Thursday, January 16, 2020

ಬಾಲ್ಯ ಕಾಲದ ನೆನಪುಗಳು – ೪೯


ದತ್ತಾತ್ರಿಯ ಹೊಟ್ಟೆಕಿಚ್ಚುಮತ್ತು ಪಕ್ಷಪಾತ
ಬಸವಾನಿಯ ತರುಣರ ತಂಡವೊಂದು ಶಿವಮೊಗ್ಗದಲ್ಲಿ ನಡೆದ ಸ್ಕೌಟ್ ಶಿಬಿರದಲ್ಲಿ ಭಾಗವಹಿಸಿ ವ್ಯಾಯಾಮ ಮಾಡುವುದರಲ್ಲಿ (ಕವಾಯತು)  ತರಬೇತಿ ಪಡೆದು ಹಿಂದಿರುಗಿತು. ತಂಡದಲ್ಲಿ ಶ್ರೀಧರಮೂರ್ತಿಯ ಅಣ್ಣ ದತ್ತಾತ್ರಿ ಮತ್ತು ಅನಂತಮೂರ್ತಿಯವರ ತಮ್ಮ ಸೀತಾರಾಮ್ ಭಟ್ ಕೂಡ ಇದ್ದರು. ತಂಡದ ಕೆಲವರು ದತ್ತಾತ್ರಿ ಮತ್ತು ಸೀತಾರಾಮ್ ಭಟ್ ಒಡಗೂಡಿ ನಮ್ಮ ಹೆಡ್ ಮಾಸ್ಟರ್ ರಾಮಪ್ಪನವರ ಅಪ್ಪಣೆ ಪಡೆದು  ನಮಗೆ ಪ್ರತಿ ದಿನ ಸಂಜೆ ನಮ್ಮ ಆಟದ ಮೈದಾನದಲ್ಲಿ ಡ್ರಿಲ್ ಮಾಡಿಸ ತೊಡಗಿದರು. ನಾನು ಹಿಂದೆಯೇ ಒಂದು ಬಾರಿ ದತ್ತಾತ್ರಿ ಪುಸ್ತಕ ಭಂಡಾರದಲ್ಲಿ ನಾನು ಪತ್ತೇದಾರಿ ಕಾದಂಬರಿಗಳನ್ನುಓದಬಾರದೆಂದು ಕೂಗಾಡಿದುದರ ಬಗ್ಗೆ ಬರೆದಿದ್ದೇನೆ. ನಮಗೆ ಡ್ರಿಲ್ ತರಬೇತಿ ನೀಡುವಾಗಲೂ ಕೂಡ ಉಳಿದವರು ತುಂಬಾ ನಯವಾಗಿ ಪ್ರೀತಿಯಿಂದ ಮಾತನಾಡುತ್ತಾ ಇದ್ದರೆ ದತ್ತಾತ್ರಿ ಮಾತ್ರಾ ತುಂಬಾ ಸೊಕ್ಕಿನಿಂದ ನಮಗೆ ಬೈಗುಳಗಳ ನಡುವೆ ಹಿಂಸೆಯಾಗುವಂತೆ ವರ್ತಿಸುತ್ತಿದ್ದ. ಅವನಿಂದ ತರಬೇತಿ ಪಡೆಯುವುದು ಒಂದು ಕಠಿಣ ಶಿಕ್ಷೆಯಂತೆ  ನಮಗೆ ಅನಿಸುತ್ತಿತ್ತು.

ದತ್ತಾತ್ರಿಯ ನೇತೃತ್ವದಲ್ಲಿ ನಮಗೆ ಒಂದು ಡ್ರಿಲ್ ಸ್ಪರ್ಧೆ ಏರ್ಪಡಿಸಲಾಯಿತು. ಅದರಲ್ಲಿ ಪ್ರತಿ ತರಗತಿಯಲ್ಲೂ ಗೆದ್ದ ಒಬ್ಬ ವಿದ್ಯಾರ್ಥಿಗೆ ಬಹುಮಾನ ನೀಡಲಾಗುವುದೆಂದು ಘೋಷಿಸಲಾಯಿತು. ಬಹುಮಾನವನ್ನು ಬಸವಾನಿಯಲ್ಲಿ ನಡೆಯಲಿರುವ ಸರ್ ಎಂ ವಿಶ್ವೇಶ್ವರಯ್ಯನವರ ಶತಮಾನೋತ್ಸವದಲ್ಲಿ ನೀಡಲಾಗುವುದೆಂದು ಕೂಡ ಹೇಳಲಾಯಿತು. ಸ್ಪರ್ಧೆಯ ದಿನ ಮೊದಲ ಮೂರು ತರಗತಿಗಳ ನಂತರ ನಮ್ಮ ೮ನೇ ತರಗತಿಯವರಿಗೆ ಸ್ಪರ್ಧೆ ಪ್ರಾರಂಭವಾಯಿತು. ಸ್ಪರ್ಧೆಯ ತೀರ್ಪುಗಾರ ದತ್ತಾತ್ರಿಯೇ ಆಗಿದ್ದ. ಅವನ ಆಜ್ಞೆಯ ಪ್ರಕಾರ ಡ್ರಿಲ್ ಮಾಡುವಾಗ ತಪ್ಪು ಮಾಡಿದ  ಒಬ್ಬೊಬ್ಬರನ್ನೇ ತೆಗೆದು ಹಾಕುತ್ತಾ ಬಂದ. ಕೊನೆಗೆ ಅಲ್ಲಿಯವರೆಗೆ ಯಾವ ತಪ್ಪೂ ಮಾಡದ ಶ್ರೀಧರಮೂರ್ತಿ ಮತ್ತು ನಾನು ಮಾತ್ರಾ ಉಳಿದುಕೊಂಡೆವು.

ನಮ್ಮಿಬ್ಬರ ಮಧ್ಯೆ ತೀವ್ರ ಪೈಪೋಟಿಯೇ ನಡೆಯಿತು. ಆದರೆ ದತ್ತಾತ್ರಿ ಮಾಡುತ್ತಿದ್ದ ರೀತಿ ನೋಡುತ್ತಿದ್ದ ಎಲ್ಲರಿಗೂ ಅವನು ಹೇಗಾದರೂ ತನ್ನ ತಮ್ಮನನ್ನೇ ಜಯಶಾಲಿಯಾಗಿ ಮಾಡಬೇಕೆಂದು ತೀವ್ರ ಪ್ರಯತ್ನ ಮಾಡುತ್ತಿರುವ ಅರಿವಾಯಿತು. ಆದರೆ ಅವನು ಕೊಟ್ಟ ಒಂದು ಕಮ್ಯಾಂಡ್ ಶ್ರೀಧರಮೂರ್ತಿ ತಪ್ಪು ಮಾಡುವಂತೆ ಮಾಡಿಬಿಟ್ಟಿತು. ನಾನು ಅದನ್ನು ಸರಿಯಾಗೇ ಮಾಡಿದ್ದೆ. ಆದರೆ ದತ್ತಾತ್ರಿ ತಮ್ಮನನ್ನು ಗೆಲ್ಲಿಸಲೇ ಬೇಕೆಂದು ಜಾಣ ಕುರುಡು ಪ್ರದರ್ಶನ ಮಾಡುತ್ತಾ ಅವನ ತಪ್ಪು ಕಾಣದಂತೆ ವರ್ತಿಸಿದ. ಆದರೆ ಅಲ್ಲಿದ್ದ ನಮ್ಮ ಮೇಷ್ಟರುಗಳು ಮತ್ತು ವಿದ್ಯಾರ್ಥಿಗಳು ದತ್ತಾತ್ರಿಯ ನಡೆವಳಿಕೆಗೆ ಕೂಗಾಡ ತೊಡಗಿದರು. ನಿರ್ವಾಹವಿಲ್ಲದೇ ದತ್ತಾತ್ರಿ ನನ್ನನ್ನು ಜಯಶಾಲಿಯೆಂದು ಘೋಷಿಸಲೇ  ಬೇಕಾಯಿತು.

ಸರ್ ಎಂ ವಿಶ್ವೇಶ್ವರಯ್ಯನವರ ಶತಮಾನೋತ್ಸವ
೧೯೬೧ನೇ ಇಸವಿಯ  ಸೆಪ್ಟೆಂಬರ್ ೧೫ರಂದು  ಸರ್ ಎಂ ವಿಶ್ವೇಶ್ವರಯ್ಯನವರ ಶತಮಾನೋತ್ಸವವನ್ನು  ಬಸವಾನಿಯ ಪ್ರಾಥಮಿಕ ಶಾಲೆಯ ಮುಂದಿನ ಮೈದಾನದಲ್ಲಿ ವೈಭವದಿಂದ ನಡೆಯಿಸಲಾಯಿತು. ಸಮಾರಂಭದ ನಡುವೆ ಸ್ವತಃ ದತ್ತಾತ್ರಿಯೇ ಡ್ರಿಲ್ ಸ್ಪರ್ಧೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನಾಗಿ ಸ್ಟೇಜಿನ ಮೇಲೆ ಕರೆದು ಅಧ್ಯಕ್ಷರ ಕೈಯಿಂದ ಬಹುಮಾನ ಕೊಡಿಸಿದ. ೫ನೇ ತರಗತಿಯಿಂದ ಪ್ರಾರಂಭ ಮಾಡಿ ೭ನೇ ತರಗತಿಯ ವಿಜಯಶಾಲಿಗಳಿಗೆ ಬಹುಮಾನ ನೀಡಲಾಯಿತು. ನಂತರ ೮ನೇ ತರಗತಿಯಿಂದ ನನ್ನ ಹೆಸರು ಕರೆಯಲಾಗುವುದೆಂದು ನಾನು ತಯಾರಾಗಿದ್ದೆ. ಆದರೆ ನೀವು ಪ್ರಾಯಶಃ ಇದನ್ನು ನಂಬಲಾರಿರಿ. ದತ್ತಾತ್ರಿ ಇದ್ದಕಿದ್ದಂತೆಯೇ ಸ್ಟೇಜಿನಿಂದ ಕೆಳಗಿಳಿದು ಕಣ್ಮರೆಯಾಗಿ  ಬಿಟ್ಟ! ಆಮೇಲೆ ಅವನನ್ನು ಬಗ್ಗೆ ಪ್ರಶ್ನಿಸಿದಾಗ ಉಡಾಫೆಯಿಂದ ಪ್ರತಿಯೊಬ್ಬ ವಿಜಯಿಗೂ  ಬಹುಮಾನ ಕೊಡುವ ವ್ಯವಸ್ತೆ  ಇಲ್ಲವೆಂದು ಹೇಳಿಬಿಟ್ಟ. ಅವನ ಪ್ರಕಾರ ಅವನ ತಮ್ಮನಿಗೆ ಸಿಗದ ಬಹುಮಾನ ಬೇರೆಯವರಿಗೂ ಸಿಗುವ ಪ್ರಶ್ನೆ ಇರಲೇ ಇಲ್ಲ! ಪ್ರಾಯಶಃ ಮುಂದೆ ನನ್ನ ಜೀವಮಾನದಲ್ಲಿ  ನಾನೆಂದೂ ದತ್ತಾತ್ರಿಗಿಂತ ಹೆಚ್ಚು ಪಕ್ಷಪಾತಿ ವ್ಯಕ್ತಿಯನ್ನು ನೋಡಲಿಲ್ಲ.
ದತ್ತಾತ್ರಿಯ ಕಡೇ ಆಟ ಮತ್ತು ನನ್ನ ಮುಖ್ಯಮಂತ್ರಿ ಪದವಿ ಮಂಗಮಾಯ!
ನಮ್ಮ ಹೆಡ್ಮಾಸ್ಟರ್ ರಾಮಪ್ಪನವರು ಬಸವಾನಿಯ ಸುತ್ತಮುತ್ತಲಿದ್ದ ಶಾಲೆಗಳ ಮತ್ತು ಇತರ ಸ್ನೇಹಿತರುಗಳ ಒಡಗೂಡಿ ತಮ್ಮದೇ ಆದ ಒಂದು ಗುಂಪನ್ನು ಹೊಂದಿದ್ದರು. ಗುಂಪಿಗೂ ಮತ್ತು ದತ್ತಾತ್ರಿಯ  ನೇತೃತ್ವದ ಬಸವಾನಿಯ ತರುಣರ ತಂಡಕ್ಕೂ ಯಾವುದೋ ಕಾರಣದಿಂದ ದ್ವೇಷ ಉಂಟಾಗಿತ್ತು. ನಮ್ಮ ಶಾಲೆಯ ವಾರ್ಷಿಕ ಸಮಾರಂಭ ೧೯೬೨ನೇ ಇಸವಿಯ ಜನವರಿ ತಿಂಗಳಲ್ಲಿ ನೆಡೆಯುವುದಾಗಿ ತೀರ್ಮಾನವಾಯಿತು. ಆಶ್ಚರ್ಯವೆಂದರೆ ಅದೇ ಸಮಯಕ್ಕೆ ಯಾವುದೋ ರೀತಿಯಲ್ಲಿ ಎರಡು ತಂಡಗಳಿಗೂ ರಾಜಿಯಾಗಿ ಬಿಟ್ಟಿತು. ಅದು ಯಾವ ಮಟ್ಟದ ರಾಜಿಯೆಂದರೆ ರಾಮಪ್ಪ ಮತ್ತು ದತ್ತಾತ್ರಿ ಗಳಸ್ಯ ಕಂಠಸ್ಯ ಸ್ನೇಹಿತರಂತೆ ವರ್ತಿಸ ತೊಡಗಿದರು. ಜೋಡಿಯ ಸ್ನೇಹ ನನ್ನ ಮುಖ್ಯಮಂತ್ರಿ ಪದವಿಗೇ ಕಂಟಕ ತರುವುದೆಂದು ನಾನೆಂದೂ ಭಾವಿಸಿರಲಿಲ್ಲ!

ಮಾಮೂಲಿನಂತೆ ಶಾಲೆಯ ವಾರ್ಷಿಕ ಸಮಾರಂಭದ ಅಹ್ವಾನ ಪತ್ರಿಕೆಯಲ್ಲಿ ಹೆಡ್ಮಾಸ್ಟರ್ ಅವರ ಹೆಸರು ಮತ್ತು ಮುಖ್ಯಮಂತ್ರಿಯ ಹೆಸರು ಮುದ್ರಿಸಲಾಗುತ್ತಿತ್ತು. ಹಿಂದಿನ ವರ್ಷ ಗೋಪಾಲ ಮೇಷ್ಟರ ತಮ್ಮ ಪದ್ಮನಾಭನ ಹೆಸರು ಮುಖ್ಯಮಂತ್ರಿ ಎಂದು ಮುದ್ರಿತವಾಗಿತ್ತು. ನಾನೂ ಕೂಡ ಪತ್ರಿಕೆಯಲ್ಲಿ ನನ್ನ ಹೆಸರನ್ನು ನೋಡಲು ಉತ್ಸುಕನಾಗಿದ್ದೆ. ಆದರೆ ಪತ್ರಿಕೆಯಲ್ಲಿ ನನ್ನ ಹೆಸರ ಬದಲಿಗೆ ಶ್ರೀಧರಮೂರ್ತಿಯ ಹೆಸರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂದು ಮುದ್ರಿಸಲಾಗಿತ್ತು! ಆದರೆ ಗೋಪಾಲ ಮೇಸ್ಟರ ಗಮನಕ್ಕೆ ವಿಷಯ ಬಂದಾಗ ಅವರಿಗೆ ಅತ್ಯಂತ ಆಶ್ಚರ್ಯ ಮತ್ತು ಕೋಪ ಬಂತು. ಇದ್ದಕ್ಕಿದ್ದಂತೇ ಶ್ರೀಧರಮೂರ್ತಿಗೆ ಕಾರ್ಯದರ್ಶಿ ಪದವಿ ಎಲ್ಲಿಂದ ಬಂತೆಂತು ಅವರಿಗೆ ಅರ್ಥವಾಗಲಿಲ್ಲ. ಅವರು ವಿಷಯವನ್ನು ರಾಮಪ್ಪನವರ ಹತ್ತಿರ ಎತ್ತಿದಾಗ ಸರಿಯಾದ ಉತ್ತರ ದೊರೆಯಲಿಲ್ಲ.  ಮೇಲೆ ತಿಳಿದು ಬಂದದ್ದೇನೆಂದರೆ ರಾಮಪ್ಪ ಮತ್ತು ದತ್ತಾತ್ರಿಯ ರಾಜಿ ಪಂಚೇತಿಕೆಯ ತೀರ್ಮಾನದಲ್ಲಿ ಕಂಡೀಶನ್ ಕೂಡ ಸೇರಿಸಲಾಗಿತ್ತಂತೆ. ವಿಚಿತ್ರವೆಂದರೆ ಸ್ವತಃ ಶ್ರೀಧರಮೂರ್ತಿಗೇ ತನ್ನ ಹೆಸರು ರೀತಿ ಮುದ್ರಿಸಲಾಗುವುದೆಂದು ತಿಳಿದಿರಲಿಲ್ಲ. ದತ್ತಾತ್ರಿಯ ಮಹಿಮೆ ಮಟ್ಟದ್ದಾಗಿತ್ತು. ಒಟ್ಟಿನಲ್ಲಿ ನನ್ನ ಮುಖ್ಯಮಂತ್ರಿ ಪದವಿಗೆ ಸಂಚಕಾರ ಬಂದು ಬಿಟ್ಟಿತ್ತು. ಪ್ರಸಂಗ ನನ್ನ ಮತ್ತು ಶ್ರೀಧರಮೂರ್ತಿಯ ಸಂಭಾಷಣೆ ಇಲ್ಲದ ಗುಪ್ತ ಪತ್ರಮುಖೇನ ಸ್ನೇಹಕ್ಕೆ ಯಾವುದೇ ಭಂಗ ತರಲಿಲ್ಲ. ಮಾತ್ರವಲ್ಲ ದತ್ತಾತ್ರಿಯ ಕುತಂತ್ರ ನನಗೆ ತನ್ನ ಬಗ್ಗೆ ಕೋಪ ತರಬಹುದೆಂದು ಶ್ರೀಧರಮೂರ್ತಿಗೆ ಅನಿಸಿ ಅದರಲ್ಲಿ ತನ್ನದೇನೂ ಪಾತ್ರವಿರಲಿಲ್ಲವೆಂದು ನನಗೆ ತಿಳಿಸಿದ.

ಗಗ್ಗಯ್ಯನ ಗಡಿಬಿಡಿ!
ಮಾಮೂಲಿನಂತೆ ವರ್ಷವೂ ಕೂಡ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಒಂದು ನಾಟಕ ಏರ್ಪಡಿಸಲಾಯಿತು. ನಾಟಕದ ಹೆಸರು "ಗಗ್ಗಯ್ಯನ ಗಡಿಬಿಡಿ". ಹಾಸ್ಯ ನಾಟಕದ ಲೇಖಕ ಸುಪ್ರಸಿದ್ಧ ಸಾಹಿತಿ ನಾ ಕಸ್ತೂರಿಯವರು. ನಾಟಕದಲ್ಲಿ ಗಗ್ಗಯ್ಯನ ಪಾತ್ರಕ್ಕೆ ತುಂಬಾ ದೀರ್ಘ ಸಂಭಾಷಣೆ ಇತ್ತು. ನನ್ನ ಕಂಠ ಪಾಠ ಪ್ರವೀಣತೆ ಗಮನಿಸಿ ನನಗೆ ಪಾತ್ರವನ್ನು ಕೊಡಲಾಯಿತು. ಇನ್ನೊಂದು ಮುಖ್ಯ ಪಾತ್ರದಲ್ಲಿ ಶ್ರೀಧರಮೂರ್ತಿ ಇದ್ದ. ಸತ್ಯ ಹೇಳಬೇಕೆಂದರೆ ನನಗೆ ಅಭಿನಯ ಕಲೆ ಏನೂ ಗೊತ್ತಿರಲಿಲ್ಲ. ಆದರೆ ಶ್ರೀಧರಮೂರ್ತಿ ಒಬ್ಬ ಒಳ್ಳೆ ಕಲಾವಿದನೇ ಆಗಿದ್ದ ಮತ್ತು ತನ್ನ ಪಾತ್ರವನ್ನು ತುಂಬಾ ಚೆನ್ನಾಗಿ ಅಭಿನಯಿಸಿದ. ವಿಚಿತ್ರವೆಂದರೆ ಪರದೆಯ ಹಿಂದೆ ನಮ್ಮಿಬ್ಬರ ಸಂಭಾಷಣೆ ತುಂಬಾ ಆತ್ಮೀಯವಾಗಿಯೇ ಇತ್ತು. ಅಲ್ಲದೇ ಶ್ರೀಧರಮೂರ್ತಿಯಿಂದ ನನಗೆ ನಟನೆಯ ಬಗ್ಗೆ ಟಿಪ್ಸ್ ಕೂಡಾ ದೊರೆಯಿತು!
ಗುಂಡಾಭಟ್ಟರ ಪಕ್ಕದ ಮನೆಯಾದ ಟಿ ಸ್ ಭಟ್ಟರ ಮನೆಯ ಮುಂದಿನ ಅಂಗಳದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಕೊಳಾವರ ವೆಂಕಟಯ್ಯನವರು ವಹಿಸಿದ್ದರು. ನಾವು ಆಡಿದ ನಾಟಕ ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿ ನಮಗೆಲ್ಲಾ ತುಂಬಾ ಸಂತಸ ನೀಡಿತು. ಆದರೆ ನಮ್ಮ  ತರಗತಿಯ ವಿದ್ಯಾರ್ಥಿಗಳಿಗೆ ಆದ ಆಶ್ಚರ್ಯವೆಂದರೆ ವೈರಿಗಳಂತೆ ಪರಸ್ಪರ ಮಾತನ್ನೇ ಆಡದ ನನ್ನ ಮತ್ತು ಶ್ರೀಧರಮೂರ್ತಿಯ ಜೋಡಿ ಹೇಗೆ ನಾಟಕದಲ್ಲಿ ಅಷ್ಟೊಂದು ಸರಾಗವಾಗಿ ಸಂಭಾಷಣೆಯಲ್ಲಿ ತೊಡಗಲು ಸಾಧ್ಯವಾಯಿತೆಂದು! ಆದರೆ ನಾವು ಅವರ ಮುಂದೆ ವೈರಿಗಳಂತೆ ನಟಿಸುತ್ತಿದ್ದುದು ಕೂಡಾ ಒಂದು ನಾಟಕವೇ ಆಗಿತ್ತೆಂದು ಅವರಿಗೆ ಗೊತ್ತಾಗಲೇ ಇಲ್ಲ. ಅದರ ರಹಸ್ಯ ಗೊತ್ತಿದ್ದುದು ಕೇವಲ ಒಬ್ಬನಿಗೆ ಮಾತ್ರ. ಅವನೇ ನಮ್ಮ ಪೋಸ್ಟ್ ಮ್ಯಾನ್ ಸತ್ಯನಾರಾಯಣ!
-------- ಮುಂದುವರಿಯುವುದು------

No comments: