Monday, February 3, 2020

ಬಾಲ್ಯ ಕಾಲದ ನೆನಪುಗಳು – ೫೬


ಬಾಲ್ಯ ಕಾಲದ ನೆನಪುಗಳು – ೫೬

ಎಸ್ ಆರ್ ನಾಗಪ್ಪ ಶೆಟ್ಟಿ ಎಂಬ ಸ್ವಾತಂತ್ರ ಹೋರಾಟಗಾರರು ಶಿವಮೊಗ್ಗೆಯ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕರಾಗಿದ್ದರು.  ಅವರು ಆಮೇಲೆ ಶಿವಮೊಗ್ಗ ಕ್ಷೇತ್ರದ ಎಂ ಎಲ್ ಎ ಕೂಡ ಆಗಿದ್ದರಂತೆ. ಶ್ವೇತ ಖಾದಿ ವಸ್ತ್ರಧಾರಿಯಾಗಿದ್ದ ಶೆಟ್ಟರು ನಮ್ಮ ಶಾಲೆಯ ಸಮಾರಂಭಗಳಲ್ಲೆಲ್ಲಾ ಪಾಲ್ಗೊಳ್ಳುತ್ತಿದ್ದರು. ನಮ್ಮ ಶಾಲೆಗೆ ಸೇರಿದಂತೆ ಒಂದು ಸೋಪ್ ಮೇಕಿಂಗ್ ಮತ್ತು ಪೇಪರ್ ಮೇಕಿಂಗ್ ಯೂನಿಟ್ ಗಳನ್ನೂ ನಡೆಸಲಾಗುತ್ತಿತ್ತು.  ಈ ಎರಡು ವಿಷಯಗಳು ಹಿಂದಿ ಭಾಷೆಯ ಬದಲಿಗೆ ನಮಗೆ ಆಪ್ಷನ್  ಸಬ್ಜೆಕ್ಟ್ ಆಗಿದ್ದವು.

ನಮ್ಮ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ಗವರ್ನಮೆಂಟ್ ಮೈನ್ ಮಿಡ್ಲ್ ಸ್ಕೂಲ್ ಅಥವಾ ನ್ಯಾಷನಲ್ ಮಿಡ್ಲ್ ಸ್ಕೂಲ್ ನಿಂದ ಬಂದವರಾಗಿದ್ದರು. ಹಾಗಾಗಿ ಅವರುಗಳು ತರಗತಿಯ ಮುಂದಿನ ಡೆಸ್ಕ್ ಗಳಲ್ಲಿ ತಮ್ಮ ತಮ್ಮ ಸ್ನೇಹಿತರೊಡನೆ ಕುಳಿತುಕೊಳ್ಳುತ್ತಿದ್ದರು. ಇನ್ನು ಕೆಲವರು ಕೊನೆಯಲ್ಲಿರುವ ಡೆಸ್ಕ್ ಗಳನ್ನೂ ತಮ್ಮದಾಗಿ ಮಾಡಿಕೊಂಡಿದ್ದರು. ನಾನು, ವೆಂಕಟರಮಣ ಮತ್ತು ನೀಲಕಂಠ ಕೊನೆಯ ಡೆಸ್ಕಿನ ಮುಂದಿದ್ದ ಒಂದು ಡೆಸ್ಕಿನಲ್ಲಿ ಸೀಟ್ ಪಡೆದುಕೊಂಡೆವು.

ನಮ್ಮ ಮುಂದಿನ ಸೀಟುಗಳಲ್ಲಿ ಜಯಪ್ರಕಾಶ, ನರಸಿಂಹಮೂರ್ತಿ ಮತ್ತು ಮಹಾವೀರ ಎಂಬ ವಿಧ್ಯಾರ್ಥಿಗಳಿದ್ದರು.  ವಿಚಿತ್ರವೆಂದರೆ  ಜಯಪ್ರಕಾಶ ಮತ್ತು  ನರಸಿಂಹಮೂರ್ತಿ ಇಬ್ಬರೂ ಕೊಂಕಣಿಗಳಾದರೂ ತಮ್ಮ ಹೆಸರ ಮುಂದೆ ಯಾವುದೇ ಸರ್ನೇಮ್ ಹಾಕಿಕೊಂಡಿರಲಿಲ್ಲ. ಜಯಪ್ರಕಾಶನ ತಂದೆ ಶ್ರೀನಿವಾಸಶೆಣೈ ಅವರು ವಿಜಯಾ ಮೋಟಾರ್ ಸರ್ವಿಸ್ ಮಾಲೀಕರಾಗಿದ್ದರು. ಸಾಮಾನ್ಯವಾಗಿ ಕೊಂಕಣಿ ಜನಾಂಗದವರು ಗೌರವರ್ಣ ಹೊಂದಿರುತ್ತಾರೆಂದು ನಾವು ತಿಳಿದಿದ್ದೆವು. ಅದಕ್ಕೆ ತದ್ವಿರುದ್ಧವಾಗಿ ನರಸಿಂಹಮೂರ್ತಿ ಅಚ್ಚ ಕಪ್ಪು ಬಣ್ಣ ಹೊಂದಿದ್ದು ಅಷ್ಟೇ ಅಚ್ಚ ಬಿಳಿಯ ಬಣ್ಣದ ಪೈಜಾಮ, ಅಂಗಿ ಮತ್ತು ಗಾಂಧಿ ಟೋಪಿ ಧರಿಸಿ ಶಾಲೆಗೆ ಬರುತ್ತಿದ್ದ! ಈ ಬಗ್ಗೆ ಗೌರವರ್ಣದ ಜಯಪ್ರಕಾಶನಿಗೆ ಪ್ರಶ್ನೆ ಮಾಡಿದಾಗ ಅವನು ಕೊಟ್ಟ ಉತ್ತರ ನಮಗೆ ತುಂಬಾ ನಗೆ ಬರಿಸಿತು.  ಅವನ ಪ್ರಕಾರ ನರಸಿಂಹಮೂರ್ತಿ "ಕಾಡು ಕೊಂಕಣಿಯಂತೆ!"

ಜಯಪ್ರಕಾಶ ತುಂಬಾ ಗಾಂಭೀರ್ಯದ ಸರಳ ವ್ಯಕ್ತಿಯಾಗಿದ್ದರೆ ಅವನ ಸ್ನೇಹಿತ ಮಹಾವೀರ ಪಕ್ಕಾ ರೌಡಿಯಂತಾಡುತ್ತಿದ್ದ. ಅವನ ನಡತೆ ಜೈನ ತೀರ್ಥಂಕರ ಮಹಾವೀರನಿಗೆ ತದ್ವಿರುದ್ಧವಾಗಿತ್ತು! ಮಾತೆತ್ತಿದ್ದರೆ ಕೈ ಎತ್ತಿ ಹೊಡೆಯಲು ಬರುತ್ತಿದ್ದ ಮಹಾವೀರನ ಸಂಗಡ ನಾವು ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳ ಬೇಕಾಗಿತ್ತು. ಅವನ ತಂದೆ "ಗಾರ್ಡನ್ ಏರಿಯಾ" ದಲ್ಲಿ ವರ್ಕ್ ಶಾಪ್ ನಡೆಸುತ್ತಿದ್ದರಂತೆ. ನಾನು ಈ ಮೊದಲೇ ಬರೆದಂತೆ ಆ ಏರಿಯಾ ದಲ್ಲಿ ಗಾರ್ಡನ್ ಇರಲಿ,ಒಂದೇ ಒಂದು ಗಿಡ ಮರ ಕೂಡಾ ಕಣ್ಣಿಗೆ ಬೀಳುತ್ತಿರಲಿಲ್ಲ. ಪ್ರಾಯಶಃ ಮಹಾವೀರನಿಗೆ ತನ್ನ ಹೆಸರಿನ ಮಹತ್ವ ಗೊತ್ತಿಲ್ಲದ ಹಾಗೆ ಆ ಏರಿಯಾ ಕೂಡ ತನ್ನ ಹೆಸರಿಗೆ ತದ್ವಿರುದ್ಧವಾಗಿತ್ತು!

ನಮ್ಮ ಮುಂದಿದ್ದ ಇನ್ನೊಂದು ಡೆಸ್ಕಿನಲ್ಲಿ ನನ್ನ ಹಾಗೆ ಹಳ್ಳಿಯಿಂದ ಬಂದ ಇನ್ನಿಬ್ಬರು  ವಿಧ್ಯಾರ್ಥಿಗಳಿದ್ದರು. ಒಬ್ಬನ ಹೆಸರು ರಾಮಣ್ಣ ಎಂದಿತ್ತು. ನಮ್ಮ ಶಾಲೆಯ ಪಕ್ಕದ ಹಾಸ್ಟೆಲೊಂದರಲ್ಲಿದ್ದ ಈ ಜೋಡಿ “ಮಾತೆತ್ತಿದ್ದರೆ ಕೈ ಎತ್ತುವುದರಲ್ಲಿ” ಮಹಾವೀರನಿಗೆ ಸರಿ ಸಮಾನರಾಗಿದ್ದರು. ನನಗೆ ಅವರಿಂದ ರಕ್ಷಣೆ ಪಡೆಯಲು ಬಸವಾನಿಯ ದೇವೇಂದ್ರನಂತಹ ಸ್ನೇಹಿತನ ಅವಶ್ಯಕತೆ ಇತ್ತು. ನಾನು ಅದಕ್ಕಾಗಿ ಹೆಚ್ಚು ದೂರದ ಡೆಸ್ಕಿನತ್ತ ನೋಡಬೇಕಾಗಲಿಲ್ಲ. ನಮ್ಮ ಪಕ್ಕದ ಸಾಲಿನ  ಕೊನೆಯ ಡೆಸ್ಕಿನಲ್ಲಿ ಕುಳಿತಿರುತ್ತಿದ್ದ ಗೋವಿಂದನೆಂಬ ಹುಡುಗನ ಪರಿಚಯ ನನಗಾಯಿತು. ಅದು ಬೇಗ ಗಾಢ ಸ್ನೇಹಕ್ಕೂ ತಿರುಗಿತು. ಗೋವಿಂದನ ಫ್ಯಾಮಿಲಿ ನೂರು ವರುಷಗಳಿಗೂ ಮುನ್ನ ಮಹಾರಾಷ್ಟ್ರದಿಂದ ಬಂದು ಶಿವಮೊಗ್ಗೆಯಲ್ಲಿ ನೆಲೆಯೂರಿತ್ತು. ಬೇಗನೆ ತಂದೆಯನ್ನು ಕಳೆದುಕೊಂಡ ಗೋವಿಂದನನ್ನು ಅವನ ಅಣ್ಣಂದಿರೇ ಸಾಕಿ ಬೆಳೆಸಿದ್ದರು. ಗೋವಿಂದ ನನಗೆ ಶಿಷ್ಟ ಪಾಲಕ ಮತ್ತು ದುಷ್ಟ ನಿವಾರಕ ಸಾಕ್ಷಾತ್ ಕೃಷ್ಣ ಪರಮಾತ್ಮನಂತೆ ಕಾಣಿಸಿಬಿಟ್ಟ! ನಮ್ಮ ಸ್ನೇಹ ಯಾವ ಮಟ್ಟಕ್ಕೇರಿ ಬಿಟ್ಟಿತ್ತೆಂದರೆ ನಾನು ಆಮೇಲಿನ ಎರಡು ವರ್ಷ ಗೋವಿಂದನ ಪಕ್ಕದಲ್ಲೇ ಒಂದೇ ಡೆಸ್ಕಿನಲ್ಲಿ ಕುಳಿತುಕೊಳ್ಳ ತೊಡಗಿದೆ. ಆ ಮೂಲಕ ನನಗೆ ರೌಡಿ ಹುಡುಗರಿಂದ ಸಂಪೂರ್ಣ ರಕ್ಷಣೆ ದೊರಕಿತು. ಏಕಂದರೆ ಅವರಾರಿಗೂ ಗೋವಿಂದನ ಹತ್ತಿರ ಸುಳಿಯುವಷ್ಟೂ ಧೈರ್ಯವಿರಲಿಲ್ಲ.

ನಮ್ಮ ತರಗತಿಯ ಇನ್ನೊಂದು ಡೆಸ್ಕಿನಲ್ಲಿ ನಾಲ್ಕು ಮಂದಿ ಪಕ್ಕಾ ಸ್ನೇಹಿತರು ಕುಳಿತುಕೊಳ್ಳುತ್ತಿದ್ದರು. ಅವರ  ಹೆಸರು ಮಹಾಬಲೇಶ್ವರ, ಸಿರಾಜ್ ಅಹ್ಮದ್, ರವೀಂದ್ರ ಮತ್ತು ಕೃಷ್ಣಪ್ರಸಾದ   ಎಂದಿತ್ತು. ಮಹಾಬಲೇಶ್ವರ ಮುಂದೆ ನನಗೆ ತರಗತಿಯ ಮೊದಲ ಸ್ಥಾನಕ್ಕೆ ಪ್ರತಿಸ್ಪರ್ಧಿಯಾದ. ಕೃಷ್ಣಪ್ರಸಾದ   ಆಮೇಲೆ ಅಡಿಷನಲ್ ಕಮಿಷನರ್ ಆಫ್ ಕಮರ್ಷಿಯಲ್ ಟ್ಯಾಕ್ಸ್ ಆಗಿ ಒಳ್ಳೆ ಹೆಸರು ಪಡೆದು ನಿವೃತ್ತಿ ಪಡೆದ. ಇಂದಿಗೂ ನನ್ನೊಡನೆ ಸ್ನೇಹ ಸಂಬಂಧ ಇಟ್ಟು ಕೊಂಡಿದ್ದಾನೆ. ರವೀಂದ್ರ ಮತ್ತು ಸಿರಾಜ್ ಅಹ್ಮದ್ ಹೆಸರನ್ನು ಒಂದು ಕಾರಣಕ್ಕಾಗಿ ಮರೆಯಲಾಗುತ್ತಿಲ್ಲ.   ಪ್ರಸಂಗ ಇಂದಿಗೂ ನಗೆ ಬರಿಸುವಂತಿದೆ.

ಒಮ್ಮೆ ನಮ್ಮ ತರಗತಿಗೆ ಮಾನಿಟರ್ ಚುನಾವಣೆ ನಡೆಯಿತು. ಅದರಲ್ಲಿ ಭಾಗವಹಿಸುವಂತೆ ರವೀಂದ್ರನಿಗೆ ತುಂಬಾ ಒತ್ತಾಯ ಮಾಡಿ ಸಿರಾಜ್ ಅಹ್ಮದ್ ತಾನೇ ಅವನ ಹೆಸರನ್ನು ಸೂಚಿಸಿಯೂ  ಬಿಟ್ಟ. ಅವನಿಗೆ ಇನ್ನೂ ಕೆಲವು ಪ್ರತಿಸ್ಫರ್ದಿಗಳು ಇದ್ದರು. ನಮ್ಮ ಕ್ಲಾಸ್ ಟೀಚರ್  ಎಸ್ ಎಸ್ ಆರ್ ಚುನಾವಣೆ ನಡೆಸಿದರು. ನಾವೆಲ್ಲಾ ನಮಗಿಷ್ಟವಾದ ಸ್ಪರ್ಧಿಯ ಹೆಸರನ್ನು ಒಂದು ಚೀಟಿಯಲ್ಲಿ ಬರೆದು ಅವರ ಕೈಗೆ ಕೊಟ್ಟೆವು. ಮಾಡೆರ್ನ್ ಟಾಕೀಸ್  ಪಾರ್ಟ್ನರ್ ಒಬ್ಬರ ಮೊಮ್ಮಗನಾದ ನಾರಾಯಣ ಎಂಬುವನಿಗೆ ಹೆಚ್ಚು ಓಟು ಸಿಕ್ಕಿ ಅವನು ಮಾನಿಟರ್  ಆಗಿ ಬಿಟ್ಟ. ಆದರೆ ನಮಗೆ ನಂಬಲಾಗದ ವಿಚಿತ್ರವೆಂದರೆ ರವೀಂದ್ರನಿಗೆ ಕೇವಲ ಒಂದೇ  ಓಟು ಬಂದಿದ್ದುದು! ಅವನನ್ನು ಒತ್ತಾಯದಿಂದ ಚುನಾವಣೆಗೆ ನಿಲ್ಲಿಸಿ ಅವನ ಹೆಸರನ್ನು ಸೂಚಿಸಿದ್ದ ಅವನ ಸ್ನೇಹಿತ ಸಿರಾಜ್ ಅಹ್ಮದ್ ಆ ಓಟು ತನ್ನದೇ ಎಂದು ಹೇಳಿ ಬಿಟ್ಟ. ಆಗ ನಮ್ಮೆಲರ ಮನಸ್ಸಿನಲ್ಲಿ ಬಂದ ಒಂದೇ ಪ್ರಶ್ನೆ ಎಂದರೆ ರವೀಂದ್ರನ ಓಟು ಯಾರಿಗೆ ಹೋಯಿತೆಂದು? ರವೀಂದ್ರನ ಬಳಿ ಅದಕ್ಕೆ ಉತ್ತರವಿರಲಿಲ್ಲ. ಆದರೆ ಅವನಿಗೆ ಪರಮ ಸ್ನೇಹಿತನಾದ ಸಿರಾಜನ  ಮೇಲೆ ತುಂಬಾ ವಿಶ್ವಾಸ ಇತ್ತು. ಅವನು ತಲೆ ಚೆಚ್ಚಿಕೊಂಡರೂ ತನ್ನ ಓಟು ಎಲ್ಲಿ ಹೋಯಿತೆಂದು ತಿಳಿಯಲಿಲ್ಲ. ಒಟ್ಟಿನಲ್ಲಿ ಅದೊಂದು ಜಟಿಲ ಸಮಸ್ಯೆ ಆಗಿ ಬ್ರಹ್ಮ ಗಂಟಿನಂತೆ ಕೊನೆಗೊಂಡಿತು.
-------- ಮುಂದುವರಿಯುವುದು------

No comments: