Monday, February 24, 2020

ಬಾಲ್ಯ ಕಾಲದ ನೆನಪುಗಳು – ೬೫


ನನ್ನ ಎಡಗೈ ಮೂಳೆ ಮುರಿತ ಮತ್ತು ವೃಥಾಪವಾದ
ನನ್ನ ಕ್ಲಾಸ್ ಮೇಟ್ ಗುಡ್ಡೇತೋಟದ ನೀಲಕಂಠ ನನಗೆ ಸೈಕಲ್ ಬಿಡಲು ಕಲಿಸಿದ  ಬಗ್ಗೆ ಹಿಂದೆಯೇ ಬರೆದಿದ್ದೇನೆ. ನಾನೊಬ್ಬ ಸಿಟಿ ಬಾಯ್ ಆಗಲು ಅದನ್ನು ಕಲಿಯುವುದು ತುಂಬಾ ಅವಶ್ಯವಾಗಿತ್ತು. ನಾವೊಂದಷ್ಟು ಹುಡುಗರು ಸೈಕಲ್ ಸವಾರಿ ಮಾಡುತ್ತಾ ಶಿವಮೊಗ್ಗೆಯಿಂದ ಮೈಲಿ ದೂರದಲ್ಲಿದ್ದ ಗಾಜನೂರ್ ತುಂಗಾ ಅಣೆಕಟ್ ನೋಡಲು ಹೋಗಿ ಬಂದಿದ್ದೆವು. ದಿನಗಳಲ್ಲಿ ಬಿ ಹೆಚ್ ರಸ್ತೆಯ ಕಾನ್ವೆಂಟ್ ಶಾಲೆಯ ಪಕ್ಕದಲ್ಲೇ ಎಂ ಸೈಕಲ್ ಶಾಪ್ ಎಂಬ ಬಾಡಿಗೆ ಸೈಕಲ್ ಶಾಪ್ ಇತ್ತು. ಶಾಪಿನಲ್ಲಿದ್ದ ಮುಸ್ಲಿಂ ಹುಡುಗನೊಬ್ಬ ನನಗೆ ತುಂಬಾ ಸ್ನೇಹಿತನಾಗಿ ಕೇವಲ ಹೊಸ ಸೈಕಲ್ ನನಗೆ ಬಾಡಿಗೆಗೆ ಕೊಡುತ್ತಿದ್ದ. ಅವನು ನನ್ನನ್ನು ಪ್ರೀತಿಯಿಂದ ಕಿಟನ್ ಎಂದು ಕರೆಯುತ್ತಿದ್ದ. ನನಗೂ ಏಕೋ ಹೆಸರು ಇಷ್ಟವಾಗಿ ಬಿಟ್ಟಿತು. ಪ್ರಾಯಶಃ ನಮ್ಮ ಊರಿನ ಕಿಟ್ಟನೆಂಬ ಹೆಸರಿಗಿಂತ ಪೇಟೆಯ  ಕಿಟನ್  ಎಂಬ ಹೆಸರೇ ತುಂಬಾ ಸ್ಟೈಲಿಶ್ ಎನಿಸಿರಬೇಕು!

ನನಗೆ ಸೈಕಲ್ ಸವಾರಿ ಮಾಡುವುದರಲ್ಲಿ ಆಸಕ್ತಿ ಇದ್ದರೂ ಅದಕ್ಕಾಗಿ ನಾನು ಹೆಚ್ಚು ಹಣ  ಖರ್ಚು ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೂ ಸಹ ನಾನು ಅದಕ್ಕಾಗಿ ಹೆಚ್ಚು ಹಣ  ಖರ್ಚು ಮಾಡುತ್ತಿದ್ದೇನೆಂಬ ಸುದ್ಧಿ ಹೇಗೋ ನಮ್ಮೂರಿಗೆ ತಲುಪಿ ಬಿಟ್ಟಿತು. ಅದೆಷ್ಟೆಂದರೆ ನಾನು ನನ್ನ ಎಡಗೈ ಮೂಳೆ ಮುರಿದುಕೊಂಡದ್ದೂ ಕೂಡ ಸೈಕಲ್ ಸವಾರಿ ಮಾಡುವಾಗ ಬಿದ್ದಿದ್ದರಿಂದಲೇ ಎಂದು ಎಲ್ಲರೂ ನಂಬಿ ಬಿಟ್ಟರು. ನಿಜವಾಗಿ ನಡೆದಿದ್ದಿಷ್ಟೇ. ನನಗೆ ಚಿಕ್ಕಂದಿನಿಂದಲೂ ಕಬಡ್ಡಿ ಆಡುವುದರಲ್ಲಿ ತುಂಬಾ ಆಸಕ್ತಿ ಇತ್ತು. ನಾನು ಕೆಲವು ಹುಡುಗರೊಡನೆ ಒಂದು ರಜೆಯ ದಿನ ಹಾಸ್ಟೆಲಿನ ಮುಂದೆ ಕಬಡ್ಡಿ ಆಡುತ್ತಿದ್ದೆ. ಆಗ ದೃಢಕಾಯನಾದ ಮತ್ತೂರಿನ ಹುಡುಗನೊಬ್ಬ ನನ್ನನ್ನು ತಳ್ಳಿ ಬೀಳಿಸಿ ಬಿಟ್ಟ. ಬೀಳುವಾಗ ನಾನು ಎಡಗೈ ಊರಿಬಿಟ್ಟೆ. ಕೈ ಮೂಳೆಯೊಂದು ನಾನು  ಬಾಲ್ಯದಲ್ಲಿ ಸಂಪಿಗೆ ಮರದಿಂದ ಬಿದ್ದಾಗ ಮುರಿದು ಹೋಗಿತ್ತು. ಕೊಪ್ಪ ಆಸ್ಪತ್ರೆಯ ಡಾಕ್ಟರ್ ಕಾಂತರಾಜ್ ಅವರು ಅದಕ್ಕೆ ಪಟ್ಟಿ ಕಟ್ಟಿ ರಿಪೇರಿ ಮಾಡಿದ್ದರು. ಆದರೆ ಬಾರಿ ಮತ್ತೂರಿನ ಪೈಲ್ವಾನ್ ದೂಡಿದ ರಭಸಕ್ಕೆ ಅದೇ ಮೂಳೆ ಕಾಂಪೌಂಡ್ ಫ್ರಾಕ್ಚರ್ ಆಗಿತ್ತೆಂದು ನಾನು ಮೆಗಾನ್ ಆಸ್ಪತ್ರೆಯಲ್ಲಿ X ರೇ ತೆಗೆಸಿದಾಗ ತಿಳಿಯಿತು.

ನನ್ನ ಕೈಗೆ ಪ್ಲಾಸ್ಟರ್ ಮತ್ತು ಮೆಗಾನ್ ಆಸ್ಪತ್ರೆಯ ಡಾಕ್ಟರ್ ಮತ್ತು ನರ್ಸ್ ಪ್ರಣಯದಾಟ!
ಮೆಗಾನ್ ಆಸ್ಪತ್ರೆಯಲ್ಲಿ X ರೇ ತೆಗೆದ ನಂತರ ನನ್ನನ್ನು ಕೈಗೆ ಬ್ಯಾಂಡೇಜ್ ಹಾಕಿಸಿಕೊಳ್ಳಲು ಒಬ್ಬ ತರುಣ ಡಾಕ್ಟರ್ ಬಳಿ ಕಳಿಸಿದರು. ಡಾಕ್ಟರಿಗೆ ಸಹಾಯ ಮಾಡಲು ಒಬ್ಬ ತರುಣಿ ನರ್ಸ್ ಕೂಡ ಇದ್ದಳು.  ನನಗೆ ಯಾವುದೇ ಪೈನ್ ಕಿಲ್ಲರ್ ಕೊಡದಿದ್ದರಿಂದ ಕೈ ವಿಪರೀತ ನೋಯುತ್ತಿತ್ತು. ಆದರೆ ಡಾಕ್ಟರ್ ಕಡೆ ಸ್ವಲ್ಪವೂ ಗಮನ ಕೊಡದೇ ಪ್ಲಾಸ್ಟರ್ ಹಚ್ಚುವ ನಡುವೆ ತರುಣಿ ನರ್ಸ್ ಒಡನೆ ಚೆಲ್ಲಾಟ ಮಾಡತೊಡಗಿದ. ಅವನ ಪ್ರಣಯದಾಟ ನರ್ಸಿಗೆ  ಕೂಡಾ ಇಷ್ಟವಾಗಿತ್ತೆಂದು ಅವಳ ಕಿಲಕಿಲ ನಗೆ ಸೂಚಿಸುತ್ತಿತ್ತು. ಚೆಲ್ಲಾಟ ಯಾವ ಮಟ್ಟಕ್ಕೆ ಹೋಯಿತೆಂದರೆ ಡಾಕ್ಟರ್ ಸ್ವಲ್ಪ ಪ್ಲಾಸ್ಟರ್ ಅವಳ ಕೆನ್ನೆಗೂ ಬಳಿದು ಬಿಟ್ಟ!
ಆಮೇಲೆ ಒಂದೂವರೆ ತಿಂಗಳ ನಂತರ ನನ್ನ ಕೈ ಪ್ಲಾಸ್ಟರ್ ತೆಗೆಯುವವರೆಗೆ ನಾನು ತುಂಬಾ ಕಷ್ಟ ಅನುಭವಿಸ ಬೇಕಾಯಿತು. ಸಮಯದಲ್ಲಿ ನನ್ನ ರೂಮ್ ಮೇಟ್ ಗಳು ನನಗೆ ಮಾಡಿದ ಸಹಾಯವನ್ನು ನಾನೆಂದೂ ಮರೆಯುವಂತಿಲ್ಲ. ಅಷ್ಟರಲ್ಲೇ ಅಣ್ಣನಿಂದ ನನಗೊಂದು ಪತ್ರ  ಬಂತು.  ಅದರಲ್ಲಿ ಇನ್ನು ಮುಂದಾದರೂ ನಾನು ಸೈಕಲ್ ಸವಾರಿ  ನಿಲ್ಲಿಸಿ ಕೇವಲ ಓದಿನ ಬಗ್ಗೆ ಗಮನ ಕೊಡಬೇಕೆಂದು ಸೂಚಿಸಲಾಗಿತ್ತು!

ನಾನು ಸಹ್ಯಾದ್ರಿ ಕಾಲೇಜಿನಲ್ಲಿ ಕ್ಲಾಸ್ ಅಟೆಂಡ್ ಮಾಡಿದ್ದು!
ಇನ್ನೂ ಹೈಸ್ಕೂಲ್ನಲ್ಲಿ ಮೊದಲನೇ ತರಗತಿಯಲ್ಲಿ ಓದುತ್ತಿದ್ದ ನಮಗೆ ದಿನಗಳಲ್ಲಿ ಸಹ್ಯಾದ್ರಿ ಕಾಲೇಜು ಒಂದು ದೊಡ್ಡ ಆಕರ್ಷಣೆಯಾಗಿತ್ತು. ಅದಕ್ಕೆ ಮುಖ್ಯ ಕಾರಣ ಕಾಲೇಜಿಗಿದ್ದ ಹೆಸರು ಮತ್ತು  ಅದರಲ್ಲಿದ್ದ ಶ್ರೇಷ್ಠ ಉಪನ್ಯಾಸಕರು. ಅಲ್ಲದೇ ನಮ್ಮ ಹಾಸ್ಟೆಲಿನ ಹೆಚ್ಚು ಮಂದಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವರಾಗಿದ್ದರು. ದಿನಗಳಲ್ಲಿ ಶಿವಮೊಗ್ಗೆಯಲ್ಲಿ ಸಿಟಿ ಬಸ್ಸುಗಳು ಇರಲಿಲ್ಲ. ಆದರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಪೆಷಲ್ ಬಸ್ಸುಗಳಿದ್ದುವು. ಎಷ್ಟೋ ಮಂದಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೈಕಲ್ ಮೇಲೆ ಕಾಲೇಜಿಗೆ ಹೋಗುತ್ತಿದ್ದರು.  ನಾವು ಬೆಳಿಗ್ಗೆ ಹಾಸ್ಟೆಲ್ ಬಿಲ್ಡಿಂಗ್ ಮೇಲೆ ಓಡಾಡುತ್ತ ಪಾಠ ಓದುತ್ತಿರುವಾಗ ಬಿ ಹೆಚ್ ರಸ್ತೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದವರು ಕಣ್ಣಿಗೆ ಬೀಳುತ್ತಿದ್ದರು. ನಮ್ಮ ಹಾಸ್ಟೆಲಿನ ವಿದ್ಯಾರ್ಥಿಗಳು ಕಾಲೇಜು ಹತ್ತಿರವೇ ಇದ್ದರಿಂದ ಕಾಲ್ನಡಿಗೆಯಲ್ಲೇ ಕಾಲೇಜು ತಲುಪುತ್ತಿದ್ದರು. ನಾವು ಕೂಡ ಒಂದು ದಿನ ಕಾಲೇಜಿಗೆ ಹೋಗುವ ಕನಸು ಕಾಣುತ್ತಿದ್ದೆವು.

ಲಂಕೇಶಪ್ಪ ರಾವಣಪ್ಪ ಮತ್ತು ಲ್ಯಾಂಬ್ರೆಟ್ಟಾ ಸ್ಕೂಟರ್!
ದಿನಗಳಲ್ಲಿ ಸೈಕಲ್ ಬಿಟ್ಟರೆ ಬೇರೆ ಯಾವುದೇ ದ್ವಿಚಕ್ರ ವಾಹನಗಳು ಶಿವಮೊಗ್ಗೆ ಸಿಟಿಯಲ್ಲಿ ಓಡಾಡುತ್ತಿರಲಿಲ್ಲ. ಆದರೆ ನಾವೆಂದೂ ನೋಡಿರದ ಅಥವಾ ಕೇಳಿರದ ಸ್ಕೂಟರ್ ಎಂಬ ವಾಹನವೊಂದು ಕಾಲೇಜಿನತ್ತ ಹೋಗುವುದು ನಮ್ಮ ಕಣ್ಣಿಗೆ ಬೀಳುತ್ತಿತ್ತು. ಅದು ಇಟಲಿ ದೇಶದಲ್ಲಿ ತಯಾರಾದ ಲ್ಯಾಂಬ್ರೆಟ್ಟಾ ಸ್ಕೂಟರ್ ಅಂತೆ. ಅದರ ಓನರ್ ಮುಂದೆ ಪ್ರಸಿದ್ಧ ಕನ್ನಡ ಸಾಹಿತಿಯಾದ ಪಿ ಲಂಕೇಶ್ ಅವರಂತೆ. ನಾನು ಹಿಂದೆಯೇ ಲಂಕೇಶ್ ಅವರು ನ್ಯಾಷನಲ್ ಹೈಸ್ಕೂಲಿನಲ್ಲಿ ತಲವಾನೆ ಶ್ರೀನಿವಾಸ್ ಅವರ ಕ್ಲಾಸ್ ಮೇಟ್ ಆಗಿದ್ದರೆಂದು ಬರೆದಿದ್ದೇನೆ.  ಅವರು ಆಮೇಲೆ ಎಂ ಪಾಸ್ ಮಾಡಿ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದರು ಮತ್ತು ಅವರ ಹೆಸರು ಲಂಕೇಶಪ್ಪ ಎಂದಿತ್ತು. ತುಂಬಾ ವಿವಾದಾತ್ಮಕ ವ್ಯಕ್ತಿಯಾಗಿದ್ದ ಅವರನ್ನು ಕಾಲೇಜು ವಿದ್ಯಾರ್ಥಿಗಳು ಲಂಕೇಶಪ್ಪ ರಾವಣಪ್ಪ ಎಂದು ತಮಾಷೆಗಾಗಿ ಕರೆಯುತ್ತಿದ್ದರಂತೆ.

ಶಕಾಫ್ ಬದಲಿಗೆ ಕರಿಯಪ್ಪನವರ ಉಪನ್ಯಾಸ
ಆಗ ಸಹ್ಯಾದ್ರಿ ಕಾಲೇಜಿನಲ್ಲಿ ಶಕಾಫ್ ಎಂಬ ಇಂಗ್ಲಿಷ್ ಉಪನ್ಯಾಸಕರು ತುಂಬಾ ಪ್ರಸಿದ್ಧಿ ಪಡೆದಿದ್ದರು. ಆಗಿನ ಪಿ ಯು ಸಿ ತರಗತಿಯ ಇಂಗ್ಲಿಷ್ ಪುಸ್ತಕದಲ್ಲಿ ರವೀಂದ್ರನಾಥ ಟಾಗೋರ್ ಅವರು ಬರೆದ ಕಾಬೂಲಿವಾಲ ಎಂಬ ಪ್ರಸಿದ್ಧ ಕಥೆ ಸೇರಿಸಲ್ಪಟ್ಟಿತ್ತು. ಕಥೆಯನ್ನು ಶಕಾಫ್ ಅವರು ಪಾಠ ಮಾಡುವಾಗ ತರಗತಿಯ ವಿಧ್ಯಾರ್ಥಿಗಳಲ್ಲದೇ ಬೇರೆ ವಿದ್ಯಾರ್ಥಿಗಳೂ ಅಲ್ಲಿ ಸೇರಿ ನಿಂತುಕೊಂಡೇ ಪಾಠ ಕೇಳುತ್ತಿದ್ದರಂತೆ. ಕಥೆಯಲ್ಲಿ ಬರುವ ಮಿನಿ ಎಂಬ ಬಂಗಾಳಿ ಹುಡುಗಿಯ ಪಾತ್ರವನ್ನು ಚಿತ್ರಿಸಿ ಎಂಬ ಪ್ರಶ್ನೆ ಪಿ ಯು ಸಿ ಪರೀಕ್ಷೆಯಲ್ಲಿ ಖಂಡಿತವಾಗಿ ಇದ್ದೇ ಇರುವುದೆಂದು ಹೇಳಲಾಗುತ್ತಿತ್ತು.
ನನಗೆ ಶಕಾಫ್ ಅವರ ಉಪನ್ಯಾಸವನ್ನು ಕೇಳಲೇ ಬೇಕೆಂಬ ಅಸೆ ತುಂಬಾ ಇತ್ತು. ನನ್ನ ಕೋರಿಕೆಯಂತೆ ಹಿಂದೆ ನೇ ನಂಬರ್ ರೂಮಿನಲ್ಲಿ ನನ್ನ ರೂಮ್ ಮೇಟ್ ಆಗಿದ್ದ ಕೆಲವರು ಒಂದು ದಿನ ನನ್ನನ್ನು ಕಾಲೇಜಿಗೆ ಕರೆದುಕೊಂಡು ಹೋದರು. ಆದರೆ ದಿನ ಶಕಾಫ್ ಅವರ ಕ್ಲಾಸ್ ರೂಮ್ ಹೌಸ್ ಫುಲ್ ಆಗಿದ್ದರಿಂದ ನನಗೆ ಪ್ರವೇಶಿಸಲಾಗಲೇ ಇಲ್ಲ. ಬದಲಿಗೆ ನನಗೆ ಪ್ರಸಿದ್ಧ ಭೌತ ಶಾಸ್ತ್ರ ಪ್ರಾಧ್ಯಾಪಕರಾದ ಕರಿಯಪ್ಪ ಎಂಬುವರ ಕ್ಲಾಸ್ ಒಳಗೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ಕರಿಯಪ್ಪನವರು ಉಷ್ಣ (Heat) ಎಂಬ ಸಬ್ಜೆಕ್ಟ್ ಮೇಲೆ ತುಂಬಾ ಚೆನ್ನಾಗಿ ಉಪನ್ಯಾಸ ನೀಡಿದರು. ನಾನು ತೆಗೆದುಕೊಂಡು ಹೋದ ನೋಟ್ ಬುಕ್ಕಿನಲ್ಲಿ ನೋಟ್ಸ್ ಕೂಡ ಬರೆದುಕೊಂಡು ಬಂದು ಬಿಟ್ಟೆ. ಕ್ಲಾಸ್ ನಲ್ಲಿ ಎಲ್ಲಾ ಡೆಸ್ಕ್ ಗಳು ಭರ್ತಿಯಾಗಿದ್ದರಿಂದ ನಾನೊಬ್ಬ ಹೈಸ್ಕೂಲ್ ವಿದ್ಯಾರ್ಥಿ ಎನ್ನುವ ವಿಷಯ ಕರಿಯಪ್ಪನವರ  ಗಮನಕ್ಕೆ ಬರಲೇ ಇಲ್ಲ!

ತುಂಗಾ ನದಿಯಲ್ಲಿ ಮುಳುಗಿದ್ದ ನನ್ನನ್ನು ಲಚ್ಚು ರಕ್ಷಿಸಿದ್ದು
ಪವಿತ್ರ ತುಂಗಾ ನದಿ ನಮ್ಮ ಹಾಸ್ಟೆಲಿನ ತುಂಬಾ ಹತ್ತಿರದಲ್ಲಿ ಹರಿಯುತ್ತಿತ್ತು. ಬೇಸಿಗೆ ಕಾಲ ಬರುವ ವೇಳೆ ಹಾಸ್ಟೆಲ್ ವಾರ್ಡನ್ ಅವರು ನಮಗೆ ಬೆಳಿಗ್ಗೆ ನದಿಗೆ ಹೋಗಿ ಸ್ನಾನ ಮಾಡಿ ಬರಲು ಅನುಮತಿ ನೀಡಿದರು. ನನ್ನ ರೂಮ್ ಮೇಟ್ ಲಕ್ಷ್ಮೀನಾರಾಯಣ (ಲಚ್ಚು)  ಒಬ್ಬ ಉತ್ತಮ ಈಜುಗಾರನಾಗಿದ್ದ. ನನಗೂ ಈಜು ಕಲಿಯುವುದರಲ್ಲಿ ತುಂಬಾ ಆಸಕ್ತಿ ಇತ್ತು. ಲಚ್ಚು ನನಗೆ ಈಜು ಕಲಿಸಲು ಒಪ್ಪಿಕೊಂಡ. ನಾವು ತುಂಗಾ ಸೇತುವೆಯ ಹತ್ತಿರ ನದಿಯ ಮಧ್ಯ ಭಾಗದಲ್ಲಿದ್ದ ಬಂಡೆಯೊಂದರ ಹತ್ತಿರ ಸ್ನಾನ ಮಾಡತೊಡಗಿದೆವು. ಲಚ್ಚು ನನಗೆ ಬಂಡೆಯಿಂದ ಜಿಗಿದು ಹಾರಿ ನದಿಯಲ್ಲಿ ಈಜಾಡುವುದನ್ನು ಕಲಿಸ ತೊಡಗಿದ. ನಾನು ನಿಧಾನವಾಗಿ ಈಜು ಕಲಿಯ ತೊಡಗಿದೆ.

ಒಂದು ಬೆಳಿಗ್ಗೆ ನಾನು ಮತ್ತು ಲಚ್ಚು ಇಬ್ಬರೇ ನದಿಯಲ್ಲಿ ಈಜಾಡುತ್ತಿದ್ದೆವು. ನಾನು ಬಂಡೆಯಿಂದ ಜಿಗಿದು ಈಜುತ್ತಾ ನದಿಯ ದಂಡೆಯ ಕಡೆ ಬರುತ್ತಿದ್ದೆ. ಹಾಗೆ ಬರುವ ಒಂದು ಭಾಗದಲ್ಲಿ ನದಿ ತುಂಬಾ ಆಳವಾಗಿರುವುದೆಂದು ನನಗೆ ಗೊತ್ತಿತ್ತು. ಆದರೆ ಅಲ್ಲಿ ಸೆಳವು ಏನೂ ಇರಲಿಲ್ಲ. ತುಂಬು ಉತ್ಸಹದಿಂದಿದ್ದ ನಾನು ದಂಡೆಯಿಂದ ವಾಪಾಸ್ ಬಂಡೆಯ ಕಡೆಗೆ ಈಜುತ್ತಾ ಹೋದೆ. ಆದರೆ ನದಿಯ ಆಳದ ಭಾಗಕ್ಕೆ ಬರುತ್ತಿರುವ ಹಾಗೆಯೇ ನನ್ನ ಕೈ ಕಾಲುಗಳು ಸೋತುಹೋದದ್ದು ನನಗರಿವಾಯಿತು. ನಿರ್ವಾಹವಿಲ್ಲದೇ ನಾನು ನದಿಯ ತಳದಲ್ಲಿ ಕಾಲೂರಲು ಪ್ರಯತ್ನಿಸಿದೆ. ಆದರೆ ಅತ್ಯಂತ ಆಳವಿದ್ದ ಜಾಗದಲ್ಲಿ ನಾನು ಮುಳುಗಿ ಹೋಗತೊಡಗಿದೆ. ಇನ್ನೇನು, ನನ್ನ ಕಥೆಯೇ ಮುಗಿದು ಹೋಯಿತೆಂದು ನನಗನಿಸಿತು.

ಜೀವ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ಮಾಡುತ್ತಾ ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ನಾನು ಮೇಲೆ ಚಿಮ್ಮಿಬಂಡೆಯ ಮೇಲಿದ್ದ ಲಚ್ಚುವಿನತ್ತ ನನ್ನನ್ನು ಕಾಪಾಡುವಂತೆ ಕೈ ಬೀಸತೊಡಗಿದೆ. ನನ್ನ ಅದೃಷ್ಟಕ್ಕೆ ಲಚ್ಚು ನನ್ನ ಮೊರೆಯನ್ನು ಕೇಳಿ ನೀರಿಗೆ ಹಾರಿ ನನ್ನತ್ತ ಈಜಿ ಬರತೊಡಗಿದ. ಆದರೆ ಅಷ್ಟರಲ್ಲಿ ನಾನು ಸೋತು ನದಿಯಲ್ಲಿ ಮುಳುಗಿ ಹೋದೆ. ಆದರೆ ಲಚ್ಚುವೇನು ಸಾಮಾನ್ಯ ಈಜುಗಾರನಾಗಿರಲಿಲ್ಲ. ಕೆಲವೇ ಸೆಕೆಂಡುಗಳಲ್ಲಿ ನಾನು ಮುಳುಗಿದ ಜಾಗಕ್ಕೆ ಬಂದ ಲಚ್ಚು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ನನ್ನ ಕೈ ಹಿಡಿದು ಮೇಲೆತ್ತಿ ಒಂದು ಕೈಯಲ್ಲಿ ನನ್ನನ್ನು ಎಳೆಯುತ್ತಾ ಮತ್ತು ಇನ್ನೊಂದು ಕೈಯಲ್ಲಿ ಈಜುತ್ತಾ ದಡ ಸೇರಿಸಿ ಬಿಟ್ಟ. ನಾನಾಗಲೇ ಒಂದಿಷ್ಟು ನೀರು ಕುಡಿದು ಬಿಟ್ಟಿದ್ದೆ. ಅಲ್ಲಿಗೆ ಆ ವೇಳೆಗೆ ಬಂದ ಇತರರ ಸಹಾಯದಿಂದ ನನ್ನ ದೇಹದಲ್ಲಿ ಸೇರಿದ್ದ ನೀರನ್ನು ಹೊರತೆಗೆಯಲಾಯಿತು. ಲಚ್ಚು ನನಗೆ ಪುನರ್ಜನ್ಮವನ್ನೇ ನೀಡಿದ್ದ ಎಂದರೆ ತಪ್ಪಾಗಲಾರದು. ಸಾಗರದ ಶ್ರೀಮಂತ ಮನೆತನದ ಲಚ್ಚು ಇಂದು ಎಲ್ಲಿರುವನೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಆ ದಿನ ಲಚ್ಚು ನನ್ನನ್ನು ನೀರಿನಿಂದ ಮೇಲೆತ್ತದಿದ್ದರೆ ಇಂದು ನನ್ನ ಫೇಸ್ಬುಕ್ ಓದುಗರಿಗೆಬಾಲ್ಯ ಕಾಲದ ನೆನಪುಗಳನ್ನು” ಓದುವ ಅವಕಾಶವೇ ಇರುತ್ತಿರಲಿಲ್ಲ!
------- ಮುಂದುವರಿಯುವುದು-----

No comments: