ರಾಮಪ್ಪ, ಗಿರಿಯಪ್ಪ ಕಾಪಿ ಮಾಡಿಸಿ ಸೋತ್ರಪ್ಪ!
ವರದಾಚಾರ್ ಅವರ ಜಾಗಕ್ಕೆ ನಮ್ಮ ಶಾಲೆಗೆ ಬಂದ ಗಿರಿಯಪ್ಪನವರು ತಕ್ಕ ಮಟ್ಟಿಗೆ ಚೆನ್ನಾಗಿಯೇ ಪಾಠ ಮಾಡುತ್ತಿದ್ದರು. ಆದರೆ ಅವರು ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡುವ ದುರಭ್ಯಾಸವನ್ನು ಹೊಂದಿದ್ದರು. ಆ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿಯಿಂದ ಹಿಂದಿ ಪರೀಕ್ಷೆಗಳು ನಡೆಯುತ್ತಿದ್ದವು. ಅದಕ್ಕೆ ಕಾರಣ ನಮ್ಮ ಹಿಂದಿ ಮೇಷ್ಟ್ರು ಗೋಪಾಲ್ ಅವರು. ಅವರು ಅನೇಕ ವಿದ್ಯಾರ್ಥಿಗಳಿಗೆ ಮತ್ತು ಸುತ್ತಮುತ್ತಲಿನ ಶಾಲೆಗಳ ಮೇಷ್ಟರಿಗೆ ಹಿಂದಿ ಪಾಠ ಮಾಡುತ್ತಿದ್ದರು. ಆದರೆ ಪರೀಕ್ಷೆಯ ಜವಾಬ್ದಾರಿ ಹೆಡ್ ಮಾಸ್ಟರ್ ರಾಮಪ್ಪನವರ ಮೇಲಿತ್ತು. ಗೋಪಾಲ್ ಅವರು ಅದರಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ನಾನು ಕೂಡಾ ಗೋಪಾಲ್ ಅವರಿಂದ ಪಾಠ ಹೇಳಿಸಿಕೊಂಡು ಮಧ್ಯಮ ಪರೀಕ್ಷೆ ಕಟ್ಟಿದ್ದೆ.
ಪರೀಕ್ಷೆಯ ದಿನ ನನ್ನೊಡನೆ ಸುತ್ತಮುತ್ತಲ ಊರಿನ ಅನೇಕ ಶಾಲಾ ಮೇಷ್ಟರುಗಳೂ ಹಾಜರಾಗಿ ಪರೀಕ್ಷೆಯಲ್ಲಿ ಪಾಲ್ಗೊಂಡರು. ಆದರೆ ಸ್ವಲ್ಪ ಸಮಯದಲ್ಲೇ ಅವರು ಪರೀಕ್ಷೆಗೆ ಯಾವ ತಯಾರಿ ಇಲ್ಲದೇ ಬಂದಿದ್ದರೆಂದು ನನಗೆ ಅರಿವಾಯಿತು. ನನಗೆ ಅತ್ಯಾಶ್ಚರ್ಯ ಆದ
ಸಂಗತಿಯೆಂದರೆ ಪರೀಕ್ಷೆಯ ಮೇಲ್ವಿಚಾರಕರಾದ ಗಿರಿಯಪ್ಪನವರೇ ಅವರಿಗೆ ಹಿಂದಿ ಪುಸ್ತಕದಿಂದ ಕಾಪಿ ಮಾಡುವ ಅವಕಾಶ ನೀಡಿದ್ದುದು. ಅಷ್ಟಲ್ಲದೇ ರಾಮಪ್ಪನವರೂ ಕೂಡಾ ಬಂದು ಕಾಪಿ ಮಾಡುತ್ತಿದ್ದ ಮೇಷ್ಟರುಗಳಿಗೆ ಪ್ರೋತ್ಸಾಹ ನೀಡಿದ್ದು ಕಂಡು ನನಗಾದ ವಿಸ್ಮಯ ಮತ್ತು ಕೋಪ ಅಷ್ಟಿಟ್ಟಲ್ಲ.
ಆದರೆ ರಾಮಪ್ಪನವರಿಗಾಗಲೀ ಅಥವಾ ಗಿರಿಯಪ್ಪನವರಿಗಾಗಲೀ ಹಿಂದಿ ಭಾಷೆಯ ಗಂಧ ಗಾಳಿಯೂ ಇರಲಿಲ್ಲ. ಇದ್ದಿದ್ದರೆ ಅವರು ಪುಸ್ತಕದಿಂದ ಪ್ರಶ್ನೆಗಳಿಗೆ ಉತ್ತರಗಳನ್ನು ಮಾರ್ಕ್ ಮಾಡಿ ಕೊಡುತ್ತಿದ್ದರು. ಹಾಗಾಗಿ ಮೇಷ್ಟರುಗಳಿಗೆ ಪುಸ್ತಕದಿಂದ ಉತ್ತರಗಳನ್ನು ಕಾಪಿ ಮಾಡುವುದೂ ಕಷ್ಟವಾಗಿರಬೇಕು. ಏಕೆಂದರೆ ರಾಮಪ್ಪ, ಗಿರಿಯಪ್ಪನವರ ಧಾರಾಳತನ ಮೇಷ್ಟರುಗಳಿಗೆ ಪರೀಕ್ಷೆಯಲ್ಲಿ ನಿರೀಕ್ಷಿಸಿದ ರಿಸಲ್ಟ್ ನೀಡಲಿಲ್ಲ. ಪರಿಣಾಮವಾಗಿ ಅಷ್ಟೂ ಮಂದಿ ಮೇಷ್ಟರುಗಳು ಪರೀಕ್ಷೆಯಲ್ಲಿ ಗೋತಾ ಹೊಡೆದುಬಿಟ್ಟರು! ನಾನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ.
ರಾಮಪ್ಪ ಮತ್ತು ಗಿರಿಯಪ್ಪನವರು ನನ್ನನ್ನೇನೋ ಅಭಿನಂದಿಸಿದರು. ಆದರೆ ಅವರ ಸ್ನೇಹಿತರುಗಳು ಗೋತಾ ಹೊಡೆದುದು ಅವರಿಗೆ ತುಂಬಾ ಬೇಸರ ನೀಡಿತು. ಇದ್ದಕ್ಕಿದ್ದಂತೆ
ಗಿರಿಯಪ್ಪನವರಿಗೆ ಒಂದು ವಿಷಯ ಮನಸ್ಸಿಗೆ ಬಂತು. ಅವರು ರಾಮಪ್ಪನವರ ಹತ್ತಿರ ನನ್ನ ಮುಂದೆಯೇ ಮೇಸ್ಟರುಗಳಿಗೆ ನನ್ನ ಉತ್ತರಗಳನ್ನು ಕಾಪಿ ಮಾಡಲು ಸೂಚಿಸಬಹುದಿತ್ತೆಂದು ಹೇಳಿದರು. ರಾಮಪ್ಪನವರೂ ಹೌದೆಂದು ತಲೆಯಾಡಿಸಿದರು. ನನಗೆ ಆಗ ಬಂದ ಕೋಪ ಅಷ್ಟಿಷ್ಟಲ್ಲ. ಗಿರಿಯಪ್ಪನವರ ಕಾಪಿ ಮಾಡಿಸುವ ಸ್ವಭಾವ ಅಲ್ಲಿಗೆ ನಿಲ್ಲಲಿಲ್ಲ. ಅವರು ನಮ್ಮ ೮ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಮಾಡಿದುದರ ಬಗ್ಗೆ ಮುಂದೆ ಬರೆಯುತ್ತೇನೆ.
ಮುಖ್ಯಮಂತ್ರಿ ಪದವಿ
ನಾನು ಬಸವಾನಿ ಶಾಲೆಯಲ್ಲಿ ೮ನೇ ತರಗತಿಗೆ ೧೯೬೧-೧೯೬೨ ಶೈಕ್ಶಣಿಕ ವರ್ಷದಲ್ಲಿ ಪ್ರವೇಶ ಮಾಡಿದೆ. ವಿಷ್ಣುಮೂರ್ತಿ ೮ನೇ ತರಗತಿ ಪಾಸು ಮಾಡಿ ಶಿವಮೊಗ್ಗೆಯಲ್ಲಿ ಸರ್ಕಾರೀ ಪ್ರೌಢ ಶಾಲೆಗೆ ಸೇರಿಕೊಂಡ. ಅವನು ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾಯಿತಂತೆ. ಕಾರಣ ಅವನ ತಂದೆಯವರಿಂದ ಯಾವುದೇ ಹಣಕಾಸಿನ ಸಹಾಯ ದೊರಕದೇ
ಹೋದದ್ದು. ನಾನು ಶಾಲೆಯಲ್ಲಿ ಒಬ್ಬ ಹಿರಿಯ ವಿದ್ಯಾರ್ಥಿಯ ಮಟ್ಟಕ್ಕೇರಿಬಿಟ್ಟೆ. ಈ ಮೊದಲೇ ಬರೆದಂತೆ ಹೆಡ್ಮಾಸ್ಟರ್ ರಾಮಪ್ಪನವರು ನನ್ನನ್ನು ಮುಖ್ಯಮಂತ್ರಿಯ ಪದವಿಗೇರಿಸಿಬಿಟ್ಟರು. ಅಲ್ಲದೇ ನಾನು ಮಂತ್ರಿಮಂಡಲದ ಮೀಟಿಂಗುಗಳ ಮತ್ತು ಶಾಲೆಯಲ್ಲಿ ನಡೆಯುತ್ತಿದ್ದ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಒಂದು ನೋಟ್ ಪುಸ್ತಕದಲ್ಲಿ ಬರೆದಿಡುವ ಕೆಲಸವನ್ನೂ ನಿರ್ವಹಿಸಬೇಕಾಯಿತು. ಈ ಕೆಲಸ ನನಗೆ ಇಂಗ್ಲಿಷ್ ಭಾಷೆಯಲ್ಲಿ ಬರವಣಿಗೆ ಮಾಡುವ ಅನುಭವವನ್ನೂ ನೀಡಿತು.
ಜಗದೀಶ ಮತ್ತು ಶ್ರೀಧರಮೂರ್ತಿ ಅವರೊಡನೆ ನನ್ನ ಸ್ನೇಹ ಸಂಬಂಧ ಕಳಚಿದ್ದು
ಜಗದೀಶ ಮತ್ತು ಶ್ರೀಧರಮೂರ್ತಿ ಸಂಗಡ ನನ್ನ ಸ್ನೇಹ ತುಂಬಾ ಆತ್ಮೀಯವಾಗಿತ್ತು. ನಾನು ೬ನೇ ತರಗತಿಗೆ ಪ್ರವೇಶ ಮಾಡಿದ
ನಂತರ ಜಗದೀಶ ಮೊದಲನೇ ಸ್ಥಾನವನ್ನು ಕಳೆದುಕೊಂಡರೆ ಶ್ರೀಧರಮೂರ್ತಿ ೩ನೇ ಸ್ಥಾನದಲ್ಲಿ ತೃಪ್ತಿ ಪಡೆಯುವಂತಾಗಿತ್ತು. ಆದರೆ ಅದರಿಂದ ನಮ್ಮ ಸ್ನೇಹದಲ್ಲಿ ಯಾವುದೇ ಕೊರತೆಯಾಗಲಿಲ್ಲ. ಆದರೆ ೮ನೇ ತರಗತಿಗೆ ಪ್ರವೇಶ ಮಾಡಿದ ಸ್ವಲ್ಪ ದಿನದಲ್ಲೇ ನಮ್ಮ ನಡುವೆ ಯಾವುದೋ ಕಾರಣಕ್ಕೆ ವಿರಸವುಂಟಾಯಿತು. ನಾನು ಈ ಇಬ್ಬರ ಜೋಡಿಯೊಡನೆ ಮಾತನಾಡುವುದನ್ನೇ ನಿಲ್ಲಿಸುವ ಪ್ರಸಂಗ ಬಂತು. ಆ ಕಾಲದಲ್ಲಿ ಹುಡುಗರಾಗಲೀ ಅಥವಾ ಹುಡುಗಿಯರಾಗಿರಲೀ ಈ ರೀತಿಯಲ್ಲಿ ಮಾತನ್ನು ನಿಲ್ಲಿಸುವುದು ಸರ್ವೇ ಸಾಮಾನ್ಯವಾಗಿತ್ತು. ಹಾಗೆಯೇ ಇದ್ದಕ್ಕಿದ್ದಂತೆ ರಾಜಿಯಾಗುವುದೂ ಮಾಮೂಲಾಗಿತ್ತು. ನಮ್ಮ ನಡುವೆ ಯಾವ ಕಾರಣದಿಂದ ಹೀಗೆ ಮನಸ್ತಾಪವುಂಟಾಯಿತೆಂದು ನನಗೀಗ ನೆನಪಿಗೆ ಬರುತ್ತಿಲ್ಲ.
ಆದರೆ ಆ ವೇಳೆಗೆ ನಾನೊಬ್ಬ ಹಿರಿಯ ವಿದ್ಯಾರ್ಥಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ತರಗತಿಗೆ ಮೊದಲ ಸ್ಥಾನ ಗಳಿಸುತ್ತಾ ಸ್ವಲ್ಪ ಮೇಲ್ಮಟ್ಟಕ್ಕೆ ಏರಿ ಬಿಟ್ಟಿದ್ದೆ. ಆ ಹೆಮ್ಮೆ ನನಗಿದ್ದರಿಂದ ನಾನು ಈ ಜೋಡಿಯ ಸ್ನೇಹ ಕಳೆದು ಹೋದುದಕ್ಕೆ ಸ್ವಲ್ಪವೂ ಲಕ್ಷ ಕೊಡದೇ ನನ್ನಷ್ಟಕ್ಕೆ ನಾನಿದ್ದು ಬಿಟ್ಟೆ. ನಾನು ಅವರಿಬ್ಬರ
ಬಗ್ಗೆ ತೋರಿಸಿದ ನಿರ್ಲಕ್ಷತೆ ಅವರಿಗೆ ಸ್ವಲ್ಪ ಆಶ್ಚರ್ಯ ಮತ್ತು ಗಾಭರಿ ಹುಟ್ಟಿಸಿರಬೇಕು. ನಾನಾಗಿಯೇ ಅವರೊಡನೆ ರಾಜಿ ಮಾಡಿಕೊಳ್ಳಲು ಬರುವೆನೆಂಬ ಅವರ ನಿರೀಕ್ಷೆ ಸುಳ್ಳಾಯಿತು.
ನನಗೆ ಅವರಿಬ್ಬರ ಸ್ನೇಹದಲ್ಲಿ ಆಸಕ್ತಿ ಇದ್ದದ್ದೇನು ಸುಳ್ಳಲ್ಲ. ಆದರೆ ಅಷ್ಟು ಸುಲಭವಾಗಿ ಅವರೊಡನೆ ರಾಜಿಯಾಗಲು ನಾನು ಸಿದ್ಧನಿರಲಿಲ್ಲ.
ಸ್ವಲ್ಪ ದಿನಗಳ ನಂತರ ನನಗೆ ಜಗದೀಶನಿಂದ ನಮ್ಮ ಇನ್ನೊಬ್ಬ ಸಹಪಾಠಿ ಸತ್ಯನಾರಾಯಣನ ಮೂಲಕ ರಾಜಿಮಾಡಿಕೊಳ್ಳುವ ಸಂದೇಶವೊಂದು ಬಂತು. ನಾನದನ್ನು ತಿರಸ್ಕರಿಸಿ ಬಿಟ್ಟೆ. ಆಮೇಲೆ ಸತ್ಯನಾರಾಯಣನ ಮೂಲಕವೇ ಜಗದೀಶನಿಂದ ಪತ್ರವೊಂದು ನನಗೆ ಬಂತು. ಅದರಲ್ಲಿ ಜಗದೀಶ ನಮ್ಮಿಬ್ಬರ ನಡುವಿನ ವಿರಸಕ್ಕೆ ಶ್ರೀಧರಮೂರ್ತಿಯೇ ಕಾರಣವೆಂದೂ ಮತ್ತು ಅವನೆಂದೂ ನಮ್ಮ ನಡುವಿನ ಅಮೂಲ್ಯ ಸ್ನೇಹವನ್ನು ತೊರೆಯಲು ಸಿದ್ಧನಿಲ್ಲವೆಂದೂ ಸ್ಪಷ್ಟ ಮಾಡಿ ಬರೆದಿದ್ದ. ನಾನು ಅವನ ರಾಜಿ ಪ್ರಸ್ತಾಪವನ್ನು ತಿರಸ್ಕರಿಸಿ ಪತ್ರ ಕಳಿಸಿದೆ. ನಮ್ಮ ಪತ್ರ ವ್ಯವಹಾರ ಸ್ವಲ್ಪ ಕಾಲ ನಡೆದು ರಾಜಿಯಲ್ಲಿ ಕೊನೆಗೊಂಡಿತು. ಆದರೆ ಶ್ರೀಧರಮೂರ್ತಿಗೆ ಅದು ಬಲವಾದ ಆಘಾತವನ್ನು ನೀಡಿತು. ಏಕೆಂದರೆ ನಮ್ಮ ಪತ್ರ ವ್ಯವಹಾರದ ಸುಳಿವೂ ಅವನಿಗಿರಲಿಲ್ಲ. ವಾಸ್ತವವಾಗಿ ನನಗೆ ಶ್ರೀಧರಮೂರ್ತಿಯ ಸ್ನೇಹದಲ್ಲಿ ಹೆಚ್ಚು ಆಸಕ್ತಿ ಇತ್ತು. ಅವನಿಗೂ ಒಳಗೊಳಗೆ ಅದೇ ಭಾವನೆ ಇತ್ತು. ಆದರೆ ಜಗದೀಶನು ಅವನಿಗೆ ತಿಳಿಯದಂತೆ ನನ್ನೊಡನೆ ರಾಜಿಯಾಗುವನೆಂದು ಅವನೆಂದೂ ಭಾವಿಸಿರಲಿಲ್ಲ.
ಆ ಸಂಧಿಕಾಲದಲ್ಲಿ ನಮ್ಮಿಬ್ಬರ ನಡುವೆ ನಡುವೆ ಪ್ರಾರಂಭವಾದ ಸ್ನೇಹ ಪತ್ರ ವ್ಯವಹಾರ ಎಂದೂ ಅತಿಮಗೊಳ್ಳದ ಒಂದು ಪ್ರಣಯ ಪ್ರಸಂಗದಂತೆ ನಡೆದು ಹೋಯಿತು. ವಿಚಿತ್ರವೆಂದರೆ ಇಬ್ಬರೂ ಪ್ರಾಣ ಸ್ನೇಹಿತರಾಗಿ ಮುಂದುವರಿಯಬೇಕೆಂದು ಪತ್ರಮುಖೇನ ಬಯಸುತ್ತಿದ್ದರೂ ನಾವೆಂದೂ ಇತರರ ಮುಂದೆ ಸ್ನೇಹಿತರೆಂದು ತೋರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ! ನಮ್ಮ ಸಹಪಾಠಿ ಸತ್ಯನಾರಾಯಣನ
ಮೂಲಕ ನಮ್ಮ ಸ್ನೇಹ ಪತ್ರ ವ್ಯವಹಾರವೇನೋ ಮುಂದುವರಿಯುತ್ತಲೇ ಇದ್ದರೂ ನಮ್ಮ ಸ್ನೇಹ ಕೇವಲ ಮನಸ್ಸಿನ
ಮಂಡಿಗೆಯಾಗೇ ಉಳಿದು ಹೋಯಿತು. ಏಕೆಂದರೆ ನಮ್ಮ ನಡುವೆ ಸಂಭಾಷಣೆಯೇ ನಡೆಯಲಿಲ್ಲ.
ನಾವಿಬ್ಬರೂ ಸತ್ಯನಾರಾಯಣನನ್ನು ಪೋಸ್ಟ್
ಮ್ಯಾನ್ ಎಂದೇ ಕರೆಯುತ್ತಿದ್ದೆವು. ಆಮೇಲೆ ಎಷ್ಟೋ ವರ್ಷಗಳ ನಂತರ ನಾನು ಶೃಂಗೇರಿ ಕಾಲೇಜಿನಲ್ಲಿ
ಓದುವಾಗ ಸತ್ಯನಾರಾಯಣನ ಭೇಟಿಯಾಗಿ ಅವನು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದ ಶ್ರೀಧರಮೂರ್ತಿಯ ಮತ್ತು ನನ್ನ ಸ್ನೇಹಪತ್ರಗಳ ಪುನರಾರಂಭಕ್ಕೆ
ಕಾರಣನಾದ. ಆದರೆ ಸ್ವಲ್ಪ ಕಾಲಕ್ಕೆ ಅದೂ ನಿಂತುಹೋಗಿ ನಮ್ಮಿಬ್ಬರ ಸ್ನೇಹ ಒಂದು ಮರೀಚಿಕೆಯಾಗಿ ಬಿಟ್ಟಿತು.
ಆಮೇಲೆ ಸುಮಾರು ೨೫ ವರ್ಷಗಳ ನಂತರ ನಾವಿಬ್ಬರೂ ಬೆಂಗಳೂರಿನಲ್ಲಿ ಒಮ್ಮೆ ಭೆಟ್ಟಿಯಾಗುವ ಅವಕಾಶ ಬಂತು.
ಆದರೆ ಆವೇಳೆಗೆ ನಮ್ಮ ಸ್ನೇಹದ ಕುಡಿ ಸಂಪೂರ್ಣ ಒಣಗಿಹೋಗಿತ್ತೆಂದು ನಮ್ಮಿಬ್ಬರಿಗೂ ಅರಿವಾಯಿತು. ವಿಚಿತ್ರವೆಂದರೆ
ನಮ್ಮ ನಡುವೆ ಪೋಸ್ಟ್ ಮ್ಯಾನ್ ಆಗಿದ್ದ ಸತ್ಯನಾರಾಯಣ
ಆಮೇಲೆ ಬಸವಾನಿಯ ಪೋಸ್ಟ್ ಮಾಸ್ಟರ್ ಆಗಿ ಪೂರ್ತಿ ಸರ್ವಿಸ್ ಮುಗಿಸಿ ನಿವೃತ್ತಿ ಹೊಂದಿದ್ದು, ಕಾಲಾಯ
ತಸ್ಮೈ ನಮಃ.
-------- ಮುಂದುವರಿಯುವುದು------
No comments:
Post a Comment