ಗೋಪಾಲ ಮೇಷ್ಟ್ರು (ಕೃಪಾನಂದ )
ನಮ್ಮ ಹಿಂದಿ ಮೇಷ್ಟ್ರು ಗೋಪಾಲ ಅವರು ಬಸವಾನಿಯ ಹತ್ತಿರವೇ ಇದ್ದ ಲಕ್ಕುಡಿಗೆಯ ಪುಟ್ಟಯ್ಯನವರ ಮಗ. ಅವರು ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಯವರ ಶಿಷ್ಯರಾಗಿದ್ದರು.. ಉತ್ತಮ ಕನ್ನಡ ಸಾಹಿತಿಯೂ ಆಗಿದ್ದ ಗೋಪಾಲ ಮೇಷ್ಟ್ರು ಕೃಪಾನಂದ ಎಂಬ ಕಾವ್ಯನಾಮ ಇಟ್ಟುಕೊಂಡಿದ್ದರು. ಹಲವು ಕಾದಂಬರಿಗಳನ್ನು ಆಗಲೇ ಬರೆದು ಪ್ರಕಟಿಸಿದ್ದ ಕೃಪಾನಂದ ಅವರ ಕಥೆಗಳು ಚಂದಮಾಮದಲ್ಲ್ಲೂ ಪ್ರಕಟವಾಗಿದ್ದವು. ಖಾದಿ ವಸ್ತ್ರಧಾರಿಯಾದ ಬ್ರಹ್ಮಚಾರಿ ಕೃಪಾನಂದ ಒಂದು ಅಡ್ಡ ಪಂಚೆಯುಟ್ಟು ಶಾಲೆಗೆ ಬರುತ್ತಿದ್ದರು. ವಿಚಿತ್ರವೆಂದರೆ ನಾನು ಅರೋಗ್ಯ ಮಂತ್ರಿಯಾಗಿದ್ದರೂ ಉಳಿದ ಶಾಲೆಗಳಲ್ಲಿದ್ದಂತೆ ಅರೋಗ್ಯ ಪಠ್ಯ ಪುಸ್ತಕ ಓದುವ ಭಾಗ್ಯ ನನಗಿರಲಿಲ್ಲ. ಕಾರಣವಿಷ್ಟೇ. ಕೇವಲ ಬಸವಾನಿ ಶಾಲೆಯಲ್ಲಿ ಮಾತ್ರಾ ಅರೋಗ್ಯ ಪಠ್ಯದ ಬದಲಾಗಿ ಹಿಂದಿ ಓದುವ ಅವಕಾಶ ಇತ್ತು. ಮತ್ತು ಅದು ಕಂಪಲ್ಸರಿ ಆಗಿತ್ತು. ಆಪ್ಷನ್ ಇರಲಿಲ್ಲ.
ಕೃಪಾನಂದರ ನಗೆ ನಾಟಕ
ಆ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ
ಆಡಲು ಕೃಪಾನಂದರು ಒಂದು ಸಣ್ಣ ನಗೆ ನಾಟಕವನ್ನು ರಚಿಸಿದರು. ಅದರಲ್ಲಿ ಕೇವಲ ಮೂರು ಪಾತ್ರಗಳಿದ್ದವು.
ನಾನು, ಶ್ರೀಧರಮೂರ್ತಿ ಮತ್ತು ೬ನೇ ತರಗತಿಯಲ್ಲಿ ಓದುತ್ತಿದ್ದ ಬಾಲಚಂದ್ರ ಎಂಬ ವಿದ್ಯಾರ್ಥಿ ಅದರಲ್ಲಿ
ಪಾತ್ರವಹಿಸಿದೆವು. ನನಗೆ ಅಭಿನಯ ಕಲೆ ಏನೂ ತಿಳಿದಿರಲಿಲ್ಲ. ಆದರೆ ನಾನು ಎಷ್ಟು ಧೀರ್ಘ ಸಂಭಾಷಣೆ ಇದ್ದರೂ
ಅದನ್ನು ಪಟಪಟನೆ ಹೇಳುವ ಸಾಮರ್ಥ್ಯ ಹೊಂದಿದ್ದೆ. ಆದರೆ ಶ್ರೀಧರಮೂರ್ತಿ ಮತ್ತು ಬಾಲಚಂದ್ರ ಅಭಿನಯದಲ್ಲಿ
ಪಳಗಿದ್ದರು. ನಾಟಕದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯಗಳು ಬಂದವು. ಕೃಪಾನಂದರ ಕೈ ಬರಹದಲ್ಲಿದ್ದ ನಾಟಕ
ನನ್ನ ವಶಕ್ಕೆ ಬಂತು. ನಾನು ಊರಿಗೆ ಹೋದಾಗ ಅದನ್ನು ಪುಟ್ಟಣ್ಣನ ಕೈಗೆ ಕೊಟ್ಟೆ. ಆಗ ಅವನು ಶೃಂಗೇರಿ
ಶಾಲೆಯಲ್ಲಿ ಓದುತ್ತಿದ್ದ. ಆ ಶಾಲೆಯ ವಿದ್ಯಾರ್ಥಿಗಳು ಆ ನಾಟಕವನ್ನು ಆಡಿ ಒಳ್ಳೆಯ ಪ್ರಸಿದ್ಧಿ ದೊರೆಯಿತಂತೆ.
ಕೃಪಾನಂದರ
ಯೋಗ ಸದನ
ನಾನು ಬಸವಾನಿ ಶಾಲೆ ಬಿಟ್ಟ ಮೇಲೆ ಕೃಪಾನಂದರನ್ನು
ಕೇವಲ ಒಂದು ಬಾರಿ ಶಿವಮೊಗ್ಗದಲ್ಲಿ ಭೇಟಿಯಾಗಿದ್ದೆ.
ಆಮೇಲೆ ಅವರನ್ನು ಭೇಟಿಯಾಗುವ ಅವಕಾಶ
ನನಗೆ
ದೊರೆಯಲಿಲ್ಲ. ಸುಮಾರು ೧೯೬೩ನೇ ಇಸವಿಯಯಲ್ಲಿ ಕೃಪಾನಂದರು ಬೆಂಗಳೂರು ಸೇರಿ ಶಂಕರಪುರಂ ನಲ್ಲಿ ಯೋಗ
ಸದನ ಎಂಬ ಸಂಸ್ಥೆಯನ್ನು ಆರಂಭಿಸಿದರು. ಅದರಲ್ಲಿ ಅನೇಕ
ಮಲೆನಾಡಿನ ವಿದ್ಯಾರ್ಥಿಗಳಿಗೆ (ಮುಖ್ಯವಾಗಿ ಬಸವಾನಿಯವರಿಗೆ) ಆಶ್ರಯ ನೀಡಿದರು. ನಮ್ಮ ಪುಟ್ಟಣ್ಣನೂ
ಕೆಲ ಕಾಲ ಯೋಗ ಸದನದ ಆಶ್ರಯದಲ್ಲಿದ್ದ. ಮೊದಲಿಗೆ ಶಂಕರಮಠದ
ಹತ್ತಿರವೇ ಒಂದು ಅಂಗಡಿ ನಡೆಸುತ್ತಿದ್ದ ಕೃಪಾನಂದ ಸ್ವಲ್ಪ ಕಾಲದ ಮೇಲೆ ಒಂದು ಪ್ರಿಂಟಿಂಗ್ ಪ್ರೆಸ್
ಸ್ಥಾಪಿಸಿ ನಡೆಸುತ್ತಿದ್ದರಂತೆ. ಮುಂದೆ ಕೃಪಾನಂದರು
ಹಿರಿಯ ಸ್ವಾತಂತ್ರ ಹೋರಾಟಗಾರ ಮತ್ತು ಲೋಕಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದ ಶ್ರೀಮಾನ್ ಕೃಷ್ಣ ಅಯ್ಯರ್
ಅವರ ಅನುಯಾಯಿ ಆಗಿ ಚುನಾವಣೆಯಲ್ಲಿ ಗೆದ್ದು ಎರಡು ಬಾರಿ ಬೆಂಗಳೂರು ನಗರದ ಕಾರ್ಪೊರೇಟರ್ ಕೂಡ ಆಗಿ
ಬಿಟ್ಟರಂತೆ. ಮಲೆನಾಡಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಬೆಂಗಳೂರು ಸೇರಿದ್ದ ಕೃಪಾನಂದರಿಗೆ
ಅದೇನು ಸಾಮಾನ್ಯ ಮಟ್ಟದ ಸಾಧನೆ ಆಗಿರಲಿಲ್ಲ.
ಮೆರಿಟ್
ಸ್ಕಾಲರ್ಷಿಪ್
ಒಂದು ದಿನ ನನಗೆ ಹೆಡ್ ಮಾಸ್ಟರ್ ರಾಮಪ್ಪನವರಿಂದ
ಆಫೀಸಿಗೆ ಬರುವಂತೆ ಕರೆ ಬಂತು. ನಾನು ಸ್ವಲ್ಪ ಭಯದಿಂದಲೇ ಆಫೀಸ್ ಒಳಗೆ ಕಾಲಿಟ್ಟೆ. ರಾಮಪ್ಪನವರು ನನಗೊಂದು
ಸಂತೋಷದ ಸುದ್ಧಿ ಇರುವುದೆಂದು ಹೇಳಿ ಮಾರನೇ ದಿನ ತಂದೆಯವರೊಡನೆ ಶಾಲೆಗೆ ಬರುವಂತೆ ಹೇಳಿದರು. ನನ್ನ
೬ನೇ ತರಗತಿಯ ಅಂಕಗಳನ್ನು ಗಮನಿಸಿ ಸರ್ಕಾರದಿಂದ ನನಗೆ ಮೂವತ್ತು ರೂಪಾಯಿ ವಿದ್ಯಾರ್ಥಿವೇತನ ಸ್ಯಾಂಕ್ಷನ್
ಮಾಡಲಾಗಿತ್ತು. ಆ ಕಾಲಕ್ಕೆ ಮೂವತ್ತು ರೂಪಾಯಿ ಏನು ಸಾಮಾನ್ಯ ಮೊತ್ತವಾಗಿರಲಿಲ್ಲ. ನಮ್ಮ ಗೋಪಾಲ ಮೇಷ್ಟರ ಒಂದು ತಿಂಗಳ ಸಂಬಳಕ್ಕೆ ಸಮಾನವಾಗಿತ್ತು.
ನಾನು ಭಾವನವರ ಮನೆಯಲ್ಲಿ ಇರುವುದಾಗಿ
ಹೇಳಿದಾಗ ರಾಮಪ್ಪನವರು
ಅವರನ್ನೇ ಪೋಷಕರನ್ನಾಗಿ ಕರೆತರುವಂತೆ ಹೇಳಿದರು. ಬಾವನವರಿಗೆ ಬರಲು ತೊಂದರೆ ಇದ್ದರಿಂದ ನಾನು ಹೊಕ್ಕಳಿಕೆ
ರಾಮಯ್ಯನವರನ್ನು ಅವರೇ ಭಾವನವರೆಂದು ಹೇಳಿ ಕರೆದುಕೊಂಡು ಹೋದೆ. ರಾಮಯ್ಯನವರು
ರಾಮಪ್ಪನವರು ತೋರಿಸಿದ ಜಾಗದಲ್ಲಿ ಸಹಿ ಮಾಡಿದ ನಂತರ ನನ್ನ ಕೈಗೆ ೩೦ ರೂಪಾಯಿ ಬಂತು. ಆ ಕಾಲದಲ್ಲಿ
ಶಾಲೆಯ ಮಕ್ಕಳಿಗೆ ಉಡುಪು ಮತ್ತು ಪಠ್ಯ ಪುಸ್ತಕಗಳನ್ನು ಬಿಟ್ಟು ಬೇರೇನೂ ಖರ್ಚು ಇರಲಿಲ್ಲ. ಚಪ್ಪಲಿ
ಹಾಕುವ ಕ್ರಮವೂ ಇರಲಿಲ್ಲ. ನನಗೆ ಅಣ್ಣ ಮೊದಲ ಬಾರಿ ಕೊಡಿಸಿದ್ದ ಶೂಸ್ ಕೂಡಾ ಮೂಲೆ ಸೇರಿತ್ತು. ಆಮೇಲೆ ನನಗೆ ೭ ಮತ್ತು ೮ನೇ
ತರಗತಿಯಲ್ಲೂ ೩೦ ರೂಪಾಯಿ ಸ್ಕಾಲರ್ಷಿಪ್
ಬಂದಿತ್ತು.
ಆದರೆ ಆ ಹಣವನ್ನು ಹೇಗೆ ವಿನಿಯೋಗ ಮಾಡಲಾಯಿತೆಂದು ಈಗ ನೆನಪಿಗೆ ಬರುತ್ತಿಲ್ಲ.
ಬಸವಾನಿ
ರಾಮ ಶರ್ಮ ಮತ್ತು ಸಾವಿತ್ರಮ್ಮ ದಂಪತಿಗಳು
ನಮ್ಮ ಶಾಲೆಯ ಆಟದ ಮೈದಾನದ ಕೆಳಭಾಗದಲ್ಲಿ
ಒಂದು ಅಡಿಕೆ ತೋಟದ ಅಂಚಿನಲ್ಲಿ ಬಸವಾನಿ ರಾಮ ಶರ್ಮ ಮತ್ತು ಸಾವಿತ್ರಮ್ಮ ದಂಪತಿಗಳ ಮನೆ ಇತ್ತು. ಖಾದಿ ವಸ್ತ್ರ ಮತ್ತು ಗಾಂಧಿ ಟೋಪಿಧಾರಿಯಾಗಿದ್ದ ಆಜಾನುಬಾಹು
ರಾಮ ಶರ್ಮ ಪ್ರಸಿದ್ಧ ಸ್ವಾತಂತ್ರ ಹೋರಾಟಗಾರರಾಗಿದ್ದರು.
೧೯೬೨ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಎಂ ಎಲ್ ಎ ಆಗಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಬಯಸಿದವರಲ್ಲಿ ಒಬ್ಬರಾಗಿದ್ದರು.
ಆದರೆ ಟಿಕೆಟ್ ಕಡಿದಾಳ್ ಮಂಜಪ್ಪನವರಿಗೆ ಎರಡನೇ ಬಾರಿ ಕೊಡಲಾಯಿತು. ಸಾವಿತ್ರಮ್ಮನವರು ಒಂದು ಟ್ರಸ್ಟ್
ಮಾಡಿ ಹೆಣ್ಣುಮಕ್ಕಳಿಗೆ ಸಹಾಯ ಮಾಡುತ್ತಾ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿದ್ದರು. ಬಡ ಹೆಣ್ಣು ಮಕ್ಕಳಿಗಾಗಿ
ಒಂದು ಹೆರಿಗೆ ಆಸ್ಪತ್ರೆಯನ್ನೂ ಸಾವಿತ್ರಮ್ಮನವರ ಕಸ್ತೂರ್ಬಾ ಟ್ರಸ್ಟಿನ ವತಿಯಿಂದ ಸ್ಥಾಪಿಸಲಾಗಿತ್ತು.
ಅಲ್ಲದೇ ಅವರು ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಪತ್ನಿ ಪದ್ಮಾ ರಾಮದಾಸ್ ಮತ್ತು ಜಾನಕಮ್ಮ ಅವರೊಡನೆ
ಕೂಡಿ ೧೯೫೮ನೇ ಇಸವಿಯಲ್ಲಿ ಬಸವಾನಿಯಲ್ಲಿ ಮಹಿಳಾ ಸಮಾಜ ಸ್ಥಾಪಿಸಿದ್ದರು. ಈ ಮಹಿಳಾ ಸಮಾಜದಲ್ಲಿ ಹೆಣ್ಣು
ಮಕ್ಕಳಿಗೆ ಹೊಲಿಗೆ , ಕಸೂತಿ ಮತ್ತು ಸಂಗೀತ ಇತ್ಯಾದಿಗಳಲ್ಲಿ ತರಪೇತಿ ನೀಡಲಗುತ್ತಿತ್ತು.
ಅಪೂರ್ವ
ಗ್ರಾಮೀಣ ಪ್ರತಿಭೆ ಬಸವಾನಿ ಜಾನಕಮ್ಮ
ಬಾಲಚಂದ್ರ ಎಂಬ ೬ನೇ ತರಗತಿಯ ವಿದ್ಯಾರ್ಥಿ
ನನ್ನೊಡನೆ ಕೃಪಾನಂದರ ನಾಟಕದಲ್ಲಿ ಪಾತ್ರ ಮಾಡಿದ ಬಗ್ಗೆ
ಮೇಲೆ ಬರೆದಿದ್ದೇನೆ. ಕೇವಲ ಹುಡುಗಿಯರು ಮಾತ್ರಾ ಹಾಡುತ್ತಿದ್ದ ಆ ಕಾಲದಲ್ಲಿ ನಮ್ಮ ಶಾಲೆಯಲ್ಲಿ ಬಾಲಚಂದ್ರ
ಮಾತ್ರಾ ಕುವೆಂಪು ಅವರು ಬರೆದ "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು" ಎಂದು ಸುಶ್ರಾವ್ಯವಾಗಿ ಹಾಡುತ್ತಿದ್ದ. ಇದಲ್ಲದೇ ಆಗ ಶಾಲೆಯಲ್ಲಿ ನಡೆಯುತ್ತಿದ್ದ ವಿಶೇಷ ಸಮಾರಂಭಗಳಲ್ಲಿ
ಮಹಿಳಾ ಸಮಾಜದ ಹೆಣ್ಣು ಮಕ್ಕಳಿಂದ ವಿವಿಧ ವಿನೋದಾವಳಿ ಎಂಬ ಕಾರ್ಯಕ್ರಮಗಳು ನಡೆಯುತ್ತಿದ್ದವು. ನನಗೆ
ನೆನಪಿಗೆ ಬರುವುದು ಮುಖ್ಯವಾಗಿ ಹುಡುಗಿಯರು ನೃತ್ಯ ಮಾಡುತ್ತಾ ಹಾಡುತ್ತಿದ್ದ:
“ಕರುನಾಡ
ಬಾನಿನಿಂದ
ಕನ್ನಡದ
ಹುಡುಗಿ
ಇಳಿದು
ಬಂದೆ
ಕೈಪಿಡಿವ
ಧೀರನೊಬ್ಬ ಬೇಕಾಗಿದೆ
ಅಚ್ಚ
ಕನ್ನಡ ಧೀರನಿದ್ರೆ
ಮೆಚ್ಚಿ
ಮದುವೆ ಆಗ್ತೀನಿ ನೋಡಿ
ಮುಚ್ಚು
ಮರೆ ಇಲ್ಲ ಕಣಣ್ಣಾ”
ಇನ್ನೊಂದು ಹಾಡು
"ಮಾತಾಡ್
ಮಾತಾಡ್ ಮಲ್ಲಿಗೇ
ಸಂಪಿಗೇ
ಸೇವಂತಿಗೇ
ಕಂಪಿನಲ್ಲಿ
ಕೇದಿಗೆ
ಮಾತಾಡ್
ಮಾತಾಡ್ ಮಲ್ಲಿಗೇ
ಒಬ್ಬಾನಿಗೆ
ಕೈ ಕೊಟ್ಟೆ
ಒಬ್ಬಾನಿಗೆ
ಕಾಲ್ಕೊಟ್ಟೆ
ಒಬ್ಬಾನಿಗೆ
ಸೀರೆಯ
ಸೆಳೆದು
ಕೊಟ್ಟೆ ಮಲ್ಲಿಗೆ
ಮಾತಾಡ್
ಮಾತಾಡ್ ಮಲ್ಲಿಗೇ
ಯಾವನಿಗೆ ಕೈ ಕೊಟ್ಟೆ?
ಯಾವನಿಗೆ ಕಾಲ್ಕೊಟ್ಟೆ?
ಯಾವನಿಗೆ ಸೀರೆಯ
ಸೆಳೆದು ಕೊಟ್ಟೆ ಮಲ್ಲಿಗೆ?
ಮಾತಾಡ್ ಮಾತಾಡ್ ಮಲ್ಲಿಗೇ
ಬಳೆಗಾರ್ಗೆ ಕೈ ಕೊಟ್ಟೆ
ಕಂಚುಗಾರ್ಗೆ
ಕಾಲ್ಕೊಟ್ಟೆ
ಮಡಿವಾಳ್ಗೆ ಸೀರೆಯ
ಸೆಳೆದು ಕೊಟ್ಟೆ ಮಲ್ಲಿಗೆ
ಮಾತಾಡ್ ಮಾತಾಡ್ ಮಲ್ಲಿಗೇ
ಒಬ್ಬನಾ
ಹಾಕಿದ್ದೆ
ಒಬ್ಬನಾ
ನೂಕಿದ್ದೆ
ಒಬ್ಬನಾ
ಜೊತೆಯಲ್ಲಿ
ಒಳಗಿದ್ದೆ
ಮಲ್ಲಿಗೆ
ಮಾತಾಡ್
ಮಾತಾಡ್ ಮಲ್ಲಿಗೇ
ಯಾವಾನ
ಹಾಕಿದ್ದೆ?
ಯಾವಾನ
ನೂಕಿದ್ದೆ?
ಯಾವಾನ
ಜೊತೆಯಲ್ಲಿ
ಒಳಗಿದ್ದೆ
ಮಲ್ಲಿಗೆ?
ಮಾತಾಡ್
ಮಾತಾಡ್ ಮಲ್ಲಿಗೇ
ಬಾಗೀಲ
ಹಾಕಿದ್ದೆ
ಅಗಣಿಯಾ
ನೂಕಿದ್ದೆ
ದೀಪಾದ
ಜೊತೆಯಲ್ಲಿ
ಒಳಗಿದ್ದೆ
ಮಲ್ಲಿಗೆ
ಮಾತಾಡ್
ಮಾತಾಡ್ ಮಲ್ಲಿಗೇ
ಸಂಪಿಗೇ
ಸೇವಂತಿಗೇ
ಕಂಪಿನಲ್ಲಿ
ಕೇದಿಗೆ
ಮಾತಾಡ್
ಮಾತಾಡ್ ಮಲ್ಲಿಗೇ
ಬಾಲಚಂದ್ರನ ಹಾಡುಗಾರಿಕೆಯ ಮತ್ತು ಮಹಿಳಾ ಸಮಾಜದ ಹುಡುಗಿಯರ ವಿಶೇಷ ಕಾರ್ಯಕ್ರಮಗಳ
ಹಿಂದಿದ್ದ ಶಕ್ತಿಯೇ ಬಾಲಚಂದ್ರನ ಅಮ್ಮ ಅಪೂರ್ವ ಗ್ರಾಮೀಣ
ಪ್ರತಿಭೆ ಬಸವಾನಿ ಜಾನಕಮ್ಮ.
-------- ಮುಂದುವರಿಯುವುದು------
No comments:
Post a Comment