Tuesday, April 28, 2020

ಬಾಲ್ಯ ಕಾಲದ ನೆನಪುಗಳು – ೮೨


ಸೋಮವಾರ ನಾನು ಕಾಲೇಜಿನ ಮೊದಲ ದಿನದ ತರಗತಿಗೆ ಹಾಜರಾದೆ. ಅಲ್ಲಿ ಹಾಜರಾದ ಇತರ ವಿದ್ಯಾರ್ಥಿಗಳಿಗೆ ನಾನೊಬ್ಬ ತೀರಾ ಅಪರಿಚಿತನಾಗಿದ್ದೆ. ಹೆಚ್ಚಿನವರು ಶೃಂಗೇರಿ ಹೈಸ್ಕೂಲಿನಿಂದ ಆ ವರ್ಷವೇ ಪಾಸಾಗಿ ಬಂದವರಾಗಿದ್ದರಿಂದ ಅವರೆಲ್ಲಾ ಒಬ್ಬರಿಗೊಬ್ಬರು ಪರಿಚಿತರೇ ಆಗಿದ್ದರು. ಕೆಲವರು ಓದುವುದನ್ನು ಬಿಟ್ಟು ಹಲವು ವರ್ಷಗಳ ನಂತರ ಕಾಲೇಜಿಗೆ ಬಂದವರಾದರೆ ಅವರಲ್ಲಿ ಕೆಲವರು ಏನೇನು ಇಷ್ಟವಿಲ್ಲದಿದ್ದರೂ ಸಮಿತಿಯವರ ಒತ್ತಾಯದಿಂದ ನಿರ್ವಾಹವಿಲ್ಲದೆ ಕಾಲೇಜು ಸೇರಿದ್ದರು. ಇನ್ನು  ಕೆಲವರು ಲೆಕ್ಚರರ್ ಗಳಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಆದರೆ ಎಲ್ಲರಲ್ಲೂ ಒಂದು ಸಮಾನತೆ ಇತ್ತು. ಅದೇನೆಂದರೆ ಯಾರೂ ಪ್ಯಾಂಟ್ ಅಥವಾ ಪೈಜಾಮ ಧರಿಸಿರಲಿಲ್ಲ. ಎಲ್ಲರೂ ಮುಂಡು  ಪಂಚೆ ಉಟ್ಟವರೇ ಆಗಿದ್ದರು.

ನಮ್ಮ ಪ್ರಿನ್ಸಿಪಾಲ್ ಡಾಕ್ಟರ್ ರಾಮಕೃಷ್ಣರಾವ್ ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದರು. ತುಂಬಾ ಗೌರವಾನ್ವಿತ ವ್ಯಕ್ತಿತ್ವ ಹೊಂದಿದ್ದ ಅವರು ಅಷ್ಟೇ ದಕ್ಷ ಆಡಳಿತಗಾರರೂ ಆಗಿದ್ದರು. ಅವರ ಉಡುಪು ಮತ್ತು ವ್ಯಕ್ತಿತ್ವ ನೋಡಿದೊಡನೆ ಅವರೊಬ್ಬ ದೊಡ್ಡ ತತ್ವ ಶಾಸ್ತ್ರಜ್ಞರಿರಬೇಕೆಂದು ಅನಿಸಿ ಬಿಡುತ್ತಿತ್ತು. ಈ ಮೊದಲು ಅವರು ದಕ್ಷಿಣ ಕನ್ನಡದ ಮುಲ್ಕಿಯ ವಿಜಯ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ಅಕ್ಯಾಡೆಮಿಯವರು ತುಂಬಾ ದೂರದೃಷ್ಟಿಯಿಂದಲೇ ಅವರನ್ನು ಪವಿತ್ರ ಯಾತ್ರಾಸ್ಥಳವಾದ ಶೃಂಗೇರಿಯ ಪ್ರತಿಷ್ಠಿತ ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ನೇಮಕ ಮಾಡಿದ್ದರು.

ನಮಗೆ ಮೊಟ್ಟ ಮೊದಲ ಕ್ಲಾಸ್ ತೆಗೆದುಕೊಂಡವರು ಪ್ರಧಾನ್ ಗುರುದತ್ತ ಅವರು. ಕನ್ನಡ ಮತ್ತು ಹಿಂದಿ ಎಂ. ಏ. ಮಾಡಿದ್ದ ಗುರುದತ್ತ ಈ ಹಿಂದೆ ಮೈಸೂರಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿದ್ದರು. ಫುಲ್ ಸೂಟ್ ಧರಿಸಿ ಟೈ ಕಟ್ಟಿ ಕಾಲೇಜಿಗೆ ಬರುತ್ತಿದ್ದ ಗುರುದತ್ತ ತುಂಬಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಮಾತಿನ ಜಾಣ್ಮೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಅವರ ಉದ್ದೇಶವೆಂದು ಬೇಗ ಗೊತ್ತಾಗಿ ಬಿಡುತ್ತಿತ್ತು. ಅವರು ಆ ಉದ್ದೇಶದಲ್ಲಿ ಸಂಪೂರ್ಣ ಸಫಲರೂ ಆದರು ಎಂದು ಹೇಳಲೇ ಬೇಕು.

ಒಟ್ಟಿನಲ್ಲಿ ಸುಮಾರು ೧೦ ಮಂದಿ ಉಪನ್ಯಾಸಕರಿದ್ದು ಅವರಲ್ಲಿ ಅರ್ಧದಷ್ಟು ಮಂದಿ ದಕ್ಷಿಣ ಕನ್ನಡದವರಾದರೆ ಇನ್ನರ್ಧ ಮಂದಿ ಮೈಸೂರಿನವರಾಗಿದ್ದರು. ಮೈಸೂರಿನವರೆಲ್ಲಾ ಫುಲ್ ಸೂಟ್ ಧರಿಸುತ್ತಿದ್ದರೆ ದಕ್ಷಿಣ ಕನ್ನಡದ ಪ್ರಾಣಿಶಾಸ್ತ್ರ ಉಪನ್ಯಾಸಕ ರೈ ಅವರು ಮಾತ್ರ ಸೂಟ್ ಧರಿಸುತ್ತಿದ್ದರು. ನಮ್ಮ ಮೇಲೆ ತಮ್ಮ ವ್ಯಕ್ತಿತ್ವದಿಂದ ತುಂಬಾ ಪ್ರಭಾವ ಬೀರಿದವರೆಂದರೆ ಚಿತ್ರದುರ್ಗದ ರಘುನಾಥನ್.  ಮೈಸೂರಿನಲ್ಲಿ ಕೆಮಿಸ್ಟ್ರಿ ಎಂ. ಎಸ್ ಸಿ. ಮಾಡಿದ್ದ  ರಘುನಾಥನ್ ಫುಲ್ ಸೂಟ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ನಮ್ಮ ಕಾಲೇಜಿಗೆ ಆಗ ಇನ್ನೂ ಫಿಸಿಕ್ಸ್ ಸಬ್ಜೆಕ್ಟಿಗೆ ಉಪನ್ಯಾಸಕರ ನೇಮಕವಾಗಿರಲಿಲ್ಲ. ಆದ್ದರಿಂದ ರಘುನಾಥನ್ ಅವರು ಸ್ವಲ್ಪ ದಿನ  ಫಿಸಿಕ್ಸ್ ಕ್ಲಾಸನ್ನೂ ತೆಗೆದುಕೊಳ್ಳುತ್ತಿದ್ದರು. ಸಂಸ್ಕೃತ ಉಪನ್ಯಾಸಕ ವೆಂಕಣ್ಣಯ್ಯನವರು ಪ್ರಸಿದ್ಧ ಸಾಹಿತಿ ಮತ್ತು ಕನ್ನಡ ಪ್ರೊಫೆಸರ್  ತ. ಸು. ಶಾಮರಾಯರ ಮಗ.  ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕ ಎನ್. ರಾಮಚಂದ್ರ ಭಟ್ ಅವರು ಕಾಸರಗೋಡಿನವರು. ಅರ್ಥಶಾಸ್ತ್ರ ಉಪನ್ಯಾಸಕರಾದ ಶಿವಾನಂದ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ . ಪದವಿ ಪಡೆದಿದ್ದರು. ಹಿಂದಿ ಉಪನ್ಯಾಸಕ ಎ. ಕೆ . ಭಟ್ ಹಿಂದಿಯಲ್ಲಿ ಎಂ. ಎ. ಪದವಿ ಪಡೆದಿದ್ದರು.

ಇಂಗ್ಲಿಷ್ ಉಪನ್ಯಾಸಕ ಬಿ.ಎನ್.ಶ್ರೀರಾಮ್ 
ನಮಗೆಲ್ಲಾ ಬೇರೆ ಬೇರೆ ಉಪನ್ಯಾಸಕರ ಪರಿಚಯ ಸುಗಮವಾಗಿಯೇ ಅಯಿತಾದರೂ ಇಂಗ್ಲಿಷ್ ಉಪನ್ಯಾಸಕ ಬಿ.ಎನ್.ಶ್ರೀರಾಮ್  ಅವರ ಮೊದಲ ತರಗತಿ ಒಂದು ದುರಂತವೇ ಆಯಿತು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿ ಪಡೆದಿದ್ದ ಶ್ರೀರಾಮ್ ಕನ್ನಡ ಸಾಹಿತ್ಯದಲ್ಲೂ ಅಷ್ಟೇ ತಿಳುವಳಿಕೆಯುಳ್ಳವರಾಗಿದ್ದರು. ಆ ದಿನಗಳಲ್ಲಿ ಇಂಗ್ಲಿಷ್ ಎಂ. ಎ. ಪಾಸ್ ಮಾಡಿದವರ ಕೊರತೆ ತುಂಬಾ ಇತ್ತು. ಅದು ಶ್ರೀರಾಮ್ ಅವರಿಗೂ ಗೊತ್ತಿತ್ತು. ಅವರು ರಾಷ್ಟ್ರಕವಿ ಕುವೆಂಪು ಅವರ ಮಗನಾದ ಪೂರ್ಣಚಂದ್ರ ತೇಜಸ್ವಿಯ ಪರಮ ಮಿತ್ರರಾಗಿದ್ದರು. ಅವರಿಗೆ ಶೃಂಗೇರಿ ಜನರ ಸಂಪ್ರದಾಯಸ್ಥ ನಡೆವಳಿಕೆ ಹಾಗೂ ಶ್ರೀ ಶಂಕರ ಮಠ ಮತ್ತು ಅದರ ಧಾರ್ಮಿಕ ಆಚಾರಗಳಲ್ಲಿ ಯಾವುದೇ ನಂಬಿಕೆ ಅಥವಾ ಶೃದ್ಧೆ ಇರಲಿಲ್ಲ.

ತಮ್ಮ ಮುಂದೆ ಕುಳಿತಿದ್ದ ಧೋತಿ ಧರಿಸಿದ ವಿದ್ಯಾರ್ಥಿಗಳನ್ನು ನೋಡಿ ಶ್ರೀರಾಮ್ ಅವರಿಗೆ ತಾವು ತೆಗೆದುಕೊಳ್ಳಬೇಕಾದ ಮೊದಲ ತರಗತಿಯ ಉತ್ಸಾಹ ಒಮ್ಮೆಲೇ ಇಳಿದು ಹೋಯಿತೆಂದು ನಮಗನ್ನಿಸಿತು. ಅವರು ಹೇಳಿದಂತೆ ವಿದ್ಯಾರ್ಥಿಗಳು ಒಬ್ಬರ ನಂತರ ಒಬ್ಬರು ತಮ್ಮ ಪರಿಚಯವನ್ನು ಇಂಗ್ಲೀಷಿನಲ್ಲಿ ಮಾಡಿಕೊಳ್ಳುತ್ತಿದ್ದಂತೇ ಅವರ ಕೋಪ ಹೆಚ್ಚಾಗುತ್ತಾ ಹೋಯಿತು. ಹೆಚ್ಚಿನ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯ ಜ್ಞಾನ  ಕೆಳಮಟ್ಟದ್ದಾಗಿದೆಯೆಂದು ತಿಳಿದು ಅವರಿಗೆ ನಿರಾಶೆಯಾಯಿತು. ಅವರೆಲ್ಲಾ ಎಸ್. ಎಸ್.ಎಲ್.ಸಿ.ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು ಅದಕ್ಕೆ ಸ್ವಲ್ಪ ಕಾರಣವಿದ್ದಿರಬಹುದು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯವಿದ್ದ ಶ್ರೀರಾಮ್ ಅವರಿಗೆ ತಮ್ಮ ವಿದ್ಯಾರ್ಥಿಗಳು ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕೆಂಬ ಗುರಿ ಇತ್ತು. ಆದರೆ ಆ ಗುರಿ ಅವರ ಕೈಗೆ  ಎಟುಕುವಂತೆ ಅವರಿಗೆ ಅನಿಸಲಿಲ್ಲ.

ಶ್ರೀರಾಮ್ ಅವರು ನಮಗೆಲ್ಲಾ ಜವಾಹರ್ಲಾಲ್ ನೆಹರು ಅವರ ಬಗ್ಗೆ ಇಂಗ್ಲೀಷಿನಲ್ಲಿ ಒಂದು ಸಣ್ಣ ಪ್ರಬಂಧ ಬರೆಯುವಂತೆ ಹೇಳಿದರು. ನಾವು ಬರೆದ ಪ್ರಬಂಧಗಳನ್ನು ನೋಡಿದಾಗ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಂಗ್ಲೀಷಿನಲ್ಲಿ ಸರಳ ವಾಕ್ಯಗಳನ್ನೂ ಬರೆಯಲು ಬರುತ್ತಿರುವುದಿಲ್ಲವೆಂದೂ ಮತ್ತು ದೇಶದ ಪ್ರಧಾನಿಯಾಗಿದ್ದ ನೆಹರು ಅವರ ಬಗ್ಗೆ ಕೂಡ ಹೆಚ್ಚು ತಿಳುವಳಿಕೆ ಇಲ್ಲವೆಂದು ಗೊತ್ತಾಯಿತು. ಕೇವಲ ಕೆಲವು ವಿದ್ಯಾರ್ಥಿಗಳು (ನನ್ನನ್ನೂ ಸೇರಿ) ಬರೆದ ಪ್ರಬಂಧಗಳು ಮಾತ್ರ ಶ್ರೀರಾಮ್ ಅವರಿಗೆ ಇಷ್ಟವಾದವು. ನಾನು ಬಳಸಿದ ಸೆಕ್ಯುಲರ್ ಎಂಬ ಪದ ನೋಡಿ ಅವರಿಗೆ ತುಂಬಾ ಆಶ್ಚರ್ಯವಾಯಿತು. ಆ ಪದದ ಅರ್ಥ ಕನ್ನಡದಲ್ಲಿ ಏನೆಂದು ಕೇಳಿದಾಗ ನಾನು ಜಾತ್ಯಾತೀತ  ಎಂದು ಹೇಳಿಬಿಟ್ಟೆ. ಅವರ ಮುಖ ಒಮ್ಮೆಲೇ ಅರಳಿ ನನಗೆ ಭೇಷ್ ಎಂದು ಹೇಳಿಬಿಟ್ಟರು. ನನ್ನ ಇಂಗ್ಲಿಷ್ ಬರವಣಿಗೆಗೆ ಸಿಕ್ಕಿದ ಮೊದಲ ಮೆಚ್ಚುಗೆ ಶ್ರೀರಾಮ್ ಅವರಿಂದಾಗಿತ್ತು.

ನಮ್ಮ ಕಾಲೇಜಿನಲ್ಲಿ ಸಾಕಷ್ಟು ಸಂಖ್ಯೆಯ ಹುಡುಗಿಯರೂ ಇದ್ದರು. ಆದರೆ ಹೆಚ್ಚಿನವರು ಐಚ್ಛಿಕ ವಿಷಯವಾಗಿ ಆರ್ಟ್ಸ್ ತೆಗೆದುಕೊಂಡಿದ್ದರಿಂದ ಕೇವಲ ಇಂಗ್ಲಿಷ್ ಮತ್ತು ಕನ್ನಡ ಅಥವಾ ಸಂಸೃತ ತರಗತಿಗಳಿಗೆ ನಮ್ಮೊಡನೆ ಹಾಜರಾಗುತ್ತಿದ್ದರು. ಕೇವಲ ಇಬ್ಬರು ಹುಡುಗಿಯರು ಸೈನ್ಸ್ ಸಬ್ಜೆಕ್ಟ್ (ಅದರಲ್ಲಿ ಬಯಾಲಜಿ) ತೆಗೆದುಕೊಂಡಿದ್ದರು. ಉದ್ದೇಶ ಎಂ. ಬಿ. ಬಿ. ಎಸ್ ಮಾಡಿ ಡಾಕ್ಟರಾಗುವುದು. ಅವರಲ್ಲಿ ಇಂದಿರಾದೇವಿ ಎನ್ನುವಳು ಚಂದ್ರಮೌಳಿರಾಯರ ಮೊಮ್ಮಗಳು. ನಿರ್ಮಲ ಎಂಬ ಹುಡುಗಿ ಪಿ ಯು ಸಿ ತರಗತಿಗೆ ಎರಡನೇ ಬಾರಿ ಸೇರಿದ್ದಳು. ಏಕೆಂದರೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಬಂದ  ಅಂಕಗಳು ಎಂ. ಬಿ. ಬಿ.ಎಸ್ ಸೀಟ್ ಸಿಗುವಷ್ಟಿರಲಿಲ್ಲ. ತುಂಬಾ ಬುದ್ದಿವಂತೆಯಾಗಿದ್ದ ನಿರ್ಮಲ ಮುಂದೆ ಎಂ. ಬಿ. ಬಿ. ಎಸ್. ಪಾಸ್ ಮಾಡಿ ಶಿವಮೊಗ್ಗದಲ್ಲಿ ನಿರ್ಮಲ ಹಾಸ್ಪಿಟಲ್ ಯಶಸ್ವಿಯಾಗಿ  ಸ್ಥಾಪಿಸಿ ನಡೆಸುತ್ತಿದ್ದಾಳೆ. ನಾನೊಮ್ಮೆ ಅವಳನ್ನು ಭೇಟಿ ಮಾಡಿದ್ದೆ. ಆರ್ಟ್ಸ್ ತೆಗೆದುಕೊಂಡ ಹುಡುಗಿಯರಲ್ಲಿ ಲಲಿತಾಂಬ ಎಂಬ ಹುಡುಗಿ ತುಂಬಾ ಬುದ್ಧಿವಂತೆಯಾಗಿದ್ದಳು. ಅವಳು ಶಿವಯ್ಯ ಎಂಬ ವ್ಯಾಪಾರಸ್ಥರ ಮಗಳು. ಅವಳ ತಮ್ಮ ಫಾಲಚಂದ್ರ ಎಂಬ ಹುಡುಗನೂ ಕಾಲೇಜು ಸೇರಿದ್ದ. ಶೃಂಗೇರಿ ಹೈಸ್ಕೂಲಿನ ಹೆಡ್ ಮಾಸ್ಟರ್ ಅವರ ಹಿರಿಯ ಮಗಳು ಸುಭದ್ರಾ ಕೂಡ ಆರ್ಟ್ಸ್ ತೆಗೆದುಕೊಂಡಿದ್ದಳು.

ಬೇರೆ ವಿದ್ಯಾರ್ಥಿಗಳಲ್ಲಿ ವೀರಪ್ಪ ಗೌಡರ ಮಗ ರವೀಂದ್ರನಾಥ ಟ್ಯಾಗೋರ್ ಕೂಡ ಇದ್ದ. ಅವನು ಬಯಾಲಜಿ ವಿದ್ಯಾರ್ಥಿಯಾಗಿದ್ದ. ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಮ್ಯಾಥಮ್ಯಾಟಿಕ್ಸ್ (ಪಿ. ಸಿ. ಎಂ.)  ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ನನ್ನೊಡನೆ ಪ್ರಕಾಶ್ ಕಾಮತ್ ಎಂಬ ಅತ್ಯಂತ ಮೇಧಾವಿ ವಿದ್ಯಾರ್ಥಿ ಇದ್ದ. ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವರಲ್ಲಿ ಅವನು ನನಗೆ ತೀವ್ರ ಪೈಪೋಟಿ ನೀಡುವನಿದ್ದ. ಹೈಸ್ಕೂಲಿನಲ್ಲಿ ಅವನ ಸಹಪಾಠಿ ಮತ್ತು ಸ್ನೇಹಿತನಾಗಿದ್ದ ಇನ್ನೊಬ್ಬ ವಿದ್ಯಾರ್ಥಿ ನನಗೆ ಪ್ರಕಾಶನಿಗಿಂತ ಹೆಚ್ಚು ಅಂಕಗಳನ್ನು ತೆಗೆಯಲು ಸಾಧ್ಯವಿಲ್ಲವೆಂದು ಹೇಳಿ ಆ ಬಗ್ಗೆ ಸ್ಪರ್ಧೆಗೆ ಆಹ್ವಾನಿಸಿ ಬಿಟ್ಟ! ಪ್ರಕಾಶನೊಬ್ಬ ಪಕ್ಕಾ ಆರ್. ಎಸ್. ಎ ಸ್. ಸ್ವಯಂಸೇವಕನಾಗಿದ್ದ. ಮುಂದೆ ಸುರತ್ಕಲ್ ಕೆ. ಆರ್. ಈ. ಸಿ. ಸೇರಿ ಬಿ. ಇ. ಮುಗಿಸಿದ  ನಂತರ ಪ್ರಕಾಶ ತನ್ನ ಜೀವನವನ್ನು ಆರ್. ಎಸ್. ಎ ಸ್.  ಸಂಸ್ಥೆಗೆ ಮುಡಿಪಾಗಿ ಇಟ್ಟುಬಿಟ್ಟನಂತೆ.

ಮಣಿಪಾಲ್  ಅಕ್ಯಾಡೆಮಿ ಕಾಲೇಜುಗಳಲ್ಲಿ ಕಾಮರ್ಸ್ (ವಾಣಿಜ್ಯ)  ಕಡ್ಡಾಯವಾದ  ಐಚ್ಛಿಕ ವಿಭಾಗವಾಗಿ  ಇರುತ್ತಿತ್ತು. ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರಲ್ಲಿ ಒಬ್ಬರಾಗಿದ್ದ ಟಿ. ಎಂ. ಎ ಪೈ ಅವರು ವಾಣಿಜ್ಯ ವಿಭಾಗಕ್ಕೆ ತುಂಬಾ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಆಗ ಎಂ. ಕಾಂ. ಡಿಗ್ರಿ ಪಡೆದ ವ್ಯಕ್ತಿಗಳ ತುಂಬಾ ಕೊರತೆ ಇತ್ತು. ಹಾಗಾಗಿ ಕೇವಲ ಮೂರು ವಿಧ್ಯಾರ್ಥಿಗಳಿದ್ದ ಆ ವಿಭಾಗಕ್ಕೆ ಆಂಧ್ರ ಪ್ರದೇಶದ ಸತ್ಯನಾರಾಯಣ ಎಂಬುವರು ಉಪನ್ಯಾಸಕರಾಗಿ ಆಯ್ಕೆಯಾಗಿದ್ದರು.

ವೈಸ್ ಪ್ರಿನ್ಸಿಪಾಲ್  ಪದವಿಗೆ ಪೈಪೋಟಿ
ಸುಂದರ್ ಎನ್ನುವರು ಹಿಸ್ಟರಿ (ಇತಿಹಾಸ) ಸಬ್ಜೆಕ್ಟ್ ಉಪನ್ಯಾಸಕರಾಗಿದ್ದರು. ಗುರುದತ್ತರಂತೆಯೇ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಸುಂದರ್ ಫುಲ್ ಸೂಟ್ ಧರಿಸಿರುತ್ತಿದ್ದರು. ಅವರಿಗಾಗಲೇ ವಿವಾಹವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಮೆಚ್ಚುಗೆ ಇರಲಿಲ್ಲ. ಕಾರಣವಿಷ್ಟೇ. ನಗೆಮೊಗವನ್ನೇ ತೋರಿಸದ ಸುಂದರ್ ಉಳಿದ ಉಪನ್ಯಾಸಕರೊಡನೆ ಹಾಗೂ ವಿದ್ಯಾರ್ಥಿಗಳೊಡನೆ ಹೆಚ್ಚು ಬೆರೆಯುತ್ತಿರಲಿಲ್ಲ. ವೈಸ್ ಪ್ರಿನ್ಸಿಪಾಲ್  ಪದವಿಯ ಮೇಲೆ ಕಣ್ಣಿಟ್ಟಿದ್ದ ಸುಂದರ್ ಪ್ರಿನ್ಸಿಪಾಲ್ ರಾಮಕೃಷ್ಣರಾಯರ ಬಳಿಯೇ ಸುಳಿದಾಡುತ್ತಿದ್ದರು ಮತ್ತು ಅವರಿಗೆ  ತುಂಬಾ ಆತ್ಮೀಯರೆಂದು ಪ್ರದರ್ಶನ ಮಾಡುತ್ತಿದ್ದರು. ಆದರೆ ಅವರ ಆ ಗುರಿಗೆ ಇನ್ನೊಬ್ಬ ಉಪನ್ಯಾಸಕರ ತೀವ್ರ ಪೈಪೋಟಿ ಇತ್ತು. ಅವರೇ ಕನ್ನಡ ಉಪನ್ಯಾಸಕ ಪ್ರಧಾನ್ ಗುರುದತ್ತರು. ಇವರಿಬ್ಬರ ನಡುವೆ ಅದೊಂದು ತೀವ್ರ ಸ್ಪರ್ದೆಯೇ ಆಗಿತ್ತು. ಹಾಗೂ ನಮಗೆಲ್ಲಾ  ಒಂದು ತಮಾಷೆಯ ವಿಷಯವೇ ಆಗಿತ್ತು. 

ಆರ್ಟ್ಸ್ ವಿದ್ಯಾರ್ಥಿಗಳಿಗೆ ತರ್ಕಶಾಸ್ತ್ರವೊಂದು ಐಚ್ಛಿಕ ಸಬ್ಜೆಕ್ಟ್ ಆಗಿತ್ತು. ಅದನ್ನು ಸ್ವತಃ ಪ್ರಿನ್ಸಿಪಾಲ್ ರಾಮಕೃಷ್ಣರಾಯರೇ ತೆಗೆದುಕೊಳ್ಳುತ್ತಿದ್ದರು. ಅವರ ಉಪನ್ಯಾಸಗಳು ಎಷ್ಟು ಆಸಕ್ತಿದಾಯಕವಾಗಿರುತ್ತಿದ್ದವೆಂದರೆ ವಿಧ್ಯಾರ್ಥಿಗಳಲ್ಲದ ಕೆಲವರೂ ಕೂಡಾ ಅವರಿಂದ ಅನುಮತಿ ಪಡೆದು ತರಗತಿಗೆ ಹಾಜರಾಗುತ್ತಿದ್ದರು. ತುಂಬಾ ಪಾಂಡಿತ್ಯಪೂರ್ಣ ವಿದ್ವಾಂಸರಾಗಿದ್ದ ರಾಮಕೃಷ್ಣರಾಯರ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕೂಡ ತುಂಬಾ ಉಪಯುಕ್ತವಾಗಿದ್ದವು.

ವಿಶ್ವನಾಥ, ಮಂಜುನಾಥ ಮತ್ತು ಪದ್ಮನಾಭ
ಆ ದಿನ ಸಂಜೆ ನಾನು ಒಂದು ಕಾಲದಲ್ಲಿ ಪುರದಮನೆ ಪ್ರಾಥಮಿಕ ಶಾಲೆಯಲ್ಲಿ ಸ್ವಲ್ಪ ಕಾಲ ನನ್ನ ಸಹಪಾಠಿಯಾಗಿದ್ದ ಹೆಬ್ಬಿಗೆ ಊರಿನ ವಿಶ್ವನಾಥ ಎಂಬುವನನ್ನು ಭೇಟಿಯಾದೆ. ಬಯಾಲಜಿ ಸಬ್ಜೆಕ್ಟ್ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದ ವಿಶ್ವನಾಥ ನನಗೆ ದೂರದ ಸಂಬಂಧಿಯೂ ಆಗಿದ್ದ. ನನ್ನ ಕೊಠಡಿಯ ಸಮೀಪದಲ್ಲೇ ಇನ್ನೊಂದು ಕೊಠಡಿಯಲ್ಲಿ ವಿಶ್ವನಾಥ ತನ್ನ ಅಕ್ಕನ ಮಗನಾದ ಮರಡಿ ಊರಿನ ಮಂಜುನಾಥ ಮತ್ತು ಪದ್ಮನಾಭ ಎಂಬ ವಿದ್ಯಾರ್ಥಿಗಳೊಡನೆ ವಾಸಮಾಡುತ್ತಿದ್ದ. ಪದ್ಮನಾಭ ಮತ್ತು ಮಂಜುನಾಥ ಶೃಂಗೇರಿ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಪದ್ಮನಾಭ ಕೊಡಿಗೆತೋಟದ ಕೃಷ್ಣರಾಯರೆಂಬ ಶ್ರೀಮಂತ ಜಮೀನ್ದಾರರ ಮಗ. ಇವರು ಮೂವರೂ ನನ್ನಂತೆಯೇ ಹೊಳ್ಳರ ಮೆಸ್ಸಿನಲ್ಲಿ ಸ್ನಾನ ಮಾಡಿ ಊಟ ಮತ್ತು ತಿಂಡಿ ತೆಗೆದುಕೊಳ್ಳುತ್ತಿದ್ದರು. ನಾವು ನಾಲ್ಕು ಮಂದಿ ಒಂದು ಸ್ನೇಹಿತರ ಗುಂಪಾಗಿ ಬಿಟ್ಟೆವು. ನಾವು ನಿತ್ಯವೂ ಸಂಜೆಯ ವೇಳೆ ಒಟ್ಟಾಗಿ ತುಂಗಾ ನದಿಯಲ್ಲಿ ಕಾಲು ಕೈ ತೊಳೆದು ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದೆವು. ನನ್ನ ಬಿಡುವಿನ ವೇಳೆಯನ್ನು ನಾನು ಈ ಮೂವರ ರೂಮಿನಲ್ಲೇ ಹೆಚ್ಚಾಗಿ ಕಳೆಯತೊಡಗಿದೆ. ಆ ರೂಮು ಒಂದು ಕಾಲದಲ್ಲಿ ಪದ್ಮನಾಭಯ್ಯ ಎಂಬುವರು ನಡೆಸುತ್ತಿದ್ದ ಅಂಬಾ ಭವನ ಎಂಬ ಪ್ರಸಿದ್ಧ ಹೋಟೆಲ್ ಇದ್ದ ಕಟ್ಟಡದ ಮೊದಲನೇ ಮಹಡಿಯಲ್ಲಿತ್ತು. ಕೊಡೂರು ಶಾಮ ಭಟ್ಟರ ಕುಟುಂಬಕ್ಕೆ ಸೇರಿದ್ದ ಈ ಕಟ್ಟಡದಲ್ಲಿ ಆಗ ಪ್ರಾಥಮಿಕ ಶಾಲೆಯೊಂದನ್ನು ನಡೆಸಲಾಗುತ್ತಿತ್ತು.
------- ಮುಂದುವರಿಯುವುದು-----

Saturday, April 25, 2020

ಬಾಲ್ಯ ಕಾಲದ ನೆನಪುಗಳು – ೮೧


ನಾನು ಆ ಸಂಜೆ ಮನೆ ತಲುಪಿ ತಂದೆ ತಾಯಿಯರೊಡನೆ ಶಂಕರರಾಯರು ೩೫೦ ರೂಪಾಯಿ ಕೊಟ್ಟು ನನ್ನನ್ನು ಶೃಂಗೇರಿ ಕಾಲೇಜಿಗೆ ಸೇರಿಸಿದ್ದಾರೆಂದು ಹೇಳಿದಾಗ ಅವರಿಗೆ ನಂಬಲೇ ಸಾಧ್ಯವಾಗಲಿಲ್ಲ. ನಾವು ಹಿಂದಿನ ವರ್ಷ ನನ್ನ ಓದಿಗಾಗಿ ಕೊಡುಗೆ ಎತ್ತಲು ಊರೆಲ್ಲಾ ಸುತ್ತಿ ಕೇವಲ ೩೮ ರೂಪಾಯಿಗಳನ್ನು ಎತ್ತಿದ್ದನ್ನು ನೆನಸಿದರೆ ಶಂಕರರಾಯರ ಕೊಡುಗೆ ನಂಬಲಸಾಧ್ಯವೇ ಆಗಿತ್ತು. ಆದರೆ ನಮ್ಮ ನಿಜವಾದ ಸಮಸ್ಯೆ ಬೇರೆಯೇ ಆಗಿತ್ತು. ಅದು ಶೃಂಗೇರಿಯಲ್ಲಿ ನನ್ನ ವಸತಿ ಮತ್ತು ಊಟ ತಿಂಡಿಯ ವ್ಯವಸ್ಥೆ ಹೇಗೆಂದು. ಶಿವಮೊಗ್ಗೆಯ ಹಾಸ್ಟೆಲಿನಲ್ಲಿ ನಾನು ಅದಕ್ಕಾಗಿ ಕೇವಲ ಆರು ರೂಪಾಯಿ ತಿಂಗಳಿಗೆ ಫೀ ಕಟ್ಟುತ್ತಿದ್ದೆ. ಆದರೆ ಶೃಂಗೇರಿಯಲ್ಲಿ ಅಷ್ಟು ಹಣದಲ್ಲಿ ಏನೂ ದೊರೆಯುತ್ತಿರಲಿಲ್ಲ.

ನನ್ನ ಕಸಿನ್ ಹಂಚಿನಮನೆ ಸುಬ್ರಹ್ಮಣ್ಯ ಆ ವೇಳೆಗೆ ಶೃಂಗೇರಿಯ ಭಾರತಿ ರಸ್ತೆಯಲ್ಲಿ ಒಂದು ಮನೆಯನ್ನು ಕೊಂಡುಕೊಂಡಿದ್ದರು. ಆ ಮನೆಯ ಮುಂದೆ ಇದ್ದ ಒಂದು ಖಾಲಿ ಕೊಠಡಿಯಲ್ಲಿ ನನಗೆ  ವಾಸ  ಮಾಡಲು ಅವಕಾಶ ಕೊಟ್ಟರು. ಆ ಮನೆಯಿಂದ ಸ್ವಲ್ಪ ದೂರದಲ್ಲೇ ಹೊಳ್ಳ ಎಂಬವರು ಒಂದು ಮೆಸ್ ನಡೆಸುತ್ತಿದ್ದರು. ಅವರು ಬೆಳಗಿನ ಸ್ನಾನ, ಕಾಫಿ ತಿಂಡಿ ಮತ್ತು ಎರಡು ಹೊತ್ತಿನ ಊಟಕ್ಕೆ ತಿಂಗಳಿಗೆ ೩೦ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಒಟ್ಟಿನಲ್ಲಿ ನನಗೆ ಬೇರೆ ಖರ್ಚುಗಳೂ ಸೇರಿ ತಿಂಗಳಿಗೆ ಸುಮಾರು ೪೦ ರೂಪಾಯಿ ವೆಚ್ಚ ಮಾಡಬೇಕಾಗುತ್ತಿತ್ತು. ನಮಗಿರುವ ವಾರ್ಷಿಕ ಆದಾಯದಲ್ಲಿ ಅಷ್ಟು ಹಣ ಒದಗಿಸುವುದು ಅಸಾಧ್ಯವೆಂದು ನನಗೆ ಅನಿಸಿದರೂ ತಂದೆಯವರು ಹೇಗಾದರೂ ಮಾಡಿ ಆ ವೆಚ್ಚ ಭರಿಸುವುದಾಗಿ ಹೇಳಿದರು. ಶಂಕರರಾಯರು ಅಷ್ಟೊಂದು ದೊಡ್ಡ ಮೊತ್ತವನ್ನು ಕಾಲೇಜು ಫೀ ಆಗಿ ಕಟ್ಟಿದ ಮೇಲೆ ನನ್ನ ವಿದ್ಯಾಭ್ಯಾಸ ಹೇಗಾದರೂ ಮುಂದುವರಿಯಲೇ ಬೇಕೆಂದು ತಂದೆಯವರ ಆಶಯವಾಗಿತ್ತು.

ಶಂಕರರಾಯರು ಮೊದಲೇ ಹೇಳಿದಂತೆ ನಾನು ಜೂನ್ ತಿಂಗಳ ಕೊನೆಯಲ್ಲೊಂದು ಸಂಜೆ ಅವರ ಮನೆಗೆ ಹೋದೆ. ಆಗ ಅಲ್ಲಿ ಚಂದ್ರಮೌಳಿರಾಯರ ಮೂರನೇ ಮಗ ಶಿವಶಂಕರ್ ಅವರೂ ಇದ್ದರು. ಒಬ್ಬ ಕುಶಲ ಮೆಕ್ಯಾನಿಕ್ ಆಗಿದ್ದ ಅವರು ತಮ್ಮ ಉತ್ತಮೇಶ್ವರ ಅಕ್ಕಿ ಗಿರಣಿಯಲ್ಲಿ ಏನೋ ರಿಪೇರಿ ಕೆಲಸಕ್ಕಾಗಿ ಬಂದಿದ್ದರು. ನಾವು ಮೂವರೂ ಮಾರನೇ ದಿನ ಬೆಳಿಗ್ಗೆ ಶೃಂಗೇರಿ ತಲುಪಿದೆವು. ಅದು ೧೯೬೫ನೇ ಇಸವಿಯ ಜೂನ್ ತಿಂಗಳ ೨೭ನೇ ತಾರೀಕು. ಅಂದು ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಮೆಮೋರಿಯಲ್ ಕಾಲೇಜಿನ ಉದ್ಘಾಟನೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಮಗಳೂರ್ ಜಿಲ್ಲಾ ಡೆಪ್ಯೂಟಿ ಕಮಿಷನರ್ ಹೆಚ್ ಎಲ್ ನಾಗೇಗೌಡರು ವಹಿಸಿದ್ದರು. ಉದ್ಘಾಟನಾ ಜ್ಯೋತಿಯನ್ನು ಮಣಿಪಾಲ್ ಅಕ್ಯಾಡೆಮಿಯ ರಿಜಿಸ್ಟ್ರಾರ್ ಆದ ಡಾಕ್ಟರ್ ಟಿ ಎಂ ಎ ಪೈ ಅವರಿಂದ ಬೆಳಗಿಸಲಾಯಿತು.  ಆ ದಿನ ನಿಜವಾಗಿಯೂ ಶೃಂಗೇರಿ ಪಟ್ಟಣದ ನಿವಾಸಿಗಳಿಗೆ ಒಂದು ಚರಿತ್ರಾರ್ಹ ದಿನವಾಗಿತ್ತು. ಕೊಂಚವೂ ಬಿಡುವಿಲ್ಲದ ಸಮಾರಂಭದ ಚಟುವಟಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರೂ ಚಂದ್ರಮೌಳಿರಾಯರ ಮಗ ಶ್ರೀಕಂಠರಾಯರು ನನ್ನನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿ ನಾನು ಕಾಲೇಜಿನ ಆರಂಭದ ಮೊದಲ ದಿನವೇ ಹಾಜರಿರುವೆನೆಂದು ಖಚಿತಪಡಿಸಿಕೊಂಡರು.

ಶೃಂಗೇರಿಗೆ ನನ್ನ ಕಾಲ್ನಡಿಗೆ ಪ್ರಯಾಣ
ಆ ಭಾನುವಾರ ನಾನು ಶೃಂಗೇರಿಯಲ್ಲಿ ನನ್ನ ವಸತಿಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ನಮ್ಮ ಮನೆಯಿಂದ ಕಾಲ್ನಡಿಗೆ ಪ್ರಯಾಣ ಆರಂಭಿಸಿದೆ.  ಆಗ ನಮ್ಮೂರಿನಿಂದ ಶೃಂಗೇರಿಗೆ ಯಾವುದೇ ವಾಹನ ಸೌಕರ್ಯವಿರಲಿಲ್ಲ. ಹಾಗೂ ನೇರ ರಸ್ತೆಯೂ ಇರಲಿಲ್ಲ. ಬಸ್ ಹಿಡಿಯ ಬೇಕಾದರೆ ಬಿ ಜಿ ಕಟ್ಟೆಗೆ ನಾಲ್ಕು ಮೈಲಿ ಅಥವಾ ಜಯಪುರಕ್ಕೆ ಆರು ಮೈಲಿ ನಡೆಯಬೇಕಿತ್ತು. ಆದರೆ ಒಳ ದಾರಿಯಲ್ಲಿ ಶೃಂಗೇರಿ ಕೇವಲ ಎಂಟು ಮೈಲಿ ದೂರದಲ್ಲಿತ್ತು.

ಕಾಲ್ನಡಿಗೆ ಮಾಡುತ್ತಿರುವಂತೆ ನನಗೆ ನಮ್ಮ ಬಾಲ್ಯದಲ್ಲಿ ನಾವು ಪ್ರತಿ ವರ್ಷವೂ ನವರಾತ್ರಿಯಲ್ಲಿ ಶೃಂಗೇರಿ ಪ್ರಯಾಣ ಮಾಡುತ್ತಿದ್ದುದು ನೆನಪಿಗೆ ಬರತೊಡಗಿತು. ನಮಗೆ ಮಠದಲ್ಲಿ ನಡೆಯುತ್ತಿದ್ದ ಪೂಜೆ, ಗುರುಗಳ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ ನಾವು ನೋಡುತ್ತಿದ್ದ ಸಿನಿಮಾ ಮತ್ತು ಆಮೇಲಿನ ಯಕ್ಷಗಾನ ತುಂಬಾ ಖುಷಿ ನೀಡುತ್ತಿದ್ದವು. ಆದರೆ ಅದಕ್ಕಾಗಿ ನಾವು  ಮಾಡಬೇಕಾಗಿದ್ದ ಎಂಟು ಮೈಲಿ ಬರಿಗಾಲ ಪಯಣ ಬಹಳ ಕಷ್ಟದಾಯಕವೇ ಆಗಿತ್ತು.
ಶೃಂಗೇರಿಗೆ ಹೋಗುವಾಗ ಇದ್ದ  ಉತ್ಸಾಹ ನಮಗೆ ಹಿಂತಿರುಗಿ ಬರುವಾಗ ಇರುತ್ತಿರಲಿಲ್ಲ. ಅದರಲ್ಲೂ ರಾತ್ರಿಯೆಲ್ಲಾ ನಿದ್ದೆಗೆಟ್ಟು ಯಕ್ಷಗಾನ ನೋಡಿರುತ್ತಿದ್ದ ನಮಗೆ ಊರಿಗೆ ಮರು ಪ್ರಯಾಣ ತುಂಬಾ ಬಳಲಿಕೆ ಹಾಗೂ ಹಿಂಸೆ ನೀಡುತ್ತಿತ್ತು. ಮದ್ಯಾಹ್ನದ ಬಿಸಿಲಿನಲ್ಲಿ ಮನೆ ಸೇರಿದ ನಾವು ಕೂಡಲೇ ಮಲಗಿ ನಿದ್ದೆ ಹೋಗಿಬಿಡುತ್ತಿದ್ದೆವು. ಇದರ ಮದ್ಯೆ ಒಮ್ಮೊಮ್ಮೆ ನಮ್ಮ ಪುಟ್ಟಣ್ಣ ಅರೆನಿದ್ದೆಯಿಂದ ಮೇಲೆದ್ದು ನಿದ್ದೆಗಣ್ಣಿನಲ್ಲೇ ತಾನು ರಾತ್ರಿ ನೋಡಿದ ಯಕ್ಷಗಾನದ ಯಾವುದಾದರೂ ಪಾತ್ರಾಭಿನಯ ಮಾಡುತ್ತಾ ನಮ್ಮ ನಿದ್ದೆ ಕೆಡಿಸಿ ಬಿಡುತ್ತಿದ್ದ!

ಎಲ್ಲಳ್ಳಿಯ ಪಾಳುಬಿದ್ದ ಮನೆ ಮತ್ತು ಹಾಳಾಗಿಹೋದ ಅಡಿಕೆ ತೋಟ
ಬಾಲ್ಯದ ಪ್ರಯಾಣವನ್ನು ಹೋಲಿಸಿದರೆ ನಾನು ಈಗ ಮಾಡುತ್ತಿದ್ದ ಕಾಲ್ನಡಿಗೆ ಪ್ರಯಾಣ ತುಂಬಾ ಖುಶಿ ನೀಡುವಂತದ್ದಾಗಿತ್ತು. ಅದಕ್ಕೆ ಮುಖ್ಯ ಕಾರಣ ಪ್ರಕೃತಿ ಸೌಂದರ್ಯದ ಮೇಲೆ ನನಗೆ ಮೂಡಿದ್ದ ಆಸಕ್ತಿ. ನಮ್ಮೂರ ಅಡಿಕೆ ತೋಟದ ಕಣಿವೆಯಿಂದ ಮೇಲೆ ಬಂದ ನಾನು ಒಂದು ರಸ್ತೆಯಲ್ಲಿ ಎಲ್ಲಳ್ಳಿ ಎಂಬಲ್ಲಿಗೆ ತಲುಪಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ಅಪಾರ ಜಲರಾಶಿ ಹೊಂದಿದ್ದ ಈ ಪ್ರದೇಶದಲ್ಲಿ ಒಂದು ಪಾಳುಬಿದ್ದ ಮನೆ ಮತ್ತು ಹಾಳಾಗಿಹೋದ ಅಡಿಕೆ ತೋಟ ಕಣ್ಣಿಗೆ ಬೀಳುತ್ತಿತ್ತು.  ಈ ಮನೆಗೂ ನಮಗೂ ಸಂಬಂಧವಿತ್ತು. ನಮ್ಮ ತಂದೆಯನ್ನು ಅವರ ಬಾಲ್ಯದಲ್ಲಿ ಇದೇ ಮನೆಯಲ್ಲಿ ಅವರ ಸೋದರಮಾವ ಸಾಕಿ ಬೆಳೆಸಿದ್ದರಂತೆ.  ಆ ಮನೆ ಮತ್ತು ಜಲ ಸಮೃದ್ಧಿ ಇದ್ದ ಅಡಿಕೆ ತೋಟ ಏಕೆ ಪಾಳು ಬಿದ್ದು ಹೋದುವೆಂಬುದು ಒಂದು ಬ್ರಹ್ಮ ರಹಸ್ಯವೇ ಆಗಿತ್ತು.

ಊರುಗುಡಿಗೆ ಸುಬ್ಬ
ಎಲ್ಲಳ್ಳಿಯಿಂದ ಮುಂದೆ ಊರುಗುಡಿಗೆ ಎಂಬ ಸ್ಥಳವಿತ್ತು. ಇಲ್ಲಿ ನಮ್ಮ ಮನೆಯಲ್ಲಿ ಆಗಾಗ ಮನೆಯಾಳಾಗಿ ಕೆಲಸ ಮಾಡುತ್ತಿದ್ದ ಸುಬ್ಬ ಎಂಬುವನ ಮನೆಯಿತ್ತು. ಕೆಳ ಜಾತಿಯವನಾಗಿದ್ದ ಸುಬ್ಬನಿಗೆ ಅವನ ಮನೆಯ ಮುಂದಿದ್ದ ಬತ್ತದ ಗದ್ದೆ ಮಾಡುವ ಫಲವತ್ತಾದ ಜಮೀನು ದರಖಾಸ್ತ್ ಮೂಲಕ ಸರ್ಕಾರದಿಂದ ಮಂಜೂರಾಗಿತ್ತು. ಆದರೆ ಸುಬ್ಬನಿಗೆ ಕೂಲಿ ಕೆಲಸ ಮಾಡುವುದರಲ್ಲಿದ್ದ ಆಸಕ್ತಿ ಜಮೀನಿನ ವ್ಯವಸಾಯದಲ್ಲಿರಲಿಲ್ಲ. ಸರ್ಕಾರ ತನ್ನ ಮೇಲೆ ಜಮೀನಿನ ಮಾಲೀಕತ್ವದ ಹೊರೆಯನ್ನು ಹೊರಿಸಿದಂತೆ ಅವನಿಗೆ ಅನಿಸುತ್ತಿತ್ತು. ಆದ್ದರಿಂದ ಆ ಹೊರೆಯನ್ನು ಇಳಿಸಿಕೊಳ್ಳಲು ಜಮೀನು ಮಾರಾಟ ಮಾಡಿಬಿಡಬೇಕೆಂದು ಅವನ ಉದ್ದೇಶವಾಗಿತ್ತು. ಆದರೆ ಅವನ ದುರಾದೃಷ್ಟಕ್ಕೆ ಕಾನೂನಿನ ಪ್ರಕಾರ ಅವನು ೧೦ ವರ್ಷ ಜಮೀನು ಮಾರುವಂತಿರಲಿಲ್ಲ!

ಸುಬ್ಬನೊಬ್ಬ ಅಸಾಧಾರಣ ಕಥೆಗಾರನಾಗಿದ್ದ. ಊರಿನಲ್ಲಿ ನಡೆದ  ಅಥವಾ ಅವನ ಕಿವಿಗೆ ಬಿದ್ದ ಸಾಮಾನ್ಯ ಪ್ರಸಂಗಗಳನ್ನು ಒಂದು ಸ್ವಾರಸ್ಯಕರ  ಕಥೆಯನ್ನಾಗಿ ಪರಿವರ್ತಿಸಿ ಹೇಳುವ ಕಲೆ ಅವನಿಗೆ ಸಾಧಿಸಿತ್ತು. ಅವನು ಹೇಳುವ ಕಥೆಗಳನ್ನು ನಾವು ಕಿವಿ ಕೊಟ್ಟು ಕೇಳುತ್ತಿದ್ದೆವು. ಸುಬ್ಬ ಮತ್ತು ಅವನ ಹೆಂಡತಿ ಗೌರಿಯ ಒಬ್ಬಳೇ ಮಗಳು ದೇವಿ. ಅವಳೊಬ್ಬ ಸುಂದರಿಯಾಗಿದ್ದಳು. ಹಳೇ ಬಟ್ಟೆಯನ್ನು ಧರಿಸಿದ್ದರೂ ಅದರೊಳಗೇ ಮಿಂಚುತ್ತಿದ್ದ ದೇವಿ ಉನ್ನತ ಕುಲದ ಸ್ತ್ರೀಯರಿಗೂ ಹೊಟ್ಟೆಕಿಚ್ಚು ಉಂಟು ಮಾಡುತ್ತಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.

ದಟ್ಟವಾದ ಕಾಡಿನಲ್ಲಿ ಪ್ರಯಾಣ
ಊರುಗುಡಿಗೆಯಿಂದ ಮುಂದೆ ಅರದಳ್ಳಿ ಎಂಬ ಊರಿಗೆ ನಾನೊಂದು ದಟ್ಟವಾದ ಕಾಡಿನಲ್ಲಿ ಪ್ರಯಾಣ ಮಾಡಬೇಕಿತ್ತು. ಈ ಕಾಡೆಷ್ಟು  ದುರ್ಗಮವಾಗಿತ್ತೆಂದರೆ ಅದರೊಳಗಿನ ಕಾಲುದಾರಿಯ ಮೂಲಕ ಅರದಳ್ಳಿಯ ಬತ್ತದ ಗದ್ದೆಗಳಿಗೆ ನಡೆದು ಹೋಗುವಾಗ ಹಗಲಿನಲ್ಲೇ ಭಯವಾಗುತ್ತಿತ್ತು. ಆಮೇಲೆ ಒಂದು ಶನಿವಾರ ನಾನು ಮದ್ಯಾಹ್ನದ ನಂತರ ಶೃಂಗೇರಿಯಿಂದ ಹೊರಟು ಊರಿಗೆ ಬರುತ್ತಿದ್ದೆ. ಕತ್ತಲಾಗುವ ಮೊದಲೇ ಈ ಕಾಡನ್ನು ದಾಟಿಬಿಡುವ ಗುರಿ ನನ್ನದಾಗಿತ್ತು. ಆದರೆ ನಾನು ತಡಮಾಡಿ ಬಿಟ್ಟಿದ್ದೆ. ನನ್ನ ಕೈಯಲ್ಲಿ ಒಂದು ಟಾರ್ಚ್ ಇತ್ತು. ಕಾಡಿನ ನಡುವಿನ ಇಕ್ಕಟ್ಟಾದ ಕಾಲುದಾರಿಯಲ್ಲಿ ನಾನು ಟಾರ್ಚ್ ಹೊತ್ತಿಸಿಕೊಂಡು ಬರುತ್ತಿದ್ದೆ. ಆ ಕಾಡಿನ ಮರಗಳ ಕೊಂಬೆಗಳು ಕಾಲುದಾರಿಯ ಮೇಲೆ ಒಂದಕ್ಕೊಂದು ಅಂಟಿಕೊಂಡು ಚಂದ್ರನ ಬೆಳದಿಂಗಳೂ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧಿಸಿ ಬಿಟ್ಟಿದ್ದವು. ಪಕ್ಕದ ಗುಡ್ಡದ  ಮೇಲಿಂದ ಕಾಡು ಪ್ರಾಣಿಗಳ ಕೂಗಾಟ ಕಿವಿಗೆ ಬೀಳುತ್ತಲೇ ಇತ್ತು. ಒಂದು ರೀತಿಯ ಭಯದಿಂದ ನನ್ನ ಎದೆ ಬಡಬಡನೆ ಬಡಿದುಕೊಳ್ಳುತ್ತಿತ್ತು.

ಕೊಳ್ಳಿದೆವ್ವ ಪ್ರತ್ಯಕ್ಷವಾಯಿತೇ?
ಇದ್ದಕ್ಕಿದ್ದಂತೆ ನನ್ನ ಮುಂದೆ ಸ್ವಲ್ಪ ದೂರದಲ್ಲಿ ನೆಲದಿಂದ ಸುಮಾರು ಆರಡಿ ಎತ್ತರದಲ್ಲಿ ಒಂದು ಪ್ರಬಲ ಬೆಳಕು ನನ್ನತ್ತಲೇ ಬರುತ್ತಿದ್ದುದು ನನ್ನ ಕಣ್ಣಿಗೆ ಗೋಚರಿಸಿತು. ಒಮ್ಮೆಲೇ ನನಗೆ ನನ್ನ ಬಾಲ್ಯದಲ್ಲಿ ತಂದೆಯವರು ನೋಡಿದರೆನ್ನಲಾದ ಕೊಳ್ಳಿದೆವ್ವದ ನೆನಪಾಯಿತು. ತಂದೆಯವರೇನೋ ಕೊಳ್ಳಿದೆವ್ವ ಹಿಡಿದಿದ್ದ ಕೊಳ್ಳಿಯನ್ನು ಅದರ ಕೈಯಿಂದ ಕಿತ್ತುಕೊಂಡು ಅದನ್ನು ಅದರ ಮುಖಕ್ಕೆ ಹಿಡಿದು ಓಡಿಸಿಬಿಟ್ಟಿದ್ದರಂತೆ. ಅದರ ಕಾಲಿನ ಎರಡು ಪಾದಗಳೂ ಹಿಂದಕ್ಕೆ ತಿರುಗಿಕೊಂಡಿದ್ದರಿಂದ ತಂದೆಯವರಿಗೆ ಅದೊಂದು ದೆವ್ವವೆಂದು ಗೊತ್ತಾಗಿತ್ತಂತೆ. ಈಗ ಅದೇ ಕೊಳ್ಳಿದೆವ್ವ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದೆಯೆಂದು ನನಗೆ ಕಾಣಿಸತೊಡಗಿತು. ನಾನು ನನ್ನ ನಡೆತದ ವೇಗವನ್ನು ಕಡಿಮೆ ಮಾಡಿದೆ. ಆ ಬೆಳಕು ನನ್ನನ್ನು ಸಮೀಪಿಸುತ್ತಿದ್ದಂತೇ ನನ್ನ ಹೃದಯವೇ ಬಾಯಿಗೆ ಬಂದಂತೆ ಅನಿಸತೊಡಗಿತ್ತು.

ಇದ್ದಕ್ಕಿದಂತೇ ನನ್ನ ಮುಂದೆ ಬೆಳಕಿನ ಮೂಲವನ್ನು ತನ್ನ ತಲೆಗೆ ಕಟ್ಟಿಕೊಂಡಿದ್ದ ವ್ಯಕ್ತಿಯೊಂದು ಪ್ರತ್ಯಕ್ಷವಾಯಿತು. ಅದರ ಎರಡು ಕಾಲಿನ ಪಾದಗಳು ಮುಂದಕ್ಕೆ ಚಾಚಿಕೊಂಡಿರುವುದು ನನಗೆ ಸಮಾಧಾನ ತಂದಿತು. ವ್ಯಕ್ತಿ ತೀರಾ ನನ್ನ ಹತ್ತಿರ ಬಂದಾಗ ನನಗೆ ಅವನು ನನಗೆ ಪರಿಚಯವಿದ್ದ ಚಿಟ್ಟೆಮಕ್ಕಿ ಸೂರ ಎಂದು ಅರಿವಾಯಿತು. ಅವನು ರಾತ್ರಿಯಲ್ಲಿ ಕಾಡಿನೊಳಗೆ ಬೇಟೆಯಾಡಲು ಬಂದಿದ್ದನಂತೆ. ಬೇಟೆಗಾರರು ರಾತ್ರಿ ಹೊತ್ತಿನಲ್ಲಿ ತಲೆಗೆ ಹೆಡ್ ಲೈಟ್ ಕಟ್ಟಿಕೊಂಡಿರುವುದು ಮಾಮೂಲಾಗಿತ್ತು. ಒಮ್ಮೆಲೇ ನನ್ನ ಆತಂಕ ಮತ್ತು ಭಯ ನನ್ನಿಂದ ದೂರವಾಯಿತು.

ಹಳ್ಳದ ನೀರಿನ ಜಗಳ ಮದುವೆಗಳಲ್ಲಿ ಮುಕ್ತಾಯ!
ಕಾಡಿನ ಕೊನೆಯಲ್ಲಿ ನಾನು ಅರದಳ್ಳಿ ಊರಿನ ವಿಶಾಲವಾದ ಬತ್ತದ ಗದ್ದೆಯ ಪ್ರವೇಶ ಮಾಡಬೇಕಿತ್ತು ವಿಶಾಲವಾದ ಈ ಗದ್ದೆಯ ನಡುವೆ ಒಂದು ದೊಡ್ಡ ಹಳ್ಳ ಹರಿಯುತ್ತಿತ್ತು. ಅದು ಗದ್ದೆಯನ್ನು ನಿಖರವಾಗಿ ಎರಡು ಭಾಗ ಮಾಡಿದಂತೆ ಅನಿಸುತ್ತಿತ್ತು. ಒಂದು ಕಾಲದಲ್ಲಿ ಈ ಸಂಪೂರ್ಣ ಜಮೀನು ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರಿಗೆ ಸೇರಿತ್ತು. ಅವರು ಊರು ಬಿಟ್ಟು ಹೋಗುವ ಮೊದಲು ಅರ್ಧ ಭಾಗವನ್ನು ಸಂಪಿಗೆ ಕೊಳಲು ಗಣೇಶರಾಯರಿಗೂ ಮತ್ತು ಇನ್ನರ್ಧವನ್ನು ಮೇಲಿನಕೊಡಿಗೆ ರಾಮರಾಯರಿಗೂ ಮಾರಿದ್ದರು. ರಾಮರಾಯರ ಗದ್ದೆಯ ಭಾಗಕ್ಕೆ ಬಾಳೆಹಕ್ಲು ಎಂದು ಕರೆಯಲಾಗುತ್ತಿತ್ತು. ಆಮೇಲೆ ಸ್ವಲ್ಪ ಕಾಲ ಈ ಎರಡು ಕುಟುಂಬಗಳಿಗೂ ಹಳ್ಳದ ನೀರಿನ ಹಂಚಿಕೆಯ ಬಗ್ಗೆ ದೊಡ್ಡ ಮನಸ್ತಾಪ ಉಂಟಾಯಿತು. ಕೊನೆಯಲ್ಲಿ ರಾಮರಾಯರ ತಂಗಿ ಗೌರಮ್ಮನನ್ನು ಗಣೇಶರಾಯರ ಅಕ್ಕನ ಮಗ ಅಶ್ವತ್ಥನಿಗೆ ಮದುವೆ ಮಾಡುವ ಮೂಲಕ ಮನಸ್ತಾಪ ಕೊನೆಗೊಳ್ಳಿಸಲಾಯಿತು. ಆಮೇಲೆ ಸಂಬಂಧಗಳು ಎಷ್ಟು ಸುಧಾರಿಸಿದುವೆಂದರೆ ಗಣೇಶರಾಯರ ಹಿರಿಯ ಮಗಳು ಪುಷ್ಪಾಳನ್ನು ರಾಮರಾಯರ ತಮ್ಮ ಕೃಷ್ಣನಿಗೆ ಕೊಟ್ಟು ವಿವಾಹ ನೆರವೇರಿಸಲಾಯಿತು.

ಬಾಳೆಹಕ್ಲು ಗದ್ದೆಯನ್ನು ದಾಟಿ ಮುಂದೆ  ಮೇಲಿನಕೊಡಿಗೆ ಎಂಬ ಮನೆಯ ಹತ್ತಿರ ನಾನು ಹೋಗ ಬೇಕಾಗಿತ್ತು. ಅಲ್ಲಿ ಒಂದು ರಸ್ತೆಯನ್ನು ದಾಟಿ ಒಂದು ಗುಡ್ಡದ ಮೇಲೆ ಹತ್ತಬೇಕಾಗಿತ್ತು. ಆ ರಸ್ತೆಯ ಕೆಳಭಾಗದಲ್ಲಿ ಒಂದು ಮನೆ ಮತ್ತು ಅಡಿಕೆ ತೋಟಗಳಿದ್ದವು. ಆ ಮನೆಯಲ್ಲಿ ಒಂದು ಕಾಲದಲ್ಲಿ ಸೀತಾರಾಮಯ್ಯ ಎಂಬುವರು ವಾಸಿಸುತ್ತಿದ್ದರು. ಅವರು ಗೇಣಿ ಮಾಡುತ್ತಿದ್ದ ತೋಟ ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರಿಗೆ ಸೇರಿತ್ತು. ರಾಯರು ಅದನ್ನು ಕೊಡೂರು ಶಾಮಭಟ್ಟರ ಮಗ ನಂಜುಂಡ ಭಟ್ಟರಿಗೆ ಮಾರಿದ್ದರು. ನಂತರ ಸೀತಾರಾಮಯ್ಯನವರು ಊರು ಬಿಟ್ಟು ಹೋಗಬೇಕಾಯಿತು. ನಾನು ಶೃಂಗೇರಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ನಂಜುಂಡಭಟ್ಟರು ಆ ಮನೆಗೆ ಬಂದು ವಾಸಿಸತೊಡಗಿದರು.

ನಂಜುಂಡಭಟ್ಟರ ಮುಗಿಯದ ಸಂಭಾಷಣೆಗಳು!
ನಂಜುಂಡಭಟ್ಟರು ಒಬ್ಬ ಪಾಂಡಿತ್ಯ ಪೂರ್ಣ ವಿದ್ವಾಂಸರೆನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ತಮ್ಮ ಪಾಂಡಿತ್ಯವನ್ನು ಅವರು ಉಳಿದವರಿಗೂ ಹಂಚಲು ಯಾವಾಗಲೂ ತುಂಬಾ ಶ್ರಮ ಪಡುತ್ತಿದ್ದರು. ಮಾತಿನ ನಡುವೆ ಹಲವು ಸಂಸೃತ ಶ್ಲೋಕಗಳನ್ನೂ ಪದೇ ಪದೇ ಉಲ್ಲೇಖಿಸುತ್ತಿದ್ದರು. ವಿಚಿತ್ರವೆಂದರೆ ಹೆಚ್ಚು ಜನಗಳಿಗೆ ಅವರ ಪಾಂಡಿತ್ಯಪೂರ್ಣ ಮಾತುಗಳಲ್ಲಿ ಆಸಕ್ತಿಯೇ ಇರಲಿಲ್ಲ. ಕಾರಣವಿಷ್ಟೇ. ಭಟ್ಟರಿಗೆ ತಮ್ಮ ಮಾತುಗಳನ್ನು ಮುಗಿಸುವ ಅಭ್ಯಾಸವೇ ಇರಲಿಲ್ಲ! ಸನ್ನಿವೇಶಗಳು ಯಾವ ಮಟ್ಟಕ್ಕೆ ಹೋದುವೆಂದರೆ ಭಟ್ಟರು ದೂರದಿಂದ ಕಣ್ಣಿಗೆ ಬಿದ್ದೊಡನೇ ಅವರ ಭಾಷಣದಿಂದ ತಪ್ಪಿಸಿಕೊಳ್ಳಲು ಜನಗಳು ಪರಾರಿ ಆಗಿಬಿಡುತ್ತಿದ್ದರು! ಈ ವಿಷಯ ಗೊತ್ತಿಲ್ಲದೇ ನಾನು ಹಲವು ಬಾರಿ ಭಟ್ಟರ ಕೈಯಲ್ಲಿ ಸಿಕ್ಕಿಬಿದ್ದು ಹಿಂಸೆ ಪಟ್ಟಿದ್ದೆ. ನಂತರ ಬುದ್ಧಿ ಕಲಿತ ನಾನು ದೂರದಲ್ಲಿ ಅವರು ಕಾಣಿಸಿದೊಡನೇ ಕಾಲಿಗೆ ಬುದ್ಧಿ ಹೇಳಿಬಿಡುತ್ತಿದ್ದೆ!

ಗುಡ್ಡದಿಂದ ಕೆಳಗಿಳಿದೊಡನೆ ನಾನು ಮೇಗಳಬೈಲು ಎಂಬಲ್ಲಿ ಪುನಃ ಒಂದು ಗದ್ದೆಯನ್ನು ದಾಟಿ ಶ್ರೀನಿವಾಸ (ಶೀನ) ಎಂಬ ಶ್ರೀಮಂತರ ಮನೆಯ ಮುಂದೆ ಹೋಗಿ ಒಂದು ರಸ್ತೆ ಸೇರಬೇಕಾಗಿತ್ತು.  ಆ ರಸ್ತೆ ಪುನಃ ಒಂದು ಗದ್ದೆಯತ್ತ ಹೋಗುತ್ತಿತ್ತು. ಅದರ ಅಂಚಿನಲ್ಲಿ ಕೊಂಡಗುಳಿ ಕೃಷ್ಣ ಎಂಬ ಶ್ರೀಮಂತರ ಮನೆಯಿತ್ತು. ಈ ಕೃಷ್ಣ ಇಸ್ಪೀಟು ಆಟದ ಹುಚ್ಚಿಗೆ ಪ್ರಸಿದ್ಧಿ ಪಡೆದಿದ್ದರು. ನಮ್ಮ ತಂದೆಯವರಿಗೂ ಇಸ್ಪೀಟು ಆಟದ ಹುಚ್ಚು ಅತಿಯಾಗಿ ಎಷ್ಟೋ ಬಾರಿ ತುಂಬಾ ಹಣವನ್ನು ಕಳೆದುಕೊಂಡಿದ್ದರು. ಆದ್ದರಿಂದ ಇಸ್ಪೀಟು ಆಟ ಆಡುವರನ್ನು ಕಂಡರೆ ನಮ್ಮ ಮನೆಯಲ್ಲಿ ಯಾರಿಗೂ ಆಗುತ್ತಿರಲಿಲ್ಲ. ಅಂತವರನ್ನು ನಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ಬಿಡುತ್ತಿದ್ದೆವು. ಆ ಪಟ್ಟಿಯಲ್ಲಿ ಕೊಂಡಗುಳಿ ಕೃಷ್ಣ ಅವರ ಹೆಸರೂ ಸೇರಿತ್ತು.

ಹೊನ್ನೇಮರದ ಗಣಪತಿ ಕಟ್ಟೆ
ಕೊಂಡಗುಳಿಯಿಂದ ಮುಂದೆ ನಾನು ಒಂದು ಪಕ್ಕಾ ರಸ್ತೆಯಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಬೇಕಾಗಿತ್ತು. ಆಗ ಒಂದು ದೊಡ್ಡ ಹಳ್ಳ ಎದುರಾಗುತ್ತಿತ್ತು. ಆಗ ಹಳ್ಳಕ್ಕೆ ಎಲ್ಲಿಯೂ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಅದರಲ್ಲಿ ದೊಡ್ಡ ಪ್ರವಾಹವೇ ಉಂಟಾಗುತ್ತಿತ್ತು. ಆಗ ಅದನ್ನು ದಾಟಿ ಹೋಗುವುದು ಒಂದು ದೊಡ್ಡ ಸಾಹಸವೇ ಆಗಿತ್ತು. ಹಳ್ಳವನ್ನು ದಾಟಿದ ನಂತರ ಸ್ವಲ್ಪದೂರದಲ್ಲಿ ನಾನು ಜಯಪುರ-ಶೃಂಗೇರಿ ರಸ್ತೆಯಲ್ಲಿದ್ದ ಹೊನ್ನೇಮರದ ಗಣಪತಿ ಕಟ್ಟೆ ಎಂಬ ದೇವಸ್ಥಾನ ತಲುಪಬೇಕಿತ್ತು. ಈ ದೇವಸ್ಥಾನದ ಗಣಪತಿ ತುಂಬಾ ಮಹಿಮಾವಂತ ಮತ್ತು ಶಕ್ತಿಯುತ ಗಣಪತಿಯೆಂದು ಪ್ರಸಿದ್ಧಿ ಪಡೆದಿದ್ದ.

ದೇವಸ್ಥಾನದಿಂದ ಜಯಪುರ-ಶೃಂಗೇರಿ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ಮುಂದೆ ಹೋದಾಗ ಶೃಂಗೇರಿಗೆ ಹೋಗಲು ತುಂಗಾ ನದಿಗೆ ಕಟ್ಟಿದ ಸೇತುವೆ ಕಣ್ಣಿಗೆ ಬೀಳುತ್ತಿತ್ತು. ಸೇತುವೆಯಿಂದ ಸ್ವಲ್ಪ ಮುಂದೆ ನಮ್ಮ ಕಾಲೇಜಿನ ಕಟ್ಟಡವಿತ್ತು. ಅಲ್ಲಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಶೃಂಗೇರಿ ಮಠವಿತ್ತು. ನಮ್ಮ ಮನೆಯಿಂದ ಶೃಂಗೇರಿ ತಲುಪಲು ನಾನು ಸುಮಾರು ಎರಡು ಗಂಟೆ ಪ್ರಯಾಣ ಮಾಡಿದ್ದೆ. ಅಲ್ಲಿ ನಾನು ಮೊದಲು ಹಂಚಿನಮನೆ ಸುಬ್ರಹ್ಮಣ್ಯ ಅವರ ಮನೆಯ ಮುಂದಿನ ಕೊಠಡಿಯಲ್ಲಿ ನನ್ನ ವಸ್ತುಗಳನ್ನೆಲ್ಲಾ ಇಟ್ಟು ಸೀದಾ ಶೃಂಗೇರಿ ಶಾರದಾಂಬೆಯ ದೇವಸ್ಥಾನ ತಲುಪಿದೆ.

ನಾನು ಶೃಂಗೇರಿ ಮಠದೊಳಗೆ ಮೊಟ್ಟ ಮೊದಲ ಬಾರಿ ಒಂಟಿಯಾಗಿ ಪ್ರವೇಶ ಮಾಡಿದ್ದೆ. ಸೀದಾ ತುಂಗಾ ನದಿಯ ಬಳಿ ಹೋಗಿ ಕೈ ಕಾಲು ತೊಳೆದು ಮೊದಲು ವಿದ್ಯಾಶಂಕರ ದೇವಸ್ಥಾನಕ್ಕೆ ಹೋಗಿ ನಂತರ ಶಾರದಾಂಬೆಯ ದೇವಸ್ಥಾನ ಪ್ರವೇಶ ಮಾಡಿದೆ. ಹೂವು ಮತ್ತು ವಸ್ತ್ರಗಳಿಂದ ಅಲಂಕೃತಳಾದ ಪರಮ ಪೂಜ್ಯ ಶಾರದಾಂಬೆಯನ್ನು ನೋಡಲು ಎರಡು ಕಣ್ಣುಗಳು ಸಾಲವು ಎಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಶಾರದಾಂಬೆಯ ಬಳಿ ಸ್ವಲ್ಪ ಕಾಲ ಕುಳಿತ ನಂತರ ನಾನು ಪುನಃ ತುಂಗಾ ನದಿಯ ದಂಡೆಯ ಬಳಿ ಹೋದೆ. ಅಲ್ಲಿ ಕುಳಿತ ನಾನು ಸದ್ದಿಲ್ಲದೇ ನನ್ನ ಮುಂದೆ ಹರಿಯುತ್ತಿದ್ದ ತುಂಗೆಯನ್ನೇ  ದಿಟ್ಟಿಸಿ ನೋಡ ತೊಡಗಿದೆ. ಇದೇ  ತುಂಗೆಯ ದಡದಲ್ಲಿದ್ದ ಶಿವಮೊಗ್ಗೆಯಂತಹ ದೊಡ್ಡ ಸಿಟಿಯನ್ನು ಬಿಟ್ಟು ನಾನೀಗ ಶೃಂಗೇರಿಯಂತಹ ಪವಿತ್ರ ಮತ್ತು ಪ್ರಶಾಂತವಾದ ಸಣ್ಣ ಪಟ್ಟಣವನ್ನು ಸೇರಿ ಬಿಟ್ಟಿದ್ದೆ. ನನ್ನ ವಿದ್ಯಾರ್ಥಿ ಜೀವನದ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿತ್ತು.
------- ಮುಂದುವರಿಯುವುದು-----

Friday, April 24, 2020

ಬಾಲ್ಯ ಕಾಲದ ನೆನಪುಗಳು – ೮೦


ವಿಶ್ವನಾಥಪುರ ತುಂಗಾ ನದಿಯ ತೀರದಲ್ಲಿರುವ ಒಂದು ಚಿಕ್ಕ ಅಗ್ರಹಾರ. ನಮ್ಮೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಈ ಅಗ್ರಹಾರದಲ್ಲಿ ವಾಸಿಸುತ್ತಿದ್ದ ಶ್ರೀಮಂತ ಗೋಪಾಲರಾವ್ ಕುಟುಂಬ ತಲೆ ತಲಾಂತರದಿಂದ ನಮ್ಮ ಗ್ರಾಮದ ಶಾನುಭೋಗ ವೃತ್ತಿಯನ್ನು ಮಾಡುತ್ತಿತ್ತು. ಗೋಪಾಲರಾಯರಿಗೆ ಇಬ್ಬರು ಗಂಡು ಮಕ್ಕಳು. ತಂದೆಯವರ ಮರಣದ ನಂತರ ಹಿರಿಯ ಮಗ ಶಂಕರರಾವ್ ಶಾನುಭೋಗ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಆಸ್ತಿಯ ವಿಂಗಡಣೆಯ ನಂತರ ಅವರ ತಮ್ಮ ಬೆಣ್ಣೆಗುಡ್ಡೆಗೆ ಹೋಗುವ ದಾರಿಯಲ್ಲಿದ್ದ ಮಾಗಲು  ಎಂಬಲ್ಲಿ ಮನೆ ಮತ್ತು ಜಮೀನು ಮಾಡಿಕೊಂಡಿದ್ದರು.

ಗೋಪಾಲರಾಯರ ಕುಟುಂಬಕ್ಕೆ ಸಾಕಷ್ಟು ಜಮೀನು ಹಿಡುವಳಿ ಇತ್ತು. ಆದರೆ ತುಂಬಾ ಹಳೆಯ ಸಂಪ್ರದಾಯದ ಪ್ರಕಾರ ನಮ್ಮ ಗ್ರಾಮದಲ್ಲಿ ಅಡಿಕೆ ತೋಟ ಇರುವವರೆಲ್ಲಾ ಶಾನುಭೋಗರಿಗೆ ಪ್ರತಿ ವರ್ಷವೂ ಸ್ವಲ್ಪ ಅಡಿಕೆಯನ್ನು ಕೊಡುವ ರೂಢಿ ಇತ್ತು. ಅದನ್ನು ಶಾನುಭೋಗರ ಪ್ರತಿನಿಧಿಯೊಬ್ಬರು ಎಲ್ಲಾ ಮನೆಗಳಿಗೂ ಹೋಗಿ ಸಂಗ್ರಹ ಮಾಡುತ್ತಿದ್ದರು. ನಮ್ಮ ಮನೆಯಿಂದಲೂ ಸ್ವಲ್ಪ ಅಡಿಕೆ ಕೊಡಲಾಗುತ್ತಿತ್ತು.

ನಾನು ಅನೇಕ ಬಾರಿ ಶಂಕರರಾಯರನ್ನು ನೋಡಿದ್ದೆ. ಅವರೊಬ್ಬ  ಪ್ರಭಾವಶಾಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರು ಗ್ರಾಮಸ್ಥರನ್ನೆಲ್ಲಾ ತುಂಬಾ ಗೌರವ ಪೂರ್ಣವಾಗಿ ಮಾತನಾಡಿಸುತ್ತಾ ತಮ್ಮಿಂದ  ಆಗಬೇಕಾದ ಕೆಲಸಗಳೇನಾದರೂ ಇದ್ದರೆ ಕೂಡಲೇ ಮಾಡಿ ಕೊಡುತ್ತಿದ್ದರು. ಅವರು ಶಿವಮೊಗ್ಗೆಯಲ್ಲಿದ್ದ ಮಲೆನಾಡು ಅಡಿಕೆ ಬೆಳೆಗಾರರ ಸೊಸೈಟಿಯ (MAMCOS) ಡೈರೆಕ್ಟರ್ ಕೂಡ ಆಗಿ ನಮ್ಮೂರಿನ ಅಡಿಕೆ ಬೆಳೆಗಾರರಿಗೆ ಬೇಕಾದ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿದ್ದರು.

ಅಂದಿನ ನಮ್ಮ ಮಲೆನಾಡಿನಲ್ಲಿ ಕೇವಲ ಎರಡು ಫಸ್ಟ್ ಗ್ರೇಡ್ ಕಾಲೇಜುಗಳಿದ್ದವು. ಚಿಕ್ಕಮಗಳೂರಿನಲ್ಲಿ ಒಂದು ಕಾಲೇಜಿದ್ದರೂ ಅದು ಪ್ರಸಿದ್ಧಿ ಪಡೆದಿರಲಿಲ್ಲ. ಅಲ್ಲದೇ ಅಲ್ಲಿ ವಸತಿ ಸೌಕರ್ಯಗಳೂ ಅಷ್ಟಿರಲಿಲ್ಲ. ಆದರೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು ತುಂಬಾ ಪ್ರಸಿದ್ಧಿ ಪಡೆದಿತ್ತು. ಆದ್ದರಿಂದ ಮಲೆನಾಡಿನ ವಿದ್ಯಾರ್ಥಿಗಳು ಆ ಕಾಲೇಜಿಗೇ ಮುಗಿ ಬೀಳುತ್ತಿದ್ದರು. ಅಲ್ಲದೇ ಮಲೆನಾಡಿನ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಮಾರಲು ಶಿವಮೊಗ್ಗೆಗೇ ಹೋಗಬೇಕಿತ್ತು. ಶಿವಮೊಗ್ಗ ಸಿಟಿಯಲ್ಲಿ ಎಲ್ಲ ಬಗೆಯ ಸೌಲಭ್ಯಗಳೂ ಲಭ್ಯವಿದ್ದವು. ಅದನ್ನು “ಗೇಟ್ ವೇ ಅಫ್ ಮಲ್ನಾಡ್” ಎಂದು ಕರೆಯಲಾಗುತ್ತಿತ್ತು.

ಮಲೆನಾಡಿನಲ್ಲೊಂದು ಹೊಸ ಕಾಲೇಜು
೧೯೬೦ನೇ ಇಸವಿಯ ವೇಳೆಗೆ ಮಲೆನಾಡಿನಲ್ಲಿ ಇನ್ನೊಂದು ಕಾಲೇಜ್ ಸ್ಥಾಪಿಸುವ ಪ್ರಯತ್ನಗಳು ಆರಂಭವಾದವು. ಆದರೆ ಮೊದಮೊದಲು ಈ ಕಾರ್ಯದಲ್ಲಿ ಯಾವುದೇ ಸಫಲತೆ ಕಾಣಲಿಲ್ಲ. ಅದಕ್ಕೆ ಮುಖ್ಯ ಕಾರಣ ಹೊಸ ಕಾಲೇಜನ್ನು ಎಲ್ಲಿ ಸ್ಥಾಪಿಸಬೇಕೆಂಬ ಬಗ್ಗೆ ಒಮ್ಮತವಿರಲಿಲ್ಲ. ಮುಖ್ಯವಾಗಿ ಶೃಂಗೇರಿ, ಕೊಪ್ಪ ಮತ್ತು ತೀರ್ಥಹಳ್ಳಿ ಪಟ್ಟಣಗಳ ಮಧ್ಯೆ ಈ ಬಗ್ಗೆ ತೀವ್ರ ಪೈಪೋಟಿ ಇತ್ತು. ಈ ಪಟ್ಟಣಗಳ ಬಗ್ಗೆ ಯಾವುದೇ ಒಮ್ಮತ ಮೂಡದಿದ್ದರಿಂದ ಮೂರು ಪಟ್ಟಣಗಳ ಮುಖ್ಯಸ್ಥರೂ ಬೇರೆ ಬೇರೆಯಾಗಿ ತಮ್ಮ ಪಟ್ಟಣದಲ್ಲೇ ಹೊಸ ಕಾಲೇಜು ಸ್ಥಾಪನೆ ಮಾಡುವ ಪ್ರಯತ್ನ ಮುಂದುವರಿಸಿದರು.

ಶೃಂಗೇರಿಯ ಜನಗಳಿಗೆ ತಮ್ಮ ಪಟ್ಟಣದಲ್ಲೇ ಕಾಲೇಜು ಸ್ಥಾಪಿಸಬೇಕೆಂಬ ಉದ್ದೇಶಕ್ಕೆ ಹಲವು ಮುಖ್ಯ ಕಾರಣಗಳಿದ್ದವು. ಪುರಾತನ ಕಾಲದಿಂದ ಶೃಂಗೇರಿಯು ಒಂದು ಯಾತ್ರಾಸ್ಥಳ ಎಂದು ಭಾರತದಲ್ಲೇ ಪ್ರಸಿದ್ಧವಾಗಿತ್ತು. ಕೇರಳದ ಕಾಲಡಿಯಲ್ಲಿ ಜನಿಸಿದ್ದ ಪರಮ ಪೂಜ್ಯ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯೂ ಒಂದಾಗಿತ್ತು . ಮೈಸೂರಿನ ಮಹಾರಾಜರು ಶೃಂಗೇರಿಯನ್ನು ಒಂದು ಜಹಗೀರಾಗಿ ಮಠದ ವಶಕ್ಕೆ ನೀಡಿದ್ದರು. ಶೃಂಗೇರಿ ತಾಲೂಕಿನ ಸಕಲ ಕಂದಾಯವೂ ಶ್ರೀ ಮಠಕ್ಕೆ ಸಂದಾಯವಾಗುತ್ತಿತ್ತು. ಆದರೆ ದೇಶಕ್ಕೆ ಸ್ವಾತಂತ್ರ ಬಂದ ನಂತರ ಈ ಜಹಗೀರನ್ನು ರದ್ದುಪಡಿಸಲಾಯಿತು.

ಹುಲಗಾರು ಕುಟುಂಬ
ಕಿಗ್ಗದ ಋಷ್ಯಶೃಂಗ ಮುನಿಯ ದೇವಸ್ಥಾನದ ಹತ್ತಿರ ಇದ್ದ ಹುಲಗಾರು ಕುಟುಂಬ ತುಂಬಾ ಪ್ರಸಿದ್ಧ ಕುಟುಂಬವಾಗಿತ್ತು. ಈ ಕುಟುಂಬದ ಯಜಮಾನರು ವಂಶ ಪಾರಂಪರ್ಯವಾಗಿ ಕಿಗ್ಗ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಶೃಂಗೇರಿ ಮಠದ ಆಡಳಿತದಲ್ಲಿಯೂ ಅವರಿಗೆ ವಿಶೇಷ ಪಾತ್ರವಿತ್ತು. ಶೃಂಗೇರಿಯ ಜಗದ್ಗುರುಗಳು ಅವರಿಂದ ಮಠದ ಆಡಳಿತದ ವಿಷಯವಾಗಿ ಆಗಾಗ ಸಲಹೆ ಪಡೆಯುತ್ತಿದ್ದರಂತೆ. ಆ ಸಮಯದಲ್ಲಿ ಚಂದ್ರಮೌಳಿ ರಾಯರು ಹುಲುಗಾರ್ ಕುಟುಂಬದ ಯಜಮಾನರಾಗಿದ್ದರು. ಅವರೊಬ್ಬ ದಕ್ಷ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಶೃಂಗೇರಿ ಪಟ್ಟಣದ ಮುನಿಸಿಪಾಲಿಟಿಗೆ ಪ್ರಾರಂಭದಿಂದ ಸುಮಾರು ೧೨ ವರ್ಷಗಳ ತನಕ ಅವರೇ ಅಧ್ಯಕ್ಷರಾಗಿದ್ದರು.

ಮಣಿಪಾಲ್ ಅಕ್ಯಾಡೆಮಿಯೊಂದಿಗೆ ಒಪ್ಪಂದ
ಶೃಂಗೇರಿಯಲ್ಲಿ ಕಾಲೇಜು ಸ್ಥಾಪನೆ ಮಾಡಲು ಚಂದ್ರಮೌಳಿ ರಾಯರ ಅಧ್ಯಕ್ಷತೆಯಲ್ಲಿ ಭಾರತಿ ವಿದ್ಯಾ ಸಂಸ್ಥೆ ಎಂಬ ಒಂದು ಸಮಿತಿ ಮಾಡಲಾಗಿತ್ತು. ಆಗ ಶೃಂಗೇರಿ ತಾಲೂಕ್ ಪ್ರೆಸಿಡೆಂಟ್ ಆಗಿದ್ದ ಕೆ ಎನ್ ವೀರಪ್ಪ ಗೌಡರು ಇನ್ನೊಬ್ಬ ಮುಂದಾಳಾಗಿದ್ದರು. ಇವರಿಬ್ಬರ  ನೇತೃತ್ವದ ಸಮಿತಿಯು ಕಾಲೇಜು ಸ್ಥಾಪನೆಯನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿತ್ತು. ಆಗ ಅವರಿಗೆ ಡಾಕ್ಟರ್ ಟಿ ಎಂ ಎ ಪೈ ನೇತೃತ್ವದ ಮಣಿಪಾಲ್ ಅಕ್ಯಾಡೆಮಿಯಿಂದ ಒಂದು ಪ್ರಸ್ತಾಪ ಬಂತು. ಅದರ ಪ್ರಕಾರ ಭಾರತಿ ವಿದ್ಯಾ ಸಂಸ್ಥೆ ಎರಡು ಲಕ್ಷ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹಮಾಡಿ ಅಕ್ಯಾಡೆಮಿಗೆ ಕೊಡಬೇಕಿತ್ತು. ಅಕ್ಯಾಡೆಮಿಯು ಕೂಡ ಒಂದು ಲಕ್ಷ ರೂಪಾಯಿ ಕೊಡುಗೆ ನೀಡಲಿತ್ತು. ಅಲ್ಲದೇ  ಕಾಲೇಜನ್ನು ಸ್ಥಾಪಿಸಿ ಅದನ್ನು ನಡೆಸುವ ಜವಾಬ್ದಾರಿ ಅಕ್ಯಾಡೆಮಿಯದಾಗಿತ್ತು. ಅಕ್ಯಾಡೆಮಿಯು ಅಲ್ಲಿಯವರೆಗೆ ಮಣಿಪಾಲ, ಉಡುಪಿ, ಕಾರ್ಕಳ, ಮೂಡಬಿದ್ರೆ, ಮುಲ್ಕಿ ಮತ್ತು ಕುಂದಾಪುರದಲ್ಲಿ ಕಾಲೇಜುಗಳನ್ನು ಸ್ಥಾಪಿಸಿ ಅವನ್ನು ತುಂಬಾ ಯಶಸ್ವಿಯಾಗಿ ನಡೆಸುತ್ತಿತ್ತು.

ಭಾರತಿ ವಿದ್ಯಾ ಸಂಸ್ಥೆ  ತುಂಬಾ ಕಷ್ಟಪಟ್ಟು ಎರಡು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಅಕ್ಯಾಡೆಮಿಗೆ ಕೊಟ್ಟುಬಿಟ್ಟಿತು. ೧೯೬೪ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ತುಂಗಾ ನದಿಯ ಸೇತುವೆಯ ಸಮೀಪದಲ್ಲಿ ಹೊಸ ಕಾಲೇಜಿನ ಅಡಿಪಾಯವನ್ನು ಹಾಕಲಾಯಿತು. ೧೯೬೫ನೇ ಇಸವಿಯ ಜೂನ್ ತಿಂಗಳ ವೇಳೆಗೆ ಒಂದು ತಾತ್ಕಾಲಿಕ ಕಟ್ಟಡವೂ ತಯಾರಾಯಿತು. ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ ಯು ಸಿ ತರಗತಿಗಳನ್ನು ಪ್ರಾರಂಭ ಮಾಡಲು ಮನ್ನಣೆಯೂ ದೊರೆಯಿತು.

ವಿದ್ಯಾರ್ಥಿಗಳಿಗಾಗಿ ಹುಡುಕಾಟ
ಆಗ ಭಾರತಿ ವಿದ್ಯಾ ಸಂಸ್ಥೆ ಒಂದು ಕಷ್ಟಕರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಆ ವರ್ಷ ಶೃಂಗೇರಿ ಹೈಸ್ಕೂಲಿನಿಂದ ಸುಮಾರು ೪೦ ಮಂದಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪಾಸ್ ಮಾಡಿದ್ದರು. ಅದರಲ್ಲಿ ಕೆಲವರು (ನನ್ನ ಅಣ್ಣನೂ ಸೇರಿ) ಬೇರೆ ಬೇರೆ ಊರುಗಳಿಗೆ ಪಿ ಯು ಸಿ ಓದಲು ಹೋಗಿ ಬಿಟ್ಟಿದ್ದರು. ಸ್ವಲ್ಪ ಮಂದಿಗೆ ಅವರ ಜಮೀನನ್ನು ನೋಡಬೇಕಾಗಿದ್ದರೆ, ಇನ್ನು ಕೆಲವರಿಗೆ ಮುಂದೆ ಓದುವುದರಲ್ಲಿ ಆಸಕ್ತಿಯೇ ಇರಲಿಲ್ಲ. ಇನ್ನು ಸ್ವಲ್ಪ ಮಂದಿಗೆ ಓದಲು ಆಸಕ್ತಿಯಿದ್ದರೂ ಅವರ ತಂದೆ ತಾಯಿಯರಿಗೆ ಎಸ್ ಎಸ್ ಎಲ್ ಸಿ  ಪಾಸ್ ಮಾಡಿದ್ದು "ಬೇಕಾದಷ್ಟು" ಆಯಿತೆಂಬ ತೃಪ್ತಿ ಬಂದು ಬಿಟ್ಟಿತ್ತು.

ಅಕ್ಯಾಡೆಮಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಕಾಲೇಜಿಗೆ ಸಾಕಷ್ಟು ವಿದ್ಯಾರ್ಥಿಗಳು ಸೇರುವಂತೆ ಮಾಡುವುದು ಭಾರತಿ ವಿದ್ಯಾ ಸಂಸ್ಥೆಯ ಜವಾಬ್ದಾರಿಯಾಗಿತ್ತು. ಆ ಜವಾಬ್ದಾರಿ ಅದರ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಸಂಸ್ಥೆಯು ಪ್ರತಿ ಸದಸ್ಯನಿಗೂ ಇಂತಿಷ್ಟು ವಿದ್ಯಾರ್ಥಿಗಳನ್ನು ಒಟ್ಟು ಮಾಡಲೇ ಬೇಕೆಂಬ ಕೋಟಾ ನಿಗದಿ ಮಾಡಿಬಿಟ್ಟಿತು. ನಮ್ಮ ಹೆಬ್ಬಾರ ಸಮಾಜದಿಂದ ತಲವಾನೆ ಮಂಜಪ್ಪಯ್ಯನವರು ಆಡಳಿತ ಸಂಸ್ಥೆಯ ಸದಸ್ಯರಾಗಿದ್ದರು. ಅವರ ತಮ್ಮ ಶ್ರೀನಿವಾಸ್ ಅವರು ನನಗೆ ಶಿವಮೊಗ್ಗೆಯಲ್ಲಿ ಹಾಸ್ಟೆಲಿನಲ್ಲಿ ಫ್ರೀ ಸೀಟ್ ದೊರೆಯಲು ಮಾಡಿದ ಸಹಾಯದ ಬಗ್ಗೆ ನಾನು ಹಿಂದೆಯೇ ಬರೆದಿದ್ದೇನೆ.
ನಮ್ಮೂರ  ಶಾನುಭೋಗ ಶಂಕರರಾಯರೂ ಕೂಡ ಸಮಿತಿಯ ಒಬ್ಬ ಸದಸ್ಯರಾಗಿದ್ದರು. ಅಲ್ಲದೇ ಚಂದ್ರಮೌಳಿ ರಾಯರ ಹತ್ತಿರದ ಸಂಬಂಧಿಯೂ ಆಗಿದ್ದರು. ಹುಲುಗಾರು ಕುಟುಂಬದವರು ನಮ್ಮೂರಿನಿಂದ  ಎರಡು ಮೈಲಿ ದೂರದಲ್ಲಿದ್ದ ಉತ್ತಮೇಶ್ವರದಲ್ಲಿ ಒಂದು ರೈಸ್ ಮಿಲ್ ನಡೆಸುತ್ತಿದ್ದರು. ಶಂಕರರಾಯರೇ ಆ ಮಿಲ್ಲಿನ ನಿರ್ವಹಣೆ ಮಾಡುತ್ತಿದ್ದರು.

ನಾವು ಚಿಕ್ಕವರಾಗಿದ್ದಾಗ ಈ ಎರಡು ಕುಟುಂಬಗಳಿಗೆ ಸಂಬಂಧಿಸಿದ ಒಂದು ದುರ್ಘಟನೆಯನ್ನು ಕೇಳಿದ್ದೆವು. ಚಂದ್ರಮೌಳಿ ರಾಯರ  ಹಿರಿಯ ಮಗ ರಾಜ ಒಬ್ಬ ಆಕರ್ಷಕ ವ್ಯಕ್ತಿತ್ವದ ತರುಣನಾಗಿದ್ದ. ಅವನೊಮ್ಮೆ ತನ್ನ ಸ್ನೇಹಿತರೊಡನೆ ವಿಶ್ವನಾಥಪುರಕ್ಕೆ ಬಂದಿದ್ದ. ಆಗ ಅವನು ಸ್ನೇಹಿತರೊಡನೆ ಪ್ರವಾಹದಲ್ಲಿದ್ದ ತುಂಗಾ ನದಿಯಲ್ಲಿ ದೋಣಿಯಲ್ಲಿ ವಿಹಾರ ಮಾಡುವುದಕ್ಕೆ ಹೋದ. ದುರದೃಷ್ಟವಶಾತ್ ಪ್ರವಾಹದ ಹೊಡೆತಕ್ಕೆ ದೋಣಿ ಮುಳುಗತೊಡಗಿ ಎಲ್ಲರೂ ನದಿಯೊಳಗೆ ಹಾರಿಬಿಟ್ಟರು. ರಾಜನೇನೋ ಒಳ್ಳೆಯ ಈಜುಗಾರನೇ ಆಗಿದ್ದ. ಆದರೆ ಅವನ ಸ್ನೇಹಿತರಲ್ಲಿ ಕೆಲವರಿಗೆ ಈಜು ಬರುತ್ತಿರಲಿಲ್ಲ. ರಾಜ ಕೌಶಲ್ಯದಿಂದ ಇಬ್ಬರು ಸ್ನೇಹಿತರನ್ನು ದಡ ಸೇರಿಸಿದ. ಆದರೆ ಉಳಿದೊಬ್ಬನನ್ನು ಉಳಿಸಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ. ಚಂದ್ರಮೌಳಿ ರಾಯರ ಮತ್ತು ಶಂಕರರಾಯರ ಕುಟುಂಬಗಳಿಗೆ ಇದೊಂದು ಎಂದೂ ಮರೆಯಲಾಗದ ದುರ್ಘಟನೆಯಾಗಿ  ಹೋಯಿತು. 

ಶಂಕರರಾಯರಿಂದ ಸಂದೇಶ
ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ತಂದೆಯವರಿಗೆ  ಶಂಕರರಾಯರಿಂದ ನನ್ನನ್ನು ಅವರ ಬಳಿ ಕಳಿಸುವಂತೆ ಒಂದು ಸಂದೇಶ ಬಂತು. ನನಗೆ ಆಗ ಶೃಂಗೇರಿಯಲ್ಲಿ ಸ್ಥಾಪನೆಯಾಗುತ್ತಿರುವ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ ಇದೆ ಎಂಬ ವಿಷಯ ತಿಳಿದಿರಲಿಲ್ಲ. ನಾನು ಅಲ್ಲಿಯವರೆಗೆ ವಿಶ್ವನಾಥಪುರಕ್ಕೆ ಎಂದೂ ಹೋಗಿರಲಿಲ್ಲ. ಹಾಗೂ ಶಂಕರರಾಯರ ಕುಟುಂಬದ ಬಗ್ಗೆ ಏನೂ ಅರಿವಿರಲಿಲ್ಲ. ಆದ್ದರಿಂದ ನನಗೆ ಆ ಬಗ್ಗೆ ತುಂಬಾ ಕುತೂಹಲವಿತ್ತು.

ನಾನು ಈ ಮೊದಲೇ ಶಂಕರರಾಯರ ಧೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿತ್ವದ ಬಗ್ಗೆ ಬರೆದಿದ್ದೇನೆ. ಅದರ ಅರಿವಿದ್ದ ನನಗೆ ಅವರೊಡನೆ ಹೇಗೆ ವರ್ತಿಸಬೇಕೆಂಬ ಬಗ್ಗೆ ಮನಸ್ಸಿನಲ್ಲಿ ಸ್ವಲ್ಪ ಗೊಂದಲವಿತ್ತು. ಆ ದಿನ ಬೆಳಿಗ್ಗೆ ನಾನು ತುಂಗಾ ನದಿಯ ಸರಹದ್ದಿನಲ್ಲಿ ನಡೆಯುತ್ತಾ ದಟ್ಟವಾದ ಕಾಡನ್ನು ದಾಟಿ ವಿಶಾಲವಾದ ಬತ್ತದ ಗದ್ದೆಯೊಳಗೆ ಪ್ರವೇಶ ಮಾಡಿದೆ. ಅದರ ದೂರದ ಅಂಚಿನಲ್ಲಿ ನನಗೆ ವಿಶ್ವನಾಥಪುರ ಅಗ್ರಹಾರ ಕಣ್ಣಿಗೆ ಬಿತ್ತು.  ಅಗ್ರಹಾರದ ಒಳಗೆ ಬಲಭಾಗದಲ್ಲಿ ಶಂಕರರಾಯರು ವಾಸ ಮಾಡುತ್ತಿದ್ದರು. ನಾನು ಹೋದಾಗ  ಶಂಕರರಾಯರು ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದ್ದರು. ಅವರು ಗಟ್ಟಿಯಾಗಿ ಹೇಳುತ್ತಿದ್ದ ಮಂತ್ರ ಪಠಣ ನನ್ನ ಕಿವಿಗೆ ಬೀಳುತ್ತಿತ್ತು. ಅವರ ಪತ್ನಿ ನನಗೆ ಕುಳಿತುಕೊಳ್ಳಲು ಹೇಳಿ ಒಂದು ಲೋಟ ಕಾಫಿ ಕುಡಿಯಲು ಕೊಟ್ಟರು. ಅಗ್ರಹಾರದ ಮಧ್ಯೆ ಒಂದು ದೇವಸ್ಥಾನವಿತ್ತು. ನನಗೆ ನಾನು ಬೇರಾವುದೋ ಪ್ರಪಂಚದಲ್ಲಿರುವಂತೆ ಅನಿಸ ತೊಡಗಿತು.

ಸುಮಾರು ಅರ್ಧ ಗಂಟೆಯ ನಂತರ ಶಂಕರರಾಯರು ದೇವರ ಪೂಜೆ ಮುಗಿಸಿ ಹೊರಬಂದು ತಮ್ಮ ಕಂಚಿನ ಕಂಠದಲ್ಲಿ ನನ್ನೊಡನೆ ಮಾತನಾಡ  ತೊಡಗಿದರು. ಅವರ ಮೊದಲ ಪ್ರಶ್ನೆ ಅಷ್ಟೊಂದು ಹೆಚ್ಚಿನ ಮೆರಿಟ್ ವಿದ್ಯಾರ್ಥಿಯಾದ ನಾನು ಕಾಲೇಜಿಗೆ ಹೋಗದೆ ಮನೆಯಲ್ಲಿ ಕುಳಿತಿರಲು ಹೇಗೆ ಸಾಧ್ಯ ಎಂದಾಗಿತ್ತು. ನಾನು ಅದಕ್ಕೆ ಏನೂ ಉತ್ತರ ಕೊಡಲಿಲ್ಲ. ಆಗ ಅವರು ಶೃಂಗೇರಿಯಲ್ಲಿ ಸ್ಥಾಪಿತವಾಗುತ್ತಿರುವ ಕಾಲೇಜಿಗೆ ನನ್ನಂತಹ ಮೆರಿಟ್ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ಹೇಳಿದರು. ಆಗ ನಾನು ನಮ್ಮ ಕುಟುಂಬದ ಆರ್ಥಿಕ ಸಮಸ್ಯೆಗಳ ಬಗ್ಗೆ ಹೇಳಲೇ ಬೇಕಾಯಿತು. ಆಗ ಅವರು ನನಗೆ ಮುಂದಿನ ಭಾನುವಾರ ಸಂಜೆ ಅವರ ಮನೆಗೆ ನನ್ನ ಮಾರ್ಕ್ಸ್ ಕಾರ್ಡ್ ಮತ್ತು ಟಿಸಿ ತೆಗೆದುಕೊಂಡು ಬರುವಂತೆ ಹೇಳಿದರು. ನಾನು ಆ ರಾತ್ರಿ ಅವರ ಮನೆಯಲ್ಲೇ ಇದ್ದು ಮಾರನೇ ದಿನ ಬೆಳಿಗ್ಗೆ ಅವರೊಡನೆ ಶೃಂಗೇರಿಗೆ ಹೋಗಬೇಕಿತ್ತು.

ನಾನು ಅವರು ಹೇಳಿದಂತೆ ಮುಂದಿನ ಭಾನುವಾರ ಸಂಜೆ ಅವರ ಮನೆಗೆ ಹೋದೆ. ನನ್ನನ್ನು ತುಂಬಾ ಆದರದಿಂದ ಬರಮಾಡಿಕೊಂಡು ರಾತ್ರಿ ಊಟಕ್ಕೆ ಕರೆದರು.  ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದ ಶಂಕರರಾಯರು  ರಾತ್ರಿ ಊಟಕ್ಕೆ ಮೊದಲು ದೇವರ ಪೂಜೆ ಮಾಡಿದರು. ಊಟದ ನಂತರ ರಾತ್ರಿ ಎಷ್ಟೋ  ಹೊತ್ತು ರೇಡಿಯೋದಲ್ಲಿ ಶಾಸ್ತ್ರೀಯ ಸಂಗೀತ ಕೇಳುತ್ತಾ ಇದ್ದರು.

ಮಾರನೇ ದಿನ ನಾವು ತುಂಗಾ ನದಿ ದಾಟಿ ಶೃಂಗೇರಿ ತಲುಪಿದೆವು. ಅಲ್ಲಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹುಲುಗಾರ್ ಕುಟುಂಬದ ಬಂಗಲೆಯೊಳಗೆ ಹೋದೆವು. ಆಗ ಅಲ್ಲಿ ಶೃಂಗೇರಿ ಕಾಲೇಜಿನ ತಾತ್ಕಾಲಿಕ ಆಫೀಸ್ ಕಾರ್ಯಾಚರಣೆ ಮಾಡುತ್ತಿತ್ತು. ಚಂದ್ರಮೌಳಿರಾಯರ ಮನೆಯವರು ಯಾರೂ ಆಗ ಅಲ್ಲಿರಲಿಲ್ಲ. ಶಂಕರರಾಯರು ನನನ್ನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾಕ್ಟರ್ ಕೆ ಬಿ ರಾಮಕೃಷ್ಣರಾಯರಿಗೆ ಪರಿಚಯ ಮಾಡಿಸಿದರು.

ಸ್ವಲ್ಪ ಸಮಯದ ನಂತರ ನಾವು ಆಫೀಸಿನಿಂದ ಹೊರಬಂದೆವು. ಶಂಕರರಾಯರು ನನ್ನ ಕೈಯಲ್ಲಿ ರಶೀದಿಗಳ ಒಂದು ಕಂತೆಯನ್ನಿಟ್ಟು ನಾನಿನ್ನು ಊರಿಗೆ ಹೋಗಿ ತಿಂಗಳ ಕೊನೆಯಲ್ಲಿ ಪುನಃ ಅವರ ಮನೆಗೆ ಬರುವಂತೆ ಹೇಳಿದರು. ಉದ್ದೇಶ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಹಾಜರಿರಲಿಕ್ಕೆ.

ನಾನೊಬ್ಬ ವಿ ಐ ಪಿ ಸ್ಟೂಡೆಂಟ್ ಆಗಿ ಬಿಟ್ಟೆ!
ನಾನು ಊರಿಗೆ ಹೋಗಲು ಅಲ್ಲಿಂದ ಹೊರಟು ಬಿಟ್ಟೆ. ನಾನಿನ್ನೂ ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಂದು ಫಿಯಟ್ ಕಾರು ನನ್ನ ಪಕ್ಕದಲ್ಲಿ ಬಂದು ನಿಂತು ಬಿಟ್ಟಿತು. ಅದರೊಳಗಿಂದ ಹೊರಬಂದ ಆಕರ್ಷಕ ವ್ಯಕ್ತಿತ್ವದ ತರುಣರೊಬ್ಬರು ನನಗೆ ನಿಲ್ಲುವಂತೆ ಹೇಳಿದರು. ಅವರು ಚಂದ್ರಮೌಳಿರಾಯರ ಹಿರಿಯ ಮಗ ಶ್ರೀಕಂಠರಾಯರಂತೆ. ಒಮ್ಮೆಗೇ ಅವರು ನನ್ನೊಡನೆ ಶೃಂಗೇರಿ ಕಾಲೇಜಿಗೆ ನನ್ನಂತಹ ಮೆರಿಟ್ ವಿದ್ಯಾರ್ಥಿಗಳ ಅವಶ್ಯಕತೆ ಇದೆ ಎಂದು ಹೇಳಿದರು. ಹಾಗೆಯೇ ನಾನು ತಿಂಗಳ ಕೊನೆಯಲ್ಲಿ ನಡೆಯುವ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲೇ ಬೇಕೆಂದೂ ಹೇಳಿ ಬಿಟ್ಟರು.  ಒಹ್! ಇದ್ದಕ್ಕಿದ್ದಂತೆ ನಾನೊಬ್ಬ ವಿ ಐ ಪಿ ಸ್ಟೂಡೆಂಟ್ ಆಗಿ ಬಿಟ್ಟಿದ್ದೆ! ನಾನು ಬೇರೊಂದು ಲೋಕಕ್ಕೆ ಪ್ರವೇಶ ಮಾಡಿದಂತೆ ನನಗೆ ಅನಿಸತೊಡಗಿತು.

ಬೇಡಿಕೆ ಇಲ್ಲದೇ ಕೊಡುಗೆ! ಇದು ನಿಜವೇ?
ಶ್ರೀಕಂಠರಾಯರು ತೆರಳಿದ ಮೇಲೆ ನಾನು ನನ್ನ ಜೇಬಿನಲ್ಲಿದ್ದ ರಶೀದಿಗಳನ್ನು ತೆಗೆದು ಅದರಲ್ಲಿ ಬರೆದ ಹಣದ ಮೊತ್ತ ಎಷ್ಟೆಂದು ನೋಡಿದೆ. ಒಮ್ಮೆಗೇ ನನ್ನ ತಲೆ ತಿರುಗಿದಂತಾಯಿತು. ಅವುಗಳ ಮೊತ್ತ ೩೫೦ ರೂಪಾಯಿ ಆಗಿತ್ತು! ಅದು ಕಾಲೇಜಿನ ಒಂದು ವರ್ಷದ ಪೂರ್ತಿ ಫೀ ಆಗಿತ್ತು! ಯಾವುದೇ ವ್ಯಕ್ತಿಯೊಬ್ಬ ತನಗೆ ಏನೇನೂ ಸಂಬಂಧವಿಲ್ಲದ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕಾಗಿ ಇಷ್ಟೊಂದು  ಹಣವನ್ನು ಒಮ್ಮೆಗೇ ಕೊಡಲು ಸಾಧ್ಯವೆಂದು ನನಗೆ ನಂಬಲಾಗಲಿಲ್ಲ. ತುಂಬಾ ದೊಡ್ಡ ಶ್ರೀಮಂತರೂ ಕೂಡ ಬೇರೊಬ್ಬರಿಗಾಗಿ ಕೇವಲ ಐದು ರೂಪಾಯಿಗಳನ್ನು ಖರ್ಚು ಮಾಡಲು ತಯಾರಿರಲಿಲ್ಲವೆಂದು ನನಗೆ ಗೊತ್ತಿತ್ತು. ಆದರೆ ಇಲ್ಲಿ ಒಬ್ಬ ವ್ಯಕ್ತಿ ಯಾವುದೇ ಪ್ರಚಾರವಿಲ್ಲದೇ ಇಷ್ಟು ದೊಡ್ಡ ಮೊತ್ತವನ್ನು  ತನಗೆ ಯಾವ ರೀತಿಯಲ್ಲೂ ಸಂಭಂದವಿಲ್ಲದ ಬೇರೊಬ್ಬ ಹುಡುಗನಿಗಾಗಿ ಖರ್ಚು ಮಾಡಿಬಿಟ್ಟಿದ್ದ! ವಿಚಿತ್ರವೆಂದರೆ ಆ ಹುಡುಗನಿಂದ ಈ ಸಹಾಯಕ್ಕಾಗಿ ಯಾವುದೇ ಬೇಡಿಕೆ ಬಂದೇ ಇರಲಿಲ್ಲ!
------- ಮುಂದುವರಿಯುವುದು-----


Tuesday, April 21, 2020

ಬಾಲ್ಯ ಕಾಲದ ನೆನಪುಗಳು – ೭೯


ಮೇ ತಿಂಗಳ ಕೊನೆಯಲ್ಲಿ ನಾನು ಹೊಕ್ಕಳಿಕೆಗೆ ಹೋಗಿ ಗೌರಕ್ಕ ಮತ್ತು ರುಕ್ಮಿಣಕ್ಕನ ಮನೆಗಳಲ್ಲಿ ಒಂದು ವಾರ ಕಳೆದೆ. ನನಗೆ ಅಕ್ಕಂದಿರ ಮನೆಯಲ್ಲಿದ್ದಾಗ ಸಮಯ ಹೋದುದೇ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಮದ್ಯಾಹ್ನದ ಊಟವಾದ ನಂತರ ಗೌರಕ್ಕನ ಮನೆಯಿಂದ ಹೊರಟು ಕೊಪ್ಪಕ್ಕೆ ಬಸ್ ಹಿಡಿಯಲು ಗಡಿಕಲ್ಲಿಗೆ ಬಂದೆ. ಅಲ್ಲಿ ನನಗೆ ಆ ದಿನದ ನ್ಯೂಸ್ ಪೇಪರಿನಲ್ಲಿ ಎಸ್ ಎಸ್ ಎಲ್ ಸಿ  ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆಯೆಂದು ತಿಳಿಯಿತು. ಅಲ್ಲಿನ ಅಂಗಡಿಯೊಂದರಲ್ಲಿದ್ದ ಪೇಪರ್ ನೋಡಿದಾಗ ನಾನು ಪ್ರಥಮ ದರ್ಜೆಯಲ್ಲಿ ಪಾಸ್ ಆದುದು ತಿಳಿಯಿತು.

ನಾನು ರಾತ್ರಿಯಾಗುವಾಗ ಮನೆ ತಲುಪಿದೆ. ನನ್ನ ತಂದೆ ತಾಯಿಯರಿಗೆ ನಾನು ಪಾಸ್ ಆದ ಸಮಾಚಾರ ಪುಟ್ಟಣ್ಣನ ಮೂಲಕ ಗೊತ್ತಾಗಿತ್ತು. ಪುಟ್ಟಣ್ಣನೂ ಪಾಸಾಗಿದ್ದ. ನಾವಿಬ್ಬರೂ ಜೀವನದಲ್ಲಿ ಆ ಮಟ್ಟ ತಲುಪಲು ನಮ್ಮ ಅಣ್ಣನೇ ಕಾರಣನಾಗಿದ್ದ. ಅಣ್ಣನಿಂದ ನಮಗೆ ಅಭಿನಂದನೆ ಮಾಡಿ ಬರೆದ ಪತ್ರವೂ ಬಂತು.

ನಾನು ಶಿವಮೊಗ್ಗೆಗೆ ಹೋಗಿ ನನ್ನ ಮಾರ್ಕ್ಸ್ ಕಾರ್ಡ್ ಮತ್ತು ಟ್ರಾನ್ಸ್ಫರ್ ಸರ್ಟಿಫಿಕೇಟುಗಳನ್ನು ತೆಗೆದುಕೊಂಡೆ. ನನಗೆ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಅತ್ತ್ಯುತ್ತಮ ಅಂಕಗಳು ಬಂದಿದ್ದವು. ಅರುಣಾಚಲಂ ಮೇಷ್ಟ್ರು ಮತ್ತು ಬೇರೆ ನನ್ನ ಹಿತೈಷಿಗಳು ನನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನಿಸಿದಾಗ ನಾನು ನನ್ನ ಕುಟುಂಬಕ್ಕೆ ನನ್ನನ್ನು ಮುಂದೆ ಕಾಲೇಜಿನಲ್ಲಿ ಓದಿಸುವಷ್ಟು ಅನುಕೂಲ ಇಲ್ಲವೆಂದು ಹೇಳಿಬಿಟ್ಟೆ. ಮೇಷ್ಟ್ರು ನನಗೆ "ಹಲ್ಲಿದ್ದವರಿಗೆ ಕಡಲೆ ಇಲ್ಲ ಮತ್ತು ಕಡಲೆ ಇದ್ದವರಿಗೆ ಹಲ್ಲಿಲ್ಲ" ಎಂಬ  ಗಾದೆಯನ್ನು ಹೇಳಿ ತಮ್ಮ ವ್ಯಥೆಯನ್ನು ವ್ಯಕ್ತ ಪಡಿಸಿದರು.

ನಾನು ಕಾಲೇಜಿನಲ್ಲಿ ಓದುವ ಆಸೆಯನ್ನು ಕೈಬಿಟ್ಟಿದ್ದೆ. ಆ ದಿನಗಳಲ್ಲಿ ಪೋಸ್ಟ್ ಆಫೀಸಿನ ಕ್ಲರಿಕಲ್ ನೌಕರಿಗೆ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ  ಮಾರ್ಕ್ಸ್ ಆಧಾರದ ಮೇಲೆ ಡೈರೆಕ್ಟ್ ಸೆಲೆಕ್ಷನ್ ಮಾಡುತ್ತಿದ್ದರು. ಆಗಿನ್ನೂ ನನಗೆ ೧೮ ವರ್ಷ ವಯಸ್ಸಾಗಿರಲಿಲ್ಲ. ಆದ್ದರಿಂದ ನಾನು ಮುಂದಿನ ವರ್ಷದವರೆಗೆ ಆ ನೌಕರಿಗಾಗಿ ಕಾಯಬೇಕಾಗಿತ್ತು. ನಾನು ನನ್ನ ತಂದೆ ತಾಯಿಯವರ ಹತ್ತಿರ ವರ್ಷವಿಡೀ ಮನೆಗೆಲಸದಲ್ಲಿ ಅವರಿಗೆ ನೆರವಾಗುವುದಾಗಿ ಹೇಳಿಬಿಟ್ಟೆ. ಅಲ್ಲಿಯವರೆಗೆ ನಾನು ಹೊಂದಿದ್ದ ಮಹತ್ವಾಕಾಂಕ್ಷೆಗಳೆಲ್ಲಾ ಮಾಯವಾಗಿ ಹೋಗಿದ್ದವು. ವಿದ್ಯಾಭ್ಯಾಸ ಮುಂದುವರಿಸಿ ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಗಳಿಸಬೇಕೆಂಬ ಆಸೆಗಳೆಲ್ಲ ನುಚ್ಚು ನೂರಾಗಿ ಹೋಗಿದ್ದವು.

ಪುಟ್ಟಣ್ಣನ ಬೆಂಗಳೂರು ಪಯಣ
ಆದರೆ  ನನ್ನಣ್ಣ ಪುಟ್ಟಣ್ಣನ ಗುರಿಯೇ ಬೇರೆಯಾಗಿತ್ತು. ಅವನು ಹೇಗಾದರೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲೇ ಬೇಕೆಂಬ ಧೃಡ ನಿರ್ಧಾರ ಮಾಡಿಬಿಟ್ಟಿದ್ದ.  ಅವನು ಆ ಗುರಿಯತ್ತ ಪ್ರಯತ್ನ ಮಾಡುತ್ತಲೇ ಇದ್ದ. ಅವನ ಅದೃಷ್ಟಕ್ಕೆ ಅವನು ಅಲ್ಲಿಯವರೆಗೆ ತಂಗಿದ್ದ  ಹಂಚಿನಮನೆ ಸುಬ್ರಹ್ಮಣ್ಯ (ನಮ್ಮ ಕಸಿನ್)  ಅವರು ಅವನಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಹಣದ ಸಹಾಯ ಮಾಡುವುದಾಗಿ ಹೇಳಿದರು. ಅದನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಪುಟ್ಟಣ್ಣ ಒಂದು ದಿನ ಬೆಂಗಳೂರಿಗೆ ಹೊರಟು ಹೋಗಿಯೇ ಬಿಟ್ಟ!

ನನ್ನ ವಿದ್ಯಾರ್ಥಿ ಜೀವನ ಕೊನೆಗೊಂಡಿತೇ?
ನಾನೇನೋ  ಮುಂದೆ ವಿದ್ಯಾಭ್ಯಾಸ ಮಾಡುವುದಿಲ್ಲವೆಂದು ನಿರ್ಧಾರ ಮಾಡಿಬಿಟ್ಟಿದ್ದೆ.  ಆದರೆ ಪುಟ್ಟಣ್ಣ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಹೋದನೆಂದು ಗೊತ್ತಾದ ಮೇಲೆ ನಮ್ಮ ಊರಿನವರಿಗೆ ನಾನು ಮಾತ್ರ ತಂದೆಯವರೊಡನೆ ಕೊಪ್ಪ ಸಂತೆಗೆ ಬಾಳೆಹಣ್ಣು ಮತ್ತು ವೀಳ್ಯದೆಲೆಯನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು.  ಅವರು ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಹಾಸ್ಟೆಲಿನಲ್ಲಿ ಫ್ರೀ ಸೀಟ್ ಇದ್ದರೂ ಏಕೆ ಓದಲು ಹೋಗುತ್ತಿಲ್ಲವೆಂದು ಪ್ರಶ್ನಿಸ ತೊಡಗಿದರು. ಆಗ ನನ್ನ ತಂದೆ ತಾಯಿಯವರ ಮನಸ್ಸಿಗೆ ತುಂಬಾ ಹಿಂಸೆಯಾಗತೊಡಗಿತು.

ಒಂದು ಸಂಜೆ ನಾನು ಕೆರೆಯೊಂದರಿಂದ ನಮ್ಮ ತೋಟಕ್ಕೆ ನೀರು ಹಾಯಿಸುತ್ತಿದ್ದೆ. ಕೆರೆಯ ನೀರೆಲ್ಲಾ ಖಾಲಿಯಾದ ಮೇಲೆ ನಾನು ಕೆರೆಯೊಳಗಿಳಿದು ಅದರಲ್ಲಿ ಪುನಃ ರಾತ್ರಿಯಲ್ಲಿ ನೀರು ತುಂಬಲು ತೂಬಿಗೆ ಸೀಲ್ ಮಾಡಿ ನಂತರ ಕೆರೆಯಲ್ಲೇ ನಿಂತಿದ್ದೆ. ನನ್ನ ಮನಸ್ಸು ನನ್ನ ಫ್ಯೂಚರ್ ಬಗ್ಗೆ ಚಿಂತೆಯಲ್ಲಿ  ತೊಡಗಿತು. ಆಗ ತಾನೆ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗತೊಡಗಿದ್ದ. ನನಗೆ ಇದ್ದಕ್ಕಿದ್ದಂತೆ ನನ್ನ ವಿದ್ಯಾರ್ಥಿ ಜೀವನವೂ ಸಂಜೆಯ ಸೂರ್ಯನಂತೆ ಮುಳುಗಿ ಹೋಗುತ್ತಿದ್ದಂತೆ ಭಾಸವಾಯಿತು. ನನ್ನ ಪ್ರೀತಿಯ ಅಣ್ಣ ನನ್ನ ವಿದ್ಯಾಭ್ಯಾಸಕ್ಕಾಗಿ ಎಷ್ಟೊಂದು ಹೋರಾಟ ಮಾಡಿದ್ದ. ಆದರೆ ನಾನು ಹೀಗೆ ನನ್ನ ಮುಂದಿನ ಜೀವನದ ಬಗ್ಗೆ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿರುವಾಗ ಅವನು ನನ್ನ ಜೊತೆಯಲ್ಲಿರಲಿಲ್ಲ. ಇದ್ದಕ್ಕಿದ್ದಂತೆ ನಾನೊಂದು ದುಃಖ್ಖ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುವಂತೆ ಅನಿಸತೊಡಗಿತು. ಅದರಿಂದ ಈಜಿ ಹೊರಗೆ ಬರಬೇಕೆಂದೂ ನನಗೆ ಅನಿಸಲಿಲ್ಲ.

ಆಗ ಇದ್ದಕ್ಕಿದ್ದಂತೆ ನನಗೆ ನನ್ನ ತಂದೆಯವರು ಗಟ್ಟಿಯಾಗಿ ನನ್ನ ಹೆಸರನ್ನು ಹೇಳಿ ಕೂಗುತ್ತಿರುವುದು ಕೇಳಿಸಿತು. ಹೌದು ಅದು ನಿಜವಾಗಿತ್ತು. ನಾನು (ಸಮುದ್ರದಲ್ಲಲ್ಲ)  ಕೆರೆಯಲ್ಲೇ ಮುಳುಗಿ ಹೋಗುವುದರಲ್ಲಿದ್ದೆ. ಕೆರೆಯ ನೀರು ವೇಗವಾಗಿ ತುಂಬುತ್ತಾ ಆಗಲೇ ನನ್ನ ಸೊಂಟದ ಮೇಲೆ ಬಂದು ಬಿಟ್ಟಿತ್ತು! ನನಗದರ ಅರಿವೇ ಇರಲಿಲ್ಲ!
------- ಮುಂದುವರಿಯುವುದು-----

Saturday, April 18, 2020

ಬಾಲ್ಯ ಕಾಲದ ನೆನಪುಗಳು – ೭೮


ನಮ್ಮ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆಯಿತು. ನಾನು ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಚೆನ್ನಾಗಿಯೇ ಉತ್ತರ ಬರೆದಿದ್ದೆ. ಪರೀಕ್ಷೆ ಮುಕ್ತಾಯವಾಗುತ್ತಿದ್ದಂತೇ ನನಗೆ ಇನ್ನು ಮುಂದೆ ನಾನು ಈ ಶಾಲೆಗೆ ಹೋಗುವ ಪ್ರಶ್ನೆ ಇಲ್ಲವೆಂದು ಯೋಚಿಸುವಾಗ ಮನಸ್ಸಿಗೆ ಒಂದು ಬಗೆಯ ಹಿಂಸೆ ಆಯಿತು. ಅಲ್ಲದೇ ನನಗೆ ತುಂಬಾ ಆತ್ಮೀಯ ಮಿತ್ರರೂ ಈ ಶಾಲೆಯಲ್ಲಿ ದೊರೆತಿದ್ದರು. ಹೌದು.  ನಾನು  ಭಾವನಾತ್ಮಕವಾಗಿ ನಮ್ಮ ಶಾಲೆಯನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೆ. ನನ್ನ ಅಣ್ಣ ಎಷ್ಟೊಂದು ಹೋರಾಟ ಮಾಡಿ ನನ್ನನ್ನು  ಇಂತಹ ಅತ್ತ್ಯುತ್ತಮ ಮೇಷ್ಟ್ರುಗಳಿದ್ದ ಶಾಲೆಗೆ ಅದರಲ್ಲೂ ಇಂಗ್ಲಿಷ್ ಮೀಡಿಯಂ ಗೆ ಸೇರಿಸಿದ್ದ. ಆ ಮೂಲಕ ನನ್ನ ಸ್ಟೂಡೆಂಟ್ ಕ್ಯಾರಿಯರ್ ಗೆ ಒಂದು ಭದ್ರ ಬುನಾದಿ ಹಾಕಿದ್ದ. ಅದಕ್ಕಾಗಿ ನಾನು ಜೀವನ ಪರ್ಯಂತ ಅವನಿಗೆ ಋಣಿಯಾಗಿದ್ದೆ.

ಹಾಸ್ಟೆಲಿನಿಂದಲೂ ವಿದಾಯ!
ನಮ್ಮ ಶಾಲೆಯಂತೆ ನಮ್ಮ ಹಾಸ್ಟೆಲಿಗೆ ನಾನು ವಿದಾಯ ಹೇಳುವ ಪ್ರಶ್ನೆ ಇರಲಿಲ್ಲ. ಏಕೆಂದರೆ ನಾನು ಪರೀಕ್ಷೆಯಲ್ಲಿ ತುಂಬಾ ಚೆನ್ನಾಗಿಯೇ ಉತ್ತರ ಬರೆದಿದ್ದರಿಂದ ಹಾಸ್ಟೆಲಿನಲ್ಲಿ ನನ್ನ ಫ್ರೀ ಸೀಟ್ ಮುಂದೆ ಕಾಲೇಜಿನಲ್ಲಿ ಓದಲೂ ಹಾಗೆಯೇ ಮುಂದುವರಿಯುವುದು ಗ್ಯಾರಂಟಿ ಆಗಿತ್ತು. ಆದರೆ ನನಗೇನೋ ನಾನು ಪುನಃ ಹಾಸ್ಟೆಲಿನಲ್ಲಿ ಇರುವೆನೆಂದು ಅನಿಸಲೇ ಇಲ್ಲ. ಕಾರಣವಿಷ್ಟೇ. ನಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ಗಮನಿಸಿದರೆ ನಾನು ಪರರ ಸಹಾಯವಿಲ್ಲದೇ ನನ್ನ ಓದನ್ನು ಮುಂದುವರಿಸುವುದು ಅಸಾಧ್ಯವೆಂದು ನನಗೆ ಅನಿಸಿತ್ತು. ಆದರೆ ನಾನು ಹಿಂದಿನ ವರ್ಷದಂತೆ ಪುನಃ ನನ್ನ ಖರ್ಚಿಗಾಗಿ ಚಂದಾ ಎತ್ತುವ ಕೆಲಸ ಮಾಡುವುದಿಲ್ಲವೆಂದು ತೀರ್ಮಾನ ಮಾಡಿ ಬಿಟ್ಟಿದ್ದೆ. ಇನ್ನೊಬ್ಬರ ಋಣದ ಆಸರೆಯಲ್ಲಿ ವಿದ್ಯಾಭ್ಯಾಸ ಮಾಡುವುದು ನನಗೆ ಎಳ್ಳಷ್ಟೂ ಇಷ್ಟವಿರಲಿಲ್ಲ.
ಮರೆಯಲಾಗದ ಹಾಸ್ಟೆಲ್ ಅನುಭವ
ನನ್ನ ಜೀವಮಾನದಲ್ಲಿ ನನ್ನ ಮೂರು ವರ್ಷದ ಹಾಸ್ಟೆಲ್ ಅನುಭವ ತುಂಬಾ ಅಮೂಲ್ಯದಾಗಿತ್ತು. ನಾನು ಈ ಹಿಂದೆ ಮೂರು ವರ್ಷ ಹೊಕ್ಕಳಿಕೆಯಲ್ಲಿ ಅಕ್ಕನ ರಕ್ಷಣಾತ್ಮಕ ಕವಚದಲ್ಲಿ ಯಾವುದೇ ಸಮಸ್ಯೆಗಳಿಲ್ಲದೇ ಕಾಲ ಕಳೆದಿದ್ದೆ. ಆದರೆ ಹಾಸ್ಟೆಲಿನ ಸಾಮೂಹಿಕ ಜೀವನ ಸಂಪೂರ್ಣ ಬೇರೆಯೇ ಆಗಿತ್ತು. ಇಲ್ಲಿ ನನ್ನ ರಕ್ಷಣೆಗಾಗಿ ಯಾರೂ ನಿಲ್ಲುವ ಪ್ರಶ್ನೆ ಇರಲಿಲ್ಲ. ಆದರೆ ಬೇರೆ ಬೇರೆ ಊರಿನ ಹಾಗೂ ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೊಡನೆ ಸಹ ಬಾಳ್ವೆ ಮಾಡುವ ಅವಕಾಶ  ಒಂದು ಅಪರೂಪದ ಅವಕಾಶವೇ ಆಗಿತ್ತು. ಅದರಲ್ಲೂ ಕಾಲೇಜಿನಲ್ಲಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳ ಸಹವಾಸ ನನ್ನಂತಹ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತುಂಬಾ ಲಾಭದಾಯಕವಾಗಿತ್ತು. ಹಾಸ್ಟೆಲಿನ ಕಠಿಣ ಶಿಸ್ತಿನ ಜೀವನ ನನ್ನ ದೈನಂದಿನ ನಡೆ ನುಡಿಯಲ್ಲೂ ಒಂದು ಬಗೆಯ  ಶಿಸ್ತನ್ನು ಪಾಲಿಸಿಕೊಂಡು ಹೋಗುವಂತೆ ಮಾಡಿತ್ತು. ಹಾಗೆಯೇ ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ನನ್ನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದವೆಂಬುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

ನಮ್ಮ ಮನೆಯ ಬೇಸಿಗೆ ಕಾಲದ ಚಟುವಟಿಕೆಗಳು
ಪುಟ್ಟಣ್ಣ ಮತ್ತು ನಾನು ಹಿಂದಿನ ವರ್ಷದಂತೇ ನಾವು ಬೇಸಿಗೆಯಲ್ಲಿ ಮಾಡಬೇಕಾದ ಮನೆ ಕೆಲಸಗಳ ಒಂದು ವೇಳಾಪಟ್ಟಿಯನ್ನು ತಯಾರು ಮಾಡಿ ಅದರಂತೆ ಕಾರ್ಯಗಳನ್ನು ಮಾಡಲಾರಂಭಿಸಿದೆವು. ನಮ್ಮ ಒಂದು ಎಕರೆ ಅಡಿಕೆ ತೋಟದ ಬೆಳೆಯ ಆದಾಯ ಆ ವರ್ಷ ನಮ್ಮ ತಂದೆಯವರ ಕೈಗೆ ಬಂದಿತ್ತು. ಆದರೂ ಬೇರೆ ಆದಾಯಗಳಿಲ್ಲದೆ ನಮ್ಮ ದೊಡ್ಡ ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿವುದು ಸಾಧ್ಯವಿರಲಿಲ್ಲ. ಆಗ ನಮ್ಮ ತಂದೆಯವರು ಒಂದು ಹೊಸ ಆದಾಯದ ಮೂಲವನ್ನು ಕಂಡು ಹಿಡಿದರು. ಬಿ ಜಿ ಕಟ್ಟೆಯ ಬಳಿ ಸೀತಾ ನದಿಗೆ ಸೇತುವೆ ಕಟ್ಟುವ ಕೆಲಸ ಆಗ ಭರದಿಂದ ಸಾಗಿತ್ತು. ಹೆಚ್ಚಿನ ಕೆಲಸಗಾರರು ತಮಿಳಿನವರಾಗಿದ್ದು ಅವರು ನದಿಯ ಹತ್ತಿರದಲ್ಲೇ ಒಂದು ಕ್ಯಾಂಪ್ ಮಾಡಿದ್ದರು. ಆ ಕೆಲಸಗಾರರಿಗೆ ಬಾಳೆಹಣ್ಣು ಒಂದು ಮುಖ್ಯ ಆಹಾರವೇ ಆಗಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ವಾರಕ್ಕೆರಡು ಬಾರಿ ಬಾಳೆಹಣ್ಣಿನ ಬುಟ್ಟಿಗಳೊಡನೆ ಬಿ ಜಿ ಕಟ್ಟೆಗೆ ಹೋಗಿ ಹಣ್ಣನ್ನು ಒಳ್ಳೆಯ ಬೆಲೆಗೆ ಅವರಿಗೆ ಮಾರುತ್ತಿದ್ದೆವು. ಕೆಲಸಗಾರರು ಒಮ್ಮೆಗೇ ನಮ್ಮ ಬುಟ್ಟಿಗಳ ಮೇಲೆ ಮುಗಿ ಬೀಳುತ್ತಿದ್ದುದನ್ನು ಗಮನಿಸಿದ ತಂದೆಯವರು ಸ್ವಲ್ಪ ಹೆಚ್ಚಿಗೆ ಬೆಲೆ ಹೇಳುತ್ತಿದ್ದರಿಂದ ಅವರ ಕೈಗೆ ಹೆಚ್ಚು ಹಣ ಬರುತ್ತಿತ್ತು.

ಭುವನಕೋಟೆಯಿಂದ ಅಡಿಕೆ ಸೋಗೆಯ ಸಾಗಾಣಿಕೆ
ಆ ವರ್ಷ ನಮಗೆ ಹೊಸದೊಂದು ಕೆಲಸ ಅಂಟಿಕೊಂಡಿತು. ನಮ್ಮ ತೋಟದ ಅಡಿಕೆ ಸೋಗೆ ನಮ್ಮ ಮನೆ, ಕೊಟ್ಟಿಗೆ ಮತ್ತು ದನದ ಕೊಟ್ಟಿಗೆಗಳನ್ನು ಹೊಚ್ಚಲು ಸಾಲದೇ ಹೋಯಿತು. ಆಗ ಬೆಳವಿನಕೊಡಿಗೆ ಗಣೇಶಯ್ಯನವರ ಕಿರಿಯ ಸಹೋದರ ವೆಂಕಪ್ಪಯ್ಯನವರು ಭುವನಕೋಟೆಯಲ್ಲಿ ಅವರ ಮನೆಯ ಮುಂದಿದ್ದ ತೋಟದಲ್ಲಿ ಶೇಖರಿಸಿಟ್ಟ ಅಡಿಕೆ ಸೋಗೆಗಳನ್ನು ಹಾಳೆಗಳಿಂದ ಬೇರ್ಪಡಿಸಿ ನಮ್ಮ ಮನೆಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದರು.

ಈ ಕಾರ್ಯವೇನು ಸಾಮಾನ್ಯ ಮಟ್ಟದ್ದಾಗಿರಲಿಲ್ಲ. ಏಕೆಂದರೆ ವೆಂಕಪ್ಪಯ್ಯನವರ ತೋಟ ಅವರ ಮನೆಯಿಂದ ತುಂಬಾ ಕೆಳಮಟ್ಟದಲ್ಲಿತ್ತು. ಅಲ್ಲಿ ನಾವು ಸೋಗೆ ಕಡಿದು ಹೊರೆ ಮಾಡಿದ  ನಂತರ ಅವನ್ನು ತಲೆಯ ಮೇಲೆ ಹೊತ್ತುಕೊಂಡು ಅವರ ಮನೆಯ ಹತ್ತಿರ ಬಂದು, ಪುನಃ ಒಂದು ಎತ್ತರದ ಗುಡ್ಡವನ್ನು ಹತ್ತಿ ಅದನ್ನು ಒಂದು ಕಾಲುದಾರಿಯ ಮೂಲಕ ಇಳಿದು ನಮ್ಮ ತೋಟ ತಲುಪಿ ಅಲ್ಲಿಂದ ಪುನಃ ತೋಟದ ಮೇಲ್ಭಾಗದಲ್ಲಿದ್ದ ನಮ್ಮ ಮನೆಯನ್ನು ತಲುಪ ಬೇಕಿತ್ತು. ಯಾವ ಆಳುಗಳ ಸಹಾಯವಿಲ್ಲದೆ ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ಈ ಕ್ಲಿಷ್ಟ ಕಾರ್ಯವನ್ನು ಮುಗಿಸಿಯೇ ಬಿಟ್ಟೆವು. ಇಂದು ಎಷ್ಟೋ ವರ್ಷಗಳ ನಂತರ ಹಿಂತಿರುಗಿ ನೋಡುವಾಗ ನಾವು ಆಗ ಮಾಡಿದ ಈ ಸಾಹಸದ ಬಗ್ಗೆ ತುಂಬಾ ಹೆಮ್ಮೆ ಎಂದು ಅನಿಸುತ್ತಿದೆ.

ತಿಮ್ಮೇ ಶೆಟ್ಟಿ ಕಂತ್ರಾಟು!
ನಮ್ಮ ತೋಟಕ್ಕೆ ಪ್ರತಿ ವರ್ಷವೂ ಮಾಡಲೇ ಬೇಕಾದ ಆದರೆ ನಮ್ಮ ಕೈಯಲ್ಲಿ ಮಾಡಲಾಗದ ಕೆಲಸ ಒಂದಿತ್ತು. ಅದೇ ಅದರ ಬೇಸಾಯ. ಜಮೀನನ್ನು ಮೂರು ಭಾಗವಾಗಿ ವಿಂಗಡಿಸಿ ಪ್ರತಿ ವರ್ಷ ಒಂದೊಂದು ಭಾಗಕ್ಕೆ ಅಗತೆ ಮಾಡಿಸಿ, ಗೊಬ್ಬರ ಹಾಕಿಸಿ, ಸೊಪ್ಪು ಮುಚ್ಚಿ ನಂತರ ಹೊಸ ಮಣ್ಣನ್ನು ಮುಚ್ಚ ಬೇಕಾಗಿತ್ತು. ಈ ಕೆಲಸವನ್ನು ಸಾಮಾನ್ಯವಾಗಿ ನಕ್ರ ಪೂಜಾರಿಯಂತಹ ಗುತ್ತಿಗೆದಾರರಿಗೆ ಕೊಡಲಾಗುತ್ತಿತ್ತು. ಅವರ ಕೈ ಕೆಳಗೆ ತುಂಬಾ ಕೂಲಿ ಕೆಲಸಗಾರರು ಇರುತ್ತಿದ್ದರು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ನಕ್ರನಂತಹ ದೊಡ್ಡ ಗುತ್ತಿಗೆದಾರನಿಗೆ ಕೊಡುವ ಮಟ್ಟದ ಕೆಲಸ ಇರುತ್ತಿರಲಿಲ್ಲ.

ಆದರೆ ನಾವು ಸಹ ಗುತ್ತಿಗೆ ನೀಡಬಹುದಾದ ಒಬ್ಬ ಗುತ್ತಿಗೆದಾರ ಆಗ ದಕ್ಷಿಣ ಕನ್ನಡದಿಂದ ನಮ್ಮೂರಿಗೆ ಬರುತ್ತಿದ್ದ. ಅವನೇ ತಿಮ್ಮೇ ಶೆಟ್ಟಿ. ತಿಮ್ಮೇ ಶೆಟ್ಟಿಯ ಬಳಿ ಕೇವಲ ಒಬ್ಬನೇ ಕೆಲಸಗಾರನಿದ್ದ . ಅದು ಬೇರೆ ಯಾರೂ ಅಲ್ಲ. ಅದು ತಿಮ್ಮೇ ಶೆಟ್ಟಿಯೇ! ಅವನದು ಒನ್ ಮ್ಯಾನ್ ಆರ್ಮಿ ಆಗಿತ್ತು. ಅವನೆಂದೂ ದಿನ ಕೂಲಿ ಮಾಡಿದವನಲ್ಲ. ಪ್ರತಿಯೊಂದು ಕೆಲಸವನ್ನೂ ಅವನಿಗೆ ಗುತ್ತಿಗೆಯ ಮೂಲಕವಾಗಿಯೇ ಕೊಡಬೇಕಿತ್ತು. ಆದರೆ ಪ್ರತಿ ಗುತ್ತಿಗೆಯೂ ಒಂದು ಶರತ್ತಿನಿಂದ ಕೂಡಿರುತ್ತಿತ್ತು. ನಿಯಮಿಸಲಾದ ಮೊತ್ತದ ಹಣವಲ್ಲದೇ ಅವನಿಗೆ ಮನೆಯಲ್ಲೇ ಊಟ ಮತ್ತು ತಿಂಡಿ ನೀಡ ಬೇಕಿತ್ತು. ಅಲ್ಲದೇ ಮನೆಯಲ್ಲೇ ತಂಗಲೂ ಅವಕಾಶ ಕೊಡಬೇಕಿತ್ತು. ತಿಮ್ಮೇ ಶೆಟ್ಟಿಯ ಈ ಗುತ್ತಿಗೆ ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ ಅದಕ್ಕೆ "ತಿಮ್ಮೇ ಶೆಟ್ಟಿ ಕಂತ್ರಾಟು" ಎಂದೇ ಕರೆಯಲಾಗುತ್ತಿತ್ತು! ನಾವು ಆ ವರ್ಷ ನಮ್ಮ ತೋಟದ ಬೇಸಾಯದ ಪೂರ್ತಿ ಗುತ್ತಿಗೆಯನ್ನು ತಿಮ್ಮೇ ಶೆಟ್ಟಿಗೆ ಕೊಟ್ಟು ಬಿಟ್ಟೆವು.

ತಿಮ್ಮೇ ಶೆಟ್ಟಿಯ ವಿಶೇಷತೆ
ತಿಮ್ಮೇ ಶೆಟ್ಟಿ ಒಬ್ಬ ೨೬-೨೭ ವರ್ಷ ವಯಸ್ಸಿನ ಸ್ಪುರದ್ರೂಪಿ ಯುವಕನಾಗಿದ್ದ. ಆಗಿನ ಕಾಲದ ಬೇರೆ ಕೆಲಸಗಾರರಂತೆ ಅವನೆಂದೂ ಕೊಳೆಯಾದ ಬಟ್ಟೆಗಳನ್ನು ಹಾಕಿ ಕೊಳ್ಳುತ್ತಿರಲಿಲ್ಲ. ಕೆಲಸ ಮಾಡುವಾಗ ಧರಿಸಲೆಂದೇ ಒಂದು ಸ್ಪೆಷಲ್ ಡ್ರೆಸ್ ಹೊಲಿಸಿದ್ದ. ಅದನ್ನು ವಾರದ ಕೊನೆಯಲ್ಲಿ ತೊಳೆದು ಶುಭ್ರ ಮಾಡಿ ಪುನರ್ಬಳಕೆ ಮಾಡುತ್ತಿದ್ದ. ತೋಟದ ಬೇಸಾಯದ ಕೆಲವು ಕೆಲಸಗಳನ್ನು (ಗೊಬ್ಬರದ ಗುಂಡಿಯಿಂದ ಗೊಬ್ಬರ ತೋಡಿ ತೋಟಕ್ಕೆ ಸಾಗಿಸುವುದು,ಇತ್ಯಾದಿ) ಮಾಡಲು ಕಡಿಮೆ ಎಂದರೆ ಇಬ್ಬರು ಕೆಲಸಗಾರರು ಬೇಕಾಗುತ್ತಿತ್ತು. ಆದರೆ ಒಂಟಿ ಸಲಗನಂತಿದ್ದ ತಿಮ್ಮೇ ಶೆಟ್ಟಿ ಅದನ್ನೂ ತಾನು ಒಬ್ಬನೇ ಮಾಡುವಷ್ಟು ಸಮರ್ಥನಾಗಿದ್ದ!

ತಿಮ್ಮೇ ಶೆಟ್ಟಿಗೆ ಬೇರೆ ಕೆಲಸಗಾರರಿಗಿಲ್ಲದ ಇನ್ನೊಂದು ಅಭ್ಯಾಸವಿತ್ತು. ಅವನು ಪ್ರತಿ ಸಂಜೆಯೂ ಸ್ನಾನ ಮುಗಿಸಿದ ನಂತರವೇ ಊಟ ಮಾಡುತ್ತಿದ್ದ! ವಾರದ ಆರು ದಿನಗಳು ಕಠಿಣ ಕೆಲಸಗಳನ್ನು ಮಾಡುತ್ತಿದ್ದ ಶೆಟ್ಟಿ ಭಾನುವಾರ ಮಾತ್ರಾ ಪೂರ್ತಿ ರಜೆ ತೆಗೆದುಕೊಳ್ಳುತ್ತಿದ್ದ. ಆ ದಿನ ಅವನು ಗುರುತೇ ಸಿಗದಂತಹ ಸ್ಪೆಷಲ್ ಡ್ರೆಸ್ ಧರಿಸಿ ಸಿನಿಮಾ ಹೀರೋ ಅಂತೇ ಕೈಯಲ್ಲಿ ಒಂದು ಟಾರ್ಚ್ ಹಿಡಿದುಕೊಂಡು ಮನೆಯಿಂದ ಹೊರಟು ಬಿಡುತ್ತಿದ್ದ. ಆ ದಿನ ಎಲ್ಲಿ ಒಳ್ಳೆಯ ಸಿನಿಮಾ ಇರುವುದೋ ಅಲ್ಲಿಗೆ (ಕೊಪ್ಪ, ಶೃಂಗೇರಿ ಅಥವಾ ಜಯಪುರಕ್ಕೆ) ಅವನ ಪಯಣ. ಅರ್ಧ ರಾತ್ರಿಯ ವೇಳೆಗೆ ಶೆಟ್ಟಿ ಕೈಯಲ್ಲಿ ಟಾರ್ಚ್ ಹಿಡಿದು ಯಾವುದೋ ಒಂದು ಸಿನಿಮಾದ ಹಾಡನ್ನು ಗುನುಗುತ್ತಾ ವಾಪಾಸ್ ಮನೆ ತಲುಪುತ್ತಿದ್ದ.

ಸಾಮಾನ್ಯವಾಗಿ ಮನೆಯ ಹೆಂಗಸರಿಗೆ ತಿಮ್ಮೇ ಶೆಟ್ಟಿ ಕಂತ್ರಾಟು ಅಷ್ಟು ಇಷ್ಟವಾಗುತ್ತಿರಲಿಲ್ಲ. ಏಕೆಂದರೆ ಅವನಿಗಾಗಿ ನಿತ್ಯವೂ ಹೆಚ್ಚು ಅಡಿಗೆ ಮಾಡಿ ಬಡಿಸ ಬೇಕಾಗುತ್ತಿತ್ತು. ಆದರೆ ನಮ್ಮಂತಹ ಸಣ್ಣ ಹಿಡುವಳಿದಾರರಿಗೆ ಈ ಬಗೆಯ ಕಂತ್ರಾಟು ಒಂದು ವರವಾಗಿತ್ತು. ಅಲ್ಲದೇ ಬೇರೆ ಆಳುಗಳಿಗೆ ಕೊಟ್ಟಂತೆ ಶೆಟ್ಟಿಗೆ ನಿತ್ಯವೂ ಒಂದು ಸೇರು ಅಕ್ಕಿ ಅಳೆದು ಕೊಡಬೇಕಾಗಿರಲಿಲ್ಲ. ಆದ್ದರಿಂದ ಅದೊಂದು ಅಗ್ಗದ ಕಂತ್ರಾಟು ಎಂದು ಅನಿಸುತ್ತಿತ್ತು. ಅಲ್ಲದೇ ತಿಮ್ಮೇ ಶೆಟ್ಟಿ ಒಬ್ಬ ಮೃದು ನಡತೆಯ  ಸಂಭಾವಿತ ವ್ಯಕ್ತಿಯಾಗಿದ್ದ. ನಮ್ಮೂರಿನ ಬಾಳೆಹಿತ್ಲು ಎಂಬ ಮನೆಯ ಗಣಪತಯ್ಯ ಎಂಬ ಸಣ್ಣ ಹಿಡುವಳಿದಾರರು ತಿಮ್ಮೇ ಶೆಟ್ಟಿಗೆ ಹೆಚ್ಚು ಕಂತ್ರಾಟು ಕೊಡುತ್ತಿದ್ದರು. ಸಾಮಾನ್ಯವಾಗಿ ನಾವು ಅವರ ಮನೆಗೆ ಹೋದಾಗ ತಿಮ್ಮೇ ಶೆಟ್ಟಿ ಕಣ್ಣಿಗೆ ಬೀಳುತ್ತಿದ್ದ.
------- ಮುಂದುವರಿಯುವುದು-----

Sunday, April 12, 2020

ಬಾಲ್ಯ ಕಾಲದ ನೆನಪುಗಳು – ೭೭


ನಮ್ಮ ಹಾಸ್ಟೆಲಿನಲ್ಲಿ ಒಬ್ಬ ಕಳ್ಳ!
ನಮ್ಮ ಹಾಸ್ಟೆಲಿನಲ್ಲಿ ಇದ್ದಕ್ಕಿದ್ದಂತೇ ವಿದ್ಯಾರ್ಥಿಗಳ ವಿವಿಧ ವಸ್ತುಗಳು ಕಾಣೆಯಾಗ ತೊಡಗಿದವು. ಮೊದಲು ಮೊದಲಿಗೆ ವಿದ್ಯಾರ್ಥಿಗಳ ಹಣ ಮಂಗಮಾಯವಾಗುತ್ತಿದ್ದು ಆಮೇಲೆ ವಾಚುಗಳೂ ಸೇರಿ ಬೇರೆ ಬೇರೆ ವಸ್ತುಗಳೂ ನಾಪತ್ತೆಯಾಗತೊಡಗಿದವು.  ಕೊನೆಗೆ ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ನಾವು ನಿತ್ಯ ಕುಡಿಯಲು ಬಳಸುತ್ತಿದ್ದ ಸ್ಟೀಲ್ ಲೋಟಗಳೂ ಮಾಯವಾಗತೊಡಗಿದವು. ನಾನು ಸ್ಪೋರ್ಟ್ಸ್ ಕಾಂಪಿಟೀಶನ್ ನಲ್ಲಿ ಒಂದು ಸ್ಟೀಲ್ ಲೋಟವನ್ನು ಗೆದ್ದು ಅದನ್ನು ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದೆ. ಅದರ ಬೆಲೆ ಆರು ರೂಪಾಯಿ. ಅದೂ ಕೂಡ ಅಗೋಚರನಾದ ಕಳ್ಳನ ಕೈಸೇರಿ ಬಿಟ್ಟಿತು. ನಮ್ಮ ಹಾಸ್ಟೆಲಿನ ಸೆಕ್ಯೂರಿಟಿ ವ್ಯವಸ್ಥೆ ತುಂಬಾ ಚೆನ್ನಾಗಿ ಇದ್ದುದರಿಂದ ಯಾವುದೇ ಹೊರಗಿನ ವ್ಯಕ್ತಿ ಬಂದು ಕಳ್ಳತನ ಮಾಡುವ ಅವಕಾಶವಿರಲಿಲ್ಲ. ಆದ್ದರಿಂದ  ಹಾಸ್ಟೆಲಿನ ಒಳಗಿನ ವಿದ್ಯಾರ್ಥಿಯೇ ತನ್ನ ಕೈಚಳಕವನ್ನು ತೋರಿಸುತ್ತಿದ್ದನೆಂದು  ಹಾಸ್ಟೆಲಿನ ಆಡಳಿತ ವರ್ಗಕ್ಕೆ ಅರಿವಾಗಿ ಒಂದು ಆಂತರಿಕ ಪತ್ತೇದಾರಿ ಟೀಮ್ ತಯಾರು ಮಾಡಿ ಅದಕ್ಕೆ ಕಳ್ಳನನ್ನು ಪತ್ತೆ ಮಾಡುವ ಜವಾಬ್ದಾರಿಯನ್ನು ಕೊಡಲಾಯಿತು.

ಜೇಮ್ಸ್ ಬಾಂಡ್ ಟೀಮ್ ಕಳ್ಳನನ್ನು ಪತ್ತೆ ಮಾಡಿದ್ದು!
ಜೇಮ್ಸ್ ಬಾಂಡ್ ಟೀಮು ಕೆಲವು ಅನುಮಾನಾಸ್ಪದ ವಿದ್ಯಾರ್ಥಿಗಳ ಮೇಲೆ ಕಣ್ಣಿಟ್ಟು ನೋಡತೊಡಗಿತು. ಅದು ಎಷ್ಟು ಚೆನ್ನಾಗಿ ಕೆಲಸ ಮಾಡಿತೆಂದರೆ ಒಂದು ದಿನ ಬೆಳಿಗ್ಗೆ ನಾವು ಏಳುವಾಗ ಆಂತರಿಕ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅವನನ್ನು ಅವನ ಊರಿಗೆ ರವಾನೆ ಮಾಡಲಾಗಿದೆ ಎಂಬ ಅದ್ಭುತ ಸಮಾಚಾರ ನಮಗೆ ಗೊತ್ತಾಯಿತು. ಕಳ್ಳನ ಹೆಸರು ಶಿವಮೂರ್ತಿ ಎಂದಿದ್ದು ಅವನು ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಎರಡನೇ ತರಗತಿಯಲ್ಲಿ ಓದುತ್ತಿದ್ದ.

ಶಿವಮೂರ್ತಿ ಚಿತ್ರದುರ್ಗದ ಒಂದು ಬಡ ಕುಟುಂಬಕ್ಕೆ ಸೇರಿದವನಾಗಿದ್ದ. ಅವನಿಗೆ ಸಿನಿಮಾ ನೋಡುವ ಹುಚ್ಚು ಅತಿ ಹೆಚ್ಚಾಗಿತ್ತಂತೆ. ಅದೆಷ್ಟೆಂದರೆ ಅವನ ಹಾಜರಿ ಸಹ್ಯಾದ್ರಿ ಕಾಲೇಜಿಗಿಂತ ಶಿವಮೊಗ್ಗೆಯ ಥಿಯೇಟರ್ ಗಳಲ್ಲಿ ಹೆಚ್ಚಿತ್ತಂತೆ! ಅವನಿಗೆ ಪ್ರತಿ ದಿನ ಒಂದು ಮಾರ್ನಿಂಗ್ ಶೋ, ಮ್ಯಾಟಿನಿ ಅಥವಾ ಫಸ್ಟ್ ಶೋ ನೋಡಲೇ ಬೇಕಿತ್ತಂತೆ! ಹುಚ್ಚನ್ನು ಅವನು ಹೇಗೆ ನಿಭಾಯಿಸುತ್ತಿದ್ದನೆಂದು ಕೇವಲ ಅವನಿಗೆ ಮಾತ್ರ ಗೊತ್ತಿತ್ತಂತೆ. ಆದರೆ ಅವನಲ್ಲಿ ಒಂದು ಶಿಸ್ತು ಇತ್ತಂತೆ. ಅವನು ಒಂದು ನೋಟ್ ಬುಕ್ಕಿನಲ್ಲಿ ತಾನು ನೋಡಿದ ಸಿನಿಮಾದ ಮತ್ತು ಥಿಯೇಟರಿನ ಹೆಸರು ಮತ್ತು ತಾರೀಖನ್ನು ನೀಟಾಗಿ ಬರೆದಿಡುತ್ತಿದ್ದನಂತೆ! ಶಿಸ್ತೇ ಅವನ ಮುಳುವಿಗೆ ಕಾರಣವಾಯಿತಂತೆ.

ನಡೆದುದಿಷ್ಟೇ. ಜೇಮ್ಸ್ ಬಾಂಡ್  ಟೀಮಿನ ಮುಖ್ಯಸ್ಥನೇ ಶಿವಮೂರ್ತಿಯ ಒಬ್ಬ ರೂಮ್ ಮೇಟ್  ಆಗಿದ್ದ. ಶಿವಮೂರ್ತಿಯ  ನೋಟ್ ಬುಕ್ ಅವನ ಕಣ್ಣಿಗೆ ಬಿತ್ತು.  ಸಹಜವಾಗಿ ಅವನಿಗೆ ಶಿವಮೂರ್ತಿಯ  ಕೈಯಲ್ಲಿ ಅಷ್ಟೊಂದು ಸಿನಿಮಾ ನೋಡುವಷ್ಟು ಹಣ  ಎಲ್ಲಿಂದ ಬರುತ್ತಿರುವುದೆಂಬ ಸಂಶಯ ಬಂತು. ಆದ್ದರಿಂದ ಅವನು ಶಿವಮೂರ್ತಿಯ ಚಟುವಟಿಕೆಗಳ ಮೇಲೆ ಒಂದು ಕಣ್ಣಿಟ್ಟಿದ್ದನಂತೆ. ಹಾಗಿರುವಾಗ ಒಂದು ದಿನ ಶಿವಮೂರ್ತಿ ತನ್ನ ಇನ್ನೊಬ್ಬ ರೂಮ್ ಮೇಟಿನ ಅಂಗಿಯ ಜೇಬಿನಿಂದ ಹಣವನ್ನು ತೆಗೆಯುತ್ತಿರುವುದು ಅವನ ಕಣ್ಣಿಗೆ ಬಿತ್ತಂತೆ. ಅಲ್ಲಿಗೆ ಮುಗಿಯಿತು ಶಿವಮೂರ್ತಿಯ ಕಥೆ. ತಾನು ನೋಡುತ್ತಿದ್ದ ಸಿನಿಮಾಗಳಿಗೆ ಟಿಕೆಟ್ ಚಾರ್ಜ್ ಎಲ್ಲಿಂದ ದೊರೆಯುತ್ತೆಂದು ಹೇಳಲಾಗದ ಶಿವಮೂರ್ತಿ ತಾನು ಮಾಡುತ್ತಿದ್ದ ಕಳ್ಳತನವನ್ನು ಒಪ್ಪಿಕೊಳ್ಳಲೇ ಬೇಕಾಯಿತಂತೆ. ಹಾಸ್ಟೆಲಿನಿಂದ ಹೊರಹಾಕಲ್ಪಟ್ಟ ಅವನನ್ನು ನಾವು ಪುನಃ ಎಂದೂ ನೋಡಲಿಲ್ಲ. ಆದರೆ ಅವನಿಂದಾಗಿ ಹಣ ಮತ್ತು ಇತರ ವಸ್ತುಗಳನ್ನು ಕಳೆದುಕೊಂಡವರಿಗೆ  (ನನ್ನನ್ನೂ ಸೇರಿ) ಯಾವುದೇ ಪರಿಹಾರ ಸಿಗಲಿಲ್ಲ.

ನನ್ನ  ಅಣ್ಣ ಶಿವಮೊಗ್ಗೆ ಸೇರಿದ್ದು
ಇದ್ದಕ್ಕಿದಂತೆ ಒಂದು ದಿನ ನನ್ನ ಅಣ್ಣ ಹಾಸ್ಟೆಲಿಗೆ ಬಂದು ನನ್ನನ್ನು ಭೇಟಿ ಮಾಡಿದ. ಅವನು ತನ್ನ ಸಂಸಾರವನ್ನು ತನ್ನ ಮಾವ ಹುರುಳಿಹಕ್ಲು ಲಕ್ಷ್ಮೀನಾರಾಯಣರಾಯರ ಸಂಸಾರದೊಡನೆ ಶಿವಮೊಗ್ಗೆಗೆ ಶಿಫ್ಟ್ ಮಾಡಿಬಿಟ್ಟಿದ್ದ. ಲಕ್ಷ್ಮೀನಾರಾಯಣರಾಯರು ತಮ್ಮ ಪೂರ್ವಜರಿಂದ ಬಂದ ಸಂಪೂರ್ಣ ಜಮೀನನ್ನು ಮನೆ ಸಮೇತ ಮಾರಿ ಕೈಗೆ ಬಂದ ಒಂದು ದೊಡ್ಡ ಮೊತ್ತದ ಹಣದೊಡನೆ ಶಿವಮೊಗ್ಗೆ ಸೇರಿದ್ದರಂತೆ. ಅವರು ಮುಂದೇನು ಮಾಡುವರೆಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ನನ್ನ ಅಣ್ಣನಿಗೆ ಕೊಡುವುದಾಗಿ ಹೇಳಿದ ಸ್ವಲ್ಪ ಜಮೀನಿನ ವಿಷಯ ಸುಳ್ಳಾಗಿ ಬಿಟ್ಟಿತ್ತು. ಅವರೊಡನೆ ಶಿವಮೊಗ್ಗೆ ಸೇರಿದ ಅಣ್ಣನ ಭವಿಷ್ಯ ಏನೆಂಬ ಪ್ರಶ್ನೆಗೆ ಸರಿಯಾದ ಉತ್ತರವಿರಲಿಲ್ಲ. ನಮಗೆಲ್ಲಾ ಹುರುಳಿಹಕ್ಕಲು ಮನೆತನದ ಬಗ್ಗೆ ತುಂಬಾ ಅಭಿಮಾನವಿತ್ತು. ಹಾಗೆಯೇ ಲಕ್ಷ್ಮೀನಾರಾಯಣರಾಯರ ಬಗ್ಗೆ ತುಂಬಾ ಗೌರವ ಇತ್ತು. ಆದ್ದರಿಂದ ಅವರು ಹೀಗೆ ನಮ್ಮೂರನ್ನೇ ತೊರೆದು ಶಿವಮೊಗ್ಗೆ ಸೇರಿದ್ದು ನಮಗೆಲ್ಲ ಜೀರ್ಣಿಸಿಕೊಳ್ಳಬಲ್ಲ ಸಮಾಚಾರವಾಗಿರಲಿಲ್ಲ. ಮುಂದೆ ಸಂಸಾರದ ವಿಷಯ ಏನಾಯಿತೆಂಬ ಬಗ್ಗೆ ನಾನು ಹುರುಳಿಹಕ್ಕಲಿನ ಗತವೈಭವ ಎಂಬ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ.

ನಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಸ್ಟೆಲಿನಲ್ಲಿ ಸ್ಪೆಷಲ್ ಟ್ಯೂಷನ್
ಆ ವರ್ಷ ನಮ್ಮ ಹಾಸ್ಟೆಲಿನ ಆಡಳಿತ ವರ್ಗ ನಮಗೆ ಪಬ್ಲಿಕ್ ಪರೀಕ್ಷೆಗೆ ತಯಾರು ಮಾಡಲು ಕೆಲವು ಉತ್ತಮ ಮೇಷ್ಟ್ರುಗಳಿಂದ ಟ್ಯೂಷನ್ ಏರ್ಪಾಟು ಮಾಡಿತು. ಮುಖ್ಯವಾಗಿ ನಮಗೆ ಡಿವಿಎಸ್ ಹೈಸ್ಕೂಲ್ ಮೇಷ್ಟ್ರುಗಳಾದ ಸಿವಿ ಕೇಶವಮೂರ್ತಿಯವರಿಂದ (CVK) ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಸುಬ್ಜೆಕ್ಟ್ಸ್ ಮತ್ತು ವಿ ದೇವೇಂದ್ರ (VDR) ಅವರಿಂದ ಇಂಗ್ಲಿಷ್ ಪಾಠಗಳನ್ನು ಮಾಡಿಸಲಾಯಿತು. ಈ ಇಬ್ಬರೂ ತುಂಬಾ ಪ್ರಸಿದ್ಧರಾದ ಮೇಷ್ಟ್ರುಗಳಾಗಿದ್ದರು ಮತ್ತು ನಮಗೆ ಅವರ ಟ್ಯೂಷನ್ ತುಂಬಾ ಉಪಯುಕ್ತವಾಯಿತು. ಹಾಗೆಯೇ ಪಿಯುಸಿ ಮತ್ತು ಡಿಗ್ರಿ ತರಗತಿಗಳಿಗೆ ಸಹ್ಯಾದ್ರಿ ಕಾಲೇಜಿನ ಕೆಲವು ಲೆಕ್ಚರರ್ ಗಳಿಂದ ಮತ್ತು ನಮ್ಮ ಶಾಲೆಯ ಪ್ರಸಿದ್ಧ ಮೇಷ್ಟ್ರು ಎಸ್ ಸೂರ್ಯನಾರಾಯಣರಾಯರಿಂದ (SSR) ಟ್ಯೂಷನ್ ಹೇಳಿಸಲಾಯಿತು. ಆಮೇಲೆ ಒಂದು ಕಾರ್ಯಕ್ರಮ ಏರ್ಪಡಿಸಿ ಟ್ಯೂಷನ್ ಹೇಳಿದವರಿಗೆಲ್ಲಾ ಒಂದೊಂದು ಲಕೋಟೆಯ ಮೂಲಕ ಗೌರವ ಧನ  ಕೊಡಲಾಯಿತು. ಆದರೆ ಎಲ್ಲಾ ಮೇಷ್ಟ್ರುಗಳು ಮತ್ತು ಲೆಕ್ಚರರ್ ಗಳು ಆ ಲಕೋಟೆಗಳನ್ನು ತೆರೆದೂ ಕೂಡ ನೋಡದೆ ಅದರಲ್ಲಿದ್ದ  ಹಣವನ್ನು ಹಾಸ್ಟೆಲಿಗೆ ಕೊಡುಗೆಯಾಗಿ ನೀಡಿ ಬಿಟ್ಟರು!

ಹಾಸ್ಟೆಲಿನ ವಾರ್ಷಿಕೋತ್ಸವ
ನಮ್ಮ ಹಾಸ್ಟೆಲಿನ ಆ ವರ್ಷದ ವಾರ್ಷಿಕೋತ್ಸವ ತುಂಬಾ ವಿಜೃಂಭಣೆಯಿಂದ ನಡೆಯಿತು. ಕನ್ನಡನಾಡಿನ ಸುಪ್ರಸಿದ್ಧ ಕವಿ ದತ್ತಾತ್ರೇಯ ಬೇಂದ್ರೆಯವರು, ಆ ವರ್ಷವೇ ಸ್ಥಾಪಿಸಲ್ಪಟ್ಟ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲ್ ಗೋಪಾಲಕೃಷ್ಣ ಅಡಿಗರು, ಪ್ರೊಫೆಸರ್ ಬಿ ಹೆಚ್ ಶ್ರೀಧರ್ ಮತ್ತು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ ವರದೇಶಿಕಾಚಾರ್ ಅವರ ಭಾಷಣಗಳನ್ನು ಕೇಳುವ ಅವಕಾಶ ನಮ್ಮದಾಯಿತು.

ನನಗೆ ಪುನಃ ಸಂಸ್ಕೃತ ಸ್ಕಾಲರ್ಷಿಪ್
ನನಗೆ ಹಿಂದಿನ ವರ್ಷ ನೀಡಲಾಗಿದ್ದ ಸಂಸ್ಕೃತ ಸ್ಕಾಲರ್ಷಿಪ್ ಆ ವರ್ಷವೂ ಮಂಜೂರಾಯಿತು. ನಾನು ಪುನಃ ನನ್ನ " ಚಿಕ್ಕಪ್ಪ” ರಮೇಶ ರಾಮಚಂದ್ರ ಕಂಚಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಒಂದು ನೂರು ರೂಪಾಯಿ ದೊರೆತುದಕ್ಕೆ ಸಹಿ ಮಾಡಿಸಿ ಹಣವನ್ನು ತೆಗೆದುಕೊಂಡೆ.
------- ಮುಂದುವರಿಯುವುದು-----