ಪುಟ್ಟಣ್ಣ ಮತ್ತು ನಾನು ಬಿ. ಕಾಂ.
ಮತ್ತು ಬಿ. ಎಸ್ ಸಿ. ಅಂತಿಮ ಪರೀಕ್ಷೆ ಮುಗಿಸುವುದರೊಂದಿಗೆ ನಮ್ಮೂರಿನಲ್ಲಿ ಒಂದು ದಾಖಲೆ ಮಾಡುವವರಿದ್ದೆವು.
ಏಕೆಂದರೆ ನಾವಿಬ್ಬರೂ ಪರೀಕ್ಷೆಯಲ್ಲಿ ಪಾಸಾಗುವುದರಲ್ಲಿ ಯಾವುದೇ ಸಂಶಯವಿಲ್ಲದ್ದರಿಂದ ನಾವು ನಮ್ಮೂರಿನ
ಮೊದಲ ಪದವೀಧರರಾಗಲಿದ್ದೆವು. ನಾವಿಬ್ಬರೂ ಕಾತರದಿಂದ ನಮ್ಮ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿದ್ದೆವು.
ಹಾಗೆಯೇ ಮುಂದೆ ನಮ್ಮ ಭವಿಷ್ಯದಲ್ಲಿ ಏನು ಬರೆದಿದೆಯೋ ಎಂದು ಚಿಂತಿಸುತ್ತಿದ್ದೆವು. ಪುಟ್ಟಣ್ಣ ಬೆಂಗಳೂರಿನಲ್ಲೇ
ಯಾವುದಾದರೂ ನೌಕರಿ ಮಾಡುವುದಾಗಿ ತೀರ್ಮಾನಿಸಿದ್ದ. ಆದರೆ ನನ್ನ ಭವಿಷ್ಯ ನನ್ನ ಪರೀಕ್ಷೆಯ ಫಲಿತಾಂಶದ
ಮೇಲೆ ನಿರ್ಧಾರವಾಗಲಿತ್ತು.
ಇದೇ ವೇಳೆಯಲ್ಲಿ ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಏನೂ ಸರಿಯಿರಲಿಲ್ಲ.
ನಮ್ಮ ತಮ್ಮ ಮಾಧವ ಎಸ್.ಎಸ್.ಎಲ್.ಸಿ ಪಾಸ್ ಮಾಡಿದ್ದರೂ ಅವನ ಮುಂದಿನ ಓದಿನ ಬಗ್ಗೆ ಏರ್ಪಾಟು ಮಾಡುವಷ್ಟು
ಆರ್ಥಿಕ ಪರಿಸ್ಥಿತಿ ನಮ್ಮ ತಂದೆಯವರಿಗಿರಲಿಲ್ಲ. ನಿರ್ವಾಹವಿಲ್ಲದೇ ಅವನು ತಾತ್ಕಾಲಿಕವಾಗಿ ಅಗಳಗಂಡಿ
ತಿಮ್ಮಪ್ಪನ ಅಂಗಡಿಯಲ್ಲಿ ಕೆಲಸ ಮಾಡತೊಡಗಿದ. ಇನ್ನು ಮದುವೆಯ ವಯಸ್ಸಿಗೆ ಬಂದಿದ್ದ
ತಂಗಿಗೆ ಸೂಕ್ತ ವರನನ್ನು ಹುಡುಕಬೇಕಾಗಿತ್ತು. ಆದರೆ ಸೂಕ್ತ ವರ ದೊರೆತರೂ ಮದುವೆಯ ಖರ್ಚನ್ನು ನಿಭಾಯಿಸುವ
ಶಕ್ತಿ ತಂದೆಯವರಿಗಿರಲಿಲ್ಲ. ಇಷ್ಟಲ್ಲದೇ ನಮ್ಮ ದೊಡ್ಡ ಅಣ್ಣ ರಾಮಕೃಷ್ಣ ಶಿವಮೊಗ್ಗೆಯಲ್ಲಿ
ತನ್ನ ಕುಟುಂಬದ ಖರ್ಚನ್ನು ನಿಭಾಯಿಸಲಾಗದೇ ಊರಿಗೆ ವಾಪಾಸ್ ಬರಲು ತೀರ್ಮಾನಿಸಿದ್ದ. ಶಿವಮೊಗ್ಗೆಯಲ್ಲೇ
ತನ್ನ ಸಂಸಾರವನ್ನು ನೆಲೆಗೊಳಿಸಬೇಕೆಂಬ ಅವನ ಕನಸು ನನಸಾಗಲಿಲ್ಲ. ಅವನ ಮಾವ
ಹುರುಳಿಹಕ್ಕಲಿನ ಲಕ್ಷ್ಮೀನಾರಾಯಣರಾಯರು ತಮ್ಮ ಜಮೀನು ಮಾರಾಟಮಾಡಿ ಬಂದ ಹಣವನ್ನೆಲ್ಲಾ ಬೇರೆ ಬೇರೆ
ನಷ್ಟದ ವ್ಯವಹಾರಗಳಲ್ಲಿ ತೊಡಗಿಸಿ ಕಳೆದುಕೊಂಡುಬಿಟ್ಟಿದ್ದರು.
ನನಗೆ ಅಂತಿಮ ಪರೀಕ್ಷೆಯಲ್ಲಿ Rank
ಪಡೆಯುವುದು ಅತ್ಯಾವಶ್ಯಕವಾಗಿತ್ತು. ಏಕೆಂದರೆ ನಾನು ಪಿ.ಯು.ಸಿ. ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆಯುವುದರ
ಮೂಲಕ ಒಂದು ಉನ್ನತ ಮಟ್ಟವನ್ನು ತಲುಪಿಬಿಟ್ಟಿದ್ದೆ.
ಆದ್ದರಿಂದ ನನ್ನ ಗುರುಗಳು ಮತ್ತು ಹಿತೈಷಿಗಳು ನಾನು ಆ ಮಟ್ಟವನ್ನು ಕಾಯ್ದುಕೊಳ್ಳುವೆನೆಂದು
ನಿರೀಕ್ಷಿಸುತ್ತಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆದರೆ ನಾನು ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಗಳಿಗೆ
ತೃಪ್ತಿಕರವಾಗಿ ಉತ್ತರಿಸದಿದ್ದರಿಂದ ಮ್ಯಾಥಮ್ಯಾಟಿಕ್ಸ್ ಮೇಜರ್ ತೆಗೆದುಕೊಂಡ ವಿದ್ಯಾರ್ಥಿಗಳೊಡನೆ
ಪೈಪೋಟಿ ನಡೆಸಿ Rank ಪಡೆಯುವೆನೆಂಬುದು ಅಸಾಧ್ಯವೆನಿಸುತ್ತಿತ್ತು. ನನಗೆ
ಕೆಮಿಸ್ಟ್ರಿ ಪೇಪರ್ ಗಳಲ್ಲಿ ಶೇಖಡ ೭೦ ಕ್ಕಿಂತ ಹೆಚ್ಚು ಅಂಕಗಳು ಬರುವಂತೆ ಕಾಣುತ್ತಿರಲಿಲ್ಲ. ಆದರೆ
Rank ಪಡೆಯಲು ಆ ಅಂಕಗಳು ಸಾಕಾದಾವೆ ಎಂಬುದು ಯಕ್ಷಪ್ರಶ್ನೆಯಾಗಿತ್ತು.
ನಮ್ಮ ಪರೀಕ್ಷಾ ಫಲಿತಾಂಶಗಳು ೧೯೬೯ ನೇ ಇಸವಿಯ ಜೂನ್ ೨೫ನೇ ತಾರೀಕು ಪ್ರಕಟವಾಗಲಿದ್ದವು.
ನನ್ನ
ತಮ್ಮ ಮಾಧವ ನ್ಯೂಸ್ ಪೇಪರ್ ತರಲು ಉತ್ತಮೇಶ್ವರ ಪೋಸ್ಟ್ ಆಫೀಸಿಗೆ ಹೋಗಿದ್ದ. ಸುಮಾರು
ಮದ್ಯಾಹ್ನ ೪ ಗಂಟೆಯ ವೇಳೆಗೆ ಅವನು ತುಂಬಾ ಉತ್ಸಾಹ ಮತ್ತು ಆತುರದಿಂದ ನ್ಯೂಸ್ ಪೇಪರ್ ಕೈಯಲ್ಲಿ ಹಿಡಿದು
ಬರುವುದು ಕಾಣಿಸಿ ನನ್ನ ಎದೆ ಬಡಿತ ಜಾಸ್ತಿಯಾಯಿತು. ಅವನು Rank ಪಡೆದವರ ಪಟ್ಟಿಯಲ್ಲಿ ನನ್ನ
ಹೆಸರು ಹುಡುಕುತ್ತಾ ಹೋದನಂತೆ. ಆ ಪಟ್ಟಿಯ ಮೇಲಿನಿಂದ ಕೆಳಗೆ ಕಣ್ಣು ಹಾಯಿಸಿದಾಗ ಕಟ್ಟ ಕಡೆಯಲ್ಲಿ ನನ್ನ ಹೆಸರು ಅವನ ಕಣ್ಣಿಗೆ ಬಿತ್ತಂತೆ! ಹೌದು. ಪಟ್ಟಿಯಲ್ಲಿ ಕಟ್ಟ ಕಡೆಯ ೧೦ನೇ Rank ನನ್ನದಾಗಿತ್ತು! ಮತ್ತು ನನಗೆ ಒಟ್ಟಿನಲ್ಲಿ
ಶೇಖಡ ೭೯.೯ ಅಂಕಗಳು ಬಂದಿದ್ದವು. ಒಟ್ಟಿನಲ್ಲಿ Rank ಸ್ಟೂಡೆಂಟ್ ಎಂಬ ನನ್ನ ಹಿಂದಿನ
ಹಿರಿಮೆಯನ್ನು ನಾನು ಉಳಿಸಿಕೊಂಡಿದ್ದೆ.
ನಾನು ಮಾರನೇ ದಿನವೇ ಶೃಂಗೇರಿಗೆ ಹೋದೆ.
ಶ್ರೀಕಂಠಯ್ಯನವರ ಮನೆಯಲ್ಲಿ ನನಗೆ ತುಂಬಾ ಆದರದ ಸ್ವಾಗತ ದೊರೆಯಿತು. ತಮ್ಮ ನಿರೀಕ್ಷೆಯಂತೆ ನಾನು ಕೊನೆಗೂ
Rank ಗಳಿಸಿದ್ದನ್ನು ತಿಳಿದು ಶ್ರೀಕಂಠಯ್ಯನವರಿಗೆ
ತುಂಬಾ ಸಂತೋಷವಾಗಿತ್ತು. ನನ್ನ ಕಾಲೇಜ್ ಅದ್ಯಾಪಕರುಗಳೂ ಕೂಡಾ ತುಂಬಾ ಸಂತೋಷದಿಂದ
ನನ್ನನ್ನು ಅಭಿನಂದಿಸಿದರು. ನಾನು ಕೊನೆಗೂ ಅವರ ನಿರೀಕ್ಷೆಯಂತೆ Rank ಗಳಿಸುವುದರಲ್ಲಿ ಸಫಲನಾಗಿದ್ದೆ.
ಪ್ರಿನ್ಸಿಪಾಲ್ ರಾಮಕೃಷ್ಣರಾಯರೂ ತುಂಬಾ ಸಂತೋಷದಿಂದ ನನ್ನನ್ನು ಅಭಿನಂದಿಸಿದರು. ಅವರು ಸದ್ಯದಲ್ಲಿಯೇ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ತತ್ವಶಾಸ್ತ್ರದ ಪ್ರೊಫೆಸರ್ ಆಗಿ ಚಾರ್ಜ್ ತೆಗೆದುಕೊಳ್ಳುವರಿದ್ದರು.
ನಾನು ಅವರಿಗೆ ಕೃಷ್ಣಪ್ಪಯ್ಯನವರ ಸಲಹೆಯಂತೆ ಟಾಟಾ ಇನ್ಸ್ಟಿಟ್ಯೂಟ್ ಸೇರಿಕೊಳ್ಳುವುದಾಗಿ ತಿಳಿಸಿದೆ.
ಅದಕ್ಕಾಗಿ ಮಣಿಪಾಲ್ ಅಕಾಡೆಮಿಯ ಒಪ್ಪಿಗೆ ಕೊಡಿಸುವಂತೆ ಕೇಳಿಕೊಂಡೆ. ಅವರು
ಅಕಾಡೆಮಿಯನ್ನು ಸಂಪರ್ಕಿಸಿ ನಾನು ಯಾವುದೇ ವಿದ್ಯಾಸಂಸ್ಥೆಯಲ್ಲಿ ನನ್ನ ವಿದ್ಯಾಭ್ಯಾಸ
ಮುಂದುವರಿಸಲು ಅಕಾಡೆಮಿಯ ಅಭ್ಯಂತರ ಇಲ್ಲವೆಂದು ತಿಳಿಸಿದರು. ನಾನು
ಅಕಾಡೆಮಿಯು ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಕೂಡ ನನಗೆ ಫೀ ಕಟ್ಟಲು ಸಹಾಯ ಮಾಡುವುದೆಂದು ಭಾವಿಸಿದೆ.
ಅಲ್ಲಿಂದ ನಾನು ಟಾಟಾ ಇನ್ಸ್ಟಿಟ್ಯೂಟಿಗೆ
ಸೇರಿಕೊಳ್ಳುವ ಕಡೆ ಗಮನ ಹರಿಸಿದೆ. ಮೊದಲಿಗೆ ಪ್ರಾಸ್ಪೆಕ್ಟಸ್ ಮತ್ತು ಅಡ್ಮಿಶನ್ ಅರ್ಜಿ
(application) ಕಳಿಸಲು ಇನ್ಸ್ಟಿಟ್ಯೂಟಿಗೆ ಹಣ ಕಳಿಸಿದೆ. ಒಂದು ವಾರದಲ್ಲೇ ಅವು ನನ್ನ
ಕೈಸೇರಿದವು. ಪ್ರಾಸ್ಪೆಕ್ಟಸ್ ಸಂಪೂರ್ಣವಾಗಿ ಓದುವಾಗ ನನಗೆ ಇನ್ಸ್ಟಿಟ್ಯೂಟಿನಲ್ಲಿ ಇಂಜಿನಿಯರಿಂಗ್
ಓದುವುದು ಇಂತಹ ಅಪೂರ್ವ ಅವಕಾಶವೆಂದು ಅರಿವಾಯಿತು.
ಆಗ ವಿಖ್ಯಾತ ಪ್ರೊಫೆಸರ್ ಮತ್ತು ಮುಂದೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಡೆದ ಸತೀಶ್ ಧಾವನ್ ಅವರು
ಇನ್ಸ್ಟಿಟ್ಯೂಟಿನ ಡೈರೆಕ್ಟರ್ ಆಗಿದ್ದರು.
ಆದರೆ ನನಗೆ ಇನ್ಸ್ಟಿಟ್ಯೂಟಿನಲ್ಲಿ
ಸೀಟ್ ಗಳಿಸುವುದು ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಮುಖ್ಯ ಅಲ್ಲಿ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಹಣವನ್ನು
ಒದಗಿಸಿಕೊಳ್ಳುವುದಾಗಿತ್ತು. ಬ್ಯಾಂಕಿನಲ್ಲಿದ್ದ ನನ್ನ ಹಣ ನನ್ನ ಖರ್ಚಿಗೆ ಕೇವಲ ಕೆಲವೇ
ತಿಂಗಳಿಗೆ ಸಾಕಾಗುವಷ್ಟಿತ್ತು. ನನ್ನ ಒಟ್ಟು ಎಲ್ಲಾ ಖರ್ಚುಗಳಿಗೆ ವರ್ಷ ಪೂರ್ತಿ ಹಣ
ಸಾಕಾಗುವಂತೆ ಮಾಡಿಕೊಳ್ಳುವುದು ನನ್ನ ಮೊದಲ ಜವಾಬ್ದಾರಿಯಾಗಿತ್ತು.
ಅಷ್ಟರಲ್ಲಿ ನನ್ನ ಖರ್ಚಿಗಾಗಿ ಹಣದ
ಸಮಸ್ಯೆ ಸ್ವಲ್ಪ ಸುಸೂತ್ರವಾಗಿ ಬಗೆಹರಿಯುವಂತೆ ಕಾಣಿಸತೊಡಗಿತು. ನನ್ನ
ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾದ ಎನ್. ರಾಮಚಂದ್ರ ಭಟ್ ಅವರು ನನಗೆ ಯಾವಾಗಲೂ ನೈತಿಕ ಬೆಂಬಲ ನೀಡುತ್ತಿದ್ದರು.
ನನಗೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೧೦೦ಕ್ಕೆ ನೂರು ಅಂಕಗಳನ್ನು ತೆಗೆಯುವುದು ಸಾಧ್ಯವೆಂದು
ಹೇಳಿ ಪಿ ಯು ಸಿ ಪರೀಕ್ಷೆಯಲ್ಲಿ ನಾನದನ್ನು ಸಾಧಿಸುವಂತೆ ಮಾಡಿದ ಕ್ರೆಡಿಟ್ ಅವರಿಗೆ ಸೇರಿತ್ತು.
ನನ್ನ
ಫಲಿತಾಂಶ ಬರುವ ವೇಳೆಗೇ ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಪ್ರೊಬೇಷನರಿ ಆಫೀಸರ್ ಆಗಿ ಆಯ್ಕೆಯಾಗಿದ್ದರು.
ಅವರು
ನಮ್ಮ ಕಾಲೇಜ್ ತ್ಯಜಿಸಿ ಮಣಿಪಾಲಿನಲ್ಲಿ ಟ್ರೇನಿಂಗ ಪಡೆಯಲು ಹೋಗುವ ಮುನ್ನ ಅವರು ನನ್ನ ಓದಿಗಾಗಿ ಹಣಕಾಸಿನ
ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು. ನಾನು ಇನ್ಸ್ಟಿಟ್ಯೂಟಿಗೆ ಸೇರಿಕೊಂಡ ಮೇಲೆ ಅವರನ್ನು
ಸಂಪರ್ಕಿಸುವಂತೆ ತಿಳಿಸಿದರು. ಅಷ್ಟರಲ್ಲಿ ನಾನೆಂದೂ ಎಣಿಸದಂತಹ ಮೂಲ ಒಂದರಿಂದ ನನಗೆ ಸಹಾಯ ಒದಗಿ ಬಂತು.
ವಕೀಲ
ಶ್ರೀಕಂಠ ಭಟ್
ಮೈಸೂರು ವಿಧಾನ ಸಭೆಗೆ ಭಾರತೀಯ ಜನಸಂಘದಿಂದ
ಸ್ಪರ್ದಿಸಿದ್ದ ವಕೀಲ ಶ್ರೀಕಂಠ ಭಟ್ ಅವರು ಅವರನ್ನು ಬಂದು ಭೇಟಿಯಾಗುವಂತೆ ನನಗೆ ಒಂದು ಸಂದೇಶ ಕಳಿಸಿದರು.
ಅವರ
ಮನೆ ನಮ್ಮ ಮನೆಯಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿತ್ತು. ನಾನು ಅವರ ಮನೆಗೆ ಹೋಗಿ ಅವರನ್ನು
ಭೇಟಿ ಮಾಡಿದೆ. ಅವರ ತುಂಬಾ ಸರಳ ವ್ಯಕ್ತಿತ್ವವನ್ನು ಕಂಡು ನನಗೆ ಆಶ್ಚರ್ಯ ಮತ್ತು ಸಂತೋಷ
ಉಂಟಾಯಿತು. ನಾನವರೊಡನೆ ಮೊದಲ ಬಾರಿ ನೇರ ಸಂಭಾಶಣೆ ಮಾಡುವ ಅವಕಾಶ ಪಡೆದಿದ್ದೆ. ಅವರು ನೇರವಾಗಿ ನನ್ನೊಡನೆ
ನನ್ನ ಮುಂದಿನ ವಿದ್ಯಾಭ್ಯಾಸದ ಪ್ಲಾನ್ ಏನೆಂದು ಕೇಳಿದರು. ನಾನು ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಮೆಟಲರ್ಜಿ
ಇಂಜಿನಿಯರಿಂಗ್ ಓದುವ ನನ್ನ ಬಯಕೆಯನ್ನು ಅವರಿಗೆ ತಿಳಿಸಿದೆ. ಹಾಗೆಯೇ
ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲದಿರುವುದನ್ನೂ ಹೇಳಿಕೊಂಡೆ. ಅವರು
ನನ್ನನ್ನು ಅವರಿಗೆ ಪರಿಚಯಸ್ಥರಾದ ಕೆಲವರ ಮನೆಗಳಿಗೆ ಕರೆದುಕೊಂಡು ಹೋಗಿ ಅವರಿಂದ ನನ್ನ ವಿದ್ಯಾಭ್ಯಾಸಕ್ಕೆ
ಕೊಡುಗೆ ನೀಡಿಸುವುದಾಗಿ ಹೇಳಿದರು. ನಾನು ಅವರೊಡನೆ ಹಿಂದೆ ನನ್ನ ತಂದೆಯವರು ಕೊಡುಗೆಗಾಗಿ
ಕೆಲವು ಮನೆಗಳಿಗೆ ನನ್ನನ್ನು ಕರೆದುಕೊಂಡು ಹೋದಾಗ ಆದ ಕೆಟ್ಟ
ಅನುಭವವನ್ನು ಹೇಳಿಕೊಂಡೆ. ಅವರು ಆ ಬಗ್ಗೆ ನಾನು ಚಿಂತಿಸಬೇಕಾಗಿಲ್ಲವೆಂದೂ ಮತ್ತು ನಾನು
ಸುಮ್ಮನೆ ಅವರೊಡನೆ ಅವರು ಹೇಳಿದ ಮನೆಗಳಿಗೆ ಬಂದರೆ ಸಾಕೆಂದೂ ತಿಳಿಸಿದರು.
ಇಂದು ನಾನು ನನ್ನ ಬಾಲ್ಯಕಾಲದ ನೆನಪಿನ
ಪುಟಗಳನ್ನು ತಿರುವಿ ಹಾಕುತ್ತಿರುವಾಗ ಶ್ರೀಯುತ ಶ್ರೀಕಂಠ ಭಟ್ ಅವರು ಏಕೆ ನನ್ನ ಮುಂದಿನ ವಿದ್ಯಾಭ್ಯಾಸದ
ಬಗ್ಗೆ ಆಸಕ್ತಿ ವಹಿಸಿದ್ದರೆಂದು ತಿಳಿಯಲಾಗುತ್ತಿಲ್ಲ. ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಅವರಿಗೆ
ಯಾವುದೇ ಕಾರಣಗಳಿರಲಿಲ್ಲ. ಅವರಿಗೆ ನನ್ನ ಬಗ್ಗೆಯಾಗಲೀ ಅಥವಾ ನನ್ನ ಕುಟುಂಬದ ಬಗ್ಗೆಯಾಗಲೀ ಏನೂ ಅರಿವಿರಲಿಲ್ಲ.
ಕೇವಲ ನಾನು ಶೃಂಗೇರಿ ಕಾಲೇಜಿನಲ್ಲಿ ಎರಡು ಬಾರಿ Rank ಗಳಿಸಿದ್ದೇನೆಂದು ಮಾತ್ರ ಗೊತ್ತಿತ್ತು. ಒಬ್ಬ
ಅಪರಿಚಿತನಾದ ನನಗೆ ಸಹಾಯ ಮಾಡುವುದರಲ್ಲಿ ಅವರಿಗೆ ಯಾವುದೇ ಲಾಭವಿರಲಿಲ್ಲ. ಆದರೆ
ಅವರದೇ ವಲಯದಲ್ಲಿ ಅವರ ಮಾತಿಗೆ ಎಷ್ಟು ಬೆಲೆಯಿತ್ತೆಂದು ನನಗೆ ಶೀಘ್ರವೇ ಅರಿವಾಯಿತು. ಅವರು
ನನ್ನನ್ನು ಅವರ ಮನೆಯ ಸುತ್ತಮುತ್ತಲಿದ್ದ ಕೆಲವು ಮನೆಗಳಿಗೆ ಕರೆದುಕೊಂಡು ಹೋದರು. ನನ್ನ ಹಿಂದಿನ ಹಣ
ಸಂಗ್ರಹಣೆಗೆ ಹೋಲಿಸಿದರೆ ಅವರೊಡನೆ ಹೋದಾಗ ಆದ ಹಣ ಸಂಗ್ರಹಣೆ ತುಂಬಾ ಸರಳ ಮತ್ತು ಆಕರ್ಷಕದಾಯಕವಾಗಿತ್ತು.
ನನಗಾದ ಆಶ್ಚರ್ಯವೆಂದರೆ ಆ ಮನೆಗಳವರಿಗೆಲ್ಲಾ
ನಾನು ಶೃಂಗೇರಿ ಕಾಲೇಜಿನಲ್ಲಿ Rank ಪಡೆದವನೆಂದು ಮೊದಲೇ ಗೊತ್ತಿತ್ತು. ನಾನು ಮಾತನಾಡುವ ಪ್ರಸಂಗವೇ
ಬರಲಿಲ್ಲ. ಭಟ್ ಅವರು ನಮ್ಮ ಭೇಟಿಯ ಉದ್ದೇಶ ಹೇಳುತ್ತಿದ್ದಂತೆಯೇ ಮನೆಯ ಯಜಮಾನರಿಂದ ಕೊಡುಗೆ ಅವರ ಕೈಯಲ್ಲಿ
ಬರತೊಡಗಿತು. ಕನಿಷ್ಠ ಕೊಡುಗೆ ೫೦ ರೂಪಾಯಿ ಆಗಿತ್ತು. ಒಟ್ಟಿನಲ್ಲಿ ಭಟ್ ಅವರ ಕೊಡುಗೆಯೂ ಸೇರಿ ಸುಮಾರು
೫೦೦ ರೂಪಾಯಿಗಳು ನನ್ನ ಕೈ ಸೇರಿದವು. ಆ ಕಾಲಕ್ಕೆ ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ.
ಭಟ್ ಅವರು ನನಗೆ ಇನ್ನೊಂದು ರೀತಿಯಲ್ಲೂ ಸಹಾಯ ಮಾಡಿದರು. ನಾವು ಭೇಟಿ ಮಾಡಿದ
ಒಂದು ಕುಟುಂಬದವರ ಮಗನೊಬ್ಬ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದುತ್ತಿದ್ದ.
ನನಗೆ
ಅವನ ಪರಿಚಯ ಮಾಡಿಸಿದ್ದರಿಂದ ಅವನಿಂದ ಇನ್ಸ್ಟಿಟ್ಯೂಟಿನಲ್ಲಿ ಅಭ್ಯಾಸದ ಬಗ್ಗೆ ಮತ್ತು ಹಾಸ್ಟೆಲ್ ಇತ್ಯಾದಿ
ಸೌಕರ್ಯಗಳ ಬಗ್ಗೆ ವಿವರಗಳು ನನಗೆ ದೊರೆತವು. ಇನ್ನೊಂದು ಕುಟುಂಬದವರ (ಪ್ರಾಯಶಃ ಕರೀಮನೆ ರಂಗರಾಯರ)
ಅಳಿಯ ಐ ಐ ಟಿ ಕಾನ್ಪುರದಲ್ಲಿ ಪ್ರೊಫೆಸರ್ ಆಗಿದ್ದರು. ಭಟ್ ಅವರು ನನಗೆ ಅವರ ಪರಿಚಯವನ್ನು
ಮಾಡಿಸಿದರು. ಅವರಿಂದ ತುಂಬಾ ವಿಷಯಗಳು ನನಗೆ ಗೊತ್ತಾದವು. ಒಟ್ಟಿನಲ್ಲಿ ಹೇಳಬೇಕೆಂದರೆ
ಭಟ್ ಅವರು ನನಗೆ ಕೇವಲ ಹಣಕಾಸಿನ ಸಹಾಯ ದೊರೆಯುವಂತೆ ಮಾಡಿದ್ದಲ್ಲ ಬೇರೆ ವಿಧಗಳಲ್ಲೂ ನನ್ನ ಜ್ಞಾನ
ಹೆಚ್ಚಾಗುವಂತೆ ಮಾಡಿದರು. ಒಟ್ಟಿನಲ್ಲಿ ಭಟ್ ಅವರು ಯಾವುದೇ ವೈಯ್ಯಕ್ತಿಕ ಪ್ರಚಾರವಿಲ್ಲದೇ
ನನಗೆ ಅಮೂಲ್ಯ ಸಹಾಯ ಮಾಡಿದ್ದರು. ಕೇವಲ ಅವರ ಕುಟುಂಬ
ಮತ್ತು ನಮ್ಮ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಅವರಿಂದ ನನಗಾದ ಸಹಾಯದ ಅರಿವಾಗಲಿಲ್ಲ.
ತುಂಬಾ
ಅಪರೂಪದ ವ್ಯಕ್ತಿತ್ವದ ಭಟ್ ಅವರನ್ನು ನಾನು ನನ್ನ ಜೀವಮಾನ ಪರ್ಯಂತ ಮರೆಯಲಾರೆ.
----ಮುಂದುವರಿಯುವುದು ---
No comments:
Post a Comment