Friday, January 24, 2020

ಬಾಲ್ಯ ಕಾಲದ ನೆನಪುಗಳು – ೫೨


ಶಿವಮೊಗ್ಗೆಗೆ ನನ್ನ ಮೊದಲ ಪಯಣ
ಆ ದಿನಗಳಲ್ಲಿ ಮಾಧ್ಯಮಿಕ ಶಾಲೆಗಳು ಬೇಸಿಗೆ ರಜೆಯ ನಂತರ ಮೇ ತಿಂಗಳ ಕೊನೆಯ ವಾರ ಪುನರಾರಂಭವಾಗುತ್ತಿದ್ದವು. ಹಾಗೆಯೇ ಪ್ರೌಢಶಾಲೆಗಳು ಜೂನ್ ೧ನೇ ತಾರೀಕು ಮತ್ತು ಕಾಲೇಜುಗಳು ಜೂಲೈ ೧ನೇ ತಾರೀಕು  ಪುನರಾರಂಭವಾಗುತ್ತಿದ್ದವು. ಮೇ ತಿಂಗಳ ಕೊನೆಯ ವಾರ ನಮ್ಮ ಪಬ್ಲಿಕ್ ಪರೀಕ್ಷೆ ರಿಸಲ್ಟ್ ಬರುತ್ತಿದ್ದಂತೆಯೇ ಅಣ್ಣ ನನ್ನನ್ನು ಟಿ ಸಿ ಮತ್ತು ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಬರುವಂತೆ ಹೊಕ್ಕಳಿಕೆಗೆ ಕಳಿಸಿದ. ನನ್ನ ನಿರೀಕ್ಷೆಯಂತೆ ನನಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ದೊರೆತಿದ್ದವು. ಆದರೆ ಆ ವೇಳೆಯಲ್ಲಿ ಹೆಡ್ ಮಾಸ್ಟರ್ ರಾಮಪ್ಪನವರು ರಜೆಯ ಮೇಲಿದ್ದರು ಮತ್ತ್ತು ಅವರಿಗೆ ಟ್ರಾನ್ಸ್ಫರ್ ಕೂಡ ಆಗಿತ್ತು. ಹಾಗಾಗಿ ನನಗೆ ಟಿ ಸಿ ದೊರೆಯುವುದು ಸ್ವಲ್ಪ ತಡವಾಯಿತು. ಅಣ್ಣ ನನಗೆ ಅರ್ಜೆಂಟ್ ಆಗಿ ಟಿ ಸಿ ಮತ್ತು ಮಾರ್ಕ್ಸ್ ಕಾರ್ಡ್  ತೆಗೆದುಕೊಂಡು ಬರುವಂತೆ ಪುಟ್ಟಣ್ಣನ ಮೂಲಕ ಹೇಳಿ ಕಳಿಸಿದ. ಕೊನೆಗೆ ಗಿರಿಯಪ್ಪನವರೇ ಟಿ ಸಿ ಸಹಿ ಮಾಡಿ ನನಗೆ ಕೊಟ್ಟು ಬಿಟ್ಟರು.
ರಘು ಹೋಟೆಲಿನ ಮಸಾಲೆ ದೋಸೆ!
ಆ ದಿನ ಸುಮಾರು ಮದ್ಯಾಹ್ನ ೩ ಗಂಟೆಗೆ ನಾನು ಟಿ ಸಿ ಮತ್ತು ಮಾರ್ಕ್ಸ್ ಕಾರ್ಡ್  ಪಡೆದು ಕೊಪ್ಪ ತಲುಪಿದೆ. ಅಲ್ಲಿ ಅಣ್ಣ ಗೋಳಿಕಟ್ಟೆ ಕೃಷ್ಣರಾಯರೊಡನೆ ನನಗಾಗಿ ಕಾಯುತ್ತಿದ್ದ. ಆ ವೇಳೆಗೆ (ಜೂನ್ ಮೊದಲ ವಾರ) ಶಿವಮೊಗ್ಗದ ಮೂರು ಪ್ರೌಢಶಾಲೆಗಳಲ್ಲೂ ಸೀಟ್ ಭರ್ತಿಯಾಗಿ ಹೋಗಿರುವುದಾಗಿ ಅಣ್ಣನಿಗೆ ಸಮಾಚಾರ ಬಂದಿತ್ತು. ಆ ರಾತ್ರಿಯೇ ಶಿವಮೊಗ್ಗ ತಲುಪಿ ಮಾರನೇ ದಿನ ಹೇಗಾದರೂ ನನಗೊಂದು ಸೀಟ್ ಸಿಗುವಂತೆ ಮಾಡುವುದು ಅಣ್ಣನ ಗುರಿಯಾಗಿತ್ತು. ನನಗೆ ಮಧ್ಯಾಹ್ನದ ಊಟವೇ ಆಗಿಲ್ಲದಿದ್ದರಿಂದ ಅಣ್ಣ ನನ್ನನ್ನು ಬಸ್ ಸ್ಟ್ಯಾಂಡಿನ ರಘು ಹೋಟೆಲಿಗೆ ಕರೆದುಕೊಂಡು ಹೋಗಿ ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದ.

ನನಗೆ ಎಷ್ಟೋ ವರ್ಷದ ಹಿಂದೆ ಚಿಕ್ಕಮಗಳೂರಿನಲ್ಲಿ ಮಸಾಲೆ ದೋಸೆ ತಿಂದ ನಂತರ ಪುನಃ ತಿನ್ನುವ ಅವಕಾಶ ಸಿಕ್ಕಿರಲಿಲ್ಲ. ಆದರೆ ನಾನು ತುಂಬಾ ಇಷ್ಟಪಟ್ಟು  ಮಸಾಲೆ ದೋಸೆ ಸವಿಯುತ್ತಿರುವಷ್ಟರಲ್ಲೇ ಶಂಕರ್ ಕಂಪನಿಯ ಬಸ್ ಏಜೆಂಟ್ "ಯಾರ್ರೀ ಶಿವಮೊಗ್ಗಾ ಶಿವಮೊಗ್ಗಾ ಶಿವಮೊಗ್ಗಾ " ಎಂದು ಕೂಗುವುದನ್ನು ಕೇಳಿ ದೋಸೆ ನನ್ನ ಗಂಟಲಲ್ಲಿ ಸಿಕ್ಕಿದಂತಾಯಿತು. ನನ್ನ ಎದೆಯೂ ಜೋರಾಗಿ ಹೊಡೆದುಕೊಳ್ಳ ತೊಡಗಿತು. ನಾನು ಹೊಕ್ಕಳಿಕೆಯಿಂದ ಬಂದ  ನಂತರ ಊರಿಗೆ ಹೋಗಿ ಅಪ್ಪ ಮತ್ತ್ತು ಅಮ್ಮನನ್ನು ನೋಡದೇ ಸೀದಾ ನಾನು ಅಲ್ಲಿಯವರೆಗೆ ನೋಡದ ಶಿವಮೊಗ್ಗೆಗೆ ಹೋಗ ಬೇಕಾದ ಸನ್ನಿವೇಶದಿಂದ ತುಂಬಾ ಗಾಭರಿಗೊಳಗಾಗಿದ್ದೆ. ನನ್ನ ಮನಸ್ಥಿತಿ ಅಣ್ಣನಿಗೆ ಗೊತ್ತಾಗಿ ಅವನು ನನಗೆ ನಿಧಾನವಾಗಿ ದೋಸೆ ತಿನ್ನುವಂತೆ ಹೇಳಿದ. ಅವನ ಪ್ರಕಾರ  ಅರ್ಧ ಗಂಟೆಯ ನಂತರ  ಶಿವಮೊಗ್ಗೆಗೆ ಇನ್ನೊಂದು ಬಸ್ ಇರುವುದೆಂದೂ ನಾವು ಅದರಲ್ಲಿ ಪ್ರಯಾಣ ಮಾಡಬೇಕೆಂದೂ ತಿಳಿದು ನನ್ನ ಮನಸ್ಥಿತಿ ಸ್ವಲ್ಪ ಶಾಂತವಾಯಿತು.
ಗಲಿವರ್ ಮತ್ತು ಲಿಲಿಪುಟ್ಸ್!
ಅಣ್ಣ ಹೇಳಿದಂತೆ ಶಿವಮೊಗ್ಗೆಗೆ ಹೋಗುವ ಇನ್ನೊಂದು ಬಸ್ ಶೃಂಗೇರಿಯಿಂದ ಸ್ವಲ್ಪ ಸಮಯದ ನಂತರ ನಿಲ್ದಾಣಕ್ಕೆ ಬಂತು. ಅದು ಸಿ ಕೆ ಎಂ ಎಸ್ ಕಂಪನಿಗೆ ಸೇರಿದ ಲೇಲ್ಯಾಂಡ್ ಬಸ್. ನಾನು ಹಿಂದೊಮ್ಮೆ ಆ ಬಸ್ಸನ್ನು ಕೊಪ್ಪದಲ್ಲಿ ನೋಡಿದ್ದೆ. ಅದು ಶಂಕರ್ ಕಂಪನಿಯ ಬೆಂಜ್ ಬಸ್ಸುಗಳಿಗಿಂತಲೂ ತುಂಬಾ ಆಕರ್ಷಕವಾಗಿತ್ತು. ಅಲ್ಲದೇ ಅದು ತೀರ್ಥಹಳ್ಳಿಯ ಮಾರ್ಗವಾಗಿ ಶಿವಮೊಗ್ಗೆಗೆ ಹೋಗುವುದಂತೆ. ಆ ಮಾರ್ಗದ ರಸ್ತೆ ಸಂಪೂರ್ಣ ಟಾರ್ ರಸ್ತೆಯಾಗಿತ್ತಂತೆ. ಶಂಕರ್ ಕಂಪನಿಯ ಶಿವಮೊಗ್ಗೆ ಬಸ್ಸುಗಳು ನರಸಿಂಹರಾಜಪುರ ಮಾರ್ಗವಾಗಿ ಹೋಗುತ್ತಿದ್ದು ಆ ರಸ್ತೆ ಆಗ ಸಂಪೂರ್ಣ ಟಾರ್ ರಸ್ಥೆಯಾಗಿರಲಿಲ್ಲ. ಸಿ ಕೆ ಎಂ ಎಸ್  ಬಸ್ಸಿನ ಇನ್ನೊಂದು ವಿಶೇಷ ಅದರ ಡ್ರೈವರ್. ಅವನ ವ್ಯಕ್ತಿತ್ವ ಮತ್ತು ಎತ್ತರ ನಾವು ಪಾಠದಲ್ಲಿ ಓದಿ ಚಿತ್ರ ನೋಡಿದ್ದ ಗಲಿವರ್ ನಿಗೆ ಸಮಾನವಾಗಿತ್ತು. ವಾಸ್ತವವಾಗಿ ಡ್ರೈವರ್ ಸೀಟಿನಲ್ಲಿ ತಲೆ ಎತ್ತಿ ಕುಳಿತುಕೊಳ್ಳಲಾಗದಷ್ಟು ಎತ್ತರ ಅವನದಾಗಿತ್ತು! ಅವನು ಬಸ್ಸಿನಿಂದ ಇಳಿದು ಬಂದಾಗ ಉಳಿದವರೆಲ್ಲಾ ಅವನ  ಮುಂದೆ ಲಿಲಿಪುಟ್ ಗಳಂತೆ ಕಾಣಿಸಿದರು!
ಬಂತು! ಬಂತು! ಶಿವಮೊಗ್ಗ ಬಂತು!
ನಾವು ಮೂವರು ಬಸ್ ಹತ್ತಿ ಕುಳಿತು ಬಸ್ ಚಲಿಸಿ ತೀರ್ಥಹಳ್ಳಿ ತಲುಪುವ ವೇಳೆಗೆ ನನಗೆ ಗಲಿವರನೊಡನೆ ನಾನೊಂದು “ಸಾಹಸ ಯಾತ್ರೆ” ಮಾಡುತ್ತಿರುವ ಅನುಭವ ಬರತೊಡಗಿತು. ಏಕೆಂದರೆ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ಶಿವಮೊಗ್ಗೆಯಂತಹ ನಗರದ ಪ್ರೌಢಶಾಲೆಯಲ್ಲಿ ಓದುವ ಅವಕಾಶ ಬರುವುದೆಂದು ನಾನೆಂದೂ ಕನಸ್ಸಿನಲ್ಲೂ ಎಣಿಸಿರಲಿಲ್ಲ. ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಶಿವಮೊಗ್ಗ ಮುಖ್ಯವಾದ ವ್ಯಾಪಾರ ಕೇಂದ್ರವಾಗಿತ್ತು. ಅಲ್ಲದೇ ಅಲ್ಲಿನ ಸಹ್ಯಾದ್ರಿ ಕಾಲೇಜು ತುಂಬಾ ಪ್ರಸಿದ್ಧಿ ಪಡೆದಿತ್ತು. ರಾತ್ರಿ ಸುಮಾರು ೮ ಗಂಟೆಯ ವೇಳೆಗೆ ನಾವು ಶಿವಮೊಗ್ಗ ಬಸ್ ಸ್ಟ್ಯಾಂಡ್  ತಲುಪಿದೆವು. ಅಲ್ಲಿ ನಾವೊಂದು ಜಟಕಾ ಬಂಡಿ ಏರಿ ಸುಖನಿವಾಸ ಎಂಬ ಹೋಟೆಲಿಗೆ ಹೋದೆವು. ನನ್ನ ಜೀವನದಲ್ಲಿ ಮೊದಲ ಬಾರಿಗೆ ಜಟಕಾ ಬಂಡಿಯೊಳಗೆ ಕುಳಿತಾಗ ನನಗೆ "ಬದುಕು ಜಟಕಾ ಬಂಡಿ;  ವಿಧಿ ಅದರ ಸಾಹೇಬ" ಎಂದು ಹಿಂದೆ ಎಲ್ಲಿಯೋ ಓದಿದ ನೆನಪಾಯಿತು.
ಗಿಡ ಮರಗಳಿಲ್ಲದ ಗಾರ್ಡನ್ ಏರಿಯಾ!
ಸುಖನಿವಾಸ ಕೇವಲ ಊಟದ ಹೋಟೆಲ್ ಆದರೂ ತುಂಬಾ ಪ್ರಸಿದ್ಧಿ ಪಡೆದ ಹೋಟೆಲ್ ಆಗಿತ್ತು. ವಿಚಿತ್ರವೆಂದರೆ ಅದು ಶಿವಮೊಗ್ಗೆಯ “ಗಾರ್ಡನ್ ಏರಿಯಾ” ಎಂಬಲ್ಲಿದ್ದರೂ ಸುತ್ತಮುತ್ತ ಯಾವುದೇ ಮರ ಗಿಡಗಳಿರಲಿಲ್ಲ! ಮಾತ್ರವಲ್ಲ. ಆ ಪ್ರದೇಶವೆಲ್ಲಾ ಆಟೋಮೊಬೈಲ್ ವರ್ಕ್ ಶಾಪ್ ಗಳಿಂದ ತುಂಬಿ ಹೋಗಿತ್ತು! ಊಟ ಮುಗಿಸಿದ ನಂತರ ನಾವು ಕಾಲ್ನಡಿಗೆಯಲ್ಲಿ ಹತ್ತಿರದ ದುರ್ಗಿಗುಡಿಯಲ್ಲಿದ್ದ ನ್ಯಾಷನಲ್ ಮಿಡ್ಲ್ ಸ್ಕೂಲ್ ಮೇಷ್ಟ್ರು ಅರುಣಾಚಲಂ ಅವರ ಮನೆಗೆ ಹೋದೆವು.

ಮೇಷ್ಟ್ರು ದುರ್ಗಿಗುಡಿಯ ತಮ್ಮ ಸ್ವಂತ ಮನೆಯಲ್ಲಿ ಮಲೆನಾಡಿನ ಹುಡುಗರಿಗಾಗಿ ಒಂದು ಊಟ ತಿಂಡಿ ಮೆಸ್ ನಡೆಸುತ್ತಿದ್ದರು. ನಮ್ಮನ್ನು ಆದರದಿಂದ ಸ್ವಾಗತಿಸಿದ ಮೇಷ್ಟ್ರು ನನ್ನ ಮಾರ್ಕ್ಸ್ ಕಾರ್ಡ್ ನೋಡಿ ನನಗೆ ನ್ಯಾಷನಲ್ ಹೈಸ್ಕೂಲಿನಲ್ಲಿ ಸೀಟ್ ದೊರೆಯುವುದು ಗ್ಯಾರಂಟಿ ಎಂದು ಹೇಳಿಬಿಟ್ಟರು. ಅಲ್ಲಿಗೆ ನನಗೆ ಮತ್ತು ಅಣ್ಣನಿಗೆ ಸ್ವಲ್ಪ ನೆಮ್ಮದಿ ಸಿಕ್ಕಿತು. ಹಾಗೆಯೇ  ಮೇಷ್ಟ್ರು ಇಂಗ್ಲಿಷ್ ಮೀಡಿಯಂ ಸೀಟ್ ದೊರೆಯಲು ನಾನು ಇತರ ವಿದ್ಯಾರ್ಥಿಗಳೊಡನೆ ಒಂದು ಟೆಸ್ಟ್ ನಲ್ಲಿ ಭಾಗಿಯಾಗಿ ಅದರಲ್ಲಿ ಪಾಸ್ ಮಾಡಬೇಕೆಂದು ತಿಳಿಸಿದರು. ನಂತರ ನನ್ನನ್ನು ಮೇಷ್ಟರ ಮನೆಯಲ್ಲೇ ಇರುವಂತೆ ಹೇಳಿ ಅಣ್ಣ ಕೃಷ್ಣರಾಯರೊಡನೆ ಮೀನಾಕ್ಷಿ ಭವನ ಎಂಬ ಹೋಟೆಲಿಗೆ ಹೊರಟು ಹೋದ. ನ್ಯಾಷನಲ್ ಹೈ ಸ್ಕೂಲ್ ಅಡ್ಮಿಶನ್ ನನಗೆ ಮಾರನೇ ದಿನ ಮಾಡಲು ಏರ್ಪಾಟು ಮಾಡಲಾಗಿತ್ತು. ಅಲ್ಲಿಗೆ ನನ್ನ ಅಕ್ಕನ ಮನೆಯ ಮೂರು ವರ್ಷ “ಸುಖಜೀವನ” ಕೊನೆಗೊಂಡು ಪೇಟೆಯ “ಗಡಿಬಿಡಿಯ” ಜೀವನ ಆರಂಭವಾಯಿತೆಂದು ನನಗೆ ಅನ್ನಿಸಿತು!
-------- ಮುಂದುವರಿಯುವುದು------

No comments: