ನನಗೆ ಹಾಸ್ಟೆಲಿನಲ್ಲಿ ಸೀಟ್ ಸಿಗದ
ವರ್ತಮಾನ ಕೇಳಿ ನನ್ನಣ್ಣ ತಲವಾನೆ ಶ್ರೀನಿವಾಸ್ ಅವರೊಡನೆ
ಶಿವಮೊಗ್ಗೆಗೆ ಧಾವಿಸಿ ಬಂದ. ನನ್ನನ್ನು ಶ್ರೀನಿವಾಸ್
ಅವರು ಹಾಸ್ಟೆಲ್ ಕಮಿಟಿಯ ಅಧ್ಯಕ್ಷರಾಗಿದ್ದ ಶ್ರೀನಿವಾಸ
ಅಯ್ಯಂಗಾರ್ ಅವರ ಬಳಿ ಕರೆದುಕೊಂಡು ಹೋದರು. ಅವರು ಮಾಡರ್ನ್ ಟಾಕೀಸ್ ಮಾಲೀಕರೂ ಆಗಿದ್ದರು.
ಅವರ ಪ್ರಕಾರ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಫ್ರೀ ಸೀಟ್ ಕೊಡುವುದು ತುಂಬಾ ಕಷ್ಟವಾಗಿತ್ತು. ಆದರೆ
ನನ್ನ ಮೆರಿಟ್ ಮತ್ತು ಬಡತನವನ್ನು ಗಮನಿಸಿ ಸೀಟ್ ಕೊಡಿಸಲು ಒಪ್ಪಿಕೊಂಡರು. ಶ್ರೀನಿವಾಸ್ ಅವರು ನನ್ನನ್ನು ಇನ್ನೊಬ್ಬ ಸಮಿತಿಯ ಸದಸ್ಯರಾದ ಡಾಕ್ಟರ್ ದತ್ತಾತ್ರಿಯವರ
ಹತ್ತಿರ ಕೂಡಾ ಕರೆದುಕೊಂಡು ಹೋದರು. ದತ್ತಾತ್ರಿಯವರು
ಶಿವಮೊಗ್ಗೆಯಲ್ಲಿ ಆಗ ಒಂದು ವಿಷಯಕ್ಕೆ ಫೇಮಸ್ ಆಗಿದ್ದರು. ಅವರ ಹತ್ತಿರ ಬೇರೆ ಯಾರಲ್ಲೂ ಇಲ್ಲದ ಹೊಚ್ಚ ಹೊಸ ಫಿಯಟ್
ಕಾರ್ ಇತ್ತು. ಅಬ್ಬಾ! ಅದರ ಬೆಲೆ ೮,೦೦೦ ರೂಪಾಯಿಗಳಂತೆ! ಅವರಿಂದಲೂ ನನಗೆ ಸೀಟ್ ಕೊಡಿಸುವ ಭರವಸೆ
ದೊರೆಯಿತು. ನಂತರ
ನಾವು ಹಾಸ್ಟೆಲಿನ ಮ್ಯಾನೇಜರ್ ಮತ್ತು ವಾರ್ಡನ್ ಅವರನ್ನೂ ಭೇಟಿ ಮಾಡಿದೆವು. ಅವರು ಸಧ್ಯದಲ್ಲೇ ಇನ್ನೊಂದು
ಸೀಟ್ ಲಿಸ್ಟ್ ಪ್ರಕಟಿಸುವುದಾಗಿ ತಿಳಿಸಿದರು.
ಕೇವಲ ಇನ್ನೊಂದು ವಾರದಲ್ಲಿ ಹಾಸ್ಟೆಲಿನ
ಎರಡನೇ ಲಿಸ್ಟ್ ಹೊರಬಿತ್ತು. ಆದರೆ ನನ್ನ ಹೆಸರು ಅದರಲ್ಲೂ ಇರಲಿಲ್ಲ. ನನಗೆ ಅಷ್ಟೊಂದು ರೆಕಮೆಂಡೇಷನ್
ಇದ್ದರೂ ಸೀಟ್ ದೊರೆಯದಿರಲು ಕಾರಣ ತಿಳಿಯಲಿಲ್ಲ. ನನ್ನ ಪರಿಸ್ಥಿತಿ ತುಂಬಾ ಶೋಚನೀಯವಾಗಿ ಕಾಣ ತೊಡಗಿತು.
ಊರಿನಲ್ಲಿದ್ದ
ಶ್ರೀನಿವಾಸ್ ಅವರಿಗೆ ಸಮಾಚಾರ ತಲುಪಿತು. ಅವರಿಗೆ ಯಾರಿಂದಲೋ ಒಂದು ವಿಷಯ ತಿಳಿಯಿತಂತೆ. ನನಗೆ ಸೀಟ್
ಕೊಡಿಸಲು ಕೇವಲ ಒಬ್ಬ ಮಹನೀಯರಿಂದ ಸಾಧ್ಯವಿತ್ತಂತೆ . ಅವರೇ ಹಾಸ್ಟೆಲಿನ ಸೆಕ್ರೆಟರಿ ರಾಮನಾರಾಯಣ ಅವಧಾನಿ.
ಶ್ರೀನಿವಾಸ್ ಅವರು ಅವರ ತಮ್ಮ ಶಂಕರನಿಗೆ ನನ್ನನ್ನು ಅವಧಾನಿಗಳ ಬಳಿ ಕರೆದುಕೊಂಡು ಹೋಗುವಂತೆ ಹೇಳಿದರಂತೆ.
ಶಂಕರ ನನ್ನನ್ನು ಬೈಸಿಕಲ್ ಮೇಲೆ ಕೂರಿಸಿಕೊಂಡು
ಎಸ್ ಪಿ ಎಂ ರೋಡಿನಲ್ಲಿದ್ದ ಅವಧಾನಿಯವರ ಬಂಗಲೆಗೆ ಕರೆದುಕೊಂಡು ಹೋದ. ವಿಶಾಲವಾದ ಮತ್ತು ಹೊಸದಾಗಿ
ಕಟ್ಟಿಸಿದ್ದ ಆ ಬಂಗಲೆಗೆ ನಾವು ಪ್ರವೇಶ ಮಾಡಿದಾಗ ಅವಧಾನಿಯವರು ದೇವರ ಕೋಣೆಯೊಳಗೆ ಪೂಜೆ ಮಾಡುತ್ತಿದ್ದರು.
ನಮ್ಮನ್ನು ಹಾಲಿನ ಸೋಫಾದ ಮೇಲೆ ಕುಳಿತಿರುವಂತೆ ಹೇಳಲಾಯಿತು. ಸುಧೀರ್ಘ ಪೂಜೆಯನ್ನು ಸುಮಾರು ಅರ್ಧ
ಗಂಟೆಯಲ್ಲಿ ಮುಗಿಸಿ ಅವಧಾನಿಯವರು ನಮ್ಮ ಮುಂದೆ ಆಗಮಿಸಿದರು. ಒಹ್!
ಎಂತಹಾ ವ್ಯಕ್ತಿತ್ವ ಅವಧಾನಿಯವರದು? ರೇಷ್ಮೆ ಮಡಿಯುಟ್ಟು ವಿಭೂತಿ ಧರಿಸಿದ್ದ ಸುಮಾರು ೪೦ ವರ್ಷ ವಯಸ್ಸಿನ
ಆಜಾನುಬಾಹು ಅವಧಾನಿಯವರ ಪರ್ಸನಾಲಿಟಿ ಒಬ್ಬ ಗುರೂಜಿ ಅಥವಾ ಮಹಾಮುನಿಯನ್ನು ಹೋಲುತ್ತಿತ್ತು. ಅವಧಾನಿಯವರು ಕೂಡಲಿಯಲ್ಲಿ ದೊಡ್ಡ ಜಮೀನ್ದಾರರಾಗಿದ್ದರಂತೆ.
ಅಲ್ಲದೇ ಅವರು ಉದಯ ಮೋಟಾರ್ ಮತ್ತು ನೆಹರು ರಸ್ತೆಯಲ್ಲಿದ್ದ ಉದಯ ಸರ್ವಿಸ್ ಸ್ಟೇಷನ್ ಪಾರ್ಟ್ನರ್ ಅಂತೆ.
ಕೈ ಮುಗಿದು ಎದ್ದು ನಿಂತ ನಮ್ಮನ್ನು
ನೋಡಿದ ಅವಧಾನಿಯವರು ತಮ್ಮ ಗಂಭೀರ ಧ್ವನಿಯಲ್ಲಿ ನಮ್ಮನ್ನು ಕುಳಿತುಕೊಳ್ಳುವಂತೆ ಹೇಳಿ ಬಂದ ಕಾರಣ ವಿಚಾರಿಸಿದರು. ಶಂಕರ ಅವರಿಗೆ ನನ್ನ ಫ್ರೀ ಸೀಟ್ ಅವಶ್ಯಕತೆಯನ್ನು ವಿವರವಾಗಿ
ಹೇಳಿದ. ನಂತರ ಅವರು ನನ್ನ ಮುಖದತ್ತ ನೋಡಿ ಮಾತನಾಡುವಂತೆ ಹೇಳಿದಾಗ ನಾನು ನನ್ನ ಪರಿಸ್ಥಿತಿಯನ್ನು
ಹೇಳುತ್ತಾ ಅಳತೊಡಗಿ ಬಿಟ್ಟೆ. ನನಗೆ ಅಳು ನಿಲ್ಲಿಸುವಂತೆ ಹೇಳಿದ ಅವಧಾನಿಯವರು ಮಾರನೇ ದಿನ
ಸಂಜೆ ಹಾಸ್ಟೆಲ್ ಆಫೀಸಿನಲ್ಲಿ ಅವರನ್ನು ಭೇಟಿಯಾಗುವಂತೆ ಹೇಳಿದರು.
ಮಾರನೇ ದಿನ ಸಂಜೆ ನಾನು ಹಾಸ್ಟೆಲಿನ
ಆಫೀಸಿಗೆ ಹೋಗಿ ಅವಧಾನಿಯವರನ್ನು ಭೇಟಿಯಾದೆ. ಅಲ್ಲಿದ್ದ ವಾರ್ಡನ್ ಮತ್ತು ಮ್ಯಾನೇಜರ್ ಅವರ ಮುಂದೆ
ಅವಧಾನಿಯವರು ಹೈಸ್ಕೂಲ್ ವಿದ್ಯಾರ್ಥಿಯಾದ ನನಗೆ ಸೀಟ್ ಕೊಡುವುದು ಅವರಿಗೆ ಎಷ್ಟು ಕಷ್ಟವಾಯಿತೆಂದು
ವಿವರಿಸಿದರು. ಮತ್ತು ನನಗೆ ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್ಸ್ ಪಡೆದು ನನ್ನ ಅರ್ಹತೆಯನ್ನು ಪ್ರೂವ್
ಮಾಡಬೇಕೆಂದು ಹೇಳಿ ಹೊರಗಡೆ ಕಾಯುವಂತೆ ಹೇಳಿದರು. ಆಮೇಲೆ ಸ್ವಲ್ಪ ಹೊತ್ತಿನಲ್ಲೇ ವಾರ್ಡನ್ ಅವರು ಒಂದು
ಚಿಕ್ಕ ಪಟ್ಟಿಯನ್ನು ತಂದು ನೋಟೀಸ್ ಬೋರ್ಡಿನಲ್ಲಿ ಹಾಕಿದರು. ಅದರಲ್ಲಿದ್ದ ಫ್ರೀ ಸೀಟ್ ಹೆಸರುಗಳಲ್ಲಿ
ಕೇವಲ ನನ್ನ ಹೆಸರು ಮಾತ್ರ ಹೈಸ್ಕೂಲ್ ವಿಧ್ಯಾರ್ಥಿಯಾದಾಗಿತ್ತು! ಪಟ್ಟಿಯಲ್ಲಿದ್ದ ನನ್ನ ಹೆಸರನ್ನು
ನೋಡಿ ನನ್ನ ಕಣ್ಣುಗಳಲ್ಲಿ ಆನಂದದ ಕಣ್ಣೀರು ಹರಿಯತೊಡಗಿತು. ಅದೊಂದು ನನ್ನ ವಿದ್ಯಾರ್ಥಿ
ಜೀವನದ ಅತ್ಯಂತ ಮಹತ್ವವಾದ ಸಂದರ್ಭವೆಂದು ಹೇಳಲೇ ಬೇಕು.
ಅವಧಾನಿಯವರ ಮನೆಗೆ ಒಮ್ಮೆ ನೀಡಿದ ಭೇಟಿ ಹೀಗೆ ಸಂಪೂರ್ಣ ಫಲಕಾರಿಯಾಯಿತು. ಅದಕ್ಕೆ ಸಂಪೂರ್ಣ ಕಾರಣ
ಕೇವಲ ತಲವಾನೆ ಶ್ರೀನಿವಾಸ್ ಎಂದು ಹೇಳಲೇ ಬೇಕು.
ಫ್ರೀ ಸೀಟಿಗಾಗಿ ನಾನು ತಿಂಗಳಿಗೆ ೬
ರೂಪಾಯಿ ಫೀ ಕೊಡಬೇಕಿತ್ತು. ಮಾರನೇ ದಿನ ನನ್ನ ಎರಡು ತಿಂಗಳ ಫೀ ಆದ ೧೨ ರೂಪಾಯಿಗಳನ್ನು ಕಟ್ಟಿ ಹಾಸ್ಟೆಲ್
ಪ್ರವೇಶ ಮಾಡಿಬಿಟ್ಟೆ. ವಿಷಯ ತಿಳಿದ ನನ್ನ ಅಣ್ಣನಿಗೆ ದೊಡ್ಡ ಸಾಧನೆ ಮಾಡಿದಂತೆ ಅನಿಸಿತು. ನನ್ನ ಶಿವಮೊಗ್ಗೆ
ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಅಣ್ಣ ದೊಡ್ಡ ಹೋರಾಟವನ್ನೇ ಮಾಡಿದ್ದ. ಆದರೆ ನಮ್ಮೂರಿನಲ್ಲಿ
ಕೆಲವರಿಗೆ ಅಣ್ಣನ ಈ ಹೋರಾಟ ಏನೂ ಇಷ್ಟವಾಗಲಿಲ್ಲವಂತೆ. ಅವರ ಪ್ರಕಾರ ಹಣದ ಅನುಕೂಲವಿಲ್ಲದ ನನ್ನಂತ
ವಿದ್ಯಾರ್ಥಿಗಳಿಗೆ ಈ ರೀತಿಯ ಗುರಿಯನ್ನಿಟ್ಟುಕೊಂಡು ಸಾಹಸ ಮಾಡುವುದು ಮೂರ್ಖತನವಾಗಿತ್ತು. ಅಣ್ಣನ ಈ ಬಗೆಯ ಹುಚ್ಚಿಗೆ ಅವರ ಪ್ರಕಾರ ಯಾವುದೇ ಅರ್ಥವಿರಲಿಲ್ಲ.
ಆದರೆ ಅಣ್ಣ ಅವರ ಟೀಕೆಗಳಿಗೆ ಸ್ವಲ್ಪವೂ ಕೇರ್ ಮಾಡಲಿಲ್ಲ.
ಮೇಷ್ಟರ ಮನೆಯಲ್ಲಿದ್ದ ಹುಡುಗರೊಡನೆ
ಅದರಲ್ಲೂ ನನ್ನ ಕ್ಲಾಸ್ ಮೇಟ್ ಗಳಾದ ವೆಂಕಟರಮಣ ಮತ್ತು ನೀಲಕಂಠನೊಡನೆ ಪುನಃ ಇರುವಂತಾದದ್ದು ನನಗೆ
ತುಂಬಾ ಸಂತೋಷವನ್ನು ಉಂಟು ಮಾಡಿತು. ಆದರೆ ಅವರೆಲ್ಲಾ ಬೇರೆ ಬೇರೆ ರೂಮುಗಳಲ್ಲಿದ್ದರು. ನನಗೆ ಆಫೀಸಿನ
ಪಕ್ಕದಲ್ಲೇ ಇದ್ದ ೬ ನೇ ನಂಬರ್ ರೂಮಿನಲ್ಲಿ ಇರುವಂತೆ ಆರ್ಡರ್ ಕೊಡಲಾಯಿತು. ಒಟ್ಟು ೬ ಮಂದಿ ಇರಬೇಕಿದ್ದ
ಆ ರೂಮಿನಲ್ಲಿ ಆಗಲೇ ಇದ್ದ ೫ ಮಂದಿ
ವಿಧ್ಯಾರ್ಥಿಗಳೆಲ್ಲಾ ಸಾಗರದ ಕಡೆಯ ಊರುಗಳಿಂದ ಬಂದವರಾಗಿದ್ದು ಅವರೆಲ್ಲಾ ಸಹ್ಯಾದ್ರಿ ಕಾಲೇಜಿನಲ್ಲಿ
ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಗಳಾಗಿದ್ದರು. ಅವರೆಲ್ಲಾ ನನ್ನನ್ನು ತುಂಬಾ ಪ್ರೀತಿಯಿಂದ ಅವರ ಚಿಕ್ಕ
ತಮ್ಮನಂತೆ ನೋಡಿಕೊಳ್ಳ ತೊಡಗಿದರು. ನನ್ನ ವಿದ್ಯಾರ್ಥಿ ಜೀವನದ ಹೊಸದೊಂದು ಅಧ್ಯಾಯ ಪ್ರಾರಂಭವಾಗಿತ್ತು.
------- ಮುಂದುವರಿಯುವುದು-----
No comments:
Post a Comment