Monday, July 27, 2020

ಬಾಲ್ಯ ಕಾಲದ ನೆನಪುಗಳು – ೧೦೪

ವೇಳೆಗೆ ನನಗೆ ಇನ್ನೊಂದು ಮೂಲದಿಂದಲೂ ಟಾಟಾ ಇನ್ಸ್ಟಿಟ್ಯೂಟಿನ ಬಗ್ಗೆ ಸಹಾಯ ದೊರೆಯುವಂತಾಯಿತು. ನಾನು ಈಗಾಗಲೇ ಡಾಕ್ಟರ್ ತಾರಾನಾಥ್ ಭಟ್ (ಟಿ ಕೆ ಭಟ್ಅವರು ಕಾಲದ ಶೃಂಗೇರಿಯಲ್ಲಿ ಎಂ.ಬಿ.ಬಿ.ಎಸ್ ಡಿಗ್ರಿ ಹೊಂದಿದ್ದ ಇಬ್ಬರು ಡಾಕ್ಟರುಗಳಲ್ಲಿ ಒಬ್ಬರಾಗಿದ್ದರು ಎಂದು ಬರೆದಿದ್ದೇನೆ. ಆಗ ತುಂಬಾ ವಯಸ್ಸಾಗಿದ್ದರೂ ಭಟ್ ಅವರು ತಮ್ಮ ಪ್ರಾಕ್ಟೀಸ್ ನಿಲ್ಲಿಸಿರಲಿಲ್ಲ. ಅವರಿಂದ ನನಗೊಂದು  ಕರೆ ಬಂತು. ನಾನು ಹೋಗಿ ಅವರನ್ನು ಭೇಟಿ ಮಾಡಿದೆ. ನಾನು ಇನ್ಸ್ಟಿಟ್ಯೂಟಿಗೆ ಅರ್ಜಿ ಹಾಕಿರುವುದು ಅವರಿಗೆ ಗೊತ್ತಾಗಿತ್ತು. ಅವರ ಒಬ್ಬ ಮಗ ಅಲ್ಲಿನ ಫಿಸಿಕ್ಸ್ ಡೆಪಾರ್ಟ್ಮೆಂಟಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರಂತೆ. ಹಾಗೆಯೇ ಇನ್ನೊಬ್ಬ ಮಗ ಅಲ್ಲಿಯೇ ಮೆಟಲರ್ಜಿಯಲ್ಲಿ ಆಗತಾನೇ ಮಾಸ್ಟರ್ ಡಿಗ್ರಿ ಪಡೆದಿದ್ದನಂತೆ. ಅವರು ನನಗೆ ಅವರ ಪ್ರೊಫೆಸರ್ ಆಗಿದ್ದ ಮಗನನ್ನು ಭೇಟಿ  ಮಾಡಿ ಅವರಿಂದ ಬೇಕಾದ ಯಾವುದೇ ಸಹಾಯವನ್ನು ಪಡೆಯುವಂತೆ ಸೂಚಿಸಿದರು. ನಾನು ಬೇಡದೇ ಬಂದ ಅವರ ಸಲಹೆಯನ್ನು ಕೇಳಿ ನನಗಾದ ಸಂತೋಷ ಅಷ್ಟಿಷ್ಟಲ್ಲ.

ಅಷ್ಟರಲ್ಲೇ ನನಗೆ ಟಾಟಾ ಇನ್ಸ್ಟಿಟ್ಯೂಟಿನಿಂದ ಟೆಸ್ಟ್ ಮತ್ತು ಸಂದರ್ಶನಕ್ಕೆ ಕರೆ ಬಂತು. ನಾನು ಜುಲೈ ತಿಂಗಳ ಕೊನೆಯ ವಾರ ಅದಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ನಾನು ಅಲ್ಲಿಯವರೆಗೆ ಬೆಂಗಳೂರಿಗೆ ಹೋಗಿಯೇ ಇರಲಿಲ್ಲ. ಅದು ನಮ್ಮ ರಾಜ್ಯದ ರಾಜಧಾನಿಗೆ ನನ್ನ ಮೊಟ್ಟ ಮೊದಲ ಭೇಟಿಯಾಗಲಿತ್ತು. ನಮ್ಮ ಪುಟ್ಟಣ್ಣ ಆಗಲೇ ಒಬ್ಬ ಬೆಂಗಳೂರಿಗನಾಗಿಬಿಟ್ಟಿದ್ದ. ಅವನು ಬಿ. ಕಾಂ. ಡಿಗ್ರಿಯ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ನಾನು ಅವನ ಜೊತೆಯಲ್ಲಿ ಬೆಂಗಳೂರಿಗೆ ಹೋಗಲು ತೀರ್ಮಾನಿಸಿದೆ.

೧೯೬೯ನೇ ಇಸವಿಯ ಜುಲೈ ತಿಂಗಳು ಭಾರತದ ಮತ್ತು ಪ್ರಪಂಚದ ಇತಿಹಾಸದಲ್ಲಿ ಒಂದು ಮಹತ್ವದ ತಿಂಗಳಾಗಿತ್ತು. ತಿಂಗಳ ೧೯ನೇ ತಾರೀಕು ಇಂದಿರಾ ಗಾಂಧಿಯವರ ನೇತೃತ್ವದ ಭಾರತ ಸರ್ಕಾರವು ದೇಶದ ೧೪ ದೊಡ್ಡ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ತನ್ನ ನಿರ್ಧಾರವನ್ನು ಪ್ರಕಟಿಸಿತು. ಬ್ಯಾಂಕುಗಳಲ್ಲಿ ದಕ್ಷಿಣ ಕನ್ನಡ ಮೂಲದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕೂಡ ಸೇರಿದ್ದವು. ಶೃಂಗೇರಿಯ ಸಿಂಡಿಕೇಟ್ ಬ್ಯಾಂಕಿನ ಶಾಖೆಯಲ್ಲಿ ದಿನ ಯಾವುದೇ ವ್ಯವಹಾರಗಳು ನಡೆಯಲಿಲ್ಲ. ತುಂಬಾ ಸಾರ್ವಜನಿಕರಿಗೆ ರಾಷ್ಟ್ರೀಕರಣ ಅಂದರೆ ಏನೆಂದೇ ಅರಿವಾಗಲಿಲ್ಲ. ಒಟ್ಟಿನಲ್ಲಿ ತಾವು ಬ್ಯಾಂಕಿನಲ್ಲಿಟ್ಟ ಹಣ ಸುರಕ್ಷಿತವಾಗಿದ್ದರೆ ಸಾಕೆಂದು ಭಾವಿಸಿದರು.

ಇನ್ನೊಂದು ಮಹತ್ವದ ಘಟನೆ ಎಂದರೆ ಅಮೆರಿಕಾದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಅವರು ಚಂದ್ರ ಗ್ರಹದಲ್ಲಿ ಕಾಲಿರಿಸಿದ್ದು. ಅಮೆರಿಕಾದ ಅಪೋಲೋ ೧೧ ಬಾಹ್ಯಾಕಾಶ ನೌಕೆ ೧೯೬೯ನೇ ಇಸವಿಯ ೨೦ನೇ ತಾರೀಕು ಚಂದ್ರಗ್ರಹವನ್ನು ತಲುಪಿತ್ತು. ಆಗಿನ ಸಮಾಚಾರ ಪತ್ರಿಕೆಗಳಲ್ಲಿ ಈವೆಂಟಿನ ಬಗ್ಗೆ ತುಂಬಾ ಫೋಟೋಗಳು ಮತ್ತು ವಿವರಗಳೂ ಬಂದವು. ನಾವು ತುಂಬಾ ಆಸಕ್ತಿಯಿಂದ ಅದನ್ನೆಲ್ಲಾ ಓದಿದ್ದುದು ನೆನಪಿಗೆ ಬರುತ್ತಿದೆ.

ನಾನು ಹಿಂದೆಯೇ ಪುರದಮನೆ ಶ್ರೀನಿವಾಸಯ್ಯನವರು ನನ್ನ ವಿದ್ಯಾಭ್ಯಾಸಕ್ಕೆ ಹಣದ ಸಹಾಯ ಮಾಡಿದ್ದನ್ನು ಬರೆದಿದ್ದೇನೆ. ನಾನು ಎರಡನೇ ಬಾರಿ Rank ಪಡೆದು ನನ್ನ ಹೆಸರು ನ್ಯೂಸ್ ಪೇಪರಿನಲ್ಲಿ ಬಂದುದನ್ನು ನೋಡಿ ಅವರಿಗೆ ತುಂಬಾ ಸಂತೋಷವಾಗಿತ್ತು. ನಾನೂ ಮತ್ತು ಪುಟ್ಟಣ್ಣ ಜೊತೆಯಾಗಿ ಬೆಂಗಳೂರಿಗೆ ಪ್ರಯಾಣ ಮಾಡುವ ವಿಷಯ ಅವರಿಗೆ ತಿಳಿದು ನಮಗೆ ಕರೆ ಕಳುಹಿಸಿದರು. ಶ್ರೀನಿವಾಸಯ್ಯನವರು ತಮ್ಮ ಮನೆಯ ಮುಂದಿದ್ದ ತೋಟದಲ್ಲಿ ತುಂಬಾ ಹೂವು ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದರು. ನಿಜ ಹೇಳಬೇಕೆಂದರೆ ಅವರೊಂದು ಸುಂದರ ತೋಟಗಾರಿಕಾ ಫಾರ್ಮ್ಅನ್ನು ಮನೆಯ ಮುಂದೆ ಹೊಂದಿದ್ದರು. ಅವರು ನಮಗೆ ಬೆಂಗಳೂರಿನ ಲಾಲ್ ಭಾಗ್ ಫಾರ್ಮ್ ನಿಂದ ಅಪರೂಪದ ಕೆಲವು ಹೂವಿನ ಗಿಡಗಳನ್ನು ತೆಗೆದುಕೊಂಡು ಬರುವಂತೆ ಹೇಳಿದರು.

ಜುಲೈ ತಿಂಗಳ ಮೂರನೇ ವಾರ  ಪುಟ್ಟಣ್ಣ ಮತ್ತು ನಾನು ಬೆಂಗಳೂರಿಗೆ ಪ್ರಯಾಣ ಬೆಳೆಸಿದೆವು . ಆಗ ಶೃಂಗೇರಿ-ಬೆಂಗಳೂರು ಸರ್ಕಾರೀ ಬಸ್ಸಿಗೆ ಕೇವಲ ಕೊಪ್ಪ ಮತ್ತು ಜಯಪುರದಲ್ಲಿ ಮಾತ್ರ ಸ್ಟಾಪ್ ಇದ್ದವು. ನಾವು ಜಯಪುರಕ್ಕೆ ಕಾಲ್ನಡಿಗೆ ಪ್ರಯಾಣ ಮಾಡಿ ಅಲ್ಲಿ ಬಸ್ ಹತ್ತಿದೆವು. ಕಾಲದಲ್ಲಿ ಸರ್ಕಾರದ ಲೇಲ್ಯಾಂಡ್ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಏಕೆಂದರೆ ನಮ್ಮೂರುಗಳಲ್ಲೆಲ್ಲಾ ಕೇವಲ ಶಂಕರ್ ಮೋಟಾರ್ ಕಂಪನಿಯ ಬೆಂಜ್ ಬಸ್ಸುಗಳೇ ಓಡಾಡುತ್ತಿದ್ದವು. ಕೊಪ್ಪ-ಶೃಂಗೇರಿ-ಚಿಕ್ಕಮಗಳೂರು ಮಾರ್ಗಗಳಲ್ಲಿ ಶಂಕರ್ ಕಂಪನಿ ಏಕಸ್ವಾಮ್ಯತೆಯನ್ನು ಹೊಂದಿತ್ತು. ನಾನು ನಮ್ಮ ಖರ್ಚಿಗಾಗಿ ಸಿಂಡಿಕೇಟ್ ಬ್ಯಾಂಕಿನ ನನ್ನ ಖಾತೆಯಿಂದ ೧೦೦ ರೂಪಾಯಿ ತೆಗೆದುಕೊಂಡಿದ್ದೆ. ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಪ್ರಯಾಣ ಮಾಡುತ್ತಿದ್ದಾಗ ನನಗಿದ್ದ ಉತ್ಸಾಹ ಅಷ್ಟಿಷ್ಟಲ್ಲ. ಮಾರ್ಗದಲ್ಲಿ ನಮ್ಮ ಬಸ್ಸು ಚಿಕ್ಕಮಗಳೂರು, ಅರಸೀಕೆರೆ,ತಿಪಟೂರು ಮತ್ತು ತುಮಕೂರುಗಳನ್ನು ಹಾದು ಹೋಯಿತು. ಚಿಕ್ಕಮಗಳೂರನ್ನು ಬಿಟ್ಟರೆ ಉಳಿದವೆಲ್ಲ ನನಗೆ ಹೊಸ ಊರುಗಳೇ.

ರಾತ್ರಿ ಸುಮಾರು ೮ ಗಂಟೆಗೆ ನಮ್ಮ ಬಸ್ಸು ಬೆಂಗಳೂರಿನ ಹೊರವಲಯವನ್ನು ಪ್ರವೇಶ ಮಾಡಿತು. ಮುಂದೆ ಅದು ಯೆಶವಂತಪುರ, ರಾಜಾಜಿನಗರ ಮತ್ತು ಮಲ್ಲೇಶ್ವರಂ ಮಾರ್ಗವಾಗಿ ಸುಭಾಷ್ ನಗರದಲ್ಲಿದ್ದ ಬಸ್ ನಿಲ್ದಾಣವನ್ನು ತಲುಪಿತು. ನಮ್ಮ ರಾಜ್ಯದ ರಾಜಧಾನಿಗೆ ನಾನು ಪ್ರಥಮ ಬಾರಿಗೆ ಪ್ರವೇಶ ಮಾಡಿದ್ದೆ. ಈ ಸುಂದರ ನಗರದಲ್ಲಿ  ನನ್ನ ಭವಿಷ್ಯ ಹೇಗಿರುವುದೆಂಬ ಬಗ್ಗೆ ನನಗೆ ಆಗ ಸ್ವಲ್ಪವೂ ಅರಿವಿರಲಿಲ್ಲ.

----ಮುಂದುವರಿಯುವುದು ---







No comments: