Monday, January 6, 2020

ಬಾಲ್ಯ ಕಾಲದ ನೆನಪುಗಳು – ೪೫


ನಾನು ಬಸವಾನಿ ಶಾಲೆಯಲ್ಲಿ ೧೯೬೦ನೇ ಮೇ ತಿಂಗಳ ಕೊನೆಯಲ್ಲಿ ೭ನೇ ತರಗತಿಗೆ ಪ್ರವೇಶ ಮಾಡಿದೆ. ಹಾಗೆಯೇ ತುಂಬಾ ಬದಲಾವಣೆಗಳನ್ನು ಕಂಡೆ. ಮುಖ್ಯವಾಗಿ ಆಗ ಶಾಲೆಯಲ್ಲಿ ೭ನೇ ಮತ್ತು ೮ನೇ ತರಗತಿಗಳು ಒಟ್ಟಿಗೆ ಒಂದೇ ರೂಮಿನಲ್ಲಿ ನಡೆಯುತ್ತಿದ್ದವು. ಹಾಗಾಗಿ ನಮಗೆ ಎಂಟನೇ ತರಗತಿಯವರೊಡನೆ ಬೆರೆಯುವ ವಿಶೇಷ ಅವಕಾಶ ದೊರೆಯಿತು. ವಿಷ್ಣುಮೂರ್ತಿ ಮತ್ತು ನಾನು ಒಂದೇ ರೂಮಿನಲ್ಲಿ ಪಾಠ ಕೇಳುವಂತಾಯಿತು. ಮತ್ತು ೮ನೇ ತರಗತಿಯ ಉಳಿದ ವಿದ್ಯಾರ್ಥಿಗಳ ಸಹವಾಸವೂ ದೊರೆಯಿತು. ಈ ನಡುವೆ ಹೊಕ್ಕಳಿಕೆಯಿಂದ ನನ್ನೊಡನೆ ಬಸವಾನಿ ಶಾಲೆಗೆ ಭಾವನ  ಹಿರಿಯ ಮಗ ಮಂಜಪ್ಪ, ಸದಾಶಿವಯ್ಯನವರ ಮಗ ರಾಮಚಂದ್ರ ಮತ್ತು ಫಣಿಯಪ್ಪಯ್ಯನವರ ಮಗ ಪುರುಷೋತ್ತಮ ಕೂಡ ಬರತೊಡಗಿದರು. ಅವರು ೫ನೇ ತರಗತಿಗೆ ಸೇರಿದ್ದರು.
ಹೆಡ್ ಮಾಸ್ಟರ್ ವರದಾಚಾರ್ಯರವರ ನಿರ್ಗಮನ ಮತ್ತು ಅವರಿಂದ ಇಂಗ್ಲಿಷ್ ಪಾಠ ಹೇಳಿಸಿಕೊಳ್ಳುವ ನಮ್ಮ ಆಸೆಯ ದಮನ
ದಿನಗಳಲ್ಲಿ ಬಸವಾನಿ ಶಾಲೆಯ ಪ್ರಸಿದ್ಧಿಗೆ ಸಂಪೂರ್ಣ ಕಾರಣ ಹೆಡ್ಮಾಸ್ಟರ್ ವರದಾಚಾರ್ಯರೇ ಎಂಬುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ವರದಾಚಾರ್ಯರು ಅಷ್ಟೇ ಆಕರ್ಷಕವಾಗಿ ಇಂಗ್ಲಿಷ್ ಪಾಠ ಮಾಡುವುದರಲ್ಲಿ ಪ್ರವೀಣರಾಗಿದ್ದರು. ನಾವು ಎಣಿಸಿದ ಪ್ರಕಾರ ನಮಗೆ ಮತ್ತು ೮ನೇ ತರಗತಿಯಲ್ಲಿ ಅವರೇ ಕ್ಲಾಸ್ ಟೀಚರ್ ಆಗಿ ನಮ್ಮ ಇಂಗ್ಲಿಷ್ ತಿಳುವಳಿಕೆಯನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವವರಾಗಿದ್ದರು. ಆದರೆ ನಮ್ಮ ದುರಾದೃಷ್ಟದಿಂದ ನಾವು ೭ನೇ ತರಗತಿಗೆ ಕಾಲಿಡುತ್ತಿದ್ದಂತೆಯೇ ಅವರು ನಮ್ಮ ಶಾಲೆಯಿಂದ ತೀರ್ಥಹಳ್ಳಿಗೆ ವರ್ಗವಾಗಿ ಹೋಗಿ ಬಿಟ್ಟರು. ಅವರ ಬದಲಿಗೆ ಗಿರಿಯಪ್ಪನೆಂಬ ಜೂನಿಯರ್ ಮೇಷ್ಟರು ಬಂದರು. ನಮ್ಮ ೬ನೇ ತರಗತಿಯ ಕ್ಲಾಸ್ ಟೀಚರ್ ಆಗಿದ್ದ ಗುರುಶಾಂತಪ್ಪನವರಿಗೆ ಹೆಡ್ಮಾಸ್ಟರ್ ಪದವಿ ಇಷ್ಟವಿಲ್ಲದಿದ್ದರಿಂದ ಇನ್ನೊಬ್ಬ ಮೇಷ್ಟರಾದ ಸೊರಬದ ರಾಮಪ್ಪ ಎಂಬ ಮೇಷ್ಟ್ರು ಹೆಡ್ ಮಾಸ್ಟರ್ ಪದವಿಗೆ ಬಂದರು.
ನಮ್ಮ ಮೇಷ್ಟರು ಮಾಡುತ್ತಿದ್ದ ಇಂಗ್ಲಿಷ್ ಪಾಠಗಳ  ವೈಖರಿ
ನಮ್ಮ ಮೇಷ್ಟರುಗಳಿಗೆ ಇಂಗ್ಲಿಷ್ ಪಾಠ ಮಾಡುವುದೆಂದರೆ ಪಾಠದಲ್ಲಿ ಬರುತ್ತಿದ್ದ ಇಂಗ್ಲಿಷ್  ಪದಗಳ ಸಮಾನಾರ್ಥದ ಕನ್ನಡ ಪದಗಳನ್ನು ಹೇಳುವುದೇ ಮುಖ್ಯವೆಂದು ಭಾವಿಸಿದ್ದ ಕಾಲವಾಗಿತ್ತು. ಹಾಗಾಗಿ ನಮಗೆ ಪ್ರತಿಯೊಂದು ಪಾಠದ ಸಂಪೂರ್ಣ ಅರ್ಥ ತಲೆಗೆ ಹೋಗುವ ಸಂಭವವೇ ಇಲ್ಲವಾಗಿತ್ತು. ಪಾಠದ ಕೊನೆಯಲ್ಲಿ ಇರುತ್ತಿದ್ದ ಪ್ರಶ್ನೆಗಳಿಗೆ ಪಾಠದಲ್ಲಿ ಇರುತ್ತಿದ್ದ ವಾಕ್ಯಗಳನ್ನು ಅಂಡರ್ಲೈನ್ ಮಾಡಿಸಿ ಬಾಯಿಪಾಠ ಮಾಡಿಸಲಾಗುತ್ತಿತ್ತು. ಇನ್ನು ಕೆಲವು ಪಾಠಗಳ ಸಾರಾಂಶ ಏನೆಂಬುದನ್ನು ಮೇಷ್ಟರಿಗೇ ತಿಳಿಯಲು ಸಾಧ್ಯವಿರಲಿಲ್ಲ. ಉದಾಹರಣೆಗೆ ನಮಗೆ ಪ್ರಸಿದ್ಧ ಲೇಖಕ ಏ ಜಿ ಗಾರ್ಡಿನರ್ ಅವರು ಬರೆದ ಜಾಂಸಾಹಿಬ್ ಅಫ್ ನವಾನಗರ್ ಎಂಬ ಪಾಠವೊಂದಿತ್ತು. ಈ ಜಾಮ್ ಸಾಹಿಬ್ ಮತ್ಯಾರು ಅಲ್ಲ. ಅವರೇ ಪ್ರಸಿದ್ಧ ಕ್ರಿಕೆಟ್ ಆಟಗಾರ ರಣಜೀತ್ ಸಿಂಗ್. ಇಂದಿಗೂ ಪ್ರತಿ ವರ್ಷವೂ ಅವರ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಿ  ಅಂತಿಮ ಪಂದ್ಯದಲ್ಲಿ ಗೆದ್ದ ಟೀಮಿಗೆ ಟ್ರೋಫಿ ನೀಡಲಾಗುತ್ತಿದೆ. ಆದರೆ ಆ ದಿನಗಳಲ್ಲಿ ಕ್ರಿಕೆಟ್ ಆಟದ ಗಂಧ ಗಾಳಿಯೂ ನಮ್ಮ ಮೇಷ್ಟರಿಗಾಗಲೀ ನಮಗಾಗಲೀ ಇರಲಿಲ್ಲ. ಆದ್ದರಿಂದ ಶತ ಪ್ರಯತ್ನ ಮಾಡಿದರೂ ಮೇಷ್ಟರಿಗಾಗಲೀ ನಮಗಾಗಲೀ ಆ ಪಾಠದ ಅರ್ಥವೇನೆಂದು ಅರಿಯಲಾಗಲಿಲ್ಲ.
ನಮ್ಮ ಶಾಲೆಯಲ್ಲೊಂದು ಮಂತ್ರಿ ಮಂಡಲ
ನಮ್ಮ ಶಾಲೆಯಲ್ಲಿ ಅದುವರೆಗೆ ವಿದ್ಯಾರ್ಥಿ ಸಂಘ ಮಾಡಿ ಅದಕ್ಕೆ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರುಗಳನ್ನು ನಾಮಕರಣ ಮಾಡಲಾಗುತ್ತಿತ್ತು. ಆದರೆ ನಮ್ಮ  ಹೊಸ ಹೆಡ್ ಮಾಸ್ಟರ್ ರಾಮಪ್ಪನವರು ಆ ವರ್ಷ ಸಂಘದ ಬದಲಿಗೆ ಮಂತ್ರಿ ಮಂಡಲ ರಚಿಸುವುದಾಗಿ ತೀರ್ಮಾನಿಸಿದರು. ೮ನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದ್ದ ನಮ್ಮ ಹಿಂದಿ ಮೇಷ್ಟ್ರು ಗೋಪಾಲ ಅವರ ತಮ್ಮ ಪದ್ಮನಾಭ ಪ್ರಥಮ ಮುಖ್ಯ ಮಂತ್ರಿಯಾದ. ನನಗೆ ಅರೋಗ್ಯ ಮಂತ್ರಿಯ ಸ್ಥಾನ ನೀಡಲಾಯಿತು. ಬೆಂಚಿನಲ್ಲಿ ನನ್ನ  ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದ  ೮ನೇ ತರಗತಿಯ ದೇವೇಂದ್ರ ಎಂಬ ವಿದ್ಯಾರ್ಥಿ ರಕ್ಷಣಾ ಮಂತ್ರಿಯಾಗಿಬಿಟ್ಟ.
ರಕ್ಷಣಾ ಮಂತ್ರಿಯಿಂದ ನನ್ನ ರಕ್ಷಣೆ
ದೇವೇಂದ್ರ ಬಸವಾನಿಯ ಹತ್ತಿರವೇ ಇದ್ದ ಹಳುವಾನಿ ಎಂಬ ಊರಿನವನು. ಅವನು ನಾನು ಈ ಹಿಂದೆ ಹೆಸರಿಸಿದ “ಪ್ರಸಿದ್ಧ ಪತ್ತೇದಾರ ಮಂಜಪ್ಪನ” ಕಸಿನ್ ಆಗಿದ್ದ. ಸುದೃಢ ದೇಹದಾರ್ಢ್ಯ ಹೊಂದಿದ್ದ ದೇವೇಂದ್ರ ರಕ್ಷಣಾ ಮಂತ್ರಿ ಪದವಿಗೆ ಹೇಳಿ ಮಾಡಿಸಿದಂತಿದ್ದ. ನನಗಂತೂ ಅವನು ಪ್ರಖ್ಯಾತ ಬಂಗಾಳಿ ಲೇಖಕ ಶರತ್ ಚಂದ್ರ ಚಟರ್ಜಿ ಅವರ ಶ್ರೀಕಾಂತ ಕಾದಂಬರಿಯಲ್ಲಿ ಬರುವ ದೇವೇಂದ್ರನ ಹಾಗೆಯೇ ಅನಿಸುತ್ತಿದ್ದ. ಏಕೆಂದರೆ ಬೇಗನೆ ಅವನು ನನ್ನ ಹಿರಿಯ ಮಿತ್ರನಾಗಿ ಹಾಗೂ ರಕ್ಷಣಾ ಮಂತ್ರಿಯಾಗಿ ನನ್ನ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬಿಟ್ಟ! ಆ ದಿನಗಳಲ್ಲಿ ಕೆಲವು ಪೋಲಿ ವಿದ್ಯಾರ್ಥಿಗಳು ನಮ್ಮಂತಹ ಸಾಧು ವಿದ್ಯಾರ್ಥಿಗಳಿಗೆ ಹೊಡೆಯಲು ಬರುತ್ತಿದ್ದುದು ಮಾಮೂಲಾಗಿತ್ತು. ಆದರೆ ದೇವೇಂದ್ರ ಅಂತಹವರು ನನ್ನ  ಬಳಿಯೂ ಸುಳಿಯದಂತೆ ನೋಡಿಕೊಳ್ಳುತ್ತಿದ್ದ.
ಮಂತ್ರಿ ಮಂಡಲದ ಮೊದಲ ಸಭೆ ಮತ್ತು ರಾಜಿ ಪಂಚಾಯಿತಿ
ನಮ್ಮ ಮಂತ್ರಿ ಮಂಡಲದ ಮೊದಲ ಸಭೆ ಬಸವಾನಿಯ ಗುಡ್ಡದ ಮೇಲಿದ್ದ ವಾಟರ್ ಟ್ಯಾಂಕಿನ ಹತ್ತಿರ ಇಟ್ಟುಕೊಳ್ಳಲಾಗಿತ್ತು. ಆ ವೇಳೆಗೆ ಒಂದು ವಿಷಯ ನನ್ನ ಗಮನಕ್ಕೆ ಬಂದಿತ್ತು. ನನ್ನ ಮಿತ್ರ ದೇವೇಂದ್ರ ಮತ್ತು ಮುಖ್ಯಮಂತ್ರಿ ಪದ್ಮನಾಭ ಪರಸ್ಪರ ಮಾತನಾಡುತ್ತಿರಲಿಲ್ಲ. ವಿಚಾರಿಸಿದಾಗ ಅವರು ಒಟ್ಟಿಗೆ ಪ್ರಾಥಮಿಕ ಶಾಲೆಯಲ್ಲಿದ್ದಾಗ ಯಾವುದೋ ಜಗಳ ನಡೆದು ಮಾತು ಬಿಟ್ಟಿದ್ದರಂತೆ. ಅದು ಹಾಗೆಯೇ ಮುಂದುವರಿದು ಬಿಟ್ಟಿತ್ತಂತೆ. ಸಭೆಯ ಕಾರ್ಯ ಕಲಾಪ ಮುಗಿಯುವ ಮೊದಲು ನಾನು ಚಕ್ಕನೆ ಎದ್ದು ನಿಂತು ನನ್ನದೊಂದು ವಿನಂತಿ ಇರುವುದಾಗಿಯೂ ಆದರೆ ಅದಕ್ಕೂ ಮತ್ತು ನನ್ನ ಅರೋಗ್ಯ ಮಂತ್ರಿ ಪದವಿಗೂ ಏನೂ ಸಂಬಂಧ ಇಲ್ಲವೆಂದೂ ಹೇಳಿದೆ.  ನನ್ನ ಪ್ರಕಾರ ಮಂತ್ರಿ ಮಂಡಳಿಯ ಒಗ್ಗಟ್ಟು ಮುಖ್ಯವೆಂದೂ ಮತ್ತು ಮುಖ್ಯಮಂತ್ರಿ  ಮತ್ತು ರಕ್ಷಣಾ ಮಂತ್ರಿ ನಡುವೆ ಮಾತು ಕಥೆ ಇಲ್ಲದಿದ್ದರೆ ಅದು ಹೇಗೆ ಸಾಧ್ಯವೆಂದೂ ಪ್ರಶ್ನಿಸಿದೆ. ನನ್ನ ಈ ಪ್ರಶ್ನೆಯನ್ನು ಪದ್ಮನಾಭನಾಗಲೀ ದೇವೇಂದ್ರನಾಗಲೀ ನಿರೀಕ್ಷಿಸಿರಲಿಲ್ಲ. ಇಬ್ಬರೂ ಮೌನ ಧಾರಣೆ ಮಾಡಿಬಿಟ್ಟರು. ನನ್ನ ರಾಜೀ ಪ್ರಯತ್ನಕ್ಕೆ ಉಳಿದ ಮಂತ್ರಿಗಳ ಸಪೋರ್ಟ್ ಸಿಕ್ಕಿತು. ಕೊನೆಗೆ ದೇವೇಂದ್ರ ಎದ್ದು ನಿಂತು ಪದ್ಮನಾಭನ ಕೈ ಕುಲುಕುವ ಮೂಲಕ ರಾಜೀ ಪಂಚಾಯಿತಿ ಸುಖಾಂತ್ಯ ಕಂಡಿತು.
ಅರೋಗ್ಯ ಮಂತ್ರಿಯ ಫಜೀತಿ!
ಆ ದಿನಗಳಲ್ಲಿ ಹಳ್ಳಿ ಶಾಲೆಯ ಹುಡುಗರು ಹುಡುಗಿಯರೊಡನೆ ಬೆರೆಯುವುದಿರಲಿ ಅವರೊಡನೆ ಮಾತನ್ನೇ ಆಡುತ್ತಿರಲಿಲ್ಲ. ಅದರಲ್ಲಿಯೂ ಮುಖ್ಯವಾಗಿ ನಾನು ಯಾವುದೇ ಹುಡುಗಿಯರೊಡನೆ ಮಾತನಾಡಿಯೇ ಇರಲಿಲ್ಲ. ಇದು ನಮ್ಮ ಹೆಡ್ ಮಾಸ್ಟರ್ ರಾಮಪ್ಪನವರ ಗಮನಕ್ಕೆ ಬಂದಿತ್ತು. ಅವರು ನನಗೆ ಬುದ್ಧಿ ಕಲಿಸಲು ತೀರ್ಮಾನಿಸಿರಬೇಕು. ಒಂದು ದಿನ ಇದ್ದಕ್ಕಿದ್ದಂತೇ ಅವರು ನಾನು ಅರೋಗ್ಯ ಮಂತ್ರಿ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಿರುವೆನೆಂದು ಪ್ರಶ್ನಿಸಿದರು. ನಾನು ನನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆಂದು ಮತ್ತು ಬೇರೆಯವರ ಆರೋಗ್ಯದ ಬಗ್ಗೆ ನನ್ನಲ್ಲಿ ಯಾವುದೇ ವಿವರಗಳು ಲಭ್ಯವಿಲ್ಲವೆಂದೂ ಹೇಳಿಬಿಟ್ಟೆ!

ರಾಮಪ್ಪನವರು ಕೂಡಲೇ ನಾನು ಮಾರನೇ ದಿನದಿಂದ ನಮ್ಮ ರೂಮಿನಲ್ಲಿದ್ದ ೭ ಮತ್ತು ೮ನೇ ತರಗತಿಯ ಎಲ್ಲಾ ಹುಡುಗಿಯರ ಅರೋಗ್ಯ ಪರೀಕ್ಷೆಯನ್ನು ನಿತ್ಯವೂ ಕಡ್ಡಾಯವಾಗಿ ಮಾಡಲೇ ಬೇಕೆಂದು ಆಜ್ಞೆ ಮಾಡಿಬಿಟ್ಟರು. ಅವರ ಆಜ್ಞೆಯ ಪ್ರಕಾರ ನಾನು ಮೊಟ್ಟ ಮೊದಲಿಗೆ ಕೆಲವು ದಿನ ಬೆಳಿಗ್ಗೆಯೇ ಕ್ಲಾಸಿಗೆ ಬಂದೊಡನೆ ಹುಡುಗಿಯರು ಅವರ ಮೂಗು ಮತ್ತು ಹಲ್ಲುಗಳನ್ನು ಸ್ವಚ್ಛ ಮಾಡಿಕೊಂಡು ಬಂದಿರುವರೇ ಎಂದು ಪರೀಕ್ಷಿಸ ಬೇಕಿತ್ತು! ಮೂಗಿನ ಪರೀಕ್ಷೆಗೆ ಅದನ್ನು ಕೈಯಲ್ಲಿ ಒತ್ತಿಹಿಡಿದು ಅದು ಒಳಗೆ ಒದ್ದೆಯಾಗಿಲ್ಲ ಎಂದು ತೀರ್ಮಾನಿಸ ಬೇಕಿತ್ತು. ಒದ್ದೆಯಾಗಿದ್ದರೆ ಅವರನ್ನು ಹೊರಗೆ ಕಳಿಸಿ ಸ್ವಚ್ಛಮಾಡಿಕೊಂಡು ಬರಲು ಹೇಳಬೇಕಿತ್ತು. ಹಲ್ಲಿನ ಪರೀಕ್ಷೆಗೆ ಬಾಯಿ ಕಳೆಯುವಂತೆ ಹೇಳಿ ಹಲ್ಲುಗಳು ಸ್ವಚ್ಛವಾಗಿರುವವೆಂದು ತೀರ್ಮಾನಿಸ ಬೇಕಿತ್ತು! ಇಲ್ಲದಿದ್ದರೆ ಸ್ವಚ್ಛಮಾಡಿಕೊಂಡು ಬರಲು ಮಾರನೇ ದಿನದ ವರೆಗೆ ಅವಕಾಶ ಕೊಡಬೇಕಾಗಿತ್ತು!
ರಾಮಪ್ಪನವರ ಈ ಆಜ್ಞೆ ನನಗೆ ಮತ್ತು ನನ್ನಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದ್ದ ಹುಡುಗಿಯರಿಗೆ ಎಷ್ಟು ಮುಜುಗರ ನೀಡಿರಬೇಕೆಂದು ಓದುಗರು ಗಮನಿಸಬಹುದು. ಆದರೆ ಅದೇನು ತಮಾಷೆಯಾಗಿರಲಿಲ್ಲ. ನಾನು ಆ ಕಾರ್ಯವನ್ನು ನಿರ್ವಹಿಸಲೇ ಬೇಕಾಯಿತು. ಮುಖ್ಯವಾಗಿ ಮಳೆಗಾಲದಲ್ಲಿ ಹುಡುಗಿಯರಿಗೆ ಶೀತ ಕಾಯಿಲೆ ಮಾಮೂಲಾಗಿತ್ತು. ಅವರ ಮೂಗನ್ನು ಹಿಡಿದು ನೋಡಬೇಕಾದ ಪ್ರಸಂಗ ಇಂದಿಗೂ ವಿಚಿತ್ರವಾಗಿ ಅನಿಸುತ್ತಿದೆ. ಆದರೆ ನಾನು ನನ್ನ ಜವಾಬ್ದಾರಿಯನ್ನು ಚೆನ್ನಾಗಿಯೇ ನಿರ್ವಹಿಸಿರಬೇಕು.  ಏಕೆಂದರೆ ನಾನು ೮ನೇ ತರಗತಿಗೆ ಪ್ರವೇಶ ಮಾಡಿದೊಡನೆ ನನ್ನನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು!
------- ಮುಂದುವರಿಯುವುದು-----

No comments: