Wednesday, January 22, 2020

ಬಾಲ್ಯ ಕಾಲದ ನೆನಪುಗಳು – ೫೧


ಬಸವಾನಿ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಕೊನೆಗೊಳ್ಳುವ  ವೇಳೆ ನನ್ನ ಜೀವನದ ಒಂದು ಸಂಧಿ ಕಾಲವೇ ಆಗಿತ್ತೆಂದು ಹೇಳಲೇ ಬೇಕು. ನನ್ನ ಆಣ್ಣನಿಗೆ ನನ್ನನ್ನು ಒಂದು ಇಂಗ್ಲಿಷ್ ಮೀಡಿಯಂ ಇರುವ ಪ್ರೌಢ ಶಾಲೆಗೇ ಸೇರಿಸಿಬಿಡಬೇಕೆಂಬ ಗುರಿ ಇತ್ತು. ದಿನಗಳಲ್ಲಿ ಕೇವಲ ಶಿವಮೊಗ್ಗೆಯ ಮೂರು ಪ್ರೌಢ ಶಾಲೆಗಳಲ್ಲಿ ಮಾತ್ರ ಒಂದೊಂದು  ಸೆಕ್ಷನ್ ಇಂಗ್ಲಿಷ್ ಮೀಡಿಯಂ ಬೋಧನೆಗೆ ನಿಯಮಿತವಾಗಿದ್ದವು. ಸೆಕ್ಷನ್ ಒಳಗೆ ಅಡ್ಮಿಶನ್ ಸಿಗುವುದು ಒಂದು ಹೆಮ್ಮೆಯ ವಿಷಯವಾಗಿತ್ತು ಮತ್ತು ಅಷ್ಟೇ ಕಷ್ಟವಾಗಿತ್ತು. ನನ್ನಣ್ಣನ ಇನ್ನೊಂದು ಉದ್ದೇಶವೂ ಇತ್ತು. ಅದೆಂದರೆ ನನ್ನನ್ನು ಒಬ್ಬ "ಪೇಟೆಯ ಹುಡುಗನಾಗಿ" ಪರಿವರ್ತಿಸುವುದು. ಹಾಗಾಗಲಿಕ್ಕೆ ನಾನು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯ ಬೇಕಿತ್ತು. ಮಾತ್ರವಲ್ಲ. ಪೇಟೆಯ ಹುಡುಗರಂತೆ ಸ್ವಚ್ಛ ಕನ್ನಡವನ್ನು ಪಟಪಟನೆ   ಮಾತನಾಡುವುದನ್ನೂ ಕಲಿಯ ಬೇಕಿತ್ತು. ಆದರೆ ಶಿವಮೊಗ್ಗದಂತ ನಗರದಲ್ಲಿ ನಾನು ಓದುವುದೇನು  ಸಾಮಾನ್ಯ ವಿಷಯವಾಗಿರಲಿಲ್ಲ. ಏಕೆಂದರೆ ಶಾಲೆಯ ಫೀ ಕಟ್ಟುವುದೇ ಕಷ್ಟವಾಗಿದ್ದ ನಮ್ಮ ಸಂಸಾರಕ್ಕೆ ಊಟ, ವಸತಿ ಮತ್ತು ಇತರ ಖರ್ಚುಗಳನ್ನು ಏರ್ಪಾಟು ಮಾಡುವ ಸಂಭವವೇ ಇರಲಿಲ್ಲ.
ಹೊರನಾಡಿನಲ್ಲಿ ನನ್ನ ಉಪನಯನ
ನಮ್ಮ ಪುಟ್ಟಣ್ಣನಿಗೆ ಸುಮಾರು - ನೇ ವಯಸ್ಸಿಗೇ ಹೊರನಾಡಿನಲ್ಲಿ ಉಪನಯನ ವಿಜೃಂಭಣೆಯಿಂದ ನೆರವೇರಿತ್ತು. ಆಗ ನಮ್ಮ ಸಂಸಾರದ ಹಣ ಕಾಸಿನ ವ್ಯವಹಾರ ಪುರದಮನೆ ಶ್ರೀನಿವಾಸ ಸುಬ್ರಹ್ಮಣ್ಯಂ ಅವರ ಕೈಯಲ್ಲಿ ಇತ್ತು. ಆದರೆ ೧೯೬೦-೧೯೬೧ ನೇ ಇಸವಿಯಲ್ಲಿ ನಡೆದ ನಮ್ಮ ರುಕ್ಮಿಣಕ್ಕನ ಮತ್ತು ಅಣ್ಣನ ಮದುವೆಗಳ ಖರ್ಚಿನಿಂದ ನಮ್ಮ ಸಂಸಾರದ ಹಣಕಾಸಿನ  ಪರಿಸ್ಥಿತಿ ತುಂಬಾ ಬಿಗಡಾಯಿಸಿತ್ತು. ಹಾಗಾಗಿ ನನಗೆ ೧೪ ವರ್ಷ ವಯಸ್ಸಾದರೂ ಉಪನಯನ ಮಾಡಲಾಗಿರಲಿಲ್ಲ. ನಾನು ಹೈಸ್ಕೂಲ್  ಓದಲು  ಹೋಗುವ ಮುನ್ನ ನನ್ನ ಉಪನಯನ ಮಾಡಬೇಕೆಂದು ಅಣ್ಣ ತೀರ್ಮಾನಿಸಿದ್ದ. ವರ್ಷ ಮೇ ತಿಂಗಳಿನಲ್ಲಿ ಹೇಗೋ ೧೦೦ ರೂಪಾಯಿ ಹೊಂದಿಸಿ ನನ್ನನ್ನು ಅಪ್ಪ, ಅಮ್ಮ ಮತ್ತು ತಂಗಿ ವಿಶಾಲ ಅವರೊಡನೆ ಹೊರನಾಡಿಗೆ ಉಪನಯನ ಮಾಡಿಸಿಕೊಂಡು ಬರಲು ಕಳಿಸಿದ.

ನಾವು ನಾಲ್ಕು ಮಂದಿ ಶಂಕರ್ ಟ್ರಾನ್ಸ್ಪೋರ್ಟ್ ಅವರು ಕೊಪ್ಪದಿಂದ ಕಳಸಕ್ಕೆ ನಿತ್ಯ ಓಡಿಸುತ್ತಿದ್ದ ಉದ್ದಮೂತಿ ಬಸ್ಸಿನಲ್ಲಿ ಪ್ರಯಾಣ ಮಾಡಿ ಬಸ್ರಿಕಟ್ಟೆ ಮಾರ್ಗವಾಗಿ ಕಳಸ ಪೇಟೆ ತಲುಪಿದೆವು. ಬಸ್ಸಿನ ಡ್ರೈವರ್ ತಿಮ್ಮಪ್ಪ ತುಂಬಾ ಪ್ರಸಿದ್ಧನಾಗಿದ್ದ. ತನ್ನ ಬಸ್ಸಿನಲ್ಲಿ ಕೆಲವರ ಸಾಮಾನುಗಳನ್ನು ಇಟ್ಟುಕೊಂಡು ಮಾರ್ಗದಲ್ಲಿ ಅವರು ಹೇಳಿದವರಿಗೆ ಡೆಲಿವರಿ ಮಾಡುತ್ತಿದ್ದ. ಕಳಸದಿಂದ ನಾವು ಕಾಲ್ನಡಿಗೆ ಪ್ರಯಾಣ ಮಾಡಿ ಭದ್ರಾ ನದಿಯನ್ನು ದಾಟಿ ಹೊರನಾಡು ತಲುಪಬೇಕಾಯಿತು. ಆಶ್ಚರ್ಯವೆಂದರೆ ನಮಗೆ ಚಿರಪಚಿತವಾದ ನಮ್ಮೂರ ತುಂಗಾ ನದಿ ಸ್ವಲ್ಪವೂ ಶಬ್ದ ಮಾಡದೇ ಗಾಂಭೀರ್ಯದಿಂದ ಹರಿಯುತ್ತಿದ್ದರೆ ಭದ್ರೆ ಭೋರೆಂದು ಹರಿದು ಹೋಗುತ್ತಿದ್ದಳು. ಬಗ್ಗೆ ನಮ್ಮ ಕುತೂಹಲವನ್ನು ನಮ್ಮ ಅಮ್ಮ ಹೇಳಿದ ಕಥೆ ಪರಿಹಾರ ಮಾಡಿಬಿಟ್ಟಿತು.
ತುಂಗ ಭದ್ರೆಯ ಕಥೆ
ಅವಳಿ ಜವಳಿ ಮಕ್ಕಳಾದ ತುಂಗೆ ಮತ್ತು ಭದ್ರೆ ಶೃಂಗೇರಿಯಿಂದಾಚೆ ಇರುವ ಗಂಗಾಮೂಲ ಎಂಬಲ್ಲಿ ಜನಿಸಿದರಂತೆ.  ಆದರೆ ಶೃಂಗೇರಿ ತಲುಪುವ ಮುನ್ನ ದಾರಿಯಲ್ಲಿ  ಯಾವುದೊ ಕಾರಣದಿಂದ ತುಂಗೆ ಭದ್ರೆಯನ್ನು ಅಗಲಿ ಮುಂದೆ ಹೋಗಿ ಬಿಟ್ಟಳಂತೆ. ಅಕ್ಕನ ಅಗಲಿಕೆಯನ್ನು ತಾಳಲಾರದ ತಂಗಿ ಭದ್ರೆ ಅಕ್ಕಾ ಎಂದು ಕೂಗುತ್ತಾ (ಭೋರ್ಗರೆಯುತ್ತಾ) ಅಕ್ಕನನ್ನು ಅರಸುತ್ತಾ ಕಳಸ, ಬಾಳೆಹೊನ್ನೂರು  ಮತ್ತು ಭದ್ರಾವತಿ ಮಾರ್ಗವಾಗಿ ಹೋಗುತ್ತಲೇ (ಹರಿಯುತ್ತಲೇ) ಇದ್ದಳಂತೆ. ಅದೇ ವೇಳೆ ಅಕ್ಕ ತುಂಗೆ ಪರಮ ಗಾಂಭೀರ್ಯದಿಂದ ಹರಿಯುತ್ತಾ ಶೃಂಗೇರಿ, ಹರಿಹರಪುರ, ಬಸವಾನಿ, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗೆ ತಲುಪಿದಳಂತೆ. 

ಶಿವಮೊಗ್ಗೆಯಲ್ಲಿದ್ದ ಶಿವನಿಗೆ ಅಕ್ಕ ತುಂಗೆ ನಿಷ್ಕಾರುಣ್ಯದಿಂದ ತಂಗಿ ಭದ್ರೆಯನ್ನು ಆಗಲಿ ರೀತಿ ಗುಪ್ತವಾಗಿ ಹರಿದು ಹೋಗುತ್ತಿರುವುದನ್ನು ನೋಡಿ ಸಹಿಸಲಾಗಲಿಲ್ಲವಂತೆ. ಅವನು ಅಕ್ಕ-ತಂಗಿ ಜೋಡಿಗೆ ಒಂದೇ ದಿಕ್ಕಿನತ್ತ ಹರಿದು ಕೂಡಲಿಯಲ್ಲಿ ಸಂಗಮವಾಗಿ ನಂತರ ತುಂಗಭದ್ರೆ ಎಂಬ ಹೆಸರಿನಿಂದ ಹರಿಹರದತ್ತ ಹರಿದು ಹೋಗುವಂತೆ ಆಜ್ಞಾಪಿಸಿದನಂತೆ. ಅಂತೆಯೇ ಕೂಡಲಿಯಲ್ಲಿ ಅಕ್ಕನೊಂದಿಗೆ ಒಂದಾಗುತ್ತಿದ್ದಂತೆ ಭದ್ರೆಯ ದುಃಖ ಕೊನೆಗೊಂಡು ಸುಖಾಂತ್ಯವಾಯಿತಂತೆ.

ಹೊರನಾಡು ಅನ್ನಪೂರ್ಣೇಶ್ವರಿ
ಹೊರನಾಡು ದೇವಸ್ಥಾನದಲ್ಲಿ ನಮಗೆ ಆದರದ ಸ್ವಾಗತವೇ ಸಿಕ್ಕಿತು.  ದಿನಗಳಲ್ಲಿ ನಮ್ಮ ಊರಿನ ಎಲ್ಲಾ ಮನೆಗಳಲ್ಲೂ ಪ್ರತಿ ವರ್ಷ ಹೊರನಾಡು ದೇವಸ್ಥಾನಕ್ಕೆಂದು ನಿಗದಿಯಾದ ತೂಕದಷ್ಟು ಅಡಿಕೆಯನ್ನು ತೆಗೆದಿಡಲಾಗುತ್ತಿತ್ತು. ಅದನ್ನು ಅನ್ನಪೂರ್ಣೇಶ್ವರಿಗೆ ಕಾಣಿಕೆಯಾಗಿ ತೆಗೆದುಕೊಂಡು ಹೋಗಲು ದೇವಸ್ಥಾನದ ಪ್ರತಿನಿಧಿಯೊಬ್ಬರು ಒಬ್ಬ ಆಳಿನೊಡನೆ ಬರುತ್ತಿದ್ದರು. ಪ್ರತಿನಿಧಿಯವರು ಆಗಿನ ಆಡಳಿತಾಧಿಕಾರಿ ಡಿ ಬಿ ವೆಂಕಟಸುಬ್ಬಾ ಜೋಯಿಸ್ ಅವರು ಸ್ವತಃ ಬರವಣಿಗೆ ಮಾಡಿದ ರಥೋತ್ಸವ ಪತ್ರಿಕೆಯನ್ನು ಕೊಟ್ಟು ನಂತರ ತೆಗೆದಿರಿಸಿದ ಅಡಿಕೆಯನ್ನು ಮೂಟೆಯೊಳಗೆ ಸುರಿದುಕೊಂಡು ಹೋಗುತ್ತಿದ್ದರು.
ನಾವು ಹೋದ ಮಾರನೇ ದಿನ ನನ್ನ ಉಪನಯನವನ್ನು ಶಾಸ್ತ್ರೋಕ್ತವಾಗಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಮಾಡಲಾಯಿತು. ನಮ್ಮ ಊಟ, ತಿಂಡಿ, ಉಪನಯನ ವಿಧಿಯ ಖರ್ಚು ಮತ್ತು ನಮ್ಮ ಬಸ್ ಪ್ರಯಾಣದ ಖರ್ಚು ಎಲ್ಲಾ  ಒಟ್ಟಿಗೆ ನಮ್ಮಣ್ಣನ ೧೦೦ ರೂಪಾಯಿ ಬಜೆಟ್ಟಿನಲ್ಲೇ ಮುಗಿದು ನಾವು ತಿಮ್ಮಪ್ಪನ ಬಸ್ಸಿನಲ್ಲಿ ವಾಪಾಸ್ ಬಿ ಜಿ ಕಟ್ಟೆ ತಲುಪಿ ನಮ್ಮೂರು ಸೇರಿದೆವು.

ಪುಟ್ಟಣ್ಣನಿಗೆಹಂಚಿನಮನೆ”ಯಲ್ಲಿ ಇರುವ ಸೌಭಾಗ್ಯ ಬಂತು!
ಆಗಿನ ಕಾಲದ ಶ್ರೀಮಂತರ ಮನೆಗಳೆಲ್ಲಾ ಹಂಚಿನ ಮನೆಗಳಾಗಿದ್ದು ಕೇವಲ ಕೆಲವು ಬಡವರ ಮನೆಗಳು ಮಾತ್ರಾ ಅಡಿಕೆ ಸೋಗೆಯಿಂದ ಮುಚ್ಚಿದ ಮನೆಗಳಾಗಿರುತ್ತಿದ್ದವು. ವಿಚಿತ್ರವೆಂದರೆ ನಮ್ಮ ದಾಯಾದಿಗಳಲ್ಲೊಬ್ಬರಾದ ಶೃಂಗೇರಿ ಹತ್ತಿರದಲ್ಲಿ ವಾಸ  ಮಾಡುತ್ತಿದ್ದ  ಶಿಂಗಪ್ಪಯ್ಯ ಎಂಬುವ ಶ್ರೀಮಂತರ ಮನೆಗೆ  ಹಂಚು ಹೊಚ್ಚಿದ್ದು ಮಾತ್ರವಲ್ಲ  ಮನೆಯ ಹೆಸರೇಹಂಚಿನಮನೆ”  ಎಂದಿತ್ತು. ನಮ್ಮ ಪುಟ್ಟಣ್ಣನಿಗೆ ೭ನೇ ತರಗತಿ ಪರೀಕ್ಷೆಯನ್ನು ಪ್ರೈವೇಟ್ ಆಗಿ ಕಟ್ಟಿದ ನಂತರಹಂಚಿನಮನೆ”ಯಲ್ಲಿದ್ದು ಅಲ್ಲಿಂದ ಶೃಂಗೇರಿ ಮಾಧ್ಯಮಿಕ ಶಾಲೆಗೆ ಹೋಗಿ ಬರುವ ಏರ್ಪಾಟು ಮಾಡಲಾಯಿತು. ಶಿಂಗಪ್ಪಯ್ಯನವರಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಸುಬ್ರಹ್ಮಣ್ಯ ಎಂಬ ಒಬ್ಬನೇ ಮಗ ಇದ್ದರು. ಒಬ್ಬ ಹೆಣ್ಣು ಮಗಳನ್ನು ನರ್ಜಿ ಊರಿನಲ್ಲಿದ್ದ ನಮ್ಮ ಹೊಕ್ಕಳಿಕೆ ಭಾವನವರ ಅಕ್ಕನ ಮಗನಾದ ವಾಸು ಎಂಬುವರಿಗೆ ಮದುವೆ ಮಾಡಲಾಗಿತ್ತು.

ಕೆರೆಮನೆ ಕೆ ಟಿ  ಮತ್ತು ನಾವು ಕಂಡ ಮೊಟ್ಟ ಮೊದಲನೇ ಟೇಪ್ ರೆಕಾರ್ಡರ್
ನಾನೊಮ್ಮೆ ಪುಟ್ಟಣ್ಣನೊಡನೆ ಹಂಚಿನಮನೆಗೆ ಹೋಗಿದ್ದೆ. ನನಗೆ ಶಿಂಗಪ್ಪಯ್ಯನವರು ತುಂಬಾ ಗಾಂಭೀರ್ಯದ ವ್ಯಕ್ತಿಯಾಗಿ ಹಾಗೂ ಸುಬ್ರಹ್ಮಣ್ಯ ಅಷ್ಟೇ ಸರಳ ವ್ಯಕ್ತಿಯಾಗಿ ಕಾಣಿಸಿದರು. ಅಲ್ಲಿಂದ ನಾನು ಪುಟ್ಟಣ್ಣನೊಡನೆ ಕೆರೆಮನೆ ಲಕ್ಷ್ಮೀನಾರಾಯಣ ಅವರ ಮನೆಗೆ ಹೋಗುವ ಅವಕಾಶ ಬಂತು. ಲಕ್ಷ್ಮೀನಾರಾಯಣ ಅವರು "ಕೆ ಟಿ" ಎಂಬ ಸಂಕ್ಷಿಪ್ತ ನಾಮದಿಂದ ಕರೆಯಲ್ಪಡುತ್ತಿದ್ದರು. ಅವರೊಬ್ಬ ವಿಶಿಷ್ಟ ಮತ್ತು ಆಕರ್ಷಕ ವ್ಯಕ್ತಿ ಎಂಬುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಅವರೆಷ್ಟು ವಿದ್ಯಾಭ್ಯಾಸ ಮಾಡಿದ್ದಾರೆಂದು ನಮಗೆ ಗೊತ್ತಿರಲಿಲ್ಲ. ಆದರೆ ಕಾಲಕ್ಕೇ ಅವರು ಇಂಗ್ಲಿಷ್  ಭಾಷೆಯ ರೀಡರ್ಸ್ ಡೈಜೆಸ್ಟ್ ಚಂದಾದಾರರಾಗಿದ್ದರು. ಅಲ್ಲದೇ  ಅವರು ಬರೆದ ಸಣ್ಣ ಕಥೆಗಳು ಚಂದಮಾಮದಲ್ಲೂ ಪ್ರಕಟವಾಗುತ್ತಿದ್ದವು.

ಕಾಲದಲ್ಲಿ ಅನೇಕ ಶ್ರೀಮಂತರ ಮನೆಗಳಲ್ಲಿ ಗ್ರಾಮೋಫೋನ್ ಮತ್ತು ರೇಡಿಯೋ ಇರುತ್ತಿದ್ದವು. ಆದರೆ ನಾವು ಹೋದಾಗ ಕೆ ಟಿ ಅವರ ಮನೆಗೆ ದ್ವನಿ ಮುದ್ರಕವೆಂಬ (Tape Recorder) ಹೊಸತೊಂದು ಉಪಕರಣದ ಆಗಮನವಾಗಿತ್ತು. ಅದರಲ್ಲಿ ಪುಟ್ಟಣ್ಣನ ಟೀಚರ್ ಗಾಯತ್ರಿ ಎಂಬುವರು ಹಾಡಿದ ರಾ ಬೇಂದ್ರೆಯವರ "ಇಳಿದು ಬಾ ತಾಯಿ ಇಳಿದು ಬಾ " ಎಂಬ ಹಾಡಿನ ಮುದ್ರಣ ಮಾಡಲಾಗಿತ್ತು. ಗಾಯತ್ರಿಯವರು ತಮ್ಮ ಕೋಮಲ ಕಂಠದಲ್ಲಿ ತುಂಬಾ ಚೆನ್ನಾಗಿ ಹಾಡಿದ್ದರು. ಅದಲ್ಲದೇ ಗುಡ್ಡೇತೋಟ ಸುಬ್ಬರಾಯರು (ಕೊಪ್ಪ ತಾಲೂಕ ಬೋರ್ಡ್ ವೈಸ್ ಪ್ರೆಸಿಡೆಂಟ್) ಕೆರೆಮನೆಗೆ ಬಂದಾಗ ನಡೆಸಿದ ಸಂಭಾಷಣೆ ಕೂಡ ಮುದ್ರಿಸಲಾಗಿತ್ತು. ಅವರಿಗೆ ಗೊತ್ತಿಲ್ಲದೇ ಮುದ್ರಿಸಿದ ಸಂಭಾಷಣೆಯನ್ನು ಅವರ ಮುಂದೆಯೇ ಪ್ಲೇ ಮಾಡಿದಾಗ ಸುಬ್ಬರಾಯರು ಆಶ್ಚರ್ಯ ಚಕಿತರಾದಂತೆ.
ಶಿವಮೊಗ್ಗೆಗೆ ನನ್ನ ಮೊದಲ ಪಯಣ
-------- ಮುಂದುವರಿಯುವುದು------

No comments: