Monday, February 10, 2020

ಬಾಲ್ಯ ಕಾಲದ ನೆನಪುಗಳು – ೬೦


ಹಾಸ್ಟೆಲಿನಲ್ಲಿ ನಮ್ಮ ದಿನಚರಿ
ಹಾಸ್ಟೆಲಿನಲ್ಲಿ ನಾವು ಮುಂಜಾನೆ ಗಂಟೆಗೆ  ಎದ್ದು ಮುಖ ತೊಳೆದು ಹಲ್ಲುಜ್ಜಿ ಬಿಸಿ ನೀರಿನ ಸ್ನಾನಕ್ಕೆ ಹೋಗಬೇಕಿತ್ತು. ನಮಗೆ ಸ್ನಾನ ಮಾಡಲು ಎಂಟು ಬಾತ್ ರೂಮುಗಳು ಮತ್ತು ನೀರು ಕಾಯಿಸಲು ಬತ್ತದ ಹೊಟ್ಟು (ಉಮಿ) ಸುಡುವ ದೊಡ್ಡ ಒಲೆಗಳೂ  ಇದ್ದವು. ಗಂಟೆಗೆ  ಸರಿಯಾಗಿ ನಾವು ಬೆಳಗಿನ ಪ್ರಾರ್ಥನೆ ಮಾಡಲು ಪ್ರೇಯರ್ ಹಾಲಿಗೆ ಹೋಗಬೇಕಿತ್ತು. ಅಲ್ಲಿ ವಾರ್ಡನ್ ಮಂಗಳಮೂರ್ತಿಯವರ ಕಣ್ಮುಂದೆ ದೇವರಿಗೆ ಪ್ರಾರ್ಥನೆ ಸಲ್ಲಿಸ ಬೇಕಿತ್ತು. ಪ್ರಾರ್ಥನೆಯ ನಂತರ ಮಂಗಳಮೂರ್ತಿಯವರು ಪ್ರತಿ ನಿತ್ಯವೂ ನಮಗೆ ಕೆಲವು ಹಿತನುಡಿಗಳನ್ನು ಹೇಳುತ್ತಿದ್ದರು. ಅವರ ಮಾತುಗಳು ಮುಗಿಯುತ್ತಿದ್ದಂತೆ ನಾವೆಲ್ಲಾ ಭೋಜನ ಶಾಲೆಗೆ ಬೆಳಗಿನ ಕಾಫಿ ಕುಡಿಯಲು ಹೋಗುತ್ತಿದ್ದೆವು.
ಒಹ್! ಎಂತಹ ಸ್ಪೆಷಲ್ ಆಗಿತ್ತು ಕಾಫಿ!
ನಮ್ಮ ಹಾಸ್ಟೆಲಿನ ಬೆಳಗಿನ ಬಿಸಿ ಬಿಸಿ ಕಾಫಿ ಖಂಡಿತವಾಗಿ ಒಂದು ಸ್ಪೆಷಲ್ ಐಟಂ ಆಗಿತ್ತೆಂದು ಹೇಳಲೇ ಬೇಕು. ಭೋಜನಶಾಲೆಯಲ್ಲಿ ನಾವು ಎರಡು ಲೈನ್ ಹಿಡಿದು ಕುಳಿತನಂತರ ಅಡಿಗೆ ಮನೆಯ ಅಸಿಸ್ಟಂಟ್ ದೇವರಾಜ ಎಂಬ ತರುಣ ನಾವು ತೆಗೆದುಕೊಂಡು ಹೋದ ಕಪ್ಪಿನಲ್ಲಿ ಕಾಫಿ ಸುರಿಯುತ್ತಿದ್ದ.  ಎರಡೂ ಸಾಲಿನಲ್ಲಿ ಮೊದಲಿಗೆ ಕುಳಿತಿದ್ದ ಹುಡುಗರಿಗೆ ಮೊದಲು ಕಾಫಿ ದೊರೆಯುತ್ತಿತ್ತು. ಪ್ರಾಯಶಃ ಅಷ್ಟೊಂದು ರುಚಿಯ ಕಾಫಿ ಶಿವಮೊಗ್ಗೆಯ ಯಾವುದೇ ಹೋಟೆಲಿನಲ್ಲಿ  ದೊರೆಯುತ್ತಿರಲಿಲ್ಲ. ಸಾಲಿನ ಮೊದಲಲ್ಲಿ ಕುಳಿತುಕೊಳ್ಳಲು ತುಂಬಾ ಪೈಪೋಟಿ ಇತ್ತು. ಅದೆಷ್ಟೆಂದರೆ ಪ್ರಾರ್ಥನೆ ಸಮಯದಲ್ಲಿ ಒಂದು ಬಾಗಿಲಿನಲ್ಲಿ ನಿಂತು ವಾರ್ಡನ್ ಅವರು ಮಾತನಾಡುತ್ತಿದ್ದರಿಂದ ಇನ್ನೊಂದು ಬಾಗಿಲಿನ ಹತ್ತಿರ ನಿಂತು ಅವರ ಮಾತು ಮುಗಿಯುತ್ತಿದ್ದನಂತೆ ಭೋಜನ ಶಾಲೆಗೆ ಹೆಚ್ಚಿನ ಹುಡುಗರು ಓಡಿ ಬಿಡುತ್ತಿದ್ದರು. ಎಷ್ಟೋ ಬಾರಿ ವಾರ್ಡನ್ ಅವರು ಮಾತಿನ ಮಧ್ಯೆ ಬ್ರೇಕ್ ಮಾಡಿದಾಗ ಕೂಡ ಭಾಷಣ ಮುಗಿಯಿತೆಂದು ಓಡತೊಡಗಿ ಪುನಃ ಹಿಂದೆ ಬರಬೇಕಾದ ಪ್ರಸಂಗವೂ ಜರುಗಿತ್ತು! ನಾನೂ ಕೂಡಾ  ಚಿಕ್ಕವನಿದ್ದರಿಂದ ದೊಡ್ಡವರ ಕಾಲುಗಳ ಸಂದಿನಲ್ಲಿ ಓಡಿ ಎರಡು ಅಥವಾ ಮೂರನೇ ಸ್ಥಾನ ಗಿಟ್ಟಿಸತೊಡಗಿದೆ! ವಿಚಿತ್ರ ಪೈಪೋಟಿಯನ್ನು ನಿಲ್ಲಿಸಲು ವಾರ್ಡನ್ ಅವರು ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾದವು.

ಬೆಳಿಗ್ಗೆ ಗಂಟೆ ೧೫ ನಿಮಿಷಕ್ಕೆ ಊಟದ ಗಂಟೆ ಹೊಡೆಯಲಾಗುತ್ತಿತ್ತು. ಊಟಕ್ಕೆ ಹೋಗುವಾಗ ಶರ್ಟ್ ಮತ್ತು ಬನಿಯನ್ ತೆಗೆದು ಒಂದು ವಸ್ತ್ರವನ್ನು ಹೊದ್ದು ಕೊಳ್ಳ ಬೇಕಿತ್ತು. ಅನ್ನ ಬಡಿಸಿದ ಮೇಲೆ ಎದ್ದು ನಿಂತು "ತ್ವಮೇವ ಮಾತಾಚ ಪಿತಾ ತ್ವಮೇವ " ಎಂಬ ಮಂತ್ರವನ್ನು ಜಪಿಸಿದ ನಂತರ ಊಟ ಪ್ರಾರಂಭಿಸ ಬೇಕಿತ್ತು. ಸಂಜೆ . ೩೦ ರಿಂದ ೫. ೩೦ ಗಂಟೆವರೆಗೆ ಯಾವುದಾದರೂ ತಿಂಡಿ ಕೊಡಲಾಗುತ್ತಿತ್ತು. ಆದರೆ ಭಾನುವಾರ ಬೆಳಿಗ್ಗೆ ಮಾತ್ರಾ ಇಡ್ಲಿ ಚಟ್ನಿ ಮತ್ತು ಸಾಂಬಾರ್ ನಾವು ತಿನ್ನುವಷ್ಟು ಬಡಿಸುತ್ತಿದ್ದರು. ರಾತ್ರಿ . ೪೫ ಗಂಟೆಗೆ ಊಟದ ಗಂಟೆ ಬಾರಿಸುತ್ತಿತ್ತು. ನಂತರ . ೧೫ ಗಂಟೆಗೆ ಗಂಟೆ ಬೆಲ್ ಬಾರಿಸುವವರೆಗೆ  ನಾವು ನಿದ್ದೆ ಮಾಡುವಂತಿರಲಿಲ್ಲ. ವೇಳೆ ನಾವು ನಮ್ಮ ವಿದ್ಯಾಭ್ಯಾಸ ಮಾಡಬೇಕಿತ್ತು. ನನಗೆ ಅದೊಂದು ದೊಡ್ಡ ಸಮಸ್ಯೆ ಆಗಿತ್ತು. ಏಕೆಂದರೆ ದಿನಗಳಲ್ಲಿ ಕರೆಂಟ್ ಯಾವ ಹಳ್ಳಿಗಳಿಗೂ ಬಂದಿರಲಿಲ್ಲ. ಆದ್ದರಿಂದ ನಾವು ಮನೆಯಲ್ಲಿ . ೧೫ ಗಂಟೆಯ ವೇಳೆಗೇ ಊಟ ಮುಗಿಸಿ ನಿದ್ದೆ ಮಾಡಿಬಿಡುತ್ತಿದ್ದೆವು!
ಮುಸುಕು ತೆಗೆಸುವ ಮಂಗಳಮೂರ್ತಿ!
 ವಾರ್ಡನ್ ಮಂಗಳಮೂರ್ತಿಯವರು ಹಾಸ್ಟೆಲಿನ ಕಾನೂನುಗಳನ್ನು ತುಂಬಾ ಶಿಸ್ತಿನಿಂದ ಜಾರಿ ಮಾಡುತ್ತಿದ್ದರು.  ಅವರು ರಾತ್ರಿ ಒಂದು ಶಾಲನ್ನು ಹೊದ್ದುಕೊಂಡು ವಾಕಿಂಗ್ ಸ್ಟಿಕ್ ಒಂದನ್ನು ಹಿಡಿದುಕೊಂಡು ಗಂಟೆಯ ವೇಳೆಗೆ ಕೆಲವು ರೂಮುಗಳನ್ನು ಸರಪ್ರೈಸ್ ಇನ್ಸ್ಪೆಕ್ಷನ್ ಮಾಡುತ್ತಿದ್ದರು. ರೂಮಿನ ಬಾಗಿಲನ್ನು ದೊಣ್ಣೆಯಿಂದ ತಳ್ಳಿ ಒಳಗೆ ಇಣುಕಿ ನೋಡುತ್ತಿದ್ದರು. ಬೆಲ್ ಆಗುವವರೆಗೆ ಬಾಗಿಲಿಗೆ ಬೋಲ್ಟ್ ಹಾಕುವಂತಿರಲಿಲ್ಲ. ಯಾರಾದರೂ ಓದುತ್ತಿಲ್ಲದೇ ಹಾಸಿಗೆಯ ಮೇಲೆ ಮಲಗಿದ್ದು ಕಂಡರೆ ದೊಣ್ಣೆಯಿಂದ ಅವರ ಮುಸುಕನ್ನು ಸರಿಸಿ ಎಚ್ಚರಿಸಿ ಬಿಡುತ್ತಿದ್ದರು. ಅವರು ಹಾಸಿಗೆ ಮಡಿಸಿಟ್ಟು ಪುನಃ ಓದ ತೊಡಗಬೇಕಿತ್ತು. ನನ್ನ ರೂಮ್ ಮೇಟ್ ಗಳಿಗೆ ನಾನು ಚಿಕ್ಕವನೆಂದು ನನ್ನ ಮೇಲೆ ತುಂಬಾ ಅನುಕಂಪವಿತ್ತು.  ಅವರು ನನಗೆ ನಿದ್ದೆ ಬರುವಾಗ ರೂಮಿನ ಒಂದು ಮೂಲೆಯಲ್ಲಿ ಮಲಗುವಂತೆ ಹೇಳುತ್ತಿದ್ದರು.  ವಾರ್ಡನ್ ಅವರ ದೊಣ್ಣೆಯ ಸದ್ದು  ಕೇಳುತ್ತಿದ್ದಂತೆ ಅವರಲ್ಲಿ ಒಬ್ಬರು ಬಾಗಿಲಿಗೆ ಅಡ್ಡವಾಗಿ ನಿಂತು ಒಂದು ಪುಸ್ತಕವನ್ನು ಹಿಡಿದು ಓದ ತೊಡಗುತ್ತಿದ್ದರು!  ಒಟ್ಟಿನಲ್ಲಿ ನಾನು ಮಲಗಿರುವುದು ವಾರ್ಡನ್ ಅವರ ಕಣ್ಣಿಗೆ ಬೀಳುತ್ತಿರಲಿಲ್ಲ.
ಅಯೋಧ್ಯಾನಾಥ ಮತ್ತು ದ್ವಾರಕಾನಾಥ
ಅಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿದ್ದ ಮಂಗಳಮೂರ್ತಿಯವರು  ಆಗಿನ ಕಾಲದಲ್ಲಿ ಅಪರೂಪವಾಗಿದ್ದ ರಾಷ್ಟ್ರಪತಿ ಪ್ರಶಸ್ತಿ ಗಳಿಸಿದ ಶಿಕ್ಷಕರಾಗಿದ್ದರು. ಅವರು ತಮ್ಮ ಹೆಸರಿನಷ್ಟೇ ಅಪರೂಪವಾದ ಹೆಸರುಗಳನ್ನು ತಮ್ಮ ಮಕ್ಕಳಿಗೂ ಇಟ್ಟಿದ್ದರು. ಅವರ ಹೆಸರು ಅಯೋಧ್ಯಾನಾಥ ಮತ್ತು ದ್ವಾರಕಾನಾಥ ಎಂದಿತ್ತು. ಮಂಗಳಮೂರ್ತಿಯವರು  ಹಾಸ್ಟೆಲಿನ ಪಕ್ಕದ ರಸ್ತೆಯಲ್ಲಿ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗೆ ಇದ್ದರು.  ಅವರು ತುಂಬಾ ನಿಷ್ಠೆಯಿಂದ ಯಾವುದೇ ಪಕ್ಷಪಾತವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರು. ಅವರ ಹೆಚ್ಚಿನ ಸಮಯ ಹಾಸ್ಟೆಲಿನಲ್ಲೇ ಕಳೆಯುತ್ತಿತ್ತು. ಅವರ ಮಕ್ಕಳಿಬ್ಬರೂ ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದರು. ಅವರಿಗೆ ಹಾಸ್ಟೆಲಿನಲ್ಲಿ ಫ್ರೀ ಸೀಟ್ ಕೊಡಲಾಗಿತ್ತು.
“ಗೂಟಧಾರಿ” ಮ್ಯಾನೇಜರ್ ಚಂದ್ರಶೇಖರ ಶಾಸ್ತ್ರಿ!
ಹಾಸ್ಟೆಲಿನ ಮ್ಯಾನೇಜರ್ ಚಂದ್ರಶೇಖರ ಶಾಸ್ತ್ರಿಯವರು ಮೈನ್ ಮಿಡ್ಲ್ ಸ್ಕೂಲಿನಲ್ಲಿ ಮೇಷ್ಟರಾಗಿದ್ದು ಪ್ರತಿ ದಿನ ಸಂಜೆ ಮತ್ತು ರಜಾ ದಿನಗಳಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿದ್ದರು. ಅವರಿಗೆ ಅದೊಂದು ಪಾರ್ಟ್ ಟೈಮ್ ಜಾಬ್ ಆಗಿತ್ತು. ಹಾಸ್ಟೆಲಿನಲ್ಲಿ ಪ್ರತಿ ಶನಿವಾರ ಸಂಜೆ ಕಾರ್ಯದರ್ಶಿಗಳಾದ ರಾಮನಾರಾಯಣ ಅವಧಾನಿಗಳ ನೇತೃತ್ವದಲ್ಲಿ ಭಜನೆ ನಡೆಯುತ್ತಿತ್ತು. ಶಾಸ್ತ್ರಿಯವರು ಆಗ ಹಾರ್ಮೋನಿಯಂ ಬಾರಿಸುತ್ತಿದ್ದರು. ಅವರ ಕಿವಿ ಸರಿಯಾಗಿ ಕೇಳಿಸದಿದ್ದರಿಂದ ಒಂದು ಹಿಯರಿಂಗ್ ಏಯ್ಡ್ ಕಿವಿಯಲ್ಲಿ ಹಾಕಿಕೊಂಡಿರುತ್ತಿದ್ದರು. ಶಾಸ್ತ್ರಿಗಳ ಕಣ್ಣುಗಳಲ್ಲಿ ಒಂದು ಬಗೆಯ ದುಷ್ಟತನ ಮಿಂಚುತಿತ್ತು. ಹುಡುಗರಿಗೆ ಅವರನ್ನು ಕಂಡರೆ ಏನೇನೂ ಗೌರವ ಇರಲಿಲ್ಲ. ಅವರು ಫುಲ್ ಪೇಮೆಂಟ್ ವಿದ್ಯಾರ್ಥಿಗಳಿಗೆ ಪಕ್ಷಪಾತ ತೋರಿಸುತ್ತಾ ಅದೇ ವೇಳೆ ಫ್ರೀಸೀಟ್ ವಿದ್ಯಾರ್ಥಿಗಳನ್ನು ತುಂಬಾ ಕೀಳಾಗಿ ನೋಡುತ್ತಿದ್ದರು. ಪ್ರತಿ ಶನಿವಾರದ ಭಜನೆಯ ನಂತರ ಶಾಸ್ತ್ರಿಗಳದ್ದು ಒಂದು ಭಾಷಣ ಇರುತ್ತಿತ್ತು. ಅದರ ಅರ್ಧಭಾಗ ಕಾರ್ಯದರ್ಶಿಗಳಾದ ರಾಮನಾರಾಯಣ ಅವಧಾನಿಗಳನ್ನು ಹೊಗಳುವುದಕ್ಕೆ ಮೀಸಲಾಗಿಡುತ್ತಿದ್ದರು.  ಆ ಹೊಗಳಿಕೆ ಅವಧಾನಿಗಳಿಗೆ ತುಂಬಾ ಮುಜುಗರವನ್ನುಂಟುಮಾಡುತ್ತಿತ್ತು.  ಶಾಸ್ತ್ರಿಗಳ ದುಷ್ಟತನ ಹಾಗೂ ಹೊಗಳು ಭಟ್ಟ ಸ್ವಭಾವ ಮತ್ತು ಅವರು ಧರಿಸಿರುತ್ತಿದ್ದ ಹಿಯರಿಂಗ್ ಏಯ್ಡ್  ಗಮನಿಸಿ ಹುಡುಗರು ಅವರಿಗೆ "ಗೂಟ" ಎಂದು ಹೆಸರಿಟ್ಟು ಬಿಟ್ಟಿದ್ದರು.
ಅಸಿಸ್ಟಂಟ್ ವಾರ್ಡನ್ ಶ್ರೀಪಾದ ಜೋಯಿಸ್
ಎಸ್ ಎಸ್ ಎಲ್ ಸಿ ಪಾಸ್  ಮಾಡಿದ್ದ ಅಸಿಸ್ಟಂಟ್ ವಾರ್ಡನ್  ಶ್ರೀಪಾದ ಜೋಯಿಸ್ ಕರ್ಣಾಟಕ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಹಾಸ್ಟೆಲಿನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಜೋಯಿಸ್ ಕಮ್ಮರಡಿ ಊರಿನವರಾಗಿದ್ದು ಕೇವಲ ಸಂಜೆ ಮಾತ್ರ ಬಂದು ಹಾಸ್ಟೆಲಿನ ಲೆಕ್ಕ ಪತ್ರಗಳನ್ನು ಬರೆಯುತ್ತಿದ್ದರು. ತರುಣರಾಗಿದ್ದ ಜೋಯಿಸ್ ಫುಲ್ ಪೇಮೆಂಟ್ ವಿದ್ಯಾರ್ಥಿಗಳೊಡನೆ ಮಾತ್ರ ಸ್ನೇಹದಿಂದಿದ್ದು ಫ್ರೀಸೀಟ್ ವಿದ್ಯಾರ್ಥಿಗಳನ್ನು ತುಂಬಾ ಕೀಳಾಗಿ ನೋಡುತ್ತಿದ್ದರು.  ಅವರಿಂದ ನಾವು ಯಾವುದೇ ಬಗೆಯ ಸಹಾನುಭೂತಿ ಅಥವಾ ಸಹಾಯ ನಿರೀಕ್ಷಿಸುವಂತಿರಲಿಲ್ಲ. ಅದಕ್ಕೆ ವಿರುದ್ಧವಾಗಿ ಅವಕಾಶ ದೊರೆತರೆ ನಮಗೆ ತೊಂದರೆ ಕೊಡಲು ಕಾಯುತ್ತಿದ್ದರು. ಒಟ್ಟಿನಲ್ಲಿ ಶಾಸ್ತ್ರೀ ಮತ್ತು ಜೋಯಿಸ್ ಅವರ ಜೋಡಿ ನಮಗೆ ಖಳನಾಯಕರ ಜೋಡಿಯಂತೆ ಕಾಣಿಸುತ್ತಿದ್ದುದರಲ್ಲಿ ಉತ್ಪ್ರೇಕ್ಷೆ ಏನೂ ಇರಲಿಲ್ಲ. ನಾನೊಂದು ಬಾರಿ ಇಬ್ಬರಿಂದಲೂ ಸಂಕಟ ಅನುಭವಿಸಿದುದರ ಬಗ್ಗೆ ಮುಂದೆ ಬರೆಯುತ್ತೇನೆ.   
------- ಮುಂದುವರಿಯುವುದು-----

No comments: