ತಲವಾನೆ ಶ್ರೀನಿವಾಸ್
ತಲವಾನೆ ಶ್ರೀನಿವಾಸ್ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ತಮ್ಮ ದೊಡ್ಡಮ್ಮನ (ಅಮ್ಮನ ಅಕ್ಕ) ಮನೆಯಲ್ಲಿ ತಮ್ಮ ಅಣ್ಣ ಮಂಜಪ್ಪನವರೊಡನೆ ಇರುತ್ತಾ ಪುರದಮನೆ ಶಾಲೆಗೆ ಹೋಗುತ್ತಿದ್ದರಂತೆ. ಆ ಮನೆ ನಮ್ಮ ಮನೆಯ ಹತ್ತಿರವೇ ಇತ್ತು. ಹಾಗಾಗಿ ಅವರು ನಮ್ಮಣ್ಣನ ಸ್ನೇಹಿತರಾಗಿದ್ದರು. ಆಮೇಲೆ ಅವರು ಶಿವಮೊಗ್ಗದಲ್ಲಿ ನ್ಯಾಷನಲ್ ಹೈಸ್ಕೂಲಿನಲ್ಲೇ ಎಸ್ ಎಸ್ ಎಲ್ ಸಿ ಮುಗಿಸಿದರಂತೆ. ಕನ್ನಡ ಸಾಹಿತಿ ಲಂಕೇಶ್ ಅವರ ಕ್ಲಾಸ್ಮೇಟ್ ಆಗಿದ್ದರಂತೆ. ಶ್ರೀನಿವಾಸ್ ಆಮೇಲೆ ಬಿ ಎಸ್ ಸಿ ಪರೀಕ್ಷೆಯಲ್ಲಿ rank ಗಳಿಸಿ ಆಗ್ರಾದಲ್ಲಿ ಎಂ ಎಸ್ ಸಿ ಮಾಡಿ ದೆಹಲಿಯ ಇಂಡಿಯನ್ ಅಗ್ರಿಕಲ್ಚರ್ ರೀಸರ್ಚ್ ಇನ್ಸ್ಟಿಟ್ಯೂಟಿನಲ್ಲಿ (IARI) ಡಾಕ್ಟರೇಟ್ ಪದವಿಗೆ ಅಭ್ಯಾಸ ಮಾಡುತ್ತಿದ್ದು ರಜೆಯಲ್ಲಿ ಊರಿಗೆ ಬಂದಿದ್ದರು. ತುಂಬಾ ಸ್ಪುರದ್ರೂಪಿಯಾಗಿದ್ದ ಶ್ರೀನಿವಾಸ್ ಅಷ್ಟೇ ಸರಳ ವ್ಯಕ್ತಿಯಾಗಿದ್ದರು. . ನಾನು, ಅಣ್ಣ ಮತ್ತು ಕೃಷ್ಣರಾಯರು ಅವರನ್ನು ನೆಹರು ರಸ್ತೆಯಲ್ಲಿದ್ದ ನೆಲ್ಲಿ ಪ್ರಕಾಶ್ ಲಾಡ್ಜ್ ನಲ್ಲಿ ಭೇಟಿಯಾದೆವು. ನೆಲ್ಲಿ ಪ್ರಕಾಶ್ ಲಾಡ್ಜ್ ಮತ್ತು ಅದರ ಕೆಳಭಾಗದಲ್ಲಿದ್ದ ಮನೋಹರ ಕೆಫೆ ಜನಾರ್ಧನ ನೆಲ್ಲಿ ಎಂಬ ಶ್ರೀಮಂತರಾದಾಗಿತ್ತು. ಅವರ ಮನೆ ದುರ್ಗಿಗುಡಿ ಪಾರ್ಕ್ ಎಕ್ಸಟೆನ್ಶನ್ ರಸ್ತೆಯಲ್ಲಿ ಅರುಣಾಚಲಂ ಅವರ ಮನೆಯ ಹತ್ತಿರವೇ ಇತ್ತು.
ಹಾಸ್ಟೆಲಿನ ಫ್ರೀ ಸೀಟಿಗಾಗಿ ಓಡಾಟ
ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಶ್ರೀನಿವಾಸ್ ಅವರಿಗೆ ತುಂಬಾ ಸಂತೋಷವಾಯಿತು. ಅವರು ನನ್ನನ್ನು ಸೀದಾ ದತ್ತಾತ್ರೇಯ ಶಾಸ್ತ್ರೀ ಎಂಬುವರ ಮನೆಗೆ ಕರೆದುಕೊಂಡು ಹೋದರು. ಶಾಸ್ತ್ರಿಗಳು ದೊಡ್ಡ ಜಮೀನ್ದಾರರು ಮತ್ತೂ ಅಡಿಕೆ ಮಂಡಿ ಮಾಲೀಕರಾಗಿದ್ದರು. ಅವರು ಬ್ರಾಹ್ಮಣರ ಹಾಸ್ಟೆಲಿನ ಮ್ಯಾನೇಜಿಂಗ್ ಕಮಿಟಿಯಲ್ಲಿದ್ದರು. ಅವರು ನನ್ನ ಹೆಸರನ್ನು ರೆಕಮೆಂಡ್ ಮಾಡಲು ಒಪ್ಪಿಗೆ ನೀಡಿದರು. ಅವರೊಡನೆ ಭೇಟಿಯಾದ ನಂತರ ನನಗೆ ಹಾಸ್ಟೆಲ್ ಫ್ರೀ ಸೀಟ್ ಸಿಗುವುದು ಗ್ಯಾರಂಟಿ ಎಂದು ಅನಿಸಿತು. ಹಾಸ್ಟೆಲಿನ ಆಫೀಸ್ ಆಗ ಸಂಜೆ ಮಾತ್ರಾ ತೆರೆದಿರುತ್ತಿತ್ತು. ನಾವು ಹಾಸ್ಟೆಲಿಗೆ ಹೋಗಿ ನನ್ನ ಫ್ರೀ ಸೀಟಿಗೆ ಅರ್ಜಿ ಸಲ್ಲಿಸಿದೆವು. ಅರ್ಜಿಯೊಟ್ಟಿಗೆ ಅಣ್ಣ ತಂದಿದ್ದ ಎರಡು ರೆಕಮೆಂಡೇಷನ್ ಪತ್ರಗಳನ್ನೂ ಜೋಡಿಸಲಾಯಿತು.
ಕುಪ್ಪಯ್ಯನ ಮೆಸ್ ಮತ್ತು ಶ್ರೀನಿವಾಸ ಅಡಿಗರ ಭೇಟಿ
ಆಗ ಶಿವಮೊಗ್ಗದಲ್ಲಿ ಎಸ್ ಪಿ ಎಂ ರೋಡ್ ಅಡಿಕೆ ಮಂಡಿಗಳಿಗೆ ಪ್ರಸಿದ್ಧಿಯಾಗಿತ್ತು. ಹಾಗೆಯೇ ಅಲ್ಲಿದ್ದ ಕುಪ್ಪಯ್ಯನವರ ಮೆಸ್ ಊಟ, ತಿಂಡಿಗೆ ಹೆಸರಾಗಿತ್ತು. ಆ ಮೆಸ್ಸಿನ ಎದುರು ಭಾಗದಲ್ಲಿದ್ದ ಒಂದು ರೂಮಿನಲ್ಲಿ ನ್ಯಾಷನಲ್ ಹೈಸ್ಕೂಲ್ ಹಿಂದಿ ಮೇಷ್ಟರಾದ ಪಿ ಶ್ರೀನಿವಾಸ ಅಡಿಗರು ವಾಸವಾಗಿದ್ದರು. ಅವರು ಅಂದಗಾರು ದೇವಸ್ಥಾನದ ಮುಖ್ಯಸ್ಥರಾದ ಅಡಿಗರ ಸಹೋದರರಂತೆ. ಶ್ರೀನಿವಾಸ್ ಅವರು ನನ್ನನ್ನು ಅವರ ರೂಮಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ಆರಡಿ ಎತ್ತರದ ಅಜಾನುಬಾಹು ಅಡಿಗರು ನ್ಯಾಷನಲ್ ಹೈಸ್ಕೂಲಿನಲ್ಲಿ ಒಳ್ಳೆ ಹೆಸರು ಪಡೆದಿದ್ದರು. ಅವರು ನನಗೆ ಶಾಲೆಯಲ್ಲಿ ಏನೇ ತೊಂದರೆ ಬಂದರೂ ತಮ್ಮನ್ನು ಭೇಟಿಯಾಗಿ ತಿಳಿಸಬೇಕೆಂದು ಹೇಳಿದರು.
ಸೂರ್ಯನಾರಾಯಣ ರಾವ್ (SSR)
ಶ್ರೀನಿವಾಸ್ ಅವರು ನನ್ನನ್ನು
ನ್ಯಾಷನಲ್ ಹೈಸ್ಕೂಲಿನ ಇನ್ನೊಬ್ಬ ಮೇಷ್ಟರಿಗೆ ಪರಿಚಯ ಮಾಡಿಸಿದರು. ಅವರ ಹೆಸರು ಎಸ್ ಸೂರ್ಯನಾರಾಯಣ ರಾವ್ . ಮುಂದೆ ನಮ್ಮ ಕ್ಲಾಸ್ ಟೀಚರ್ ಅಗಲಿದ್ದ ಎಸ್ ಎಸ್ ಆರ್ ತುಂಬಾ ಪ್ರಸಿದ್ಧ ಮ್ಯಾಥಮ್ಯಾಟಿಕ್ಸ್ ಟೀಚರ್ ಆಗಿದ್ದರು. ಸಹ್ಯಾದ್ರಿ ಕಾಲೇಜಿನ ಅನೇಕ PUC
ಮತ್ತು B Sc ವಿದ್ಯಾರ್ಥಿಗಳಿಗೆ ಅವರು ಮನೆಯಲ್ಲೇ ಟ್ಯೂಷನ್ ಹೇಳುತ್ತಿದ್ದರಂತೆ. ಅವರ ಆ ಗಳಿಕೆ ಯಾವ ಮಟ್ಟದ್ದಾಗಿತ್ತೆಂದರೆ ಅವರು ಆ ಹಣದಲ್ಲೇ ದುರ್ಗಿಗುಡಿಯ ನೆಹರು ಮೈದಾನದ ಹತ್ತಿರ ಮನೆ ಕಟ್ಟಿಸಿ ಬಿಟ್ಟರು. ಕ್ಲಾಸಿನಲ್ಲಿ ತುಂಬಾ ಸ್ಟ್ರಿಕ್ಟ್ ಟೀಚರ್ ಎಂಬ ಹೆಸರು ಅವರಿಗಿತ್ತು. ಅವರ ಪತ್ನಿ ಶಿವಮೊಗ್ಗೆಯ ಪ್ರಸಿದ್ಧ ಅಡ್ವೋಕೇಟ್ ಸೀತಾರಾಮ ಶಾಸ್ತ್ರಿಗಳ ಮಗಳು.
ನನ್ನ ಕೈಯಲ್ಲೊಂದು ಹಣದ ಪರ್ಸ್ ಮತ್ತು ಲೆಖ್ಖ ಬರೆಯುವ ನೋಟ್ ಬುಕ್
ಮಾರನೇ ದಿನ ಅಣ್ಣ ನನ್ನನ್ನು ಪೇಟೆಗೆ ಕರೆದುಕೊಂಡು ಹೋಗಿ ಒಂದು ಟ್ರಂಕ್ ಮತ್ತು ಅದಕ್ಕೆ ಹಾಕಲು ಒಂದು ಬೀಗ ಹಾಗೂ ಕೀ ಕೊಡಿಸಿದ. ಅದಲ್ಲದೇ ನಾನು ಶಾಲೆಗೆ ಹೋಗುವಾಗ ಹಾಕಿಕೊಂಡು ಹೋಗಲು ಎರಡು ಶರ್ಟ್ ಮತ್ತು ಪೈಜಾಮಗಳನ್ನು ಮತ್ತು ಜೇಬಿನಲ್ಲಿಟ್ಟುಕೊಳ್ಳಲು ಒಂದು ಪರ್ಸ್ ಕೊಡಿಸಿದ. ನನ್ನ ಕೈಗೆ ಸ್ವಲ್ಪ ಹಣವಿಟ್ಟು ಒಂದು ನೋಟ್ ಬುಕ್ ಕೊಡಿಸಿ ಅದರಲ್ಲಿ ಖರ್ಚು ಮಡಿದ ಹಣದ ವಿವರ ಬರೆಯುವಂತೆ ಹೇಳಿದ.
ನಾನು ನೋಡಿದ ಮೊಟ್ಟ ಮೊದಲ ಹಿಂದಿ ಸಿನೆಮಾ
ಅಂದು ಸಂಜೆ ನನ್ನನ್ನು ಮೇಷ್ಟರ ಮನೆಯಲ್ಲಿ ಬಿಟ್ಟು ಅಣ್ಣ ಮತ್ತು ಕೃಷ್ಣರಾಯರು ಮೀನಾಕ್ಷಿ ಭವನಕ್ಕೆ ಹೊರಡಲು ತಯಾರಾದರು. ಅವರು ಮಾರನೇ ದಿನ ಊರಿಗೆ ಹೊರಡುವರಿದ್ದರು. ಅಣ್ಣ ನನ್ನನ್ನು ಅಗಲುವುದನ್ನು ನೆನಸಿ ನನ್ನ ಕಣ್ಣಲ್ಲಿ ನೀರಿಳಿಯ ತೊಡಗಿತು. ಅದನ್ನು ಗಮನಿಸಿದ ಅಣ್ಣ ನನಗೆ ಆ ರಾತ್ರಿ ಅವನೊಟ್ಟಿಗೆ ಹೋಟೆಲಿನಲ್ಲಿರುವಂತೆ ಹೇಳಿ ಕರೆದುಕೊಂಡು ಹೋದ. ಮೀನಾಕ್ಷಿ ಭವನದಲ್ಲಿ ನನಗಾಗಿ ಒಂದು ಎಕ್ಸ್ಟ್ರಾ ಬೆಡ್ ಹಾಕಿಸಲಾಯಿತು. ರಾತ್ರಿ ಹೋಟೆಲಿನ ಹತ್ತಿರವೇ ಇದ್ದ ಮಾಡರ್ನ್ ಟಾಕೀಸಿನಲ್ಲಿ ನಾವೊಂದು ಹಿಂದಿ ಸಿನಿಮಾ ನೋಡಲು ಹೋದೆವು. ಸುನೀಲ್ ದತ್ತ್ ಮತ್ತು ವ್ಯಜಯಂತಿಮಾಲಾ ಮುಖ್ಯ ಪಾತ್ರದಲ್ಲಿದ್ದ ಸಿನಿಮಾದ ಹೆಸರು ಝೂಲಾ (ತೂಗುಯ್ಯಾಲೆ) ಎಂದಿತ್ತು. ಪ್ರಾಯಶಃ ನನ್ನ ಮುಂದಿನ ವಿದ್ಯಾರ್ಥಿ ಜೀವನ ಕೂಡಾ ಒಂದು “ತೂಗುಯ್ಯಾಲೆ” ಆಗುವುದೆಂದು ಆ ಸಿನಿಮಾ ಸೂಚಿಸುತ್ತಿತ್ತೆಂದು ನನಗನಿಸತೊಡಗಿತು.
-------- ಮುಂದುವರಿಯುವುದು------
No comments:
Post a Comment