Monday, February 17, 2020

ಬಾಲ್ಯ ಕಾಲದ ನೆನಪುಗಳು – ೬೨


ನಮ್ಮ ಅಂತಿಮ ಜೀವನದ ಗುರಿ!
ನಾವು ಭಾಗವಹಿಸುತ್ತಿದ್ದ ಆರ್ ಎಸ್ ಎಸ್  ಶಾಖೆಗೆ ಆಗಾಗ ಬರುತ್ತಿದ್ದ ಕೆಲವು ಹಿರಿಯ ವ್ಯಕ್ತಿಗಳು ಮತ್ತು ನಮ್ಮ ಶಾಖಾ ಪ್ರಮುಖ ಹಿರಿಯಣ್ಣ ಕೂಡಾ ನಮ್ಮಿಂದ ಒಂದು ಪ್ರಶ್ನೆಗೆ ಉತ್ತರ ಬಯಸುತ್ತಿದ್ದರು. ಅದು ನಮ್ಮ ಜೀವನದ ಅಂತಿಮ ಗುರಿ ಏನೆಂದು. ಪ್ರಾಯಶಃ ಅವರು ನಮ್ಮಿಂದ ದೇಶಭಕ್ತ ನಾಗಬೇಕೆಂಬ ಬಯಕೆಯನ್ನು ನಿರೀಕ್ಷಿಸುತ್ತಿದ್ದರೆಂದು ಅನಿಸುತ್ತದೆ. ಆದರೆ ದೇಶ ಭಕ್ತಿ ನಮಗೆ ಸಹಜವಾಗೇ ಇದ್ದರೂ ಕೂಡ ಆವೇಳೆಗೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿಬಿಟ್ಟಿದ್ದರಿಂದ ನಮಗೆ ಸ್ವಾತಂತ್ರ ಹೋರಾಟಗಾರರಿಗಿರುತ್ತಿದ್ದ ಗುರಿ ಇರಲಿಲ್ಲ. ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಫೇಲಾಗುವುದು ಮಾಮೂಲಾಗಿತ್ತು. ಹಾಗಾಗಿ ನಾನು ನನ್ನ ಮುಖ್ಯ ಗುರಿ ಪಿಯುಸಿ ಪಾಸ್ ಮಾಡುವುದು ಎಂದು ಹೇಳಿ ಬಿಟ್ಟೆ!  ಆದರೆ ಅದು ಹಿರಿಯಣ್ಣನಿಗೆ ಇಷ್ಟವಾಗಲಿಲ್ಲ. ನಮಗಿದ್ದ ಇನ್ನೊಂದು ಬಯಕೆ ಬಗ್ಗೆ ಹಿರಿಯಣ್ಣನೊಡನೆ ಹೇಳುವಂತಿರಲಿಲ್ಲ.  ವಯಸ್ಸಿನಲ್ಲಿ ನಮಗೆ ಆಗಲೇ ನಮ್ಮ ವಯಸ್ಸಿಗೆ ಸ್ವಾಭಾವಿಕವಾಗಿ ತೋರುವ  ಬಯಕೆಯೊಂದು  ಗೋಚರಿಸತೊಡಗಿತ್ತು. ನಾನಾಗಲೇ ಕೆಲವು ರೋಮ್ಯಾಂಟಿಕ್ ಹಿಂದಿ ಸಿನಿಮಾಗಳನ್ನು ನೋಡಿ ಬಿಟ್ಟಿದ್ದೆ. ಅಲ್ಲದೇ ಅಣ್ಣ ತಂದಿದ್ದ ಕೆ ಎಸ್ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಹಲವು ಗೀತೆಗಳು ಅದರಲ್ಲೂ ಮುಖ್ಯವಾಗಿ "ನವಿಲೂರಿನೊಳಗೆಲ್ಲ ನೀನೆ ಬಲು ಚಲುವೆ" ಮುಂತಾದವು ಪದೇ ಪದೇ ನೆನಪಿಗೆ ಬರತೊಡಗಿದ್ದವು. ದುರದೃಷ್ಟಕ್ಕೆ ನಮ್ಮದು ಕೇವಲ ಬಾಯ್ಸ್ ಶಾಲೆಯಾದ್ದರಿಂದ ನಮಗೆ ಯಾವ ಹುಡುಗಿಯರೂ ಕಣ್ಣಿಗೆ ಕೂಡಾ ಬೀಳುತ್ತಿರಲಿಲ್ಲ!  ಹಿರಿಯಣ್ಣ ಮಾರನೇ ವರ್ಷ ಹಾಸ್ಟೆಲಿನಲ್ಲಿ ಇರಲಿಲ್ಲ. ಅಲ್ಲಿಗೆ ನನ್ನ ಆರ್ ಎಸ್ ಎಸ್  ಸಂಬಂಧವೂ ಮುಕ್ತಾಯ ಕಂಡಿತು. 

ಹಾಸ್ಟೆಲ್ ವಿದ್ಯಾರ್ಥಿ ಸಂಘದ ಚುನಾವಣೆ
ನಮ್ಮ ಹಾಸ್ಟೆಲಿನ ಮುಂಭಾಗದಲ್ಲಿದ್ದ ಕೊಠಡಿಗಳು ಸಹ್ಯಾದ್ರಿ ಕಾಲೇಜಿನಲ್ಲಿ ಡಿಗ್ರಿ ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದವು. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಮಂದಿ ಫೇಲಾಗುತ್ತಿದ್ದ ದಿನಗಳಲ್ಲಿ ಡಿಗ್ರಿ ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ತುಂಬಾ ಗೌರವ ಕೊಡಲಾಗುತ್ತಿತ್ತು. ಮೊದಲನೇ ರೂಮಿನಲ್ಲಿ ಫೈನಲ್ ಬಿ ಓದುತ್ತಿದ್ದ ಶೃಂಗೇರಿಯ ಹೆಚ್ ಎಲ್ ಸುಬ್ರಮಣ್ಯ  ಶಿವಶಂಕರ್  ಮತ್ತು ಸೋಮನಾಥ ಅವರ ಜೊತೆಗೆ ಪಿಯುಸಿ ಓದುತ್ತಿದ್ದ ಕೂತುಗೋಡು ನಾಗಭೂಷಣ ಭಟ್ಟರ ಮೊಮ್ಮಗ ಶೃಂಗೇಶ್ವರ, ಹಾಲ್ಮುತ್ತೂರ್ ನಾಗಭೂಷಣ ಭಟ್ಟರ ಮಗ ಲಕ್ಷ್ಮೀನಾರಾಯಣ  (ಲಚ್ಚು) ಮತ್ತು ಕೃಷ್ಣಮೂರ್ತಿ ಎಂಬ ವಿಧ್ಯಾರ್ಥಿಗಳಿದ್ದರು. ಉತ್ತಮ ವಾಗ್ಮಿಯಾದ ಸುಬ್ರಮಣ್ಯ ಮುಂದೆ ಶೃಂಗೇರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಇನ್ನೊಂದು ಕೊಠಡಿಯಲ್ಲಿ ಇದ್ದ ಎಲ್ಲರೂ ಮೊದಲನೇ ಬಿ ಅಥವಾ ಬಿ ಎಸ್ ಸಿ ವಿಧ್ಯಾರ್ಥಿಗಳಾಗಿದ್ದರು.  ಅವರಲ್ಲಿ ಸಿರ್ಸಿಯ ಆರ್ ವಿ ಶಾಸ್ತ್ರಿ ಎನ್ನುವರು ಮುಂದೆ ಕೆನರಾ ಬ್ಯಾಂಕಿನ ಸಿ ಎಂ ಡಿ ಆಗಿ ನಿವೃತ್ತರಾದರೆ, ಅನಂತ ಭಟ್ಟ ಎನ್ನುವರು ಶೃಂಗೇರಿ ಹೈಸ್ಕೂಲ್ ಮೇಷ್ಟರಾದರು ಮತ್ತು ಜಿ ಎಸ್ ರಾಮಚಂದ್ರ ಎನ್ನುವವರು ಜಯಪುರ ಹೈಸ್ಕೂಲ್  ಮೇಷ್ಟರಾದರು. ನನ್ನೊಟ್ಟಿಗೆ ಬಸವಾನಿ ಶಾಲೆಯಲ್ಲಿ ಓದುತ್ತಿದ್ದ ವಿಷ್ಣುಮೂರ್ತಿ ಕೂಡ ರೂಮಿನಲ್ಲಿ ಇದ್ದ. ಗವರ್ನಮೆಂಟ್ ಹೈಸ್ಕೂಲಿನಲ್ಲಿ ೯ನೇ ಸ್ಟ್ಯಾಂಡರ್ಡ್ ಓದುತ್ತಿದ್ದ ವಿಷ್ಣುಮೂರ್ತಿಗೆ ಹಿಂದಿನ ವರ್ಷ ಹಾಸ್ಟೆಲಿನಲ್ಲಿ ಸೀಟ್ ದೊರೆತಿರಲಿಲ್ಲ. ವರ್ಷ ಕೇವಲ ಹಾಸ್ಟೆಲಿನಲ್ಲಿ ಉಳಿದುಕೊಳ್ಳುವ ಅವಕಾಶ ಕೊಡಲಾಗಿತ್ತು. ಅವನು ಶಿವಮೊಗ್ಗೆಯ ಕೆಲವು ಹೊಟೇಲುಗಳಲ್ಲಿ ವಾರದಲ್ಲಿ ಒಂದು ದಿನ ಫ್ರೀ ಊಟ ಮಾಡುವ ಅವಕಾಶ ಗಳಿಸಿಕೊಂಡಿದ್ದ.

ಹಾಸ್ಟೆಲಿನ ವಿದ್ಯಾರ್ಥಿ ಸಂಘದ ಚುನಾವಣೆ
ನಾನು ಹಾಸ್ಟೆಲ್ ಸೇರಿದ ಸ್ವಲ್ಪ ದಿನಗಳ ನಂತರ ಹಾಸ್ಟೆಲಿನ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು.  ಅಭ್ಯರ್ಥಿಗಳು ನಮ್ಮನ್ನೆಲ್ಲಾ ಉದ್ದೇಶಿಸಿ ಭಾಷಣ ಮಾಡಬೇಕಾಗಿತ್ತು. ಆಮೇಲೆ ನಾವುಗಳು ಮಾಡಿದ  ವೋಟುಗಳ ಆಧಾರದ ಮೇರೆಗೆ ಸಂಘದ ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ಸದಸ್ಯರನ್ನು ನಾವು ಆರಿಸಲಾಗುತ್ತಿತ್ತು.  ತುಂಬಾ ಅಮೋಘವಾಗಿ ಮಾತನಾಡಿದ ಹೆಚ್ ಎಲ್ ಸುಬ್ರಮಣ್ಯ  ಅವರನ್ನು ನಾವು ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಆರ್ ವಿ ಪ್ರಭಾಕರ್ ಎಂಬುವರನ್ನು ಉಪಕಾರ್ಯದರ್ಶಿ ಸ್ಥಾನಕ್ಕೆ ಆರಿಸಿದೆವು. ಪ್ರಭಾಕರ್ ಅವರು ಮುಂದೆ ಬೆಂಗಳೂರಿನ ಬಿ ಹೆಚ್ ಎಸ್ ಕಾಲೇಜಿನ ಉಪನ್ಯಾಸಕರಾಗಿ ಸೇರಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅವರು ಇಂದಿಗೂ ವಿಜಯ ಕಾಲೇಜು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವರಂತೆ.

ನಾನು ಸಹ್ಯಾದ್ರಿ ಕಾಲೇಜ್ ವಿದ್ಯಾರ್ಥಿಗಳ ಚಳುವಳಿಯಲ್ಲಿ ಭಾಗವಹಿಸಿದ್ದು
ಅಂದಿನ ಮೈಸೂರು ಸರ್ಕಾರ ಇದ್ದಕ್ಕಿದ್ದಂತೇ ಕಾಲೇಜು ಫೀ ಏರಿಕೆ ಮಾಡಿ ಬಿಟ್ಟಿತು. ಆಗ ಎಸ್ ಆರ್ ಕಂಠಿಯವರು ವಿದ್ಯಾ ಮಂತ್ರಿಗಳಾಗಿದ್ದರು. ಅದಕ್ಕೆ ಮೊದಲು ಸ್ವಲ್ಪ ಕಾಲ ಮುಖ್ಯಮಂತ್ರಿಯಾಗಿದ್ದ ಅವರು ಮುಖ್ಯ ಚುನಾವಣೆಯಲ್ಲಿ ಸೋತು ಉಪಚುನಾವಣೆಯಲ್ಲಿ ಗೆದ್ದಿದ್ದ ನಿಜಲಿಂಗಪ್ಪನವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿದ್ದರು. ಆದ್ದರಿಂದ ಅವರನ್ನು ತಮಾಷೆಗಾಗಿಭರತ ಕಂಠಿ ಎಂದು ಕರೆಯಯಲಾಗುತ್ತಿತ್ತು. ವಿದ್ಯಾರ್ಥಿಗಳು ಎಷ್ಟೇ ಪ್ರತಿಭಟಿಸಿದರೂ ಕಂಠಿಯವರು ಫೀ ಕಡಿಮೆ ಮಾಡಲು ಒಪ್ಪಲಿಲ್ಲ. ವಿದ್ಯಾರ್ಥಿ ಸಂಘಗಳು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದುವು. ನಾನು ಆಗ ಹಾಸ್ಟೆಲಿನಲ್ಲಿ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ನ್ಯೂಸ್ ಪೇಪರ್ ಓದುವ ಅಭ್ಯಾಸ ಮಾಡಿದ್ದೆ. ಅದರಲ್ಲಿ ವಿದ್ಯಾರ್ಥಿ ಚಳುವಳಿಯ ಬಗ್ಗೆ ಬರುತ್ತಿದ್ದ ಸಮಾಚಾರಗಳನ್ನು ಗಮನಿಸುತ್ತಿದ್ದೆ. ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಚಳುವಳಿಯ ನೇತೃತ್ವ ವಹಿಸಿದವರಲ್ಲಿ ಹೆಚ್ ಎಲ್ ಸುಬ್ರಮಣ್ಯ  ಕೂಡ ಇದ್ದರು. ಇನ್ನೊಬ್ಬರು ಬೀರೂರಿನ ಮಲ್ಲಿಕಾರ್ಜುನ ಪ್ರಸನ್ನ ಎಂಬ ವಿದ್ಯಾರ್ಥಿ. ಅವರು ಮುಂದೆ ಕರ್ನಾಟಕ ಸರ್ಕಾರದಲ್ಲಿ ವಿದ್ಯಾ ಮಂತ್ರಿ ಪದವಿಗೇರುವರೆಂದು ನಾವು ಖಂಡಿತವಾಗಿ ಎಣಿಸಿರಲಿಲ್ಲ. ಆದರೆ ಅದು ನಿಜವಾಯಿತು.

ಅದೇ ಸಮಯದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಶಿವಪ್ಪನಾಯಕ ಮಾರುಕಟ್ಟೆಯ ಶಂಕು ಸ್ಥಾಪನೆಗಾಗಿ ಶಿವಮೊಗ್ಗೆಗೆ ಆಗಮಿಸಿದರು. ಸಮಾರಂಭ ನಡೆಯುತ್ತಿರುವಾಗಲೇ ಹೋಗಿ ಪ್ರತಿಭಟನೆ ಮಾಡಬೇಕೆಂದು ವಿದ್ಯಾರ್ಥಿ ಸಂಘದ ತೀರ್ಮಾನವಾಯಿತು. ಅದೊಂದು ಭಾನುವಾರ ಆಗಿದ್ದರಿಂದ ನಾನು ನಮ್ಮ ಹಾಸ್ಟೆಲಿನ ಹಲವು ಕಾಲೇಜ್ ವಿದ್ಯಾರ್ಥಿಗಳೊಡನೆ ಸೇರಿಕೊಂಡು ಸಹ್ಯಾದ್ರಿ ಕಾಲೇಜು ತಲುಪಿ ಬಿಟ್ಟೆ. ಅಲ್ಲಿಂದ ಹೊರಟ ವಿದ್ಯಾರ್ಥಿಗಳ ಮೆರವಣಿಗೆ ಘೋಷಣೆ ಮಾಡುತ್ತಾ ನೆಹರು ರಸ್ತೆಯಲ್ಲಿ ನಡೆಯುತ್ತಿದ್ದ ಸಮಾರಂಭದ ಸ್ಥಳಕ್ಕೆ ಸೇರಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ನನಗಾದ ಖುಷಿ ಅಷ್ಟಿಷ್ಟಲ್ಲ. ಕೆಲವು ಘೋಷಣೆಗಳು ತುಂಬಾ ತಮಾಷೆಯಾಗಿದ್ದವು. ಉದಾಹರಣೆಗೆ: ದಿಕ್ಕಾರ! ದಿಕ್ಕಾರ! "ಭರತ ಕಂಠಿಗೆ ಧಿಕ್ಕಾರ!" ಹಾಗೂ "ಎಸ್ ಆರ್ ಕಂಠಿ! ಪಕ್ಕಾ ಕಂತ್ರಿ!"

ಸಮಾರಂಭ ನಡೆಯುತ್ತಿದ್ದಲ್ಲಿ ಪೋಲೀಸಿನವರ ಸಂಪೂರ್ಣ ಬಂದೂಬಸ್ತ್ ಇತ್ತು. ವಿದ್ಯಾರ್ಥಿ ಚಳುವಳಿಯ ನಾಯಕರಿಗೆ ಮುಖ್ಯಮಂತ್ರಿಗಳೊಡನೆ ಭೇಟಿ ಮಾಡುವ ಅವಕಾಶವನ್ನು ನಿರಾಕರಿಸಲಾಯಿತು. ಹಾಗೂ ಮುಖ್ಯಮಂತ್ರಿಯವರು ಫೀ ಕಡಿಮೆ ಮಾಡಬೇಕೆಂಬ ಮನವಿಯನ್ನೂ ತಿರಸ್ಕರಿಸಿ ಬಿಟ್ಟರಂತೆ. ಅದನ್ನು ತಿಳಿದೊಡನೆ ವಿದ್ಯಾರ್ಥಿಗಳ ಗಲಾಟೆ ವಿಪರೀತಕ್ಕೆ ಹೋಗಿ ಸಮಾರಂಭ ನಡೆಯುವತ್ತ ಘೋಷಣೆ ಮಾಡುತ್ತ ನುಗ್ಗ ತೊಡಗಿದರು. ಇನ್ನು ಕೆಲವರು ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯ ತೊಡಗಿದರು. ಆಗ ಪೋಲಿಸಿನವರು ಒಮ್ಮೆಲೇ ಲಾಠಿ ಚಾರ್ಜ್ ಮಾಡತೊಡಗಿದರು. ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾಗಿ ಓಡ ತೊಡಗಿದರು. ನನಗೆ ಗಲಾಟೆ ತುಂಬಾ ಮಜಾ ನೀಡಿ ಬಿಟ್ಟಿತು. ಇಷ್ಟೊಂದು ವರ್ಷಗಳ ನಂತರವೂ ಪ್ರಸಂಗ ನನ್ನ ಕಣ್ಣ ಮುಂದೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾನು ನನ್ನ ಅಣ್ಣನಿಗೆ ನಾನು ಕಾಲೇಜ್ ವಿದ್ಯಾರ್ಥಿಗಳ ಚಳುವಳಿಯಲ್ಲಿ ಭಾಗವಹಿಸಿ ಬಿಟ್ಟೆ ಎಂದು ಒಂದು ಪೋಸ್ಟ್ ಕಾರ್ಡಿನಲ್ಲಿ ಬರೆದು ಕಳಿಸಿಬಿಟ್ಟೆ!
-------
ಮುಂದುವರಿಯುವುದು-----

No comments: