ಆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ.
ಪ್ರಿನ್ಸಿಪಾಲರ ಇಚ್ಚೆಗೆ ವಿರುದ್ಧವಾಗಿ ನಾನೇನೂ ಮಾಡಲು
ಸಾಧ್ಯವಿಲ್ಲವೆಂದು ನನಗೆ ಗೊತ್ತಿತ್ತು. ತುಂಬಾ ಗೌರವಾನ್ವಿತ ವ್ಯಕ್ತಿಯಾದ ಅವರೊಡನೆ ಹೋರಾಡುವ ಪರಿಸ್ಥಿತಿ
ನನಗೆ ಬಂದಿತ್ತು. ಆದರೆ ಅವರ ವಿರುದ್ಧ ನಾನೇನಾದರೂ ದೂರು ಕೊಟ್ಟರೆ ನನಗೆ ಬೆಂಬಲ ನೀಡುವವರು ಯಾರೂ
ಇಲ್ಲವೆಂದೂ ನನಗೆ ಗೊತ್ತಿತ್ತು. ಆದರೆ ನಾನು ಯಾವ ಕಾರಣಕ್ಕೂ ಅಕಾಡೆಮಿಯ ಏಳು ವರ್ಷದ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಮೂರ್ಖತನದ ಪರಮಾವಧಿ
ಎಂದೂ ನನಗೆ ಅರಿವಿತ್ತು.
ಪುಟ್ಟಣ್ಣ ಆಗ ರಜೆಗೆಂದು ಬೆಂಗಳೂರಿನಿಂದ
ಬಂದವನು ಇನ್ನೂ ವಾಪಾಸ್ ಹೋಗಿರಲಿಲ್ಲ. ನಾನು ಅವನೊಡನೆ ನನ್ನ ಸಮಸ್ಯೆಯನ್ನು ಹೇಳಿದೆ. ನಾವಿಬ್ಬರೂ
ಒಟ್ಟಿಗೆ ಪ್ರಿನ್ಸಿಪಾಲರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದೆವು. ಅವರ ಮನೆ ಭಾರತಿ
ಬೀದಿಯಲ್ಲಿದ್ದ ಶ್ರೀಕಂಠಯ್ಯನವರ ಮನೆಯಿಂದ ಮೂರನೇ ಮನೆಯಾಗಿತ್ತು. ಪುಟ್ಟಣ್ಣ
ಪ್ರಿನ್ಸಿಪಾಲರಿಗೆ ನನಗೆ ಬಾಂಡ್ ಗಳಲ್ಲಿ ಏಕೆ ಹಣ ಹೂಡಲು ಸಾಧ್ಯವಿಲ್ಲವೆಂದು ವಿವರಿಸಿದ. ತುಂಬಾ ತಾಳ್ಮೆಯಿಂದಲೇ
ಅದನ್ನು ಕೇಳಿಸಿಕೊಂಡ ಅವರು, ಅಕಾಡೆಮಿಯು ನನಗೆ ಮಾಡಿದ ಸಹಾಯಕ್ಕೆ ಮರು ಸಹಾಯ ಮಾಡುವುದು ನನ್ನ ಕರ್ತವ್ಯ
ಎಂದು ಪುನಃ ಹೇಳಿದರು. ನಾವು ನಮ್ಮ ಉದ್ದೇಶ ಸಾಧಿಸಲಾಗದೇ ಹಿಂದಿರುಗಿದೆವು.
ಶ್ರೀಕಂಠಯ್ಯನವರಿಂದ
ಸಲಹೆ
ಆ ರಾತ್ರಿ ನಾನು ನನ್ನ ಸಮಸ್ಯೆಯನ್ನು
ಶ್ರೀಕಂಠಯ್ಯನವರ ಹತ್ತಿರ ಹೇಳುವುದೇ ಸರಿಯೆಂದು ತೀರ್ಮಾನಿಸಿದೆ. ಮಾರನೇ ದಿನ ಬೆಳಿಗ್ಗೆ ನಾನು ನನ್ನ
ಸಂಕಟ ಪರಿಸ್ಥಿತಿಯನ್ನು ಅವರೊಡನೆ ಹೇಳಿಕೊಂಡೆ. ಅವರಿಗೆ ನನ್ನ ಮಾತನ್ನು ನಂಬುವುದೇ
ಅಸಾಧ್ಯವಾಯಿತು. ಪ್ರಿನ್ಸಿಪಾಲರ ಮೇಲೆ ಅವರ ಕೋಪ ನೆತ್ತಿಗೇರಿತು. ಒಬ್ಬ
ವಿದ್ಯಾರ್ಥಿ ತನ್ನ ಸ್ಕಾಲರ್ಷಿಪ್ ಹಣವನ್ನು ಏಳು ವರ್ಷದ ಬಾಂಡ್ ಗಳಲ್ಲಿ ತೊಡಗಿಸುವ ಸಲಹೆ ಎಷ್ಟು ಮೂರ್ಖತನದ್ದು
ಎಂದು ಅವರು ಪ್ರತಿಕ್ರಿಯಿಸಿದರು.
ಇಲ್ಲಿ ಶ್ರೀಕಂಠಯ್ಯನವರ ವ್ಯಕ್ತಿತ್ವದ
ಬಗ್ಗೆ ಕೆಲವು ವಿಷಯಗಳನ್ನು ಹೇಳಲೇ ಬೇಕು. ಶೃಂಗೇರಿ ಕಾಲೇಜಿನ ಆಡಳಿತ ವರ್ಗಕ್ಕೆ ಅವರೊಬ್ಬ ಬಂಡಾಯಗಾರನಂತಿದ್ದರು.
ಮೊದಲನೆಯದಾಗಿ ಅವರು ತಮ್ಮ ಮಗ ಜಯಪ್ರಕಾಶನನ್ನು ಶೃಂಗೇರಿಯಲ್ಲೇ ಕಾಲೇಜಿಗೆ ಕಳಿಸಬಹುದಾಗಿದ್ದರೂ ಬೇಕೆಂದೇ
ಅವನನ್ನು ಹುಬ್ಬಳ್ಳಿ ಕಾಲೇಜಿಗೆ ಸೇರಿಸಿದ್ದರು. ಅದಕ್ಕಾಗಿ ಅವರು ಹೆಚ್ಚು ಹಣ ಖರ್ಚು ಮಾಡಲೂ ಹಿಂಜರಿದಿರಲಿಲ್ಲ.
ಇನ್ನು
ಚಂದ್ರಮೌಳಿರಾಯರು ಅವರ ಭಾವನೇ ಆದರೂ ಅವರು ಯಾವುದೇ ವಿಷಯದಲ್ಲಿ ಆವರೊಡನೆ ಸ್ಪಂದಿಸುತ್ತಿರಲಿಲ್ಲ. ಇನ್ನು
ಶೃಂಗೇರಿ ಪೇಟೆಯಲ್ಲಿ ಅವರದ್ದೇ ಆದ ಒಂದು ಪ್ರಭಾವಶಾಲಿ ಸ್ನೇಹಿತರ ಗುಂಪು ಇತ್ತು. ಆ ವಲಯದಲ್ಲಿ
ಅವರು ತುಂಬಾ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಹಾಗಾಗಿ ಕಾಲೇಜಿನ ಆಡಳಿತ ವರ್ಗಕ್ಕೆ ಅವರ ಬಗ್ಗೆ
ಸ್ವಲ್ಪ ಭಯವೇ ಇತ್ತು.
ಅವರ ವ್ಯಕ್ತಿತ್ವದ ವಿಶಿಷ್ಟತೆ ಎಂದರೆ
ಅವರ ಉಲ್ಲಾಸಶೀಲ ಸ್ವಭಾವ ಮತ್ತು ಯಾವುದೇ ಸಮಸ್ಯೆಗೆ ಕೂಡಲೇ ತಕ್ಕ ಪರಿಹಾರ ಕಂಡು ಹಿಡಿಯುವ ಜಾಣ್ಮೆ.
ಯಾವಾಗಲೂ
ಉತ್ಸಾಹದಿಂದಲೇ ಇರುತ್ತಿದ್ದ ಅವರು ಯಾವುದೇ ಕಷ್ಟದ ಸನ್ನಿವೇಶದಲ್ಲೂ ತುಂಬಾ ಆಶಾವಾದಿಯಾಗಿಯೇ ಇರುತ್ತಿದ್ದರು. ನಾನು ಎಷ್ಟೋ ಬಾರಿ ನನ್ನ ಸಮಸ್ಯೆಯೊಂದನ್ನು
ಅವರ ಬಳಿ ತೆಗೆದುಕೊಂಡು ಹೋಗಿದ್ದೆ. ಆದರೆ ಅವರೊಡನೆ ಮಾತನಾಡಿ ಹಿಂದಿರುಗುವಾಗ ಅದೊಂದು ಸಮಸ್ಯೆಯೇ
ಆಗಿರಲಿಲ್ಲವೆಂದು ಶ್ರೀಕಂಠಯ್ಯನವರು ನನಗೆ ಮನವರಿಕೆ
ಮಾಡಿರುತ್ತಿದ್ದರು. ಅವರ ಮನೋವೃತ್ತಿ ಹೇಗಿರುತ್ತಿತ್ತೆಂದರೆ ಆ ಸಮಸ್ಯೆಯಲ್ಲೇ
ಅದರ ಪರಿಹಾರ ಅಡಗಿರುತ್ತಿತ್ತು!
ಈಗ ನಾವು ನನ್ನ ಬಾಂಡ್ ಸಮಸ್ಯೆಗೆ ವಾಪಾಸ್
ಬರೋಣ. ಶ್ರೀಕಂಠಯ್ಯನವರು ನನಗೊಂದು ಸರಳ ಪರಿಹಾರವನ್ನು ಸಲಹೆ ಮಾಡಿದರು. ಅದರ ಪ್ರಕಾರ ನಾನು ಪುನಃ
ಪ್ರಿನ್ಸಿಪಾಲರನ್ನು ಭೇಟಿ ಮಾಡಿ ನಾನು ಬಾಂಡ್ ಬಗ್ಗೆ ಶ್ರೀಕಂಠಯ್ಯನವರ ಹತ್ತಿರ ಚರ್ಚಿಸಿದ್ದಾಗಿ ಹೇಳಬೇಕಿತ್ತು.
ಮತ್ತು ಶ್ರೀಕಂಠಯ್ಯನವರು ಆ ವಿಚಾರದಲ್ಲಿ ಸ್ವತಃ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಬೇಕಿತ್ತು.
ನಾನು ಆ ಸಂಜೆಯೇ ಪ್ರಿನ್ಸಿಪಾಲರನ್ನು
ಅವರ ಮನೆಯಲ್ಲೇ ಭೇಟಿ ಮಾಡಿದೆ. ಅವರೊಡನೆ ನಾನು ಶ್ರೀಕಂಠಯ್ಯನವರ ಹತ್ತಿರ ವಿಷಯವನ್ನು ಚರ್ಚಿಸಿದ್ದಾಗಿಯೂ
ಮತ್ತು ಶ್ರೀಕಂಠಯ್ಯನವರೇ ಖುದ್ದಾಗಿ ಅವರನ್ನು ಭೇಟಿ ಮಾಡಿ ಆ ವಿಚಾರವನ್ನು ಚರ್ಚಿಸುವುದಾಗಿಯೂ ಹೇಳಿಬಿಟ್ಟೆ. ನಾನು ಹಾಗೆ ಹೇಳುತ್ತಿದ್ದಂತೆಯೇ ಪ್ರಿನ್ಸಿಪಾಲರ ಮುಖದ ಬಣ್ಣವೇ
ಬದಲಾಗಿ ಬಿಟ್ಟಿತು. ನನ್ನ ಮಾತು ಅವರನ್ನು ದೊಡ್ಡ ಗೊಂದಲಕ್ಕೀಡು ಮಾಡಿತೆಂದು
ಅವರ ವರ್ತನೆಯಿಂದಲೇ ಗೊತ್ತಾಗಿ ಹೋಯಿತು. ಶ್ರೀಕಂಠಯ್ಯನವರು ಆ ವಿಷಯದಲ್ಲಿ ತಲೆ
ಹಾಕಿದರೆ ವಿಷಯ ತಮಗೆ ತಿರುಗುಬಾಣವಾಗಿ ಪರಿಣಮಿಸುವುದೆಂದು ಅವರಿಗೆ ಅನಿಸಿರಬೇಕು. ಅವರು ಕೂಡಲೇ ನನಗೆ ಆ ವಿಷಯವನ್ನು ಅಲ್ಲಿಯೇ ಕೈಬಿಟ್ಟು ನಾನು
ನನ್ನ ಅಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು ಹೇಳಿಬಿಟ್ಟರು. ಅವರು ಕೇವಲ ನನ್ನ ಹಿತದೃಷ್ಟಿಯಿಂದ ಆ ಸಲಹೆ
ಕೊಟ್ಟಿದ್ದರಂತೆ! ಶ್ರೀಕಂಠಯ್ಯನವರನ್ನು ಆ ವಿಷಯದಲ್ಲಿ ತಲೆ ಹಾಕುವಂತೆ ಮಾಡುವುದು ಅನಾವಶ್ಯಕವಾಗಿತ್ತಂತೆ!
ನಾನು ಶ್ರೀಕಂಠಯ್ಯನವರಿಗೆ ಅವರ ನಮಸ್ಕಾರಗಳನ್ನು ತಿಳಿಸಬೇಕಂತೆ!
ನಾನು ಶ್ರೀಕಂಠಯ್ಯನವರ ಮನೆಗೆ ಹಿಂದಿರುಗಿ
ಅವರಿಗೆ ಪ್ರಿನ್ಸಿಪಾಲರ ನಮಸ್ಕಾರಗಳನ್ನು ತಿಳಿಸಿದಾಗ ಅವರ ಮುಖದಲ್ಲಿ ಮುಗುಳ್ನಗೆಯೊಂದು ಕಾಣಿಸಿಕೊಂಡಿತು.
ಅವರಿಗೆ
ಪ್ರಿನ್ಸಿಪಾಲರ ಮನೆಗೆ ನನ್ನ ಭೇಟಿಯ ಪರಿಣಾಮ ಮೊದಲೇ ಗೊತ್ತಿತ್ತೆಂದು ಅನಿಸುತ್ತದೆ! ಒಟ್ಟಿನಲ್ಲಿ ಮಣಿಪಾಲ್ ಅಕಾಡೆಮಿಯಲ್ಲಿ ನನ್ನ ಏಳು ವರ್ಷದ
ಬಾಂಡ್ ಗಳಲ್ಲಿನ ಹಣಹೂಡಿಕೆಯ ಪ್ರಸಂಗ ಹೀಗೆ ಕೊನೆಗೊಂಡಿತು.
ನಾನಿಲ್ಲಿ ಆಗಿನ ಮಣಿಪಾಲ್ ಅಕಾಡೆಮಿಯ
ಬಾಂಡ್ ವ್ಯವಹಾರದ ಬಗ್ಗೆ ಬರೆಯಲೇ ಬೇಕಾಗಿದೆ. ನಾನು ಈ ಹಿಂದೆಯೇ ಟಿ.ಎಮ್.ಏ. ಪೈ ಅವರು ಅಕಾಡೆಮಿಯ
ಸಂಸ್ಥಾಪಕರೆಂದು ಬರೆದಿದ್ದೇನೆ. ಪ್ರಾಯಶಃ ನಮ್ಮ ದೇಶದಲ್ಲಿ ಮೊಟ್ಟ ಮೊದಲಿಗೆ ಕ್ಯಾಪಿಟೇಷನ್ ಫೀ ಪರಿಕಲ್ಪನೆ
ತಂದವರೇ ಶ್ರೀಮಾನ್ ಪೈ ಅವರು ಇರಬೇಕು. ತುಂಬಾ ಮಹಾನ್ ಉದ್ದಿಮೆದಾರರಾದ ಪೈ ಅವರು ಏಕಾಂಗಿಯಾಗಿ ಮಣಿಪಾಲಿನಲ್ಲಿ
ಬೇರೆ ಬೇರೆ ಸಂಸ್ಥೆಗಳನ್ನು ಸ್ಥಾಪಿಸಿ ಅಷ್ಟೇ ದಕ್ಷತೆಯಿಂದ ಆ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.
ಈ ಬಗೆಯ ಬೇರೆ ಬೇರೆ ಸಂಸ್ಥೆ ಮತ್ತು
ಉದ್ದಿಮೆಗಳನ್ನು ನಡೆಸಲು ಅಧಿಕ ಬಂಡವಾಳದ ಅವಶ್ಯಕತೆ ಇತ್ತು. ಆ ದೃಷ್ಟಿಯಿಂದ ಪೈ ಅವರು ಅವರ ಆಡಳಿತವಿದ್ದ ಸಂಸ್ಥೆಗಳನ್ನು
ಭೇಟಿ ಮಾಡಿದಾಗ ಇಂತಹ ಬಾಂಡ್ ಗಳ ಪ್ರಚಾರ ಮಾಡುತ್ತಿದ್ದರು. ಆ ಬಾಂಡ್ ಗಳು ಯಾವ ಸಂಸ್ಥೆಯ ಹೆಸರಿನಲ್ಲಿ ಇದ್ದುವೆಂದು
ನನಗರಿವಿಲ್ಲ. ಪ್ರಾಯಶಃ ಈ ಸಂಸ್ಥೆಗಳ ಮುಖ್ಯಸ್ಥರಿಗೆ ಬಾಂಡ್ ಗಳನ್ನು ಅದರಲ್ಲಿ ಕೆಲಸ ಮಾಡುತ್ತಿದ್ದವರಿಗೆ
ಕೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ಕೊಟ್ಟಿರಬೇಕು. ಆದ್ದರಿಂದಲೇ ಪ್ರಿನ್ಸಿಪಾಲರು
ನನಗೆ ಅವುಗಳಲ್ಲಿ ಹಣ ತೊಡಗಿಸುವಂತೆ ಒತ್ತಾಯ ತಂದರೆಂದು ಅನಿಸುತ್ತದೆ. ನನಗೆ
ನೆನಪಿದ್ದಂತೆ ಪೈ ಅವರು ನಮ್ಮ ಕಾಲೇಜಿನ ಸಮಾರಂಭಗಳಿಗೆ ಬಂದಾಗ ಅವರ ಮುಂದೆ ನಮ್ಮ ಉಪನ್ಯಾಸಕರು ಬಾಂಡ್
ಗಳನ್ನು ಕೊಂಡುಕೊಂಡ ಬಗ್ಗೆ ವರದಿ ಮಾಡಲಾಗುತ್ತಿತ್ತು.
ಅತ್ತೆಮ್ಮನ
ಕಥೆ
ನಾನು ಈ ಹಿಂದೆಯೇ ಶ್ರೀಕಂಠಯ್ಯನವರ
ಪತ್ನಿ ಶ್ರೀಲಕ್ಷ್ಮಿಯವರು ನನ್ನನ್ನು ಅವರ ಕುಟುಂಬದ ಒಬ್ಬ ಸದಸ್ಯನಂತೆಯೇ ನೋಡಿಕೊಳ್ಳುತ್ತಿದ್ದರೆಂದು
ಬರೆದಿದ್ದೇನೆ. ಎಷ್ಟೋ ಬಾರಿ ತಮಗೆ ಅರೋಗ್ಯ ಸರಿ ಇಲ್ಲದಿದ್ದರೂ ಅವರು ನನ್ನ ಊಟೋಪಚಾರಗಳಿಗೆ ತೊಂದರೆಯಾಗದಂತೆ
ನೋಡಿಕೊಳ್ಳುತ್ತಿದ್ದರು. ಇನ್ನು ಶ್ರೀಕಂಠಯ್ಯನವರ ಮನೆಯಲ್ಲಿ ಅವರ ವಿಧವೆಯಾಗಿದ್ದ ಅಕ್ಕನೊಬ್ಬರು ಇದ್ದರೆಂದು
ನಾನು ಬರೆದಿದ್ದೆ. ಅವರನ್ನು ಎಲ್ಲರೂ ಅತ್ತೆಮ್ಮನೆಂದು ಕರೆಯುತ್ತಿದ್ದರು. ಸ್ವಲ್ಪ
ವಿಚಿತ್ರ ಸ್ವಭಾವದ ಆ ಮಹಿಳೆ ನನ್ನ ವಿಚಾರದಲ್ಲಿ ನಿಜವಾಗಿ "ಅತ್ತೆಮ್ಮನಾಗಿ" ಬಿಟ್ಟಿದ್ದರು.
ನನಗೆ
ಆಗಾಗ ಸಣ್ಣ ಸಣ್ಣ ಸಮಸ್ಯೆಗಳು ಬರುವಂತೆ ಮಾಡಿ ತುಂಬಾ ಕಿರಿಕಿರಿಯನ್ನುಂಟುಮಾಡುತ್ತಿದ್ದರು.
ಶ್ರೀಲಕ್ಷ್ಮಿಯವರು
ಮನೆಯಲ್ಲಿ ಇಲ್ಲದಾಗ ನನ್ನ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಿ ಬಿಡುತ್ತಿತ್ತು. ವಾಸ್ತವವಾಗಿ
ಗಟ್ಟಿಮುಟ್ಟಾಗಿದ್ದ
ಅತ್ತೆಮ್ಮನ ಅರೋಗ್ಯ ಯಾವಾಗಲೂ ತುಂಬಾ ಚೆನ್ನಾಗಿಯೇ ಇರುತ್ತಿತ್ತು. ಆದರೆ ಅವರು ಶ್ರೀಲಕ್ಷ್ಮಿಯವರಿಗೆ
ಮನೆ ಕೆಲಸದಲ್ಲಿ ಸ್ವಲ್ಪವೂ ಸಹಾಯ ಮಾಡುತ್ತಿರಲಿಲ್ಲ. ಆದರೆ ಅವರು ಅತ್ತೆಮ್ಮನನ್ನು ಎಂದೂ ದೂರುತ್ತಿರಲಿಲ್ಲ.
ಆದರೆ
ಅತ್ತೆಮ್ಮನವರು ಶ್ರೀಕಂಠಯ್ಯನವರಿಗೆ ತುಂಬಾ ಹೆದರುತ್ತಿದ್ದರು. ಏಕೆಂದರೆ ಅವರಿಗೆ ಯಾವುದೇ ಅಧಿಕ ಪ್ರಸಂಗಗಳು
ಇಷ್ಟವಾಗುತ್ತಿರಲಿಲ್ಲ. ನಾನೂ ಕೂಡ ಅತ್ತೆಮ್ಮನ ಬಗ್ಗೆ ತುಂಬಾ ತಾಳ್ಮೆಯಿಂದ ವರ್ತಿಸುತ್ತಿದ್ದೆ.
ಅತ್ತೆಮ್ಮನಿಗೊಬ್ಬ
ಅತಿಥಿಯ ಕಾಟ!
ನಾನು ಈಗಾಗಲೇ ಶ್ರೀಕಂಠಯ್ಯನವರ ಅತಿಥಿ
ಸತ್ಕಾರ ಸ್ವಭಾವವನ್ನು ಕೆಲವು ಮಂದಿ ದುರುಪಯೋಗ ಮಾಡಿಕೊಳ್ಳುತ್ತಿದ್ದರೆಂದು ಬರೆದಿದ್ದೇನೆ. ಅಂತಹ
ಒಬ್ಬ ವ್ಯಕ್ತಿಯ ಬಗ್ಗೆ ನಾನೀಗ ಬರೆಯಲಿದ್ದೇನೆ. ಈ ವ್ಯಕ್ತಿ ತುಂಗಾ ನದಿಯ ಮೂಲಕ್ಕೆ ಹತ್ತಿರವಿದ್ದ
ಜಕ್ಕಾರುಕೊಡಿಗೆ ಎಂಬ ಊರಿನವರು. ಅವರು ಶ್ರೀಕಂಠಯ್ಯನವರಿಗೆ ದೂರದ ಸಂಬಂಧಿ ಕೂಡ ಆಗಿದ್ದರಂತೆ. ವರ್ಷದಲ್ಲಿ
ಹಲವು ಬಾರಿ ಶೃಂಗೇರಿಗೆ ಭೇಟಿ ನೀಡುತ್ತಿದ್ದ ಈ ವ್ಯಕ್ತಿ ಮದ್ಯಾಹ್ನದ ಊಟ ಶ್ರೀಕಂಠಯ್ಯನವರ ಮನೆಯಲ್ಲೇ
ಎಂದು ದೃಢಪಡಿಸಿಕೊಂಡುಬಿಟ್ಟಿದ್ದರು. ಶ್ರೀಲಕ್ಷ್ಮಿಯವರಿಗೆ ಆ ಬಗ್ಗೆ ಯಾವುದೇ ಬೇಸರವಿರಲಿಲ್ಲ.
ಆದರೆ ಅತ್ತೆಮ್ಮನಿಗೆ ಅದು ಸುತರಾಂ ಇಷ್ಟವಿರಲಿಲ್ಲ. ತಕ್ಕ ಮಟ್ಟಿಗೆ ಶ್ರೀಮಂತನೇ ಆಗಿದ್ದ
ಆ ವ್ಯಕ್ತಿ ಏಕೆ ಹೋಟೆಲಿನಲ್ಲಿ ಊಟ ಮಾಡಬಾರದು ಎಂಬುದು ಅವರ ಪ್ರಶ್ನೆಯಾಗಿತ್ತು. ಕನಿಷ್ಠಪಕ್ಷ
ಹಳ್ಳಿಯಿಂದ ಪೇಟೆಗೆ ಬರುವಾಗ ಅಲ್ಲಿ ಬೆಳೆದ ಸ್ವಲ್ಪ ತರಕಾರಿಯನ್ನಾದರೂ ಕೈಯಲ್ಲಿ ಹಿಡಿದು ಬರಬಾರದೇ
ಎಂಬುದು ಅತ್ತೆಮ್ಮನ ವಾದವಾಗಿತ್ತು! ಅವರ ಆ ದೃಷ್ಟಿ ತೀರಾ ತಪ್ಪೆಂದೂ ಹೇಳಬರುವಂತಿರಲಿಲ್ಲ.
ಆದರೆ ಆ ವ್ಯಕ್ತಿಗೆ ಯಾವುದೇ ಸಂಕೋಚಗಳಿರಲಿಲ್ಲ.
ಶೃಂಗೇರಿ ಪೇಟೆಗೆ ಪ್ರವೇಶ ಮಾಡಿದ ಕೂಡಲೇ ಅವರು ಶ್ರೀಕಂಠಯ್ಯನವರ ಮನೆಯಲ್ಲಿ ಮೊದಲು ಪ್ರತ್ಯಕ್ಷವಾಗುತ್ತಿದ್ದರು.
ತಾವು ಮದ್ಯಾಹ್ನದ ಊಟಕ್ಕೆ ಹಾಜರಾಗುವುದಾಗಿ ಅದು ಮುನ್ಸೂಚನೆ ಆಗಿರುತ್ತಿತ್ತು! ಆ ರೀತಿ
ಅವರು ಮನೆಗೆ ಬಂದೊಡನೇ ಅತ್ತೆಮ್ಮನವರು ಬೇಕೆಂದೇ ಶ್ರೀಕಂಠಯ್ಯನವರು ಊರಿನಲ್ಲಿಲ್ಲವೆಂದು ಸುಳ್ಳು ಹೇಳಿ
ಬಿಡುತ್ತಿದ್ದರು. ಉದ್ದೇಶ ಅವರು ಮದ್ಯಾಹ್ನದ ಊಟಕ್ಕೆ ಹಾಜರಾಗಬಾರದೆಂದು! ಆದರೆ
ತುಂಬಾ ಚಾಲೂಕಿನ ಆ ವ್ಯಕ್ತಿ ತಮ್ಮ ಕೆಲಸ ಮುಗಿದ ಮೇಲೆ ಪೇಟೆಯಲ್ಲೆಲ್ಲಾ ಸುತ್ತಾಡಿ ಶ್ರೀಕಂಠಯ್ಯನವರು
ಎಲ್ಲಿದ್ದರೂ ಹುಡುಕಿ ಹಿಡಿದು ಅವರೊಡನೆ ಮದ್ಯಾಹ್ನದ ಊಟಕ್ಕೆ ಹಾಜರಾಗಿ ಬಿಡುತ್ತಿದ್ದರು.
ಊಟದ
ಮದ್ಯೆ ಆಗಾಗ ತಲೆ ಎತ್ತಿ ಆ ವ್ಯಕ್ತಿ ಅತ್ತೆಮ್ಮನತ್ತ ವ್ಯಂಗ ದೃಷ್ಟಿ ಬೀರುತ್ತಿದ್ದರು! ಆ ದೃಷ್ಟಿ
ಒಂದು ಪಂದ್ಯದಲ್ಲಿ ವಿಜಯಶಾಲಿಯಾದವನಂತಿರುತ್ತಿತ್ತು! ಅತ್ತೆಮ್ಮನಿಗೆ ಮೈ ಎಲ್ಲಾ ಉರಿದು ಹೋಗುತ್ತಿತ್ತು!
ಅತ್ತೆಮ್ಮನ
ಪಶ್ಚಾತ್ತಾಪ
ಆಮೇಲೆ ಎಷ್ಟೋ ವರ್ಷಗಳ ನಂತರ ಅತ್ತೆಮ್ಮನವರನ್ನು
ಬೆಂಗಳೂರಿನಲ್ಲಿ ಭೇಟಿ ಮಾಡುವ ಸಂದರ್ಭ ನನಗೆ ಬಂತು. ತೀರಾ ವಯಸ್ಸಾಗಿದ್ದ ಅವರನ್ನು ಶ್ರೀಕಂಠಯ್ಯನವರ
ಕುಟುಂಬಕ್ಕೆ ಸೇರಿದ ಆಸ್ಪತ್ರೆಯೊಂದರಲ್ಲಿ ಶಾಶ್ವತವಾಗಿ ಇರುವಂತೆ ಏರ್ಪಾಟು ಮಾಡಲಾಗಿತ್ತು. ನಾನು
ಅಲ್ಲಿ ಶ್ರೀಕಂಠಯ್ಯನವರ ಮಗಳು ಡಾಕ್ಟರ್ ವಿಜಯಲಕ್ಷಿ ಮತ್ತು ಮಗ ಡಾಕ್ಟರ್ ಜಯಪ್ರಕಾಶ ಅವರನ್ನು ನೋಡಲು
ಹೋಗಿದ್ದೆ. ಅತ್ತೆಮ್ಮನವರು ಇರುವುದನ್ನು ಕೇಳಿದೊಡನೇ ನಾನು ಅವರ ಹಾಸಿಗೆಯ ಹತ್ತಿರ ಹೋಗಿ ಕುಳಿತು
ಅವರನ್ನು ಮಾತನಾಡಿಸಿದೆ. ನಾವಿಬ್ಬರೂ ಶ್ರೀಕಂಠಯ್ಯನವರ ಮನೆಯ ಹಳೆಯ ದಿನಗಳನ್ನು ನೆನೆಸಿಕೊಳ್ಳತೊಡಗಿದೆವು.
ಆಗ ಇದ್ದಕ್ಕಿದ್ದಂತೇ ಅತ್ತೆಮ್ಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದರು. ಅವರು ನನಗೆ ತಾವು
ಆ ಮನೆಯಲ್ಲಿ ಎಷ್ಟು ಗೋಳು ಕೊಟ್ಟಿದ್ದರೆಂದು ಪದೇಪದೇ ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೇ
ನಾನೆಷ್ಟು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೆನೆಂದು ಪ್ರಶಂಸೆ ಮಾಡಿದರು. ತಾವು ನನಗಿತ್ತ
ಗೋಳಿಗೆ ತುಂಬಾ ಪಶ್ಚತ್ತಾಪ ಪಡುತ್ತಾ ತಮ್ಮನು ಕ್ಷಮಿಸ ಬೇಕೆಂದು ಮತ್ತು ಅದನ್ನೆಲ್ಲ ಮರೆತುಬಿಡಬೇಕೆಂದೂ
ಹೇಳತೊಡಗಿದರು. ನಾನು ಕಣ್ಣೀರಿಡುತ್ತಾ ಅವರ ಬಗ್ಗೆ ನನಗೆ ಯಾವುದೇ ಕೋಪ ಇಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟೆ.
ಅದು ನಮ್ಮಿಬ್ಬರ ಕೊನೆಯ ಭೇಟಿಯಾಗಿತ್ತು. ಆಮೇಲೆ ಸ್ವಲ್ಪ ದಿನದಲ್ಲೇ ಅತ್ತೆಮ್ಮನವರು ತೀರಿಕೊಂಡ ಸಮಾಚಾರ
ನನಗೆ ಬಂತು.
ನಮ್ಮ ಎರಡನೇ ವರ್ಷದ ಬಿ. ಎಸ್ ಸಿ.
ಡಿಗ್ರಿ ತರಗತಿಯ ವಾರ್ಷಿಕ ಪರೀಕ್ಷೆ ೧೯೬೮ನೇ ಇಸವಿಯ ಮಾರ್ಚ್ ತಿಂಗಳಲ್ಲಿ ನಡೆಯಿತು. ಈ ಪರೀಕ್ಷೆಯಲ್ಲಿ
ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸುವುದು ನನ್ನ ಗುರಿಯಾಗಿತ್ತು.
ಅದೃಷ್ಟವಶಾತ್ ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರಗಳನ್ನು (ಶ್ರೀನಾಥ ಶಾಸ್ತ್ರಿಯವರ ಸಬ್ಜೆಕ್ಟಿನಲ್ಲಿ
ಕೂಡ) ಬರೆಯಲು ಸಾಧ್ಯವಾಯಿತು, ನನ್ನ ನಿರೀಕ್ಷೆಯ ಪ್ರಕಾರ ನಾನು ೨೦೦ಕ್ಕೆ ೨೦೦ ಅಂಕಗಳನ್ನು ಗಳಿಸುವೆನೆಂದು
ಭಾವಿಸಿದೆ.
------- ಮುಂದುವರಿಯುವುದು-----