ನ್ಯಾಷನಲ್ ಹೈಸ್ಕೂಲ್ ಕೇವಲ ಹುಡುಗರ
ಶಾಲೆಯಾಗಿತ್ತು. ಏಕೆಂದರೆ ಶಿವಮೊಗ್ಗೆಯ ಪೋಸ್ಟ್ ಆಫೀಸಿನ ಹತ್ತಿರ ಪ್ರತ್ಯೇಕ ನ್ಯಾಷನಲ್ ಗರ್ಲ್ಸ್
ಹೈಸ್ಕೂಲ್ ಇತ್ತು. ಮೇಷ್ಟರ ಮಗಳು ಗೀತಾ ಆ ಶಾಲೆಯಲ್ಲೇ ಓದುತ್ತಿದ್ದಳು. ನಮ್ಮ ಶಾಲೆಯ ಅಸಿಸ್ಟಂಟ್
ಹೆಡ್ ಮಾಸ್ಟರ್ ಆಗಿದ್ದ ಎಸ್ ಎನ್ ಶಿವರಾಮ ಶಾಸ್ತ್ರಿಯವರು ಆ ಶಾಲೆಗೆ ಹೆಡ್ ಮಾಸ್ಟರ್ ಆಗಿ ವರ್ಗ ಆದುದರಿಂದ
ನಾವು ಒಬ್ಬ ಉತ್ತಮ ಮೇಷ್ಟರನ್ನು ಕಳೆದುಕೊಂಡೆವು. ಅವರ ಮಗ ಕಾಶಿನಾಥ ನಮ್ಮ ಕ್ಲಾಸ್ ಮೇಟ್ ಆಗಿದ್ದ.
ಇನ್ನು ಶಿವಮೊಗ್ಗೆಯ ಪ್ರಖ್ಯಾತ ಜವಳಿ ಅಂಗಡಿ ಖಂಡೇರಾವ್ ಅಂಡ್ ಸನ್ಸ್ ಮಾಲೀಕರ ಮಗ ಮಹೇಶಚಂದ್ರ ಟಿಕಾರೆ, ದುರ್ಗಾ ಭವನ ಹೋಟೆಲ್
ಮತ್ತು ಲಾಜ್ ಮಾಲೀಕರ ಮಗ ಮೋಹನ ಭಟ್ಟ, ಮತ್ತು ತುಂಗ ಭದ್ರಾ ಮೋಟಾರ್ ಮಾಲೀಕರ ಮಗ ಓಂಕಾರಪ್ಪ ಕೂಡ ನಮ್ಮ
ಕ್ಲಾಸ್ ಮೇಟ್ ಆಗಿದ್ದರು.
ಅರುಣಾಚಲಂ ಮೇಷ್ಟರ ದುರ್ಗಿಗುಡಿಯ ಮನೆ
ಅವರ ಸ್ವಂತದ್ದಾಗಿತ್ತು. ಅದಕ್ಕೆ ಸೇರಿದಂತೆ ಅವರ ತಮ್ಮ ಪದ್ಮನಾಭ ಅವರ ಮನೆಯೂ ಇತ್ತು. ಮೇಷ್ಟರ ಪಕ್ಕದ
ಮನೆ ಕವಿಲ್ಗೊಡಿಗೆ ಸಾಹುಕಾರ ಸುಬ್ಬರಾಯರಿಗೆ ಸೇರಿತ್ತು.
ಸ್ವಲ್ಪ ಕಾಲದ ನಂತರ ಹೊಕ್ಕಳಿಕೆ ತಿಮ್ಮಪ್ಪಯ್ಯನವರ ತಮ್ಮ (ಅಕ್ಕಿ ಬತ್ತ ವ್ಯಾಪಾರಿ) ವಾಸುದೇವಯ್ಯನವರು
ಶಿವಮೊಗ್ಗೆಗೆ ಬಂದು ಅದೇ ಮನೆಯಲ್ಲಿ ತುಂಬಾ ವರ್ಷಗಳು ಬಾಡಿಗೆಗೆ ಇದ್ದರು. ಅರುಣಾಚಲಂ ಮೇಷ್ಟರ ದೊಡ್ಡ
ಅಣ್ಣ ನ್ಯಾಷನಲ್ ಮಿಡ್ಲ್ ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದರು. ಇನ್ನೊಬ್ಬ ಸಹೋದರ (ಪ್ರಾಯಶಃ) ರಾಜಣ್ಣ
ಎನ್ನುವರು ದುರ್ಗಿಗುಡಿಯ ಇನ್ನೊಂದು ಮನೆಯಲ್ಲಿ ವಾಸ ಮಾಡುತ್ತಿದ್ದರು. ಮೇಷ್ಟರ ಪತ್ನಿ ರಾಜಮ್ಮನವರ
ತವರುಮನೆ ಮೈಸೂರಿನ ಹತ್ತಿರದ ಬೆಟ್ಟದಪುರ ಇರಬೇಕು. ಅವರ ಅಣ್ಣ ಚಂದ್ರಶೇಖರ್ ಮಣಿಪಾಲ್ ಇಂಜಿನಿಯರಿಂಗ್
ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಆಗ ಅಲ್ಲಿದ್ದ ಇನ್ನೊಬ್ಬ ಪ್ರೊಫೆಸರ್ ನಮ್ಮ ಹಳೇಮನೆ ಶ್ರೀಕಂಠಯ್ಯನವರ
ಅಣ್ಣ ಶಿವಸ್ವಾಮಿಯವರು. ಮೇಷ್ಟರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಯಾಕ್ಟಿವ್ ಸದಸ್ಯರಾಗಿದ್ದರು.
ಪ್ರತಿ ಬುಧವಾರ ಸಂಜೆ ಗವರ್ನಮೆಂಟ್ ಹೈಸ್ಕೂಲ್ ಪಕ್ಕದಲ್ಲಿದ್ದ ಸ್ಕೌಟ್ಸ್ ಭವನದಲ್ಲಿ ಅವರನ್ನು ಕಾಣಬಹುದಿತ್ತು.
ಶಾಸ್ತ್ರೀಸ್
ಟ್ಯುಟೋರಿಯಲ್ಸ್
ಅರುಣಾಚಲಂ ಮೇಷ್ಟರ ಮನೆಯ ಮುಂದೆ ಒಂದು
ದೊಡ್ಡ ಬೋರ್ಡ್ ಕಾಣಿಸುತ್ತಿತ್ತು. ಅದರ ಮೇಲೆ ಶಾಸ್ತ್ರೀಸ್ ಟ್ಯುಟೋರಿಯಲ್ಸ್ ಎಂದು ಬರೆದಿತ್ತು. ಮೇಷ್ಟರ
ಮನೆಯ ಒಳಗಿದ್ದ ಒಂದು ದೊಡ್ಡ ಹಾಲಿನಲ್ಲಿ ಕೃಷ್ಣಶಾಸ್ತ್ರೀ ಎಂಬ ನಿವೃತ್ತ ಹೈಸ್ಕೂಲ್ ಹೆಡ್ ಮಾಸ್ಟರ್
ಅವರು ಎಸ್ ಎಸ್ ಎಲ್ ಸಿ ಫೇಲಾದ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುತ್ತಿದ್ದರು. ಶಾಸ್ತ್ರಿಗಳ ಕ್ವಾಲಿಫಿಕೇಷನ್
ಎಂ ಎ, ಬಿ ಟಿ. ಶಾಸ್ತ್ರಿಗಳು ಪಾಠ ಹೇಳುವುದರಲ್ಲಿ ಎಷ್ಟು ಫೇಮಸ್ ಎಂದರೆ ಮೇಷ್ಟರ ಮನೆಯ ಹಾಲ್
ಹೌಸ್
ಫುಲ್ ಆಗಿ ಬಿಡುತ್ತಿತ್ತು. ಹಾಗೆಯೇ ಆ ವಿದ್ಯಾರ್ಥಿಗಳ ಸಂಖ್ಯೆ ಆ ಕಾಲದಲ್ಲಿ ಎಷ್ಟೊಂದು ಮಂದಿ ಎಸ್
ಎಸ್ ಎಲ್ ಸಿ ಫೇಲಾಗಿ ಸಪ್ಲಿಮೆಂಟರಿ ಪರೀಕ್ಷೆ ಕಟ್ಟುತ್ತಿದ್ದರೆಂದು ಸೂಚಿಸುತ್ತಿತ್ತು.
ಆರ್
ಎಸ್ ಎಸ್ ಮತ್ತು ಬುರುಡೆಗೆ ದೊಣ್ಣೆ ಪೆಟ್ಟು!
ಮೇಷ್ಟರ ಮನೆಯ ಮುಂದೆ ಒಂದು ವಿಶಾಲವಾದ
ಆಟದ ಮೈದಾನ ಇತ್ತು. ಆ ಮೈದಾನದಲ್ಲಿ ನಾನೆಂದೂ ಕೇಳದ ಆರ್ ಎಸ್ ಎಸ್ ಎಂಬ ಸಂಸ್ಥೆಗೆ ಸೇರಿದ ವ್ಯಕ್ತಿಗಳು ಚೆಡ್ಡಿ ಧರಿಸಿ ಪ್ರತಿ
ದಿನ ಕವಾಯತು ಮಾಡುತ್ತಿದ್ದರು. ತುಂಬಾ ಶಿಸ್ತಿನಿಂದ ನಡೆಯುತ್ತಿದ್ದ ಕವಾಯತು ನೋಡಲು ತುಂಬಾ ಆಕರ್ಷಕವಾಗಿರುತ್ತಿತ್ತು.
ಆದರೆ ಆ ತಂಡಕ್ಕೆ ಹಿಂದೊಂದು ಮನಸ್ತಾಪವಾಗುವ ಪ್ರಸಂಗ ಮೇಷ್ಟರೊಡನೆ ಜರುಗಿತ್ತಂತೆ. ಆದುದ್ದಿಷ್ಟೇ.
ತಂಡದವರು ದೊಣ್ಣೆಯೊಂದನ್ನು ಶಿಸ್ತಿನಿಂದ “ರೋಂಯ್ ರೋಂಯ್” ಎಂದು ತಿರುಗಿಸುವಾಗ ಅದನ್ನು ನೋಡುತ್ತಿದ್ದ
ಮೇಷ್ಟರ ಮಗನ ತಲೆಗೆ ಅದು ಬಡಿದು ಬಿಟ್ಟಿತಂತೆ!
ಹಳ್ಳಿ
ಗುಗ್ಗುವಿನಿಂದ ಪೇಟೆ ಹುಡುಗನಾಗುವ ನನ್ನ ಪ್ರಯತ್ನ!
ನನ್ನ ಅಣ್ಣ ನನ್ನನ್ನು ಶಿವಮೊಗ್ಗೆಗೆ
ಓದಲು ಕಳಿಸುವ ಸಾಹಸ ಮಾಡುವ ಮುನ್ನ ನನ್ನ ಗುರಿ ಏನಿರಬೇಕೆಂದು ಸ್ಪಷ್ಟ ಮಾಡಿ ಬಿಟ್ಟಿದ್ದ. ಅದರಲ್ಲಿ
ಮುಖ್ಯವಾದುವುಗಳೆಂದರೆ ತರಗತಿಯಲ್ಲಿ ಮೊದಲ ಸ್ಥಾನ ಪಡೆಯುವುದು, ಶುದ್ಧ ಪೇಟೆ ಹುಡುಗನಾಗಿ ಪರಿವರ್ತಿತನಾಗುವುದು
ಮತ್ತು ಶುದ್ಧ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪಟಪಟನೆ ಮಾತನಾಡುವುದು. ನಾನು ಈ ಗುರಿಗಳನ್ನು ಸಾಧಿಸುವುದರಲ್ಲಿ ನನ್ನ ಇಬ್ಬರು ಕ್ಲಾಸ್
ಮೇಟ್ ಗಳು ಮಾಡಿದ ಸಹಾಯವನ್ನು ನಾನೆಂದೂ ಮರೆಯುವಂತಿಲ್ಲ.
ನನ್ನ
ಕ್ಲಾಸ್ ಮೇಟ್ಸ್ ನೀಲಕಂಠ ಮತ್ತು ವೆಂಕಟರಮಣ
ನೀಲಕಂಠ ನನ್ನ ಹೊಕ್ಕಳಿಕೆ ಭಾವನವರ
ತಮ್ಮ ನಾಗೇಶಯ್ಯನ ಹೆಂಡತಿಯಾದ ಸಿಂಗಾರಿಯ ತಮ್ಮಂದಿರಲ್ಲಿ ಒಬ್ಬನಾಗಿದ್ದ. ಸಿಂಗಾರಿಯಲ್ಲಿ ನನಗೆ ಅಕ್ಕನಷ್ಟೇ
ಸಲಿಗೆ ಇತ್ತು. ನೀಲಕಂಠ ತನ್ನ ಅಣ್ಣ ಶ್ರೀಕಂಠ ಮತ್ತು ತಮ್ಮ ಸದಾಶಿವನೊಡನೆ ಮೇಷ್ಟರ ಮನೆಯಲ್ಲೇ ಇದ್ದ.
ಅವರು ತುಂಬಾ ಶ್ರೀಮಂತ ಜಮೀನ್ದಾರರಾಗಿದ್ದ ಗುಡ್ಡೇತೋಟ ಕೃಷ್ಣರಾಯರ ಮಕ್ಕಳು. ಕೃಷ್ಣರಾಯರ ಮೊದಲ ಮಗ
ಚಂದ್ರಶೇಖರ್ ಅವರು ಗ್ರಾಮ ಪಂಚಾಯತಿ ಛೇರ್ಮನ್ ಆಗಿದ್ದರೆ ಎರಡನೇ ಮಗ ಶಂಕರರಾವ್ ಬಿ ಎಸ್ ಸಿ ಗ್ರಾಜುಯೇಷನ್ ಮುಗಿಸಿ ಬಸರೀಕಟ್ಟೆ ಶಾಲೆಯಲ್ಲಿ ಮೇಷ್ಟರಾಗಿದ್ದರು.
ಆ ಕಾಲದ ಮಲೆನಾಡಿನಲ್ಲಿ ಟ್ರ್ಯಾಕ್ಟರ್ ಹೆಸರೇ ಕೇಳದಿದ್ದ ನಮಗೆ ಕೃಷ್ಣರಾಯರು ರಶಿಯಾ ದೇಶದ ಟ್ರ್ಯಾಕ್ಟರ್
ಒಂದನ್ನು ಹತ್ತು ಸಾವಿರ ರೂಪಾಯಿ! ಕೊಟ್ಟು ಕೊಂಡರೆಂಬುದು ಬಹು ದೊಡ್ಡ ಸಮಾಚಾರವಾಗಿ ಬಿಟ್ಟಿತ್ತು.
ವೆಂಕಟರಮಣ ನಮ್ಮೂರಿನಿಂದ ಮೂರು ಮೈಲಿ
ದೂರದಲ್ಲಿದ್ದ ಅಗಳಗಂಡಿ ಗ್ರಾಮದ ನವರೇಕಲ್ಲು ಕೃಷ್ಣದೇವರಯ್ಯನವರ ಮಗ. ನೀಲಕಂಠ ಮತ್ತು ವೆಂಕಟರಮಣ ಇಬ್ಬರೂ ಕೂಡ ನ್ಯಾಷನಲ್ ಮಿಡ್ಲ್ ಸ್ಕೂಲಿನಲ್ಲಿ
ಎಂಟನೇ ತರಗತಿ ಓದಿದ್ದರಿಂದ ಅವರಿಗೆ ಶಿವಮೊಗ್ಗೆ ಒಂದು ವರ್ಷ ಹಳೆಯದಾಗಿ ಬಿಟ್ಟಿತ್ತು.
ಅವರಾಗಲೇ ಪಕ್ಕಾ ಪೇಟೆಯ ಹುಡುಗರಾಗಿ
ಬಿಟ್ಟಿದ್ದರು. ನಾನು ಪೇಟೆ ಹುಡುಗನಾಗಲು ಮೊಟ್ಟ ಮೊದಲು ಮಾಡಬೇಕಾದ್ದು ಸೈಕಲ್ ಸವಾರಿ ಮಾಡುವ ಅಭ್ಯಾಸವಾಗಿತ್ತು. ನೀಲಕಂಠ ನನ್ನನ್ನು ನೆಹರು ಮೈದಾನದ ಹತ್ತಿರವಿದ್ದ ಬಯಲೊಂದಕ್ಕೆ
ಕರೆದುಕೊಂಡು ಹೋಗಿ ಬಾಡಿಗೆ ಸೈಕಲ್ ಒಂದರ ಮೂಲಕ ಕೆಲವು ದಿನಗಳಲ್ಲೇ ಸೈಕಲ್ ಸವಾರಿ ಮಾಡುವುದನ್ನು ಕಷ್ಟಪಟ್ಟು
ಕಲಿಸಿ ಬಿಟ್ಟ.
ಗೋಪಿ ಹೋಟೆಲಿನ
ಪ್ಲೈನ್ ದೋಸೆ ಮತ್ತು ಫ್ರೂಟ್ ಸಲಾಡ್ !
----ಮುಂದುವರಿಯುವುದು ---
No comments:
Post a Comment