇರಲಿಲ್ಲ. ಹಾಗೆಯೆ ಸುಳ್ಳು ಲೆಕ್ಕವನ್ನು ಬರೆಯುವುದೂ ನನಗೆ ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ನಾನೊಂದು ದೊಡ್ಡ ಸಮಸ್ಯೆಗೆ ಸಿಲುಕಿ ಬಿಟ್ಟಿದ್ದೆ.

ಹಾಸ್ಟೆಲ್ ಸೀಟ್ ಲಿಸ್ಟಿನಲ್ಲಿ ನನ್ನ ಹೆಸರಿಲ್ಲವಾದದ್ದು
ಜೂನ್ ತಿಂಗಳ ಕೊನೆಯ ವಾರ ಬ್ರಾಹ್ಮಣರ ಹಾಸ್ಟೆಲಿನ ಸೀಟುಗಳ ಲಿಸ್ಟ್ ಪ್ರಕಟವಾಯಿತು. ನನ್ನನ್ನು ಬಿಟ್ಟು ಉಳಿದೆಲ್ಲರೂ ಫುಲ್ ಪೇಮೆಂಟ್ ಸೀಟಿಗೆ ಅರ್ಜಿ ಹಾಕಿದ್ದರು. ಅವರಿಗೆಲ್ಲ ಸೀಟ್ ದೊರೆತಿತ್ತು.  ನನ್ನ ಫ್ರೀಶಿಪ್ ಸೀಟ್ ಅರ್ಜಿಗೆ ಮಂಜೂರಾತಿ ಸಿಕ್ಕಿರಲಿಲ್ಲ. ಅದು ನನಗೆ ದೊಡ್ಡ ಆಘಾತವನ್ನುಂಟು ಮಾಡಿತು. ಮೇಷ್ಟರ ಮನೆಯಲ್ಲಿ ನನ್ನ ಜೊತೆಯಿದ್ದ ಶ್ರೀಕಂಠ, ನೀಲಕಂಠ, ವೆಂಕಟರಮಣ, ಗಣೇಶ, ತಲವಾನೆ ಶಂಕರ ಮತ್ತು ಕೃಷ್ಣ ಜುಲೈ ಒಂದನೇ ತಾರೀಕು ಹಾಸ್ಟೆಲಿಗೆ ಸೇರಿ ಬಿಟ್ಟರು. ನನ್ನ ಪರಿಸ್ಥಿತಿ ಸ್ವಲ್ಪ ಗಂಭೀರವೇ ಆಗಿತ್ತು. ಏಕೆಂದರೆ ಮೇಷ್ಟರ ಮನೆಯಲ್ಲಿ ತಿಂಗಳಿಗೆ ೩೦ ರೂಪಾಯಿ ಕೊಟ್ಟು ನಿಲ್ಲುವುದು ನನಗೆ ಸಾಧ್ಯವಿಲ್ಲದ ವಿಚಾರವಾಗಿತ್ತು. ದತ್ತಾತ್ರೇಯ ಶಾಸ್ತ್ರಿಗಳು ಒಪ್ಪಿಕೊಂಡಂತೆ ನನಗೆ ಹಾಸ್ಟೆಲಿನಲ್ಲಿ ಫ್ರೀ ಸೀಟ್ ಕೊಡಿಸುವುದರಲ್ಲಿ ವಿಫಲರಾಗಿದ್ದರು.  ನನಗೆ ಸೀಟ್ ದೊರೆಯದ ಸಮಾಚಾರವನ್ನು ಅಣ್ಣನಿಗೆ ಮತ್ತು ತಲವಾನೆ ಶ್ರೀನಿವಾಸ್ ಅವರಿಗೆ ತಿಳಿಸಲಾಯಿತು. ನಾನು ಅವರು ಶಿವಮೊಗ್ಗೆಗೆ ಬರುವುದನ್ನೇ ಕಾಯತೊಡಗಿದೆ. ಒಟ್ಟಿನಲ್ಲಿ ನನ್ನ ಪರಿಸ್ಥಿತಿ ತುಂಬಾ ಡೋಲಾಯಮಾನವಾಗಿತ್ತು.
-------- ಮುಂದುವರಿಯುವುದು------

No comments: