ನಾನು ನನ್ನ ಬಾಲ್ಯ ಜೀವನದ ಬಗ್ಗೆ ಹಿಂತಿರುಗಿ
ನೋಡುವಾಗ ನಾನು ಕಾಲೇಜ್ ಹಾಸ್ಟೆಲಿನಲ್ಲಿದ್ದ ದಿನಗಳು ನನ್ನ ವಿದ್ಯಾರ್ಥಿ ಜೀವನದ ಅಮೂಲ್ಯ ದಿನಗಳಾಗಿದ್ದುವು
ಎಂದು ಅನಿಸುತ್ತಿದೆ. ಮೊದಲನೆಯದಾಗಿ ನನ್ನ ಮೆಸ್ಸ್
ಚಾರ್ಜಿಗೆ ಪ್ರತಿ ತಿಂಗಳೂ ಕೊಡಬೇಕಾಗಿದ್ದ ೩೦ ರೂಪಾಯಿ ಹೊರೆಯನ್ನು ತಂದೆಯವರ ಬೆನ್ನಿನಿಂದ ಇಳಿಸಿಬಿಟ್ಟಿದ್ದೆ.
ಇದರಿಂದ ನಾನು ಪ್ರತಿ ವಾರದ ಕೊನೆಯಲ್ಲಿ ಮನೆಗೆ ಹೋಗುವಾಗ ಒಂದು ಬಗೆಯ ನೆಮ್ಮದಿಯಿಂದ ಹೋಗಲು ಸಾಧ್ಯವಾಯಿತು.
ನನ್ನ ಟೆಕ್ಸ್ಟ್ ಪುಸ್ತಕಗಳು ಇತ್ಯಾದಿ ಖರ್ಚುಗಳ ಸಣ್ಣ ಹೊರೆ ಮಾತ್ರ ತಂದೆಯವರಿಗಿತ್ತು. ಶಿವಮೊಗ್ಗೆಯ
ಹಾಸ್ಟೆಲಿನಲ್ಲಿ ಫ್ರೀ ಸೀಟ್ ವಿದ್ಯಾರ್ಥಿಗಳಿಗೆ ಒಂದು ಬಗೆಯ ಕೀಳರಿಮೆ ಇರುತ್ತಿತ್ತು. ಆದರೆ ಶೃಂಗೇರಿ
ಕಾಲೇಜ್ ಹಾಸ್ಟೆಲಿನಲ್ಲಿ Rank ಸ್ಟೂಡೆಂಟ್ ಎಂದು ವಿಶೇಷ ಗೌರವ ನನಗೆ ಸಿಗುತ್ತಿತ್ತು.
ಆ ವರ್ಷ ಕೆಲವು ಉಪನ್ಯಾಸಕರು ಶೃಂಗೇರಿಯಲ್ಲೇ
ತಮ್ಮ ಕುಟುಂಬವನ್ನು ನೆಲೆಗೊಳಿಸಿದ್ದರು. ಅವರನ್ನು ಬಿಟ್ಟು ಉಳಿದವರು ಹಾಸ್ಟೆಲಿನಲ್ಲಿ ತಂಗದಿದ್ದರೂ
ಊಟ ಮತ್ತು ತಿಂಡಿ ಅಲ್ಲಿಯೇ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಹಾಸ್ಟೆಲಿನ ಊಟ ಮತ್ತು ತಿಂಡಿಗಳ
ಶುಚಿ ಮತ್ತು ರುಚಿ ಹಾಗೂ ಗುಣಮಟ್ಟಕ್ಕೆ ಅವರು ಕಾರಣರಾಗಿದ್ದರು. ನಮ್ಮ ಕೆಮಿಸ್ಟ್ರಿ ವಿಭಾಗಕ್ಕೆ ಶಾನುಭಾಗ್
ಅವರು ಮುಖ್ಯಸ್ಥರಾದರೆ ಅವರ ಕೆಳಗೆ ಹೊಸದಾಗಿ ರಾಮಸ್ವಾಮಿ ಮತ್ತು ಹೆಗ್ಡೆ ಎನ್ನುವರು ಉಪನ್ಯಾಸಕರಾಗಿ
ಸೇರಿಕೊಂಡರು. ಫಿಸಿಕ್ಸ್ ವಿಭಾಗದ ಮುಖ್ಯಸ್ಥರಾದ ಕೃಷ್ಣಪ್ಪಯ್ಯನವರ ಕೆಳಗೆ ಮೈಸೂರಿನ ನಾಗರಾಜ್ ಮತ್ತು
ದಕ್ಷಿಣ ಕನ್ನಡದ ವೆಂಕಟರಮಣ ಭಟ್ ಎಂಬ ಇಬ್ಬರು ಹೊಸ ಉಪನ್ಯಾಸಕರು ಸೇರಿಕೊಂಡರು. ಒಟ್ಟಿನಲ್ಲಿ ನಮಗೆ
ಮೇಜರ್ ಸಬ್ಜೆಕ್ಟುಗಳಾಗಿದ್ದ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಭಾಗಕ್ಕೆ ತುಂಬಾ ಒಳ್ಳೆಯ ಉಪನ್ಯಾಸಕರೇ
ದೊರೆತಿದ್ದರು.
ಶ್ರೀನಾಥ
ಶಾಸ್ತ್ರಿಯವರು ಮತ್ತು ನಮಗೊಂದು ಸಮಸ್ಯೆ!
ಆದರೆ ನಮಗೆ ಮೈನರ್ ಸಬ್ಜೆಕ್ಟ್ ಆಗಿದ್ದ
ಮ್ಯಾಥಮ್ಯಾಟಿಕ್ಸ್ ವಿಭಾಗದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿ ಬಿಟ್ಟಿತು. ವಿಭಾಗದ ಮುಖ್ಯಸ್ಥರಾದ
ಎನ್.ಆರ್.ಭಟ್ ಅವರೇನೋ ತುಂಬಾ ಉನ್ನತ ಮಟ್ಟದ ಉಪನ್ಯಾಸಕರಾಗಿದ್ದರು. ಅವರ ಮಾರ್ಗದರ್ಶನದಿಂದಲೇ ನಾನು
ಪಿ.ಯು.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದೆ. ಆದರೆ ನಮಗೆ ಸಮಸ್ಯೆಯಾದುದು ಹೊಸದಾಗಿ
ಉಪನ್ಯಾಸಕರಾಗಿ ಬಂದ ಶ್ರೀನಾಥ ಶಾಸ್ತ್ರಿಯವರು. ಶಾಸ್ತ್ರಿಯವರೇನೋ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ
ಪರೀಕ್ಷೆಯಲ್ಲಿ Rank ಗಳಿಸಿದ್ದರು. ಹಾಗೆಯೇ ಅವರು ಕನ್ನಡದ ಶ್ರೇಷ್ಠ ವಿದ್ವಾಂಸ ಪ್ರೊಫೆಸರ್ ತೀ.
ನಂ. ಶ್ರೀಕಂಠಯ್ಯನವರ ಮೊಮ್ಮಗನೂ ಆಗಿದ್ದರು. ತೀ. ನಂ. ಶ್ರೀ. ಅವರು ಎಷ್ಟು ಪ್ರಸಿದ್ಧರೆಂದರೆ ಒಂದು ಕಾಲದಲ್ಲಿ ಬೆಂಗಳೂರಿನ
ಸೌತ್ ಎಂಡ್ ಸರ್ಕಲ್ಲಿಗೆ ತೀ.ನಂ. ಶ್ರೀ. ಸರ್ಕಲ್ ಎಂದು ನಾಮಕರಣ ಮಾಡಿ ಅವರ ಪುಟ್ಟ ಪ್ರತಿಮೆಯನ್ನೂ
ಅಲ್ಲಿ ಸ್ಥಾಪಿಸಲಾಗಿತ್ತು. ಆದರೆ ಇಂದು ಅದು ಯಾರಿಗೂ ನೆನಪಿಲ್ಲ. ಹಾಗೆಯೇ ಅವರ ಪ್ರತಿಮೆಯೂ ಮೂಲೆ ಸೇರಿದಂತಿದೆ!
ಒಬ್ಬ ತುಂಬಾ ಮೆರಿಟ್ ವಿದ್ಯಾರ್ಥಿ
ಎಷ್ಟು ಕಳಪೆ ಉಪನ್ಯಾಸಕನಾಗಲು ಸಾಧ್ಯ ಎಂಬುದಕ್ಕೆ ಶಾಸ್ತ್ರಿಯವರು ಒಬ್ಬ ಸಾಕ್ಷಿಯಾಗಿದ್ದರು!
ಉದಾಹರಣೆಗೆ
ಅವರು ತರಗತಿಯ ಪ್ರಾರಂಭದಲ್ಲಿ ಒಂದು ಮ್ಯಾಥಮ್ಯಾಟಿಕ್ಸ್ ಸಮಸ್ಯೆಯನ್ನು ಕಪ್ಪು ಹಲಗೆಯ ಮೇಲೆ ಬರೆದು
ನಮಗೆ ಅದನ್ನು ಹೇಗೆ ಉತ್ತರಿಸಬೇಕೆಂದು ತಿಳಿಸಲು ನೋಡುತ್ತಿದ್ದರು. ಆದರೆ ಆ ವಿವರಣೆ ಮಾಡುವಾಗ ಅವರು
ಎಷ್ಟು ಗೊಂದಲಕ್ಕೀಡಾಗುತ್ತಿದ್ದರೆಂದರೆ ಕೊನೆಗೆ ಅವರಿಗೆ ಸಮಸ್ಯೆ ಏನಿತ್ತೆಂದೇ ಮರೆತುಹೋಗಿಬಿಡುತ್ತಿತ್ತು!
ಕೊನೆಯಲ್ಲಿ ತಾವು ಕಪ್ಪು ಹಲಗೆಯ ಮೇಲೆ ಬರೆದುದನ್ನೆಲ್ಲಾ ಅಳಿಸಿ ಆ ದಿನದ ತರಗತಿಯನ್ನು ಮುಗಿಸಿಬಿಡುತ್ತಿದ್ದರು,
ಮುಂದಿನ ತರಗತಿಯಲ್ಲಿ ಇನ್ನೊಂದು ಹೊಸ ಸಮಸ್ಯೆಯನ್ನು ಪ್ರಾರಂಭಮಾಡಿ ಅದನ್ನೂ ಗೊಂದಲದಲ್ಲಿ ಮುಕ್ತಾಯ
ಮಾಡಿಬಿಡುತ್ತಿದ್ದರು. ಒಟ್ಟಿನಲ್ಲಿ ಶಾಸ್ತ್ರಿಯವರು ಮ್ಯಾಥಮ್ಯಾಟಿಕ್ಸ್ ಸಮಸ್ಯೆಗಳನ್ನು
ಹೇಗೆ ಬಗೆಹರಿಸಬೇಕೆಂದು ನಮಗೆ ಕಲಿಸುವ ಬದಲಾಗಿ ಅವರೇ ನಮಗೊಂದು ಸಮಸ್ಯೆ ಆಗಿಬಿಟ್ಟರು!
ಶಾಸ್ತ್ರಿಯವರ ಈ ಬಗೆಯ ಉಪನ್ಯಾಸಗಳು
ನನ್ನ ತಲೆಯನ್ನೇ ಕೆಡಿಸಿಬಿಟ್ಟವು. ಏಕೆಂದರೆ ನಾನು ಅಂತಿಮ ಬಿ.ಎಸ್ ಸಿ. ಪರೀಕ್ಷೆಯಲ್ಲಿ Rank ತೆಗೆದುಕೊಳ್ಳಬೇಕಾದರೆ
ಮೈನರ್ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ಇನ್ನೂರಕ್ಕೆ ಇನ್ನೂರು ಅಂಕಗಳನ್ನು ತೆಗೆದುಕೊಳ್ಳುವುದು
ಅತ್ಯಾವಶ್ಯಕವಾಗಿತ್ತು. ಆದರೆ ಶಾಸ್ತ್ರಿಗಳು ಪಾಠ ಮಾಡುವ ರೀತಿ ನೋಡಿದರೆ ನಾನು Rank
ಪಡೆಯುವುದಿರಲಿ, ಅವರ ಸಬ್ಜೆಕ್ಟಿನಲ್ಲಿ ಪಾಸ್ ಆಗುವುದೇ ಅನುಮಾನವಾಗಿ ಕಾಣತೊಡಗಿತು! ನನಗೆ ಆಗಾಗ ನಾನು
ಅವರ ಸಬ್ಜೆಕ್ಟಿನಲ್ಲಿ ಫೇಲ್ ಆದಂತೆ ದುಸ್ವಪ್ನಗಳು ಕಾಣತೊಡಗಿದವು. ನಾನು ಎನ್.ಆರ್.ಭಟ್ ಅವರೊಡನೆ
ನನ್ನ ಸಮಸ್ಯೆ ಮತ್ತು ಭಯವನ್ನು ಹೇಳಿಕೊಂಡೆ. ಅವರು ನನಗೆ ಕೌನ್ಸೆಲಿಂಗ್ ಮಾಡಲು ಪ್ರಯತ್ನಿಸಿದರು.
ಅವರ ಪ್ರಕಾರ ಶಾಸ್ತ್ರಿಯವರು ಎಷ್ಟೇ ಕೆಟ್ಟದ್ದಾಗಿ ಪಾಠ ಮಾಡಿದರೂ ನಾನು ೨೦೦ಕ್ಕೆ ೨೦೦ ಅಂಕಗಳನ್ನು
ಪಡೆಯಲು ಸಮರ್ಥನಾಗಿದ್ದೆ! ನನಗೆ ಅವರ ಮಾತುಗಳಲ್ಲಿ
ನಂಬಿಕೆ ಬರಲಿಲ್ಲ. ಶಾಸ್ತ್ರಿಗಳ ಸಮಸ್ಯೆ ಹಾಗೆಯೇ ಮುಂದುವರಿಯಿತು.
(ಶಾಸ್ತ್ರಿಯವರು ಎರಡು ವರ್ಷದ ನಂತರ
ನಮ್ಮ ಕಾಲೇಜಿನ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲಿ ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ
(NAL) ಸೇರಿಕೊಂಡರು. ನಾನು ಎಷ್ಟೋ ವರ್ಷದ ನಂತರ ಅವರನ್ನು
ಅವರ ಮನೆಯಲ್ಲೇ ಭೇಟಿ ಮಾಡಿದ್ದೆ. ಅವರು ಆ ಸಂಸ್ಥೆಯಲ್ಲಿ ಕಣಾದ ಎಂಬ ಹೆಸರಿನ ಮ್ಯಾಗಜಿನ್ ಹೊರಡಿಸಲು
ಕಾರಣರಾಗಿದ್ದರು. ಶಾಸ್ತ್ರಿಯವರು ನಮಗೆ ಒಳ್ಳೆಯ ಉಪನ್ಯಾಸಕರು ಆಗಿರದಿದ್ದರೂ ಆ ಸಂಸ್ಥೆಯಲ್ಲಿ ಒಳ್ಳೆಯ
ಹೆಸರು ತೆಗೆದುಕೊಂಡಿದ್ದರು)
ವೆಂಕಣ್ಣಯ್ಯನವರ
ಕಾಳಿದಾಸನ ಕೃತಿಗಳ ಪಾಠ
ನಮ್ಮ ಸಂಸ್ಕೃತ ಉಪನ್ಯಾಸಕರಾದ ವೆಂಕಣ್ಣಯ್ಯನವರು
ಪ್ರಖ್ಯಾತ ಕನ್ನಡ ಪ್ರೊಫೆಸರ್ ತ.ಸು. ಶಾಮರಾಯರ ಮಗನೆಂದು ಹಿಂದೆಯೇ ಬರೆದಿದ್ದೇನೆ. ತುಂಬಾ ಒಳ್ಳೆಯ
ಉಪನ್ಯಾಸಕರೇ ಆಗಿದ್ದ ವೆಂಕಣ್ಣಯ್ಯನವರು ಕಾಳಿದಾಸನ ಕೃತಿಗಳ ಪಾಠವನ್ನು ಮಾಡುವುದರಲ್ಲಿ ತುಂಬಾ ನಿಪುಣರಾಗಿದ್ದರು.
ಅವರು
ಅವನ ಕೃತಿಗಳಲ್ಲಿ ಬರುತ್ತಿದ್ದ ಕಾಮುಕತೆ ಮತ್ತು ಪ್ರಣಯ ಪ್ರಸಂಗಗಳನ್ನು ತುಂಬಾ ತನ್ಮಯತೆಯಿಂದ ನಮಗೆ ವಿವರಿಸುತ್ತಿದ್ದರು. ನಾವು ಪಿ.ಯು.ಸಿ
ತರಗತಿಯಲ್ಲಿ ಓದುವಾಗ ಅವರಿಗಿನ್ನೂ ಮದುವೆಯಾಗಿರಲಿಲ್ಲ.
ಆದರೆ ನಾವು ಬಿ.ಎಸ್ ಸಿ. ಮೊದಲ ವರ್ಷಕ್ಕೆ ಬರುವಾಗ ಅವರಿಗೆ ವಿವಾಹವಾಗಿಬಿಟ್ಟಿತ್ತು. ಹಾಗಾಗಿ ಅವರು
ತಮ್ಮ ಸ್ವಂತ ಅನುಭವದಿಂದ ಪ್ರಣಯ ಪ್ರಸಂಗಗಳನ್ನು ಇನ್ನೂ ಹೆಚ್ಚು ತನ್ಮಯತೆಯಿಂದ ನಮಗೆ ಬೋಧಿಸಲು ಸಾಧ್ಯವಾಯಿತೆಂದು
ನಾವುಗಳೆಲ್ಲ ತಮಾಷೆ ಮಾಡುತ್ತಿದ್ದೆವು! ನಮ್ಮ ಸಂಸ್ಕೃತ ತರಗತಿಗೆ ಕೆಲವು ವಿಧ್ಯಾರ್ಥಿನಿಯರೂ ಬರುತ್ತಿದ್ದರು.
ಹಾಗಾಗಿ ವೆಂಕಣ್ಣಯ್ಯನವರು ಪ್ರಣಯ ಪ್ರಸಂಗಗಳನ್ನು ವಿವರಿಸುವಾಗ ನಮಗೆ ಸ್ವಲ್ಪ ಮುಜುಗರವಾಗುತ್ತಿತ್ತು.
ಆದರೆ ವೆಂಕಣ್ಣಯ್ಯನವರಿಗೆ ಅದರಲ್ಲೇನೂ ಮುಜುಗರವಾದಂತೆ ನಮಗನಿಸಲಿಲ್ಲ !
ಎನ್.ಬಿ.ಎನ್.ಮೂರ್ತಿಯವರು
ಮತ್ತು ಶೇಕ್ಸ್ ಪಿಯರ್ ಬರೆದ ಒಥೆಲೋ ನಾಟಕ
ನಮ್ಮ ಇಂಗ್ಲಿಷ್ ರೀಡರ್ ಎನ್.ಬಿ.ಎನ್.ಮೂರ್ತಿಯವರು
ಅತ್ಯಂತ ಶ್ರೇಷ್ಠ ಅಧ್ಯಾಪಕರಾಗಿದ್ದರು. ಇಂಗ್ಲಿಷ್ ಕವನಗಳನ್ನು ಮತ್ತು ಶೇಕ್ಸ್
ಪಿಯರ್ ನಾಟಕಗಳನ್ನು ಅವರಷ್ಟು ಚೆನ್ನಾಗಿ ಮಾಡುವವರು ಬೇರೆ ಯಾರೂ ಇರಲಿಲ್ಲ. ನಮಗೆ ಶೇಕ್ಸ್ ಪಿಯರ್
ಬರೆದ ಒಥೆಲೋ ನಾಟಕ ಪಠ್ಯಪುಸ್ತಕವಾಗಿತ್ತು. ಪರಮ ಸುಂದರಿಯಾದ ಡೆಸ್ಡೆಮೋನಾ ತನ್ನ ಪತಿಯೇ
ತನ್ನ ಪಾತಿವ್ರತ್ಯದ ಬಗ್ಗೆ ಸಂಶಯ ಹೊಂದಿ ತನ್ನನ್ನು ಕೊಲೆ ಮಾಡುವ ದುರಂತವನ್ನು ಎದುರಿಸುತ್ತಾಳೆ.
ಅದಕ್ಕೆ
ನರಿ ಬುದ್ದಿಯ ಇಯಾಗೋ ಮಾಡಿದ ಪಿತೂರಿಯೇ ಕಾರಣ. ಮೂರ್ತಿಯವರು ಈ ನಾಟಕವನ್ನು ನಮಗೆ ಎಷ್ಟು
ಚೆನ್ನಾಗಿ ಬೋಧಿಸಿದ್ದರೆಂದರೆ ನನಗೆ ಅವರ ನೆನಪು ಮರುಕಳಿಸಿದಾಗೆಲ್ಲಾ ಒಥೆಲೋ ನಾಟಕದ ದುರಂತ ನೆನಪಾಗುತ್ತದೆ.
ಆ ಕಾಲದಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ
ಪದವಿ ಪಡೆದವರ ಕೊರತೆ ಇತ್ತು. ನಮ್ಮ ಇನ್ನೊಬ್ಬ ಹೊಸ ಇಂಗ್ಲಿಷ್ ಉಪನ್ಯಾಸಕರು ಚೆನ್ನೈ ಇಂದ ಬಂದವರಾಗಿದ್ದರು.
ನನಗೆ ಅವರ ಹೆಸರು ನೆನಪಾಗುತ್ತಿಲ್ಲ. ಇಂಗ್ಲಿಷ್ ಎಂ.ಏ. ಪದವೀಧರರಾಗಿದ್ದ ಅವರು ಹಿರಿಯ ವಯಸ್ಸಿನವರಾಗಿದ್ದು
ಅಲ್ಲಿಯವರೆಗೆ ಹೈಸ್ಕೂಲ್ ಮೇಷ್ಟ್ರಾಗಿದ್ದರು. ಅವರ ಬೋಧನೆಯ ಮಟ್ಟ ಕೂಡ ಹೈಸ್ಕೂಲ್ ಮಟ್ಟದಲ್ಲೇ ಇತ್ತು.
ನಮಗೆ ಮೂರ್ತಿಯವರು ನೂರು ಕ್ಯಾಂಡಲ್ ಬಲ್ಬ್ ಅನಿಸಿದರೆ ಇವರು ಸೊನ್ನೆ ಕ್ಯಾಂಡಲ್ ಬಲ್ಬ್ ಅನಿಸುತ್ತಿತ್ತು!
ಆಮೇಲೆ
ಸ್ವಲ್ಪ ಕಾಲದ ನಂತರ ಇಂಗ್ಲೀಷಿನಲ್ಲಿ ಬಿ. ಏ. (ಆನರ್ಸ್) ಪಾಸ್ ಮಾಡಿದ್ದ ಸೂರ್ಯನಾರಾಯಣ ಎನ್ನುವರು
ನಮಗೆ ಟ್ಯೂಟರ್ ಆಗಿ ಬಂದರು. ಅವರೂ ಕೂಡ ಹಿಂದೆ ಹೈಸ್ಕೂಲ್ ಮೇಷ್ಟ್ರಾಗಿದ್ದವರು. ಸೂರ್ಯನಾರಾಯಣ
ಅವರು ಕಾಲೇಜ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಷ್ಟು ಸಮರ್ಥರೇ ಆಗಿರಲಿಲ್ಲ. ಅವರು ನಮಗೆ ಗದ್ಯದ
(Prose) ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಪ್ರಕಾರ ಇಂಗ್ಲಿಷ್ ಗದ್ಯ ಪಾಠವೆಂದರೆ ಕೇವಲ ಅದರಲ್ಲಿ ಬರುವ ಇಂಗ್ಲಿಷ್ ಪದಗಳ ಕನ್ನಡ ಅರ್ಥವನ್ನು
ನಮಗೆ ತಿಳಿಸುವುದು! ಹಾಗಾಗಿ ನಮಗೆ ಗದ್ಯ ಪಾಠ ಒಂದು ದುರಂತವೆಂದೇ ಅನಿಸಿ ಬಿಟ್ಟಿತ್ತು!
ನನ್ನ
ಮಿತ್ರ ಬೀರೂರಿನ ಶಿವಶಂಕರಪ್ಪ
ಆ ವರ್ಷ ಹೊಸದಾಗಿ ನಮ್ಮ ತರಗತಿಗೆ ಸೇರಿದ ವಿದ್ಯಾರ್ಥಿಗಳಲ್ಲಿ ಬೀರೂರಿನ ಶಿವಶಂಕರಪ್ಪ ಎಂಬುವರೂ
ಒಬ್ಬರಾಗಿದ್ದರು. ಅವರು ನನ್ನ ಹಾಸ್ಟೆಲ್ ಮೇಟ್ ಕೂಡ ಆಗಿದ್ದರು. ನಾವಿಬ್ಬರೂ ಬೇಗನೆ ಆತ್ಮೀಯ ಸ್ನೇಹಿತರಾಗಿ
ಬಿಟ್ಟೆವು. ತಮ್ಮ ತಂದೆಯ ಹಿರಿಯ ಮಗನಾಗಿದ್ದ ಶಿವಶಂಕರಪ್ಪ
ಬೀರೂರಿನ ಒಂದು ಪ್ರಸಿದ್ಧ ಲಿಂಗಾಯಿತ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರ ತಂದೆ
ಮಾರ್ಗದ ಮಲ್ಲಪ್ಪನವರು ಒಬ್ಬ ಪ್ರಸಿದ್ಧ ಮತ್ತು ಹಿರಿಯ ವಕೀಲರಾಗಿದ್ದರು. ಮಲ್ಲಪ್ಪನವರು ೧೯೬೭ನೇ ಇಸವಿಯಲ್ಲಿ
ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೀರೂರು-ಕಡೂರು ಕ್ಷೇತ್ರದಿಂದ ಜಯಗಳಿಸಿದರು. ಮುಂದೆ ಅವರು ದೇವರಾಜ
ಅರಸು ಅವರ ಮಂತ್ರಿಮಂಡಲದಲ್ಲಿ ಅರೋಗ್ಯ ಮಂತ್ರಿಯೂ ಆಗಿದ್ದರು. ನಾನು ಆ ಬೇಸಿಗೆ ರಜೆಯಲ್ಲಿ ಬೀರೂರಿಗೆ
ಹೋಗಿ ಶಿವಶಂಕರಪ್ಪನವರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದೆ. ಅವರ ಕುಟುಂಬದವರು ನನಗೆ ತುಂಬಾ ಆದರದ
ಆತಿಥ್ಯ ನೀಡಿದ್ದರು.
ಮಲ್ಲಪ್ಪನವರಿಗೆ ಅವರು ಬಿ. ಏ. (ಆನರ್ಸ್) ಓದುವಾಗ ಜವಾಹರ್ಲಾಲ್ ನೆಹರು ಅವರ ಕಿರಿಯ ಸಹೋದರಿ ಕೃಷ್ಣ
ಹತೀಸಿಂಗ್ ಅವರು ಬರೆದ ಆತ್ಮಕಥೆಯಾದ “ವಿತ್ ನೋ ರಿಗ್ರೆಟ್ಸ್“ ಒಂದು ಪಠ್ಯ ಪುಸ್ತಕವಾಗಿತ್ತಂತೆ. ಶಿವಶಂಕರಪ್ಪನವರು ಅದನ್ನು ನನಗೆ ಓದಲು ಕೊಟ್ಟಿದ್ದರು. ಕೃಷ್ಣ
ಹತೀಸಿಂಗ್ ಅವರು ತುಂಬಾ ಭಾವನಾತ್ಮಕವಾಗಿ ಬರೆದಿದ್ದ
ಈ ಆತ್ಮಕಥೆ ನನಗೆ ತುಂಬಾ ಇಷ್ಟವಾಯಿತು. ಅದನ್ನು ತಿಳಿದ ಶಿವಶಂಕರಪ್ಪನವರು ಆ ಪುಸ್ತಕವನ್ನು ನನಗೆ
ಉಡುಗೊರೆಯಾಗಿ ಕೊಟ್ಟುಬಿಟ್ಟರು. ಆ ಪುಸ್ತಕ ಇಂದೂ
ನನ್ನ ಬಳಿ ಇದೆ. ಅದನ್ನು ನೋಡುವಾಗ ನನ್ನ ಮತ್ತು ಶಿವಶಂಕರಪ್ಪನವರ ಅಂದಿನ ಆತ್ಮೀಯ ಗೆಳೆತನದ ದಿನಗಳ
ನೆನಪು ಮರುಕಳಿಸುತ್ತದೆ.
------- ಮುಂದುವರಿಯುವುದು-----