Monday, February 24, 2020

ಬಾಲ್ಯ ಕಾಲದ ನೆನಪುಗಳು – ೬೪


ಶಿವಮೊಗ್ಗೆಯಂತ ಸಿಟಿಯಲ್ಲಿ ಸುಮಾರು ತಿಂಗಳು ಇದ್ದು ಊರಿಗೆ ರಜೆಗಾಗಿ ಬಂದಾಗ ನಾನು ತುಂಬಾ ಉತ್ಸಾಹದಿಂದಿದ್ದೆ. ಮೊದಲೆರಡು ದಿನಗಳು ನನ್ನ ಹೈಸ್ಕೂಲಿನ, ಅರುಣಾಚಲಂ ಮೇಷ್ಟರ  ಮನೆಯ ಮತ್ತು ಹಾಸ್ಟೆಲಿನ ಅನುಭವಗಳನ್ನು ವರ್ಣಿಸುವುದರಲ್ಲೇ ಕಳೆದು ಹೋದವು. ಕೇಳುವರೂ ಅಷ್ಟೇ ಆಸಕ್ತಿ ತೋರಿಸುತ್ತಿದ್ದರು. ಸಿಟಿಯಲ್ಲಿ ಇದ್ದು ಬಂದ ನನ್ನ ವ್ಯಕ್ತಿತ್ವದಲ್ಲಿ ಅನೇಕ ಬದಲಾವಣೆಗಳಾಗಿದ್ದನ್ನು ನನ್ನ ಅಣ್ಣ   ಸೂಕ್ಷ್ಮವಾಗಿ ಗಮನಿಸುತ್ತಿದ್ದುದು ನನಗೆ ಅರಿವಾಗಿತ್ತು. ಆದರೆ ಅವನು ಇನ್ನೂ ಕೆಲವು ಬದಲಾವಣೆಗಳನ್ನು ನನ್ನಿಂದ ನಿರೀಕ್ಷಿಸಿದ್ದ. ಮತ್ತು ಬಗ್ಗೆ ಕೆಲವು ಸಲಹೆಗಳನ್ನು ಕೊಟ್ಟ.

ಊರಿನಲ್ಲಿ ನನ್ನ ಹೆಸರು ಕಿಟ್ಟನಿಂದ ಕೃಷ್ಣಮೂರ್ತಿ ಆದದ್ದು!
ನನ್ನ ಸೋದರ ಮಾವನೇ ಹೇಳಿದಂತೆ ನನ್ನ ಹೆಸರನ್ನು ಕೃಷ್ಣಮೂರ್ತಿ ಎಂದಿಟ್ಟಿದ್ದರೂ ನನ್ನನ್ನು ಮನೆಯಲ್ಲಿ ಮತ್ತು ಊರಿನ ಎಲ್ಲರೂ ಕಿಟ್ಟ ಎಂಬ ಅಡ್ಡ ಹೆಸರಿನಿಂದಲೇ ಕರೆಯುತ್ತಿದ್ದರು. ಆದರೆ ನನಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲ. ಅದರಲ್ಲೂ ಈಗ ನಾನೊಬ್ಬ ಸಿಟಿ ಬಾಯ್ ಆದ  ಮೇಲೆ ಅಡ್ಡ ಹೆಸರು ತುಂಬಾ ಮುಜುಗರ ನೀಡತೊಡಗಿತ್ತು. ಅಣ್ಣನಿಗೆ ಅದು ಗೊತ್ತಾಗಿರಬೇಕು. ಅವನು ನನ್ನನ್ನು ಇದ್ದಕಿದ್ದಂತೇ ಕೃಷ್ಣಮೂರ್ತಿ ಎಂದೇ ಕರೆಯತೊಡಗಿದ. ಸ್ವಲ್ಪ ಕಾಲದಲ್ಲೇ ಊರಿನವರು ಮತ್ತು ಮನೆಯವರೆಲ್ಲಾ ನನ್ನನ್ನು ಕೃಷ್ಣಮೂರ್ತಿ ಎಂದೇ ಕರೆಯತೊಡಗಿದರು. ಹೀಗೆ ನನ್ನ ಒರಿಜಿನಲ್ ಹೆಸರು ನನಗೆ ವಾಪಾಸ್ ಬಂದು ಬಿಟ್ಟಿತು! ಇಂದು ಎಷ್ಟೋ ವರ್ಷಗಳ ಮೇಲೆ ಹಿಂತಿರುಗಿ ನೋಡುವಾಗ ಕಿಟ್ಟ ಎಂಬ ಅಡ್ಡ ಹೆಸರು ಅಷ್ಟೇನೂ ಕೆಟ್ಟದಾಗಿ ಕಾಣುತ್ತಿಲ್ಲ. ಆದರೆ ದಿನಗಳಲ್ಲಿ ನನ್ನ ಒರಿಜಿನಲ್ ಹೆಸರು ನನಗೆ ವಾಪಾಸ್ ಸಿಗುವಂತೆ ಮಾಡಿದ ಅಣ್ಣನ ಉಪಕಾರವನ್ನೂ ಮರೆಯಲಾಗುತ್ತಿಲ್ಲ.

ಕಿಟ್ಟಜ್ಜಯ್ಯನ ಕುತೂಹಲ
ನಮ್ಮ ಊರಿನ ಹೆಚ್ಚು ಜನರಿಗೆ ನನ್ನ ಶಿವಮೊಗ್ಗೆ ಅದರಲ್ಲೂ ಹಾಸ್ಟೆಲಿನ ಅನುಭವಗಳನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ನಮ್ಮೂರಿನಿಂದ ಹೋಗಿ ಹಾಸ್ಟೆಲಿನಲ್ಲಿ ಇದ್ದ ಪ್ರಥಮ ಹುಡುಗ ನಾನಾಗಿದ್ದೆ. ಮತ್ತು ಒಬ್ಬ ಹೈಸ್ಕೂಲ್ ಹುಡುಗ ಕಾಲೇಜು ಹುಡುಗರ ನಡುವೆ ಹಾಸ್ಟೆಲಿನಲ್ಲಿ ಇದ್ದು ಓದುವುದು ಒಂದು ಅಪೂರ್ವ ಅವಕಾಶವೆಂಬುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಬೆಳವಿನಕೊಡಿಗೆಯ ಹುಡುಗರು ಶಿವಮೊಗ್ಗೆಯಲ್ಲಿ ಓದುತ್ತಿದ್ದರೂ ಅವರೆಲ್ಲಾ ತಮ್ಮ ದೊಡ್ಡಪ್ಪನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರೆಲ್ಲಾ ಶ್ರೀಮಂತ ಮನೆತನದವರಾದರೆ ಕೇವಲ ನಾನು ಮಾತ್ರ ಬಡತನದ ಸಂಸಾರದವನಾಗಿದ್ದರೂ ಸಿಟಿ ಹೈಸ್ಕೂಲಿನಲ್ಲಿ ಅದರಲ್ಲೂ ಇಂಗ್ಲಿಷ್ ಮೀಡಿಯಂ ನಲ್ಲಿ ಓದುವ ಸೌಭಾಗ್ಯ ಪಡೆದಿದ್ದೆ. ನಮ್ಮ ಕೆಳಗಿನ ಮನೆ ಕಿಟ್ಟಜ್ಜಯ್ಯನವರು ತುಂಬಾ ಕುತೂಹಲ ಮತ್ತು ಆಸಕ್ತಿಯಿಂದ ಹಾಸ್ಟೆಲ್ ಜೀವನದ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು. ಅವರ ಕುತೂಹಲ ಯಾವ ಮಟ್ಟದ್ದಾಗಿತ್ತೆಂದರೆ ಮುಂದೆ ಪ್ರತಿ ಬಾರಿ ನಾನು ಊರಿಗೆ ಹೋದಾಗ ನನ್ನನ್ನು ಒತ್ತಾಯದಿಂದ ಕರೆದು ಕೂರಿಸಿ ನನ್ನ ಅನುಭವಗಳನ್ನು ತಿಳಿಯ ತೊಡಗಿದರು.  ಆದರೆ ನಮ್ಮೂರಿನ ಒಂದು ಮನೆಯವರಿಗೆ ಮಾತ್ರ ಅಣ್ಣ ನನ್ನನ್ನು ಹೋರಾಟಮಾಡಿ ಶಿವಮೊಗ್ಗೆಗೆ ಅದರಲ್ಲೂ ಇಂಗ್ಲಿಷ್ ಮೀಡಿಯಂ  ನಲ್ಲಿ ಓದಲು ಕಳಿಸಿದ್ದು ಏಕೆಂದು ಅರ್ಥವಾಗಲೇ ಇಲ್ಲ.

ನನ್ನ ಲೆಕ್ಕದ ಪುಸ್ತಕದಲ್ಲಿ ಗೋಲ್ಮಾಲ್!
ಇದ್ದಕ್ಕಿದ್ದಂತೇ ಒಂದು ದಿನ ಅಣ್ಣ ನನಗೆ ನನ್ನ ಖರ್ಚು ವೆಚ್ಚಗಳ ನೋಟ್ ಬುಕ್ ತೋರಿಸುವಂತೆ ಹೇಳಿದ. ಕೂಡಲೇ ನನಗೆ  ಸ್ವಲ್ಪ ನಡುಕ ಬಂದಂತಾಯಿತು. ನಾನು ಬರೆದಿಟ್ಟ ಲೆಕ್ಕ ಸ್ವಲ್ಪ ತಲೆ ಬುಡ ಇಲ್ಲದಂತಿತ್ತೆಂದು ನನಗೆ ಗೊತ್ತಿತ್ತು. ಕಾರಣವಿಷ್ಟೇ. ನನ್ನ ಹೋಟೆಲ್ ಮತ್ತು ಸಿನಿಮಾಗಳನ್ನು ನೋಡಿದ ಖರ್ಚುಗಳನ್ನು ಅಣ್ಣನಿಗೆ ತೋರಿಸುವಷ್ಟು ಧೈರ್ಯ ನನಗಿರಲಿಲ್ಲ. ಆದ್ದರಿಂದ ಅಣ್ಣ ಕೊಟ್ಟ ಹಣದ ಖರ್ಚು ತೋರಿಸುವಾಗ ನನಗೆ ಕೆಲವು ಸುಳ್ಳು ಖರ್ಚುಗಳನ್ನು ತೋರಿಸುವ ಅಗತ್ಯವಿತ್ತು. ಪ್ರಾಯಶಃ ಅಣ್ಣನಿಗೂ ನನ್ನ ಪರಿಸ್ಥಿತಿ ಸ್ವಲ್ಪ ಅರ್ಥವಾಗಿತ್ತೆಂದು ಅನಿಸುತ್ತದೆ. ಆದ್ದರಿಂದ ಅವನು ಲೆಕ್ಕವನ್ನು ಪೂರ್ತಿ ನೋಡಿದರೂ ಅವುಗಳ ಮೇಲೆ ಹೆಚ್ಚು ಪ್ರಶ್ನೆ ಮಾಡಲಿಲ್ಲ. ಆದರೆ ನಾನು ತೋರಿಸಿದ ಒಂದೆರಡು ಖರ್ಚುಗಳು ಅವನ ಗಮನ ಸೆಳೆದೇ ಬಿಟ್ಟವು. ಉದಾಹರಣೆಗೆ ನಾನು ಒಂದೆರಡು ಬಾರಿ ಗುಡ್ಡೇತೋಟದ ಶ್ರೀಕಂಠನಿಂದ ೧೦ ರೂಪಾಯಿ ಸಾಲ ಪಡೆದಿದ್ದೆ. ಅದನ್ನು ಹಿಂತಿರುಗಿಸಿದಾಗ ಖರ್ಚಿನ ಲೆಕ್ಕದಲ್ಲಿ ತೋರಿಸಿಬಿಟ್ಟಿದ್ದೆ. ಆದರೆ ಹಣವನ್ನು ಅಣ್ಣನಿಂದ ಪಡೆದ ಹಣದೊಡನೆ ಕೂಡಿಸಿರಲಿಲ್ಲ ಅಥವಾ ಜಮಾ ಮಾಡಿರಲಿಲ್ಲ! ನನ್ನ ಅಕೌಂಟಿಂಗ್ ಗೋಲ್ಮಾಲ್ ಬಗ್ಗೆ ಅಣ್ಣನ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.  ನನ್ನ ಅದೃಷ್ಟಕ್ಕೆ ಅಣ್ಣ ವಿಷಯವನ್ನು ಅಲ್ಲಿಗೇ ಮುಕ್ತಾಯ ಮಾಡಿ ನನ್ನನ್ನು ಬಚಾವ್ ಮಾಡಿಬಿಟ್ಟ.
ಮಿಲಿಟರಿ ಡಾಕ್ಟರಿಂದ ಆಶೀರ್ವಾದ
ನನ್ನ ದಸರಾ ರಜೆ ಬೇಗನೆ ಕಳೆದು ಹೋಯಿತು. ನಾನು ಶಿವಮೊಗ್ಗೆಗೆ ಹೊರಟಾಗ ಅಣ್ಣ ನನ್ನೊಡನೆ ಕೊಪ್ಪದವರೆಗೆ ಬಂದ. ಅಲ್ಲಿ ನನ್ನನ್ನು ಅವನು ಮಿಲಿಟರಿ ಡಾಕ್ಟರ್ ಎಂದು ಪ್ರಸಿದ್ಧಿ ಪಡೆದಿದ್ದ ಕ್ಯಾಪ್ಟನ್ ಎಂ ಆರ್ ಆರ್ ಐಯಂಗಾರ್ ಅವರ ಬಳಿ ಕರೆದುಕೊಂಡು ಹೋದ. ಕೊಪ್ಪದ ಪ್ರಸಿದ್ಧ ಡಾಕ್ಟರ್ ಬಗ್ಗೆ ನಾನು ಹಿಂದೆಯೇ ವಿವರವಾಗಿ ಬರೆದಿದ್ದೇನೆ. ಅಣ್ಣ ಅವರಿಂದ ಹಾಸ್ಟೆಲಿನಲ್ಲಿ ನನಗೆ ಫ್ರೀ ಸೀಟ್ ಕೊಡುವಂತೆ ಒಂದು ರೆಕಮೆಂಡೇಷನ್ ಪತ್ರವನ್ನು ಪಡೆದು ಹಾಸ್ಟೆಲಿಗೆ ಸಲ್ಲಿಸಿದ್ದ. ಅಣ್ಣ ಹೇಳಿದಂತೆ ನಾನು ಡಾಕ್ಟರಿಗೆ ಫ್ರೀ ಸೀಟ್ ದೊರೆಯುವಂತೆ ಮಾಡುವುದರಲ್ಲಿ ಅವರ ಉಪಕಾರದ ಬಗ್ಗೆ ಕೃತಜ್ಞತೆ ಸಲ್ಲಿಸಿದೆ. ಡಾಕ್ಟರ್ ಅವರು ಸಂತೋಷದಿಂದ ನನಗೆ ಚೆನ್ನಾಗಿ ಓದಿ ತರಗತಿಯಲ್ಲಿ ಒಂದರಿಂದ ನಾಲ್ಕನೇ ಸ್ಥಾನ ಗಳಿಸಲೇ ಬೇಕೆಂದು ಹೇಳಿದರು. ನಾನು ಕೂಡಲೇ ಅಣ್ಣನ  ಮುಖ ನೋಡಿದೆ. ಏಕೆಂದರೆ ಅಣ್ಣ ನಾನು ಮೊದಲನೇ ಸ್ಥಾನ ಗಳಿಸಲೇ  ಬೇಕೆಂದು ಹೇಳಿಬಿಟ್ಟಿದ್ದ. ಆದರೆ ಡಾಕ್ಟರ್ ಅವರು ಸ್ವಲ್ಪ ರಿಯಾಯಿತಿ ಕೊಟ್ಟು ನಾಲ್ಕನೇ ಸ್ಥಾನವೂ ಓಕೆ ಎಂದು ಸೂಚಿಸಿ ಬಿಟ್ಟಿದ್ದರು! ಆದರೆ ಅಣ್ಣನ ಮುಖದಲ್ಲಿ ಯಾವುದೇ ರಿಯಾಯಿತಿ ಕಾಣಿಸಿಕೊಳ್ಳಲಿಲ್ಲ!

ಒಹ್! ನನಗೆ ಪ್ರಥಮ ಸ್ಥಾನ ಸಿಕ್ಕೇ ಬಿಟ್ಟಿತು!
ರಜೆ ಮುಗಿದ ನಂತರ ನಮ್ಮ ಮೇಷ್ಟರುಗಳು ಮೌಲ್ಯಮಾಪನ ಮಾಡಿದ ನಮ್ಮ  ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನಮಗೆ ಹಿಂತಿರುಗಿಸಿದರು. ನಾನು ಎಲ್ಲಾ ಸಬ್ಜೆಕ್ಟ್ ಗಳಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದೆ. ಆದರೆ ಉಳಿದವರ ಅಂಕಗಳು ಹೇಗೆ ಬಂದಿವೆ ಎಂದು ಮೊದಮೊದಲು ಗೊತ್ತಾಗಲಿಲ್ಲ. ಕೊನೆಯದಾಗಿ ನಮ್ಮ ಕ್ಲಾಸ್ ಟೀಚರ್ ಸೂರ್ಯನಾರಾಯಣ ರಾವ್  (ಎಸ್ ಎಸ್ ಆರ್)  ಗಣಿತಶಾಸ್ತ್ರ ಪತ್ರಿಕೆಯಲ್ಲಿ ಗರಿಷ್ಟ ಅಂಕಗಳನ್ನು ನನಗೆ ಕೊಟ್ಟಿದ್ದರಿಂದ ನಾನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದೇನೆಂದು ಗೊತ್ತಾಯಿತು. ಮಹಾಬಲೇಶ್ವರ ಎಂಬ ವಿದ್ಯಾರ್ಥಿ ದ್ವಿತೀಯ ಸ್ಥಾನ ಗಳಿಸಿದ್ದ (ಅವನು ಮುಂದೆ ಎಂ ಬಿ ಬಿ ಎಸ್ ಮಾಡಿ ಡಾಕ್ಟರ್ ಆದನಂತೆ).
ನನ್ನ ಅಣ್ಣನಿಗೆ ನಾನು ಪ್ರಥಮ ಸ್ಥಾನ ಗಳಿಸಿದ್ದನ್ನು ತಿಳಿದು ತುಂಬಾ ಸಂತೋಷವಾಯಿತು. ನಾನು ಅವನ ನಿರೀಕ್ಷೆಯನ್ನು ಸುಳ್ಳು ಮಾಡಿರಲಿಲ್ಲ. ಹಾಗೆಯೇ  ನಾನು ದೆಹಲಿಯಲ್ಲಿದ್ದ ತಲವಾನೆ ಶ್ರೀನಿವಾಸ್ ಅವರಿಗೂ ಒಂದು ಪತ್ರ ಬರೆದೆ. ಅವರಿಂದಲೂ ನನಗೊಂದು ಅಭಿನಂದನಾ ಪತ್ರ  ಬಂತು. ನನಗೆ ನನ್ನ ತಲೆಯ ಮೇಲಿದ್ದ ದೊಡ್ಡ ಭಾರವೊಂದನ್ನು ಕೆಳಗಿಳಿಸಿದಂತಾಯಿತು. ಆದರೆ ಇನ್ನು ಮುಂದೂ ಅದೇ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಹೋಗುವ ಹೊರೆ ನನ್ನ ತಲೆಯ ಮೇಲೆ ಬಂದು ಬಿಟ್ಟಿತ್ತು. ಇಷ್ಟು ಮಾತ್ರವಲ್ಲ ಎಲ್ಲಾ ಸಬ್ಜೆಕ್ಟ್ ಗಳಲ್ಲಿ ನಾನು ಗಳಿಸಿದ ಅಂಕಗಳನ್ನು ಗಮನಿಸಿ ನನ್ನನ್ನು Rank ಸ್ಟೂಡೆಂಟ್ ಎಂದು ಕರೆಯಲು ಪ್ರಾರಂಭವಾಯಿತು. ನಿರೀಕ್ಷೆ ನನ್ನ ತಲೆಯ ಮೇಲೆ ಇನ್ನಷ್ಟು ಭಾರ ಹೊರಿಸಿ ಬಿಟ್ಟಿತು.

ಇಂಡಿಯಾ-ಚೀನಾ ಯುದ್ಧ  - ೧೯೬೨
೧೯೬೨ನೇ ಇಸವಿ ಅಕ್ಟೋಬರ್ ತಿಂಗಳಲ್ಲಿ ಚೀನಾ ಇಂಡಿಯಾದ ಮೇಲೆ ಆಕ್ರಮಣ  ಮಾಡಿತು.  ಇಂಡಿಯಾದಿಂದ ಯಾವುದೇ ಪ್ರಚೋದನೆ ಇಲ್ಲದೇ ಚೀನಾದ ಸೇನೆ ಲಡಾಖ್ ಮತ್ತು ಇಂದಿನ ಅರುಣಾಚಲ ಪ್ರದೇಶದ ಗಡಿಯಲ್ಲಿ ಧಾಳಿ ಆರಂಬಿಸಿತು. ಆಗ ಕೃಷ್ಣ ಮೆನನ್ ಅವರು ರಕ್ಷಣಾ  ಮಂತ್ರಿಯಾಗಿದ್ದರು. ಭಾರತೀಯ ಸೇನೆಯಿಂದ ಯಾವುದೇ ತಯಾರಿ ಇಲ್ಲದಿದ್ದರಿಂದ ಅದು ಗಡಿ ರಕ್ಷಣೆಯಲ್ಲಿ ವಿಫಲವಾಯಿತು. ಸಮಾಚಾರ ಪತ್ರಿಕೆಗಳಲ್ಲಿ ಬರುತ್ತಿದ್ದ ವರದಿಗಳನ್ನು ನೋಡಿ ನಮಗೆಲ್ಲ ತುಂಬಾ ಆಘಾತವಾಯಿತು. ನಾವು ಹಿಂದೆ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಭಾರತೀಯ ಸೇನೆ ಗೋವಾದಿಂದ ಪೋರ್ಚುಗೀಸರನ್ನು ಓಡಿಸಿದ್ದನ್ನು ಪತ್ರಿಕೆಗಳಲ್ಲಿ ಓದಿ ತುಂಬಾ ಸಂತೋಷಪಟ್ಟಿದ್ದೆವು. ಆದರೆ ಚೀನಾದ ಸೇನೆಯನ್ನು ಓಡಿಸುವುದು ಅಷ್ಟು ಸುಲಭವಿರಲಿಲ್ಲ.

ಸೇನೆಯನ್ನು ಬಲಪಡಿಸಲು ಜವಾಹರ್ಲಾಲ್ ನೆಹರು ನೇತೃತ್ವದ ಭಾರತ ಸರ್ಕಾರ ಪ್ರಜೆಗಳಿಂದ ಹಣ ಕೊಡುಗೆಗಾಗಿ ಭಾರತೀಯ ರಕ್ಷಣಾ ನಿಧಿಯನ್ನು (National Defence Fund) ಸ್ಥಾಪಿಸಿತು. ನಮ್ಮ ಹಾಸ್ಟೆಲ್ ವಿಧ್ಯಾರ್ಥಿಗಳಿಂದಲೂ ಹಣ  ಸಂಗ್ರಹಿಸಿ ಸರ್ಕಾರಕ್ಕೆ ಕಳಿಸಲಾಯಿತು. ಭಾರತೀಯ ಸೇನೆ ತುಂಬಾ ಪರಾಕ್ರಮದಿಂದ ಹೋರಾಡಿದರೂ ಚೀನಾದ ಪಡೆಗಳನ್ನು ಹಿಂದೆ ಓಡಿಸುವಷ್ಟು ಸಶಕ್ತವಾಗಿರಲಿಲ್ಲ. ೨೦ನೇ ನವೆಂಬರ್ ೧೯೬೨ ದಿನದಂದು ಚೀನಾ ಸರ್ಕಾರ ಕದನ ವಿರಾಮ ಘೋಷಿಸುವುದರೊಡನೆ ಮೊತ್ತ ಮೊದಲ ಇಂಡೋ-ಚೀನಾ ಯುದ್ಧ ಮುಕ್ತಾಯ ಕಂಡಿತು. ಯುದ್ಧದ ಪರಿಣಾಮವಾಗಿ ಕೃಷ್ಣ ಮೆನನ್ ಅವರು ರಕ್ಷಣಾ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸ ಬೇಕಾಯಿತು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವೈ ಬಿ ಚವಾಣ್ ಅವರು ಹೊಸ ರಕ್ಷಣಾ  ಮಂತ್ರಿಯಾಗಿ ನೇಮಕವಾದರು.
------- ಮುಂದುವರಿಯುವುದು-----

No comments: