Friday, July 3, 2020

ಬಾಲ್ಯ ಕಾಲದ ನೆನಪುಗಳು – ೯೮

ಪ್ರಿನ್ಸಿಪಾಲರು ಮತ್ತು ನನ್ನ ನಡುವಿನ ಬಾಂಡ್ ಪ್ರಸಂಗ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಕಹಿಯನ್ನುಂಟು ಮಾಡಿತ್ತು. ಆದರೆ ಅವರಿಂದ ನನಗೆ ಯಾವ ತೊಂದರೆಯೂ ಆಗಲಾರದೆಂದು ನಾನು ಭಾವಿಸಿದ್ದೆ. ಅದು ಕೇವಲ ನನ್ನ ಭ್ರಮೆಯಾಗಿತ್ತು. ಮುಂದೆ ಅವಕಾಶ ಸಿಕ್ಕೊಡನೆ ಅವರು ನನ್ನ ಮೇಲಿನ ಸೇಡನ್ನು ತೀರಿಸಿಕೊಂಡು ಬಿಟ್ಟರು. ಆ ಬಗ್ಗೆ ಮುಂದೆ ಬರೆಯುತ್ತೇನೆ.

ಪ್ರತಿಯೊಂದು ಬೇಸಿಗೆ ರಜೆಯಲ್ಲೂ ಮಾಡುತ್ತಿದ್ದಂತೇ ಈ ಬೇಸಿಗೆ ರಜೆಯಲ್ಲೂ ಪುಟ್ಟಣ್ಣ ಮತ್ತು ನಾನು ಮುಂದೆ ಬರಲಿರುವ ಮಳೆಗಾಲಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸಿಬಿಟ್ಟೆವು. ನನ್ನ ಕೈಯಲ್ಲಿ ಹಣ ಸೇರಿದ್ದರಿಂದ ನಾನು ನಮ್ಮ ಮನೆಗೆ ಪ್ರತಿ ನಿತ್ಯ ಪ್ರಜಾವಾಣಿ ದಿನ ಪತ್ರಿಕೆ ಬರುವ ಏರ್ಪಾಟು ಮಾಡಿದೆ. ಆಗ ಒಂದು ಪ್ರಜಾವಾಣಿಯ ಬೆಲೆ ೧೨ ಪೈಸೆ ಆಗಿತ್ತು. ನಮ್ಮೂರಿನಲ್ಲಿ ಕೇವಲ ಬೆಳವಿನಕೊಡಿಗೆಗೆ ಒಂದು ದಿನ ಪತ್ರಿಕೆ ಆಗ ಬರುತ್ತಿತ್ತು. ನಮ್ಮೂರಿಗೆ ಮೂರು ಕಿಲೋ ಮೀಟರ್ ದೂರವಿದ್ದ ಉತ್ತಮೇಶ್ವರ ಪೋಸ್ಟ್ ಆಫೀಸಿನಿಂದ ಅದು ಸಂಜೆ ನಮ್ಮ ಮನೆ ತಲುಪುತ್ತಿತ್ತು. ಕೊಂಡಿಬೈಲು ಜೋಯಿಸರ ಮಗ ರಮೇಶ ಆಗ ಅಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ.

ಪುಟ್ಟಣ್ಣ ಮತ್ತು ನಾನು ಕೇವಲ ಇನ್ನೊಂದು ವರ್ಷದಲ್ಲೇ ನಮ್ಮೂರಿನ ಮೊದಲ ಪದವೀಧರರಾಗುವರಿದ್ದೆವು. ಆ ಕಾರಣದಿಂದ ಊರಿನಲ್ಲಿ ನಮ್ಮ ಬಗ್ಗೆ ಗೌರವ ಮತ್ತು ಹೆಮ್ಮೆ ವ್ಯಕ್ತವಾಗತೊಡಗಿತ್ತು. ಅದಕ್ಕೆ ಮೂಲ ಕಾರಣ ನಮ್ಮಣ್ಣ ರಾಮಕೃಷ್ಣನೇ ಎಂದು ಪುನಃ ಹೇಳಲೇ ಬೇಕು. ಇದಲ್ಲದೇ ನಾವಿಬ್ಬರೂ ಬೇಸಿಗೆ ರಜೆಯಲ್ಲಿ ಮಾಡುತ್ತಿದ್ದ ಮಳೆಗಾಲಕ್ಕೆ ಸಂಬಂಧಿಸಿದ ಕೆಲಸಗಳ ಬಗ್ಗೆಯೂ ತುಂಬಾ ಮೆಚ್ಚುಗೆ ಸಿಗತೊಡಗಿತ್ತು. ಈ ಬೇಸಿಗೆ ರಜೆಯ ಕೆಲಸಗಳ ಬಗ್ಗೆ ಬರೆಯುವಾಗ ನನಗೆ ಕೂಡಲೇ ನೆನಪಾಗುವ ವ್ಯಕ್ತಿ ಎಂದರೆ ನಮ್ಮೂರಿನ ಹೊಸಳ್ಳಿ ವೆಂಕಪ್ಪಯ್ಯ. ಇಲ್ಲಿ ಅವರ ಬಗ್ಗೆ ಬರೆಯುವುದು ಅಪ್ರಸ್ತುತವಾಗಲಾರದು.

ವೆಂಕಪ್ಪಯ್ಯ - ಅಪ್ರತಿಮ ಕಥೆಗಾರ 

ನಾವು ನಮ್ಮ ಬಾಲ್ಯಕಾಲದಲ್ಲಿ ಕಂಡ ನಮ್ಮೂರ  ಅತ್ಯಂತ ಪ್ರಸಿದ್ಧ ಹಾಗೂ ವಿಶಿಷ್ಟ ವ್ಯಕ್ತಿತ್ವವುಳ್ಳ ಮಹನೀಯರುಗಳಲ್ಲಿ ಹೊಸಳ್ಳಿ ವೆಂಕಪ್ಪಯ್ಯ ಒಬ್ಬರು. ಅವರೊಬ್ಬ ಅಪ್ರತಿಮ ಕಥೆಗಾರ. ತಮ್ಮ ಜೀವನದಲ್ಲಿ ನಡೆದ ಪ್ರತಿಯೊಂದು ಪ್ರಸಂಗವನ್ನೂ ಒಂದು ಕಥೆಯಾಗಿ ಮಾರ್ಪಡಿಸಿ ಅವನ್ನು ಕೇಳುವವರಿಗೆ ಕುತೂಹಲ ಕೆರಳುವಂತೆ ಹೇಳಬಲ್ಲ ಕಲೆ ಅವರಿಗೆ ಸಾಧಿಸಿತ್ತು. ಹಾಗಾಗಿ ಅವರು ಯಾವುದೇ ವಿಷಯ ಮಾತನಾಡತೊಡಗಿದರೆಂದರೆ ನಾವೆಲ್ಲರೂ ಕಿವಿಕೊಟ್ಟು ಕೇಳುತ್ತಿದ್ದೆವು. ಯಾಕೆಂದರೆ ಆ ಸಂಭಾಷಣೆಯೇ ಸ್ವಲ್ಪ ಸಮಯದಲ್ಲಿ ಒಂದು ಕಥೆಯಾಗಿ ಪರಿವರ್ತನೆಗೊಳ್ಳುವ ಸಾದ್ಧ್ಯತೆ ಹೆಚ್ಚಾಗಿದ್ದಿತು. ಅಂತಹಾ ಜಾಣ್ಮೆ ನಮ್ಮೂರಲ್ಲಿ ಮತ್ತಾರಿಗೂ ಇರಲಿಲ್ಲ. ಅವರ ಕಥಾಕೋಶದಲ್ಲಿ ಎಂದೆಂದಿಗೂ ಮುಗಿಯದಷ್ಟು ಕಥೆಗಳು ತುಂಬಿಕೊಂಡಿದ್ದವು. ಅದರಲ್ಲಿ ಒಂದೊಂದನ್ನೇ ಸಮಯ ನೋಡಿ ಹೊರತೆಗೆಯುತ್ತಿದ್ದರು. ಹೌದು. ವೆಂಕಪ್ಪಯ್ಯ ಒಬ್ಬ ಮಾಂತ್ರಿಕನೇ ಆಗಿದ್ದರು. ಯಾಕೆಂದರೆ ನಾವೆಲ್ಲಾ ಅವರ ಕಥಾ ಸಂಮೋಹಿನಿಗೊಳಗಾದವರೇ.  

 

ವೆಂಕಪ್ಪಯ್ಯ ಒಬ್ಬ ಆರಡಿಗಿಂತಲೂ ಎತ್ತರದ ಆಜಾನುಭಾಹು ವ್ಯಕ್ತಿಯಾಗಿದ್ದರು. ಅವರು ತಮ್ಮ ಧೀಮಂತ ಶರೀರವನ್ನು ಬೆಳಗಿಂದ ರಾತ್ರಿಯವರೆಗೆ ಕಠಿಣತರವಾದ ಕೆಲಸ ಮಾಡುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರು ನಮ್ಮೂರಿಗೆ ಮೂರಳ್ಳಿ ಎಂಬ ಗ್ರಾಮದಿಂದ ವಲಸೆ ಬಂದವರಂತೆ. ಅವರು ಆ ಗ್ರಾಮಕ್ಕೆ ಪಟೇಲರಾಗಿದ್ದರಂತೆ. ಅಲ್ಲಿ ಅವರೆಷ್ಟು ಜನಪ್ರಿಯರಾಗಿದ್ದರೆಂದರೆ ನಮ್ಮೂರಿಗೆ ಬಂದ ಮೇಲೂ ಅಲ್ಲಿನ ಪಟೇಲಿಕೆ ವೃತ್ತಿಯನ್ನು ಬಹುಕಾಲ ಮುಂದುವರಿಸ ಬೇಕಾಯಿತು. ಅದಕ್ಕೆ ಆ ಊರಿನವರ ಒತ್ತಾಯವೇ ಕಾರಣ. ನಾನು ಎಷ್ಟೋ ಜನರು ಅವರನ್ನು ಮೂರಳ್ಳಿ ಪಟೇಲರೆಂದು ಕರೆಯುವುದನ್ನು ಕೇಳಿದ್ದೆ.

 

ವೆಂಕಪ್ಪಯ್ಯ ಹೆಸರಿಗೆ ಒಬ್ಬ ಗೇಣಿದಾರರಾದರೂ ಅವರ ಹಿಡುವಳಿ ದೊಡ್ಡ ಮಟ್ಟದ್ದಾಗಿತ್ತು. ಅವರಿಗೆ ಮನೆಯ  ಪಕ್ಕದಲ್ಲೇ ಅಡಿಕೆ ತೋಟ ಮತ್ತು ಬತ್ತದ ಗದ್ದೆಗಳಿದ್ದುವು. ಅವಕ್ಕೆ ಸೇರಿದಂತೆ ವಿಶಾಲವಾದ ಹೊಲಗಳೂ  (ಅರಣ್ಯ) ಇದ್ದುವು. ಅಂತೆಯೇ  ಅವರ ವರಮಾನ ಒಬ್ಬ ಶ್ರೀಮಂತರಂತೆಯೇ ಇದ್ದಿತು. ಅವರ ಮೊದಲ ಹೆಂಡತಿ ಎರಡು ಗಂಡು ಮಕ್ಕಳಿಗೆ ಜನನವಿತ್ತನಂತರ ತೀರಿಕೊಂಡಿದ್ದರು. ಅವರ ಮೊದಲ ಮಗ ತಿಮ್ಮಪ್ಪ ನಮ್ಮಣ್ಣನ ಸಹಪಾಟಿ ಹಾಗೂ ಅತ್ಯಂತ ಆತ್ಮೀಯ ಸ್ನೇಹಿತ. ಅವರ ಎರಡನೇ ಹೆಂಡತಿಯ ಹೆಸರು ಶಾರದಮ್ಮ.

 

ನಮ್ಮ ಬೆಳವಿನಕೊಡಿಗೆ ಗ್ರಾಮದಲ್ಲಿ ಆ ಕಾಲದಲ್ಲಿ ಒಂದು ವಿಶಿಷ್ಠ ಪದ್ದತಿ ರೂಡಿಯಲ್ಲಿತ್ತು. ಯಾವುದೇ ಮನೆಯಲ್ಲಿ ನಡೆಯುವ ಕಾರ್ಯಕ್ರಮವಾಗಲೀ ಅದಕ್ಕೆ ಸಂಬಂಧಪಟ್ಟ ಕೆಲಸಗಳು ಸಾಮೂಹಿಕ ಸಹಕಾರದಿಂದ ನೆರವೇರ ಬೇಕಾಗಿತ್ತು. ಯಾವುದೇ ವ್ಯವಸಾಯಕ್ಕೆ ಸಂಬಂಧಪಟ್ಟ  ಅಥವಾ ಮಳೆಗಾಲಕ್ಕೆ ಮುನ್ನಿನ ಕೆಲಸವಾಗಲೀ ಊರಿನ ಎಲ್ಲಾ ಮನೆಗಳಿಂದ ಜನರು ಬಂದು ದೈಹಿಕ ಶ್ರಮದಿಂದ ಮಾಡಬೇಕಾದ ಕೆಲಸಗಳನ್ನು ಅವರ ಸ್ವಂತ ಮನೆಯಲ್ಲಿ ಮಾಡಿದಷ್ಟೇ ಆಸಕ್ತಿಯಿಂದ ಮಾಡುತ್ತಿದ್ದರು. ಉದಾಹರಣೆಗೆ ಅಡಿಕೆ ಒಣಗಿಸಲು ಚಪ್ಪರ ಹಾಕುವುದು, ಅಡಿಕೆ ಸುಲಿಯುವುದು, ಅಡಿಕೆ ಸೋಗೆಯನ್ನು ಮನೆಗೆ ಹೊಚ್ಚುವುದು ಇತ್ಯಾದಿ. ಹಾಗೆಯೇ ಯಾವುದೇ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಿಂದಿನ ದಿನವೇ ಹೋಗಿ ಸಂಬಂಧಪಟ್ಟ ಕೆಲಸಗಳನ್ನು (ತರಕಾರಿ ಹೆಚ್ಚುವುದು, ಇತ್ಯಾದಿ ) ಮುಗಿಸಿ ಬರಬೇಕಾಗಿತ್ತು. ಇದಕ್ಕೆ ಓಡ್ಯಾಟ ಎಂಬ ವಿಶೇಷ ಹೆಸರು ರೂಡಿಯಲ್ಲಿತ್ತು. ಇದರಲ್ಲಿ ಬಡವರು ಶ್ರೀಮಂತರು ಎಂಬುವ ಯಾವುದೇ ಬೇಧಭಾವ ಇರಲಿಲ್ಲ.

 

ಆಗಿನ ಕಾಲದ ಒಂದು ವಾರ್ಷಿಕ ವಿಶೇಷ ಕೆಲಸವೆಂದರೆ ಮನೆಹೊಚ್ಚುವುದು. ಹೆಚ್ಚಾಗಿ ಬಡವರ ಮನೆಗಳು ಅಡಿಕೆ ಸೋಗೆಯಿಂದ ಹೊಚ್ಚಿದವಾಗಿರುತ್ತಿದ್ದವು. ಹಾಗೆಯೇ ಶ್ರೀಮಂತರ ಮನೆಗಳು ಹೆಂಚಿನ ಮನೆಗಳಾಗಿರುತ್ತಿದ್ದವು. ಆದರೆ ಶ್ರೀಮಂತರ ಮನೆಯ ಎಷ್ಟೋ ಕೊಟ್ಟಿಗೆಗಳು ಸೋಗೆಯಿಂದ ಹೊಚ್ಚಿದವಾಗಿರುತ್ತಿದ್ದವು. ಹಾಗಾಗಿ ಅವರೂ ಕೂಡಾ ಈ ವಾರ್ಷಿಕ ಕೆಲಸಕ್ಕೆ ಎಲ್ಲ ಮನೆಯವರನ್ನೂ ಕರೆಯುತ್ತಿದ್ದರು. ಹಾಗೂ ತಾವೂ ಸಹಾ ಖುದ್ದಾಗಿ ಎಲ್ಲಾ ಮನೆಗಳಿಗೆ  ಹೋಗಿ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದರು. ಆಳುಗಳಿದ್ದರೂ ಅವರನ್ನು ಕಳಿಸುವ ಪರಿಪಾಟವಿದ್ದಿಲ್ಲ. ಹೊಸ ಸೋಗೆಯನ್ನು ಹೊಚ್ಚುವ ಮೊದಲು ಹಳೆ ಸೋಗೆಗಳನ್ನೆಲ್ಲಾ ತೆಗೆದು, ಅವುಗಳಲ್ಲಿ ಒಳ್ಳೆಯದಾಗಿದ್ದವನ್ನು ಉಳಿಸಿಕೊಂಡು ಅವನ್ನು ಪುನಃ ಹೊಚ್ಚಿದಮೇಲೆ ಹೊಸ ಸೋಗೆಯನ್ನು ಬಳಸಿ ಕೆಲಸ ಮುಗಿಸಬೇಕಿತ್ತು. ಅದೊಂದು ತುಂಬಾ ಪರಿಶ್ರಮದ ಕೆಲಸ. ಬೆಳಿಗ್ಗೆ ಶುರುವಾದ ಕೆಲಸ ಸಂಜೆಯ ಹೊತ್ತಿಗೆ ಮುಕ್ತಾಯವಾಗುತ್ತಿತ್ತು.

 

ಸೋಗೆಯನ್ನು ಹೊಚ್ಚುವ ಕೆಲಸ ಒಂದು ವಿಶೇಷ ಕಲೆಗೆ ಸಮಾನವಾಗಿತ್ತು. ನಮ್ಮ ಊರಿನಲ್ಲಿ ಅದರಲ್ಲಿ ಪರಿಣಿತರು ಕೇವಲ ಕೆಲವರು ಮಾತ್ರವಿದ್ದರು. ಅದರಲ್ಲಿ ನಮ್ಮ ವೆಂಕಪ್ಪಯ್ಯ ಒಬ್ಬರು. ಸಾಮಾನ್ಯವಾಗಿ ಅವರು ಬರಲು ಸಾಧ್ಯವೆಂದು ಗೊತ್ತಾದಮೇಲೆಯೇ ನಾವು ಮನೆಹೊಚ್ಚುವ ದಿನವನ್ನು ನಿರ್ಧರಿಸುತ್ತಿದ್ದೆವು. ಒಂದು ನಿರ್ಧಿಷ್ಟವಾದ ದಿನವನ್ನು ನಿರ್ಧರಿಸಿದ ನಂತರ ಹಿಂದಿನ ದಿನವೇ ಎಲ್ಲಾ ಮನೆಗಳಿಗೆ ಹೋಗಿ ಕರೆದು ಬರುತ್ತಿದ್ದೆವು. ಆ ದಿನ ನಮಗೆಲ್ಲಾ ಹಬ್ಬದ ಸಡಗರ. ಏಕೆಂದರೆ ಮದ್ಯಾಹ್ನ ಊಟದ ಬದಲು ಸೇವಿಗೆ ಅಥವಾ ಇಡ್ಲಿ ತಿಂಡಿ ಮಾಡಲಾಗುತ್ತಿತ್ತು. ಸಂಜೆ ಎಲ್ಲಾ ಕೆಲಸ ಮುಗಿದನಂತರ ಎಲ್ಲರೂ ಸ್ನಾನಮಾಡಿ ವಿಶೇಷವಾದ ಊಟ ಮಾಡುವ ಕ್ರಮವಿತ್ತು.

 

ಚಿಕ್ಕವರಾದ ನಾವೆಲ್ಲಾ ವೆಂಕಪ್ಪಯ್ಯನವರು ಬೆಳಿಗ್ಗೆ ಬರುವುದನ್ನೇ ಕಾಯುತ್ತಿದ್ದೆವು. ಅವರೊಂದು ಬಗೆಯ ವಿಶೇಷವಾದ  ದಪ್ಪನೆಯ ಚಪ್ಪಲಿಗಳನ್ನು  ಧರಿಸಿ ಪರಪರನೆ ಶಬ್ದಮಾಡುತ್ತಾ ವೇಗವಾಗಿ ನಡೆದು ಬರುತ್ತಿದ್ದರು. ಆ ಶಬ್ದವನ್ನು ಬಹು ದೂರದಿಂದಲೇ ಗಮನಿಸಿ ನಾವೆಲ್ಲಾ ವೆಂಕಪ್ಪಯ್ಯನವರು ಬಂದರೆಂದು ಗಟ್ಟಿಯಾಗಿ ಸಡಗರದಿಂದ ಕೂಗುತ್ತಿದ್ದೆವು. ಅದನ್ನು ಕೇಳಿದ ಎಲ್ಲರಿಗೂ ಒಮ್ಮೆಯೇ ಉತ್ಸಾಹ ಉಂಟಾಗುತ್ತಿತ್ತು. ವೆಂಕಪ್ಪಯ್ಯ ಬರೀ ಕೈನಲ್ಲಿ ಬರುವರೇ ಅಲ್ಲ. ಅವರ ಬಗಲಲ್ಲಿ ಒಂದುಕಡೆ ಎರಡು ಕ್ಯಾನ್ಗಳು (ಉಗ್ಗಗಳು) ಹಾಗೂ ಇನ್ನೊಂದರಲ್ಲಿ ಎರಡು ಚೀಲಗಳು ನೇತಾಡುತ್ತಿದ್ದವು. ಒಂದು ಉಗ್ಗದ ತುಂಬಾ ಹಾಲು ಹಾಗೂ ಇನ್ನೊಂದರಲ್ಲಿ ಮೊಸರು ತುಂಬಿರುತ್ತಿದ್ದವು. ಒಂದು ಕೈಚೀಲದ ತುಂಬಾ ಮನೆಯಲ್ಲಿ ಬೆಳೆದ ತರಕಾರಿ ತುಂಬಿರುತ್ತಿತ್ತು. ಎರಡು ಉಗ್ಗಗಳನ್ನು ಹಾಗೂ ತರಕಾರಿ ಚೀಲವನ್ನು ಸೀಧಾ ಅಡಿಗೆಮನೆಗೆ ತಲುಪಿಸಲಾಗುತ್ತಿತ್ತು. ಇನ್ನೊಂದು ಚೀಲವನ್ನು ಬದಿಗಿಟ್ಟು ಒಂದು ಕಪ್ ಬಿಸಿಬಿಸಿ ಕಾಫಿ ಕುಡಿಯುತ್ತಿದ್ದರು. ನಂತರ ಆ ಚೀಲದಿಂದ ಹಳೇ ಬಟ್ಟೆಯನ್ನು ತೆಗೆದು ಡ್ರೆಸ್ ಬದಲಾಯಿಸಿ ಸೀಧಾ ಮಾಡಿನ ಮೇಲೇರಿ ಬಿಡುತ್ತಿದ್ದರು.

 

ಮಾಡಿನ ಮೇಲೇರಿದ ವೆಂಕಪ್ಪಯ್ಯ ತಮ್ಮ ಕೈಚಳಕವನ್ನು ಒಮ್ಮೆಗೇ ತೋರಿಸಲು ಪ್ರಾರಂಭಿಸುತ್ತಿದ್ದರು. ಅವರು ಸೋಗೆಯನ್ನು ಹೊಚ್ಚುವ ವೇಗಕ್ಕೆ ಸರಿಯಾಗಿ ಅವರ ಕೈಗೆ ಸೋಗೆ ನೀಡುವ ಕೆಲಸ ಸಾಮಾನ್ಯರ ಕೈಯಲ್ಲಿ ಆಗುವಂತಹದಾಗಿರಲಿಲ್ಲ. ಈ ನಡುವೆ ಅವರ ಬಾಯಿಂದ ಅವರ ಸಾಹಸ ಜೀವನದ ಇನ್ನೊಂದು ಅಧ್ಯಾಯ ಅನಾವರಣಗೊಳ್ಳುತ್ತಿತ್ತು.  ಆಗ ಒಮ್ಮೆಲೇ ಬೇರೆಲ್ಲಾ ಮಾತುಗಳು ನಿಂತುಹೋಗಿ ಎಲ್ಲರ ಗಮನ ಅವರ ಹೊಸ ಕಥಾ ಪ್ರಸಂಗದತ್ತ ಸೆಳೆಯಲ್ಪದುತ್ತಿತ್ತು. ಚಿಕ್ಕಮಕ್ಕಳಾದ ನಾವೆಲ್ಲಾ (ಮಾಡಿನ ಕೆಳಗೆ) ದೀಪದ ಸುತ್ತಾ ಮುತ್ತುವ ಮಳೆಹುಳಗಳಂತೆ ಅವರ ಸುತ್ತಮುತ್ತದಲ್ಲೇ ಓಡಾಡುತ್ತಾ ಅವರು ಹೇಳುವ ಕಥೆಯ ಸ್ವಾರಸ್ಯವನ್ನು ಅನುಭವಿಸುತ್ತಿದ್ದೆವು. ವೆಂಕಪ್ಪಯ್ಯ ಬೆಳಗಿಂದ ಸಂಜೆಯವರೆಗೆ ಕೆಲಸ ಮಾಡುತ್ತಿದ್ದರು. ಮಧ್ಯದಲ್ಲಿ ತಿಂಡಿಗೆ ಒಂದು ವಿರಾಮ  (ಬ್ರೇಕ್) ಇರುತ್ತಿತ್ತು. ಆದರೆ ಕೇಳುಗರ ವಿಶೇಷ ಕೋರಿಕೆಯ ಮೇರೆಗೆ ಕಥೆ ವಿರಾಮವಿಲ್ಲದೇ ಮುಂದುವರಿಯುತ್ತಿತ್ತು.

 

ದುರದೃಷ್ಟವಶಾತ್ ವೆಂಕಪ್ಪಯ್ಯನವರ ಅತ್ಯಮೂಲ್ಯ ಕಥೆಗಳಲ್ಲಿ ಯಾವುದೂ ಕೂಡ ಬರವಣಿಗೆಯಲ್ಲಿ ಮೂಡಲಿಲ್ಲ. ಹಾಗಾಗಿ ಅವೆಲ್ಲಾ ಕಾಲಗರ್ಭದಲ್ಲಿ ಮರೆಯಾಗಿ ಹೋಗಿವೆ. ಅವೆಲ್ಲಾ ಅವರ ನಿಜ ಜೀವನದ ಅನುಭವಗಳಾಗಿದ್ದು ಅವನ್ನು ಯಾವುದೇ ರೀತಿಯಲ್ಲಿ ಪುನರ್ರಚಿಸಲು ಮಾರ್ಗವಿಲ್ಲ. ಸಾಹಸಿ, ಶ್ರಮಜೀವಿ ಹಾಗೂ ಬುದ್ಧಿವಂತರಾಗಿದ್ದ ವೆಂಕಪ್ಪಯ್ಯ ತಮ್ಮ ನಿಜಜೀವನದಲ್ಲಿ ಎಷ್ಟೋ ಅವಗಢಗಳನ್ನು ಹಾಗೂ ಸವಾಲುಗಳನ್ನೆದುರಿಸಿ ಜಯಿಸಿದ್ದರು. ಅವುಗಳನ್ನೆಲ್ಲಾ ಸ್ವಾರಸ್ಯಕರವಾದ ಕಥೆಗಳನ್ನಾಗಿ ಹೇಳುವ ಕಲೆ ಕೇವಲ ಅವರಿಗೆ ಮಾತ್ರಾ ಸಾಧಿಸಿತ್ತು. ಅವರ ಯಾವುದೇ ಕಥೆಯನ್ನು ನೆನಪಿಟ್ಟುಕೊಂಡಿಲ್ಲವೆಂದು ನನಗೂ ಇಂದು ಪಶ್ಚಾತ್ತಾಪವಾಗುತ್ತಿದೆ. ಮುಂದಿನ ಕಥೆಯನ್ನು ಕೇಳುತ್ತಾ ಹಿಂದಿನ ಕಥೆಗಳನ್ನು ಮರೆಯುವುದೇ ನಮ್ಮ ಅಂದಿನ ಅಭ್ಯಾಸವಾಗಿತ್ತು. ಈಗ ಆ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಹಾಗೆಂದು ನಾನು ವೆಂಕಪ್ಪಯ್ಯನವರ ವ್ಯಕ್ತಿತ್ವದ ಬಗ್ಗೆ ಬರೆಯಲು ಹಿಂಜರಿಯುವುದಿಲ್ಲ. ವೆಂಕಪ್ಪಯ್ಯ ಒಬ್ಬ ಅಪ್ರತಿಮ ಕಥೆಗಾರರಾಗಿದ್ದರೆನ್ನುವ ವಿಷಯವನ್ನು ಜಗತ್ತಿಗೆ ತಿಳಿಸುವುದೇ ನನ್ನ ಈ ಬರವಣಿಗೆಯ ಉದ್ದೇಶ. 

 

ನಾನು ಮೊದಲೇ ಹೇಳಿದಂತೆ ಹೊಸಳ್ಳಿಯ ಮನೆ ಹೊಚ್ಚುವಾಗ ನಮ್ಮ ಮನೆಯಿಂದ ನಮ್ಮ ತಂದೆಯವರು ಹೋಗಿ ವೆಂಕಪ್ಪಯ್ಯನವರ ಕೆಲಸದ ಕಡ ತೀರಿಸಬೇಕಿತ್ತು . ಮಾಮೂಲಾಗಿ ನಮ್ಮ ತಂದೆಯವರೇ ಹೋಗಿ ಕೆಲಸಮಾಡಿ ಬರುತ್ತಿದ್ದರು. ಆದರೆ ಒಂದು ವರ್ಷ ಅವರಿಗೆ ಆರೋಗ್ಯವಿಲ್ಲದಿದ್ದರಿಂದ ನನ್ನ ಅಣ್ಣನೊಡನೆ ನನ್ನನ್ನೂ ಕಳಿಸಬೇಕಾಯಿತು. ನಮಗೆ ಆಗ ವಯಸ್ಸು ಇಪ್ಪತ್ತರ ಸಮೀಪದಲ್ಲಿತ್ತು. ನಾವಿಬ್ಬರು ಸೇರಿ ಮಾಡುವ ಕೆಲಸ ಒಬ್ಬ ವೆಂಕಪ್ಪಯ್ಯನವರ ಕೆಲಸಕ್ಕೆ ಸಮಾನ ಎಂದು ನಾವು ತಿಳಿದಿದ್ದೆವು. ವೆಂಕಪ್ಪಯ್ಯನವರಿಗೆ ಹಾಗೆಯೇ ಹೇಳಿಯೂ ಬಿಟ್ಟೆವು. ಆದರೆ ಅದನ್ನು ಅವರು ಒಪ್ಪಿದಂತೆ ಅನ್ನಿಸಲಿಲ್ಲ. ಹೇಗೇ ಇರಲಿ; ನಮಗೆ ನಿರ್ಧಿಷ್ಟವಾದ ಕೆಲಸವನ್ನಂತೂ ಹಂಚಿ ಕೊಟ್ಟು ಮುಂದುವರಿಸುವಂತೆ ಹೇಳಿದರು.

 

ಹೊಸಳ್ಳಿ ಮನೆಯು ಹೆಂಚಿನದ್ದಾಗಿದ್ದರಿಂದ ಅಲ್ಲಿ ಕೇವಲ ಕೊಟ್ಟಿಗೆಗಳಿಗೆ ಮಾತ್ರಾ ಸೋಗೆಯನ್ನು ಹೊಚ್ಚುವ ಕೆಲಸವಿತ್ತು. ಆದರೆ ವೆಂಕಪ್ಪಯ್ಯನವರು ಊರಲ್ಲೆಲ್ಲೂ ಇಲ್ಲದ ಒಂದು ಕ್ರಮ ಪಾಲಿಸುತ್ತಿದ್ದರು. ಅಡಿಕೆ ಒಣಗಿಸುವ ಚಪ್ಪರವನ್ನು ಮಳೆಗಾಲದಲ್ಲಿ ಕಿತ್ತಿಡುವ ಬದಲು ಅದರ ಮೇಲೊಂದು ಮಾಡು ಕಟ್ಟಿ ಅದಕ್ಕೆ ಸೋಗೆ ಹೊಚ್ಚುತ್ತಿದ್ದರು . ಹಾಗೆಮಾಡಿ ಅದನ್ನು ಮಳೆಗಾಲದ ಒಂದು ಕೊಟ್ಟಿಗೆಯನ್ನಾಗಿ ಪರಿವರ್ತಿಸಿ ಬಿಡುತ್ತಿದ್ದರು. ಅದು ಅವರ ತಾಂತ್ರಿಕ ಜ್ಞಾನದ  (engineering brain) ಉದಾಹರಣೆಯಾಗಿತ್ತು. ಆದರೆ ಆ ಕೆಲಸ ಮಾತ್ರಾ ತುಂಬಾ ಪರಿಶ್ರಮದ್ದಾಗಿತ್ತು. ಆರಂಭದಲ್ಲಿ ತುಂಬಾ ಉತ್ಸಾಹದಿಂದ ಕೆಲಸ ಪ್ರಾರಂಭಿಸಿದ ನಾವು ಸಾಯಂಕಾಲವಾಗುವಾಗ ಸೋತು ಸುಣ್ಣವಾಗಿದ್ದೆವು. ಹಾಗೆಂದು ನಾವು ಮದ್ಯಾಹ್ನದ  ತಿಂಡಿ ತಿನ್ನುವಾಗ ಯಾವುದೇ ದಾಕ್ಷಿಣ್ಯ ಮಾಡಲಿಲ್ಲ! ಒಟ್ಟಿನಲ್ಲಿ ಮನೆಗೆ ಹಿಂತಿರುಗುವಾಗ ದೊಡ್ಡ ಯಜ್ಞ ಮಾಡಿಬಂದ ಅನುಭವವಾಗಿತ್ತು.

 

ಆ ದಿನಗಳಲ್ಲಿ ನಮ್ಮೂರಿನಲ್ಲಿ ಯಾವುದೇ ಸಂತರ್ಪಣೆ ಏರ್ಪಾಟಾದಾಗ ಊಟದ ನಡುವೆ ಸಂಸ್ಕೃತದ ಶ್ಲೋಕಗಳನ್ನು ಹೇಳುವ ಕ್ರಮವಿತ್ತು. ಅದಕ್ಕೆ 'ಗ್ರಂಥ ಹೇಳುವುದು' ಎಂದು ಒಂದು ವಿಶಿಷ್ಟ ಹೆಸರಿತ್ತು. ಅದರಲ್ಲಿ ತುಂಬಾ ಪೈಪೋಟಿಯೂ ಇರುತ್ತಿತ್ತು. ಗ್ರಂಥದ ಕೊನೆಯಲ್ಲಿ ಹರ ನಮಃ ಪಾರ್ವತೀಪತಯೇ ಅಥವಾ ಜೈ ಸೀತಾಕಾಂತ ಸ್ಮರನ್ ಎಂದು ಶ್ಲೋಕಕ್ಕೆ ತಕ್ಕನಾಗಿ ಹೇಳುತ್ತಿದ್ದರು. ಆಗ ಶ್ರೋತೃಗಳೆಲ್ಲಾ ಹಹಹರ ಮಹಾದೇವ ಅಥವಾ ಜೈಜೈ ರಾಮ್ ಎಂದು ಕೂಗುತ್ತಿದ್ದರು. ಶ್ಲೋಕ ಹೇಳಬಲ್ಲವರಿಗೆ ಅದೊಂದು ಒಳ್ಳೆಯ ಅವಕಾಶವಾಗಿತ್ತು. ನಮ್ಮ ವೆಂಕಪ್ಪಯ್ಯ ತಮ್ಮದೇ ಆದ ಒಂದು ವಿಶೇಷ ಗ್ರಂಥವನ್ನು ಹೇಳುತ್ತಿದ್ದರು. ಅದೆಷ್ಟು ವಿಚಿತ್ರವಾಗಿತ್ತೆಂದರೆ ಅದು ಯಾವ ಭಾಷೆಯಲ್ಲಿತ್ತು ಮತ್ತು ಅದರ ಅರ್ಥವೇನಿದ್ದಿರಬಹುದು ಎಂದು ಯಾರಿಗೂ ಯಾವತ್ತೂ ಗೊತ್ತಾಗಲಿಲ್ಲ! ನನ್ನ ನೆನಪಿನಿಂದ ಸ್ವಲ್ಪ ಮಾತ್ರಾ ಕೆಳಗೆ ಬರೆದಿದ್ದೇನೆ:

ಗಾಡಿ ತಿಂಗಿ ನಾಗವಾನ್

ಗಾಡಿ ತಿಂಗಿ ನಾಗವಾನ್

ಸರ್ವಾಂಗಿ ಬತ್ತೀಸೆ

ಸರ್ವಾಂಗಿ ಬತ್ತೀಸೆ

ಗಿರ್ಜೆ ಕೋಟೆ ಸಾಹುಕಾರ್

ಬಹು ದಿನ ಸಂಸಾರ್

ಗಾಡಿ ತಿಂಗಿ ನಾಗವಾನ್

ಗಾಡಿ ತಿಂಗಿ ನಾಗವಾನ್

ನನ್ನ ಪ್ರಕಾರ ವೆಂಕಪ್ಪಯ್ಯನ ಈ ಗ್ರಂಥ ಸರ್ವ ಕಾಲಕ್ಕೂ ಸರ್ವ ಶ್ರೇಷ್ಠ ಗ್ರಂಥ. ಅದಕ್ಕೆ ಕಾರಣ ವೆಂಕಪ್ಪಯ್ಯನವರು ಅದನ್ನು ಹೇಳುತ್ತಿದ್ದ ವಿಶಿಷ್ಟ ಶ್ಯಲಿ ಹಾಗೂ ಅದರ ಮೂಲವೇನಿರಬೇಕೆಂಬ ಕುತೂಹಲ ಅಥವಾ ರಹಸ್ಯ. ಆ ರಹಸ್ಯ ವೆಂಕಪ್ಪಯ್ಯನವರ ಬೇರೆ ಕಥೆಗಳಂತೆ ಅವರೊಟ್ಟಿಗೇ  ಕಾಲಗರ್ಭದಲ್ಲಿ ಸೇರಿಹೋಯಿತೆನ್ನುವುದು ಒಂದು ಬಗೆಯ ವಿಪರ್ಯಾಸ  ಅನ್ನಬಹುದೇ? ಇದು ಓದುಗನಿಗೆ ಬಿಟ್ಟದ್ದು.

 

ನಾನು ನನ್ನ ವೃತ್ತಿಯಲ್ಲಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದರಿಂದ ವೆಂಕಪ್ಪಯ್ಯನವರು ಅವರ ಅಂತಿಮ ಕಾಲದಲ್ಲಿ ಹೇಗಿದ್ದರೆನ್ನುವ ವಿಷಯ ನನಗೆ ತಿಳಿದಿಲ್ಲ. ಆದರೆ ಅವರ ಕಥಾಕಾಲಕ್ಷೇಪ ಕೊನೆಯವರೆಗೂ ನಡೆದಿತ್ತೆನ್ನುವುದರಲ್ಲಿ ಯಾವುದೇ ಸಂದೇಹ ನನಗಿಲ್ಲ. ಅವರ ಮಕ್ಕಳು ಹಳೇಮನೆಯನ್ನು  ಕೀಳಿಸಿ ಹೊಸ ಮನೆಗಳನ್ನು ಕಟ್ಟಿಸಿದ್ದಾರೆ. ವೆಂಕಪ್ಪಯ್ಯನವರ ನೆನಪೂ ಕೂಡಾ ಅವರ  ಹಳೇಮನೆಯಂತೆ ಮರೆಯಾಗುತ್ತಿದೆ. ಆದರೆ ನಮ್ಮಂತಹ ಕೆಲವರಿಗೆ ಮಾತ್ರಾ ಈ ಅಪ್ರತಿಮ ಕಥೆಗಾರನ ನೆನಪು ಸದಾ ಹಸಿರಾಗಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

----ಮುಂದುವರಿಯುವುದು ---


No comments: