Sunday, January 26, 2020

ಬಾಲ್ಯ ಕಾಲದ ನೆನಪುಗಳು – ೫೩


ಅರುಣಾಚಲಂ ಮೇಷ್ಟರ ಮನೆಯಲ್ಲಿ ಮೊದಲ ದಿನ
ನಾನು ಮಾರನೇ ದಿನ ಬೆಳಿಗ್ಗೆ ಎದ್ದ ನಂತರ ಮೇಷ್ಟರ ಮನೆಯಲ್ಲಿದ್ದ ಇತರ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡೆ. ಅವರಲ್ಲಿ ತಲವಾನೆ ಶಂಕರ ಮತ್ತು ಕೃಷ್ಣ , ಗುಡ್ಡೇತೋಟದ ಶ್ರೀಕಂಠ , ನೀಲಕಂಠ ಮತ್ತು ಸದಾಶಿವ, ನವರೇಕಲ್ಲು ವೆಂಕಟರಮಣ, ಬೈರೇದೇವರು ಗಣೇಶ ಮತ್ತು ಕಚಿಗೆ ನಾಗರಾಜ ನೆನಪಿಗೆ ಬರುತ್ತಾರೆ. ಅರುಣಾಚಲಂ ಮೇಷ್ಟರಿಗೆ ರಾಜಮ್ಮ (ರಾಜಲಕ್ಷ್ಮಿ) ಎಂಬ ಪತ್ನಿ, ಪಾರ್ಥ ಮತ್ತು ಮೋಹನದಾಸ ಎಂಬ ಗಂಡು ಮಕ್ಕಳು ಮತ್ತು ಗೀತಾ ಎಂಬ ಮಗಳು ಇದ್ದರು. ಪಾರ್ಥ ಭದ್ರಾವತಿಯಲ್ಲಿ ಡಿಪ್ಲೋಮ ಓದುತ್ತಿದ್ದು ನಿತ್ಯವೂ ಬಸ್ ಪ್ರಯಾಣ ಮಾಡುತ್ತಿದ್ದ. ಗೀತಾ ಎಸ್ ಎಸ್ ಎಲ್ ಸಿ  ಓದುತ್ತಿದ್ದಳು. ಮತ್ತು ಮೋಹನದಾಸ ನನ್ನ ಕ್ಲಾಸ್ ಮೇಟ್ ಆಗಲಿದ್ದ.  ವೆಂಕಟರಮಣ, ನೀಲಕಂಠ, ಗಣೇಶ ಮತ್ತು ಮೋಹನದಾಸ ನನ್ನೊಡನೆ ಇಂಗ್ಲಿಷ್ ಮೀಡಿಯಂ ಟೆಸ್ಟಿನಲ್ಲಿ ಭಾಗವಹಿಸುವರಿದ್ದರು. ಸದಾಶಿವ ಮತ್ತು ನಾಗರಾಜ ನ್ಯಾಷನಲ್ ಮಿಡ್ಲ್ ಸ್ಕೂಲಿನಲ್ಲಿ ೮ನೇ ತರಗತಿ ಓದುತ್ತಿದ್ದರು. ಶಂಕರ ಎಸ್ ಎಸ್ ಎಲ್ ಸಿ ಮತ್ತು ಕೃಷ್ಣ ಹಾಗೂ ಶ್ರೀಕಂಠ  ೯ನೇ ಸ್ಟ್ಯಾಂಡರ್ಡ್ ನ್ಯಾಷನಲ್ ಹೈಸ್ಕೂಲಿನಲ್ಲೇ ಓದುತ್ತಿದ್ದರು.   
ನಾನೆಂದೂ ಕಾಣದ ಟೂತ್ ಪೇಸ್ಟ್ ಮತ್ತು ಬ್ರಷ್!
ನಾನಲ್ಲಿಯವರೆಗೆ ಬೆಳಿಗ್ಗೆ ಹಲ್ಲು ಉಜ್ಜಲು ಬತ್ತದ ಹೊಟ್ಟು (ಉಮಿ) ಸುಟ್ಟು ಮಾಡಿದ ಬೂದಿಯನ್ನು ಬಳಸುವುದನ್ನು ಮಾತ್ರಾ ನೋಡಿದ್ದೆ. ಆದರೆ ಮೇಷ್ಟರ ಮನೆಯಲ್ಲಿದ್ದ ಎಲ್ಲಾ ಹುಡುಗರು ಒಂದು ಟ್ಯೂಬಿನಿಂದ ಪೇಸ್ಟನ್ನು ಹೊರತೆಗೆದು ಅದನ್ನು ಒಂದು ಬ್ರಷ್ ಮೇಲೆ ಹರಡಿ ಗಸಗಸನೆ ಹಲ್ಲು  ಉಜ್ಜುವುದನ್ನು ನೋಡಿ ನಾನು ಚಕಿತನಾಗಿಬಿಟ್ಟೆ. ಅವರಲ್ಲೊಬ್ಬ ಹುಡುಗನು ನನ್ನ ಕೈ ಬೆರಳಮೇಲೆ ಹಚ್ಚಿದ ಪೇಸ್ಟಿನಿಂದ ನಾನು ಬೆಳಿಗ್ಗೆ ಹಲ್ಲು ತೊಳೆಯ ಬೇಕಾಯಿತು. ಆದರೆ ಮಾರನೇ ದಿನ ಅಣ್ಣ ನನ್ನ ಜೀವನದಲ್ಲಿ ಮೊದಲ ಬಾರಿ ಕೊಡಿಸಿದ ಬ್ರಷ್ ಮತ್ತು ಪೇಸ್ಟ್ ಟ್ಯೂಬ್ ನನ್ನ ಕೈಯಲ್ಲಿದ್ದುವು.
ನನ್ನ ಬೆಳಗಿನ ಬ್ರೇಕ್ ಫಾಸ್ಟ್ ಮಂಗ ಮಾಯವಾದದ್ದು!
ಬೆಳಿಗ್ಗೆ ನಾವು ಏಳುವುದರೊಳಗೆ ಮೇಷ್ಟರು ಬಚ್ಚಲಮನೆಯಲ್ಲಿ ಒಲೆಯೊಳಗೆ ಬತ್ತದ ಹೊಟ್ಟು (ಉಮಿ) ಸುರಿಯುತ್ತಾ ಹಂಡೆಯಲ್ಲಿ ನೀರು ಕುದಿಸಿ ನಮ್ಮೆಲ್ಲರ ಸ್ನಾನಕ್ಕೆ ತಯಾರಿಮಾಡುತ್ತಿದ್ದರೆ ರಾಜಮ್ಮನವರು ಅಡಿಗೆಮನೆಯಲ್ಲಿ ಬ್ಯುಸಿಯಾಗಿದ್ದರು. ನಾನು ಅವರು ನಮ್ಮ ಬೆಳಗಿನ ಉಪಹಾರದ ತಯಾರಿಯಲ್ಲಿದ್ದರೆಂದು ಭಾವಿಸಿದ್ದೆ.  ಆದರೆ ನನ್ನ ಊಹೆ ತಪ್ಪಾಗಿ ಬಿಟ್ಟಿತು. ಮೇಷ್ಟರ ಮನೆಯಲ್ಲಿ ಬೆಳಗಿನ ಉಪಹಾರದ ಪದ್ಧತಿಯೇ ಇರಲಿಲ್ಲ!  ಬದಲಿಗೆ ನಾವು ಶಾಲೆಗೆ ಹೊರಡುವ ಮೊದಲು ಗಂಟೆಗೆ ಊಟ ಹಾಕಿಬಿಡುತ್ತಿದ್ದರು. ಹೀಗೆ ನಾನು ಚಿಕ್ಕವನಾಗಿದ್ದ ದಿನಗಳಿಂದ ನಮ್ಮ ಮನೆಯಲ್ಲಿ ಆಮೇಲೆ ಅಕ್ಕನ ಮನೆಯಲ್ಲಿ ಪಟ್ಟಾಗಿ ತಿನ್ನುತ್ತಿದ್ದ ಬೆಳಗಿನ ಉಪಹಾರ ಶಿವಮೊಗ್ಗೆಯಲ್ಲಿ ಕೊನೆಗೊಂಡಿತು!
ರಾಜಮ್ಮನ ರುಚಿ  ರುಚಿ ಅಡಿಗೆ
ರಾಜಮ್ಮನ ಕೈ ಅಡುಗೆ ತುಂಬಾ ರುಚಿ ರುಚಿ ಆಗಿರುತ್ತಿತ್ತು. . ಅಷ್ಟೂ ಮಂದಿ ಹುಡುಗರಿಗೆ ದಂಪತಿ ಜೋಡಿ ತುಂಬಾ ಪ್ರೀತಿಯಿಂದ ಊಟ ಬಡಿಸುತ್ತಿದ್ದರು. ಅದು ಮಾವಿನ ಹಣ್ಣಿನ ಕಾಲವಾದ್ದರಿಂದ ಒಬ್ಬೊಬ್ಬರ ತಟ್ಟೆಯಲ್ಲೂ ಒಂದೊಂದು ಮಾವಿನ ಹಣ್ಣು ಕತ್ತರಿಸಿ ಬಡಿಸುತ್ತಿದ್ದರು.  ನಾವು ಮಧ್ಯಾಹ್ನ ಬ್ರೇಕ್ ನಲ್ಲಿ ಸುಮ್ಮನೇ ಮನೆಗೆ ಬಂದು ಹೋಗುತ್ತಿದ್ದೆವು. ಆದರೆ ಸಂಜೆ ನಾವು ಬರುವಾಗ ರಾಜಮ್ಮನವರು ತಿಂಡಿ ರೆಡಿ ಮಾಡಿರುತ್ತಿದ್ದರು. ಅವರು ಕಲಸಿ  ತಯಾರಿಸಿದ ಮೊಸರನ್ನ ಕೂಡಾ ಎಷ್ಟು ರುಚಿ ಇತ್ತೆಂದು ಇಂದಿಗೂ ನೆನಪಿಗೆ ಬರುತ್ತಿದೆ.
ನ್ಯಾಷನಲ್ ಹೈಸ್ಕೂಲ್ ಅಡ್ಮಿಶನ್ ಮತ್ತು ಇಂಗ್ಲಿಷ್ ಮೀಡಿಯಂ ಸೆಲೆಕ್ಷನ್
ದಿನ ಅಣ್ಣ ನನ್ನನ್ನು ಕರೆದುಕೊಂಡು ಹೋಗಿ ನ್ಯಾಷನಲ್ ಹೈಸ್ಕೂಲ್ ಅಡ್ಮಿಶನ್ ಮಾಡಿಸಿ ಬಿಟ್ಟ. ಮಾರನೇ  ದಿನ ನಡೆದ ಇಂಗ್ಲಿಷ್ ಮೀಡಿಯಂ ಟೆಸ್ಟಿನಲ್ಲಿ ನಾನು, ನೀಲಕಂಠ, ವೆಂಕಟರಮಣ ಮತ್ತು ಮೋಹನದಾಸ ಪಾಸಾಗಿ ಬಿಟ್ಟೆವು. ಕೇವಲ ಗಣೇಶನಿಗೆ ಮಾತ್ರಾ ಕನ್ನಡ ಮೀಡಿಯಂ ನಲ್ಲೇ ತೃಪ್ತಿ ಪಡೆಯ ಬೇಕಾಯಿತು.
ಬ್ರಾಹ್ಮಣರ ಹಾಸ್ಟೆಲಿಗೆ ಫ್ರೀ ಸೀಟ್ ಅಪ್ಲಿಕೇಶನ್
ನನಗೆ ಅವೇಳೆಗೆ ಒಂದು ವಿಷಯ ತಿಳಿದು ಬಂತು. ನನ್ನ  ಜೊತೆ ಮೇಷ್ಟರ ಮನೆಯಲ್ಲಿದ್ದ ಎಲ್ಲಾ ಹೈಸ್ಕೂಲ್ ವಿದ್ಯಾರ್ಥಿಗಳು ಜುಲೈ ತಿಂಗಳಿನಲ್ಲಿ ಬ್ರಾಹ್ಮಣರ ಹಾಸ್ಟೆಲಿಗೆ ಸೇರುವರಿದ್ದರು. ಮೇಷ್ಟರ ಮನೆಯ ವಾಸ ಕೇವಲ ಒಂದು ತಿಂಗಳು ಮಾತ್ರ ಆಗಿತ್ತು. ಮೇಷ್ಟರು ಒಂದು ತಿಂಗಳಿಗೆ ಊಟ, ತಿಂಡಿ ಮತ್ತು ವಸತಿಗೆ ೩೦ ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಬ್ರಾಹ್ಮಣರ ಹಾಸ್ಟೆಲಿನಲ್ಲಿ ತಿಂಗಳಿಗೆ ೪೦ ರೂಪಾಯಿ (Full Pay), ೨೩ ರೂಪಾಯಿ (Half Pay) ಮತ್ತು ರೂಪಾಯಿ (Free Seat) ಚಾರ್ಜ್ ಇತ್ತು. ನನ್ನನ್ನು ಬಿಟ್ಟು ಉಳಿದೆಲ್ಲರೂ ೪೦ ರೂಪಾಯಿ ಸೀಟಿಗೆ ಸೇರುವರಾಗಿದ್ದರು. ನನಗೆ ಫ್ರೀ ಸೀಟ್ ಕೊಡಿಸಬೇಕೆಂದು ನನ್ನಣ್ಣನ ಉದ್ದೇಶವಾಗಿತ್ತು. ಆದರೆ ಅದರಲ್ಲಿ ಒಂದು ತೊಂದರೆ ಇತ್ತು.  ಹಾಸ್ಟೆಲಿನ ಉದ್ದೇಶವೇ ಹಳ್ಳಿಯ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸ ಮಾಡುವಂತೆ ಅನುಕೂಲ ಮಾಡುವುದಾಗಿತ್ತು. ಆದರೂ ಕೂಡ ಹೈಸ್ಕೂಲ್ ಓದುತ್ತಿದ್ದ ಕೆಲ ಮೆರಿಟ್ ಇರುವ ಬಡ ವಿದ್ಯಾರ್ಥಿಗಳಿಗೆ ಸೀಟ್ ಕೊಡುವ ಪರಿಪಾಠವಿತ್ತು. ಆದರೆ ಅದು ಅಷ್ಟು ಸುಲಭವಿರಲಿಲ್ಲ.
ನನ್ನಣ್ಣನ ಹಾಸ್ಟೆಲ್ ಫ್ರೀ ಸೀಟ್ ಹೋರಾಟ
ನನ್ನಣ್ಣ ನನಗರಿವಿಲ್ಲದೇ ನನಗೆ ಫ್ರೀ ಸೀಟ್ ಕೊಡಿಸಲು ಹೋರಾಟ ಮಾಡುತ್ತಿದ್ದ. ನನಗೆ ಬೇಸಿಗೆಯಲ್ಲಿ ಅರ್ಜೆಂಟಾಗಿ ಉಪನಯನ ಮಾಡಿದ್ದೂ ಕೂಡಾ ಉದ್ದೇಶದಿಂದಲೇ. ಏಕೆಂದರೆ ಉಪನಯನವಾಗದ ವಿದ್ಯಾರ್ಥಿಗೆ ಹಾಸ್ಟೆಲಿನಲ್ಲಿ ಪ್ರವೇಶವಿರಲಿಲ್ಲ. ಇದಲ್ಲದೇ ಕೊಪ್ಪದ ಮಿಲಿಟರಿ ಡಾಕ್ಟರ್ ಎಂ  ಆರ್ ಆರ್  ಐಯಂಗಾರ್ ಮತ್ತು ಇನ್ನೊಬ್ಬ ಪ್ರತಿಷ್ಠಿತ ವ್ಯಕ್ತಿಯಿಂದ ನನಗೆ ಹಾಸ್ಟೆಲಿನಲ್ಲಿ ಫ್ರೀ ಸೀಟಿಗಾಗಿ ರೆಕಮೆಂಡೇಷನ್ ಪತ್ರಗಳು ಅಣ್ಣನ ಕೈಯಲ್ಲಿದ್ದವು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಅಣ್ಣನ ಕ್ಲಾಸ್ಮೇಟ್ ಮತ್ತು ಪ್ರತಿಷ್ಠಿತ ವ್ಯಕ್ತಿಯೊಬ್ಬರು ನನಗೆ ಫ್ರೀ ಸೀಟ್ ಕೊಡಿಸಲು ಸರ್ವ ಪ್ರಯತ್ನ ಮಾಡಲು ಮುಂದಾಗಿದ್ದರು. ಅವರೇ ತಲವಾನೆ ಶ್ರೀನಿವಾಸ್.
-------- ಮುಂದುವರಿಯುವುದು------

No comments: