ಅಪೂರ್ವ
ಗ್ರಾಮೀಣ ಪ್ರತಿಭೆ ಬಸವಾನಿ ಜಾನಕಮ್ಮ
ಆ ದಿನಗಳಲ್ಲಿ ಬಸವಾನಿಯಲ್ಲಿ ಗುಂಡ ಭಟ್ಟರೆಂಬುವರ ದೊಡ್ಡ ಮನೆಯಿದ್ದು ಅದರ ಮುಂಭಾಗದಲ್ಲಿ ಅವರದೇ ಆದ ಸಣ್ಣ ಜವಳಿ ಅಂಗಡಿಯೊಂದಿತ್ತು. ಅಂಗಡಿಯ ಪಕ್ಕದಲ್ಲಿದಲ್ಲಿ ಒಬ್ಬ ಟೈಲರ್ ಕೂಡಾ ಇದ್ದ. ಗುಂಡ ಭಟ್ಟರ ನಿಜವಾದ ಹೆಸರು ವೆಂಕಟಕೃಷ್ಣ ಭಟ್ ಅಂತೆ. ಅವರ ಮಗಳು ಸಾವಿತ್ರಿ ನಮ್ಮ ತರಗತಿಯಲ್ಲೇ ಓದುತ್ತಿದ್ದಳು. ಗುಂಡ ಭಟ್ಟರ
ಮೊದಲ ಹೆಂಡತಿ ತೀರಿಕೊಂಡು ಅವರು ಮರು ವಿವಾಹ ಆಗಿದ್ದರಂತೆ. ಅವರ ಮೊದಲ ಹೆಂಡತಿಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿ ಆಸ್ತಿ ಪಾಲು ಪಡೆದು ಬಸವಾನಿಯಲ್ಲೇ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಮೊದಲ ಮಗ ಅನಂತಮೂರ್ತಿ ಮತ್ತು ಎರಡನೇ ಮಗ ಸೀತಾರಾಮ್ ಭಟ್. ಅನಂತಮೂರ್ತಿಯವರ ಪತ್ನಿ ಜಾನಕಮ್ಮ.
ಜಾನಕಮ್ಮನವರ ತವರುಮನೆ ಕಾರ್ಕಳ ತಾಲೂಕಿನ
ಕುಕ್ಕುಂದೂರು ಗ್ರಾಮದಲ್ಲಿತ್ತು. ಅವರ ತಂದೆ ಲಕ್ಷ್ಮೀನಾರಾಯಣ ತಂತ್ರಿ ಮತ್ತು ತಾಯಿ ಜಲಜಾಕ್ಷಿ. ಘಟ್ಟದ ಕೆಳಗಿನಿಂದ ಮಲೆನಾಡಿನ ಪುಟ್ಟ
ಹಳ್ಳಿ ಬಸವಾನಿಗೆ ಆಗಮಿಸಿದ ಜಾನಕಮ್ಮ ತಮ್ಮ ಗಂಡನ ಪ್ರೋತ್ಸಾಹದಿಂದ ಬಹು ಬೇಗನೆ ತಮ್ಮನ್ನು ಮಲೆನಾಡಿನ
ಸಂಸ್ಕೃತಿಗೆ ಹೊಂದಿಸಿಕೊಂಡು ವಿವಿಧ ಚಟುವಟಿಕೆಗಳಲ್ಲಿ ತೊಡಗಿದರು. ಅವರು ಪ್ರಾಥಮಿಕ ಶಾಲೆಯ ಹೆಡ್
ಮಾಸ್ಟರ್ ಪತ್ನಿ ಪದ್ಮಾ ರಾಮದಾಸ್ ಮತ್ತು ರಾಮಶರ್ಮರ ಪತ್ನಿ ಸಾವಿತ್ರಮ್ಮನವರ ಜೊತೆಗೂಡಿ ೧೯೫೮ನೇ ಇಸವಿಯಲ್ಲಿ
ಬಸವಾನಿಯಲ್ಲಿ ಮಹಿಳಾ ಸಮಾಜ ಸ್ಥಾಪಿಸಿದರು. ಅದರ ವತಿಯಲ್ಲಿ ಹೆಣ್ಣು ಮಕ್ಕಳಿಗೆ ಸಂಗೀತ, ದೇವರ ನಾಮ,
ಹಾರ್ಮೋನಿಯಂ , ಕೈ ಹೊಲಿಗೆ, ಕಸೂತಿ, ಬಟ್ಟೆ ಹೊಲಿಯುವುದು, ಇತ್ಯಾದಿಗಳನ್ನು ಸ್ವತಃ ಜಾನಕಮ್ಮನವರೇ
ಕಲಿಸುತ್ತಿದ್ದರು.
ಜಾನಕಮ್ಮನವರು ಕಮ್ಮರಡಿಯ ಸುಬ್ಭಾ ಜೋಯಿಸರಿಂದ
ಪಾಠ ಹೇಳಿಸಿಕೊಂಡು ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸ್ ಮಾಡಿದರು. ನಂತರ ಕಮ್ಮರಡಿಯ ಸುಬ್ಭಾ ಜೋಯಿಸರಿಂದ
ಪಾಠ ಹೇಳಿಸಿಕೊಂಡು ಸಂಗೀತದಲ್ಲಿ ಸೀನಿಯರ್ ಪರೀಕ್ಷೆ ಪಾಸ್ ಮಾಡಿದರು. ಆಮೇಲೆ ಮೇಲ್ಪಾಲು, ಸಿಗದಾಳು,
ಕೊಪ್ಪ, ಮಂಗಳೂರು ,ಕಾರ್ಕಳ ಮತ್ತು ಉಡುಪಿಯಲ್ಲಿ ಸಂಗೀತ ಕಚೇರಿ ನಡೆಸಿದರು. ನಂತರ ಅವರಿಗೆ ಗಮಕ ಕಲೆಯಲ್ಲಿ
ಆಸಕ್ತಿ ಮೂಡಿತು. ಸೂರಳಿ ಕೃಷ್ಣದೇವರಾಯರಿಂದ ಪಾಠ ಹೇಳಿಸಿಕೊಂಡು ಕಾಜಾಣ ಪರೀಕ್ಷೆ ಪಾಸ್ ಮಾಡಿ, ನಂತರ
ಕಂಚೀ ತೋಟದ ನೀಲಕಂಠ ರಾಯರಿಂದ ಪಾಠ ಹೇಳಿಸಿಕೊಂಡು ಪಾರೀಣ ಪರೀಕ್ಷೆ ಕೂಡ ಪಾಸ್ ಮಾಡಿದರು. . ಆಮೇಲೆ
ಊರಿನ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಎಷ್ಟೋ ಹೆಣ್ಣು ಮಕ್ಕಳಿಗೆ ಗಮಕದಲ್ಲಿ ತರಬೇತಿ ನೀಡಿ ಪರೀಕ್ಷೆ
ಕಟ್ಟಿಸಿದರು. ಎಷ್ಟೋ ಮಕ್ಕಳಿಗೆ rank ಕೂಡಾ ಬಂತು.
ಹಾಗೆಯೆ ಮಕ್ಕಳಿಂದ ಅನೇಕ ಪೌರಾಣಿಕ ನಾಟಕಗಳನ್ನೂ ಆಡಿಸುತ್ತಿದ್ದರು. ಈ ನಡುವೆ ಹರಿಹರಪುರ ಗುರುಕುಲಕ್ಕೆ
ವಾರಕ್ಕೊಮ್ಮೆ ಹೋಗಿ ಅಲ್ಲಿನ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಜಾನಕಮ್ಮನವರಿಗೆ ಬೇರೆ
ಬೇರೆ ಊರುಗಳಲ್ಲಿ ಸನ್ಮಾನಗಳು ನಡೆದವು. ಬೆಂಗಳೂರು ದೂರದರ್ಶನ ತನ್ನ ಚಂದನ ವಾಹಿನಿಯಲ್ಲಿ ೨೦೦೪ನೇ
ಇಸವಿಯಲ್ಲಿ ಜಾನಕಮ್ಮನವರನ್ನು ಆಮಂತ್ರಿಸಿ ಸಂದರ್ಶನ
ಮಾಡಿತ್ತು.
ಅನಂತಮೂರ್ತಿಯವರ
ಅಪರೂಪ ವ್ಯಕ್ತಿತ್ವ
ಅನಂತಮೂರ್ತಿಯವರೇನು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ.
ಅವರು ತಮ್ಮ ಪ್ರತಿಭಾವಂತ ಪತ್ನಿಗೆ ಪೂರ್ಣ ಸಹಕಾರ ನೀಡಿದುದು ಮಾತ್ರವಲ್ಲ. ತಮ್ಮದೇ ಆದ
ವಲಯದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಆ ಕಾಲದ ಯಾವ ಶ್ರೀಮಂತರ ಮನೆಯಲ್ಲೂ ಇಲ್ಲದ ಸೌಕರ್ಯ ಒಂದನ್ನು ಅನಂತಮೂರ್ತಿಯವರು ಹೊಂದಿದ್ದರು. ಅದೇ ಅವರ ಬಳಿ ಇದ್ದ ಕಾರು. ಸೈಕಲ್ ಎಂಬ ದ್ವಿಚಕ್ರ ವಾಹನ ಕೂಡ ಕೇವಲ ಒಮ್ಮೊಮ್ಮೆ ರಸ್ತೆಯಲ್ಲಿ ಕಣ್ಣಿಗೆ ಬೀಳುತ್ತಿದ್ದ ಆ ಕಾಲದಲ್ಲಿ ಅನಂತಮೂರ್ತಿಯವರ ಕಾರಿನ ಒಡೆತನದ ಗೌರವ ಎಷ್ಟಿತ್ತೆಂದು ನೀವು ಊಹಿಸಬಹುದು. ಮಾತ್ರವಲ್ಲ ಬಸವಾನಿ ಮತ್ತು ಸಮೀಪದ ಯಾವುದೇ ಊರಿನಲ್ಲಿ ಎಮರ್ಜೆನ್ಸಿ ಸನ್ನಿವೇಶವಿದ್ದರೆ ಅನಂತಮೂರ್ತಿಯವರ ಕಾರಿನ ಪುಕ್ಕಟೆ ಸರ್ವಿಸ್ ಗ್ಯಾರಂಟಿಯಾಗಿ ದೊರಕುತ್ತಿತ್ತು. ತುಂಬಾ ಸ್ಟೈಲಾಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದ ಅನಂತಮೂರ್ತಿ ಅಷ್ಟೇ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು. ಅದರಲ್ಲೂ ಅವರ ಒಂದು ಸ್ಪೋರ್ಟ್ಸ್ ಜಾಕೆಟ್
ತುಂಬಾ ಪ್ರಸಿದ್ಧಿ ಪಡೆದಿತ್ತು.
ಬಸವಾನಿಯಲ್ಲಿ
ಆ ದಿನಗಳಲ್ಲಿ ಯುವಕರ ತಂಡವೊಂದು ತುಂಬಾ ಚೆನ್ನಾಗಿ ಬ್ಯಾಡ್ಮಿಂಟನ್ ಆಟ
ಆಡುತ್ತಿತ್ತು.
ಒಂದು ಬಾರಿ ಈ ತಂಡ ಮತ್ತು ಹಾರೋಗಳಿಗೆ ಎಂಬ ಊರಿನ ತಂಡದ ನಡುವೆ ಬ್ಯಾಡ್ಮಿಂಟನ್ ಮ್ಯಾಚ್ ನಡೆಯಿತು. ನಾನು ನನ್ನ ಜೀವನದಲ್ಲಿ ಮೊಟ್ಟ
ಮೊದಲ ಬಾರಿ ಇಂತಹ ಪಂದ್ಯವೊಂದನ್ನು ನೋಡುವ ಅವಕಾಶ ಪಡೆದೆ.
ಎರಡು ತಂಡಗಳೂ ಒಳ್ಳೆಯ ಪ್ರದರ್ಶನ ನೀಡಿದರೂ ಕೊನೆಗೆ ಬಸವಾನಿ ತಂಡವೇ ಜಯ ಗಳಿಸಿತ್ತು. ಆದರೆ ಆಟಕ್ಕಿಂತಲೂ ನನ್ನ ಗಮನ ಸೆಳೆದದ್ದು ಅನಂತಮೂರ್ತಿಯವರ ಅಂಪೈರಿಂಗ್. ತುಂಬಾ ಸ್ಟೈಲಾಗಿ ಡ್ರೆಸ್ ಮಾಡಿ ಅದರ ಮೇಲೆ ಇನ್ನೂ ಸ್ಟೈಲಾದ ಸ್ಪೋರ್ಟ್ಸ್ ಜಾಕೆಟ್ ಧರಿಸಿದ್ದ ಅನಂತಮೂರ್ತಿ ಸಿನಿಮಾ ಹೀರೋ ತರಹ ಕಾಣುತ್ತಿದ್ದರು. ಅಷ್ಟೇ ಸ್ಟೈಲಾಗಿತ್ತು ಅವರ ಅಂಪೈರಿಂಗ್ ಕೂಡ.
ವಿಷ್ಣುಮೂರ್ತಿ
ಜೊತೆ ನರ್ಜಿ ಊರಿನ ಪಯಣ
ನಾನು ಈ ಮೊದಲೇ ಬರೆದಂತೆ ವಿಷ್ಣುಮೂರ್ತಿನನ್ನ
ಭಾವನವರ ಅಕ್ಕನ ಮಗ. ನಾವಿಬ್ಬರೂ ತುಂಬಾ ಆತ್ಮೀಯತೆಯಿಂದ ಎರಡು ವರ್ಷ ಬಸವಾನಿ ಶಾಲೆಗೆ ಜೊತೆಯಾಗಿ ಹೋಗಿ
ವಿದ್ಯಾಭ್ಯಾಸ ಮಾಡಿದೆವು. ಒಮ್ಮೆ ಯಾವುದೋ ರಜೆಯಲ್ಲಿ ವಿಷ್ಣು ನನ್ನನ್ನು ಒತ್ತಾಯದಿಂದ
ಅವನ ಊರಾದ ನರ್ಜಿಗೆ ಕರೆದುಕೊಂಡು ಹೋದ. ನರ್ಜಿ ತೀರ್ಥಹಳ್ಳಿ ತಾಲೂಕಿನಲ್ಲಿದ್ದ
ಒಂದು ಸುಂದರ ಹಳ್ಳಿ. ನಾವು ಸುಮಾರು ೧೦-೧೨ ಕಿಲೋಮೀಟರ್ ನಡೆದು ಸಂಜೆಯ ವೇಳೆಗೆ ನರ್ಜಿ ತಲುಪಿದೆವು.
ರಸ್ತೆಯನ್ನು
ದಾಟಿ ಒಂದು ಸುಂದರ ಹಸಿರು ಬೆಟ್ಟವನ್ನೇರಿ ಅದರ ಆಚೆ ಬಳಿ ಇಳಿಜಾರಿನ ಕೆಳಗೆ ಅಡಿಕೆ ತೋಟಗಳ ಅಂಚಿನಲ್ಲಿ
ನರ್ಜಿ ಕಣ್ಣಿಗೆ ಬಿತ್ತು. ವಿಷ್ಣುವಿನ ಅಮ್ಮ ಮತ್ತು ಅಣ್ಣ, ತಮ್ಮಂದಿರು ಮತ್ತು ತಂಗಿಯರಿಂದ ನನಗೆ ಪ್ರೀತಿಯ ಸ್ವಾಗತ ಸಿಕ್ಕಿತು. ಆದರೆ ಅವನ
ತಂದೆ ತಿಮ್ಮಪ್ಪಯ್ಯನವರು ಮನೆಯಲ್ಲೇ ಇರುವುದಾಗಿ ತಿಳಿದು ಬಂದರೂ ನನ್ನ ಕಣ್ಣಿಗೆ ಬೀಳಲಿಲ್ಲ. ಅವರು
ಮನೆಯ ಒಳಗಿದ್ದ ಒಂದು ಕತ್ತಲೆ ಕೋಣೆಯಲ್ಲಿ ಮಲಗಿದ್ದರೆಂದು ತಿಳಿಯಿತು.
ತಿಮ್ಮಪ್ಪಯ್ಯನವರ
ನರಸಿಂಹಾವತಾರ
ತಿಮ್ಮಪ್ಪಯ್ಯನವರನ್ನು ನಾನು ಅವರು
ಹೊಕ್ಕಳಿಕೆಗೆ ಬಂದಾಗ ಎಷ್ಟೋ ಬಾರಿ ನೋಡಿದ್ದೆ. ಅವರಿಗೆ
ಇಸ್ಪೀಟು ಆಟದ ಚಟ ಇದ್ದುದರಿಂದ ತುಂಬಾ ಸಾಲ ಮಾಡಿದ್ದರಂತೆ. ಅದರಲ್ಲಿ ನಮ್ಮ ಭಾವನವರಿಂದ ತೆಗೆದ ಸಾಲವೂ
ಸೇರಿತ್ತು. ಆದರೆ ಭಾವನವರು ಎಷ್ಟೇ ಕೇಳಿದರೂ ಹಿಂತಿರುಗಿಸುವ ಸೂಚನೆಗಳಿರಲಿಲ್ಲ. ಮಧ್ಯ ವಯಸ್ಸಿನ ತಿಮ್ಮಪ್ಪಯ್ಯನವರಿಗೆ
ತಕ್ಕ ಮಟ್ಟಿನ ತೋಟ ಗದ್ದೆಗಳು ಇದ್ದು ಜೀವನಕ್ಕೇನು ಕೊರತೆಯಾಗುವಂತಿರಲಿಲ್ಲ. ನಾನು ವಿಷ್ಣುವಿನ ಮನೆಗೆ
ಹೋದ ಮಾರನೇ ದಿವಸ ಮಧ್ಯಾಹ್ನ ನಾವೆಲ್ಲಾ ಪಟ್ಟಾಗಿ ಪಾಯಸದೂಟ ಮುಗಿಸಿ ಜಗಲಿಯಲ್ಲಿ ಜೋರಾಗಿ ಪಟ್ಟಾಂಗ
ಹೊಡೆಯುತ್ತಿದ್ದೆವು. ಆದರೆ ತಿಮ್ಮಪ್ಪಯ್ಯನ ಸುಳಿವೇ ಇರಲಿಲ್ಲ. ಆದರೆ ನಾನು ಅವರನ್ನು ನೋಡಲು ಬಹಳ
ಹೊತ್ತು ಕಾಯಬೇಕಾಗಲಿಲ್ಲ.
ಇದ್ದಕ್ಕಿದ್ದಂತೆ ಮಾಳಿಗೆಯ ಬಾಗಿಲು
ತೆರೆದು ಅರೆ ಬಟ್ಟೆ ಧರಿಸಿದ ತಿಮ್ಮಪ್ಪಯ್ಯನವರು ಆರ್ಭಟಿಸುತ್ತಾ ಜಗಲಿಗೆ ಹಾರಿ ಬಂದರು. ನಾನು
ಮತ್ತು ವಿಷ್ಣು ಗಾಭರಿಯಿಂದ ನೋಡುತ್ತಿದ್ದಂತೆಯೇ ತಿಮ್ಮಪ್ಪಯ್ಯನವರು ವಿಷ್ಣುವಿನ ತಮ್ಮಂದಿರು ಮತ್ತು
ತಂಗಿಯರಿಗೆ ಅವರ ಜುಟ್ಟು ಜಡೆಗಳನ್ನು ಹಿಡಿದು ಎಳೆಯುತ್ತಾ ಪಟಪಟನೆ ಏಟುಗಳನ್ನು ಹಾಕತೊಡಗಿದರು.
ಮನೆಯ
ಜಗಲಿ ಒಂದು ರಣರಂಗವಾಗಿ ಹೋಯಿತು. ಮಕ್ಕಳೆಲ್ಲಾ ಜಗಲಿಯಿಂದ ಹಾರಿ ತೋಟದತ್ತ ಓಡಿದರು. ಕೇವಲ ವಿಷ್ಣು,
ಅವನ ಅಣ್ಣ ಮತ್ತು ನಾನು ಮಾತ್ರಾ ಪೆಟ್ಟು ತಿನ್ನದೇ ತಿಮ್ಮಪ್ಪಯ್ಯನವರ ನರಸಿಂಹಾವತಾರದ ಪ್ರೇಕ್ಷಕರಾಗಿ
ಉಳಿದೆವು. ಧಾಳಿಯ ನಂತರ ನರಸಿಂಹಾವತಾರ ಪುನಃ ಮಾಳಿಗೆಯೊಳಗೆ ಸೇರಿ ಕಣ್ಮರೆಯಾಯಿತು.
ವಿಷ್ಣುವಿಗೆ ಈ ಪ್ರಸಂಗ ಎಷ್ಟು ಮುಜುಗರ
ತಂದಿರಬೇಕೆಂದು ಓದುಗರು ಗ್ರಹಿಸಬಹುದು. ನಮ್ಮ ಭಾವನವರ ಇನ್ನೊಬ್ಬ ಅಕ್ಕನನ್ನೂ ನರ್ಜಿಯಲ್ಲೇ ಇದ್ದ
ಬೆಳ್ಳಯ್ಯ ಎಂಬ ಶ್ರೀಮಂತರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಅಪಾರ ಆಸ್ತಿವಂತರಾದ ಬೆಳ್ಳಯ್ಯನವರ ಮನೆಗೆ ವಿಷ್ಣು ನನ್ನನ್ನು ಕರೆದುಕೊಂಡು ಹೋದ. ಇದಲ್ಲದೇ ನರ್ಜಿ ಊರಿನಲ್ಲೇ ನಮ್ಮ ತಂದೆಯವರ ಅಕ್ಕನ ಎರಡು
ಹೆಣ್ಣು ಮಕ್ಕಳ ಕುಟುಂಬಗಳಿದ್ದವು. ಆದರೆ ವಿಷ್ಣುವಿನ ಮನೆಯವರಿಗೂ ಮತ್ತು ಆ ಕುಟುಂಬಗಳಿಗೂ ಯಾವುದೋ
ವಿರಸವಿದ್ದರಿಂದ ನಾನು ಅವರ ಮನೆಗಳಿಗೆ ಹೋಗಲಾಗಲಿಲ್ಲ. ಭಾನುವಾರ ಸಂಜೆಯ ವೇಳೆಗೆ ನಾವು ಹೊಕ್ಕಳಿಕೆಗೆ
ಹಿಂದಿರುಗಿದೆವು. ಆಮೇಲೆ ನನಗೆಂದೂ ನರ್ಜಿ ಊರಿಗೆ ಹೋಗುವ ಅವಕಾಶ ಬರಲಿಲ್ಲ.
-------- ಮುಂದುವರಿಯುವುದು------
No comments:
Post a Comment