Tuesday, January 21, 2020

ಬಾಲ್ಯ ಕಾಲದ ನೆನಪುಗಳು – ೫೦


ವರ್ಷ (೧೯೬೧-೧೯೬೨)  ಮೊಟ್ಟ ಮೊದಲ  ಬಾರಿಗೆ ನಮ್ಮ ೮ನೇ ತರಗತಿಗೆ ಜಿಲ್ಲಾ ಮಟ್ಟದಲ್ಲಿ ಪಬ್ಲಿಕ್ ಪರೀಕ್ಷೆ ನಡೆಸುವುದಾಗಿ ತೀರ್ಮಾನಿಸಲಾಯಿತು. ನಾವೆಲ್ಲ ನಮ್ಮ ವಿದ್ಯಾಭ್ಯಾಸದಲ್ಲಿ ಮೊದಲ ಬಾರಿಗೆ ಪ್ರಿಂಟ್ ಆದ ಮತ್ತು ಊಹಿಸಲೂ ಅಸಾಧ್ಯವಾದ ಪ್ರಶ್ನೆ ಪತ್ರಿಕೆಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೆವು.  ಪರೀಕ್ಷೆಯ ನಿಯಮದ ಪ್ರಕಾರ ಸೀಲ್ ಮಾಡಿದ  ಲಕೋಟೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇಟ್ಟು ಅವನ್ನು ಒಂದು ಸೀಲ್ ಮಾಡಿದ ಪೆಟ್ಟಿಗೆಯಲ್ಲಿ ಪರೀಕ್ಷೆ ಆರಂಭವಾಗುವ ಮುನ್ನ ನಮ್ಮ ಶಾಲೆಗೆ ಕಳುಹಿಸಲಾಯಿತು. ನಮ್ಮ ಹೆಡ್ ಮಾಸ್ಟರ್ ಅವರು ಪ್ರತಿ ದಿನ ಟೈಮ್ ಟೇಬಲ್ ಪ್ರಕಾರ ಲಕೋಟೆಯನ್ನು ಪೆಟ್ಟಿಗೆಯಿಂದ ಇನ್ನೊಬ್ಬ ಮೇಷ್ಟರ ಎದುರಿಗೆ ಹೊರತೆಗೆದು ನಮಗೆ ಹಂಚಬೇಕಾಗಿತ್ತು.

ಯತಾ ಪ್ರಕಾರ ನಮ್ಮ ಹೆಡ್ ಮಾಸ್ಟರ್ ರಾಮಪ್ಪನವರು ಮತ್ತು ಗಿರಿಯಪ್ಪನವರು ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ತೀರ್ಮಾನಿಸಿದ್ದರು. ಅವರ ಕೃತ್ಯಕ್ಕೆ ಗೋಪಾಲ ಮೇಷ್ಟರು ಮತ್ತು ಗುರುಶಾಂತಪ್ಪನವರ ತೀವ್ರ ವಿರೋಧವಿದ್ದರೂ  ಜೋಡಿ ಅದಕ್ಕೆ ಕೇರ್ ಮಾಡಲೇ ಇಲ್ಲ. ಬಗ್ಗೆ ನನಗೆ ಯಾವುದೇ ಕಂಪ್ಲೇಂಟ್ ಇಲ್ಲದಿದ್ದರೂ ನನ್ನ ಉತ್ತರಗಳನ್ನು ಬೇರೆ ಯಾವುದೇ ವಿದ್ಯಾರ್ಥಿ ಕಾಪಿ ಮಾಡುವುದು ನನಗೆ ಸುತಾರಾಂ ಇಷ್ಟವಿರಲಿಲ್ಲ. ಮೊದಲಿಗೆ ಹಾಗೇನೂ ಆಗದಿದ್ದರೂ ಮ್ಯಾಥಮ್ಯಾಟಿಕ್ಸ್ ಪತ್ರಿಕೆ ಹಂಚಿದಾಗ ಪರಿಸ್ಥಿತಿ ಬದಲಾಯಿಸಿತು. ಪತ್ರಿಕೆಯಲ್ಲಿದ್ದ ಒಂದು ಅಂಕಗಣಿತದ ಪ್ರಶ್ನೆ ನಮಗೆ ಅಲ್ಲಿಯವರೆಗೆ ಮಾಡಿದ ಪಾಠಗಳಿಗಿಂತ ಸ್ವಲ್ಪ ವಿಭಿನ್ನವಾಗಿತ್ತು. ರಾಮಪ್ಪ ಮತ್ತು ಗಿರಿಯಪ್ಪ ಜೋಡಿಗೆ ಅಂಕಗಣಿತ ಸಮಸ್ಯೆಗಳಿಗೆ   ಉತ್ತರ ಕಂಡು ಹಿಡಿಯುವ ತಮ್ಮ ಜಾಣ್ಮೆಯ ಬಗ್ಗೆ  ತುಂಬಾ ಹೆಮ್ಮೆಯಿತ್ತು. ಅವರಿಬ್ಬರೂ ಸೇರಿ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಉತ್ತರ ತಯಾರಿಸಿ ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಅನುಕೂಲವಾಗುವಂತೆ ಬೋರ್ಡಿನ ಮೇಲೆ ಬರೆದು ಬಿಟ್ಟರು. ನಾನು ಪ್ರಶ್ನೆಗೆ ನನ್ನದೇ ಆದ  ರೀತಿಯಲ್ಲಿ ವರ್ಕ್ ಔಟ್ ಮಾಡಿ ಉತ್ತರ ಬರೆದುಬಿಟ್ಟಿದ್ದೆ. ಮಾತ್ರವಲ್ಲ.  ಜೋಡಿಯು ತಯಾರಿಸಿದ ಉತ್ತರದಲ್ಲಿ ತಪ್ಪಾಗಿರುವುದು ನನಗೆ ಸ್ಪಷ್ಟವಾಗಿತ್ತು. ನಾನು ನನ್ನ ಉತ್ತರ ಜೋಡಿಯ ಕಣ್ಣಿಗೆ ಬೀಳದಂತೆ ನೋಡಿಕೊಳ್ಳುವುದರಲ್ಲಿ ಮಗ್ನನಾಗಿದ್ದೆ.

ಆದರೆ ಅದು ನಾನೆಣಿಸಿದಷ್ಟು ಸುಲಭವಾಗಿರಲಿಲ್ಲ. ಗಿರಿಯಪ್ಪನವರು ಅವರು ಬೋರ್ಡಿನ ಮೇಲೆ ಬರೆದ ಉತ್ತರವನ್ನು ಪ್ರತಿ ವಿದ್ಯಾರ್ಥಿಯೂ ಸರಿಯಾಗಿ ಕಾಪಿ ಮಾಡಿರುವನೇ ಎಂದು ನೋಡುತ್ತಾ ನನ್ನ  ಬಳಿಗೂ ಬಂದರು. ನಾನು ನನ್ನ ಉತ್ತರಗಳನ್ನು ಅವರಿಂದ ಮರೆಮಾಚಲು ಪ್ರಯತ್ನಿಸುವುದು ಅವರಿಗೆ ಗೊತ್ತಾಗಿ ಅವರ ಕುತೂಹಲ ಇನ್ನೂ ಹೆಚ್ಚಾಯಿತು. ಇದ್ದಕ್ಕಿದ್ದಂತೆ ಅವರಿಗೆ ಹಿಂದಿ ಪರೀಕ್ಷೆಯಲ್ಲಿ ನನ್ನ ಉತ್ತರಗಳನ್ನು ಕಾಪಿ ಮಾಡಿಸದೇ ಅವರ ಸ್ನೇಹಿತರು ಗೋತಾ ಹೊಡೆದುದು ನೆನಪಿಗೆ ಬಂದಿರಬೇಕು. ಅವರು ನನಗೆ ಪ್ರಶ್ನೆಗೆ ನಾನು ಬರೆದ ಉತ್ತರವನ್ನು ತೋರಿಸುವಂತೆ ಹೇಳಿದರು. ನನಗೆ ನಿರ್ವಾಹವಿಲ್ಲದೆ ಹೋಯಿತು. ನನ್ನ ಉತ್ತರ ಪತ್ರಿಕೆಯನ್ನು ನನ್ನ ಕೈಯಿಂದ ಕಿತ್ತುಕೊಂಡು ನಾನು ಬರೆದ ಉತ್ತರವನ್ನು ಸೂಕ್ಷ್ಮವಾಗಿ ಗಮನಿಸಿದರು. ಕೂಡಲೇ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಸೀಧಾ ರಾಮಪ್ಪನವರ ಬಳಿಗೆ ಓಡಿ ಹೋದರು. ರಾಮಪ್ಪನವರಿಗೂ ನನ್ನ  ಉತ್ತರ ಸರಿಯೆಂದು ತಿಳಿದು ಹೋಯಿತು. ಆದರೆ ಜೋಡಿ ನನ್ನ ಜಾಣ್ಮೆಯ ಬಗ್ಗೆ ಒಂದು ಮಾತೂ ಆಡದೇ ನನ್ನ ಉತ್ತರವನ್ನು ಬೋರ್ಡಿನ ಮೇಲೆ ಬರೆದು ಉಳಿದವರಿಗೆ ಅದನ್ನೇ ಕಾಪಿ ಮಾಡಲು ಹೇಳಿ ಬಿಟ್ಟರು. ಆಗ ನನಗಾದ ಕೋಪ ಅಷ್ಟಿಷ್ಟಲ್ಲ. ಆದರೆ ನಾನು ಏನೂ ಮಾಡುವಂತಿರಲಿಲ್ಲ.

ಆದರೆ ಜೋಡಿಯ "ನಾಟಕ" ಅಲ್ಲಿಗೇ ಮುಗಿಯಲಿಲ್ಲ. ಅವರಿಬ್ಬರೂ ಸೇರಿ ಮಾಡಿದ ಇನ್ನೊಂದು ಪ್ರಮಾದ ನಮ್ಮ ಪರೀಕ್ಷಾ ಫಲಿತಾಂಶದ ಬಗ್ಗೆಯೇ ನಮ್ಮ ತಲೆ ಕೆಡಿಸುವ ಮಟ್ಟದ್ದಾಗಿತ್ತು! ನಮ್ಮ ಪರೀಕ್ಷೆಯ ಕೊನೆಯ ದಿನ ಒಂದು ಶನಿವಾರವಾಗಿದ್ದು ಅದರ ಹಿಂದಿನ ದಿನ ಮದ್ಯಾಹ್ನದ ನಂತರ ನಮಗೆ ಹಿಂದಿ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯ ಬೇಕಾಗಿತ್ತು. ನಾನು   ಮೊದಲೇ ಬರೆದಂತೆ ಹಿಂದಿ ಸಬ್ಜೆಕ್ಟ್ ಆರೋಗ್ಯದ ಬದಲಿಗೆ ಐಚ್ಛಿಕ ಸಬ್ಜೆಕ್ಟ್ ಆಗಿತ್ತು. ಹಿಂದಿ ಸಬ್ಜೆಕ್ಟ್ ಇಡೀ ತೀರ್ಥಹಳ್ಳಿ ತಾಲೂಕಿನಲ್ಲಿ ಕೇವಲ ನಮ್ಮ ಶಾಲೆಯಲ್ಲಿ ಮತ್ತೂ ತೀರ್ಥಹಳ್ಳಿ ಮಾಧ್ಯಮಿಕ ಶಾಲೆಯಲ್ಲಿ ಮಾತ್ರಾ ಇತ್ತು. ಪರೀಕ್ಷೆಯ ದಿನ ಲಕೋಟೆಯ ಸೀಲ್ ಒಡೆದು ನಮ್ಮ ಕೈಗೆ ಪೇಪರ್ ಕೊಟ್ಟಾಗ ನಮಗೆಲ್ಲಾ ಶಾಕ್ ತಗುಲಿದಂತಾಯಿತು. ಏಕೆಂದರೆ ಪ್ರಶ್ನೆ ಪತ್ರಿಕೆ ಹಿಂದಿಯ ಬದಲಿಗೆ ಆರೋಗ್ಯದಾಗಿತ್ತು! ವಿಷಯ ಗೊತ್ತಾದ ಮೇಷ್ಟರುಗಳಿಗೆ ಮುಂದೇನು ಮಾಡಬೇಕೆಂದು ಹೊಳೆಯದೇ ಕಂಗಾಲಾಗಿಬಿಟ್ಟರು.

ಟೆಲಿಫೋನ್ ಸಂಪರ್ಕ ಇನ್ನೂ ಬಂದಿರದ ದಿನಗಳಲ್ಲಿ ತೀರ್ಥಹಳ್ಳಿಯಲ್ಲಿದ್ದ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಲು ಕೇವಲ ಬಸ್ಸಿನ ಪ್ರಯಾಣ ಮಾಡಿ ಮಾತ್ರಾ ಸಾಧ್ಯವಿತ್ತು. ಸಂಜೆಯ ಒಳಗೆ  ಅಲ್ಲಿಗೆ ತಲುಪಿ ಅವರಿಂದ ಹಿಂದಿ ಪ್ರಶ್ನೆ ಪತ್ರಿಕೆ ಪಡೆದು ಹಿಂದಿರುಗುವ ಸಾಧ್ಯತೆ ಇರಲೇ ಇಲ್ಲ. ರಾಮಪ್ಪನವರ ಆಜ್ಞೆಯ ಮೇರೆಗೆ ಗಿರಿಯಪ್ಪನವರನ್ನು ತೀರ್ಥಹಳ್ಳಿಗೆ ಕಳಿಸಿ ಶಿಕ್ಷಣಾಧಿಕಾರಿಯನ್ನು ಬೇಟಿಮಾಡಿ ಹಿಂದಿ ಪತ್ರಕೆಗಳನ್ನು ಪಡೆದು ಬರುವಂತೆ ಏರ್ಪಾಟು ಮಾಡಲಾಯಿತು.

ನಡುವೆ ಗೋಪಾಲ ಮೇಷ್ಟರನ್ನು ಬಿಟ್ಟು ಉಳಿದ ಮೇಷ್ಟರುಗಳಿಗೆ ಇನ್ನೊಂದು ಸಮಸ್ಯೆ ಎದುರಾಯಿತು. ಅವರೆಲ್ಲಾ ಮಾರನೆಯ ದಿನ ಶನಿವಾರ ಬೇಸಿಗೆ ರಜೆಗಾಗಿ ಊರಿಗೆ ಪ್ರಯಾಣ ಮಾಡಬೇಕೆಂದಿದ್ದರು.  ಟೈಮ್ ಟೇಬಲ್ ಪ್ರಕಾರ ನಾವು ಭೂಗೋಳ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದ ನಂತರ ಅವರಿಗೆ ಬಸ್ ಪ್ರಯಾಣ ಮಾಡಲು ಸಾಕಷ್ಟು ಸಮಯ ಇತ್ತು. ಆದರೆ ನಾವು ಹಿಂದಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದ ನಂತರ ಅಂದರೆ ಸಂಜೆಯ ವೇಳೆಗೆ ಅವರಿಗೆ ಬಸ್ ಸಿಗುವ ಸಾಧ್ಯತೆ ಇರಲಿಲ್ಲ. ಆದರೆ ಅವರಲ್ಲಿ ಯಾರಿಗೂ ಇನ್ನೊಂದು ದಿನ ತಡೆದು ಊರಿಗೆ ಹೊರಡುವ ಇಚ್ಛೆ ಇರಲಿಲ್ಲ. ಆಗ ಇದ್ದಕ್ಕಿದ್ದಂತೇ ಅವರಿಗೊಂದು ಐಡಿಯಾ ಹೊಳೆಯಿತು.
ಅದೇನೆಂದರೆ ಭೂಗೋಳ ಪ್ರಶ್ನೆ ಪತ್ರಿಕೆಗೆ ಶನಿವಾರದ ಬದಲು ಶುಕ್ರವಾರವೇ (ಹಿಂದಿಯ ಬದಲಿಗೆ) ನಮ್ಮಿಂದ ಉತ್ತರ ಬರೆಸುವುದು! ಐಡಿಯಾ ಹೊಳೆದುದಕ್ಕೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಮೂವರು ಮೇಷ್ಟರುಗಳು ಮಾರನೇ ದಿನ ನಮ್ಮಿಂದ ಬರೆಸಬೇಕಾದ ಭೂಗೋಳ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಅಂದೇ ಬರೆಯುವಂತೆ ಹೇಳಿ ಲಕೋಟೆಯ ಸೀಲ್ ಒಡೆದು ಪೇಪರ್ ಹಂಚಿ  ಬಿಟ್ಟರು. ಗೋಪಾಲ ಮೇಷ್ಟರು ಆಗ ಅಲ್ಲಿರಲಿಲ್ಲ. ಅವರಿದ್ದರೆ ನಿರ್ಧಾರಕ್ಕೆ ಅವರು ಒಪ್ಪುತ್ತಿರಲಿಲ್ಲ. ನಾನು ಭೂಗೋಳದ ಪರೀಕ್ಷೆಗೆ ಆಗಲೇ ತಯಾರಿ ಮಾಡಿದ್ದರಿಂದ ಯಾವುದೇ ತೊಂದರೆ ಇಲ್ಲದೇ ಉತ್ತರಗಳನ್ನು ಬರೆದು ಬಿಟ್ಟೆ.

ಮಾರನೇ ದಿನ ನಾವು ಶಾಲೆಗೆ ಹೋದಾಗ ಮೇಷ್ಟರುಗಳ ಮುಖಗಳು ಸಪ್ಪಗಾಗಿದ್ದನ್ನು ನೋಡಿದೆವು. ಕಾರಣವಿಷ್ಟೇ. ತೀರ್ಥಹಳ್ಳಿಗೆ ಹೋದ ಗಿರಿಯಪ್ಪನವರು ಶಿಕ್ಷಣಾಧಿಕಾರಿಗೆ ತಾವು ಮಾರನೇ ದಿನ ನಡೆಸಬೇಕಾಗಿದ್ದ ಭೂಗೋಳದ ಪರೀಕ್ಷೆಯನ್ನು ಆಗಲೇ ಮುಗಿಸಿದ್ದನ್ನು ತಿಳಿಸಿದರಂತೆ. ಅದನ್ನು ಕೇಳಿದ ಶಿಕ್ಷಣಾಧಿಕಾರಿ ಕೋಪದಿಂದ ಅವರ ಮೇಲೆ ಕೂಗಾಡಿದರಂತೆ. ಅವರ ಪ್ರಕಾರ ಬಸವಾನಿಯಲ್ಲಿ ನಮಗೆ ಹಂಚಿದ ಭೂಗೋಳದ ಪೇಪರ್ ಅದೇ ರಾತ್ರಿ ತೀರ್ಥಹಳ್ಳಿ ಮತ್ತು ಇತರ ಶಾಲೆಗಳನ್ನು ತಲುಪುವ ಸಾಧ್ಯತೆ ಇತ್ತು! ಅಂಶ ನಮ್ಮಮೇಷ್ಟರುಗಳ ತಲೆಗೆ ಹೊಳೆದಿರಲಿಲ್ಲ. ಶಿಕ್ಷಣಾಧಿಕಾರಿಯವರು  ಒಂದು ವೇಳೆ ವಿಷಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದರೆ ಬಸವಾನಿಯ ಮೇಷ್ಟರುಗಳು ಶಿಸ್ತಿನ ಕ್ರಮಗಳನ್ನು ಎದುರಿಸ ಬೇಕಾಗುವುದೆಂದೂ ತಮ್ಮಿಂದ ಯಾವುದೇ ರಕ್ಷಣೆ ನಿರೀಕ್ಷೆ ಮಾಡಬಾರದೆಂದೂ ಹೇಳಿ ಬಿಟ್ಟರಂತೆ. ಅಲ್ಲದೇ ಹಿಂದಿ ಮತ್ತು ಅರೋಗ್ಯ ಪೇಪರ್ ಎಕ್ಸ್ಚೇಂಜ್ ಆದುದಕ್ಕೆ ಜಿಲ್ಲಾಧಿಕಾರಿಗಳೇ ಕಾರಣವೆಂದು  ತಿಳಿಸಿ ತೀರ್ಥಹಳ್ಳಿಯ ಶಾಲೆಯಿಂದ ಹಿಂದಿ ಪ್ರಶ್ನೆ ಪತ್ರಿಕೆಯ ಒಂದು ಪ್ರತಿಯನ್ನು ಗಿರಿಯಪ್ಪನವರ ಕೈಗಿತ್ತರಂತೆ.
ಒಟ್ಟಿನಲ್ಲಿ ನಾವು ಹಿಂದಿ ಪ್ರಶ್ನೆ ಪತ್ರಿಕೆಯ ಒಂದೇ ಪ್ರತಿಯಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ಬರೆದು ಮುಗಿಸಿದೆವು. ಆದರೆ ನಮ್ಮ ಮೇಷ್ಟ್ರುಗಳಿಗಾದಷ್ಟೇ ಭಯ ನಮಗೂ ಉಂಟಾಯಿತು. ಏಕೆಂದರೆ ನಮ್ಮ ಪರೀಕ್ಷೆಯ ಫಲಿತಾಂಶವನ್ನು ತಡೆಹಿಡಿಯಲಾಗುವ ಸಾಧ್ಯತೆ ಉಂಟೆಂದು ನಮಗೂ ಅನ್ನಿಸತೊಡಗಿತು. ಆಮೇಲೆ ಎಷ್ಟೋ ದಿನಗಳು ನನಗೆ ರಾತ್ರಿ ಕನಸ್ಸಿನಲ್ಲಿ ನಮ್ಮ ಪರೀಕ್ಷೆಯನ್ನು ಕ್ಯಾನ್ಸಲ್ ಮಾಡಿ ನಾವು ಇನ್ನೊಂದು ವರ್ಷ ೮ನೇ ತರಗತಿಯಲ್ಲೇ ಓದುವಂತೆ ಸರ್ಕಾರದಿಂದ ಆಜ್ಞೆ ಮಾಡಿತೆಂದು ಕಾಣಿಸತೊಡಗಿತು!
-------- ಮುಂದುವರಿಯುವುದು------

No comments: